ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಂಗಮಕಳಿವಿಲ್ಲ, ಸ್ಥಾವರಕೆ?.. ಸಾಹಿತ್ಯವೇ ಎಲ್ಲಾ! ಚೊಕ್ಕಾಡಿ ೮೦ ರ ಸಂದರ್ಭದಲ್ಲಿ ಶ್ರೀ ತಲಗೇರಿಯವರು ಬರೆದ ನುಡಿ ನಮನ...
ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಜಂಗಮಕಳಿವಿಲ್ಲ, ಸ್ಥಾವರಕೆ?.. ಸಾಹಿತ್ಯವೇ ಎಲ್ಲಾ!

‘ಅಜ್ಞಾತ ಪರ್ವ’ ಬಹುಶಃ ನಮ್ಮ ಈ‌ ಹೊಸ ತಲೆಮಾರು ಕೇಳಿರದ ಒಂದು ಪತ್ರಿಕೆಯ ಹೆಸರು ಇದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೈ ಬರಹದ ಮೂಲಕವೇ ಪ್ರಕಟವಾಗುತ್ತಿದ್ದಂಥ ಪತ್ರಿಕೆ ಇದಾಗಿತ್ತು. ಅದು ಬಿಡಿ! ವಿಷಯ ಅದಲ್ಲ, ಅದನ್ನ ಹೊರಡಿಸುತ್ತಿದ್ದವರು ಯಾರಾಗಿದ್ದರು? ಸುಳ್ಯ ಎನ್ನುವ ತಾಲೂಕಿನ ಒಂದು ಹಳ್ಳಿಯಲ್ಲಿ‌!

ವಾಗರ್ಥ ಎಂಬ ಕಾಳಿದಾಸನ ಪದದ ಆಧಾರದ ಮೇಲೆಯೇ ನಿಂತ ಹಾಡೊಂದಿದೆ, ಅದು ಪತಿಪತ್ನಿಯರ ಅರ್ಥಗರ್ಭಿತ ಸಮಾಗಮದ ಕುರಿತಾಗಿ ವಾಕ್ ಮತ್ತು ಅರ್ಥ ಎಂಬ ಪದಗಳನ್ನ ಬಳಸಿಕೊಂಡು ಹೇಳಿರುವಂಥದ್ದು. ಇಂಥದ್ದೊಂದು ಹಾಡನ್ನು ಬರೆದವರು ಯಾರು?

ರಾತ್ರಿಯ ಒಂದು ನಿದ್ರೆಯಲ್ಲಿ ಥಟ್ಟನೆ ಎಚ್ಚರಾದರೆ ಏನು ಶಬ್ದ ಕೇಳಬಹುದು? ನಮಗೆಲ್ಲಾ ಕೇಳುವುದು ಬೆಕ್ಕೋ ಇಲಿಯೋ ಇಲ್ಲಾ ಜಿರಲೆಯೇ ಪಾತ್ರೆಯ ಜೊತೆ ಮಾಡುವ ಶಬ್ದ, ಇನ್ನು ಹಳ್ಳಿಯ ಕಡೆಗಾದರೆ ಕಾಡು ಜಿರಳೆ ಕಿರ್ರ್ ಅಂತ ಕೂಗುವ ಶಬ್ದ, ಇನ್ನು ಮೂರ್ನಾಲ್ಕು ನಾಯಿಗಳು ಸೇರಿ ಮಧ್ಯರಾತ್ರಿಯ ತುರ್ತು ಸಭೆ ನಡೆಸುವ ಶಬ್ದ. ಆದರೆ, ಇಲ್ಲಿ ನಡುರಾತ್ರಿಯಲ್ಲಿ ಥಟ್ಟನೆ ಎಚ್ಚರಾದವರೊಬ್ಬರಿಗೆ ಮಲ್ಲಿಗೆಯ ಮೊಗ್ಗರಳಿ ಬೆಳದಿಂಗಳನ್ನ ಹೀರಿ ಬೆಳ್ಳಗಾಗುವ ಸದ್ದು ಕೇಳಿತ್ತಂತೆ. ಅದು ಯಾರಿಗಿರಬಹುದು?

ಒಮ್ಮೆ ಕಾಮಾಕ್ಷಿಗೂ ಇವರಿಗೂ ನಡುವೆ ಇರುವ ಕಂದರವನ್ನ ತುಂಬಬೇಕಾಗಿತ್ತಂತೆ. ಮೌನವನ್ನ ಆತು ಕೂತರಂತೆ ತುಂಬಬಹುದೇ ಮಾತು ಎಂದು. ಪೆದ್ದ ಅಂದರಂತೆ ಜನ. ಬಿಡುವೇ ಕೊಡದ ಮಾತಾಗಿ, ನಗೆಯ ಗುಲ್ಲೆಬ್ಬಿಸಿ ಬೇಕೆಂದೇ ಚಟ.. ಚಟ.. ಚಟಾಕಿಯಾದರೂ ಕೊನೆಗೆ ಸೋತ ಪ್ರಯತ್ನದಲ್ಲಿ ಏನಾಗಿದೆ ಇವನಿಗೆ ಅಂದರಂತೆ ಅದೇ ಜನ. ತಿರುಗುಪ್ಪಿಯಾದವನು ಹತಪ್ರಭನಾಗಿದ್ದು ಹೇಗೆ? ಅದೂ, ದೀಪ‌ ಆರಿದ ಮೇಲೆ! ಅಷ್ಟಕ್ಕೂ ಇದು ಯಾರ ಬಗ್ಗೆ?

ಸ್ಪರ್ಶಕ್ಕೆ ಕಾಯುತ್ತಾ ಕಂಪಿಸುವವರಿದ್ದಾರೆ ಇಲ್ಲಿ, ಇದು ಜಗತ್ತು ಕಣೇ, ಇದು ಸಮಾಜ ಕಣೇ ಅನ್ನುತ್ತಾ ವಿಶಾಲಿಯ ಹತ್ತಿರ ನನ್ನಷ್ಟಕ್ಕೇ ಬಿಡುತ್ತೀಯಾ ಅಥವಾ ನನ್ನನ್ನೂ ನಿನ್ನಂತೇ ಮಾಡಿಕೊಳ್ಳುತ್ತೀಯಾ ಅಂತ ಕೇಳಿದವರೂ ಇದ್ದಾರೆ ಇಲ್ಲಿ. ನಮ್ಮ ಕಾಂಪೌಂಡಿನ ಹೃದಯ ಸ್ಥಾನದಲ್ಲಿರುವ ಆ ಪುಟ್ಟ ಮನೆಗೆ ಯಾರೋ ವಾಸಕ್ಕೆ ಬಂದರೆಂದು ಪರಿಚಯ ಮಾಡಿಕೊಳ್ಳಲಿಕ್ಕೆ ಹೋಗಿ ಅವರಿಗೆ ಅವರೇ ಮುಖಾಮುಖಿಯಾಗಿ ನಾನು ಯಾರು ಅಂತ ಪ್ರಶ್ನಿಸಿದವರೂ ಇದ್ದಾರೆ ಇಲ್ಲಿ. ಒಳ ಬನ್ನಿ, ನೇರ ಮಾತಾಡೋಣ, ಕಳಚಿ ಎಲ್ಲ ವೇಷಗಳ ಅನ್ನುತ್ತಾ ಪ್ರಸ್ತುತಕ್ಕೆ ಹೇಗೆ ಸ್ಪಂದಿಸಬಹುದು ನಿಮಗೆ ಬದುಕಬೇಕೆಂದಿರುವಾಗ ಅಥವಾ ನನಗೆ ಬದುಕಬೇಕಾಗಿರುವಾಗ ಅಂದವರೂ ಇದ್ದಾರೆ ಇಲ್ಲಿ. ಅರೇ , ಯಾರ್ರೀ ಅದು!

ರಂಗದ ಮೇಲೆ ಬರದ ಪಾತ್ರವೊಂದು ಕವಿತೆಯಲ್ಲಿ ಬಂದುಹೋಗುತ್ತದೆ. ಗೋಡೋ ಮೊನ್ನೆ ಬಂದು ಹೋದ ಅಂತ ಸುದ್ದಿ , ಈ ಗೋಡೋ ಯಾರು, ಅವನ್ಯಾಕೆ ಬರಬೇಕು? ಅವ ಬಂದು ಹೋದರೆ ನಮಗೇನಾಗಬೇಕು? ಈಗ ಈ ಪ್ರಶ್ನೆಗಳು ನಮಗ್ಯಾಕೆ! ಗೋಡೋ ಬರುವುದಕ್ಕಿಂತ ಮುಂಚೆ ಹೇಗಿತ್ತು, ಬಂದು ಹೋದ ಮೇಲೆ ಏನಾಯಿತು ಅನ್ನುವುದಷ್ಟೇ ನಮ್ಮ ಗಮನಕ್ಕೆ ಇರಲಿ ಅಂದಿದ್ದರು ಇವರು. ಸಂಘ ಜೀವಿ ಮನುಷ್ಯ ಪ್ರತಿ ನಿತ್ಯವೂ ಯಾವುದೋ ಒಂದಕ್ಕಾಗಿ ತೀವ್ರವಾಗಿ ಕಾಯುತ್ತಿರುತ್ತಾನೆ. ಆಗ ಆ ಕಾಯುವಿಕೆಯಲ್ಲಿ ಬರೀ ಅವನೊಬ್ಬನೇ ಇರುವುದಿಲ್ಲ ತನ್ನವರನ್ನೂ ಒಳಗೇ ಇಟ್ಟುಕೊಂಡಿರುತ್ತಾನೆ. ಯಾರೋ ಬರುತ್ತಾರೆ ಎಂದು ಕಾಯುವಿಕೆಯ ಪ್ರಕ್ರಿಯೆಯಲ್ಲಿ ಮನುಷ್ಯ ಸಂಬಂಧಗಳು ಹೇಗೆಲ್ಲಾ ಬೆಸೆದುಕೊಳ್ಳುತ್ತವೆ, ಅದೊಂದು ವೃತ್ತ ಹೇಗೆ ರೂಪುಗೊಳ್ಳುತ್ತದೆ, ಕೆಲವೊಮ್ಮೆ ಸುಲಭವಾಗಿ ದಕ್ಕುವುದರ ಮೇಲೆ ಅಷ್ಟು ಬೇಗ ನಂಬಿಕೆ ಹುಟ್ಟುವುದಿಲ್ಲ. ಅಥವಾ, ಮೈಮರೆವಿನಲ್ಲಿ ಘಟಿಸಿದ್ದು ಅವಗಾಹನೆಗೆ ಬರುವುದೂ ಇಲ್ಲ. ಮುಂದಿನದೆಲ್ಲಾ ಊಹೆಗಳ ಕಾರುಬಾರು. ಮತ್ತೆ ಯಥಾಸ್ಥಿತಿಯಲ್ಲಿ ಜಗತ್ತು ಮುಂದುವರೆಯುತ್ತದೆ. ಮತ್ತೆ ಇನ್ನೊಂದಿಷ್ಟು ಜನ ಯಾವುದಕ್ಕೋ ಕಾಯುತ್ತಾರೆ, ಹತಾಶರಾಗುತ್ತಾರೆ, ಆಸೆಗಣ್ಣಾಗುತ್ತಾರೆ, ಮತ್ತೆ ಗಾಳಿಸುದ್ದಿಗಳಿಗೆ, ತಮ್ಮದೇ ನಂಬಿಕೆಗಳಿಗೆ ಸಿಲುಕಿಕೊಳ್ಳುತ್ತಾರೆ ಅಂತ ತಮ್ಮ ಕವಿತೆಯಲ್ಲಿ ಒಬ್ಬರು ಎಲ್ಲಿಯೂ ಬರದ ಗೋಡೋ ಇಲ್ಲಿ ಬಂದಿರಬಹುದು ಅಂತ ಗುಮಾನಿ ಹುಟ್ಟಿಸಿದ್ದರು. ಇದು ಅಸಂಗತವೆಂದರು ಕೂಡಾ. ಯಾರಿರಬಹುದು?

ಬೇರೆ ಬೇರೆ ಅವತಾರಗಳಲ್ಲಿ ಸಮಯ ಕಳೆಯಲೆಂದು ಬಂದವರು ಕಳೆಯುತ್ತಾ ಹೋದಂತೆ ಕಳೆಯಲೇ ಉಳಿಯದೇ ನಿಂತು ಹೋದಂತಾದಾಗ ರಸ ಸ್ಥಿತಿಗಳು ಬದಲಾಗಿ, ಬೇರೆ ಬೇರೆಯಾಗಿಯೂ ಒಂದಾಗಿ ನಿಂತರು. ಆದರೆ, ಅದೇ ಚಟವಾಗಿ ಬೇಜಾರಾಗಿ, ಯಾವುದನೂ ಲೆಕ್ಕಿಸದೇ ಹೊರಟು ಹೋದರು ಬಾಗಿಲು ತೆರೆದು. ಹೋದವರು ಯಾರು, ಇಲ್ಲಿ ಚೆಲ್ಲಾಪಿಲ್ಲಿಯಾದ ರಾಜ, ರಾಣಿ, ಕೋಟು ಪ್ಯಾಂಟು ಸ್ಕರ್ಟು ಅನಾಥ ಶವಗಳಾಗಿ ಅಲಕ್ಷಿಸಲ್ಪಟ್ಟವಲ್ಲಾ ಅಂತ ನೊಂದುಕೊಂಡವರು ಇದ್ದಾರೆ.
ಆದರೆ, ಈ ನಿರ್ಜೀವಗಳೆಲ್ಲಾ ಮತ್ತೆ ಜೀವದ ಬೆನ್ನು ಹತ್ತಿದವು. ಶವಾಸನದಲಿ ನಿದ್ರೆಗೆ ಸಂದ ಆಕೃತಿಗಳ ಪ್ರತಿಕ್ರಿಯೆಗೆ ಕಾಯುತ್ತಾ ಕಾಯುತ್ತಾ ಪಯಣಕ್ಕೆ ತಯಾರಾಗಿ ನಿಂತವು ಎಲ್ಲ‌ ಸಂಬಂಧಗಳನ್ನು ಮರೆತು ಅಪರಿಚಿತರಾಗಿ. ಅವರವರಿಗೆ ಅವರವರದೇ ಸಾವಿನ ದಾರಿ ಅಂತ ಹೇಳಿದವರು ಬೇರೆ ಯಾರೂ ಅಲ್ಲ, ಅವರೇ ಇವರು!

ಬೊಮ್ಮನಹಳ್ಳಿಯಲ್ಲಿ ಇಲಿಗಳಿಲ್ಲ, ಕುಂಟರಿಲ್ಲ, ಪುಟ್ಟ ಮಕ್ಕಳಿಲ್ಲ, ಹಾಗೇ ಕಿಂದರಿ ಜೋಗಿಯೂ ಇಲ್ಲ ಅನ್ನುತ್ತಾ ಬದಲಾಗುವ ಕಾಲಘಟ್ಟದ ಹಾಗೂ ನಗರೀಕರಣದ ಹೊಳಹುಗಳನ್ನ ಹೇಳಿದವರು ಅವರಲ್ಲದೇ ಇನ್ನ್ಯಾರೂ ಅಲ್ಲ.

ಗಾಳಿ, ಮರ, ಎಲೆ, ಬಲೆ, ಹೂವು, ಹಕ್ಕಿ, ಹಾಡು, ಮನಸು, ಕನಸು, ನೌಕೆ‌ ಇವಿಷ್ಟರಲ್ಲೇ ಅಖಂಡ ಜೀವರಾಶಿಯ ಉಗಮ ಮತ್ತು ಜೀವ ಸಂಕುಲದ ಚಕ್ರದ ಸಮಗ್ರ ಚಿತ್ರಣವನ್ನ ಹೇಳಬಹುದು, ಮೌನದ‌ ಭಾಷೆ ಅದು ಸೃಷ್ಟಿಯ ಭಾಷೆ ಅನ್ನುತ್ತಾ ನಮ್ಮ ಸಾಹಿತ್ಯ ಜಗತ್ತಿನಲ್ಲಿ ಕಣಸು ಫಲಿಸಿದಂತೆ ಒಂದು ಮರವಾದವರು, ಅದೇ ಚೊಕ್ಕಾಡಿಯನ್ನ ಸಾಹಿತ್ಯಕ್ಕೆ ಸೇರಿಸಿದವರು, ಇನ್ನೆಂದೂ ಬಾರದ ದಿನಗಳಿಗಾಗಿ ಹಂಬಲಿಸಿದವರು, ಹಳ್ಳಿಯಲ್ಲೇ‌ ಇದ್ದು ನಗರದ ಲಿಪ್‍ಸ್ಟಿಕ್ ಸುಂದರಿಯರ ಕುರಿತ‌ ಸಂವೇದನೆಗಳನ್ನ ಸಮರ್ಥವಾಗಿ ಹಿಡಿದಿಟ್ಟಂಥವರು, ಸ್ಥಾವರವಾಗಿಯೇ ಬೇರು ಟೊಂಗೆಗಳ ಮೂಲಕ ತಮ್ಮ ಚಲನಶೀಲತೆಯ ಉಳಿಸಿಕೊಂಡವರು ನಮ್ಮ ಶ್ರೀ ಸುಬ್ರಾಯ ಚೊಕ್ಕಾಡಿ ಸರ್ರು…

ಇವಿಷ್ಟು ಅವರ ಗಂಭೀರ ಸಾಹಿತ್ಯದ ಮುಖಗಳಾದ್ರೆ, ಅವರ ಹಸನ್ಮುಖದ ಮತ್ತು ಜೀವನೋತ್ಸಾಹದ ಹಾಗೂ ಮಾಗಿದ ತಿಳಿಹಾಸ್ಯದ ಇನ್ನೊಂದು ಮುಖದ ಕುರಿತು ಹೇಳದಿದ್ದರೆ ಶಿಷ್ಯ ಸರಿಯಾಗಿ‌ ಗುರುವಂದನೆ ಸಲ್ಲಿಸದೇ ಇದ್ದಂತಾಗುತ್ತದೆ!

ಒಮ್ಮೆ ಮಾತುಕತೆ ನಡೆಯುತ್ತಿದ್ದಾಗ, ಒಮ್ಮೆ ಹುಡುಗಿ ನೋಡೋದಕ್ಕೆ ನಾನು ಹೋದರೆ ನನ್ನ ಜೊತೆ ಚೊಕ್ಕಾಡಿ‌ ಸರ್ ಕೂಡಾ ಇದ್ದರೆ, ಒಂದು ವೇಳೆ ನನಗೆ ಹುಡುಗಿ ಇಷ್ಟ ಆಗಿ, ಅವಳು ಕೆಂಪಕೆಂಪಗೆ ಚೆನ್ನಾಗಿದ್ದಾಳೆ ಅನ್ನುವುದನ್ನ ನಾನು ಅವರಿಗೆ ಹೇಳಬೇಕು, ಅದನ್ನ ಹೇಗೆ ಹೇಳಬೇಕು? ಅನ್ನೋದನ್ನ ಚೊಕ್ಕಾಡಿ ಸರ್ ಹೀಗೆ ಹೇಳ್ತಾರೆ
“ಆಹ್ಞಾ, ಚಹಾ‌ ಕೆಂಪ ಕೆಂಪಗೆ ತುಂಬಾ ಚೆನ್ನಾಗಿದೆ! “

ಒಂದು ವೇಳೆ ಇಷ್ಟ ಆಗದೇ ಇದ್ದಲ್ಲಿ ಅದನ್ನ ಹೇಗೆ ಹೇಳಬಹುದು?

“ಸಕ್ಕರೆ ಹಾಕಿಲ್ಲವೇನೋ, ಕಹಿಯಾಗಿದೆ!”

ಇವು ಬರೀ ತಿಳಿ ಹಾಸ್ಯಗಳಷ್ಟೇ ಅಂದುಕೊಂಡರೆ ನಮ್ಮ ಬುದ್ಧಿಮಟ್ಟ ಅಷ್ಟಕ್ಕೇ ಸೀಮಿತವಾಗುತ್ತದೆ.

ಈ ಎರಡು ಸಾಲುಗಳು ಸೂಚ್ಯ, ವಾಚ್ಯ ಮತ್ತು ಅವಾಚ್ಯದ ಪಾಠದ ಸರಳ ವಿವರಣೆ!

ಇಷ್ಟು ಸರಳ ನಮ್ಮ ಮೇಷ್ಟ್ರು.

ಅದೆಷ್ಟೇ ಕಿರಿಯರಿದ್ದರೂ ಅವರನ್ನೂ ಬಹುವಚನದಿಂದಲೇ ಸಂಬೋಧಿಸುತ್ತಾರೆ. ಅವರ ಅನುಭವದಷ್ಟೂ ವಯಸ್ಸಾಗಿರದ‌ ನನ್ನಂಥವನೊಟ್ಟಿಗೂ ಇಷ್ಟು ಸಲೀಸಾಗಿ ಬೆರೆಯುವುದಕ್ಕೆ ಹೇಗೆ ಸಾಧ್ಯ ಅಂತ ನೋಡುವುದಾದರೆ ಅದಕ್ಕೆ ಉತ್ತರ ಅವರ ವಿನಯ ಮತ್ತು ವಿನಯ ಮಾತ್ರ. ಮನುಷ್ಯ ಸಂಬಂಧಗಳನ್ನ ಅತೀವವಾಗಿ ಗೌರವಿಸುವ ಹಾಗೂ ಅದನ್ನ ಕಾಪಾಡಿಕೊಳ್ಳಲು ಯಾವತ್ತೂ ಹಂಬಲಿಸುವ ಹಿರಿಯ ಸಾಹಿತಿಗಳ ಜನುಮದಿನ ಇಂದು.

ಸಂತೆಮನೆಯ ಇನ್ನೊಂದು ಬೆಳಗಿನಲಿ ಮೊನ್ನೆ‌‌ ಸಿಕ್ಕವರು ಬೆಟ್ಟವೇರಿದ‌ ಮೇಲೆ‌ ನೂಪುರದ ಮಾಗಿಯ ಕೋಗಿಲೆ‌ ತೆರೆತೆರೆಯಾಗಿ ಹಾಡಿರಲು ಬಂಗಾರದ ಹಕ್ಕಿ ಹಾರಿತು ಒಳಹೊರಗು. ಹೀಗೆ ಕಂಡ ಹಾಡಿನ ಲೋಕದಲ್ಲಿ ನಿಮ್ಮವೂ ಇರಬಹುದು. ಇದರಲ್ಲಿ ಅದು ಇತರರಲ್ಲಿ ಬೆರೆಯಬಹುದು. ಚೂರು ಆಳಕ್ಕಿಳಿದರೆ, ಒಂದು ಹುಣ್ಣಿಮೆ ಸಂಜೆ ಸಿರಿಗನ್ನಡ ದೀಪ ಭಾವ ಚಿತ್ತಾರವ ಬಿಡಿಸಿರಲು ನಿನ್ನ ಬಾಂದಳದಂತೆ, ಬೆಣ್ಣೆ ಕದ್ದ ನಮ್ಮ ಕೃಷ್ಣನ ಮಾನಸ ಮಿಲನದ ಅನುರಾಗದ ಸಲ್ಲಾಪ ಅದೇ ಚೊಕ್ಕಾಡಿಯ ವನಸಿರಿಯಲ್ಲಿ. ಈಗ ಮತ್ತೆ ಆ ಮರದ‌ ನೆರಳ ಕೆಳಗೆ ಎಲ್ಲರೂ ಕೂತು, ಹಕ್ಕಿಯ ಹಾಡಿನ ಜೊತೆಗೆ, ಹೂವಿನ ಕೊರಳಿನ ಒಟ್ಟಿಗೆ ಪ್ರೀತಿಯಿಂದ ಹೇಳುತಿಹೆವು, “ಜನುಮದಿನದ ಹಾರ್ದಿಕ ಹಾರ್ದಿಕ ಶುಭಾಶಯಗಳು”