ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಕ್ಷಯ ತೃತೀಯ- ಚಿನ್ನಕ್ಕೆ ಬೇಡಿಕೆ ಏಕೆ?

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಚಿನ್ನ ಎಂಬ ಈ ಎರಡಕ್ಷರದ ಹೆಸರೇ ಎಷ್ಟೊಂದು ಸುಂದರ. ತಾಯಿ ತನ್ನ ಮಗುವಿಗೆ ಪ್ರೀತಿಯಿಂದ ಚಿನ್ನ ಎಂದು ಕರೆದಾಗ, ಆ ಮಗು ಪುಳಕಿತಗೊಂಡು ಮುಖದಲ್ಲಿ ಮಂದಹಾಸ ಬೀರುತ್ತದೆ. ಇನ್ನು ಪ್ರಿಯಕರ ತನ್ನ ಪ್ರೇಯಸಿಗೆ ಚಿನ್ನ ಎಂದು ಕರೆದಾಗ ಆಕೆ ನಸು ನಾಚಿ ಮುಖ ಕೆಂಪಾಗಿ ನಾಚುತ್ತಾಳೆ. ಹಾಗೆ ಗಂಡ ತನ್ನ ಹೆಂಡತಿಗೆ ಚಿನ್ನ ಎಂದು ಪ್ರೀತಿಯಿಂದ ಸಂಭೋದಿಸಿದಾಗ ಆಕೆಯ ಆಯಾಸವೆಲ್ಲವೂ ಕ್ಷಣಮಾತ್ರದಲ್ಲೆ ಕರಗಿ ಹೋಗಿ ಉಲ್ಲಾಸಭರಿತವಾಗುತ್ತಾಳೆ. ಅಬ್ಬಾ ! ಈ ಚಿನ್ನ ಎಂಬ ಹೆಸರಿಗೆ ಅಷ್ಟೊಂದು ಆಕರ್ಷಣಿ ಇದೆಯಾ?
ಚಿನ್ನದ ಖರೀದಿಗೆ ಕೊರತೆ ಇಲ್ಲ.

ಚಿನ್ನ” ಇದೊಂದು ಹಳದಿ ಲೋಹ, ಬಂಗಾರ,ಹೊನ್ನು,ಹೇಮ,ಸುವರ್ಣ, ಕನಕ, ಕಾಂಚನ, ಹಿರಣ್ಯ, ಆರಂ, ಸ್ವರ್ಣ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಅಮೂಲ್ಯವಾದ ಧಾತು,ಈ ಹೆಸರಿನಲ್ಲಿ ಏನೋ ಒಂದು ಸೊಗಸು. ಈ ಹಳದಿ ಲೋಹ ಕೇವಲ ಅಂದ ಅಲಂಕಾರದ ವಸ್ತುವಲ್ಲ. ಬದಲಾಗಿ ಸೌಂದರ್ಯ ಹಾಗೂ ಭದ್ರತೆಯ ಸಂಗಮ. ಹಾಗಾಗಿ ಬಂಗಾರದ ಬೆಲೆ ಗಗನಕ್ಕೇರುತ್ತಿದ್ದರೂ ಚಿನ್ನದದೊಡವೆ ಕೊಳ್ಳುವವರಿಗೆ ಕೊರತೆಯ ಇಲ್ಲ.
ಶ್ರೇಷ್ಠತೆಯ ಸಂಕೇತ ಚಿನ್ನ.
ಚಿನ್ನ ಶುದ್ಧತೆ,ಮತ್ತು ಸಾಮರ್ಥ್ಯ ಮತ್ತು ಶ್ರೇಷ್ಠತೆಯ ಸಂಕೇತವೂ ಹೌದು.ಅನುಪಮ ಸೌಂದರ್ಯಕ್ಕೂ ಚಿನ್ನವೇ ಆದರ್ಶ. ಕೌಟುಂಬಿಕ ಸಮಾರಂಭಗಳಲ್ಲಿ ಚಿನ್ನ ಧರಿಸಬೇಕೆಂಬ ಅಲಿಖಿತ ನಿಯಮವೂ ಅನಾದಿಕಾಲದಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು.ಸ್ತ್ರೀಯ ಜೀವದಷ್ಟೇ ಪ್ರೀತಿಯ ವಸ್ತು. ಅವಳ ಸೌಂದರ್ಯ ಹಾಗೂ ವ್ಯಕ್ತಿತ್ವಕ್ಕೆ ಕಾಂತಿ ಕೊಡುವ ಸಾಧನ ಕೂಡ.ಈ ಹಳದಿ ಲೋಹದ ಆಕರ್ಷಣೆ ಅಂಥದ್ದು. ಮೈಮೇಲೆ ಧರಿಸಿದರೆ ಸೌಂದರ್ಯದ ಸೊಬಗು ಹೊರಸೂಸುತ್ತದೆ. ಹೆಣ್ಣಿಗೆ ಹಣೆಯ ಮೇಲಿನ ಕುಂಕುಮ ಹೇಗೆ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆಯೋ ಹಾಗೆಯೇ ಅವಳ ಮೈಮೇಲೆ ಚಿನ್ನಾಭರಣಗಳು ವಿಶೇಷ ಶೋಭೆ ತರುತ್ತದೆ.
ನವ ಜೋಡಿಗೆ ಉಂಗುರ,ತಾಳಿ.
ಭಾರತೀಯರಿಗೆ ಚಿನ್ನದ ಮೇಲಿನ ಪ್ರೀತಿ ತುಂಬಾ ಹಿಂದಿನದು. ಮದುವೆ ಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿ ಚಿನ್ನದ ಮೆರಗು ಇಲ್ಲದೆ ಮುಗಿದಂತಾಗುವುದಿಲ್ಲ. ಚಿನ್ನವನ್ನು ಸಾಟಿಯಿಲ್ಲದ ಪ್ರೇಮ ಕಾಣಿಕೆಯಾಗಿ ಹಿಂದಿನ ಕಾಲದಿಂದಲೂ ಇಂದಿನವರೆಗೂ ಭಾವಿಸುತ್ತಲೇ ಇದ್ದಾರೆ.ವಿವಾಹ ಎನ್ನುವುದು ಇಬ್ಬರ ಬಾಳನ್ನು ಒಂದಾಗಿಸುವ ಮಧುರವಾದ ಘಟ್ಟ. ಅವರ ಬಾಳಿನಲ್ಲಿ ಅತ್ಯಂತ ಪ್ರಾಮುಖ್ಯತೆ ಇರುವ ಸಂಬಂಧವಾಗಿರುತ್ತದೆ. ಆ ಜೀವಗಳನ್ನು ಒಂದಾಗಿಸುವ ಪ್ರೀತಿಗೆ ಚಿನ್ನದ ಉಂಗುರ,ತಾಳಿ ತೊಡಿಸುತ್ತಾರೆ.
ವಿವಾಹಿತ ಮಹಿಳೆಯರ ಸಂಕೇತ
ಇಂದು ನಿಶ್ಚಿತಾರ್ಥ ( ಎಂಗೇಜ್ ಮೆಂಟ್ ) ಎಂದಕೂಡಲೇ ಉಂಗುರಗಳನ್ನು ಬದಲಿಸಿಕೊಳ್ಳುವ ನಿಶ್ಚಿತಾರ್ಥಕ್ಕೆ ಬಹಳವಾದ ಅರ್ಥವಿದೆ, ಶಾಸ್ತ್ರರೀತ್ಯ ಪ್ರಾಮುಖ್ಯತೆ ಇದೆ. ಭಾವಿ ವಧು-ವರರು ಉಂಗುರವನ್ನು ಬದಲಾಯಿಸಿಕೊಳ್ಳುವ ಸಮಯ ವಿಶೇಷವಾದದ್ದು. ನಿಶ್ಚಿತಾರ್ಥ ಸಮಯದಲ್ಲಿ ಉಂಗುರುಗಳನ್ನು ಬೆರಳಿಗೆ ಕೊಡಿಸುವುದರಲ್ಲಿ ಒಂದು ರಹಸ್ಯವಿದೆ. ಈ ಉಂಗುರ ಬೆರಳು ನರಕ್ಕೂ, ಹೃದಯಕ್ಕೂ ಅವಿನಾಭಾವ ಸಂಬಂಧ ಹೊಂದಿದೆ.”ನನ್ನ ಮನಸ್ಸೆಂಬ ಈ ಉಂಗುರವನ್ನು ನಿನ್ನ ಬೆರಳಿಗೆ ತೋಡಿಸುತ್ತಿದ್ದೇನೆ. ಉಂಗುರದ ಬೆರಳಿಗೆ ಹಾಕಿದ ಉಂಗುರದ ಮೂಲಕ ನಿನ್ನ ಹೃದಯವನ್ನು ಹೊಂದುತ್ತಿದ್ದೇನೆ”.ಎಂದು ಈ ಕ್ರಿಯೆಗೆ ಅರ್ಥ. ನಂತರ ಮದುವೆಯಲ್ಲಿ ಚಿನ್ನದ ತಾಳಿ ಮುಖ್ಯವಾಗಿರುತ್ತದೆ. ತಾಳಿಯೆಂಬುದು ಭಾರತೀಯ ವಿವಾಹಿತ ಮಹಿಳೆಯ ಸಂಕೇತ. ಇದರಿಂದ ದಾಂಪತ್ಯದಲ್ಲಿ ಮಧುರ ಬಾಂಧವ್ಯಗಳು ಹೆಚ್ಚಿಸುವುದಕ್ಕೆ ಇದು ಮುಖ್ಯ ಪಾತ್ರವಹಿಸುತ್ತದೆ.

ದೇವರಿಗೂ ಚಿನ್ನದ ಅಲಂಕಾರ.
ಹಾಗೇ ದೇವಸ್ಥಾನಗಳಲ್ಲಿ ದೇವರಿಗೆ ಅಭಿಷೇಕ ಪೂಜೆ ಮಾಡಿ, ನಂತರ ಚಿನ್ನದ ಅಲಂಕಾರ ಮಾಡುತ್ತಾರೆ. ಅಂದರೆ ಚಿನ್ನ ಅಷ್ಟೊಂದು ಮಹತ್ವದ ಸ್ಥಾನ ಪಡೆದಿದೆ.
ಹೀಗೆ ಮುತ್ತು,ರತ್ನ,ವೈಡೂರ್ಯ ಯಾವುದೇ ಆಗಿರಲಿ ಚಿನ್ನದ ಚೌಕಟ್ಟು ಬೇಕೇ ಬೇಕು. ಚಿನ್ನ ವಿವಿಧ ರೂಪಗಳಲ್ಲಿ ಬಳಕೆಯಾಗುವ ಮುನ್ನ ಬೆಂಕಿಯಲ್ಲಿ ಹಾದು ಬಂದಿರುತ್ತದೆ. ಇದೇ ಕಾರಣಕ್ಕೆ ಚಿನ್ನದ ಶುದ್ಧತೆಗೆ ಬೇರಾವುದೂ ಸಾಟಿ ಇಲ್ಲ ಎನ್ನುವ ನಂಬಿಕೆ ಜನ ಸಾಮಾನ್ಯರಲ್ಲಿ ಆಳವಾಗಿ ಬೇರೂರಿದದೆ.
ಚಿನ್ನ ಸೂರ್ಯದೇವರ ಸಂಕೇತ.
‘ಚಿನ್ನದಂತ ಮನಸ್ಸು’, ‘ಚಿನ್ನದಂಥ ವ್ಯಕ್ತಿ’ ಎನ್ನುವ ಮಾತುಗಳಲ್ಲಿ ಚಿನ್ನದ ಹಿರಿಮೆ ಸಹಜವಾಗಿ ವ್ಯಕ್ತವಾಗುತ್ತದೆ. ಚಿನ್ನ ಸೂರ್ಯದೇವರ ಸಂಕೇತ. ಇದರ ಬಳಕೆಯಿಂದ ದೇಹ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯ ಉತ್ತಮಗೊಳ್ಳುತ್ತದೆಂದು ನಮ್ಮ ಹಿಂದಿನ ಆಯುರ್ವೇದ ವೈದ್ಯ ಪಡಿತರು ಸಾರಿದ್ದಾರೆ. ನಮ್ಮ ಹೆಣ್ಣುಮಕ್ಕಳಿಗೆ ರೂಪಿಸಲ್ಪಟ್ಟಿರುವ ವಿವಿಧ ಆಭರಣಗಳಲ್ಲಿ ಆರೋಗ್ಯ ಸಂಬಂಧಿ ರಹಸ್ಯಗಳು ಅಡಗಿವೆ.
ಜಗದ ಜನರ ಆಕರ್ಷಣೆ ಬಂಗಾರ.
ಹಿಂದಿನ ಕಾಲದಲ್ಲಿ ಬಂಗಾರ ರಾಜರ ಲೋಹ ವಾಗಿತ್ತು. ಇಂದು ಆರ್ಥಿಕ ಸಮಸ್ಯೆಯಿಂದ ದೇಶವನ್ನು ಪಾರುಮಾಡುವ ಲೋಹವಾಗಿದೆ. ವ್ಯಕ್ತಿ ಕುಟುಂಬದ ಸಂಕಟವನ್ನು ನಿವಾರಿಸುವ ಈ ಬಂಗಾರಕ್ಕಾಗಿ ಆದರಾತಿಥ್ಯ, ಆಪದ್ಬಾಂಧವನಂತೆ ಬಂದು ಕಾಪಾಡುವುದೇ ಈ ಬಂಗಾರ. ಹಾಗಾಗಿಯೇ ಇದು ಸದಾ ಅಗ್ರಸ್ಥಾನದಲ್ಲಿದೆ ಅಡಗಿ ಕುಳಿತಿದೆ. ಯಾವ ಲೋಹಕ್ಕೆ ದೊರೆಯದ ಸ್ಥಾನಮಾನ ಈ ಲೋಹಕ್ಕೆ ದೊರೆತಿದೆ. ವಿಶೇಷವಾಗಿ ಇದು ಜಗತ್ತಿನ್ನೇ ಆಳುತ್ತಿದೆ.
ಈ ಚಿನ್ನ ಜಗದ ಜನರನ್ನು ಆಕರ್ಷಿಸಿದ್ದು, ತನ್ನ ಮಾಸದ ಹೊಂಬಣ್ಣದಿಂದ, ತುಕ್ಕು ಹಿಡಿಯದ, ಎಂದು ತನ್ನ ಹೊಳಪು ಕಳೆದುಕೊಳ್ಳದ ಇದರ ಕಾಂತಿಗೆ ಯಾವ ಲೋಹವೂ ಸರಿಸಾಟಿಯಾಗಲಾರದು.
ಚಿನ್ನ ಕೊಳ್ಳುವುದಕ್ಕೆ ಶುಭಗಳಿಗೆ ಇದೆಯೇ?
ಚಿನ್ನ ಕೊಳ್ಳುವುದಕ್ಕೆ ಯಾವುದೇ ಶುಭ ಘಳಿಯೂ ಇಲ್ಲ. ಇಷ್ಟು ಬೆಲೆಯುಳ್ಳ ಬಂಗಾರವನ್ನು ಖರೀದಿಸುವುದಕ್ಕೆ ಇದು ಒಳ್ಳೆಯ ಸಮಯವಾ, ಬೆಲೆಯುಳ್ಳದ್ದಾ,ಎಂದು ಮೀನ ಮೇಷ ಗಳನ್ನು ಲೆಕ್ಕಿಸುವುದೆಂದರೆ,ಅದು ನಿಮ್ಮ ಬೆಲೆಯುಳ್ಳ ಸಮಯವನ್ನು ವ್ಯರ್ಥ ಮಾಡಿಕೊಂಡಂತೆಯೇ ಸರಿ. ಚಿನ್ನ ಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ ಹಾಗೂ ಸರಿಯಾದ ದರ ಏನೂ ಇರುವುದಿಲ್ಲ. ಯಾವಾಗ ಕೊಂಡರೆ ಆಗಲೇ ಸರಿಯಾದ ಸಮಯ. ನೀವು ಎಷ್ಟಕ್ಕೇ ಕೂಂಡರೆ ಅದೇ ಸರಿಯಾದ ದರ. ಈ ಕ್ಷಣದಲ್ಲಿಯೇ ನೀವು ಚಿನ್ನವನ್ನು ಕೊಳ್ಳುವುದಕ್ಕೆ ಚಿನ್ನದ ಅಂಗಡಿಗೆ ಹೋದರು ಅದೇ ಶುಭಘಳಿಗೆ.
ಅಕ್ಷಯ ತೃತೀಯ ದಿನ ಚಿನ್ನಕ್ಕೆ ಬೇಡಿಕೆ ಏಕೆ?
ಭಾರತದಲ್ಲಿ ಹಬ್ಬಗಳ ವಿಶಿಷ್ಟವೇ ಬೇರೆ. ಅದರಲ್ಲೂ ಹಿಂದೆ ಬಂಗಾರದ ಖರೀದಿಗೆ ದೀಪಾವಳಿ ಆಯ್ಕೆ ಮಾಡಿಕೊಳ್ಳುವ ಪರಿಪಾಠ ಉಂಟು. ಉತ್ತರ ಭಾರತದಲ್ಲಿ ಐದು ದಿನಗಳ ದೀಪಾವಳಿಯ ಮೊದಲ ಶುಭ ದಿನವನ್ನು ‘ದಂತೆರಾಸ್ ‘ ಉಸ್ತವ ರೂಪದಲ್ಲಿ ಆಚರಿಸಲಾಗುತ್ತದೆ.ಇದನ್ನು ಧನ್ ತ್ರಯೋದಶಿ ಎಂದು ಕರೆಯುತ್ತಾರೆ. ಈ ಶುಭದಿನ ಚಿನ್ನ ಖರೀದಿಸುವುದು ಸಂಪ್ರದಾಯವಾಗಿ ಬೆಳೆದುಬಂದಿದೆ. ಈಗ ಈ ಪರಂಪರೆಯಲ್ಲಿ ಅಕ್ಷಯ ತೃತೀಯ ಸೇರಿದೆ.ಇತ್ತೀಚಿನ ದಿನಗಳಲ್ಲಿ ವ್ಯಾಪಕ ಆಚರಣೆ ಪಡೆದಿರುವ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಲೇಬೇಕೆಂಬ ನಂಬಿಕೆ ಹೆಚ್ಚಾಗುತ್ತಿದೆ. ಚಿನ್ನವನ್ನು ಕೊಳ್ಳುವ ಹಬ್ಬವಾಗಿ ಮಾರ್ಪಾಡಾಗಿದೆ.

ಅದರಲ್ಲೂ ಅಕ್ಷಯ ತೃತೀಯ ದಿನ ಚಿನ್ನವನ್ನೇಕೆ ಕೊಳ್ಳಬೇಕು? ಈ ದಿನದ ವಿಶೇಷವೇನು?ಈ ಅಕ್ಷಯ ತೃತೀಯದ ಬಗ್ಗೆ ಸ್ಕಂದ ಪುರಾಣ, ಭವಿಷ್ಯ ಪುರಾಣಗಳಲ್ಲಿ ಹೆಚ್ಚಿನ ವಿವರಗಳಿವೆ.
ಅಕ್ಷಯ ತೃತೀಯ ಒಂದು ಶುಭ ಮುಹೂರ್ತ.
ವೈಶಾಖ ಮಾಸದ ಏಪ್ರಿಲ್-ಮೇ ತಿಂಗಳ ಮಧ್ಯದಲ್ಲಿ ಅಕ್ಷಯ ತೃತೀಯ ಬರುವ ದಿನ. ಇದೊಂದು ಗಮನಾರ್ಹವಾದ ಹಬ್ಬ. ವರ್ಷದಲ್ಲಿ ಮೂರೂವರೆ ಮುಹೂರ್ತದ ಪೈಕಿ ಅಕ್ಷಯ ತೃತೀಯ ಒಂದಾಗಿದೆ. ಅವುಗಳೆಂದರೆ ಯುಗಾದಿ, ಅಕ್ಷಯ ತೃತೀಯ, ವಿಜಯದಶಮಿ ಮತ್ತು ದೀಪಾವಳಿ ಅರ್ಧದಿನ. ಅಕ್ಷಯ ತೃತೀಯ ಒಂದು ಶುಭ ಮುಹೂರ್ತವಾಗಿದೆ.
ಅಕ್ಷಯ ಪದವೇ ಬಹು ಅರ್ಥಗರ್ಭಿತ.
‘ಅಕ್ಷಯ’ ಎಂಬ ಪದವೇ ಬಹು ಅರ್ಥಗರ್ಭಿತ ವಾಗಿದೆ. ಯಾವುದು ಕ್ಷಯವಾಗುವುದಿಲ್ಲವೋ ಅದುವೇ ಅಕ್ಷಯ. ಸುಖ,ಸಮೃದ್ಧಿ, ಸಂಪತ್ತು, ಆರೋಗ್ಯಗಳನ್ನು ತನ್ನ ಆರಾಧಕರಿಗೆ ನೀಡುವ ಶ್ರೀ ಮಹಾಲಕ್ಷ್ಮಿ ಅಕ್ಷಯ ತೃತೀಯದ ವ್ರತಾಚರಣೆ ಯಿಂದ ಸುಪ್ರೀತಳಾಗಿ ಸನ್ಮಾರ್ಗದಲ್ಲಿ ನಡೆಯುವವರಿಗೆ ಸದಾ ಶ್ರೀರಕ್ಷೆಯಾಗಿ ಸಲಹುತ್ತಾಳೆ.

‘ದುಡ್ಡಿದ್ದವನೇ ದೊಡ್ಡಪ್ಪ”,’ ಕಾಂಚಣಂ ಕಾರ್ಯಸಿದ್ದಿಂ’, ಹಣದ ಅವಶ್ಯಕತೆ ಎಷ್ಟಿದೆ ಎಂಬುದು ಈ ನಾನ್ನುಡಿಗಳಿಂದ ತಿಳಿಯುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಸಕಲ ಪುರುಷಾರ್ಥಗಳನ್ನೂ ಕರುಣಿಸುವ ಜಗನ್ಮಾತೆ ಶ್ರೀ ಮಹಾಲಕ್ಷ್ಮೀಯೇ ಆಗಿದ್ದಾಳೆ. ಲಕ್ಷ್ಮಿ ಪ್ರಾಪ್ತಿಗೆ ಹಲವು ಪರ್ವ ದಿನಗಳನ್ನು ನಮ್ಮ ಪೂರ್ವಜ ಋಷಿ ಮುನಿಗಳು ಸೂಚಿಸಿದ್ದಾರೆ. ಅದರಲ್ಲಿ ಅಕ್ಷಯ ತೃತೀಯದ ವ್ರತಾಚರಣೆಯು ತನ್ನದೇ ಆದ ವಿಶಿಷ್ಟ ಸ್ಥಾನ ಫಲ ಪ್ರಾಪ್ತಿಯನ್ನು ಹೊಂದಿದೆ. ಮಾನವನ ಇಂತಹ ಲೋಕದ ಭೋಗ-ಮೋಹಗಳಲ್ಲಿ ಸಜ್ಜನರ ಸಜ್ಜನರ ಸಕಲ ಬಯಕೆಗಳನ್ನು ನೀಡುವ ಕಾಮಧೇನು ಕಲ್ಪವೃಕ್ಷದಂತಹ ದಿವ್ಯವ್ರತವೇ ಅಕ್ಷಯ ತದಿಗೆ ವ್ರತ.
ತ್ರೇತ್ರಾಯುಗದ ಆರಂಭ.
ಅಕ್ಷಯ ತೃತೀಯ ತ್ರೇತ್ರಾಯುಗದ ಆರಂಭವನ್ನು ಸೂಚಿಸುತ್ತದೆ. ಈ ದಿನವೇ ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಜನಿಸಿದ್ದು. ಹಿಂದೂ ಪಂಚಾಂಗದಂತೆ ಇದೊಂದು ಶುಭದಿನ. ಹೊಸತನ್ನೇನಾದರೂ ಕೊಳ್ಳಲು, ಆರಂಭಿಸಲು ಈ ದಿನ ಮಂಗಳಕರ. ಇತರರಿಗೆ ಕೊಡುಗೆ,ದಾನ ಮಾಡುವುದು ನಡೆಯುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಈ ದಿನ ಅನುಷ್ಠಾನ ಮಾಡಿದರೆ ವರ್ಷಪೂರ್ತಿ ಕುಟುಂಬದಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬ ಅಚಲ ನಂಬಿಕೆ ಉಂಟು.
ಈ ಹಬ್ಬದ ದಿನದಂದು ಜನರು ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಹಾಗೆ ಪವಿತ್ರವಾದ ತೀರ್ಥಗಳಲ್ಲಿ ಸ್ನಾನ ಮಾಡುವುದರಿಂದ ಪಾಪತ್ವ ಹೋಗಿ ಶುಭವಾಗುವುದು ಎಂಬ ನಂಬಿಕೆ. ಈ ಹಬ್ಬ ಶ್ರೀಕೃಷ್ಣನ ಆರಾಧನೆ ದಿನ.ಅಂದು ಶ್ರೀಕೃಷ್ಣನಿಗೆ ಧೂಪ,ದೀಪ,ಪುಷ್ಪ, ತುಳಸಿ ಹಾಗೂ ಚಂದನ ಲೇಪನದಿಂದ ಅರ್ಚನೆ ಮಾಡುವ ವಿಶೇಷ ದಿನವಿದು. ಇದು ಶ್ರೇಯಸ್ಕರ ಎಂದು ನಂಬುತ್ತಾರೆ. ವೈಷ್ಣವರಿಗೆ ಇದು ಹೆಚ್ಚಿನ ಪೂಜಾ ವಿಶೇಷ ದಿನ. ಅಲ್ಲದೆ ಮುಕ್ತಿ ದ್ವಾರವನ್ನು ತೆರೆಯುವುದು ಇದೇ ದಿನ.
ಪಿತೃ ಪೂಜೆಗೂ ಅಕ್ಷಯ ತೃತೀಯ ಪ್ರಶಸ್ತವಾದ ಕಾಲ.ಈ ದಿನ ಪಿತೃಗಳಿಗೆ ತರ್ಪಣ ಕೊಟ್ಟು, ಪಿಂಡಪ್ರದಾನ ಮಾಡುವುದು ಈ ಸಂದರ್ಭದಲ್ಲಿಯೇ ಇದರಿಂದ ಎಲ್ಲಾ ಪಿತೃಗಳಿಗೂ ಮೋಕ್ಷ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ತಂಪಾದ ಪಾನೀಯಗಳನ್ನು ಹಂಚುವುದು ದವಸ ಧಾನ್ಯಗಳನ್ನ ದಾನ ಮಾಡುವುದು ಇವೆಲ್ಲವು ಮುಖ್ಯವಾಗಿರುತ್ತದೆ.
ದಾನದಿಂದ ಅಕ್ಷಯ ಫಲಪ್ರದ.
ದಾನ ಧರ್ಮಗಳಿಂದ ಅಕ್ಷಯ ಫಲಪ್ರದವಾಗುತ್ತದೆ. ಅಂದು ಯಾವುದನ್ನು ಕೊಂಡರೂ ಅಕ್ಷಯಗೊಂಡು ಸಮೃದ್ಧಿಯಾಗುತ್ತದೆ ಅದರಲ್ಲೂ ವಿಶೇಷವಾಗಿ ಚಿನ್ನವನ್ನು ಕೊಂಡರೆ ಆರ್ಥಿಕ ಸಮೃದ್ಧಿ ಉಂಟಾಗುತ್ತದೆಂಬ ನಂಬಿಕೆ ಯಿದೆ. ಅಕ್ಷಯ ತ್ರೇತ್ರಾಯುಗ ಪ್ರಾರಂಭವಾದ ದಿನ. ಬ್ರಹ್ಮದೇವನು ಮನುಷ್ಯನರಿಗೆ ಧಾರ್ಮಿಕವಾದ ನೀತಿ ನಿಯಮಗಳನ್ನು ರೂಪಿಸಿದ ದಿನ. ಪರಶುರಾಮನು ಅವತರಿಸಿದ ದಿನ,ಅಲ್ಲದೆ ಸೀತಾಮಾತೆಯ ಲಂಕೆಯಲ್ಲಿ ನಡೆದ ಅಗ್ನಿ ಪರೀಕ್ಷೆಯಲ್ಲಿ ಜಯಿಸಿದ ದಿನ. ಮಹಾಭಾರತದ ಕಥೆಯಂತೆ ಸೂರ್ಯದೇವನು ಯುದಿಷ್ಟರನಿಗೆ ಅಕ್ಷಯ ಪಾತ್ರೆ ಕೊಟ್ಟ ದಿನ.ಆಹಾರ ಸಮೃದ್ಧಿಗಾಗಿ ಅನ್ನಪೂರ್ಣೇಶ್ವರಿಯ ಪೂಜೆಯನ್ನು ಈ ದಿನ ಮಾಡುವರು.ಅಭಿವೃದ್ಧಿ ಹೊಂದಲು ಸ್ವಲ್ಪ ಪ್ರಮಾಣದಲ್ಲಾದರೂ ಬಂಗಾರವನ್ನು ಇಂದಿನ ದಿನ ಕೊಂಡುಕೊಳ್ಳುವರು.ಬಸವ ಜಯಂತಿಯನ್ನಾಗಿಯೂ ಆಚರಿಸುವರು.ಹಾಗೆ ಜೈನಧರ್ಮದಲ್ಲಿ ಆದಿ ತೀರ್ಥಂಕರನಾದ ವೃಷಭನಾಥ ತಪಸ್ವಿಯಾಗಿದ್ದ ಸಮಯದಲ್ಲಿ ಆಹಾರ ಪಡೆದ ನಿಮಿತ್ತದ ಪರ್ವದಿನ. ಮಹಾರಾಜ ಶ್ರೇಯಂಸ್ ತನ್ನ ಅಣ್ಣನೊಡನೆ ಬಂದು ವೃಷಭನಿಗೆ ಕಬ್ಬಿನ ಹಾಲಿನ ರೂಪದಲ್ಲಿ ಆಹಾರವನ್ನು ಕೊಟ್ಟನೆಂಬ ಕಾರಣದಿಂದ ಅವನ ದೇಶದಲ್ಲಿ ಆಹಾರ ಅಕ್ಷಯವಾಯಿತೆಂದು ಪ್ರತೀತಿ. ಇವೇ ಮುಂತಾದ ಕಾರಣಗಳಿಂದಾಗಿ ವೈಶಾಖ ಮಾಸದ ಮಾರನೇ ದಿನ ಆಚರಿಸುವ ಈ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಈ ಶುಭದಿನವನ್ನು ನೇಮ ನಿಷ್ಠೆಗಳಿಂದ ಆಚರಿಸುವ ಸ್ತ್ರೀ ಪುರುಷರು ತಮ್ಮ ಕುಟುಂಬದಲ್ಲಿ ಹೆಚ್ಚು ಸುಖ,ಶಾಂತಿ,ಸಂತೋಷ, ನೆಮ್ಮದಿಗಳನ್ನು ಕಾಣುತ್ತಾರೆ ಎಂದು ಪುರಾಣದಲ್ಲಿ ಹೇಳಿದೆ.
ಚೈತ್ರಮಾಸದಲ್ಲಿ ಗೌರಿ ಪೂಜೆಯನ್ನು ಮಾಡಿದ ಹೆಂಗಸರು ಈ ದಿನ ಪೂರ್ಣಗೊಳಿಸುತ್ತಾರೆ.ಅಕ್ಷಯ ತೃತೀಯ ಎಂಬ ಈ ದಿನವನ್ನು ಅಕ್ಷಯ ತದಿಗೆ, ಗೌರಿ ವ್ರತಎಂಬ ಹೆಸರುಗಳಿಂದಲೂ ಕರೆಯುತ್ತಾರೆ.
ಬೆಳೆಯು ಸಮೃದ್ಧಿಯಾಗುತ್ತದೆ.
ಈ ಅಕ್ಷಯ ತೃತೀಯ ಶುಭದಿನದಂದು ರೈತರು ಬಿತ್ತನೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬ ನಂಬಿಕೆ ಇದೆ. ಮತ್ತು ಬೆಳೆಯುವ ಧಾನ್ಯಗಳನ್ನು ದಾನ ಕೊಡುವುದು ವಾಡಿಕೆ. ಇದು ಸಮೃದ್ಧಿಗೆ ಕಾರಣವಾಗಿದೆ.
ಸುವರ್ಣ ದಾನ ಶ್ರೇಷ್ಠ.
ದಾನಗಳಲ್ಲಿ ಶ್ರೇಷ್ಠ ವಾದುದು ಅನ್ನದಾನವೆಂದು ಹೇಳುತ್ತಾರೆ. ಹಾಗೆ ವಿದ್ಯಾ ದಾನವು ಶ್ರೇಷ್ಠವಾದದ್ದು ಎಂದು ಸಹ ಹೇಳುತ್ತಾರೆ. ಹಾಗೆ
ಸುವರ್ಣದಾನವೂ ಅತ್ಯಂತ ಶ್ರೇಷ್ಠ ದಾನ. ಹಿರಣ್ಯದಾನವೆಂದೂ ಇದನ್ನು ವರ್ಣಿಸುತ್ತಾರೆ. ಈ ಚಿನ್ನವನ್ನು ದಾನ ಮಾಡುವುದರಿಂದ ದೀರ್ಘಾಯುಷ್ಯ ಉಂಟಾಗುತ್ತದೆ ಎಂದು ಮನಸ್ಥಿತಿಯಲ್ಲಿ ಹೇಳುತ್ತದೆ.
“ಭೂಮಿದೋ ಭೂಮಿಮೊಪ್ನೋತಿ ದೀರ್ಘ ಮಯುರಿಹಿರಣ್ಯದ ಗೃಹದ್ರೋಗ್ರಾಣಿ ವೇಶ್ಮಾನಿ ರೂಪ್ಯದೋ ರೂಪ ಮುತ್ತಮಮೂ”ಎಂದು ಮನುವು ಹೇಳುತ್ತಾನೆ.
ಭೂಮಿನ ದಾನಮಾಡಿದರೆ ಭೂಮಿ, ಗೃಹವನ್ನು ದಾನಮಾಡಿದರೆ ಒಳ್ಳೆಯ ಮನೆ, ಬೆಳ್ಳಿಯನ್ನು ದಾನ ಮಾಡಿದರೆ ಒಳ್ಳೆಯ ರೂಪ, ಚಿನ್ನವನ್ನು ದಾನಮಾಡಿದರೆ ದೀರ್ಘಾಯುಷ್ಯ ಉಂಟಾಗುತ್ತದೆಂದು ಈ ಶ್ಲೋಕದ ಅರ್ಥ. ಹೀಗೆ ಕೊಡುವ ದಾನ ನಮ್ಮಲ್ಲಿಗೆ ಅಕ್ಷಯವಾಗಿ ಬರುತ್ತದೆ ಎಂಬುದು ಇಲ್ಲಿರುವ ನಂಬಿಕೆ.
ಹಾಗೆ ಈ ಶುಭದಿನದಂದು ಮನೆಗೆ ಹೊಸ ಪದಾರ್ಥಗಳನ್ನು, ಧಾನ್ಯಗಳನ್ನು ಅದರಲ್ಲೂ ಚಿನ್ನ ಅಥವಾ ಚಿನ್ನದ ಒಡವೆಗಳನ್ನು ಖರೀದಿಸಿ ತಂದರೆ ಮನೆಯಲ್ಲಿ ಸಿರಿ,ಸಂಪತ್ತಿಗೆ ಕೊರತೆ ಇರುವುದಿಲ್ಲ ವೆಂಬುದು ಜನರ ನಂಬಿಕೆ. ಏನೇ ಆಗಲಿ ಈ ದಿನ ಏನೇ ವಸ್ತು ತೆಗೆದುಕೊಂಡರೂ ಅಕ್ಷಯವಾಗುತ್ತದೆ ಎಂಬುದು ಅವರವರ ನಂಬಿಕೆಗೆ ಸಂಬಂಧಿಸಿದ್ದು. ಹಾಗಾಗಿ ಅಕ್ಷಯ ತೃತೀಯ ಶುಭಮಂಗಳ, ಮೋಕ್ಷದಾಯಕ, ಸಮೃದ್ಧಿ ಅಕ್ಷಯಗಳ ಪ್ರತೀಕವಾಗಿ ಉಳಿದುಬಂದಿದೆ.