ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರುದ್ರಮೂರ್ತಿ ಪ್ರಭು
ಇತ್ತೀಚಿನ ಬರಹಗಳು: ರುದ್ರಮೂರ್ತಿ ಪ್ರಭು (ಎಲ್ಲವನ್ನು ಓದಿ)

ಇಟಲಿ ದೇಶದ ಒಂದು ಅನಾಮಿಕ ಕಥೆ.  ವೆನಿಸ್ ಶಹರದ ಹತ್ತಿರದ ಒಂದು ಪಟ್ಟಣದ ಚಿರಪರಿಚಿತ ಕಾಫೀ ಶಾಪಿನಲ್ಲಿ ಪ್ರವಾಸಿ ಮಿತ್ರರಿಬ್ಬರು ಕಾಫೀ ಸವಿಯುತ್ತಾ ಮಾತುಕತೆಯಲ್ಲಿ ಮುಳುಗಿದ್ದರು.  ಅಲ್ಲಿಗೆ ಮತ್ತೊಬ್ಬ ಕಾಫೀಪ್ರಿಯ ಇವರ ಪಕ್ಕದ ಟೇಬಲ್ಲಿಗೆ ಬಂದು ಕುಳಿತ. ಪರಿಚಾರಕನನ್ನು ಕರೆದು ಕಾಫೀ ಆರ್ಡರ್ ಮಾಡಿ, “ಒಂದು ಟೇಬಲ್ಲಿಗೆ ಮತ್ತೊಂದು ಗೋಡೆಗೆ ಎಂದ.  ಪ್ರವಾಸಿ ಮಿತ್ರರಿಗಿದು ಆಶ್ಚರ್ಯ, ಉತ್ಸುಕತೆಯಿಂದ ಗಮನಿಸಿದರು.  ಮೂರನೇ ವ್ಯಕ್ತಿಯ ಟೇಬಲ್ಲಿಗೆ ಒಂದು ಕಾಫೀ ಸರ್ವ್ ಮಾಡಿದ ಪರಿಚಾರಕ.  ಆ ವ್ಯಕ್ತಿ ಕಾಫೀ ಕುಡಿದು ೨ ಕಾಫೀಗೆ ಬಿಲ್ ಪಾವತಿಸಿ ಹೊರಟ.  ಈ ವರ್ತನೆಯಿಂದ ಇನ್ನು ಉತ್ಸುಕರಾಗಿ ನೋಡುತ್ತಿದ್ದಂತೆಯೇ, ಅಲ್ಲಿನ ಪರಿಚಾರಕ “ಒಂದು ಗೋಡೆಯ ಮೇಲೆ ಒಂದು ಕಾಫೀ ಎಂದು ಬರೆದ ಚೀಟಿ ಅಂಟಿಸಿದ”.  ಅಲ್ಲಿ ಮತ್ತೊಂದು ಆಶ್ಚರ್ಯವೆಂದರೆ ಆ ಗೋಡೆಯ ಮೇಲೆಲ್ಲಾ ಚೀಟಿಗಳೇ.  ಇದರ ಹಿಂದಿನ ರಹಸ್ಯವೇನೆಂದು ತಿಳಿಯಲು ಈ ಪ್ರವಾಸಿ ಮಿತ್ರರು ಪರದಾಡುತ್ತಿರುವಾಗಲೇ ಒಬ್ಬ ಹರಕಲು ಬಟ್ಟೆಯ ವ್ಯಕ್ತಿ ಬಂದು ಒಂದು ಟೇಬಲ್ಲಿನಲ್ಲಿ ಕುಳಿತ.  ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈತನಿಗೆ ಆ ಕಾಫೀ ಶಾಪಿನಲ್ಲಿ ಹಣಕೊಟ್ಟು ಸವಿಯುವಷ್ಟು ಶಕ್ತನಲ್ಲನೆಂಬುದು ಎದ್ದು ಕಾಣುತ್ತಿತ್ತು.  ಕಾಫೀ ಶಾಪಿನ ಪರಿಚಾರಕ ಈ ವ್ಯಕ್ತಿಯ ಸೇವೆಗೆ ಬರಲು ವ್ಯಕ್ತಿ “ಗೋಡೆಯಿಂದ ಒಂದು ಕಾಫೀ” ಎಂದು ಆರ್ಡರ್ ಮಡಿದ. ಪರಿಚಾರಕ ಘನತೆಯಿಂದ ಆ ಹರಕಲು ಬಟ್ಟೆಯ ವ್ಯಕ್ತಿಗೆ ಕಾಫಿಯಿಂದ ಉಪಚರಿಸಿದ.  ಆ ವ್ಯಕ್ತಿ ಕಾಫಿ ಕುಡಿದು ಹಣ ಕೊಡದೆ ಹೊರಟ, ನಂತರ ಪರಿಚಾರಕ ಗೋಡೆಯಿಂದ “ಒಂದು ಕಾಫೀ” ಎಂದು ಬರೆದಿದ್ದ ಚೀಟಿಯೊಂದನ್ನು ಹರಿದು ಕಸದ ಬುಟ್ಟಿಗೆ ಎಸೆದ.  ಇಷ್ಟರಲ್ಲಿ ಆ ಪ್ರವಾಸಿ ಮಿತ್ರರಿಗೆ ಎಲ್ಲದರ ಅರಿವಾಗಿತ್ತು.  ಎಂತಹ ಸುಂದರ ಚಿಂತನೆ, ಆ ಊರಿನ ನಾಗರೀಕರದು ಅಶಕ್ತರಿಗೂ ಘನತೆಯಿಂದ ಜೀವಿಸುವುದಕ್ಕೆ ಸ್ಪಂದಿಸುವ ವಿಶಾಲ ಮನೋಭಾವದ್ದು. 

ನಾವಿರುವ ಸಮಾಜಕ್ಕೆ ಸ್ಪಂದನೆ ನಮ್ಮ ಕರ್ತವ್ಯ.  ಇಲ್ಲಿ ಗಮನಿಸಬೇಕಾದದ್ದು, ಕೊಟ್ಟವನಿಗೆ “ನನ್ನಿಂದ” ಎಂಬ “ಅಹಂ” ಇಲ್ಲದಿರುವುದು, ಇದು ಅವನ ಸಾಮಾಜಿಕ ಕರ್ತವ್ಯವಷ್ಟೇ.  ಇದು ಶರಣರ ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ ವೆಂಬ ನಾನು ಎಂಬ ಭಾವ ಅಳಿದ ದಾಸೋಹ ಪರಿಕಲ್ಪನೆಯನ್ನು ನೆನಪಿಸುತ್ತದೆ.  ಪಡೆದವನಿಗೆ ದೈನ್ಯತೆ ಇಲ್ಲದೆ ಜೈವಿಕ ಅವಶ್ಯಕತೆಯನ್ನು ಸಾಮಾಜಿಕ ಸ್ಪಂದನೆಯಿಂದ ನಿವಾರಿಸ್ಕೊಳ್ಳುವುದು.  ಎಂತಹ ಮಾದರಿ ಆರೋಗ್ಯಕರ ಸಮಾಜ!  ಈ ಸಣ್ಣ ಕಥೆ ಇಂದು ನಮ್ಮ ಹೃದಯ ಮೀಟಿ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುವಂತೆ ಪ್ರೇರೇಪಿಸಲಿ ಎನ್ನುವ ಆಶಯದಿಂದ ಈ ಲೇಖನ.

ಇಂದಿನ ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ನಾಗರೀಕ ಜವಾಬ್ದಾರಿ ಹೆಚ್ಚಿದೆ.  ಅದನ್ನು ಮನಗಂಡು ನಮ್ಮ ಶಕ್ತಾನುಸಾರ ನಮ್ಮ ನಮ್ಮ ಪರಿಸರದ ಸಾಮಾಜಿಕ ಅವಶ್ಯಕತೆಗಳಿಗೆ ಸ್ಪಂದಿಸುವ ಜರೂರಿದೆ.  ಹೆಚ್ಚಿನ ನಗರಗಳಲ್ಲಿ ವಲಸೆ ಕಾರ್ಮಿಕರು ಜೀವನೋಪಾಯಕ್ಕಾಗಿ ಬಂದು ಕೊರೋನ ಭೀತಿಯಿಂದ ಶಹರಗಳಲ್ಲಿ ಬದುಕು ಕಾಣದೆ / ಹಸಿವಿನಿಂದ ಸೊರಗಿ ತಮ್ಮತಮ್ಮ ಊರುಗಳಿಗೆ ವಾಪಸಾಗಿ ನಗರದ ಸಹವಾಸವೇ ಬೇಡವೆಂದು ನಿಶ್ಚಯಿಸಿರುವುದು ಒಂದು ವಿಪರ್ಯಾಸ.  ಇಲ್ಲಿ ನಮ್ಮ ಸಣ್ಣ ಸಣ್ಣ ಸಹಾಯ ಅನೇಕರಿಗೆ ಧೈರ್ಯ ಜೀವನೋತ್ಸಾಹ ತುಂಬಬಹುದು. ಅವುಗಳು ಅತಿ ಸರಳವಾದವು, ನಾವು ಮನಸ್ಸುಮಾಡಬೇಕಷ್ಟೆ 

* ಸೂಪರ್ ಮಾರ್ಕೆಟ್ ತೊರೆದು, ಹತ್ತಿರದ ದಿನಸಿ, ಕಿರಾಣಿ ಅಂಗಡಿಗಳಿಂದ ನಮ್ಮ ದಿನೋಪಯೋಗಿ ವಸ್ತುಗಳನ್ನು ಖರೀದಿಸುವುದು.

* ಹಣ್ಣು-ತರಕಾರಿಗಳನ್ನು ಹತ್ತಿರದ ಅಂಗಡಿಗಳಿಂದ ಖರೀದಿಸುವುದು

* ಹಣ್ಣು-ತರಕಾರಿ ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡದಿರುವುದು

* ೫ ರೂ / ೧೦ ರೂಗಳ ಚಿಲ್ಲರೆಯನ್ನು ಹಣ್ಣು-ತರಕಾರಿ ವ್ಯಾಪಾರಿಗಳಿಗೆ ಬಿಡುವುದು

* ಆಟೋ ರಿಕ್ಷಾದವರಿಗೆ ಚಿಲ್ಲರೆ ಹಣಕ್ಕಾಗಿ ಒತ್ತಾಯ ಮಾಡದಿರುವುದು ಮತ್ತು ರೂ ೫/ ರೂ ೧೦ ಹೆಚ್ಚು ನೀಡುವುದು.

* ಮನೆಗೆಲಸಕ್ಕೆ ಬರುವವರಿಗೆ ಅಡುಗೆ/ತಿನಿಸು ನೀಡುವುದು

* ಮನೆಗೆಲಸಕ್ಕೆ ಬರುವವರ ರಜೆಗೆ ಹಣ ಕಡಿತ ಮಾಡದಿರುವುದು

* ವಸತಿ ಸಮುಚ್ಚಯಗಳ ವಾಚ್ ಮ್ಯಾನ್ ಗಳಿಗೆ ತಿಂಡಿ, ಕಾಫಿ ಹಂಚುವುದು

* ವಸತಿ ಸಮುಚ್ಚ್ಯಗಳಲ್ಲಿ ಕೆಲಸ ಮಾಡುವವರಿಗೆ ಕಾಫಿ ತಿಂಡಿ ನೀಡುವುದು

* ಕಷ್ಟ ಸಮಯವನ್ನು ಅರಿತು ನಮ್ಮ ನಮ್ಮ ಸುತ್ತಮುತ್ತಲ ಅಶಕ್ತರಿಗೆ ಸಹಾಯ ಮಾಡುವುದು

* ಇನ್ನು ಇತರೆ ಹಲವು ರೀತಿಯಲ್ಲಿ ಸಹ ಸಮಾಜದಲ್ಲಿ ಸ್ಪಂದಿಸಿ ಸಾಮಾಜಿಕರಾಗುವುದು ಇಂದಿನ ಅವಶ್ಯಕತೆ.

ನಾಳೆಯನ್ನು ಕಂಡವರಾರು? ನಮ್ಮ ಆಸೆ ಮತ್ತು ಅವಶ್ಯಕತೆಗಳಿಗೆ ಮಿತಿಯೇ ಇಲ್ಲ.  ಇಂದು ನಮ್ಮ ಸುತ್ತ ಮುತ್ತಲು ನಮ್ಮ ಸಹಾಯಕ್ಕಾಗಿ ಅಪೇಕ್ಷಿಸುತ್ತಿರುವ ಜೀವಗಳಿರುವಾಗ ನಮ್ಮ ನಾಳೆಗಳಿಗಲ್ಲದೆ, ನಾಳಿದ್ದುಗಳಿಗೆ ಸಂಗ್ರಹಿಸುವುದು ನಾಚಿಕೆಗೇಡಲ್ಲವೇ.  ನಮ್ಮ ಸ್ವಂತ ಸಂಗ್ರಹ ಪ್ರವೃತ್ತಿಯನ್ನು ನಮ್ಮ ಜೀವನ ಮತ್ತು ಮಕ್ಕಳ ವಿದ್ಯಾಭಾಸದಷ್ಟು ಭಾರಹೊರುವಷ್ಟಕ್ಕೆ ಇಟ್ಟು ನಮ್ಮ ಸಂಗ್ರಹಕ್ಕೆ ಪೂರ್ಣವಿರಾಮ ಹಾಕಿ, ಹೆಚ್ಚಿನ ಗಳಿಕೆಯನ್ನು ಹಂಚುವ ಪರಿಪಾಠದೊಂದಿಗೆ ಸಮಾಜದ ಸ್ಪಂದನೆಗೆ ವಿನಿಯೋಗಿಸುವುದು ಸೂಕ್ತವೇನೋ.

ಮಾನ್ಯ ಡಿ.ವಿ.ಜಿ ಯವರ ಮಾತು. “ಆತ್ಮ ಸಂಸ್ಕಾರಕ್ಕೆ ೫ ಕ್ರಮಗಳಲ್ಲಿ ೫ನೇಯ ಕ್ರಮ ಸಾಮಾಜಿಕ ಕಾರ್ಯ – ಸಂಘ ಸೇವೆ.  ಉಳಿದ ನಾಲ್ಕು ಸಂಸಾರ ನಿರ್ವಹಣೆ, ಜೀವನ ಸಂಪಾದನೆ, ಮತಾಚಾರ ಮತ್ತು ಸಾಹಿತ್ಯ ವ್ಯಾಸಂಗ, ಇವುಗಳನ್ನು ವ್ಯಕ್ತಿ ಹೇಗಾದರೂ ಸಾಧಿಸುತ್ತಾನೆ ಆದರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರು ವಿರಳ. ಸಾಮಾಜಿಕ ಕಾರ್ಯ ಅತ್ಯಂತ ಮುಖ್ಯವಾದದ್ದು, ಇದರಿಂದಾಗುವ ಆತ್ಮಶೋಧನೆ ಪ್ರತಿಯೊಬ್ಬನಿಗೂ ಉದ್ಧಾರಕವಾದದ್ದು ಮತ್ತು ದೇಶದ ಉನ್ನತಿಗೆ ಮತ್ತು ಪ್ರಜಾರಾಜ್ಯಕ್ಕೆ ತಳಹದಿ” ಎಂಬುದು.  ಆಸ್ತಿಕನಾಗಿ ಆತ್ಮಶೋಧನೆಯ ಆಸೆಯಿಂದಾಗಲಿ, ವಿಚಾರವಂತ ನಾಗರೀಕನಾಗಿ ಪ್ರಜಾರಾಜ್ಯ ಮತ್ತು ದೇಶದ ಉನ್ನತಿಯ ಆಸೆಯಿಂದಲಾದರೂ ನಾವುಗಳು ಸಮಾಜ ಸೇವೆಯಲ್ಲಿ ಭಾಗಿಯಾಗುವುದು ಇಂದಿನ ಜರೂರಾಗಿದೆ. 

ಬಡತನಕ್ಕೆ ಉಂಬುವ ಚಿಂತೆ

ಉಣಲಾದರೆ ಉಡುವ ಚಿಂತೆ

ಉಡಲಾದರೆ ಇಡುವ ಚಿಂತೆ

ಅಂಬಿಗರ ಚೌಡಯ್ಯನವರ ಮೇಲಿನ ವಚನವನ್ನು ಮೊದಲ ಮೂರು ಸಾಲುಗಳಿಗೆ ನಿಲ್ಲಿಸಿಕೊಂಡು, ಇಡುವುದಕ್ಕೂ ಒಂದು ಮಿತಿಹಾಕಿ ಚಿಂತಿಸುವುದು ಇಂದಿನ ಅವಶ್ಯಕತೆಯೇನೋ?