ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ.ಎಚ್.ಎಸ್. ಸತ್ಯನಾರಾಯಣ ಅವರ ಕಣ್ಣೋಟ

ಅನುಸೂಯ ಯತೀಶ್

” ವಿಮರ್ಶೆ ಮೂಲಭೂತವಾಗಿ ಶ್ರೇಷ್ಠವಾಗುವುದು ಅದರ ತತ್ವ ವಿಮರ್ಶೆಯಿಂದಲೂ ಅಲ್ಲ ಅಥವಾ ಕೃತಿನಿಷ್ಠ ವಿಮರ್ಶೆಯಿಂದಲೂ ಅಲ್ಲ ಅದು ಭಾಷೆ ಮತ್ತು ಜನಾಂಗದ ಬಗ್ಗೆ ತನಗೆ ಇರಬೇಕಾದ ನೈತಿಕ ಹೊಣೆಗಾರಿಕೆ.”

ಪೂರ್ಣಚಂದ್ರ ತೇಜಸ್ವಿ (ವಿಮರ್ಶೆಯ ವಿಮರ್ಶೆ)

ಆಧುನಿಕ ತಂತ್ರಜ್ಞಾನದ ಪ್ರಗತಿಯಿಂದ ಸಾಹಿತ್ಯ ಓದುಗರ ಸಂಖ್ಯೆಯೂ ಇಳಿಮುಖವಾಗುತ್ತಿರುವ ದಿನಮಾನಗಳಲ್ಲಿ ನಮ್ಮ ಕನ್ನಡ ಸಾರಸ್ವತ ಲೋಕ ಅಮೋಘವಾಗಿ, ಸ್ವಾದ ಬರಿತವಾಗಿ ಶ್ರೀಮಂತಗೊಳ್ಳುತ್ತಾ ಸಾವಿರಾರು ಬರಹಗಾರರನ್ನು ಅಪ್ಪಿಕೊಂಡು ಒಪ್ಪಿಕೊಂಡು ಬರೆಸಿಕೊಳ್ಳುತ್ತಾ ತನ್ನ ಕಬಂಧ ಬಾಹುಗಳನ್ನು ಚಾಚಿ ನಾಡಿನ ಮನೆ ಮನಗಳಲ್ಲಿ ಕನ್ನಡದ ನಂದಾದೀಪ ಬೆಳಗುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ.

ಬರಹಗಾರರಿಗೆ ಅಗತ್ಯ ಪ್ರೋತ್ಸಾಹ ನೀಡುವುದು ಅನಿವಾರ್ಯ ಮತ್ತು ಸಾಹಿತ್ಯ ಹಾಗೂ ಭಾಷೆಯ ಉಳಿವಿನ ದೃಷ್ಟಿಯಿಂದ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಆಶಾದಾಯಕ ಸಂಗತಿ. ಜೊತೆಗೆ ಸಭೆ-ಸಮಾರಂಭಗಳಲ್ಲಿ ನಿರುಪಯುಕ್ತ ದುಬಾರಿ ಗಿಫ್ಟ್ ಕೊಡುವ ಪದ್ಧತಿಯನ್ನು ಕೈಬಿಟ್ಟು ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಹರ್ಷದಾಯಕ ವಿಷಯವಾಗಿದೆ. ಇವೆರಡು ಕನ್ನಡ ಭಾಷೆ ಉಳಿವಿಗೆ ಅನಿವಾರ್ಯವಾಗಿವೆ. ಇವುಗಳ ಜೊತೆಗೆ ಓದಿದ ಪುಸ್ತಕಗಳ ಬಗ್ಗೆ ಅಭಿಪ್ರಾಯಗಳನ್ನು ಬರಹದ ಮೂಲಕ ಹಂಚಿಕೊಂಡು ಬರಹಗಾರರಿಗೆ ಅಕ್ಷರಗಳ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಮತ್ತೊಂದು ವಿಧಾನ. ಇವೆಲ್ಲವುಗಳಿಗಿಂತ ವಿಶಿಷ್ಟವಾದ ಮತ್ತೊಂದು ವಿಧಾನವಿದೆ ಅದೇ ಪುಸ್ತಕ ವಿಮರ್ಶೆ. ವಿಮರ್ಶಕರು ಪುಸ್ತಕದ ಒಳನೋಟವನ್ನು ಅಂತಃಸತ್ವವನ್ನು ಗ್ರಹಿಸಿ ಆ ಕೃತಿಯ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ಇದರಿಂದ ಅದರ ಸಾಧಕ ಬಾಧಕಗಳನ್ನು ಗುರುತಿಸಲು ಸಹಾಯಕವಾಗುತ್ತದೆ. ಸಾಹಿತಿಗಳ ಬರಹಕ್ಕೆ ಅಗತ್ಯವಾದಂತಹ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಾಹಿತ್ಯ ಗಟ್ಟಿಗೊಳ್ಳಲು ಮತ್ತು ಓದುಗರಲ್ಲಿ ಓದಿನ ಅಭಿರುಚಿ ಮೂಡಿಸಲು ಅನಿವಾರ್ಯವಾಗುತ್ತದೆ.

ನಾನು ಹೀಗೇಕೆ ಚರ್ಚಿಸುತ್ತಿರುವೆ ಎಂದು ಅಚ್ಚರಿಯಾಗಬಹುದು. ಕಾರಣ ಇಷ್ಟೇ ಸ್ನೇಹಿತರೆ ನಿಮ್ಮ ಮುಂದೆ ಒಂದು ವಿಮರ್ಶ ಲೇಖನಗಳ ಸಂಕಲನ ಕುರಿತು ವಿಮರ್ಶೆ ಮಾಡಲಿದ್ದೇನೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಎಚ್ .ಎಸ್.ಸತ್ಯನಾರಾಯಣರವರು ಉತ್ತಮ ವಾಗ್ಮಿಗಳು, ವಿಮರ್ಶಕರು ಹಾಗೂ ಪ್ರಬುದ್ಧ ಲೇಖಕರಾಗಿದ್ದಾರೆ. ಇವರು ರಚಿಸಿರುವ ಕಣ್ಣೋಟ ವಿಮರ್ಶಾ ಲೇಖನಗಳ ಸಂಕಲನ ಮೌನೇಶ್ ಕನಸುಗಾರ ಅವರ ಸುಂದರವಾದ ಒಳಪುಟ ವಿನ್ಯಾಸ ಮತ್ತು ರೂಪಶ್ರೀ ಕಲ್ಲಿಗನೂರ್ ಅವರ ಅರ್ಥಪೂರ್ಣ ಮುಖಪುಟ ವಿನ್ಯಾಸದೊಂದಿಗೆ ಜೀವತಳೆದಿದ್ದು 238 ಪುಟಗಳಲ್ಲಿ ಅಗಾಧವಾದ ವಿಷಯವನ್ನು ಹೊತ್ತು ಓದುಗರಿಗೆ ಉಣಬಡಿಸಲು ಕೋಲಾರದ ಅಲಂಪು ಪ್ರಕಾಶನದಿಂದ ಮುದ್ರಣಗೊಂಡು 2021ರಲ್ಲಿ ಕನ್ನಡ ಸಾರಸ್ವತ ಲೋಕ ಸೇರಿದೆ.

ಒಂದು ಪುಸ್ತಕದ ಮುಖಪುಟ ವಿನ್ಯಾಸ ಆಕರ್ಷಕವಾಗಿದ್ದರೆ ಸಾಲದು ಆ ನೋಟದಿಂದ ಏನನ್ನು ಅರಿಯಲು ಸಾಧ್ಯವಿಲ್ಲ. ಅದರೊಳಗಿನ ಆತ್ಮದಂತಿರುವ ಸಾಹಿತ್ಯದಲ್ಲಿ ಗಟ್ಟಿತನ ವಿರಬೇಕು. ಆ ದೃಷ್ಟಿಯಲ್ಲಿ ಕಣ್ಣೋಟ ಮುಖಪುಟ ಮತ್ತು ಗಟ್ಟಿತನದಿಂದಲೂ ತನ್ನ ಪ್ರೌಢಿಮೆಯನ್ನು ಮೆರೆದಿದೆ.

ಎಫ್. ಆರ್. ಲೀವಿಸ್ ಪ್ರಕಾರ “ವಿಮರ್ಶೆಯು ಉನ್ನತವಾದ ನೈತಿಕ ಪ್ರಜ್ಞೆಯನ್ನು ನಿರೂಪಿಸಬೇಕು ಹಾಗೂ ಕಲಾಕೃತಿಯಲ್ಲಿ ಮೌಲ್ಯಗಳು ಬದುಕಿನ ಪರವಾಗಿವೆ ಎಂದು ನಿರೂಪಿಸಬೇಕು”

ಸಾಹಿತಿಗಳ ಹುಟ್ಟುಹಬ್ಬ, ಕೃತಿಗಳ ಐವತ್ತರ ಸಂಭ್ರಮದ ಸಮಯದಲ್ಲಿ ನುಡಿನಮನ ಸಲ್ಲಿಸಲು, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದಾಗ ಗೌರವ ಸಮರ್ಪಿಸಲು, ಹೊಸದಾಗಿ ಪ್ರಕಟಗೊಂಡ ಪುಸ್ತಕಗಳನ್ನು ಓದಿನ ಮೂಲಕ ಹೊಸ ತಲೆಮಾರಿನ ಸಾಹಿತಿಗಳಿಗೆ ಪ್ರೋತ್ಸಾಹ ನೀಡಲು ಅವರ ಪುಸ್ತಕಗಳನ್ನು ವಿಮರ್ಶಿಸುವ ಮಹದುದ್ದೇಶ ಇವರದಾಗಿದೆ
ತನ್ನ ಮೆಚ್ಚಿನ ಸಾಹಿತಿಗಳ ಸಾಹಿತ್ಯವನ್ನು ಓದಿ ಅವರ ಸಾಹಿತ್ಯ ಯಾನವನ್ನು ಬಹಳ ನವಿರಾದ ಬರಹದ ಮೂಲಕ ತನಗಿಷ್ಟವಾದ ಅಂಶಗಳನ್ನು ಇಲ್ಲಿ ದಾಖಲಿಸಿದ್ದಾರೆ .ಸಾಹಿತ್ಯ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಇವರ ಹೃದಯ ವೈಶಾಲ್ಯತೆ ಮೆಚ್ಚಲೆಬೇಕು.

ಡಾ. ಎಚ್.ಎಸ್. ಸತ್ಯನಾರಾಯಣರವರು ಕನ್ನಡ ಸಾರಸ್ವತ ಲೋಕದ ದಿಗ್ಗಜ ಕವಿಗಳು ,ಸಾಹಿತ್ಯಗಳಿಂದ ಹಿಡಿದು ಈ ತಲೆಮಾರಿನ ಕವಿಗಳ ಲೇಖಕರ ಕೃತಿಗಳ ಕಡೆಗೆ ಕಣ್ಣೋಟ ಬೀರಿ ಅದರಲ್ಲಿರುವ ಸಾರವನ್ನು ಸಾಹಿತ್ಯ ಅಭಿಮಾನಿಗಳ ಮುಂದೆ ನೀಡಿ ಅವರ ಮನವನ್ನು ಮುದಗೊಳಿಸಿದ್ದಾರೆ. ಕಣ್ಣೋಟ ಶೀರ್ಷಿಕೆ ಅದ್ಭುತವಾಗಿದ್ದು ಕವಿಯ ದೃಷ್ಟಿಕೋನದಲ್ಲಿ ಅವರ ಗ್ರಹಿಕೆಗೆ ನಿಲುಕಿದ ಕೃತಿಯ ವಿಚಾರಗಳನ್ನು ಓದುಗರಿಗೆ ಸಮರ್ಪಿಸಿದ್ದಾರೆ.

ಇದರಿಂದ ಓದುಗರಿಗೆ ಈ ಎಲ್ಲಾ ಕವಿಗಳ ನಡುವಿನ ಹೋಲಿಕೆ ವ್ಯತ್ಯಾಸ ತಿಳಿಯಲು ನೆರವಾಗುತ್ತದೆ. ಜೊತೆಗೆ ಅವರಲ್ಲಿನ ಚಿಂತನಾಲಹರಿ, ಬರಹದ ಶೈಲಿ, ನಿರೂಪಣೆ ,ಅಭಿವ್ಯಕ್ತಿ, ಪದ ಸಂಯೋಜನೆ, ವಿಷಯ ಮಂಡನೆ, ಭಾಷಾ ಹಿಡಿತ, ಸಾಹಿತ್ಯದ ಪ್ರತಿಪಾದನೆ ,ಆಶಯಗಳು, ಆಲೋಚನೆಗಳು, ಹುಡುಕಾಟಗಳು, ಸೃಜನಶೀಲತೆ , ಕೌಶಲ್ಯ, ಸಾಹಿತ್ಯಪ್ರಕಾರ, ಲಯಬದ್ಧತೆ, ಕಥಾವಸ್ತು, ಅವರ ಮನೋಧೋರಣೆಗಳು ಮುಂತಾದವುಗಳನ್ನು ಅರಿಯಲು ಕನ್ನಡಿಯಾಗಿದೆ.

ನವ್ಯ,ನವೋದಯ ,ಪ್ರಗತಿಪರ ,ಬಂಡಾಯ,ದಲಿತ ಸಾಹಿತ್ಯಗಳು ಒಳಗೊಂಡಂತೆ ಎಲ್ಲ ಪ್ರಕಾರದ ಕವಿಗಳ ಒಂದು ಸಾಹಿತ್ಯ ಸಾರವನ್ನು ಉಣಬಡಿಸಿದ್ದಾರೆ ಡಾ.ಸತ್ಯನಾರಾಯಣರವರು. ತೀಕ್ಷ್ಣ ಮತ್ತು ಸೂಕ್ಷ್ಮಗ್ರಾಹಿ ಅವಲೋಕನದಲ್ಲಿ ಓದುಗರು ಹಲವು ಕವಿಗಳ ಬರಹದ ಆಶಯಗಳನ್ನು ಒಟ್ಟಾಗಿ ಒಂದೆ ಪುಸ್ತಕದಲ್ಲಿ ದಕ್ಕಿಸಿಕೊಳ್ಳಲು ವಿವಿಧ ಅಭಿರುಚಿಯ ಓದುಗರಿಗೆ ಚಮತ್ಕಾರಿ ಗ್ರಂಥವಾಗಿದೆ.

ಕಣ್ಣೋಟವನ್ನು ಒಂದು ಸುಂದರವಾದ ಹೂದೋದಕ್ಕೆ ಹೋಲಿಸುವುದಾದರೆ ಹೂಬನದ ತುಂಬಾ ರಂಗುರಂಗಿನ ಭಿನ್ನ ವಿಭಿನ್ನ ಸುಮಗಳು ಅರಳಿಸಿ ಸುಗಂಧ‌ ಸೂಸುತ್ತ ನಳನಳಿಸುವಂತೆ ಕಣ್ಣೋಟದಲ್ಲಿ‌ ನಾನಾ ಸಾಹಿತ್ಯ ಪ್ರಕಾರಗಳು ರಾರಾಜಿಸುತ್ತಿವೆ.

ಕಣ್ಣೋಟವೂ ಸಾಹಿತ್ಯಾಸಕ್ತರಿಗೆ ರಸಾಯನದ ಅನುಭವ ನೀಡುತ್ತದೆ. ತರ ತರದ ಹಣ್ಣುಗಳು ವಿಧ ವಿಧಗಳಲ್ಲಿ ತುಣುಕುಗಳಾಗಿ ಬೆಲ್ಲದ ಪಾಕದಲ್ಲಿ ಕಲಸಿ ನಾಲಿಗೆಯ ಮೇಲೆ ಇಟ್ಟರೆ ಆಹಾ ಎಂತಹ ಸ್ವಾದ ಹಾಗೆಯೇ ಇವರು ನಾನಾ ಕವಿಗಳ ಸಾಹಿತ್ಯ ಪಾಕವನ್ನು ತಯಾರಿಸಿ ಓದುಗರಿಗೆ ಉಣಬಡಿಸಿದ್ದಾರೆ.

ವಿಮರ್ಶೆ ಎಂಬುದು ಹುರಿಗಡಲೆಯಲ್ಲ. ಅದೊಂದು ಕಬ್ಬಿಣದ ಕಡಲೆ ಎಂದೆ ಹೇಳಬಹುದು.ಕವಿ ಕಾವ್ಯ ಪರಿಚಯದ ಜೊತೆಗೆ ಸಾಹಿತ್ಯದ ಆಳವಾದ ಅರಿವಿರಬೇಕು. ಮುಖ್ಯವಾಗಿ ಸಾಹಿತ್ಯದ ವ್ಯಾಪಕ ಅಧ್ಯಯನ ಇರಬೇಕು .ಸತ್ಯನಾರಾಯಣ ಅವರ ಕೃತಿಯನ್ನು ಓದಿದಾಗ ನಮಗೆ ಇವರ ಸಾಹಿತ್ಯ ಜ್ಞಾನದರಿವು ತಿಳಿಯುತ್ತದೆ . ಆ ಕೃತಿಯ ಬಗ್ಗೆ ವಿವರಿಸುವಾಗ ಅವರು ಅಮೂಲ್ಯ ಅಧ್ಯಯನ ಮಾಡಿರುವುದು ಬೆಳಕಿಗೆ ಬರುತ್ತದೆ. ಸಂದರ್ಭೋಚಿತವಾಗಿ ನೀಡಿರುವ ಉದಾಹರಣೆಗಳು, ನಿದರ್ಶನಗಳು ,ಸಾಹಿತ್ಯದ ಬೇರಿನಾಳ ಕಿಳಿದವರಿಗೆ ಮಾತ್ರ ನೀಡಲು ಸಾಧ್ಯ.ಆ ಚಿತ್ರಣವನ್ನು ಸಮಗ್ರವಾಗಿ ಓದುಗರ ಮುಂದಿಡುವುದು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಲೇಖಕರ ಪರಿಶ್ರಮ ಅಧ್ಯಯನಶೀಲತೆ ಶ್ಲಾಘನೀಯವಾಗಿದೆ. ಇವರಿಗೆ ಸಮಗ್ರ ಸಾಹಿತ್ಯದ ಒಳನೋಟಗಳ ಅರಿವಿದೆ‌‌ ಸೂಕ್ಷ್ಮಸಂವೇದನೆಗಳಿಗೆ ಸ್ಪಂದನ ಗುಣವಿದೆ .ಸಾಹಿತ್ಯದ ಬಗ್ಗೆ ಅಪಾರ ಶ್ರದ್ಧೆ ಮತ್ತು ಪ್ರೀತಿ ಇರುವುದರಿಂದ ಇದೆಲ್ಲಾ ಸಾಧ್ಯವಾಗುತ್ತದೆ. ಅವರ ಅಧ್ಯಯನ ಮತ್ತು ಅನುಭವಗಳ ಸಂಗಮದಿಂದ ಇವರ ವಿಮರ್ಶೆ ಅರ್ಥವಿಸ್ತಾರಗೊಳ್ಳುತ್ತ ಸಾಗಿದೆ.

ಡಾ. ಎಚ್.ಎಸ್. ಸತ್ಯನಾರಾಯಣ

ಡಾ. ಎಚ್.ಎಸ್. ಸತ್ಯನಾರಾಯಣರವರು ಸಾಹಿತ್ಯಕ್ಷೇತ್ರದಲ್ಲಿ ನಾಗಾಲೋಟದಿಂದ ಸಾಗಿ ಯಶಸ್ಸು ಪ್ರಶಸ್ತಿ ಬಹುಮಾನ ಬಿರುದುಗಳೆಂಬ ಸಾಹಿತ್ಯ ಕಿರೀಟ ಧರಿಸಿದ ಕವಿಗಳಿಂದ ಹಿಡಿದು, ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ ಮುಖ್ಯ ಭೂಮಿಕೆಗೆ ಬಾರದೆ ನಿರ್ಲಕ್ಷ್ಯಕ್ಕೆ ಒಳಗಾಗಿ ಎಲೆಮರೆ ಕಾಯಿಯಂತೆ ತಮ್ಮ ಅಮೂಲ್ಯ ಸೇವೆಯನ್ನು ಕನ್ನಡಾಂಬೆಗೆ ಸಮರ್ಪಿಸಿದ ಸಹೃದಯ ಮತ್ತು ಪ್ರತಿಭಾವಂತ ಕವಿಗಳ ಸಮಗ್ರ ಸಾಹಿತ್ಯದ ವಿಶ್ಲೇಷಣೆಯನ್ನು ತಮ್ಮ ಸುಂದರ ನಿರೂಪಣೆಯನ್ನು ಸಾಹಿತ್ಯಾಭಿಮಾನಿಗಳನ್ನು ಓದಿನ ಗುಂಗಿನಲ್ಲಿ ಮುಳುಗಿಸುವ ರೀತಿಯಲ್ಲಿ ಮಾಡಿದ್ದಾರೆ.

ಹೊಸತಲೆಮಾರಿನ ಕವಿಗಳ ವಿಮರ್ಶೆಯಲ್ಲಿ ಸರಿ ತಪ್ಪುಗಳನ್ನು ಬೆಟ್ಟುಮಾಡಿ ತೋರಿಸುತ್ತಾ ಅವರ ಬರಹದ ಉತ್ಸಾಹವನ್ನು ಕುಗ್ಗಿಸದೆ, ಮೃದುಮಧುರ ಮಾತುಗಳಲ್ಲಿ ಅವರ ನಿಲುವು ಧೋರಣೆಗಳನ್ನು ತೋರುತ್ತಾ ಉತ್ತೇಜನಕಾರಿಯಾದ, ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಸಾಗಿರುವ ಕವಿಯ ವಿಮರ್ಶಾ ಕೌಶಲ ಮೆಚ್ಚುವಂತದ್ದು.

” ವಿಮರ್ಶೆಯೆಂದರೆ ತನ್ನೆದುರು ಇರುವ ಕೃತಿಯ ವಿರುದ್ಧ ಹೋರಾಡುವ ಗೂಳಿ ಅಂತಲ್ಲ” ಎಂಬ ವರಕವಿ ಬೇಂದ್ರೆಯವರ ನುಡಿಗೆ ಜೀವತುಂಬಿದ್ದಾರೆ. ಕೃತಿ ಮತ್ತು ಓದುಗರ ನಡುವೆ ವಿಮರ್ಶೆಯು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂಬುದು ವಿಮರ್ಶರ ಆಶಯವಾಗಿದೆ.

ಡಾ.ಎಚ್.ಎಸ್. ಸತ್ಯನಾರಾಯಣ ಅವರು ಕವಿಗಳು‌ ಮತ್ತು ಸಾಹಿತ್ಯದ ವಿಮರ್ಶೆ ಮಾಡುತ್ತಾ ಅದರೊಳಗಣ ಮಹತ್ವದ ಅಂಶಗಳನ್ನು ಹೆಕ್ಕಿ ತೆಗೆಯುವಾಗ ಅದನ್ನು ಹೋಲುವ ಹಿರಿಯ ಕವಿಗಳು ಮತ್ತು ಸಮಕಾಲೀನ ಕವಿಗಳು ರಚಿಸಿರುವ ಸಾಹಿತ್ಯದೊಂದಿಗೆ ಹೋಲಿಸಿ ವ್ಯತ್ಯಾಸಿಸುತ್ತಾ ವಿವರಿಸಿದ್ದಾರೆ.

ಡಾ. ಎಚ್. ಎಸ್ .ಸತ್ಯನಾರಾಯಣ ರವರು ತಾವು ಓದಿದ ಕೃತಿಗಳಿಗೆ ನ್ಯಾಯ ಒದಗಿಸುವ ಮೂಲಕ ಆಲೋಚನೆ ,ಗ್ರಹಿಕೆ ,ಅನಿಸಿಕೆ, ಅಭಿಪ್ರಾಯ ,ಪ್ರತಿಕ್ರಿಯೆ, ಮನೋಗತವನ್ನು, ಸೂಕ್ಷ್ಮಗ್ರಾಹಿಯಾಗಿ ವ್ಯಕ್ತಪಡಿಸಿ ದಾಖಲೆಯ ರೂಪ ನೀಡಿದ್ದರ ಫಲಶ್ರುತಿಯೇ ಕಣ್ಣೋಟ .ಇದು ಹೊಸ ಕವಿಗಳ ಕಲಿಕೆಗೆ ಪ್ರೇರಕಶಕ್ತಿಯಾಗಿದೆ.

ಕವಿಯ ಸಾಹಿತ್ಯ ಚುಂಬಕ ಗುಣವು ಕೃತಿಯನ್ನು ವಿವಿಧ ಆಯಾಮಗಳಲ್ಲಿ ಮತ್ತು ಮಜಲುಗಳಲ್ಲಿ ಚರ್ಚಿಸಲು ವೇದಿಕೆ ಕಲ್ಪಿಸಿದೆ. ನವ ನವೀನ ಅನುಭವಗಳನ್ನು ಅನುಭಾವವಾಗಿಸಿ ಅನುಪಮ ರೂಪದಲ್ಲಿ ಅಲಂಕಾರಿಕರಿಸಿ ಅನುಸಂಧಾನವಾಗಿಸಿ ಓದುಗರ‌ ಹೃದಯದಲ್ಲಿ ಅಪರಿಮಿತ ಆನಂದ ಮತ್ತು ತೃಪ್ತಿಯನ್ನು ಸೃಷ್ಟಿಸುತ್ತದೆ.

ಅತಿಯಾದ ಉತ್ಪ್ರೇಕ್ಷೆ ಗಳಿಗೆ ಅವಕಾಶ ನೀಡದೆ, ವೈಭವೀಕರಣದ ಗೊಡವೆಯಿಲ್ಲದೆ, ವಸ್ತುನಿಷ್ಠವಾಗಿ ಸಾಹಿತ್ಯವಿಮರ್ಶೆ ಮಾಡುತ್ತ ಸಾಗಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ .ಇವರು ಬಳಸಿರುವ ಶಬ್ದಭಂಡಾರ ಓದುಗರಿಗೆ ಕರ್ಣಾನಂದ ನೀಡಿದರೆ ಮೆದುಳನ್ನು ಚುರುಕುಗೊಳಿಸುತ್ತದೆ.

ಇವರ ವಿಮರ್ಶಾ ಶೈಲಿ, ಚಿಂತನೆಗಳು ,ತೌಲನಿಕ ರೂಪ ,ಕ್ಷಮತೆ , ಓದುಗರಲ್ಲಿ ಕೌತುಕ, ಬೆರಗು, ಬೆಡಗನ್ನು ಮೂಡಿಸಿ ಓದುವ ಕುತೂಹಲ ಬತ್ತಿ ಹೋಗದಂತೆ ಕಾಪಿಡುವಲ್ಲಿ ಸಫಲವಾಗಿದ್ದಾರೆ.
ಪ್ರತಿಯೊಂದು ಕೃತಿಯ ಆಳ ಅಗಲಗಳನ್ನು ಉಲ್ಲೇಖಿಸುತ್ತಾ, ಅದರೊಳಗಿನ ಹೊಳಹುಗಳನ್ನು ತೆರೆದಿಡುತ್ತಾ, ಸಹಜವಾಗಿ, ಸುಂದರವಾಗಿ ,ಶಾಬ್ದಿಕ ಚಮತ್ಕಾರದ ಮೂಲಕ, ಹೃದಯ ತಣಿಸಿದ್ದಾರೆ. ಪ್ರಯೋಗಶೀಲತೆಯಿಂದ ಮಾರ್ಗದರ್ಶಿ ದೀವಿಗೆಯಾಗಿ ಸುಲಭಗ್ರಾಹಿ ಓದಿಗೆ ಅಣಿಯಾಗಿಸಿದ್ದಾರೆ

ಇವರು ಕೃತಿಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ನಾನಾ ತರದಲ್ಲಿ ಶೋಧಿಸುವುದು ಇವರ ಮತಿಗೆ ಸಿದ್ದಿಸಿದೆ. ಕೃತಿಯ ಸಮಗ್ರ ಅಂತಃಸತ್ವವನ್ನು ಅಂತರಂಗದ ಪ್ರಜ್ಞೆಯಾಗಿ ಬೆಳಗಿಸಿದ ಫಲಿತಗಳು ಓದುಗರಲ್ಲಿ ಸದಾ ಗುನುಗುತ್ತಿರುತ್ತವೆ.

ಬರಹಗಾರರ ದೃಷ್ಟಿಕೋನವನ್ನು ನಾನಾ ತರದಲ್ಲಿ ಶೋಧಿಸುವುದು ಇವರ ಜಾಣತನವೇ ಸರಿ .ಕನ್ನಡ ಭಾಷೆಯ ಸಾಧ್ಯಾಸಾಧ್ಯತೆಗಳನ್ನು ತಮ್ಮ ಜಾಣ್ಮೆಯಿಂದ ಲೀಲಾಜಾಲವಾಗಿ ವಿಶ್ಲೇಷಿಸಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಕವಿಯ ಅಗಾಧ ಬೌದ್ಧಿಕ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಲಕ್ಷಿತ ಮತ್ತು ಅಲಕ್ಷಿತ ವಲಯಗಳೆರಡಕ್ಕೂ ತಮ್ಮ ಬರಹದ ಮೂಲಕ ಸಮಾನ ಪ್ರಾತಿನಿಧ್ಯ ಒದಗಿಸುತ್ತಾ ಬಂದಿದ್ದಾರೆ. ಇಲ್ಲಿ ಕೃತಿಯ ಒಳನೋಟಗಳು ಸ್ಫೋಟಗೊಂಡು ಅನನ್ಯತೆಯೆಡೆಗೆ ಸಾಗಿವೆ. ಕೃತಿ ವಿಶ್ಲೇಷಿಸುವಾಗ ವಿಭಿನ್ನ ಮಗ್ಗುಲಗಳಲ್ಲಿ, ಸಾಹಿತ್ಯಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಪ್ರಧಾನ ಆದ್ಯತೆ ನೀಡಿದ್ದಾರೆ. ಸಾಹಿತ್ಯ ಎಂಬುದು ಬರಹಗಾರನ ಸಮಸ್ತ ಬದುಕನ್ನು ಆಕ್ರಮಿಸಿಕೊಂಡಿದೆ ಎಂಬುದನ್ನ ಪುಷ್ಟೀಕರಿಸುವಂತೆ ಕವಿ ಕೃತಿ ಪರಿಚಯ ವಿಶಿಷ್ಟವಾಗಿ ಮೂಡಿಬಂದಿದ್ದು, ಓದುಗನು ಪುಸ್ತಕದೊಳಗೆ ಸುಲಭವಾಗಿ ಪ್ರವೇಶಿಸಲು ನೆರವು ನೀಡುತ್ತದೆ. ಒಮ್ಮೆಪ್ರವೇಶಿಸಿದರೆ ಮುಗಿಯಿತು ಎಲ್ಲೂ ತಡೆಯಾಗದಂತೆ ಕಾಡಿಸಿಕೊಂಡು ಲೀಲಾಜಾಲವಾಗಿ ಓದಿಸಿಕೊಂಡು ಹೋಗುತ್ತದೆ.

ಅಷ್ಟು ಸರಳ ಸುಲಲಿತವಾದ ಶೈಲಿಯಲ್ಲಿ ಲವಲವಿಕೆಯಿಂದ ವಿಚಾರ, ಘಟನೆ ,ಪರಿಸ್ಥಿತಿಗಳನ್ನು ಮಂಡಿಸಿದ್ದಾರೆ .ಸಾಮಾಜಿಕ ಪ್ರಜ್ಞೆ ,ಸಾಹಿತಿಗಳ ಪ್ರಬುದ್ಧತೆಗಳೆರಡು ಇವರ ವಿಶ್ಲೇಷಣೆಯ ಮೂಲವಾಗಿದೆ. ತಮ್ಮ ಅಮೂಲ್ಯ ವಿಶ್ಲೇಷಣೆಯ ಮೂಲಕ ಪ್ರತಿ ಕವಿಯ ಸಾಹಿತ್ಯದಲ್ಲಿರುವ ವಿಶಿಷ್ಟತೆಯನ್ನು ಹೆಕ್ಕಿ ತೆಗೆಯುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಅಭಿನಂದನಾರ್ಹ.ಒಬ್ಬ ಓದುಗನು ದೃಷ್ಟಿ ಕೋನಕ್ಕೂ ವಿಮರ್ಶಕರ ನೋಟಕ್ಕೂ ಬಹಳ ವ್ಯತ್ಯಾಸಗಳಿರುತ್ತವೆ. ಓದುಗ ಸಾಹಿತ್ಯವನ್ನು ಆಸ್ವಾದಿಸಿ ರಸಾನುಭಾವಿಯಾಗುತ್ತಾನೆ. ಆದರೆ ಒಬ್ಬ ವಿಮರ್ಶಕ, ಒಬ್ಬ ಚಿಂತಕ ವೈವಿಧ್ಯಮಯ ಆಯಾಮಗಳಲ್ಲಿ, ತನ್ನ ಮನೋಭೂಮಿಕೆಯಲ್ಲಿ ಕೃತಿಯನ್ನು ಎದು ರುಗೊಳ್ಳುತ್ತಾನೆ. ಅದರೊಳಗಿನ ಸಾರವನ್ನು ಎಳೆಎಳೆಯಾಗಿ ಬಿಡಿಸುತ್ತಾ ಓದುಗ ಮತ್ತು ಬರಹಗಾರನ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಾಗುತ್ತಾನೆ.ಈ ದೃಷ್ಟಿಕೋನದಿಂದ ನೋಡಿದಾಗ ಕವಿಯುವ ಅಮೂಲಾಗ್ರವಾದ ಸಾಧನೆಯ ಹಾದಿಯಲ್ಲಿ ಇದ್ದಾರೆ ಎಂಬುದು ಹರ್ಷದಾಯಕ ಸಂಗತಿ.

ಈ ಪುಸ್ತಕವು ಒಟ್ಟು 46 ವಿಮರ್ಶೆಗಳು ಮತ್ತು ಮೂರು ಸಮೀಕ್ಷೆಗಳನ್ನು ಒಳಗೊಂಡಿದೆ

ಎಸ್ಎಲ್ ಭೈರಪ್ಪನವರ ಉತ್ತರಾಖಂಡ ಡಾ. ಎಂ.ಎಸ್.ವೇದ ರವರ ದೊಡ್ಡ ತಾಯಿ ಮತ್ತು ಜಯ, ಮಾಸ್ತಿ ಕೃಷ್ಣಪ್ಪನವರ ಭೂಮಿ ದುಂಡಾಗಿಯೆ ಇರಲಿ, ಉಷಾ ನರಸಿಂಹನ್ ರವರ ಕಾಮಿನೀ ತಲ್ವ, ಡಾ‌.ಜನಾರ್ಧನ ಭಟ್ಟರ ಬೂಬರಾಜ ಸಾಮ್ರಾಜ್ಯ,ಪ್ರೊ. ಕೆ.ಪಿ. ರಾವ್ ರವರ ವರ್ಣಕ, ಸುಶಾಂತ‌ ಕೊಟ್ಯಾನ ರವರ ದೀಪವಿರದ ದಾರಿಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಮಾಡಿದ್ದಾರೆ. ಜೊತೆಗೆ ಬಾ.ಬಿ ಜನಾರ್ದನ ಭಟ್ ರವರ ಕಲ್ಲುಕಂಬವೇರಿದ ಹುಂಬ ಮತ್ತು ಕಪಿಲಾ.ಪಿ.ಹಮನಾಬಾದೆ ಅವರ ಹಾಣಾದಿ ಮಿನಿ ಕಾದಂಬರಿಗಳು ಕಾದಂಬರಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ಡಾ. ಬಿ. ಜನಾರ್ಧನ ಭಟ್ಟರ ರ ಬೂಬರಾಜ ಸಾಮ್ರಾಜ್ಯ ಕಾದಂಬರಿಯಲ್ಲಿನ ವಿಶೇಷತೆಗಳನ್ನು ಎಳೆ ಎಳೆಯಾಗಿ ಬಿಡಿಸುವ ವಿಮರ್ಶಕರು ಲೇಖಕರ ಸೃಜನಶೀಲತೆಯಲ್ಲಿ ಮೂಡಿಬಂದ ‌ಸಾಮ್ರಾಜ್ಯದ ನೀಲನಕ್ಷೆ, ಅವರ ಸೈದ್ಧಾಂತಿಕ ಚೌಕಟ್ಟು, ಭೌಗೋಳಿಕ ನೆಲೆಗಟ್ಟುಗಳನ್ನು ಅಗಾಧವಾದ ಪುರಾವೆಗಳು ಮೂಲಕ ನಿರೂಪಿಸಿದ್ದು ದೃಶ್ಯಾವಳಿಗಳು ಕಣ್ಣು ಮುಂದೆ ಹಾದು ಹೋಗುತ್ತವೆ.

“ಉಣ್ಣುವವನಿಗೆ ರುಚಿ ಇರಬೇಕು ಉಣ್ಣುವ ಪದಾರ್ಥದಲ್ಲಿ ಪಾಕವೆಂಬ ಗುಣವಿರಬೇಕು” ಎಂಬ ಹಿರಿಯ ಕವಿವಾಣಿಯು ಅಪಾತ್ರವಾದ, ಅನರ್ಹವಾದ ಕೃತಿಯ ಬಗ್ಗೆ ಬರುವ ಅತಿಯಾದ ವಿಮರ್ಶೆಗಳಿಗೆ ಚಾಟಿ ಬೀಸುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಸತ್ಯನಾರಾಯಣರವರು ಯಾವುದೇ ಪೂರ್ವಗ್ರಹ ಪೀಡಿತರಾಗದೆ ವಸ್ತುನಿಷ್ಠವಾಗಿ ಕಾದಂಬರಿಗಳನ್ನು ವಿಮರ್ಶಿಸುತ್ತಾ ಹೋಗಿದ್ದಾರೆ. ಕಾದಂಬರಿಗಳ ಕಥಾವಸ್ತು ,ವಿಶೇಷತೆಗಳು, ನಿರೂಪಣೆ ,ಕುತೂಹಲಕಾರಿ ಸಂಗತಿಗಳು ತಿರುವುಗಳು, ಆಶಯಗಳು ಕಾದಂಬರಿಯಲ್ಲಿ ಬರುವ ಪಾತ್ರಗಳ ವಿಶೇಷತೆ, ಸ್ತ್ರೀ ಸಂವೇದನೆಗಳು , ಸಾಮಾಜಿಕ ಬಂಧನಗಳು, ತಾತ್ವಿಕ ನಿಲುವುಗಳನ್ನು ತಮ್ಮದೇ ಆದ ವೈಚಾರಿಕ ನೆಲೆಯಲ್ಲಿ ಚರ್ಚಿಸುತ್ತ ಸಾಗಿದ್ದಾರೆ. ಈ ಕಾದಂಬರಿ ಪ್ರಸ್ತುತ ಬದುಕಿಗೆ ಹೇಗೆ ನೆರವಾಗಬಲ್ಲುವು ಎಂಬುದನ್ನೂ ಕೂಡ ವಿಶ್ಲೇಷಿಸುವುದನ್ನು ಮರೆಯುವುದಿಲ್ಲ.

ಡಾ. ಜನಾರ್ಧನ ಭಟ್ಟರ ಮಿನಿ ಕಾದಂಬರಿ ಕಲ್ಲುಕಂಬ ವೇರಿದ ಹುಂಬ ವಾಸ್ತವ ಮಾರ್ಗದ ಜಾಡಿನಲ್ಲಿ ಸಾಗಿ ಭೂತ ವರ್ತಮಾನ, ಪರಂಪರೆಯ ಆಧುನಿಕತೆಯ, ನಂಬಿಕೆ ವೈಚಾರಿಕತೆಗಳ ನಡುವೆ ಸಾಮಾಜಿಕ ಭಾವನಾತ್ಮಕ ಸಂಬಂಧಗಳ ಪಾತ್ರವನ್ನು ದೈವಿಕತೆ ಮತ್ತು ಸಂಶೋಧನಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಹೆಣೆದಿದ್ದಾರೆ ಎಂದು ಅಭಿಮಾನಪೂರ್ವಕವಾಗಿ ಅಭಿನಂದಿಸಿದ್ದಾರೆ.

ಕವಿಗಳಾದ ತಿರುಮಲೇಶ, ಬರಗೂರು ರಾಮಚಂದ್ರಪ್ಪ, ಬಿಆರ್ ಲಕ್ಷ್ಮಣ ರಾವ್, ವಾಸುದೇವ ನಾಡಿಗ ಚಿನ್ನಸ್ವಾಮಿಯವರ ಕವಿ ಕಾವ್ಯದ ಸಮಗ್ರ ಸಾಹಿತ್ಯ ಚಿಂತನ-ಮಂಥನ ನಡೆಸಿದ್ದಾರೆ

ಬಹುಕಾಲ ಸಾಹಿತ್ಯ ಚಿತ್ರದಲ್ಲಿದ್ದು ಗಟ್ಟಿಯಾದ ಸಾಹಿತ್ಯಕೃಷಿ ಎಸಗಿದ್ದರೂ ತೆರೆಮರೆಯಲ್ಲಿ ಉಳಿದ ಸಾಹಿತಿಗಳಿಗೆ ಕವಿಗಳ ಗದ್ಯ-ಪದ್ಯ ಹಾಗೂ ಸಮಗ್ರ ಸಾಹಿತ್ಯ ವಿಶ್ಲೇಷಣೆಯ ಮೂಲಕ ಅವರ ಸಾಹಿತ್ಯದ ವೈಶಿಷ್ಟತೆಗಳನ್ನು ವಿಚಾರವಂತಿಕೆ ಗಳನ್ನು ಪ್ರತಿಪಾದನೆ ಪ್ರಯೋಗಶೀಲತೆ ಮುಂತಾದವುಗಳನ್ನು ಓದುಗರಿಗೆ ಪರಿಚಯಿಸುವ ಸಂಕಲ್ಪಗೈದು ಇದ್ದಾರೆ ಕವಿಗಳ ಕಾವ್ಯವನ್ನು ಮತಿಯ ದೃಷ್ಟಿಯಿಂದ ನೋಡಿ ಜಗ್ಗದೆ ಅದರಲ್ಲಿ ಕಾವ್ಯ ರಸದ ಗ್ರಹಣವನ್ನು ಮಾಡಬೇಕು ವಾಚಕರು ಎಂಬ ಶಬ್ದಗಾರುಡಿಗ ಬೇಂದ್ರೆಯವರ ನುಡಿಮುತ್ತುಗಳು ತರುವಂತಹ ವ್ಯಕ್ತಿತ್ವ ಸತ್ಯನಾರಾಯಣ ಅವರ ಬರಹಗಳಲ್ಲಿ ನಾವು ಕಾಣಬಹುದು.

ನಿತ್ಯೋತ್ಸವ ಕವಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ಅಧ್ಯಕ್ಷೋಪನ್ಯಾಸಗಳು ಕನ್ನಡ ಅಭಿಮಾನಿಗಳ ಮೆದುಳನ್ನು ಚುರುಕುಗೊಳಿಸುವ ಜೊತೆಗೆ ಕನ್ನಡ ಪ್ರೇಮವನ್ನು ನೂರ್ಮಡಿ ಗೊಳಿಸುತ್ತವೆ.
ಈ ಕೃತಿಯಲ್ಲಿ ಸಂಕಲಿತ ಗೊಂಡಿರುವ ೫ ಲೇಖನಗಳಲ್ಲಿ ನಿಸಾರ್ ಅಹಮದ್ ರ ಚಿಂತನೆಗಳು ಹರಳುಗಟ್ಟಿವೆ ಎಂದಿದ್ದಾರೆ.ನಾಡು ನುಡಿಗಳ ಬಗೆಗಿನ ಅಪಾರ ಕಳಕಳಿ ,ಕಾವ್ಯವನ್ನು ಕುರಿತ ಕಾಳಜಿ, ಆರೋಗ್ಯಪೂರ್ಣ ಸಮಾಜದ ಆಶಯ, ಆಲೋಚನಾಕ್ರಮ ,ಭಾವ ಸಂವೇದನೆಗಳನ್ನು ಇವರ ಬರವಣಿಗೆಯಲ್ಲಿ ಕಾಣಬಹುದು. ನಾಡು ನುಡಿ ಅಭ್ಯಾಸಿಗಳಿಗೆ ಇದೊಂದು ಮಾದರಿ ಆಕರ ಗ್ರಂಥವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

“ಮಹತ್ವದ ವಿಷಯಗಳನ್ನು ಎಷ್ಟು ಸಲ ವಿಮರ್ಶಿಸಿದರೂ ಅದರ ಮಹತ್ವ ತೀರುವುದಿಲ್ಲ.” ಎಂಬ ಕವಿನುಡಿಯನ್ನು ಉಲ್ಲೇಖಿಸಿ, ವಿಷಯ, ಚರ್ಚಿತ ಘಟನೆಗಳಿಗೆ ಮಾತ್ರವಲ್ಲದೆ ಆ ಕೃತಿಗೂ ಅನ್ವಯಿಸುತ್ತದೆ ಎಂದಿದ್ದಾರೆ.

ಬಿ.ವಿ.ಭಾರತಿಯವರ ನಕ್ಷತ್ರಗಳ ಸುಟ್ಟು ನಾಡಿನಲ್ಲಿ, ಸುಧೀಂದ್ರ ಬುಧ್ಯ ರವರ ಶ್ವೇತಭವನದ ಕಥನಗಳು ಪ್ರವಾಸ ಕಥನಗಳು ದೇಶ ಸುತ್ತಿ ಕೋಶ ಓದಿಸುತ್ತವೆ

ನಾಡಿನ ಹಿರಿಯ ಹಾಗೂ ಸಂವೇದನಶೀಲ ಸಾಹಿತಿಗಳಾದ ಎಚ್ .ಎಸ್.ಶಿವಪ್ರಕಾಶ್ ರವರ ಮಗು ಮತ್ತು ಹುಡುಗಿ, ಬಿ.ಆರ್. ಲಕ್ಷ್ಮಣರಾವ್ ಅವರ ಗೋಪಿ ಮತ್ತು ಗಾಂಡಲೀನ ಕವಿತೆಗಳ ವಿಮರ್ಶೆಯೂ ಕಾವ್ಯಾಸಕ್ತರ ಮನೆಗೆ ಕಾವ್ಯ ದಾರಿಯನ್ನು ಹರಿಸಿವೆ.
ಬಹುಭಾಷಾ ಪರಿಣಿತರಾದ ಕವಿ ಶಿವಪ್ರಕಾಶ್ ರವರ ಮಗು ಮತ್ತು ಹಣ್ಣುಗಳು ಕವನದ ವಿಶ್ಲೇಷಣೆಯಲ್ಲಿ ಕನ್ನಡದ ಅಸ್ಮಿತೆಯನ್ನು ಅಂತರರಾಷ್ಟ್ರೀಯಮಟ್ಟದಲ್ಲಿ ಪ್ರಕಾಶಿಸಿ ಮುಂಚೂಣಿಯಲ್ಲಿರುವ ಲೇಖಕರಲ್ಲ್ಲಿ ಒಬ್ಬರು ಎನ್ನುತ್ತಾ ಕವಿಯ ಗಮನಾರ್ಹ ಸಾಧನೆ, ಕನ್ನಡ ಕಾವ್ಯ ಪರಂಪರೆಯೊಂದಿಗೆ ಅಭೇದ್ಯವಾಗಿ ಬೆಸೆದುಕೊಂಡಿರುವ ಪರಿಯನ್ನು ಸುಂದರವಾಗಿ ಪದರ ಪದರಗಳನ್ನು ಬಿಡಿಸುತ್ತಾ, ಹಣ್ಣಿನಂಗಡಿ ಯನ್ನು ಮಗುವಿನೊಂದಿಗೆ ಹೋಲಿಸುತ್ತಾ, ಹಣ್ಣಿನ ಸೃಷ್ಟಿಯ ಹಂತಗಳನ್ನು ಮಗುವಿನ ಬೆಳವಣಿಗೆಗೆ ಸಮೀಕರಿಸಿರುವುದನ್ನು ತಮ್ಮ ವಿಮರ್ಶೆಯಲ್ಲಿ ಅಭಿನಂದಿಸಿದ್ದಾರೆ.

ಅನುಭವದ್ರವ್ಯ ಮತ್ತು ಸಂವೇದನೆಗಳಲ್ಲಿ ನ ಸಾಚಾತನದಿಂದಾಗಿ ಗೋಪಿ ಮತ್ತು ಗಾಂಡಲಿನ ಓದುಗರನ್ನು ಸೆಳೆಯುತ್ತದೆ ಎಂದು ಲಕ್ಷ್ಮಣರಿಯರ ಗೋಪಿ ಮತ್ತು ಗಾಂಡಲೀನ ಕವಿತೆಯ ಬಗ್ಗೆ ಪ್ರೋತ್ಸಾಹದ ನುಡಿಗಳನ್ನು ಮನದುಂಬಿ ಆಡಿದ್ದಾರೆ.

ಎಮ್.ಆರ್. ಕಮಲಾರವರ ಮಾರಿಬಿಡಿ, ಸುನಿಲ್ ನಾಗೊಂಡಹಳ್ಳಿ ಯವರ ಒಡಲೊಳಗಿನ ಕಡಲು, ವಿಲ್ಸನ್ ಕಟೀಲು ರವರ ನಿಷೇಧಕ್ಕೊಳಪಟ್ಟ ಒಂದು ನೋಟು ,ಅನಿಲ್ ವಡಾಗೆರೆ ರವರ ಮಾಗಿಯ ಚಳಿಯಲ್ಲಿ, ರಂಜಾನ್ ಹೆಬ್ಬೂರು ರ ಮತ್ತೆ ಮತ್ತೆ ಗಾಂಧಿ, ವೈಎನ್ ಯಾಕೊಳ್ಳಿ ಅವರ ಅಪ್ಪನೆಂಬ ಆಗಸ‌,ಕವನ ಸಂಕಲನಗಳು ಹಲವಾರು ಕವಿಗಳ ಕಾವ್ಯಾಭಿವ್ಯಕ್ತಿಯನ್ನು ಓದುಗರ ಮುಂದೆ ತೆರೆದಿಡುತ್ತವೆ.
ಈ ಕವನ ಸಂಕಲನಗಳ ವಿಶ್ಲೇಷಣೆ ಮೂಲಕ ಕಾವ್ಯಗಳಲ್ಲಿ ಅಡಕವಾಗಿರುವ ಸೂಕ್ಷ್ಮ ಸಂವೇದನೆಗಳು, ಭಾವಲಹರಿ, ಸಾಮಾಜಿಕ ಸ್ಪಂದನೆ, ಸಮಾಜಮುಖಿ ತುಡಿತಗಳು, ಬದುಕಿನ ತಾಕಲಾಟಗಳು, ಕಾವ್ಯಾಭಿವ್ಯಕ್ತಿ, ಮಹತ್ವ, ರಸಸ್ವಾದ, ಭಾಷಾಬಳಕೆಯ ಔಚಿತ್ಯ ಪ್ರಜ್ಞೆ, ಕವಿಯ ಅಂತಃಕರಣ, ಸಾಮರಸ್ಯದ ನಡೆ, ಸಹಬಾಳ್ವೆಯ ಪ್ರತಿಪಾದನೆ, ವೈಚಾರಿಕ ಆಲೋಚನೆ, ಕಾವ್ಯದ ಮೂಲಕ ತಪ್ಪನ್ನು ಪ್ರಶ್ನಿಸುವ ಕವಿಯ ಮನೋಸ್ಥೈರ್ಯ ಮುಂತಾದವುಗಳನ್ನು ಕಾವ್ಯಗಳು ಹೇಗೆ ವ್ಯಕ್ತವಾಗಿದೆ ಎಂಬುದನ್ನು ಬಹಳ ನಾಜೂಕಾಗಿ ಅದ್ಭುತ ಪದಗಳ ಮೂಲಕ ವಿಮರ್ಶಕರು ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತ ಓದುಗರಿಗೆ ವಿವರಿಸಿದ್ದಾರೆ

” ಕವಿ ಬಾಳಬೇಕು ವಿಮರ್ಶಕ ತಾಳಬೇಕು” ಎಂಬ ಹಿರಿಯ ಕವಿವಾಣಿಯಂತೆ ಸಾಹಿತ್ಯವೂ ಜನಮಾನಸದಲ್ಲಿ ಚಿರಕಾಲ ಉಳಿಯಬೇಕು. ಆ ನಿಟ್ಟಿನಲ್ಲಿ ಕವಿಯ ಜವಾಬ್ದಾರಿ ಹಾಗೂ ಎಚ್ಚರಿಕೆ ಹೆಜ್ಜೆಯಿಡುವುದು ಬಹಳ ಮುಖ್ಯವಾಗುತ್ತದೆ .ಹಾಗೆ ಕೃತಿಯಲ್ಲಿರುವ ಲೋಪದೋಷಗಳನ್ನು ಹುಡುಕುವುದೇ ವಿಮರ್ಶೆ ಎಂದು ಭಾವಿಸಬಾರದು ಅದರ ಹೊರತಾದ ಕಲಾಕೃತಿಗಳನ್ನು ಎತ್ತಿಹಿಡಿಯಬೇಕು.

ಹನಿಗವನಗಳ ರಚನಾಕ್ರಮ, ಆಶಯ, ಹಾಸ್ಯ, ವ್ಯಂಗ್ಯ, ವಿಡಂಬನೆ, ಒಲವು, ಬದುಕುಗಳು ಮುಂತಾದವುಗಳನ್ನು ಅತಿ ಸರಳ ಪದಗಳಲ್ಲಿ ಅಭಿವ್ಯಕ್ತಗೊಳಿಸುವ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕಿರಿದರೊಳ್ ಹಿರಿಯರ ತುಂಬುವ ಮೂಲಕ ನವಿರಾದ ಹಾಸ್ಯ ಜೋಡಿಸಿ ವಾಸ್ತವಿಕತೆಯನ್ನು ವ್ಯಂಗ್ಯವನ್ನು ಬಿಂಬಿಸುವುದೇ ವಿಶೇಷತೆಯಾಗಿದೆ.

ಹನಿ ಬೀ ದುಂಡಿರಾಜರ ಹನಿಗವನ ವಿಶೇಷವಾಗಿ ಮೂಡಿ ಬಂದಿದ್ದು ದುಂಡಿರಾಜರ ಬಗ್ಗೆ ಜಿ .ಎಸ್. ಶಿವರುದ್ರಪ್ಪನವರು “ಸಹಜ ಉಕ್ತಿ ವೈಚಿತ್ರದ ಕವಿ” ಎಂದಿರುವುದನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ ರೈಲುಹಳಿಗಳ ಬಗ್ಗೆ ಬರೆಯುತ್ತಾ ನುಣುಪಾದ ಗಲ್ಲಕ್ಕೆ ಮುತ್ತಿಕ್ಕುತ್ತಾ ಮುಂದೆ ಓಡುವ ರೈಲು ಕವಿಯ ಜೀವನ ಪ್ರೀತಿಯ ಸಂಕೇತದಂತಿದೆ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ.

ವೇಣುಗೋಪಾಲ ವಹ್ನಿ ರವರ ಸರಳ ರಾಮಾಯಣ ಮತ್ತು ಲಕ್ಷ್ಮೀನಾರಾಯಣ ಸ್ವಾಮಿಯವರ ತೊಗಲ ಚೀಲದ ಕರ್ಣ ಮಹಾಕಾವ್ಯಗಳ ಬೆರಗು ಬೆಡಗನ್ನು ಅಮೋಘವಾಗಿ ಹಲವಾರು ಸಾಲುಗಳನ್ನು ಉಲ್ಲೇಖಿಸುತ್ತಾ ವಿಶ್ಲೇಷಿಸಿದ್ದಾರೆ.

ಕಥೆ ಯಾರಿಗೆ ಇಷ್ಟವಿಲ್ಲ ಹೇಳಿ. ಡಾ.ಕುರುವ ಬಸವರಾಜುರವರ ಕೋಳಿ ಅಂಕ, ಶಾಂತಿ ಕೆ ಅಪ್ಪಣ್ಣರವರ ೧ ಬಾಗಿಲು ಮತ್ತು ೩ ಚಿಲ್ಲರೆ ವರ್ಷಗಳು, ಡಾ. ಸಿ ಎಂ ಗೋವಿಂದರೆಡ್ಡಿ ಅವರ ಸವುಡಿ ಕೃತಿಯ ಮೂಲಕ ಕಥಾಹಂದರವನ್ನು ನಿರೂಪಣೆಗೈದ ವಿಧಾನವನ್ನು ದೀರ್ಘವಾಗಿ ವಿಶ್ಲೇಷಿಸಿದ್ದಾರೆ.

ಇವುಗಳಲ್ಲದೆ ಪುಸ್ತಕದಲ್ಲಿ ಗಮನಸೆಳೆದ ಮತ್ತಷ್ಟು ವಿಮರ್ಶೆಗಳ ಕಡೆಗೆ ಗಮನಹರಿಸುವುದಾದರೆ ಅಮೋಘ ಜನಪ್ರಿಯತೆ ಗಳಿಸಿದ ನೀತಿ ಕಾವ್ಯ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಆಶಯಗಳನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ.

ಡಾ. ಸುಭಾಷ್ ರಾಜಮನೆ ಸಂಪಾದಿತ ಬಹುತ್ವ ಕಥನ ಅಭಿನಂದನಾಗ್ರಂಥ ಹಾಗು ಕಂಡವರಿಗಷ್ಟೇ ಕೃತಿ ಗೀತಾ ವಸಂತ ಜೋಷಿ ಹಾಗು ರಾಜಕುಮಾರ ಮಡಿವಾಳರಿಂದ ಸಂಪಾದಿತವಾಗಿ ವಿಮರ್ಶರ ವಿಮರ್ಶೆಗೊಳಪಟ್ಟಿವೆ.

ಉಮೇಶ್ ಸೊರಬ ಮತ್ತು ಜಿ‌.ಎಚ್ ಜ್ಯೋತಿಲಿಂಗಪ್ಪ ವಿರಚಿತ ಹಾದಿಯಲ್ಲದ ಬಯಲು ಹಾಯ್ಕು ಸಂಕಲನದ ರಚನೆ ಸಂದೇಶ ಆಶಯಗಳನ್ನು ತಮ್ಮ ವಿಮರ್ಶೆ ಯು ಮೂಲಕ ಅರ್ಥೈಸಿದ್ದಾರೆ. ಕೀ.ರಂ. ನಾಟಕಗಳ ವಿಶ್ಲೇಷಣೆ ಡಾ. ವಾಮದೇವ ತಳವಾರರ ಕೃತಿ, ಮತ್ತು ಆತ್ಮಧ್ಯಾನದ ಬುತ್ತಿ ಗಜಲ್ ಸಂಕಲನದ ವಿಮರ್ಶೆಯು ಇಲ್ಲಿ ಸ್ಥಾನ ಪಡೆದಿದೆ. ಧನಪಾಲ ನಾಗರಾಜರವರ ಊರಪ್ಪ ಊರಮ್ಮ ಕಥನಕವನ, ಎ.ಎಸ್ .ಮಕಾನದಾರ ಅವರ ಪ್ಯಾರಿ ಪದ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಮುಖಮುದ್ರೆ ಶೀರ್ಷಿಕೆಯಡಿಯಲ್ಲಿ ಎ.ಎನ್.ಮುಕುಂದರ ಆಲ್ಬಮ್ ವಿಭಿನ್ನತೆಯಲ್ಲಿ ಮೂಡಿ ಬಂದಿದೆ.

ಕಣ್ಣೋಟದಲ್ಲಿ ಸ್ಥಾನ ಪಡೆದ ಕೃತಿಗಳೆಂದರೆ ರವಿಕುಮಾರ್ ನೀಹಾ ಅವರ ಕಣ್ಣು ಧರಿಸಿ ಕಾಣಿರೋ, ಪ್ರಕಾಶ ಖಾಡೆ ಅವರ ಬೇಂದ್ರೆ ಕಾವ್ಯದ ದೇಸಿಯತೆ ವಿಮರ್ಶಾ ಲೇಖನಗಳ ವಿಮರ್ಶೆ ಮೂಡಿಬಂದಿವೆ.

ಡಾಕ್ಟರ್ ರವಿಕುಮಾರ್ ಅವರ ಕಣ್ಣು ಧರಿಸಿಕೊಂಡಿರುವ ವಿಮರ್ಶಾಕೃತಿ ದಲಿತ ಸಾಹಿತ್ಯ ಮೀಮಾಂಸೆಯ ಮುಂದುವರಿಕೆಯಾಗಿದೆ ಎನ್ನುವ ವಿಮರ್ಶಕರು, ಕೆ .ಬಿ .ಅವರ ಕಾವ್ಯದ ವಸ್ತು ವಿನ್ಯಾಸದ, ಲಯವಿನ್ಯಾಸ, ತಾಜಾತನ ಹೊಸ ಪರಿಭಾಷೆ ಮತ್ತು ಸಾಂಸ್ಕೃತಿಕ ಚಹರೆಗಳ ಮೂಲಕ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದ್ದಾರೆ.
ಬೇಂದ್ರೆ ಕಾವ್ಯದ ದೇಸಿಯತೆ ವಿಮರ್ಶಾ ಕೃತಿಯೂ ಪ್ರಕಾಶ ಗ ಖಾಡೆ ಕಡೆಯವರಿಂದ ಸಂಶೋಧನಾ ಸ್ವರೂಪದಲ್ಲಿ ಜೀವತಳೆದಿದ್ದು ಹೊಸತಲೆಮಾರಿನ ಪ್ರತಿಕ್ರಿಯೆಗೆ ದ್ಯೋತಕವಾಗಿ ಏನೆಲ್ಲ ಅಂಶಗಳನ್ನು ಚರ್ಚಿಸಿದ್ದಾರೆ ಎಂಬುದನ್ನು ಅವರು ತಮ್ಮ ವಿಮರ್ಶೆಯಲ್ಲಿ ಅವಲೋಕಿಸಿದ್ದಾರೆ .ಜೊತೆಗೆ ಕಂಡವರಿಗಷ್ಟೆ ಕೃತಿ ಕೂಡ ಬೇಂದ್ರೆಯವರ ಬದುಕು ಕುರಿತು ಬೆಳಕು ಚೆಲ್ಲುವಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂಬುದು ವಿಮರ್ಶಕರ ಅಭಿಮತವಾಗಿದೆ.

ಎಂ.ಚಂದ್ರಶೇಖರ್ ನಂಗಲಿ‌ಯವರ ಕಾಡು ಮತ್ತು ತೋಪು ಲೇಖನ ಕೃತಿಯು ಎಚ್ಚರಿಕೆಯ ಗಂಟೆಯಾಗಿ ಜೀವಪರ ಕಾಳಜಿಯಿಂದ ಜೀವತಳೆದ ಕೃತಿಯಾಗಿದೆ.ಪರಿಕಲ್ಪನೆಗಳನ್ನು ವಿಮರ್ಶಕರು ಪ್ರಸಕ್ತ ಸನ್ನಿವೇಶಗಳಿಗೆ ಸಮೀಕರಿಸಿ ವಿಶ್ಲೇಷಿಸಿರುವುದು ತುಂಬಾ ಅರ್ಥಪೂರ್ಣವಾಗಿದೆ.

ಬರಹಗಾರನೊಬ್ಬನ ಹಿಂದಿನ ವೈವಿಧ್ಯಮಯ ತಾಲೀಮುಗಳು ಅಗೋಚರ ಲೋಕದ ರಹಸ್ಯವನ್ನು ಭೇದಿಸುವಲ್ಲಿ ಬರವಣಿಗೆಯ ತಾಲೀಮು ಕೃತಿಯ ಆಯಾಮಗಳನ್ನು ತೆರೆದಿಡುತ್ತಾರೆ.

ಅಂತಿಮವಾಗಿ ಹೊಸ ಚಿಗುರು ನೂರಾರು ಕವಲುಗಳು, ಬರವಸೆ ಪಸಲು, ಪುಸ್ತಕದ ಪ್ರೀತಿ ಎಂಬ ವಿಷಯಗಳ ಮೇಲಿನ ಸಮೀಕ್ಷೆಗಳನ್ನು ವಿಮರ್ಶಿಸುತ್ತಾ ಓದುಗರನ್ನು ಚಿಂತನೆಗೆ ಒಳಪಡಿಸುತ್ತವೆ.

ಒಟ್ಟಾರೆ ಡಾ. ಎಚ್. ಎಸ್. ಸತ್ಯನಾರಾಯಣ ಅವರ ವಿಮರ್ಶೆಯು ಕವಿ ಕಾವ್ಯ‌ ಸಾಹಿತ್ಯದ ಅಮೋಘ ವಿಮರ್ಶೆಯ ‌ಮೂಲಕ ಮೂಡಿಬಂದಿದ್ದು ಯಾವುದೇ ಒಂದು ಕೃತಿಯ ಖಂಡನೆ ಮಂಡನೆ ಸಿದ್ಧಾಂತ ತತ್ವ ಪ್ರತಿಪಾದನೆಯ ನಿಟ್ಟಿನಲ್ಲಿ ಕಣ್ಣೋಟ ಹಲವು ಬಣ್ಣಗಳಿಂದ ‌ಆದ ಕಾಮನಬಿಲ್ಲಿನಂತಭಾಸವಾಗುತ್ತದೆ.

ಟಿ.ಎಸ್. ಎಲಿಯಟ್ ಪ್ರಕಾರ “ವಿಮರ್ಶೆ ಕಲಾಕೃತಿಗಳನ್ನು ಅರ್ಥೈಸಬೇಕು ಹಾಗೂ ಓದುಗನ ಅಭಿರುಚಿಯನ್ನು ತಿದ್ದಬೇಕು.ಈ ನಿಟ್ಟಿನಲ್ಲಿ ಡಾ.ಎಚ್.ಎಸ್‌. ಸತ್ಯನಾರಾಯಣರವರು ಅಭಿನಂದನಾರ್ಹರು.

ಅನುಸೂಯ ಯತೀಶ್
ಶಿಕ್ಷಕಿ ಹಾಗು ಕವಯಿತ್ರಿ
ಮಾಗಡಿ .