ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಪ್ಪ… ಅಪ್ಪ… ನಂಗೆ ನೀನು ಬೇಕಪ್ಪ.

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಬೆಳಗಿನ ಜಾವ ಢಣ್,ಢಣ್ ಎಂದು ಗಡಿಯಾರದ ಗಂಟೆ ಬಾರಿಸಿದಾಗ ಎಚ್ಚರವಾಯಿತು.ಎದ್ದು ದೇವರಿಗೆ ಕೈ ಮುಗಿದು ನಂತರ ಅಪ್ಪನ ಫೋಟೋಗೆ ಕೈಮುಗಿದೆ.ಆಗ ನೆನಪಾಯಿತು.ಈ ದಿನ ಅಪ್ಪಂದಿರ ದಿನಾಚರಣೆ ಎಂದು. ಅಪ್ಪ ನಮಗೋಸ್ಕರ, ನಮ್ಮ ಬೆಳವಣಿಗೆಗೆ ಮತ್ತು ನಮ್ಮ ಬದುಕಿನ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದರು ಎಂದು ನೆನಪಾಯಿತು.ಇಂದು ಈ ಭೂಮಿಯಿಂದ ಮರೆಯಾಗಿ ಹದಿನೈದು ವಸಂತಗಳೆ ಕಳೆದವು.ಅವರಿಗೆ ಪತ್ರ ಬರಬೇಕೆಂದು ಆಸೆಯಾಗಿ ಈ ಪತ್ರ ಬರೆಯುತ್ತಿದ್ದೇನೆ.ಇದು ಅಪ್ಪ ಓದಿಕೊಂಡರೆ ಅವರದು, ಇಲ್ಲವಾದರೆ ಇದು ನನ್ನದೇ ಸ್ವಗತ !.

ಎಲ್ಲರಂತಲ್ಲ ನನ್ನ ಅಪ್ಪ. ಅಪ್ಪ, ಅದೇಕೋ ನಿನ್ನ ಬಗ್ಗೆ ಅಷ್ಟೊಂದು ಗೌರವ,ಪ್ರೀತಿ,ವಿಶ್ವಾಸ. ನಿನ್ನಲ್ಲಿ ಶಾಂತಿ,ತಾಳ್ಮೆ, ಸಂಯಮ ಅಮ್ಮನಿಗಂತೂ ಸ್ವಲ್ಪ ಜಾಸ್ತಿನೇ ಇತ್ತು. ಮಾತಿನಲ್ಲಿ ಸವಿ, ನಡತೆಯಲ್ಲಿ ಸ್ಪಷ್ಟತೆ,ಕೃತಿಯಲ್ಲಿ ಧೃಡತೆ ಈ ಮೂರು ಇರುವವರು ಏನನ್ನಾದರೂ ಸಾಧಿಸಬಲ್ಲರು ಎಂದು ಹೇಳುತ್ತಾರೆ.ನಿನ್ನಲ್ಲಿ ಈ ಮೂರು ಗುಣಗಳು ಇದ್ದು ಎಂಥಹ ಕಷ್ಟದಲ್ಲೂ ನೀನು ಸಾಧಿಸಿ ತೋರಿಸಿದೆ. ಎಲ್ಲರಂತಲ್ಲ ನೀನು ನನ್ನ ಅಪ್ಪ.ಆಗಾಗ್ಗೆ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಈಗಲು ನೀನು ಇನ್ನು ನಮ್ಮ ಜೊತೆ ಇರಬೇಕಾಗಿತ್ತು ಎಂದು.

ಓದಿನ ಕನಸಿಗೆ ನೀರೆರೆದೆ. ಅಪ್ಪ , ನನ್ನ ಓದಿನ ಕನಸನ್ನು ಕಂಡವನು ನೀನಪ್ಪ. ನಿನ್ನ ಸಂಬಂಧಿಕರು ಹೆಣ್ಣುಮಕ್ಕಳನ್ನು ಎಷ್ಟು ಓದಿಸಿದರು ಅವರು ಅಡುಗೆ ಮಾಡುವುದು ತಪ್ಪೀತೆ. ಅವರೇನು ದುಡಿದು ಕೊಡುವರೇನು ? ಮಗಳು ಓದಿದ್ರೆ ನಿನಗೇನು ಲಾಭ? ಸುಮ್ಮನೆ ದುಡ್ಡು ಖರ್ಚು.ಆದಷ್ಟು ಬೇಗ ಮದುವೆ ಮಾಡಿ ಕಳುಹಿಸಿ ಬಿಡು, ಎಂದೆಲ್ಲಾ ಕೊಂಕು ನುಡಿವಾಗ “ಮಗಳು ಓದಿದರೆ ನಮಗೆ ಹೆಮ್ಮೆ ಅಲ್ವಾ? ಮುಂದೆ ಅವರ ಭವಿಷ್ಯಕ್ಕೆ ಒಳ್ಳೆಯದು”ಎಂದು ಹೇಳಿ ಅವರ ಬಾಯಿ ಮುಚ್ಚಿಸುತ್ತಿದ್ದೆ. ಒಳ್ಳೆಯ ತಿಳಿವಳಿಕೆ ಅಪ್ಪ ನೀನು. ಸಂಬಂಧಗಳ ಕುರುಹುಗಳು ನಡುವೆ ನನ್ನ ಓದಿನ ಕನಸಿಗೆ ನೀರೆರದು ಪೋಷಿಸಿದವನು ನೀನಪ್ಪ. ನಾನು ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.

ಮಾತಿನಲ್ಲೇ ಬುದ್ಧಿ ಹೇಳಿದೆ. ಅಪ್ಪಾ , ಚಿಕ್ಕಂದಿನಲ್ಲಿ ನಾನು,ಅಕ್ಕ,ಅಣ್ಣ ಎಲ್ಲರೂ ಎಷ್ಟೊಂದು ಚೇಷ್ಟೆ ಮಾಡುತ್ತಿದ್ದರೂ ನೀನು ಒಂದು ದಿನವೂ ಹೊಡೆಯಲಿಲ್ಲ. ಅಲ್ಲದೆ ನಾವು ಸ್ಕೂಲಿನಲ್ಲಿ ಟೆಸ್ಟ್ ನಲ್ಲಿಕಡಿಮೆ ಅಂಕ ತೆಗೆದು ಕೊಂಡಾಗಲೂ ಬೈದುದಾಗಲಿ ಮಾಡಲೆ ಇಲ್ಲ. ನೀನು ಮಾತಿನಲ್ಲೆ ಬುದ್ಧಿ ಹೇಳುತ್ತಿದ್ದೆ.ನಿನ್ನ ಮುತ್ತಿನಂತ ಮಾತಿನಿಂದಲೇ ನಾವು ಓದುವುದರಲ್ಲಿ ಮುಂದೆ ಬಂದವು.

ಊಟದಲ್ಲಿ ಬಹಳ ಶಿಸ್ತು . ಅಪ್ಪ, ನೀನು ಊಟ ತಿಂಡಿ ವಿಷಯದಲ್ಲಂತೂ ಬಹಳ ಶಿಸ್ತು. ನಾವು ಹೊರಗಡೆ ತಿನ್ನುವುದಕ್ಕೆ ಇಷ್ಟಪಡುತ್ತಿದ್ದರೂ, ನೀನು ಕೊಡಿಸುತ್ತಿರಲಿಲ್ಲ. ಬೀದಿಯಲ್ಲಿ ಮಾರುವ ಕರಿದ ತಿಂಡಿ,ಪಾನಿಪುರಿ, ಹಾಳುಮೂಳು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಹಣ್ಣು ತಿನ್ನಿ ಎಂದು ಹೇಳುತ್ತಿದ್ದೆ. ಮನೆಗೆ ಬಾಳೆಹಣ್ಣು, ಸೇಬು ಯಾವಾಗಲೂ ತರುತ್ತಿದ್ದೆ. ಊಟದಲ್ಲಂತೂ ನೀನು ಬಹಳ ಕಟ್ಟುನಿಟ್ಟು.ನೀನಂತೂ ಹೊರಗಡೆ ತಿನ್ನುತ್ತಿರಲಿಲ್ಲ. ಅಮ್ಮ ಮಾಡಿದ ಅಡುಗೆಯನ್ನೇಇಷ್ಟ ಪಡುತ್ತಿದ್ದೆ. ಅಮ್ಮನ ಅಡುಗೆ ಬಗ್ಗೆ ಒಂದು ದಿನವು ತೆಗಳಿದ್ದೆ ಇಲ್ಲ. ನೀನು ಅಮ್ಮನಿಗೆ ಅಡುಗೆ ಚೆನ್ನಾಗಿ ಮಾಡುತ್ತೀಯಾ ಎಂದು ಯಾವಾಗಲೂ ಹೇಳುತ್ತಿದ್ದೆ.ಇದು ಅಮ್ಮನಿಗೆ ಒಂದು ಕಿರೀಟ ಬಂದ ಹಾಗಿತ್ತು.
ಒಳ್ಳೆಯ ಗುಣಗಳು
ಅಪ್ಪ ನೀನು ದೊಡ್ಡ ಅಧಿಕಾರಿ ಹುದ್ದೆಯಲ್ಲಿದ್ದರೂ ದರ್ಪ ಅಹಂಕಾರ ಪಡಲಿಲ್ಲ. ಒಂದು ದಿನವೂ ನೀನು ಕಾಲ ಮೇಲೆ ಕಾಲು ಹಾಕಿಕೊಂಡು ಕೂತವನಲ್ಲ,ಯಾರನ್ನು ನೋಯಿಸಲಿಲ್ಲ, ಯಾರ ಮೇಲೂ ಕೂಗಾಡಿದ್ದಾಗಲಿ ಇಲ್ಲ. ನಿನ್ನ ಅಧೀನ ಹುದ್ದೆಯವರಿಗೂ ಗೌರವ ಕೊಡುತ್ತಿದ್ದೀರಿ. ಕೆಲಸಗಾರರನ್ನು ಪ್ರೀತಿಯಿಂದ, ನಗುಮುಖದಿಂದ ಕಾಣುತ್ತಿದ್ದಿರಿ.ಈ ನಿಮ್ಮ ಗುಣಗಳೇ ನನಗೆ ತುಂಬಾ ಇಷ್ಟವಾದವು.
ನಿಷ್ಟಾವಂತ ಅಧಿಕಾರಿ ನಮ್ಮಪ್ಪ
ಅಪ್ಪ ನೀನು ಏನೇ ಕಷ್ಟ ಬಂದರೂ ತಾಳ್ಮೆಯಿಂದ ಎದುರುಸುತ್ತಿದ್ದೆ. ಆರೆಂದರೆ ಹಿಗ್ಗದೆ, ಮೂರೆಂದರೆ ಕುಗ್ಗದೆ ಇರುವಂತವನು ನೀನು. ಯಾವುದೇ ಆಡಂಬರ ನಿನಗೆ ಬೇಕಿರಲಿಲ್ಲ, ನೀನು ಯಾವಾಗಲೂ ಸಿಂಪಲ್ಲಾಗೆ ಇರುತ್ತಿದ್ದೆ. ಒಂದು ದಿನವು ನೀನು ಲಂಚಕ್ಕೆ ಆಸೆ ಪಡಲಿಲ್ಲ. ನಿನ್ನ ಸ್ನೇಹಿತರು ಲಕ್ಷಾನುಗಟ್ಟಲೆ ಲಂಚ ತೆಗೆದುಕೊಂಡು ಆಸ್ತಿ ಮಾಡಿದರೂ, ನೀನು ಮಾತ್ರ ಯಾವುದಕ್ಕೂ ಆಸೆ ಪಡಲಿಲ್ಲ.ನಾನು ಮಾಡುವ ಕೆಲಸಕ್ಕೆ ಸರ್ಕಾರ ಸಂಬಳ ಕೊಡುತ್ತೆ, ನಮ್ಮ ಬೊಗಸೆಯಲ್ಲಿದ್ದಷ್ಟೇ ನಾವು ಆಸೆ ಪಡಬೇಕು ಹೆಚ್ಚಾದರೆ ಬೆರಳ ಸಂಧಿಯ ನೀರಿನಂತೆ ಸೋರಿ ಹೋಗುವುದು. ಬಂದಷ್ಟೇ ಪ್ರಸಾದ ಎಂದು ಭಾವಿಸೋಣ ಎಂದು ಹೇಳುತ್ತಿದ್ದೆ. ನಿನಗೆ ಬರುವ ಸಂಬಳದಲ್ಲೆ ನಮ್ಮೆಲ್ಲರನ್ನು ಮದುವೆ ಮಾಡಿದೆಯಲ್ಲಾ ಅದೇ ಗ್ರೇಟ್ ಕಣಪ್ಪ.ನೀನು ಒಳ್ಳೆಯ ನಿಷ್ಟಾವಂತ ಅಧಿಕಾರಿ ಎಂದು ಹೆಸರು ಪಡೆದೆ. ಅಲ್ಲದೆ ಪತ್ರಿಕೆಗಳಲ್ಲಿ ನಿನ್ನ ಹೆಸರು ರಾಜಾಜಿಸುತ್ತಿತ್ತು. ನಿಜ ಅಪ್ಪ ಈ ಗೌರವ ಹೆಸರು ಮುಂದೆ ಆ ಲಂಚದ ಹಣ ತೃಣ ಸಮಾನ.ನೀನು ಪುಟವಿಟ್ಟ ಚಿನ್ನ ಕಣಪ್ಪ. ಈಗಲೂ ನಿನ್ನ ಬಗ್ಗೆ ಜನ ಹೊಗಳಿದಾಗ ನನಗೆ ಹೆಮ್ಮೆ, ನಾನು ನಿಷ್ಠಾವಂತ ಅಧಿಕಾರಿ ಮಗಳೆಂದು.


ಅನ್ಯರ ವಸ್ತುವಿಗೆ ಆಸೆ ಪಡಲಿಲ್ಲ
ಅಲ್ಲದೆ ನೀನು ಒಂದು ದಿನವು ಗರ್ವ, ಹಣದ ಆಸೆ ಇದ್ಯಾವುದೂ ನಿನ್ನಲ್ಲಿ ಸುಳಿಯಲಿಲ್ಲ. ಅನ್ಯರ ವಸ್ತುವಿಗೆ ನೀನು ಆಸೆ ಪಡಲಿಲ್ಲ.ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಅತಿಯಾದ ಆಸೆ ಪಡದೆ ಇದ್ದುದರಲ್ಲೆ ತೃಪ್ತಿ ಪಡುವ ಈ ನಿನ್ನ ಗುಣ ನನ್ನಲ್ಲೂ ಇದೆಯಪ್ಪ. ನೀನು ಯಾರೇ ಮನೆಗೆ ಬಂದರೂ ಚೆನ್ನಾಗಿ ಆತಿಥ್ಯ ನೀಡುತ್ತಿದ್ದೆ. ನಿನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೆ.ನಾವು ಮಾಡಿದ ಸಹಾಯ ಎಂದೋ ನಮ್ಮನ್ನು ಯಾವುದಾದ್ರೂ ರೂಪದಲ್ಲಿ ಯಾವುದಾದರೂ ಸ್ಥಳದಲ್ಲಿ ಕಾಪಾಡುತ್ತೆ ಎಂದು ನೀನು ಪದೇ-ಪದೇ ಹೇಳುತ್ತಿದ್ದೆ. ಇದು ಸತ್ಯದ ಮಾತಾಪ್ಪ ,ಈ ಮೂರು ಗುಣಗಳು ನಿನ್ನ ಅಳಿಯರಲ್ಲೂ ಇದೆಯಪ್ಪ.ಇಂತಹ ಅಳಿಯನಿಗೆ ನೀನು ನನ್ನನ್ನು ಧಾರೆ ಎರೆದು ಕೊಟ್ಟೆಯಲ್ಲಾ ಅದು ನನ್ನ ಭಾಗ್ಯ.
ನಮ್ಮಪ್ಪ ಶಿಸ್ತುಗಾರ
ಅಪ್ಪ ನೀನು ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆ ಮನೆಯಲ್ಲೆ ಇದ್ದಾಗ ನನ್ನ ನಿನ್ನ ಒಡನಾಟ ಹೆಚ್ಚಾಯಿತು. ನನಗೆ ನಿನ್ನದೇ ರೂಪು, ನಿಮ್ಮದೇ ಸ್ವಾಭಿಮಾನ ಇದ್ದರೂ ಕೆಲವೊಂದು ವಿಷಯಗಳಲ್ಲಿ ಬೇರೆ ಬೇರೆಯಾಗಿ ಇತ್ತು. ನೀನು ಅಮ್ಮನಿಗೆ ಪ್ರತಿಯೊಂದು ಕೆಲಸದಲ್ಲೂ ಸಹಾಯ ಮಾಡುತ್ತಿದ್ದೆ.ಯಾವ ಕೆಲಸದವರ ಹತ್ತಿರನೂ ನೀನು ಕೆಲಸ ಮಾಡಿಸಿಕೊಳ್ಳುತ್ತಿರಲಿಲ್ಲ.ನಿನ್ನ ಕೆಲಸ ನೀನೇ ಮಾಡುತ್ತಿದ್ದೆ.ತನ್ನ ಕೈಯಲ್ಲಿ ಆಗದೇ ಇರುವುದು ಯಾವುದೂ ಇಲ್ಲ ಎಂಬಂತೆ,ನಮ್ಮ ಕೆಲಸ ನಾವೇ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೇದು, ಶುಚಿಯಾಗಿಯೂ ಇರುತ್ತೆ ಎಂದು ಹೇಳುತ್ತಿದ್ದೆ. ನಿನ್ನ ಹಾಗೆ ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ ಯಾರನ್ನು ಅವಲಂಬಿಸುವುದಿಲ್ಲ.ನಮ್ಮ ಕೆಲಸ ನಾವೇ ಮಾಡುವುದರಲ್ಲಿ ಏನೋ ಒಂದು ಬಗ್ಗೆ ಖುಷಿ ಇದೆಯಪ್ಪ.


ನೀನು ತುಂಬಾ ಅಚ್ಚುಕಟ್ಟು
ಅಪ್ಪ ನೀನು ತುಂಬಾ ಶಿಸ್ತು. ಎಲ್ಲ ವಸ್ತುಗಳನ್ನು ನೀಟಾಗಿ ಇಡುತ್ತಿದ್ದೆ.ಪೇಪರ್ ಓದಿದ ಮೇಲೆ ಮತ್ತೆ ನೀಟಾಗಿ ಜೋಡಿಸಿಡುವುದು, ಬಟ್ಟೆಗಳನ್ನು ಸಹ ಎಲ್ಲ ನೀಟಾಗಿ ಮಡಿಸಿಡುತಿದ್ದೆ. ಪ್ರತಿಯೊಂದರಲ್ಲೂ ನೀನು ಅಚ್ಚುಕಟ್ಟು, ಎಲ್ಲಿಡಬೇಕು ಅಲ್ಲೇ ಇಡುತ್ತಿದ್ದೆ. ಆದರೆ ಅದೇಕೋ ನನಗೆ ನಿನ್ನ ಈ ಗುಣ ಬರಲಿಲ್ಲ. ಅಲ್ಲೆಂದರಲ್ಲೆ ವಸ್ತುಗಳನ್ನು ಇಟ್ಟು ಬಿಡುತ್ತೇನೆ.ಆಮೇಲೆ ಎತ್ತಿಟ್ಟರಾಯಿತು ಎನ್ನುವ ಮನೋಭಾವ ನನ್ನದು. ಕೊನೆಗೆ ಬೇಕಾದ ವಸ್ತು ಸಿಗದಿದ್ದಾಗ ನಮ್ಮವರ ಹತ್ತಿರ ಎಷ್ಟೋ ಸಲ ಬೈಸಿಕೊಂಡಿದ್ದೆ ಜಾಸ್ತಿ. ಎಲ್ಲೋ ಈ ಗುಣ ನನಗೆ ಅಮ್ಮನಿಂದ ಬಂದ ಬಳುವಳಿ ಇರಬೇಕು.
ಸುಳ್ಳು ಹೇಳಬಾರದು
ಅಪ್ಪ ನೀನು ಯಾವಾಗಲೂ ಹೇಳುತ್ತಿದ್ದೆ ಸುಳ್ಳು ಹೇಳಬಾರದು ಎಂದು. ಅದೇ ನೀನು ನಿಜ ಹೇಳಿದರು ಅಮ್ಮ ನಿನ್ನ ಎಷ್ಟೋ ಸಾರಿ ಬೈದಿದ್ದರು ಅಲ್ವಾ..!. ಆದರೆ ನಾನು ನೀನು ಹೇಳಿದ ಹಾಗೆ ನಡೆದು ಕೊಳ್ಳಲಾಗುತ್ತಿಲ್ಲ. ನಾನು ಮನೆ ಸಾಮಾನು ತರುವಾಗ ಐನೂರು ಆಗಿದ್ದರೆ ಸಾವಿರ ಆಗಿದೆಯೆಂದು ಸುಳ್ಳು ಹೇಳಿ ದುಡ್ಡು ಈಸಿ ಕೊಳ್ಳುತ್ತೇನೆ. ಕಷ್ಟದಲ್ಲಿ ಯಾವಾಗಾದರೂ ಬೇಕಾಗುತ್ತದೆ ಎಂದು ಹಾಗೆ ಸುಳ್ಳು ಹೇಳುತ್ತೇನೆ. ಕೆಲವು ಸಂದರ್ಭಗಳಲ್ಲಿ ಸುಳ್ಳು ಹೇಳಬೇಕಾಗುತ್ತದೆ. ಇರಲಿಬಿಡು, ನೀನೋ ಸತ್ಯ ಹರಿಶ್ಚಂದ್ರನ ಮೊಮ್ಮಗ ಇರಬೇಕು. ಅದಕ್ಕೆ ಹಾಗೆ ಹೇಳಿದೆ ಅಂತ ಕಾಣುತ್ತೆ. ನೀ ಹೇಳಿದ ರೀತಿ ನಾನು ಪಾಲಿಸಲಾಗುತ್ತಿಲ್ಲ. ಒಳ್ಳೆ ಕೆಲಸಕ್ಕೆ ಸುಳ್ಳು ಹೇಳಿದರೆ ತಪ್ಪೇನಿಲ್ಲ ಅಲ್ವಾ ಅಪ್ಪ.
ಧಾರವಾಹಿ ಪ್ರಿಯ
ಅಪ್ಪ ಮೊನ್ನೆ ಟಿವಿಯಲಿ ಹಳೆದು ನುಕ್ಕಡ್ ಹಿಂದಿ ಧಾರಾವಾಹಿಯ ಮರು ಪ್ರಸಾರ ಬರುತ್ತಿತ್ತು. ಆಗ ನನಗೆ ನಿನ್ನದೇ ನೆನಪಾಯಿತು ಅಪ್ಪ. ಅದನ್ನು ನೀನು ಒಂದು ಬಿಡದೆ ನೋಡುತ್ತಿದ್ದೆ.ಈಗಂತೂ ಹೆಚ್ಚಾಗಿ ಹೆಂಗಸರು ಧಾರಾವಾಹಿ ನೋಡುವುದು ಜಾಸ್ತಿಯಾಗಿದೆ. ಹೆಂಗಸರ ಹಾಗೆ ನೀನು ಎಷ್ಟೊಂದು ಧಾರಾವಾಹಿ ನೋಡುತ್ತಿದ್ದೆ. ಅಮ್ಮ,ನೀನು ಒಟ್ಟಿಗೆ ಕೂತು ಒಂದೋ,ಎರಡೋ ಧಾರಾವಾಹಿ ನೋಡುತ್ತಿದ್ದರೆ, ಮಿಕಿದೆಲ್ಲ ಹಿಂದಿ ದಾರವಾಹಿನೆ ನೀನು ನೋಡುತ್ತಿದ್ದದ್ದು .ಅಬ್ಬಾ ! ಎಷ್ಟೊಂದು ನೋಡುತ್ತಿದ್ದೆ. ಅಮ್ಮ ಕನ್ನಡ ನೋಡಬೇಕು ಅಂತ ನೀನೋ ಹಿಂದಿ ನೋಡಬೇಕೂಂತ, ಇಬ್ಬರೂ ರಿಮೋಟ್ ಗಾಗಿ ಕೋಳಿ ಜಗಳ ವಾಡುತಿದ್ದದ್ದು ನೆನಪಾದಾಗ ನಗು ಬರುತ್ತದೆ.ನೀನೋ ಹಠವಾದಿ ಬಿಡುತ್ತಿರಲಿಲ್ಲ, ಅಮ್ಮನೋ ಮುನಿಸಿಕೊಂಡು ಹೋಗಿ ಮಲಗಿ ಬಿಡುತ್ತಿದ್ದಳು. ಸದ್ಯ ನಿಮ್ಮಿಬ್ಬರ ಧಾರವಾಹಿ ನೋಡುವ ಹುಚ್ಚು ನನಗೆ ಬರಲಿಲ್ಲ. ಅದು ನನ್ನ ಪುಣ್ಯ.
ಅಪ್ಪ ನಿನಗೆ ಇನ್ನೊಂದು ವಿಷಯ ಗೊತ್ತಾ? ಈಗಂತೂ ಅಮ್ಮ ತುಂಬಾ ಧಾರವಾಹಿ ನೋಡುತ್ತಾಳೆ. ಇನ್ನೇನು ತಾನೇ ಮಾಡಿಯಾಳು, ಅಮ್ಮನ ಬಿಟ್ಟು ನೀನೊ ಬೇಗ ಮೇಲಕ್ಕೆ ಹೋದೆ.ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಅವರದೇ ಲೋಕ. ಅವಳ ಜೊತೆ ಮಾತನಾಡಲು ಪುರುಸೊತ್ತು ಇಲ್ಲದಿರುವಾಗ ಅಮ್ಮ ತಾನೆ ಒಂಟಿ, ಹೇಗೆ ತಾನೆ ಕಾಲ ಕಳೆದಾಳು? ಅಮ್ಮ ಬಿಪಿ ಮಾತ್ರೆ ತೆಗೆದುಕೊಳ್ಳುವುದನ್ನು ಮರೆತರೂ, ಧಾರಾವಾಹಿಯನ್ನು ಮರೆಯದೆ ನೋಡುತ್ತಾಳಪ್ಪ.
ಓದುವ,ಹಾಡು ಕೇಳುವ ಹವ್ಯಾಸ.
ಅಪ್ಪ ನೀನು ಯಾವಾಗಲೂ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ತಂದು ಓದುತ್ತಿದ್ದೆ. ನನಗೂ ನಿನ್ನ ಹಾಗೆ ಪುಸ್ತಕ ಓದುವ ಹವ್ಯಾಸ. ಜೊತೆಗೆ ಪತ್ರಿಕೆಗಳಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಅಲ್ಲದೆ ನೀನು ಹೆಚ್ಚಾಗಿ ಉಷಾ ಉತ್ತಪ್ಪ, ಲತಾ ಮಂಗೇಶ್ಕರ್ ಅವರ ಹಳೆಯ ಹಾಡುಗಳನ್ನು ಕ್ಯಾಸೆಟ್ ಹಾಕೊಂಡು ಕೇಳುತ್ತಿದ್ದೆ. ನಿನಗೆ ಹಿಂದಿ,ಇಂಗ್ಲಿಷ್ ಹಾಡುಗಳೆಂದರೆ ಎಷ್ಟು ಇಷ್ಟ.ಅಮ್ಮನೋ ನಿನಗೆ ಬೈಯುತ್ತಿದ್ದಳು. ತಲೆ ಚಿಟ್ಟು ಹಿಡಿಯುತ್ತೆ, ಟೆಪ್ ರೆಕಾರ್ಡರ್ ಆಫ್ ಮಾಡಿ ಎಂದು ಗದರುತ್ತಿದ್ದಳು. ಆಗ ನೀನು ಮೆಲ್ಲಗೆ ಹಾಕಿಕೊಂಡು ಕೇಳುತ್ತಿದ್ದೆ. ಹಾಡೆಂದರೆ ಎಷ್ಟುಇಷ್ಟ ನೋಡು ನಿನಗೆ. ನನಗೂ ಹಾಗೆ ಹಾಡುಗಳೆಂದರೆ ತುಂಬಾ ಇಷ್ಟ. ಎಸ್. ಜಾನಕಿ ಹಾಗೂ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಹಳೇ ಹಾಡುಗಳನ್ನು ದಿನ ಕೇಳುತ್ತಿರುತ್ತೇನೆ.ಅವಗಾವಗ ಎಸ್ ಜಾನಕಿತರ ಸ್ವರ ಇಲ್ಲದಿದ್ದರೂ ತಕ್ಕಮಟ್ಟಿಗೆ ಹಾಡುತ್ತಿರುತ್ತೇನೆ.ಆದರೆ ನನಗೆ ಕನ್ನಡ ಹಾಡುಗಳೇ ಇಷ್ಟ.ನಾನು ಕನ್ನಡ ಅಭಿಮಾನಿ ಕಣಪ್ಪ..!
ನಿನ್ನ ಶಕ್ತಿಯೇ ಸೌಂದರ್ಯ
ಅಪ್ಪ ನೀನು ಅಮ್ಮನ ಸೌಂದರ್ಯದ ಬಗ್ಗೆ ಎಷ್ಟೊಂದು ಹೊಗಳುತ್ತಿದ್ದೆ. ನೀನು ಯಾವ ಸಿನಿಮಾ ತಾರೆಗಿಂತ ಕಡಿಮೆಯಿಲ್ಲ, ನೀನು ನಿರಾಭರಣ ಸುಂದರಿ ಎಂದು ಹೇಳಿ ಅಮ್ಮನನ್ನು ನಾಚಿಸುತ್ತಿದ್ದೆ. ಆಗ ಅಮ್ಮನಿಗೆ ಮಿಸ್ ವರ್ಡ್ ನಲ್ಲಿ ಗೆದ್ದಷ್ಟೆ ಖುಷಿ ಪಡುತ್ತಿದ್ದಳು. ಅಮ್ಮ ಎಷ್ಟು ಸುಂದರವಾಗಿದ್ದಾಳೆ ಅಲ್ವೇನಪ್ಪಾ. ಅಮ್ಮ ಸೌಂದರ್ಯದ ಗಣಿ ಆದರೆ, ನಿನ್ನ ಶಕ್ತಿಯೇ ಸೌಂದರ್ಯ ಕಣಪ್ಪ.
ನಿನ್ನ ಬಗ್ಗೆ ಹೆಮ್ಮೆ.
ನಿನ್ನ ಅಳಿಯ ನನ್ನನ್ನು ನೋಡಲು ಬಂದಾಗ ನಿನ್ನ ಗುಣ ಅವರಿಗೆ ತುಂಬಾ ಇಷ್ಟವಾಯಿತಂತೆ.ನೀನು ತೋರಿಸಿದ ಆತ್ಮೀಯ ಪ್ರೀತಿ,ವಿಶ್ವಾಸ ನಡತೆ ಅವರಿಗೆ ಇಷ್ಟವಾಗಿ ನನ್ನನ್ನು ಒಪ್ಪಿದಂತೆ,ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಹಾಗೆಂದಾಗ ನನಗೆ ನಿನ್ನ ಬಗ್ಗೆ ಎಷ್ಟೊಂದು ಹೆಮ್ಮೆ ಮೂಡುತ್ತದೆ ಅಪ್ಪಾ..!


ನಿನ್ನಲ್ಲಿ ತಾಳ್ಮೆ ಜಾಸ್ತಿ.
ಅಪ್ಪ ನೀನು ಎಲ್ಲಾ ಕೆಲಸಗಳನ್ನು ತುಂಬಾ ಚಟುವಟಿಕೆಯಿಂದ ಮಾಡುತ್ತೀಯಾ, ಒಂದು ದಿನವೂ ನೀನು ಕೂಗಾಡಿದ್ದಾಗಲಿ,ಸಿಟ್ಟು ಮಾಡಿಕೊಂಡಿದ್ದಾಗಲಿ ಇಲ್ಲವೇ ಇಲ್ಲ. ನಿನ್ನಷ್ಟು ತಾಳ್ಮೆ ನನಗಿಲ್ಲಪ್ಪ ಬೇಗ ಸಿಟ್ಟು ಮಾಡಿಕೊಳ್ಳುತ್ತೇನೆ. ಎಷ್ಟೋ ಸಲ ಆ ಸಿಟ್ಟು ಪಾತ್ರೆಯ ಮೇಲೆ ತೋರಿಸಿದ್ದೇನೆ. ಎಲ್ಲಾ ನಿನ್ನ ಗುಣಗಳು ನನಗೂ ಇರಬೇಕೆಂದು ಇಲ್ಲವಲ್ಲ.ನನ್ನಲ್ಲೂ ಕೆಲವು ಗುಣಗಳು ಇರಬೇಕಲ್ಲವೇ ಅಪ್ಪ.
ಮೊಮ್ಮಕ್ಕಳ ಪ್ರೀತಿಯ ತಾತ
ಅಪ್ಪ ನಿನ್ನ ಮೊಮ್ಮಕ್ಕಳು ನಿನ್ನನ್ನು ಇಷ್ಟೊಂದು ಇಷ್ಟಪಡುತ್ತಿದ್ದರು. ಕೆಲವು ಸಲ ನಿನ್ನ ಅತಿಯಾದ ಶಿಸ್ತು ಅವರಿಗೆ ಇರುಸು ಮುರುಸಾದರೂ, ಅವರು ಅಜ್ಜಿಗಿಂತ ನಿನ್ನನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಮೊಮ್ಮಕ್ಕಳು ಎಷ್ಟೊಂದು ಚೇಷ್ಟೆ ಮಾಡಿ ಟಿವಿ, ರಿಮೋಟ್, ದಿವಾನು, ಅಬ್ಬಬ್ಬಾ..!ಒಂದಾಎರಡಾ ಎಷ್ಟೊಂದು ಸಾಮಾನುಗಳನ್ನು ಹಾಳು ಮಾಡಿದರೂ, ಒಂದು ದಿನವೂ ಕೋಪ ಮಾಡಿಕೊಳ್ಳಲಿಲ್ಲ,ನೀನು ಅವರಿಗೆ ಗದರಿದ್ದೆ ಇಲ್ಲ. ಅವರ ಕಪಿ ಚೇಷ್ಟೆಯನ್ನು ನೀನು ಹೇಗೆ ಸಹಿಸಿಕೊಂಡೆ ಎನಿಸುತ್ತದೆ. ನಿನ್ನ ತಾಳ್ಮೆ ಮೆಚ್ಚಬೇಕಾಗಿದ್ದೆ.
ಅಪ್ಪ ಕಲಿಸಿದ ಜೀವನದ ಪಾಠ
ಅಪ್ಪ , ನೀನು ನನಗೆ ಹಿರಿಯರಿಗೆ ಗೌರವ ಕೊಡಬೇಕು, ಚಿಕ್ಕವರನ್ನು ಪ್ರೀತಿ-ವಿಶ್ವಾಸದಿಂದ ಕಾಣಬೇಕು. ಜೀವನದಲ್ಲಿ ಏನಾದರೂಂದು ಸಾಧನೆ ಮಾಡಬೇಕೆಂದು ಹಾಗೂ ಬದುಕೆಂದರೆ ಸುಲಭವಲ್ಲ, ಕಠಿಣವೂ ಅಲ್ಲ. ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿದಿರಿ.ಬಿದ್ದಾಗ ಎದ್ದು ನಿಲ್ಲುವುದನ್ನು, ಎದ್ದಾಗ ಅಹಂಕಾರ ಪಡದಿರುವುದನ್ನು, ಬದುಕಿನಲ್ಲಿ ಆಸೆಗೆ ಕಡಿವಾಣ ಹಾಕಿದರೆ ಜೀವನ ನಡೆಸಲು ಸಾಧ್ಯ ಎಂದು ನೀನು ಬುದ್ಧಿವಾದ ಹೇಳುತ್ತಿದ್ದೆ. ಮಗಳೇ, ನಾವು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ತಾಳ್ಮೆಯಿಂದ ಬದುಕನ್ನು ನಡೆಸಬೇಕು, ನಮಗಲ್ಲದಿದ್ದರು ನಮ್ಮವರಿಗಾಗಿ ನಡೆಸಬೇಕು ಎಂದು ನೀನು ಹೇಳಿದ ಮಾತು ಸತ್ಯನಪ್ಪ. ಅದನ್ನೇ ನಾನು ಇಷ್ಟು ವರ್ಷ ನಿನ್ನ ಆದೇಶದಂತೆ ಪಾಲಿಸಿದ್ದೇನೆ. ಹಿರಿಯರಿಗೆ ಗೌರವ ಕೊಡುತ್ತೇನೆ, ಅತ್ತೆ ಮನೆಗೆ ಒಳ್ಳೆಯ ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ, ಮಗನಿಗೆ ಒಳ್ಳೆ ತಾಯಿಯಾಗಿ, ಮನೆಗೆ ನಾನು ಸಂಸಾರವನ್ನು ನಿಭಾಯಿಸುವಂಥ ಪ್ರಭುದ್ಧಗೃಹಿಣಿ ಯಾಗಿದ್ದೇನೆ. ನಾವೆಣಿಸಿದಂತೆ ಜೀವನದಲ್ಲಿ ನಡೆಯದಿದ್ದರೂ, ಸುಖ ದುಃಖ ಎರಡು ಜೀವನದಲ್ಲಿ ಇರುತ್ತದೆ. ನಾವು ನಮಗಿಂತ ಕಷ್ಟದವರನ್ನು ನೋಡಿದಾಗ ನಾವೆಷ್ಟು ಸುಖವಾಗಿದ್ದೇವೆ ಎಂದೆನಿಸುತ್ತದೆ.ನಾನಿವತ್ತು ಏನಾಗಿದ್ದೇನೋ ಅದಕ್ಕೆ ನೀನೇ ಸ್ಪೂರ್ತಿ. ಇದು ನಿನ್ನ ಆಶೀರ್ವಾದ ಅಪ್ಪ. ಮುಂದೆಯೂ ಈಗೇ ಎಲ್ಲೂ ಚುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂಬ ಭರವಸೆ ಇದೆ. ಎಷ್ಟಾದರೂ ನಿನ್ನ ಮಗಳಲ್ವೇನಪ್ಪ.
ನೀನು ಈಗ ಇರಬೇಕಿತ್ತು
ಅಪ್ಪ ಎಷ್ಟೋ ಅಜ್ಜಂದಿರನ್ನು ನೋಡುವಾಗ ನನಗೆ ನೀನು ಇನ್ನು ಇರಬೇಕಿತ್ತು ಎನಿಸುತ್ತದೆ. ಈಗ ಮುಮ್ಮೊಕ್ಕಳು ಬಂದಿದ್ದಾರೆ. ಅವರನ್ನು ನೀನು ನೋಡಬೇಕಾಗಿತ್ತು ಎಷ್ಟು ಮುದ್ದಾಗಿವೆ ಗೊತ್ತಾ ..!
ನೋಡು ನಿನ್ನ ಬಗ್ಗೆ ಬರೆಯುತ್ತಾ ಹೋದರೆ ನನಗೆ ಪುಟಗಳೇ ಸಾಲದು ಕಣಪ್ಪ.
ಹೇಸಿಗೆ ತರಿಸುವ ಲಂಚ.
ಅಪ್ಪ, ಇಂದು ರಾಜ್ಯದಲ್ಲಿ ಭ್ರಷ್ಟಾಚಾರ, ಅಧಿಕಾರಿಗಳ ಅತಿಯಾದ ಲಂಚದ ದಾಹ ಇವೆಲ್ಲವನ್ನೂ ನೋಡಿದಾಗ ಹೇಸಿಗೆಯಾಗುತ್ತೆ.ನನಗೆ ನಿನ್ನಂಥ ಪ್ರಾಮಾಣಿಕ ಅಧಿಕಾರಿ ಬಗ್ಗೆ ಹೆಮ್ಮೆ ಹುಟ್ಟಿಸುತ್ತೆ.ನೀನು ಮತ್ತೆ ಹುಟ್ಟಿ ಬರಬೇಕು ಎಂದು ಅನಿಸುತ್ತದೆ. ನೀನು ಮಿನುಗುವ ನಕ್ಷತ್ರ ಕಣಪ್ಪ. ನನ್ನಾಸೆಯಂತೆ ಈ ಭೂಮಿಗೆ ಮತ್ತೆ ಹುಟ್ಟಿ ಬಾರಪ್ಪ.