ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಲಕ್ಷ್ಮೀ
ಇತ್ತೀಚಿನ ಬರಹಗಳು: ಶ್ರೀಲಕ್ಷ್ಮೀ (ಎಲ್ಲವನ್ನು ಓದಿ)

ಹೀಗೊಂದು ಕನಸು ಬೀಳದೆ ವರುಷಗಳೇ ಕಳೆದವೋ ಏನೋ.. ಜವಾಬ್ದಾರಿಗಳ ಭಾರಗಳು ಒಂದೊಂದಾಗಿ ಹೆಗಲೇರುತ್ತಿದ್ದಂತೇ, ಕನಸುಗಳು ಸದ್ದಿಲ್ಲದೇ ಒಂದೊಂದಾಗಿ ಕೊಂಡಿ ಕಳಚಿದ್ದವು. ವಾಸ್ತವದ ಕಠಿಣತೆಯ ಎದುರು ನಿಲ್ಲಲು ಬೆದರಿದವೋ ಏನೋ ಎಂಬಂತೆ.

ಇವತ್ತು ಮಧ್ಯಾಹ್ನ ಊಟ ಮಾಡಿದ ಮೇಲೆ ಸ್ವಲ್ಪ ಬಿಡುವಿತ್ತು. ಮಕ್ಕಳೂ ಬೇಗ ಮಲಗಿ.. ಹಾಯ್..ಅನ್ನಿಸಿತ್ತು.. ಮನೆಯ ಒಳಗಡೆ ಮಲಗಲು ಮನಸ್ಸು ಉದಾಸೀನದ ಮುಷ್ಕರ ಹೂಡಿತ್ತು. ಹೊರ ಜಗಲಿಯ ಬೆಂಚಿನ ಮೇಲೆ ಹಾಗೇ ಸುಮ್ಮನೆ ಮಲಗಿದಂತೆ ಒರಗಿದ್ದೆ. ಸುಮ್ಮನೆ ಮೊಬೈಲ್ ಮೇಲೆ ಕಣ್ಣಾಡಿಸುತ್ತಾ, ಮರ ಹಕ್ಕಿ ಆಗಸ ಮೋಡ ಎಂದೆಲ್ಲಾ ನೋಡ್ತಾ ಇದ್ದೆ. ಯಾವಾಗ  ಜೊಂಪು ಹತ್ತಿತೋ, ಯಾವಾಗ ಮೊಬೈಲ್ ಕೈಯಿಂದ ಜಾರಿತೋ ತಿಳಿಯಲೇ ಇಲ್ಲ.

ಕಣ್ಣು ಬಿಟ್ಟರೆ ಸುತ್ತಲೂ ಬೇರೆಯೇ ಲೋಕ. ಒಮ್ಮೆಲೇ ಅಚ್ಚರಿ ಮೂಡಿತು. ಹಾಗೇ ಸುತ್ತಲೂ ಕಣ್ಣಾಡಿಸಿದೆ. ಯಾವುದೋ ಪುಟ್ಟ ಹಂಚಿನ ಮನೆ. ಹಳೆಯದಾದರೂ ಶುಭ್ರವಾಗಿತ್ತು. ನೆಲವೆಲ್ಲಾ ತಂಪು ತಂಪು. ಚಾವಡಿಯಲ್ಲಿ ನಾನು. ನನಗೋ, ಅರೇ ಇದು ಯಾವ ಹೊಸ ಮನೆ ಎನ್ನುವ ತೀರದ ಕುತೂಹಲ. ಎದುರಲ್ಲಿ ಕಂಡ ಪುಟ್ಟ ಕಿಟಕಿಯಿಂದ ನಾಲ್ಕೈದು ಬಿಸಿಲು ಕೋಲುಗಳು ಒಳ ಬಂದಿದ್ದವು. ಒಮ್ಮೆಲೇ ಸಮಯ ಎಷ್ಟಾಗಿರಬಹುದು ಎನಿಸಿತು. ಕೈಯಲ್ಲಿ ಮೊಬೈಲ್ ಕಾಣಲಿಲ್ಲ;ಗೋಡೆಯಲ್ಲಿ ಗಡಿಯಾರವೂ.. ಹೋಗಲಿ ಬಿಡು, ಸಮಯದ ಹಂಗೇಕೆ ಎಂದು ಕಿಟಕಿಯಿಂದ ಹೊರಗೆ ಇಣುಕಿದೆ. ವಾಹ್…..!! ಹೊರಗಡೆ ಚಂದದ ಅಂಗಳ, ಮಂದ ಬಿಸಿಲು. ದೂರದಲ್ಲಿ ಹಸಿರು ಹೊದ್ದ ಗದ್ದೆಗಳಲ್ಲಿ ಬಂಗಾರದ ಬಣ್ಣದ ತೆನೆಗಳು ತಲೆದೂಗುತ್ತಿದ್ದವು. ಅದರಾಚೆಗೆ ದಟ್ಟ ಕಾಡು. ಕಾಡಿನೊಳಗೆಲ್ಲೋ ಕಲಕಲ ಶಬ್ದ. ಯಾವುದೋ ಹೊಳೆ ಹರಿಯುತ್ತಿರಬೇಕು. ಅಗಾಧ ನಿಶ್ಯಬ್ದ. ಹಕ್ಕಿಗಳೂ ತೂಕಡಿಸುತ್ತಿರಬೇಕು. ನಿಧಾನವಾಗಿ ಬೀಸುತ್ತಿದ್ದ ಗಾಳಿಗೆ ಎಲೆಗಳ ಮರ್ಮರ, ಹೊಳೆಯ ಸದ್ದು ನಿಶ್ಯಬ್ದ ಪ್ರಪಂಚದಲ್ಲಿ ತುಸು ಜೀವಂತಿಕೆಯ ರೂವಾರಿಗಳಾಗಿದ್ದವು.

ಮತ್ತಷ್ಟು ಕುತೂಹಲ ಮೂಡಿತ್ತು. ಕಿಟಕಿಯಲ್ಲೇ ಇನ್ನಷ್ಟು ಬಗ್ಗಿ ನೋಡಿದೆ. ಆಚೆ ಬದಿಯಲ್ಲಿ ಫಸಲು ಕಟಾವು ಮಾಡಿದ ಬೋಳು ಗದ್ದೆಗಳು, ಅದರ ಬದುವಲ್ಲೇ ಯಾವುದೋ ಮರಗಳೂ ಕಾಣಿಸಿದವು. ಅಲ್ಲಲ್ಲಿ ನೆರಳಲ್ಲಿ ಮಲಗಿ ಮೆಲುಕಾಡುತ್ತಾ, ತೂಕಡಿಸುತ್ತಿರುವ ದನಗಳು. ಅಲ್ಲೇ ಮರಕ್ಕೆ ಒರಗಿರುವಂತೆ ಯಾರೋ ಕಂಡಂತಾಯಿತು. ಕಣ್ಣುಗಳನ್ನು ಇನ್ನಷ್ಟು ಅಗಲಿಸಿ ನೋಡಿದೆ. ಹೌದು, ಸಣಕಲು  ದೇಹದ  ಹುಡುಗ. ಬಿಸಿಲಿಗೆ ದಣಿದು ಒರಗಿದಂತಿತ್ತು. ದನ ಕಾಯುವವನಿರಬೇಕು.

ಯಾವ ಊರು, ಯಾವ ಕೇರಿ. ಪ್ರಶ್ನೆಗಳ ಮೆರವಣಿಗೆ ನಡೆದೇ ಇತ್ತು. ಕೇಳಲು ಯಾರಾದರೂ ಇದ್ದರೇ ತಾನೇ? ಸಂಪೂರ್ಣ ಮೌನ ಪ್ರಪಂಚ. ಯಾರಾದರೂ ಇದ್ದೀರಾ ಎಂದು ಕೂಗಿ ಕರೆಯಲೇ ಅನ್ನಿಸಿತು. ಊಹೂಂ.. ಶಬ್ದಗಳ ಸಹವಾಸಕ್ಕಿಂತ ನಿಶ್ಯಬ್ದವೇ ಹಿತವೆನಿಸಿತ್ತು.

ಎದುರಲ್ಲಿ ಕಂಡ ಬಾಗಿಲು ತೆರೆದು ಹೊರಗಡಿಯಿಟ್ಟೆ. ಎದುರಿನ ನಳನಳಿಸುವ ಹೂ ತೋಟದ ಹೂಗಳು ತಲೆದೂಗಿ ಸ್ವಾಗತಿಸಿದವು. ಜೀವಮಾನದಲ್ಲಿಯೇ ನೋಡಿರದ ಬಣ್ಣ ಬಣ್ಣದ ಹೂಗಳು. ಅಲ್ಲಲ್ಲಿ ಚಿತ್ತಾರದ ಚಿಟ್ಟೆಗಳು ಹಾರಾಡುತ್ತಿದ್ದವು. ಹೆಸರೇ ಗೊತ್ತಿಲ್ಲದ ಗಿಡಗಳು. ಪುರ‍್ರ​ನೆ ಹಾರುವ ಕೀಟಗಳು. ತಣ್ಣನೆಯ ಗಾಳಿ. ಆಹಾ, ಸ್ವರ್ಗವೇ ಏನೋ ಎನಿಸುವಷ್ಟು ಚಂದದ ಪರಿಸರ.

ಮನೆಯ ಮುಂದೆ ಮರದ ಗೇಟು. ಅಲ್ಲೊಂದು ಕಿರಿದಾದ ಕಾಲು ದಾರಿ. ಸರಿದು ಹೋಗಿ ಕಾಡಲ್ಲಿ ಮರೆಯಾಗಿತ್ತು. ಕಾಲುಗಳು ನನಗರಿವಿಲ್ಲದಂತೆಯೇ ಮುಂದೆ ನಡೆಸಿದವು.

ಸ್ವಲ್ಪ ದೂರ ನಡೆಯುತ್ತಿದ್ದಂತೆಯೇ ದಾರಿ ಮುಗಿದು ಧುತ್ತನೆ ಕಾಡು ಎದುರಾಗಿತ್ತು. ಹಠಾತ್ತನೆ ಮಗದೊಂದು ನಿಗೂಢ ಜಗತ್ತಿಗೆ ಬಿದ್ದಂತೆ. ಎತ್ತ ತಿರುಗಿದರೂ ದಟ್ಟವಾಗಿ ಹೊಸೆದ ಕಾಡು. ಬಾನೆತ್ತರಕ್ಕೆ ಏರಿ ವಿಶಾಲವಾಗಿ ರೆಂಬೆಗಳನ್ನು ಚಾಚಿದ್ದ ಭೂತಾಕಾರವಾಗಿ ಬೆಳೆದಿದ್ದ ಮರಗಳು. ಹುಟ್ಟಿ ಎಷ್ಟು ವರುಷಗಳು ಸಂದಿದ್ದವೋ ಎಂಬಂತೆ ಕಾಂಡಗಳು ಸುರುಳಿ, ಸುರಟಿ ಅಲ್ಲಲ್ಲಿ ಪೊಟರೆಗಳು ಬಿದ್ದಿದ್ದವು. ಹತ್ತಿರದಲ್ಲೇ ಗೂಬೆಯೊಂದು ಕೂಗಿದಂತಾದರೂ ಕಣ್ಣಿನ ಅಳತೆಯಿಂದ ಮರೆಯಾಗಿತ್ತು.

ಕಾಲ ಅಡಿಯಲ್ಲಿ ದಪ್ಪ ಚಾದರ ಹಾಸಿದಂತೆ ಒಣಗಿದ ಎಲೆಗಳ ರಾಶಿ. ಅದರಲ್ಲೂ ವಿವಿಧ ಬಣ್ಣದ ಚಿತ್ತಾರಗಳು. ನಡೆಯುತ್ತಿದ್ದರೆ ಕಾಲ ಅಡಿಗೆ ಸಿಲುಕಿದ ಒಣ ಎಲೆಗಳ ಚರಪರ ಶಬ್ದ ಕಾಡಿನ ನಿಶ್ಯಬ್ದವನ್ನು ಸೀಳಿದಂತೆ ಕೇಳುತ್ತಿತ್ತು. ತಲೆ ಎತ್ತಿ ಮೇಲೆ ನೋಡಿದೆ. ಎಲೆಗಳ ನಡುವೆ ನೀಲಿ ಆಗಸದ ಚೂರುಗಳು. ಅವುಗಳ ನಡುವೆ ಹಾದು ಬಂದಿದ್ದ ಬಿಸಿಲು ಕೋಲುಗಳು ಕಾಡಿನಲ್ಲಿ ತನ್ನದೇ ಆದ ಚಿತ್ತಾರದ ವಿನ್ಯಾಸ ಬಿಡಿಸಿದ್ದವು.

ಕಾಲುಗಳು ನಡೆಯುತ್ತಲೇ ಇದ್ದವು. ದೂರದಲ್ಲೆಲ್ಲೋ ಅಪರಿಚಿತ ಹಕ್ಕಿಯ ಕೂಗು. ಯಾವ ಹಕ್ಕಿಯೋ ಮೊದಲು ಕೇಳಿದ ಹೊಳೆಯ ಕಲಕಲ ಶಬ್ದ ಮತ್ತೆ ಕೇಳಲಾರಂಭಿಸಿತ್ತು. ಹೊಳೆಯನ್ನು ನೋಡುವ ಕುತೂಹಲದಿಂದ ಶಬ್ದ ಕೇಳಿ ಬರುತ್ತಿದ್ದ ಜಾಡಿನಲ್ಲೇ ಮತ್ತಷ್ಟು ನಡೆದರೂ ಹೊಳೆಯ ಸುಳಿವೇ ಇರಲಿಲ್ಲ. ಸಣ್ಣ ನಿರಾಸೆಯ ಭಾವ ಆವರಿಸಿತು. ಎಷ್ಟು ದೂರ ನಡೆದೆನೋ ಪರಿವೆಯೇ ಇರಲಿಲ್ಲ. ಇಷ್ಟೆಲ್ಲದರ ನಡುವೆ ನಿಧಾನವಾಗಿ ಕತ್ತಲು ಕಾಡನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಹವಣಿಸುತ್ತಿತ್ತು. ಸೂರ್ಯ ತನ್ನ ಕರ್ತವ್ಯ ಮುಗಿಸಿ ಹಿಂದಿರುಗುತ್ತಿರುವ ಸೂಚನೆಯೋ ಎಂಬಂತೆ ನೀಲ ಆಗಸ ಕೆಂಬಣ್ಣಕ್ಕೆ ತಿರುಗುತ್ತಿತ್ತು. ಗೂಡಿಗೆ ವಾಪಸ್ಸಾಗುತ್ತಿರುವ ಹಕ್ಕಿಗಳ ಕೂಗಾಟ. ದೂರದಲ್ಲೆಲ್ಲೋ ಕಾಡು ಪ್ರಾಣಿಯ ಗುಟುರು. ಬೇಟೆಗೆ ಹೊರಟ ಸೂಚನೆ. ಕಾಡಿಗೆ ಕಾಡೇ ಅಚಾನಕ್ಕಾಗಿ ಬದಲಾಗಿತ್ತು. ಹಗಲಿಗೆ ವಿದಾಯ ಹೇಳುತ್ತಿರುವ ಕಾಡು ಇರುಳನ್ನು ಸ್ವಾಗತಿಸುತ್ತಿತ್ತು.

ತಕ್ಷಣ ಮನೆಯ ನೆನಪಾಯಿತು. ನಡೆದು ನಡೆದು ಎಲ್ಲಿ ಬಂದಿರುವೆನೆಂದೇ ಗೊತ್ತಿಲ್ಲ. ಹಿಂದಿರುಗುವ ದಾರಿಯೂ ಕಾಡಿನ ಕಪ್ಪಿನ ನಡುವೆ ಕರಗುತ್ತಿದೆ. ಕಗ್ಗತ್ತಲ ಕಾಡಿನ ನಡುವೆ ಒಂಟಿಯಾದ ಭಯದಿಂದ ಕಣ್ಣು ಮುಚ್ಚಿದೆ.

ದೂರದಲ್ಲಿ ಅಮ್ಮಾ….ಅಮ್ಮಾ… ಎನ್ನುವ ಕರೆ. ಅರೇ…. ಯಾರೋ ಭುಜ ಹಿಡಿದು ಅಲುಗಾಡಿಸುತ್ತಿದ್ದಾರೆ. ಪಕ್ಕನೆ ಕಣ್ಣು ತೆರೆದರೆ ಎದುರಲ್ಲಿ ಮಗ. ಒಂದು ಕ್ಷಣ ಎಲ್ಲಿರುವೆ ಎನ್ನುವ ಗೊಂದಲ ಆವರಿಸಿ ಸುತ್ತಲೂ ನೋಡಿದೆ. ನನ್ನದೇ ಮನೆಯ ಜಗಲಿ. ಅದೇ ಬೆಂಚು. ಮಗನ ಕೈಯಲ್ಲಿ ಮೊಬೈಲ್. “ಏನಮ್ಮಾ.. ಎಷ್ಟು ಕರೆಯೋದು ನಿನ್ನನ್ನು… ಕೇಳಿಸಲೇ ಇಲ್ವಾ..” ಎನ್ನುವ ಆಕ್ಷೇಪಣೆ. ಉಫ್… ಅಂದರೆ ನಾನು ಇಷ್ಟು ಹೊತ್ತು ಕಂಡದ್ದು ಕನಸೇ? ಕೈ ಜಿಗುಟಿಕೊಂಡೆ. ಹಾ, ನೋವಾಯಿತು. ಹೌದು.. ಕನಸೇ.. ಆದರೆ ಅದ್ಭುತ ಕನಸಾಗಿತ್ತು.