ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಾಂತಾ ಶಾಸ್ತ್ರಿ
ಇತ್ತೀಚಿನ ಬರಹಗಳು: ಶಾಂತಾ ಶಾಸ್ತ್ರಿ (ಎಲ್ಲವನ್ನು ಓದಿ)

(ಇದೊಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಟದ ಒಂದು ಚಿಕ್ಕಹಳ್ಳಿಯ ಸಾಮಾನ್ಯ ಜನ ಜೀವನದ ಘಟನಾವಳಿಯನ್ನಾಧರಿಸಿ ಬರೆದ ಕಾಲ್ಪನಿಕ ಕಥೆ. ಹವ್ಯಕಭಾಷೆ ಪ್ರಧಾನವಾದ ಈ ನಾಟಕ ಗಂಭೀರಯುಕ್ತ ಹಾಸ್ಯದಿಂದ ಕೂಡಿದ ಅತ್ಯಂತ ಕಿರು ಸಾಮಾಜಿಕ ನಾಟಕ)

ಪಾತ್ರಗಳು ಹಾಗೂ ವೇಷಭೂಷ

೧)ಧೋತಿ, ಟೋಪಿ, ಕರಿ ಕೋಟು ಧರಿಸಿ ಹಳೇ ಕೈಚೀಲ ಕೊಡೆ ಹಿಡಿದುಕೊಂಡ ಮಾಸ್ತರರು
೨)ಸಾದಾ ಸೀರೆಯನುಟ್ಟ ಗೃಹಿಣಿ ಮಾಸ್ತರರ ಹೆಂಡತಿ
೩)ಪಾಯ್ಜಾಮ ಜುಬ್ಬ ಧರಿಸಿದ ಊರಿನ ವ್ಯಕ್ತಿ ಹೆಂಡತಿ
೪)ಸಾದಾ ಸೀರೆಯನುಟ್ಟ ಸದ್ಗೃಹಿಣಿ
೫)ಮೊಣಕಾಲುದ್ದ ಸೀರೆಯನುಟ್ಟ ಕೆಲಸದವರು ನಿಂಗಿ ಹಾಗೂ
೬)ಶಂಕ್ರಿ

ದೃಶ್ಯ ೧

(ಮಾಸ್ತರರ ಮನೆ. ಒಂದು ಟೇಬಲ್ಲು ಒಂದು ಕುರ್ಚೆ ಇಟ್ಟಿರುವದು)
ಮಾಸ್ತರ;- (ಹಳೇ ಕೈಚೀಲ ಕೊಡೆ ಹಿಡಿದುಕೊಂಡು ಬಂದು ಸಭೆಯನ್ನೊಮ್ಮೆ ನೋಡಿ, ಅವುಗಳನ್ನೆಲ್ಲಾ ಟೇಬಲ್ಲಿನ ಮೇಲಿಟ್ಟು, ಶಲ್ಯ ಅಥವಾ ಅಂಗವಸ್ತ್ರದಿಂದ ಗಾಳಿ ಹಾಯ್ಕತ್ನೆಯ)

ಹುಶ್ಶಪ್ಪ, ಸಾಕಸಾಕ ಆಗ್ಹೋಗ್ತು ಒಂದ ಬಾರಿ ಹೆರಬದಿಗೆ ಹೋಗಿ ಬಂದ್ರೆ. ಎಂಥ ಬಿಸಿಲು, ಎಂಥ ಸೆಕೆ ಈ ಚಳಿಗಾಲದಲ್ಲೂವಾ! ನನ್ನ ಜೀವಮಾನದಲ್ಲಿ ಇಷ್ಟು ಸೆಕೆ ಈ ಉರಿ ಕಂಡಿದ್ನಿಲ್ಯಾಗಿತ್ತು. ಮನುಷ್ಯ ಪ್ರಕೃತಿ ವಿರುಧ್ಧ ಹೋಗಿ ತನ್ನ ಸ್ವಾರ್ಥದ ಸಲುವಾಗಿ ಏನೇನೆಲ್ಲಾ ಮಾಡ್ಕತ್ನೆಯ ಬದಲಾದನಲಿ, ಹಾಂಗೆ ಈ ಋತುಚಕ್ರನೂವಾ ತನ್ನ ತನ ಬದಲಾಯಿಸ್ತು ಕಾಣ್ತು. ಏನೆ ಆಗ್ಲಿ ನಮ್ಮೂರು ಮಾತ್ರ ಒಂದು ಆದರ್ಶ ಹಳ್ಳಿ ಅಥವಾ ಮಾದರಿ ಗ್ರಾಮ ಹೇಳಿ ಎಲ್ಲರೂ ಹೇಳ್ತೋ. ಹಾಂಗೆ ಸರಕಾರಕ್ಕೆ ಶಿಫಾರಸು ಮಾಡ್ವೋ ಹೇಳಿ ವಿಚಾರಾನೂ ಬಂದಿತ್ತು. ಆದರೆ ಈಗ ಹೆರಗೆ ಹೋದಾಗ ಎಲ್ಲಾ ಜನ ಏನೋ ಗುಸು ಗುಸು ಗುಸು ಗುಸು ಮಾತಾಡ್ದಾಂಗೆ ಕೇಳ್ತು. ಅಬಾ! ಸತೀಶ ವೆಂಕಪ್ಪ ಒಳ್ಳೆ ಗೆಳೆಯರಪ್ಪ. ನಾ ಕಲಿಸಿದ ಮಕ್ಕಳೆಯಾ. ಹಾಂಗೇನು ಕಶ್ಪಿಶಿ ಅಪ್ಪಾಂಗಿಲ್ಯಪ್ಪ. ಅವರೆಲ್ಲೇನೋ ತಪ್ಪು ತಿಳಿವಳಿಕೆ ಆಜು. ಎಲ್ಲೋ ಏನೋ ಎಡವಟ್ಟಾಜು. ಇರಲಿ ನೋಡ್ವೋ. ಇಲ್ಲಿವರೆಗಂತಿರೇ ಎಲ್ಲ ನನ್ನ ಶಿಷ್ಯರುವಾ ನನ್ನ ಹಾಂಗೆಯ; ಅಂದರೆ ಆ ಕಾಲದಲ್ಲೇ ನಾನು ಪದವಿ ಪಡಕಂಡಿದ್ರುವಾ ಹಳ್ಳಿಲೇ ವಳ್ಕಳವು, ನಮ್ಮ ಹಳ್ಳಿ ಸುಧಾರ್ಸವು ಹೇಳಿ, ಊರಬದಿಗೆ ಬಂದು ಮಾಸ್ತರ್ಕೆ ಮಾಡ್ತಿದ್ದೆ ನೋಡಿ, ಹಾಂಗೆಯಾ ನನ್ನ ಶಿಷ್ಯರೂವಾ ಚೊಲೋ ಕಲ್ತ್ಕಂಡು ಊರಿಗೆ ಬಂದು ಎಷ್ಟು ಚೆಂದಕ್ಕಿದ್ದ್ವಪಾ. ಕಾಲಾಯ ತಸ್ಮಯ ನಮಃ. ಹೌದೋ ಅಲ್ದೋ! ಛೆ! ಇದನೆಲ್ಲಾ ನಾನು ನಿಂಗೋಕೆ ಎಂತಕ್ಕೆ ಹೇಳ್ತಿದ್ನೋ ಏನೋ; ನನ್ನ ಮಾತ ಕೇಳ್ಕಂಡು ಇಷ್ಟೊತ್ತಿಗೆ ನಮ್ಮನೆ ಪ್ರಾಣಿ ಬರಕಾಗಿತ್ತಪ್ಪ. ತೆಕೊ ಬಂದೇ ಬುಡ್ತು. ಬಂತೆಯಾ! ನೂರ ವರ್ಷ ಆಯುಷ್ಯ ನಿಂಗೆ.

ಮಾ. ಹೆಂ.;-(ಪ್ರವೇಶಿಸುತ್ತಾ) ಎಷ್ಟೊತ್ತಾತು ಬಂದು. ಬಿರೀನೆ ಒಂದ ಕೊಡ ಬಾವಿ ನೀರ ತೆಕಂಬಪ್ಪೋ ಹೇಳಿ ಹೋಗಿದ್ದೆ.

ಮಾಸ್ತರ;- ಎಂತದು?! ಬಾವಿನೀರ ತಪ್ಪುಲೆ ಹೋಗಿದ್ಯೇ ಎಂತಕ್ಕೆ?

ಮಾ ಹೆಂ;-ನಮ್ಮನೆಲೀ ಅದ್ಯಂತದೋ ತಂಪ್ಪಪ್ಪು ಪೆಟ್ಟಿಗೆ ಇಲ್ಯಲಿ. ಅದಕಾಗೆಯ ನಿಮಗೆ ಹೆರಗಿಂದ ಬಂದಕೂಡ್ಲೆಯ ಆಸ್ರಿಗೆ ತಂಪು ನೀರ ಕೊಡ್ವೋ ಹೇಳಿ ತೆಕಂಬಂದೆ. ದಾರಿಲಿ ಯೆಂಕಕ್ಕ ಶಿಕ್ಕಂಡು ಮಾತಾಡ್ತ್ನಾ ನಿತ್ಕಂಬುಡ್ತು. ಅದಕೆ ಬಗೆಲಿ ತಡ ಆಗೋತು. ಯಾರ ಹತ್ರ ಮಾತಾಡ್ತಿದ್ರಿ? ಯಾರೋ ಬಂಜ್ವನೋ ಹೇಳ ಮಾಡ್ಕಂಡೆ ನಿಮ್ಮ ಮಾತ ಕೇಳ್ಕಂಡು. ಅದಕೆ ಬೇಗ ಬೇಗ ಓಡ ಬಂದೆ.

ಮಾಸ್ತರ;- ಪುಣ್ಯಕೆ ಬಿದ್ದವಂದ ಹೋಜಿಲ್ಲೆ.(ಸಭಿಕರನ್ನು ತೋರಿಸುತ್ತಾ) ಇಷ್ಟೊಂದು ಎದುರಿಗೆ ಇದ್ದೊ ಯಾರಹತ್ರ ಮಾತಾಡ್ತಿದ್ದೆ ಕೇಳತ್ಯಲೇ. ಅವೂ ಜನಾನೆಯಾ.

ಮಾ. ಹೆಂ.;-ಆತು, ನಿಂಗ್ಳಹತ್ರಾನೂ ತನ್ನ ಪುರಾಣ ಬಿಚ್ಚಬುಟ್ರಾ? ಎಷ್ಟುಸಲ ಹೇಳ್ದೆ, ಆ ಊರುಉಸಾಬರಿ ಎಲ್ಲಾ ಬಿಟ್ಟ್ಹಾಕಿ. ವಯಸ್ಸಾತು, ಮೊದಲಿಕ್ಕಣ ಹಾಂಗೆ ಆಗ್ತಿಲ್ಲೆ. ಜನಾನು ಈಗ ಬದಲಾಗ್ತೊ, ಮೊದಲಿನಹಾಂಗೆ ಇತ್ರ್ವಿಲ್ಲೆ. ನೀವೊಂದು ಭೋಳೆ ಶಂಕರ ಬೆಳ್ಳಗಿದ್ದದ್ದೆಲ್ಲ ಹಾಲು ಹೇಳಿ ತೆಳಕಂಬುಡ್ತ್ರಿ. ಸಾಕು ಮನೆಲೆಯಾ ಶಿವಾ ರಾಮ ಹೇಳಿ ಇದ್ಬುಡಿ ಹೇಳ್ದೆ.

ಮಾಸ್ತರರು;- ಶಿವಾ ರಾಮ ಹೇಳ್ತ ಕೂತ್ಕಂಬುಲೆ ನಾ ಸನ್ಯಾಸಿ ಅಲ್ದೆ ಮತೆ! ಶಿವಾರಾಮ ಹೇಳ್ತ ಕೂತ್ಕಳವಡಾ, ನಾಕ ಜನಕ್ಕೆ ಉಪಕಾರ ಮಾಡುದ ಬಿಟ್ಟಕಂಡಿ. ಈಗ ಹಾಂಗ ಹೇಳ್ತ ಕೂತ್ಕಂಡವ್ಕೆ ಬೇಡಾಜು ನಿನಗದೆಲ್ಲಾ ತೆಳಿಯಾ ಬಿಡು.

ಮಾ ಹೆಂ.;-(ಸಭಿಕರನ್ನುದ್ದೇಶಿಸಿ) ಅಲ್ಲಾ ಸುಳ್ಳಹೇಳ್ತ್ನಿಲ್ಲೆ. ಇವರಹತ್ರ ಕಲ್ತ ಮಕ್ಕೊ ಎಲ್ಲ ಚೊಲೋ ಆಜೊ. ಎಂಥೆಂಥ ದೊಡ್ಡ ದೊಡ್ಡ ಹುದ್ದೆಲಿದ್ದೊ ಗುತ್ತಿದ್ದಾ? ನಂಗೋಕೆ ಸರಕಾರಿ ಕೆಲಸಾಗಲಿ ಖಾಸಗಿ ಕೆಲಸಾಗಲಿ ಯಾವ ಕೆಲಸಕ್ಕೂವಾ ಇನ್ನೂ ವರೆಗೂವ ಯಾವ ತೊಂದರೇನೂ ಆಜಿಲ್ಲೆ. ಬಡಬಗ್ಗರಿಗಂತಿರೆ ಅವರ ಕೊಟ್ಟ ಚೀಟಿ ತೋರ್ಸಿದ್ರೆ ಸಾಕು ಬೇಗ ಬೇಗ ಕೆಲಸಾನೂ ಮಾಡ್ಕೊಡ್ತೊ ಬೇರೆ ರಿಯಾಯ್ತಿನೂ ಕೊಡ್ತೊ. ಇವರು ಶಿಫಾರಸ್ ಮಾಡ್ರೆ. ಅಷ್ಟು ಗುರು ಭಕ್ತಿ ಗೌರವ, ಆಡದ ಮಾತಾ ತೆಗದಹಾಕ್ತ್ವಿಲ್ಲೆ.

ಮಾಸ್ತರ;- ನಿನ್ನ ಬಾಯಿಂದಲೆ ಎಲ್ಲಾ ಬಂತು ನೋಡು. ಮನೇಲೇ ಕೂತ್ಕಂಡ್ರೆ ಹಿಂಗಿದ್ದೆಲ್ಲಾ ಕೆಲ್ಸಾ ಮಾಡುಲೆ ಆಗ್ತಿಲ್ಲೆ. ಹೆರಬದಿಗೆ ಹೋಗಿ ಮಾತುಕತೆ ಆಡಕಾಗ್ತು ಹೇಳಿ ಕೇಳಿ ಮಾಡಕಾಗ್ತು. ಹೆಂಗ್ಸರ ಹತ್ರ ಗಂಡ್ಸರ ಹತ್ರ ಎಲ್ಲಾ ಮಾತಾಡಕಾಗ್ತು.

ಮಾ ಹೆಂ.;-ಅಲ್ದ್ರೊ ಆ ಸತೀಶ ಡಾಕ್ಟರಿಗೆ ವೆಂಕಪ್ಪ ವಕೀಲಂಗೆ ಏನೋ ಬಿಗಡಾಯಿಸಿದ್ದಡಾ. ಮೂವತ್ತಾರ ಅಂಕೆ ಆಜಡಾ ಹೌದಾ?

ಮಾಸ್ತರ;- ಎಂತಾ ಮೂವತ್ತಾರು ಅರವತ್ಮೂರೇ. ಆ ವಿಷಯ ನಂಗೆತದು ಸರಿಗುತ್ತಿಲ್ಲೆ. ನಿಂಗೆ ಹೇಂಗೆ ಗುತ್ತಾತು?

ಮಾ. ಹೆಂ.;-ನೀರಿಗೆ ಹೋದಾಗ ಯೆಂಕಕ್ಕ ಶಿಕ್ಕಿತ್ತು ಹೇಳಿದ್ನಿಲ್ಯಾ, ಅದ ಏನೇನೋ ಹೇಳ್ದಾಂಗ ಮಾಡ್ತು ಸರಿ ತೆಳಿಜಿಲ್ಲೆ, ನಿಮಗೆನಾರು ಗುತ್ತಿದ್ದೊ ಹೇಳಿ ಕೇಳ್ದೆ ಅಷ್ಟೇಯಾ.

ಮಾಸ್ತರ;-ಇಲ್ಯೆ ಮಾರಾಯ್ತಿ, ನಂಗೆಂತದು ಗುತ್ತಿಲ್ಲೆ. ನೀ ಹೋಗು ಬಾಳೆ ಗೀಳೆ ಹಾಕಿ ಊಟದ ತಯಾರಿ ಮಾಡು. ಬಡ್ಸು. ಎರಡಚಂಬ ಹೊಯ್ಕಂಡು ಬಂದೆ ನಾನು. ಹೌದನೆ, ಕಡೆಗೆ ಆಚಾರಿ ಬೇರೆ ವನಕೆಬುರ್ಡೆ ಕೆತ್ಕಂಡು ತೆಕಂಬಜ್ನನೆ?

ಹಂಡೆಲಿ ಬಿಸಿನೀರು ಇದ್ದು ಅಲ್ದಾ?

ಮಾ.ಹೆಂ.:-ಹೌದು. ಆಚಾರಿ ವನಕೆಬುರ್ಡೆ ತಂದಕೊಟ್ಟಿದ್ದಾ. ದಳ್ಳೆಲಿ ತಣ್ಣೀರು ತುಂಬಕಂಡಿದ್ದು. ಹಂಡೇಲಿ ಬಿಸಿ ಬಿಸಿ ನೀರ ಕಾದ್ಕಂಡಿದ್ದು. ಕೈ ಹಾಕಬುಡಡಿ ಮತೆ. ಕೈ ಸುಟ್ಕಂಬುಡುವ್ರಿ. ಬೆರ್ಸ್ಕಂಡು ಮಿಂದ್ಕಳಿ. ಅಷ್ಟು ನೀರ ಖಾಲಿ ಮಾಡಡಿ. ನಿಮಗೆ ಪ್ರೀತಿಯಾದ ರುಚಿ ರುಚಿ ಮಾವ್ನಕಾಯಗೊಜ್ಜು ಕೊರ್ಸಗಾಯಿ ತಂಬಳಿ ಮಾಡಿದ್ದೆ. ಬೇಗ ಬನಿ.

(ಮಾ. ಹೆಂ. ಒಳಗೆ ಹೋಗುವಳು. ಮಾಸ್ತರರು ಸಭೆಯನ್ನುದ್ದೇಶಿಸಿ)

ಮಾಸ್ತರ;-ಈ ಹೆಂಗಸರಿಗೆ ಇಷ್ಟ ವಿಷಯ ಸಿಕ್ಕದರೆ ಸಾಕು. ಅದು ಪೂರ್ತಿ ಗುತ್ತಪ್ಪಲ್ಲಿ ವರೆಗೆ ಬಿಡ್ತ್ವಿಲ್ಲೆ. (ಒಳಗೆ ಹೋಗುವರು.)

ದೃಶ್ಯ

(ಊರಿನ ವ್ಯಕ್ತಿ`ಗಂಡ’ ಕೂತ್ಕಂಡು ಪೇಪರ್ ಓದ್ತಿರ್ತಾ. ಹೆಂಡತಿ ಏನೋ ಗುನು ಗುನಾಯಿಸ್ಕತ್ನೆ ಬತ್ತು)

‘ಕರಿಗೆಂಚಿನ ಸಿರಿಮುಡಿಗೆ ಬಿಳಿ ಮಿಂಚಿನ ಮಲ್ಲಿಗೆ ಮುಡಿಯುತ್ತ ನಡೆದಿಹಳು ನಲ್ಲನೆಡೆಗೆ’

ಗಂಡ;-ಏನು ಒಳ್ಳೆ ಪದ ಗಿದ ಹೇಳ್ತ ಜೋರಪ; ಕೈ ಗುಣ ಆಜು ಹಾಂಗ್ ಕಾಣ್ತು. ಅಲ್ದೆ; ಕಡೆಗೆ ಮತ್ತೊಂದ್ಸಲ ನಿನ್ನೆಯಾ ಡಾ! ಹತ್ರ ಹೋಗ ಬಂದ್ಯನೆ? ಡಾ! ಯೆಂತಾಂದ್ರು? ಈಗ ನಿನಗೆ ಹೇಂಗಿದ್ದು? ಕಡೆಗೆ, ಆರಾಮಿಲ್ಲೆ ಹೇಳಿ ಡಾ! ಹತ್ರ ಹೋಗ ಬಂದ್ರೂ ಒಂದ್ ಮಾತ ಕೇಳಿದ್ರಿಲ್ಲೆ ಹೇಂಗಿದ್ದು ಹೇಳಿ. ತನ್ಮೇಲೆ ಕಾಳ್ಜಿನೇ ಇಲ್ಲೆ. ಪ್ರೀತ್ಯಂತಿರೆ ಮೊದಲಿಲ್ಲೆ. ಹೇಳಡಾ!. ಔಷಧ ಎಲ್ಲ ಸರಿಯಾಗಿ ತೆಕೊ ಮಾರಾಯ್ತಿ

ಹೆಂಡತಿ;-ಅಬಬಬಬಾ ಒಂದೇ ಉಸುರಿಗೆ ಅದೆಷ್ಟ ಪ್ರಶ್ನೆ ಕೇಳತ್ರಪಾ? ಡಾ! ಇದ್ದಲ್ಲಿ ಹೋಗಿದ್ದೆ. ಡಾ! ತಪಾಸಮಾಡಿ ಔಷಧಿನೂ ಕೊಟ್ಟಿದ್ರು. ನಾನೂ ಔಷಧಿಯಾ ತೆಕತ್ತಿದ್ದೆ. ಆತಾ. ಆದರೆ ಒಂದು ಮಾತ್ರ ನಂಗೆ ತೆಳಿಜಿಲ್ಲೆ

ಗಂಡ;- ಹಾಂಗಂದ್ರೆ?

ಹೆಂಡತಿ;- ಡಾ! ಬಗೆಲಿ ಯಾವಗಣ್ಣ ಹಾಂಗೆ ಕಂಡಿದ್ರಿಲ್ಲೆ. ಮೊಕಾ ಗಂಟಹಾಯ್ಕಂಡು ಬಿಗಿಬಿಗಿಯಾಗಿ ಮಾತಾಡದ್ರು.

ಗಂಡ;- ಮಾತ್ನಲ್ಲಿ ಎಂತಾ ಬಿಗಿ ಜಳ್ಳೆನೇ? ನೀ ಎಂತಾ ಮೊದಾಲ್ನೆ ಸಲ ಹೋಗತ್ಯನೆ ಔಷಧಿಗೆ?

ಹೆಂಡತಿ;-ಹಾಂಗಲ್ಲ ಎಂತಾ ಅಂದ್ರು ಗುತ್ತಿದ್ದಾ? ‘ನಾ ಹೇಳ್ದ ಔಷಧಿ ಗುಳಿಗೆ ಎಲ್ಲಾ ಸರಿಯಾಗಿ ತೆಕಳವು. ಪಥ್ಯಾನೂ ಸರಿಯಾಗೆ ಮಾಡವು. ಬೇರೆ ಯಾವದೇ ಔಷಧಿ ಆಹಾರ ತಿಂಬುಲಿಲ್ಲೆ. ಬೇರೆ ಡಾಕ್ಟರ ಹತ್ರ ಹೋಪುಲಿಲ್ಲೆ. ಬಗ್ಗೆಲ್ ಏನಾದ್ರು ತ್ರಾಸ-ಗೀಸಾದ್ರುವಾ ಆ ಕ್ಷಣ ಬಂದು ಹೇಳವು, ತೆಳತ್ತ. ಕಡೆಗೆ ನನ್ನ ಹೆಸರ ಹಾಳ್ಮಾಡ್ತಾ ತಿರ್ಗಡಿ ‘ ಅಂದ್ರು

ಗಂಡ;- ಅದಕೆ ನೀ ಎಂತಾ ಅಂದೆ?

ಹೆಂಡತಿ;- ನಾನು ಎಂತದೂ ಹೇಳಿದ್ನಿಲ್ಲೆ. ತುಸು ಬೇಜಾರ ಆತು. ಏನಾರು ಕೇಳ್ವನೋ ನೋಡ್ದೆ, ಅದೆ ಕೈ ನೋವಾತಲಿ ಬೇರೆ ಕೆಲ್ಶಿಯಮ್ ಅಥವಾ ಟೊನಿಕ್ನ ಗುಳಿಗೆ ಏನಾರು ತೆಕಂಬುಲೆ ಶುರುಮಾಡವೋ ಹೇಳಿ. ಆದರೆ ಕೇಳುದು ಬೇಡ ಕಂಡೋತು. ಅವರ ಹೆಂಡತಿ ನನ್ನ ಅಪ್ಪನ ಮನೆ ಊರಿಂದೆಯಾ ಅದರ ಮಾತಾಡ್ಸುಲೆ ಯಾವಾಗಾದ್ರು ಹೋದಾಗ ಕೇಳ್ವ ಅಂದ್ಕಂಡೆ. ನಂಗೂ ಜ್ವರನೂ ಬಂದಿತ್ತಲಿ ಸುಸ್ತಾಗಿತ್ತು. ಮನೆಗೆ ಬಂದ್ರೆ ಸಾಕಾಗಿತ್ತು. ಬಂದ್ಬುಟೆ.

ಗಂಡ;-ಚೊಲೋ ಕೆಲ್ಸ ಮಾಡ್ದೆ. ಎಂತದೂ ಮಾತಾಡಿದ್ದಿಲ್ಲೆ ಹೌದೊ ಅಲ್ದೊ?

ಹೆಂಡತಿ;-ಅದೆಂತ ಹಾಂಗ ಉಗ್ಸ ಉಗ್ಸಕಂಡು ಮಾತಾಡತ್ರಿ? ಡಾ! ಎಲ್ಲಾದ್ರು ಸಿಕ್ಕಿದ್ರಾಗಿತ್ತೊ ಹೇಂಗೆ? ಏನಾದ್ರು ಹೇಳೀದ್ರೊ ಹೆಂಗೆ?

ಗಂಡ;-ಇಲ್ಯೆ ಮಾರಾಯ್ತಿ.

ಹೆಂಡತಿ;- ಮತ್ತ್ಯಾರ ಹತ್ರ ಹೋಗಿದ್ರಿ?

ಗಂಡ;- ಥತ್, ನಿನ್ನ ಸಂಶಯಕ್ಕಿಷ್ಟ ಹೇಳತಿದೆ ಬೇಡ ತಂದು. ನಾನು ನಮ್ಮ ವಕೀಲ ವೆಂಕಪ್ಪನ ಬಳಿಗೆ ಹೋಗಿದ್ದೆ.

ಹೆಂಡತಿ;- ಅಥೊ; ನಾ ಆರಾಮಿಲ್ಲೆ ಹೇಳಿ ಡಾ! ಹತ್ರ ಹೋದ್ರೆ ನೀವು ವಕೀಲನ ಬಳಿಗೆ ಹೋಗಿದ್ರಾ? ಎಂತಾ ಸೋಡಚೀಟ್ ತೆಕಂಬುಲಾ?(ನಗುವಳು)

ಗಂಡ;-(ವ್ಯಂಗ್ಯ ನಗು ಬೀರಿ) ನಿನಗಂತು ಬಿಡು, ಹಾಂಗಿದ್ದೆ ಮಳ್ಳ ಮಳ್ಳ ಸೂಚಸ್ತು. ನಿನ್ನ ಮಗನ ಡಾ! ಮಾಡ್ಸವು ಹೇಳಿ ಕೊಣಿತಿದ್ಯಲೆ, ಕಲಿಸುದಕ್ಕೆ ದುಡ್ಡ ಬೇಡ್ದಾ? ಅದಕೆ ಯಾವುದಾದ್ರು ಒಂದ ಸಣ್ಣ ಜಮೀನ ಮಾರಾಟ ಮಾಡ್ವೋ ಹೇಳಿ ವಿಚಾರ ಬಂತು ಅದಕೆ ರಿಕಾರ್ಡ ಉತಾರ ತೆಗೆಸಿ ನೋಡ್ವೋ ಹೇಳಿ ಹೋಗಿದ್ದೆ.

ಹೆಂಡತಿ;-ಅರೆ; ಹೌದು ಅಲದಾ ನಂಗೆ ಮರ್ತೇ ಹೋಗಿತ್ತು. ಅವರೆಂತಾ ಅಂದ್ರು ? ಹೋದ ಕೆಲ್ಸ ಆತನು?

ಗಂಡ;-ಅದೆಯಾ ಜಮೀನ ಎಂತಕ್ಕೆ ಮಾರ್ತೆ ಏನು ಎತ್ತ ಕೇಳ್ದರು. ಹೀಂಗ್ ಹೀಂಗೆ ಹೇಳ್ದೆ;

ಹೆಂಡತಿ;- ಅದಕೆಂತಾ ಅಂದರು?

ಗಂಡ;-ನೆಗ್ಯಾಡಕತ್ತೆ ಅಂದರಪಾ, ಡಾಕ್ಟರ್ಕೆ ಕಲಿಸುದಾರೆ ಮಗನ್ನ ಗನಾ ಕೋಲೇಜಿಗೆ ಹಾಕು. ನಮ್ಮೂರ ಸತೀಶ ಡಾ!ಹಾಂಗೆ ಹೆಸರು ಬಕ್ಕು ಕಡೆಗೆ ಅಂದ್ರು. ನಂಗ ತೆಳಿಜಿಲ್ಲೆ ಎಂತಾತು ಕೇಳದೆ, ಅದಕ್ಕವರು `ನಾಕ್ ತಿಂಗಳ ಹಿಂದೆ ಸಣ್ಣತಮ್ಮ ಗೌಡ ಸತ್ತ ಹೋದನಲಿ ಅವನ ಅವ್ವಿ ನಿಂಗಿ ಡಾ! ಮೇಲೆ ಖಟ್ಲೆ ಹಾಕುಲೆ ತಯಾರಿ ಮಾಡ್ತಿದ್ದು ಹೇಳ ಸುದ್ದಿ. ಹೀಂಗೆಲ್ಲಾ ಆಗ್ತು ಮತೆ ಹುಷಾರು’ ಹಾಂಗೆ ಹೀಂಗೆ ಏನೇನೋ ಹೇಳದ್ರಪಾ. ನಂಗೆಂತಕೊ ಅಲ್ಲಿ ವಾತಾವರಣ ಸರಿ ಇದ್ದಹಾಂಗೆ ಕಂಡಿದ್ದಿಲ್ಲೆ ಸುಮ್ಮಂಗೆ ಎಂತದು ಮಾತಾಡದ್ದೆ ಎಂತದು ಕೇಳದ್ದೆ ಬಂದ್ಬುಟೆ.

ಹೆಂಡತಿ;-ಹೌದಾ? ಇರಲಿ ಬಿಡಿ, ದೊಡ್ಡೋರ ಸುದ್ದಿ ನಂಗೋಕೆ ಎಂತಕ್ಕೆ? ಅದೇನೋ ಹೇಳ್ತ್ವಲಿ ಹೇಳ್ದವ್ರ ಪಾಪ ಕೇಳ್ದವ್ರ ಮೇಲೆ ಹೇಳಿ. ಹಾಂಗಕ್ಕು ಕಡೆಗೆ. ಡಾಕ್ಟರಾ ವಕೀಲ ಗೆಳೆಯರಪ್ಪ ಮೂವತ್ತೈದು ಮೂವತ್ತಾರ ವರ್ಷ ಒಟ್ಟಿಗೆ ಇದ್ದೊರಪಾ.

ಗಂಡ;-ಎಂತದೆ ಆಗಲಿ ಮಾಸ್ತರಿಗೆ ಒಂದು ಮಾತ ತೆಳಿಸುದು ಚೊಲೋದು ಕಾಣ್ತು. ಹೊಗಲಿ ಅಡಿಗ್ಯಾಜಾ? ಉಂಬೊ ನೆಡೆ. ಹಶ್ವಾಗ ಸಂಗ್ಟಾ.

ಹೆಂಡತಿ;-ಹೋ! ನಮ್ಮೂರ ಡಾ! ಔಷಧಿ ತೆಕಂಡು ಗುಣ ಅಪ್ಪುಲ್ಹೋಗೆಯಾ ಅಡಿಗೆ ಗಿಡಿಗೆ ಎಲ್ಲ ಮಾಡಿದ್ದೆ ನಡೆರಿ. (ಇಬ್ಬರೂ ಒಳಗೆ ಹೋಗ್ತೊ)

ದೃಶ್ಯ ೩

(ನಿಂಗಿ ಹಾಗೂ ಶಂಕ್ರಿ ಇಬ್ಬರೂ ಒಂದೊಂದು ಬದಿಯಿಂದ ಗೌಡತಿಯರ ಹಾಡು ಹೇಳ್ಕತ್ನೆ ಬತ್ತೊ ಡಿಕ್ಕಿಹೊಡ್ಕತ್ತೊ)

ನಿಂಗಿ;- ಏನೇ ಕನ್ನು ಕಾಂಬುದಿಲ್ವೆ, (ಮುಖ ಎತ್ತಿ ನೋಡಿ)ಅದೆ ಶಂಕ್ರಿ, ನೀನು, ಗೋಲ ಗೋಲ ಸೀರೆ ಉಟ್ಕಂಡಿದ್ಯೆ? ನಿಂಗ್ಯಾರ್ ಹೇಲದ್ರೆ ಗೋಲ ಶೀರೆ ಉಟ್ಕಂಬುಕೆ. ಕೆಲ್ಶ ಮಾಡುಕಾಯ್ತೆ?. ನಿಂಗ ಲಾಯ್ಕ ಕಾಂತದೆ.

ಶಂಕ್ರಿ;-ನಾ ಹೇಲುಕಿಲ್ಲಾ. ಇನ್ನಮ್ಯಾಗೆ ನಾ ಹೀಂಗೆ ಶೀರೆ ಉಟ್ಕಂತಿ. ನಮ್ಮ ವಡತ್ಯೊರೆಲ್ಲ ಉಡವಹಾಂಗೆ. ನಿಂಗೆ ಯಾರ ಹೇಲದ್ರೆ? ಗೇಟಿ ಬಿಚ್ಚಹಾಕುಕೆ. ನೀನೂ ಚೆಂದಕ್ಕಾಣ್ತೀವೆ. ಮಣಿ ಸರ ಎಲ್ಲ ಎಂತ ಮಾಡ್ದ್ಯೆ? ಕೆಲ್ಸಕ್ಕೆ ಹೋಗಿದ್ಯೆ? ನಿಮ್ಮ ವಡತ್ಯೋರು ಏನು ಹೇಳ್ನಿಲ್ವೆ?

ನಿಂಗಿ;- ನಾನು ಎಂತದು ಹೇಲುಕಿಲ್ಲ. ಗೇಟಿ ಬಿಚ್ಚಹಾಕ್ದ ಮ್ಯಾಕೆ ಮಣಿಸರ ಎಂತಕೆ ಹೇಳಿ ಮಣಿಸರ ಎಲ್ಲ ಮಾರಾಟ ಮಾಡ್ಪಿಟ್ಟೆ,

ಶಂಕ್ರಿ;-ಹೌದೆ? ಯಾರಿಗೆ ಮಾರ್ದೆ?

ನಿಂಗಿ;-ಆ ಬೆಲಿ ಬೆಲಿ ಹೆಂಗಸ್ರು ಬಂದಿರಲ್ಲೆ ಇಟಿಟೇ ವಸ್ತ್ರ ಹಾಕಂಡಿ ಬ್ಯಾಲೆ ಮ್ಯಾಗೆ ಮನಿಕಂತ್ರಲೆ ಅವರೆವಾ ತೆಕಂಡ್ರು, ಎಷ್ಟೆಲಾ ದುಡ್ಡು ಕೊಟ್ರು ಗುತ್ತದ್ಯೆ?

ಶಂಕ್ರಿ:- ಯೆಷ್ಟ ದುಡ್ಡ್ ಕೊಟ್ಟಾರ್ಯೆ ನಂಗ್ಹೇಲೇ

ನಿಂಗಿ:-ಬಗೆಲ್ ತಡ್ಕಣೆ; ಹೇಲ್ವಾಗೆ ಬಾಯ್ ಹಾಕ್ ಬ್ಯಾಡಾ ಹೇಲಿನಲೆ. ಕೇಲುಕ್ಕಿಲ್ಲಾ. ನೀ ಮಣಿಸರ ಎಲ್ಲಾ ಎಂತಾ ಮಾಡ್ದೆ? ಯೆಲ್ಲ ಮಡಿಕ್ಕಂಡಿದೆ? ನಂಕೂಡ ಕೊಡು. ಮಾರಾಟ ಮಾಡ್ಶಿಕೊಡ್ತೆ. ಆಗುದೆ?

ಶಂಕ್ರಿ;-ನಾ ಹಾಂಗೆ ಇಟ್ಟವ್ನೆ. ನಿಂಕೂಡ ಕೊಡುಕಿಲ್ಲ. ನಮ್ಮ ವಡೆಯ ಮಾರಾಟ ಮಾಡ್ಶಿ ಕೊಡ್ತೆ ಹೇಲವ್ನೆ.

ನಿಂಗಿ;- ಯಾವ ವಡೆದಿರು? ಆ ವಕೀಲಪ್ಪರೆಯೆ?

ಶಂಕ್ರಿ;-ನಾ ಹೇಲೆ. ಅದ್ಯೆಲ್ಲ ನಿಂಗ್ಯೆಂತಕೆ?

ನಿಂಗಿ;-ಹೋಗ್ಲಿ ಬಿಡು. ಹೇಲುಕಿಲ್ಲಾಂದ್ರೆ ಬ್ಯಾಡ್ವೆ. ನೀ ಈಗೆಲ್ಲ ಹೋತಿದ್ಯೆ ಅದನಾರು ಹೇಲೆ. ಇಬ್ಬರೂ ಒಟ್ಟಿಗೆ ಹೋಗುಕಾಯ್ತದೆ.

ಶಂಕ್ರಿ;- ನೀ ಯಾರ್ಕೂಡು ಹೇಲುಕಿಲ್ಲಾ, ಅಂದ್ರ ಮಾತ್ರ ಹೇಲ್ವೆ.

ನಿಂಗಿ ;-ಇಶಿಶಿ ನಾ ಯಾರ್ಕುಡು ಹೇಲುದಿಲ್ವೆ. ಕೆಮೀಲ್ ಹೇಲು.

ಶಂಕ್ರಿ:-ನಿಮ್ಮ ಅತ್ಗಿಕೂಡು ಹೇಲುದಿಲ್ವಲೆ, ಖರೆ ಹೇಲು.

ನಿಂಗಿ:- ನಿನ್ನಾನ್ಯಾಗು ಯಾರ್ಕೂಡು ಹೇಲುದಿಲ್ವೆ ಅದಕೆ ಕೆಮಿಲ್ ಹೇಲು ಅಂದನಲೆ.

(ಶಂಕ್ರಿ, ನಿಂಗಿ ಕಿವಿಲಿ ಹಗುರಕ್ಕೆ ಸಣ್ಣಕ್ಕೆ ಎಂತದೊ ಹೇಳ್ತು)

ನಿಂಗಿ;- ಹೌದೆನೆ? ನಮ್ಮ ಬದಿ ಮನೆ ವಡತ್ಯೆರುವಾ ಹೋತ್ರು ಹೇಲ ಕೇಲಿದ್ದೆ. ಇಂತಲ್ಲದೆ ಇಂತಲ್ಲೇ ಹೋತ್ರು ಹೇಲ ಗುತ್ತಿನಾಗಿತ್ತು. ನಾನು ನೋಡ್ಕಂತೆ. ಮೊಕಕ್ಕೆಲ್ಲಾ ಎಂತದೆಲಾ ಬಡ್ಕಂತ್ರಂತಪ. ಬೆಳೀಕಾತದಂತೆ. ಹುಬ್ಬನೂವ ಹ್ಯಾಂಗ್ ಹ್ಯಾಂಗೋ ಕೆತ್ಕಂತ್ರಂತೆ. ಚೆಂದಕಾತದಂತೆ. ಅವರ ಗೆಳತ್ಯರ ಕೂಡೆ ಮಾತಾಡದ್ದ ಬಗಬಗೀನೆ ಕೇಲಿದ್ನೆ. ಈಗ ನೋಡುಕಾಯ್ತು ನೆಡೆ ಹೋಗ್ವ.

ಶಂಕ್ರಿ;-ಯೆ ನಿಂಗೆಲ್ಲ ಗುತ್ತೀತೆ? ದೊಡ್ಡಕೆ ಹೇಲಬ್ಯಾಡ ಹೇಲಿನಲೆ?

ನಿಂಗಿ;-ಯೆಲ್ವೆ, ಇಲ್ಯಾರು ಇಲ್ಲವಲೆ, ಯಾರಿಗೂ ಕೇಳ್ನಿಲ್ಲವೆ. ನಡೆ ಹೋಗ್ವಾ.

(ಇಬ್ಬರೂ ಒಳಗೆ ಹೋಗ್ತೊ)

ದೃಶ್ಯ ೪

ಮಾಸ್ತರ;-ಅವನೂ ಬಂದ ಹೇಳ್ದ. ಇವನೂ ಬಂದ ಹೇಳ್ದ. ಈ ಸುದ್ದಿ ಖರೆಯಾ ಹೇಳಿ ಖಾತ್ರಿ ಆತು. ಸತೀಶ ಮತ್ತೆ ವೆಂಕಪ್ಪ ಇವರಿಬ್ಬರಲ್ಲು ಮನಸ್ತಾಪ ಹೇಂಗ ಆತು. ಆಗದ್ದಂತಿರೆ ಹೌದು ಹೇಳಾತು. ನಮ್ಮನೆ ಪ್ರಾಣಿಗೂ ಅದ್ಯಾರೋ ಹೇಳಿದ್ದೊ ಹೇಳ್ತಿತ್ತಲಿ. ಈ ವೆಂಕಪ್ಪ ಸತೀಶ ಅಂಥ ಹರಕ ಕೆಮಿಯವಲ್ದಪಾ. ಇರಲಿ; ಇಬ್ಬರ ಮನೆಲು ಕೆಲಸ ಮಾಡೊ ಆಳ್ಗೋಕೆ ಹೇಳ್ಕಳ್ಸಾಜು. ಇಷ್ಟರಲ್ಲೆ ಬಕ್ಕು ನೋಡ್ವ. ಏನಾರು ಹರ್ಗಡಿಸುಲಾಗ್ತೋ ಬಗೆಹರಿತೊ ಹೇಳಿ.

ನಿಂಗಿ;-(ಪ್ರವೇಶಿಸುತ್ತ)ಒಡೆಯ ಅಡ್ಡಬಿದ್ದೆ. ನೀವು ಎಂತಕೊ ಬರಕಂತ ಹೇಳಿದ್ರಂತೆ. ಎಂತಾಯ್ತು ಒಡೆಯ.

ಮಾಸ್ತರ;-ಹ್ಞೂಂ. ನಿಂಗಿ ನೀನು ಯಾರ ಮನೆಗೆ ಕೆಲಸಕ್ಕೆ ಹೋತ್ಯೆ?

ನಿಂಗಿ;-ಡಾಗ್ದರರ ಮನಿಗೆ. ಗುತ್ತಾಯ್ತು ಬಿಡಿ ಒಡೆಯ, ನಂತ್ಯಪ್ಪಾಯ್ತು (ಅಳುತ್ತ) ನಮ್ಮ ಡಾ! ದ್ಯಾವರಂಥ ಮನುಸ್ರು. ನಾನು ಆ ವಡ್ಯನ ಮಾತ ಕೇಲಿ ತ್ಯಪ್ಪ ಮಾಡ್ದೆ.

ಮಾಸ್ತರು;-ನಾನು ಎಂತದು ಹೇಳಲಿಲ್ಲ ಕೇಳಲಿಲ್ಲ ನೀ ಎಂತ ತಪ್ಪ ಮಾಡದ್ಯೆ?

ನಿಂಗಿ;-ಹೌದು, ಆ ವಡೆಯ ಒಂದಿವ್ಸ ಕರ್ದ,’ ನಿಂಗಿ ನಿನ್ನ ಮಗ ಹೋದವಂತು ಹೋದ ನಿಂಗೆ ಜೀವನಕೆ ನೀ ದುಡಿದದ್ದು ಎಷ್ಟ ಸಾಕತದೆ? ಗಂಡನೂ ಕುಡ್ಕನೆಯಾ. ನಿಂಗೂ ಚೆಂದಾಕಿರ್ಬೇಕು ಹೇಳಿ ಕಾಂಬುದಿಲವೆ? ನನ್ನ ಹೆನ್ತಿನೂವಾ ಚಿನ್ನದ ದಾಗಿಣಿ ಬೇಕು ಹೇಲಿ ಹಟಾ ಹಿಡ್ಕಂಡದೆ. ನಿಮಗಿಬ್ಬರಿಗೂವಾ ಚಿನ್ನದ ಶರ ಮಾಡ್ಸುಕಾತದೆ. ನೀ ಒಂದ ಕೆಲ್ಸ ಮಾಡು. ಡಾ! ಅಪ್ಪನ ತಪ್ಪನಿಂದ ನಿನ್ನ ಮಗ ಶತ್ತ ಹೇಲಿ ಫಿರ್ಯಾದಿ ಕೊಡು. ಮುಂದಿನ ಖಟ್ಲೆ ಗಿಟ್ಲೆ ಯೆಲ್ಲ ನಾನೋಡ್ಕಂತೆ.’ ಅಂದ.

ಮಾಸ್ತರ;-(ತುಸು ಕೋಪದಿಂದ)ಅಂವ ಹೇಳ್ದ ನೀ ಕೇಳ್ದೆ ಅಲ್ವೆ? ಖರೆ ಹೇಳು ನಿನ್ನ ಗಂಡ ಸತ್ತದ್ದು ಹೇಂಗೆ ಹೇಳಿ.

ನಿಂಗಿ;-ವಡೆಯಾ; ಕುಡುಕ್ ಮಗ ಇನ್ಹೆಂಗ ಸಾಯ್ತಾ? ಡಾ! ಕೊಟ್ಟ ಬಾಟ್ಲಿ ಮದ್ನೆಲ್ಲವಾ ಗಟ ಗಟ ಕುಡಿತಿದ್ದಾ ಗುಲ್ಗಿಯೆಲ್ಲ ಹಾಸ್ಗೆ ಕೆಲ್ಗೆ ಹಾಕಿಡ್ತಿದ್ದ. ನಾ ಕೆಲ್ಸ ಹೋತಿನಲ್ರ್ಯಾ, ಗುಲ್ಗೆ ತೆಕಂಡೀವೆ ಹೇಲಿ ಸುಲ್ಲ ಹೇಲ್ತಿದ್ದ. ನಂಗೆ ಯೆಂತದೂ ಗುತ್ತಾನಿಲ್ಲಾ. ಸತ್ತ ಮ್ಯಾಕೆ ಹಸೆತೆಗ್ದಾಗ ಗುತ್ತಾಯ್ತು, ಅದರಡಿಲಿ ಇಷ್ಟ ಗುಲಿಗೆ ಬಿದ್ದಿತ್ತು. ಡಾ! ವಡೆಯಂದು ಯೆಂತದು ತಪ್ಪಿಲ್ಲಾ. ದುಡ್ಡನ ಆಶೆಗೆ ಬಿದ್ದು ತ್ಯಪ್ಪ ಮಾಡ್ದೆ ವಡೆಯ. ಖಟ್ಲೆ ಗಿಟ್ಲೆ ಹಾಕೂಕೆ ಆ ವಡಯ್ನೇ ಹೇಲ್ದ ಏನೇನೋ ಹೆಬ್ಬಟ್ಟನ ಶಪ್ಪೆನೂ ಒತ್ತಸ್ಕಂಡವ್ನೆ.

(ಜೋರಾಗಿ ಅಳುವಳು)

ಶಂಕ್ರಿ;-(ಪ್ರವೇಶಿಸುತ್ತಾ ಮಾಸ್ತರ ಕಾಲಿಗೆ ಬೀಳುತ್ತ ಅಳುತ್ತ ಹೇಳುವಳು)ಒಡೆಯಾ ನಂದೂ ತಪ್ಪಾಯ್ತು ವಡೆಯಾ; ನಿಂಗಿ ನೋಡುತ್ಲೆ ನಂಗೂನು ಗುತ್ತಾಗೋಯ್ತು ನಾನೂ ತಪ್ಪಮಾಡ್ದೆ ಹೇಲಿ.

ಮಾಸ್ತರ;-ನೀ ಯೆಂತಕ್ಕೆ ತೀಡ್ತ್ಯೆ? ನೀಯೆಂತ ತಪ್ಪ ಮಾಡ್ದ್ಯೆ? ನಾ ಬರೀ ಬರೂಕೆ ಹೇಳಿದ್ದೆ

ಶಂಕ್ರಿ;-(ಅಳುವ ಧ್ವನಿಯಲ್ಲಿ)ಹೌದು ವಡೆಯ ಆ ಒಡೆಯ ನಂಕೂಡೂವಾ ‘ಶಂಕ್ರಿ ಎಷ್ಟ ವರ್ಷದಿಂದ ನೀನು ಇಲ್ಲಿ ಕೆಲ್ಸ ಮಾಡ್ತಿದ್ಯಲೆ ಒಂದು ಚಿನ್ನನೂ ಮಾಡ್ಸಕಲಿಲ್ಲ. ದುಡ್ಡ ಬೇಕೇ ನಿಂಗೆ, ಒಂದು ಕೆಲ್ಸ ಮಾಡು, ಸತೀಶ ಡಾ! ಹೆಂಡರ ಕೂಡೆ ಇಷ್ಟ ಹೇಳು. ಒಡತಿ ನಿಮ್ಮೆಜಮಾನ್ರು ನಿಂಗಿ ಮಗ ಸಣ್ಣ ತಮ್ಮನ್ನ ಕೊಂದ ಹಾಕಿರು ಹೇಲಿ ಜನ ಆಡ್ಕಂತವ್ರೆ. ನಿಂಗಿನೂವಾ ಡಾ! ಮ್ಯಾಗೆ ಖಟ್ಲೆ ಬಿಟ್ಲೆ ಹಾಕೂಕೆ ಕುಂತದೆ. ವಕೀಲಪ್ಪನ ಮನೆಗೆ ಅದ ಬಂದದ್ದ ನಾ ಕಣ್ಣಾರೆ ಕಂಡವ್ನೆ’ ಹೀಂಗ ಹೇಲು. ಅವರು ಹೆದ್ರಕಂಡು ಮರ್ಯಾದಿ ಪ್ರಸ್ನೆ ಯಾರಿಗೂ ಹೇಲ್ಬೇಡ ಹೇಲಿ ದುಡ್ಡು-ಕಾಸು ಕೊಡ್ತ್ರು. ಮತ್ತೆ ಈ ವ್ಯಾಜ್ಯ ಗೆದ್ದ ಮ್ಯಾಕೆ ಬಸ್ಬಸಿ ದುಡ್ಡ ಬತ್ತದೆ ಅದರಾಗೂ ನಿಂಗೆ ಪಾಲ ಕೊಡ್ತೆ’ ಹಾಂಗೆ ಹೀಂಗೆ ಅಂದ. ಆ ಒಡೆಯ್ನ ಮಾತ ಕೇಲಿ ದುಡ್ಡನ ಆಶೆಗೆ ನಾನು ಶಗನಿ ತಿಂಬು ಕೆಲ್ಸ ಮಾಡ್ಬುಟೆ. ತಪ್ಪಾಯ್ತು ವಡ್ಯಾ ತಪ್ಪಾಯ್ತು.

ನಿಂಗಿ-ಶಂಕ್ರಿ ;- (ಇಬ್ಬರು)ಚಿನ್ನದಂಥ ಊರಿಗೆ ಚೂರಿ ಇಕ್ಕು ಬುದ್ದಿ ಹೇಳಕೊಟ್ಟ ಆ ಒಡೆಯ.

ಮಾಸ್ತರ;-ಅಲ್ಲ, ಆವಾಗಿಂದವಾ ಆ ಒಡೆಯ ಆ ಒಡೆಯ ಹೇಳ್ತಿದ್ರಲೆ, ಅಂವ ಯಾರು ಹೇಳಿ ಹೇಳುದೇ ಇಲ್ಲವಲೆ. ಯಾರು ವಕೀಲ ವೆಂಕಪ್ಪನೇ ಹೀಂಗೆಲ್ಲಾ ಹೇಳು ಹೇಳ್ದಂವಾ?

ಶಂಕ್ರಿ;- ಅಲ್ಲಾ ಒಡೆಯ ,ಆ ವಡಿದಿರು ಗನಾವ್ರು.

ಮಾಸ್ತರ;-ಹಂಗರೆ ಮತ್ತ್ಯಾವ ವಡೆಯ್ನೆ?

ನಿಂಗಿ;-ಸೌದಿ ಅಪ್ಪ,

ಮಾಸ್ತರ;- ಹಾಂಗದ್ರೆ ಯಾರೆ?

ಶಂಕ್ರಿ;-ವಕೀಲ ವಡೆಯ, ಕೆಲ್ಸಕ್ಕೆ ಮಡಕ್ಕಂಡಿರಲಾ ಆ ವಡೆಯಾ

ಮಾಸ್ತರ;-ಹಾಂ! ಅವ್ನಾ? ಆ ಸತ್ತಂವಾ ಮಗನ್ನ ಯೆಲ್ಲೋ ಕಳ್ಸ್ಕಂಡು ಸೌದಿ ಅರೆಬಿಯಾಕ್ಕೆ ಕಳ್ಸಿದ್ದೆ ಹೇಳ್ತ ತಿರಗ್ತಾ. ತಡೆರಿ ಅವ್ನೆ ಸೌದಿ ಒಡುಲೆ ಕಳ್ಸವೊ.

(ಯೆಲ್ಲರೂ ಮುಂದೆ ಬಂದು ಹೇಳ್ತೊ)

ಹೌದು ಅವನೇ ಇವರ ತಲೆ ಕೆಡ್ಸಿ ಏನೇನೋ ಹೇಳಕೊಟ್ಟು ತಲೆ ತಿರಗ್ಸಿದ್ದಾ. ನಂಗೋನು ಪತ್ತೆ ಹಚ್ಚಿದ್ದೊ.

ಮಾಸ್ತರ;-ಹೌದಾ! ನಮ್ಮೂರ ಜನರಲ್ಲಿ ಸಂಶಯದ ಹುಳ ಹೊಕ್ಕಿ ಅಚಗೆ ಮೂರು ಇಚಗೆ ಆರು ಅಚಗೆ ಆರು ಇಚಗೆಮೂರು ಮಾಡಿ ಮೂವತ್ತಾರಾಗ್ತಿದ್ದ ನಮ್ಮ ಊರನ್ನ ಒಟ್ಟಗೂಡ್ಸಿ ಅರವತ್ಮೂರ ಮಾಡುಲೆ ದಾರಿ ಕಂಡ್ತು ಹೇಳಾತು. ಈಗ ನಮ್ಮೂರ ಒಂದು ಆದರ್ಶ ಗ್ರಾಮ ಹೇಳಿ ನಿಂಗೋನೂವಾ ವಪ್ಪಕಂಡು ಸರಕಾರಕ್ಕೆ ಶಿಫಾರಸ ಮಾಡ್ತ್ರಿ ಅಲ್ದಾ?
ನಮಸ್ಕಾರ.

********