ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಭಾರಿ

ವಾಸುದೇವ ನಾಡಿಗ್
ಇತ್ತೀಚಿನ ಬರಹಗಳು: ವಾಸುದೇವ ನಾಡಿಗ್ (ಎಲ್ಲವನ್ನು ಓದಿ)

ಧನ್ಯವಾದ ಪ್ರಭುವೇ,
ತೆಂಗಿನ ಮರಗಳನ್ನ ಪಾರ್ಥೇನಿಯಂ
ಆಗಲು ಬಿಡಲಿಲ್ಲ
ಗರಿಗಳೆಲ್ಲ ಕಾಲಿಗೆ ತೊಡರಲಿಲ್ಲ
ಸದ್ಯ ನಿಟ್ಟುಸಿರು
ಪಾರ್ಥೇನಿಯಂ ಪೊದೆ
ಗಗನಕೆ ಏರಲಿಲ್ಲ
ತೆಂಗಿನ ಗರಿ
ಬೀದಿಯಲಿ ಹರಡಲಿಲ್ಲ

ಎಷ್ಟು ಕರಾರುವಾಕ್ಕಾದ ವಾಸ್ತು.
ಇದು ಹೀಗೆ ಇದು ಇಲ್ಲೆ
ಇವರು ಇಲ್ಲಿ ಅವರು ಅಲ್ಲಿ
ಅಷ್ಟಷ್ಟಕೆ  ಸಮಾಧಾನ
ಮಿತಿಗಳ ಉಂಗುರ  ಜೀವ
ಬೆರಳುಗಳು, ಕೊರಳಲಿ
ಹಿಗ್ಗಾಮುಗ್ಗಾ ಅಡ್ಡಾಡದ ಹಾಗೆ
ಸರಿ ಸಮ ಸರಪಣಿಗಳು

ಮರಳು ಬಿಸಿಲ ದಿನ್ನೆಗಳಲಿ
ಖರ್ಜೂರ ಒಣ ಹಣ್ಣು
ಮಲೆನಾಡಿನಲಿ ದುಂಡು ಮೊಲ್ಲೆ
ಕೇದಗೆ ಕಂಪಿಗೆ ಮುಳ್ಳು
ಹಲಸಿಗೆ ಬಿಗಿ ಕೋಟೆ
ಮೃದ್ವಂಗಕೆ ಚಿಪ್ಪು,
ಹೃದಯಕೆ ಮೂಳೆ ಕವಾಟ
ಕನಸುಗಳಿಗೆ ಮುಳ್ಳ ಬೇಲಿ

ಎಷ್ಟೊಂದು ನಿಯಮಿತ ಇಲ್ಲಿ
ನಿಯಾಮಕನ ನಿಲುವು
ಬಳ್ಳಿಯ ಸೊಂಟ ನಿಲ್ಲದು
ಮರ ಮೊಣಕಾಲೂರದು
ಜಿಂಕೆಗೆ ಕೋರೆ ಹಲ್ಲ ಭಯ
ಹುಲಿಗೆ ಹುಲ್ಲೆಯ ಹಸಿವು
ಸಿಗದುದರ ಒಣ ದಾಹ
ಸಿಕ್ಕಿದುದರ ಹುಸಿ ವೈರಾಗ್ಯ

ಧನ್ಯವಾದ ಪ್ರಭುವೇ
ಏರಿಳಿತಗಳ ನಡುವೆ
ಜಾರಿಸುವ ಜಾಣ್ಮೆ ಇರಲಿ
ಬಾಳ ಮೊರದಲಿ
ಜಾಲಿಸುತ್ತಲೆ ಇರು
ಕಸ ಕಡ್ಡಿ ಕೀಟ ಧೂಳು
ಹಲ್ಲಿಗೆ ತಾಕದಿರಲಿ

ಸದ್ಯ
ಅಕ್ಕಿಯಲಿ ಕಲ್ಲು ಕಾಣಿಸಿದ ನೆಲ
ಮೊನಚು ತುದಿಯ ಮೊಳೆ ಗಾಜು ಬೆರೆಸಲಿಲ್ಲ