ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಪೇಂದ್ರ ಮತ್ತು ಪ್ರಜಾಕೀಯ-ಭಾಗ ೨

ಉಪೇಂದ್ರ ಮತ್ತು ಪ್ರಜಾಕೀಯ- ವಿವೇಕಾನಂದ ಕೆ.ಎಚ್. ಅವರ ಲೇಖನದ ಭಾಗ-೨
ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)
https://nasuku.com/staging/9334/ಉಪೇಂದ್ರ-ಮತ್ತು-ಪ್ರಜಾಕೀಯ/
ಭಾಗ-೧ ಓದುವುದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಸಿನಿಮಾ ನಟರು ತಮ್ಮ ಜನಪ್ರಿಯತೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹೊಸದೇನು ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇದೆ. ಈಗಾಗಲೇ ಸಾಕಷ್ಟು ಪ್ರಯೋಗಗಳು ನಡೆದಿವೆ. ಹೊಸ ಪ್ರವೇಶಗಳು ಆಗುತ್ತಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ರಾಜ್ಯಾದ್ಯಂತ ರಾಜಕೀಯ ಪ್ರಭಾವ ಬೀರಿರುವ ಸಿನಿಮಾ ನಟರು ಯಾರು ಇಲ್ಲ. ಸ್ಥಳೀಯ ಮತ್ತು ವೈಯಕ್ತಿಕ ಮಟ್ಟದಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ.

ಉಪೇಂದ್ರ ಅವರು ಯಾವುದೇ ಒಂದು ನಿರ್ದಿಷ್ಟ ಸಿದ್ದಾಂತಗಳ ಸುತ್ತ ಅಥವಾ ಒಟ್ಟು ವ್ಯವಸ್ಥೆಯ ಸಮಗ್ರ ಚಿತ್ರಣವನ್ನು ಗ್ರಹಿಸಿ ಮಾತನಾಡುತ್ತಿಲ್ಲ. ಒಂದು ಬಲವಾದ ಸಂಘಟನಾತ್ಮಕ ಅಡಿಪಾಯ ಹಾಕಲು ಪ್ರಯತ್ನಿಸುತ್ತಿಲ್ಲ. ಒಂದು ಸಾಮಾಜಿಕ ಮತ್ತು ರಾಜಕೀಯ ಚಳವಳಿ ರೂಪಿಸುವ ಉದ್ದೇಶವನ್ನು ಹೊಂದಿದಂತೆ ಕಾಣುವುದಿಲ್ಲ.
ಈ ಕ್ಷಣದ ಜನರ ಅಸಹನೀಯತೆಯ ಕಾರಣಗಳಿಗೆ ಧ್ವನಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಬೇರು ಮಟ್ಟದಲ್ಲಿ ಯೋಚಿಸದೆ ಫಾಸ್ಟ್ ಫುಡ್ ಸಂಸ್ಕೃತಿಯ ರೀತಿಯ ಮಾತುಗಳೇ ಜನಪ್ರಿಯತೆ ಗಳಿಸಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕದ ಜನತೆಗೆ ಒಂದು ಪರ್ಯಾಯ ರಾಜಕೀಯ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂಬುದು ಕಂಡುಬರುತ್ತದೆ.

ತಾವು ಹರಿಯ ಬಿಡುವ ಚಿಂತನೆಗಳಿಗೆ ಜನರೇ ಪ್ರಭಾವಿತರಾಗಿ ಮುಂದೆ ಬಂದು ರಾಜಕೀಯ ಬದಲಾವಣೆಗೆ ಕಾರಣವಾಗಲಿ. ಅದು ಜನರ ಲಾಭಕ್ಕಾಗಿ ಇರುವುದರಿಂದ ಅವರೇ ಹೆಚ್ಚು ಆಸಕ್ತಿ ವಹಿಸಲಿ. ನಾನು ಅದಕ್ಕೆ ನಾಯಕತ್ವ ವಹಿಸುತ್ತೇನೆ ಎಂಬ ಮನೋಭಾವ ಅವರ ಮಾತುಗಳಲ್ಲಿ ಕಂಡುಬರುತ್ತದೆ. ಬೀದಿಗಿಳಿದಿ ಹೋರಾಡುವ, ಕೆಲವು ವಿಷಯಗಳಲ್ಲಿ ನೇರ ನಿಷ್ಠುರವಾಗಿ ಮಾತನಾಡುವ, ಹಿರಿಯ ರಾಜಕೀಯ ತಜ್ಞರೊಂದಿಗೆ ಚರ್ಚಿಸುವ, ಮುಂದಿನ ಬದುಕಿನ ಸಂಪೂರ್ಣ ಸಮಯವನ್ನು ರಾಜಕೀಯವಾಗಿ ಕಳೆಯುವ ಸಮಯ ಪ್ರಜ್ಞೆ ಅವರಲ್ಲಿ ಇಲ್ಲಿಯವರೆಗೂ ಕಂಡು ಬಂದಿಲ್ಲ.

ಭ್ರಷ್ಟಾಚಾರದ ಬಗ್ಗೆ ಉಪೇಂದ್ರ ಸಾಕಷ್ಟು ಮಾತನಾಡುತ್ತಾರೆ. ಆದರೆ ಹಣದ ಅನಿವಾರ್ಯತೆ ಮತ್ತು ಅದಕ್ಕೆ ನಮ್ಮ ಜನಗಳಲ್ಲಿ ಇರುವ ಮಹತ್ವವನ್ನು ಮರೆಯುತ್ತಾರೆ. ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ವಸ್ತುಗಳ ಭ್ರಷ್ಟಾಚಾರ ಒಂದು ಸಮಸ್ಯೆಯೇ ಅಲ್ಲ. ಜನರ ಮನಸ್ಸುಗಳನ್ನು ವಿಶಾಲ ಗೊಳಿಸುವ ಕೆಲಸ ಮೊದಲು ಮಾಡಬೇಕಿದೆ. ಜನರಲ್ಲಿ ಒಳ್ಳೆಯತನ ಅಥವಾ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಸಹಜವಾಗಿ ಅನೇಕ ಸಮಸ್ಯೆಗಳು ತನ್ನಿಂದ ತಾನೇ ಕಡಿಮೆಯಾಗುತ್ತದೆ. ಆ ಸೂಕ್ಷ್ಮಗಳನ್ನು ಅವರು ಗಮನಿಸಬೇಕಿದೆ.

ಈಗಾಗಲೇ ಕಾರ್ಯಾಂಗ ವಿದ್ಯಾರ್ಹತೆ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಸಾಕಷ್ಟು ಭ್ರಷ್ಟಗೊಂಡಿದೆ. ಶಾಸಕಾಂಗವನ್ನು ಸಹ ವಿದ್ಯಾರ್ಹತೆಯ ಮೇಲೆ ಆಯ್ಕೆ ಮಾಡುವ ಅವರ ಚಿಂತನಾ ಕ್ರಮ ಬಾಲಿಶವೆನಿಸುತ್ತದೆ. ಅದೇ ಅಂಕಗಳ ಬುದ್ದಿವಂತರೇ ಮತ್ತೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಹೃದಯವಂತರು ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ. ಪ್ರಜಾಪ್ರಭುತ್ವ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಜನ ಪ್ರತಿನಿಧಿಗಳು ಅಂಕಗಳ ಬುದ್ದಿವಂತಿಕೆಗಿಂತ ಸೇವಾ ಮನೋಭಾವವೇ ಮುಖ್ಯವಾಗಬೇಕು.

ಉಪೇಂದ್ರ ಮತ್ತು ಅವರ ಪ್ರಜಾಕೀಯ ಅಥವಾ ಈ ರೀತಿಯ ಹೊಸ ಪ್ರಯೋಗಗಳು ಇಂದಿನ ಅವಶ್ಯಕತೆಗಳು ಎಂಬುದನ್ನು ಸಹ ಮರೆಯಬಾರದು. ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಿ ಇಡಬೇಕೆಂದರೆ ಇವುಗಳನ್ನು ಸ್ವಾಗತಿಸಲೇ ಬೇಕು. ಆದರೆ ಇಲ್ಲಿ ಒಂದು ಅಪಾಯವೂ ಇದೆ. ಇಡೀ ರಾಜ್ಯಾದ್ಯಂತ ಮತ್ತು ಎಲ್ಲಾ ಭಾಗಗಳಲ್ಲೂ ಪ್ರಭಾವ ಬೀರಿ ಜನ ಸಮೂಹವನ್ನು ಆಕರ್ಷಿಸದೆ ಕೇವಲ ಕೆಲವೇ ಪ್ರದೇಶದಲ್ಲಿ ಜನಪ್ರಿಯವಾದರೆ ಈಗಾಗಲೇ ಅನೇಕ ಪಕ್ಷಗಳಲ್ಲಿ ಹರಿದು ಹಂಚಿಹೋಗಿರುವ ಮತದಾರ ಮತ್ತೊಂದು ಪಕ್ಷವನ್ನು ಸಹ ಕೇವಲ ಸಂಖ್ಯೆಗಳ ಆಧಾರದ ಮೇಲೆ ಗುರುತಿಸುವಂತಾದರೆ ಯಾವುದೇ ಪ್ರಯೋಜನ ಇಲ್ಲ. ಆ ಪಕ್ಷ 80, ಈ ಪಕ್ಷ 60, ಮತ್ತೊಂದು ಪಕ್ಷ 40, ಹೊಸ ಪಕ್ಷ ‌20, ಮತ್ತೆರಡು ಪಕ್ಷ 14 – 10 ಎಂದು ‌224 ಕ್ಷೇತ್ರಗಳನ್ನು ಹಂಚಿಕೊಂಡರೆ ಯಾವುದೇ ಸುಧಾರಣೆ ಸಾಧ್ಯವಿಲ್ಲ.

ಧರ್ಮಗಳು, ಜಾತಿಗಳು, ಭಾಷೆಗಳು
ಒಂದು ಕಡೆ ವಿಭಜಿಸಿದರೆ, ಅಜ್ಞಾನ, ಬಡತನ, ಅನಿವಾರ್ಯತೆಗಳು ಮತ್ತೊಂದು ಕಡೆ ಕಾಲೆಳೆಯುತ್ತಿದ್ದರೆ, ಉಡಾಫೆ ಮನೋಭಾವ, ಪುಡಾರಿತನ, ಜೈಕಾರ ಸಂಸ್ಕೃತಿಗಳು ನಮ್ಮ ನಡವಳಿಕೆಗಳೇ ಆಗಿರುವಾಗ ಬದಲಾವಣೆ ಅಷ್ಟು ಸುಲಭವಲ್ಲ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಎಲ್ಲಾ ಹಂತದಲ್ಲೂ ಬೇರು ಬಿಟ್ಟಿವೆ. ಜಾತಿ ರಾಜಕಾರಣದ ಕಾರ್ಯಕರ್ತರುಗಳ ಪಡೆ ಹೊಂದಿವೆ.
ಅವರುಗಳನ್ನು ಪರ್ಯಾಯ ರಾಜಕೀಯಕ್ಕೆ ಮಾನಸಿಕವಾಗಿ ಸಿದ್ದ ಮಾಡುವುದು ಕಷ್ಟದ ಕೆಲಸ. ಅನೇಕ ಸಂಘಟನೆಗಳು ಛಿದ್ರ ಛಿದ್ರ ಸ್ಥಿತಿಯಲ್ಲಿ ಇರುವಾಗ ಅವರುಗಳನ್ನು ಒಂದು ವಿಷಯದ ಆಧಾರದ ಮೇಲೆ ಒಗ್ಗೂಡಿಸಲು ಹರ ಸಾಹಸ ಮಾಡಬೇಕಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಜನ ಸಮೂಹ ರಾಜಕೀಯವಾಗಿ ಒಬ್ಬ ಪ್ರಾಮಾಣಿಕ ಮತ್ತು ಆಕರ್ಷಕ ನಾಯಕನನ್ನು ಹುಡುಕುತ್ತಿರುತ್ತದೆ. ಏನೇ ಸಾಮೂಹಿಕ ಮತ್ತು ಪ್ರಜಾಸತ್ತಾತ್ಮಕ ಎಂದು ಹೇಳಿಕೊಂಡರು ಒಬ್ಬ ನಾಯಕನೇ ಜನರನ್ನು ಹೆಚ್ಚು ಆಕರ್ಷಿಸುವುದು. ಆತನೇ ಬದಲಾವಣೆಯ ಹರಿಕಾರ ಆಗಲು ಸಾಧ್ಯ. ಆ ನಾಯಕ ಅತ್ಯಂತ ಗಟ್ಟಿ ವ್ಯಕ್ತಿತ್ವ ಹೊಂದಿರಬೇಕು. ರಾಜಕೀಯ ಪರಿಸ್ಥಿತಿ ಸಹ ಅನುಕೂಲಕರವಾಗಿರಬೇಕು. ಅದು‌ ಅಪರೂಪಕ್ಕೊಮ್ಮೆ ಸಂಭವಿಸುವ ಘಟನೆಗಳು ಮಾತ್ರ. ಆದರೆ ಜನ ಮಾನಸದಲ್ಲಿ ನಿರೀಕ್ಷೆಗಳು ಮಾತ್ರ ಬೆಟ್ಟದಷ್ಟು ಮತ್ತು ನಿರಂತರ……

ಈ ಹಿನ್ನೆಲೆಯಲ್ಲಿ ಉಪೇಂದ್ರ ಮತ್ತು ಅವರ ಪ್ರಜಾಕೀಯ ಯಾವ ರೀತಿಯ ಹೋರಾಟ ರೂಪಿಸುತ್ತದೆ, ಜನರನ್ನು ಆಕರ್ಷಿಸುತ್ತದೆ, ಅವರು ಎಷ್ಟರಮಟ್ಟಿಗೆ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ, ವಿವಾದಾತ್ಮಕ ವಿಷಯಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ, ಅಡ್ಡಿ ಆತಂಕಗಳನ್ನು ಯಾವ ರೀತಿ ಎದುರಿಸುತ್ತಾರೆ, ತಮ್ಮದೇ ಕಾರ್ಯಕರ್ತರ ಬಂಡಾಯ ಸಂದರ್ಭಗಳನ್ನು ಹೇಗೆ ನಿರ್ವಹಿಸುತ್ತಾರೆ, ಭ್ರಷ್ಟರು ಜನಪ್ರಿಯತೆಯ ಹೆಸರಲ್ಲಿ ಆ ಪಕ್ಷ ಸೇರುವುದನ್ನು ಹೇಗೆ ತಡೆಗಟ್ಟುತ್ತಾರೆ, ಜಾತಿ ವ್ಯವಸ್ಥೆಯನ್ನು ಹೇಗೆ ಮೀರುತ್ತಾರೆ ಎಲ್ಲವೂ ಕಾಲವೇ ನಿರ್ಧರಿಸುತ್ತದೆ.

ಏನೇ ಆಗಲಿ, ಯಾರೇ ಬರಲಿ, ಜನರಲ್ಲಿ ಯೋಚನಾ ಶಕ್ತಿಯನ್ನು ವಿಶಾಲಗೊಳಿಸದೆ, ಅವರ ಪ್ರಬುದ್ದತೆಯ ಮಟ್ಟವನ್ನು ಹೆಚ್ಚಿಸದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ತಾತ್ಕಾಲಿಕ ಯಶಸ್ಸು ಸಹ ಕಷ್ಟ.
ಜನರ ಮನಸ್ಸುಗಳನ್ನು ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಮತ್ತೆ ಪುನರುಜ್ಜೀವನ ಗೊಳಿಸಿದರೆ ಮಾತ್ರ ಏನಾದರೂ ನಿರೀಕ್ಷಿಸಬಹುದು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ ಎಚ್.ಕೆ.