ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಂದು ನಮ್ಮ ನಡುವೆ ಇಲ್ಲದ ಕವಿ ರಮೇಶ್ ಹೆಗಡೆಯವರ ಬಗ್ಗೆ ಜಯಂತ ಕಾಯ್ಕಿಣಿ ಒಂದು ಕಾಲದಲ್ಲಿ ಬರೆದಿದ್ದು ಹೀಗೆ.

ಇಂದು ನಮ್ಮ ನಡುವೆ ಇಲ್ಲದ ಕವಿ ರಮೇಶ್ ಹೆಗಡೆಯವರ ಬಗ್ಗೆ ಜಯಂತ ಕಾಯ್ಕಿಣಿ ಒಂದು ಕಾಲದಲ್ಲಿ ಬರೆದಿದ್ದು ಹೀಗೆ.

ಸಂಪಾದಕ

ತಮ್ಮ ಪಾಡಿಗೆ ಸದ್ದಿಲ್ಲದೆ ಕಾವ್ಯಕಾಯಕ ನಡೆಸುತ್ತಿರುವ ಶಿರಸಿಯ ರಮೇಶ ಹೆಗಡೆಯವರ ಖರ್ಚಾಗದ ಪದ್ಯಗಳು ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಒಟ್ಟು ಆರು ಕವನಸಂಕಲನಗಳ ಸರದಾರ ಅವರು. ಹೋದ ವರ್ಷ ಬಿಡುಗಡೆಯಾದ “ಕಿಟಕಿಯೊಳಗಿನ ಕಣ್ಣು’ ಸಂಕಲನದ ಕುರಿತು ಬರೆದ ಆಸ್ವಾದಕ ಟಿಪ್ಪಣಿ ಇಲ್ಲಿದೆ…

ರಮೇಶನ ಕಣ್ಣು ಆತನ ಮನಸಿನಷ್ಟೇ ಸೂಕ್ಷ. ಅವನು ಇಲ್ಲಿ ಕಲೆ ಹಾಕಿರುವ ಸಾಲಂಚುಗಳನ್ನು ಓದುವಾಗ, ಪುಟ್ಟ ಕ್ಯಾಮೆರಾದಲ್ಲಿ ಇರುಳಲ್ಲಿ ಫೋಟೋ ಹೊಡೆಯುವಾಗ ಫ್ಲಾಷ್‌ ಮಿಂಚಿದಂತೆ ಭಾಸವಾಗುತ್ತದೆ. ಅಂದರೆ ಎದುರಿಗಿರುವುದನ್ನು ಮನಗಾಣಲೆಂದೇ ರಮೇಶ ಝಗ್ಗೆನಿಸುವ ಕ್ಷಣಿಕ, ಆದರೆ ಅಷ್ಟೇ ತೀವ್ರವಾದ ಮಿಂಚುಗಳು ಇವು. ಒಂದು ಚಿತ್ರ, ಒಂದು ಪ್ರತಿಮೆ, ಒಂದು ಊಹೆ, ಒಂದು ಲಹರಿ, ಒಂದು ತೀವ್ರ ತುಡಿತ . . ನಾಲ್ಕಾರು ಪದಗಳಲ್ಲಿ ಆಕಾರ ಪಡೆಯಲು ಯತ್ನಿಸುವ ಬಗೆಯಿದು. ಬೆಂಕಿ ಪೆಟ್ಟಿಗೆಯ ಕಡ್ಡಿ ಗೀರಿದಂತೆ . . ಕೆಲವು ತಕ್ಷಣ ಹೊತ್ತಿಕೊಳ್ಳುತ್ತವೆ… ಕೆಲವು ಮಳೆಗಾಲದ ಥಂಡಿ ಕಡ್ಡಿಗಳಂತೆ… ತೆಪ್ಪಗಿರುತ್ತವೆ. .

ಒಂದು ಕಾಸನ್ನೂ

ಮುಟ್ಟಲಿಲ್ಲ ಗುಡಿಯ

ದೇವರು ಎಂದೂ

ಹೂವು ಮಾರುವ

ಹುಡುಗಿ ಮುಡಿಯಲಿಲ್ಲ

ಒಂದು ಹೂ

ಇಂಥ ಸಾಲುಗಳು ತಮ್ಮ ಸರಳತೆಯನ್ನು ಸಾಧಿಸುವ ಪರಿಣಾಮ ಸಣ್ಣದಲ್ಲ. ಸರಳತೆ ಯಾಕೆಂದರೆ, ಈಗಾಗಲೇ ಕವನ ಸಂಕಲನಗಳನ್ನು ಪ್ರಕಟಿಸಿರುವ ರಮೇಶ, ಮನಸು ಮಾಡಿದರೆ ಪದಗಳ ಜೊತೆ ಆಟವಾಡಬಲ್ಲ. ಆದರೆ ಅದು “ಪದರ್ಶನ’ ಆದೀತು ಎಂಬ ಎಚ್ಚರ ಅವನಿಗಿದೆ. ಹೀಗಾಗಿ ಆತ ಆತ್ಮಲೋಲುಪತೆ, ಪುನರುಕ್ತಿಗಳ ಏಕತಾನತೆಯಿಂದ ಪಾರಾಗಲೆಂದೇ ಹೆಚ್ಚಿನ “ಕೊಮಣೆ’ಗೆ ಅವಕಾಶವಿಲ್ಲದ ಈ ಸಾಲ್ದಾರಿಯನ್ನು ಇಲ್ಲಿ ಹಿಡಿದಿದ್ದಾನೆ ಎಂದು ನನ್ನ ಹವಣಿಕೆ. ಏಕೆಂದರೆ ಒಂದು ಪದ ಜಾಸ್ತಿಯಾದರೂ ಇಲ್ಲಿ ನೇಯ್ಗೆ ಸಡಿಲವಾಗಿ ತೋರಿಬಿಡಬಹುದು. ಉದಾಹರಣೆಗೆ ಈ ಸಾಲು ನೋಡಿ…

ನಿನಗಾಗಿ ಎಲ್ಲ ಬಿಟ್ಟೆ ಉಸಿರೊಂದ ಬಿಟ್ಟು ಆದರೂ ಸಿಗಲಿಲ್ಲ ನೀ…

ಇದರಲ್ಲಿ, ಆದರೂ ಸಿಗಲಿಲ್ಲ ನೀ” – ಇಲ್ಲದಿದ್ದರೆ ಅದಕ್ಕೊಂದು ಬೇರೆ ತೀವ್ರತೆ, ಬಿಗಿತ ಸಿಗಬಹುದಾಗಿತ್ತು. ಕುದಿಸಿದಷ್ಟೂ ಕಷಾಯವಾದಂತೆ ಪದಗಳ ಒಜ್ಜೆಯನ್ನು ಇಳಿಸಿದಷ್ಟೂ ಕವಿತೆಯ ಉಸಿರಾಟ ಸುಸೂತ್ರ. ಕಿರುಗವನಗಳ ಜೀವವೇ ಸಣ್ಣದಾಗಿರುವುದರಿಂದ ಒಂದು “ಹೂ’ ಇಟ್ಟರೂ ಸಮತೋಲ ಹೋಗಬಹುದು. ನಮ್ಮ ಕಾಲದ ಮಹತ್ವದ ಕವಿ ಎಸ್‌.ಮಂಜುನಾಥ ತಮ್ಮ “ಗುಬ್ಬಿ’ ಎನ್ನುವ ಕವಿತೆಯಲ್ಲಿ ಗುಬ್ಬಿಯನ್ನು ವರ್ಣಿಸುತ್ತ – “ಅದು ಹಕ್ಕಿ ಪದದಲ್ಲಿನ “ಹ’ ದಷ್ಟೇ ಹಗುರ’ – ಎನ್ನುತ್ತಾರೆ. ಪದಗಳ ಮಿತವ್ಯಯದ ಜಾದೂನೇ ಅದು!

ಅತ್ತಾಗೆಲ್ಲ ನಾನು

ಅಮ್ಮನ ಸೆರಗು

ಪೂರ್ತಿ ಒದ್ದೆ

ನಿದ್ದೆಯೇ ಬರಲಿಲ್ಲ

ಮತ್ತೆ ನನಗೆ

ಸಿಡಿಲೊಂದು ಸಿಡಿದ ಬಳಿಕ

ಮನದ ಆಲ್ಬಮ್ಮಿನಲ್ಲಿ

ಇರಿಸಿರುವೆ ಬಿಸಿ ನೆನಪುಗಳ. ಭಾವಚಿತ್ರ

ಭಾವಚಿತ್ರ

ಹೌದು, ಈ ಸಂಕಲನವನ್ನು ಬಗೆ ಬಗೆ ಭಾವಗಳ ಆಲ್ಬಮ… ಎಂದು ಕರೆದರೂ ನಡೆದೀತು. ಈ ನಮೂದಿಸಿದ ಸಾಲುಗಳು ನಮ್ಮಲ್ಲಿ ಒಂದು ಭಾವ ಪ್ರಭೆಯನ್ನು ಎಬ್ಬಿಸುತ್ತವೆ. ಇಂಥ ಪ್ರಭೆಯನ್ನು ನೇರ ನಿವೇದನೆಯಿಂದಷ್ಟೇ ಅಲ್ಲ, ಪರೋಕ್ಷ ಚಿತ್ರಗಳ ಮೂಲಕವೂ ಕೆಲವು ಸಾಲುಗಳು ಉಂಟುಮಾಡುತ್ತವೆ.

ಉದಾಹರಣೆಗೆ:

ಅತ್ತರೂ ಮೀನು

ಗೊತ್ತೇ ಆಗುವುದಿಲ್ಲ

ವ್ಯಾಖ್ಯೆ ಅಥವಾ ತೀರ್ಪು ಕೊಡುವ ಕಸುಬು ಕವಿತೆಯದಲ್ಲ. ಅದು ಒಂದು ಚಿಂತನಶೀಲ ತಲ್ಲೀನತೆಯನ್ನು ಪ್ರಚೋದಿಸಿದರೆ ಸಾಕು. ರಮೇಶನ ಹೆಚ್ಚಿನ ಸಾಲುಗಳಲ್ಲಿ ಅಂಥ ಗುಣಗಳಿವೆ ಎಂಬುದು ಖುಷಿಯ ಸಂಗತಿ. ಏಕೆಂದರೆ ಸ್ವಲ್ಪ ಹದ ತಪ್ಪಿದರೆ “ಕಾವ್ಯಮಯ ಸುಭಾಷಿತ’ಗಳಾಗುವ ಅಪಾಯ ಇಲ್ಲಿದೆ. “ಪಿಸು ಮಾತಿನ ಕಣಜ’, “ಕಬಡ್ಡಿಯ ಧೂಳು’, ಇಂಥ ತಾಜಾ ಮಾತುಗಳಲ್ಲಿ ರಮೇಶ ತನ್ನ ನೋಟವನ್ನು ಹರಿತಗೊಳಿಸುವುದರಲ್ಲಿ ಇಲ್ಲಿ ನಿರತನಾಗಿದ್ದಾನೆ. ಸಂಗೀತಗಾರ ತನ್ನ ವಾದ್ಯವನ್ನೋ, ಕಂಠವನ್ನೋ ಶ್ರುತಿಗೊಳಿಸುವಂತೆ ಇಲ್ಲಿ ರಮೇಶ ತನ್ನ ಕವಿತೆಯ ಒಕ್ಕಣೆಯನ್ನು ಶ್ರುತಿಗೊಳಿಸುತ್ತಿದ್ದಾನೆ. ಅವನಿಗೆ ಅರಳುವ ಹೂವುಗಳಲ್ಲಿ, ಮಕ್ಕಳಲ್ಲಿ, ಬುದ್ಧನ ನಗೆ ಕಾಣುತ್ತದೆ, ನೆನಪುಗಳು ಕಣ್ಣಿನ ಕಸದಂತೆ ಕಾಡುತ್ತವೆ.

ಮಳೆಯಿದ್ದರೂ

ಕೊಡೆ ಬೇಡ ಕೈಗೆ ಕೈ

ಬೆಸೆದಿರಲು…

-ಇಂಥ ಪ್ರೇಮ ಪೀಡಿತ ಸಾಲುಗಳದ್ದೇ ಇಲ್ಲಿ ಬಹುಸಂಖ್ಯೆ ಇದೆ. ಹಿಂದೊಮ್ಮೆ ರಮೇಶನ ಗಝಲ…’ಗಳ ಸಂದರ್ಭದಲ್ಲಿ ನಾನು ಹೇಳಿದ್ದನ್ನೇ ಇಲ್ಲಿ ಮತ್ತೆ ಹೇಳಬಯಸುತ್ತೇನೆ. ಏನೆಂದರೆ ಇವು ಕೇವಲ ಪ್ರೇಮಿಯ ಪ್ರಲಾಪವಲ್ಲ, ಜೀವನ ಪ್ರೇಮಿಯ ಆಲಾಪಗಳು. ಇಲ್ಲಿಯ ಅಭಿಸಾರ, ವಿಪ್ರಲಂಭಗಳೆಲ್ಲ ಉತ್ಕಟ ಜೀವನ ಪ್ರೀತಿಯ ಪ್ರತಿಫ‌ಲನಗಳಾಗಿವೆ.

ದೂರವಾಣಿಯಲ್ಲಿ ಆಗಾಗ ರಮೇಶ ನನ್ನೊಂದಿಗೆ ಸಲ್ಲಾಪ ನಡೆಸುವುದುಂಟು. ಆಗೆಲ್ಲ ಅವನ ಹೆಚ್ಚಿನ ಮಾತು “”ಅದ್‌ ಹ್ಯಾಂಗ್‌ ಬರಯವು? ಇದ್‌ ಹ್ಯಾಂಗ್‌ ಬರೆಯವು? ಅರ್ಥ ಅಂದ್ರೆ ಎಂತದು?- ಹೀಗೆ ಕವಿತೆಯ ರಚನೆಯ ಕುರಿತಾದ ತೀವ್ರ ಜಿಜ್ಞಾಸೆಯದೇ ಆಗಿರುತ್ತವೆ. ಸಂಗೀತವನ್ನೂ ಉತ್ಕಟವಾಗಿ ಆಸ್ವಾದಿಸುವ ರಮೇಶನ ಒಟ್ಟೂ ನಿಲುವಿನಲ್ಲಿ “ಚಿಕಿತ್ಸಕ’ ಅಂಶಗಳಿಗಿಂತ ಆಸ್ವಾದಕ ಅಂಶಗಳೇ ಹೆಚ್ಚು. ಮಳೆಯನ್ನು ತೀವ್ರವಾಗಿ ಅನುಭವಿಸಿದ ನಂತರ ಶಾಖೆಗಳಿಂದ ತೊಟ್ಟಿಕ್ಕುವ ಹನಿಗಳನ್ನೂ ಅನುಭವಿಸುವ ಯತ್ನ ರಮೇಶನ ಸಾಲಿನಂಚಿನದು. ಹನಿ ಎಷ್ಟೇ ಕಿರಿದಾಗಿದ್ದರೂ ಅಷ್ಟರಲ್ಲೇ ಸುತ್ತಲನ್ನು ಹೊಳೆಸುವಂತೆ… ಈ ಸಾಲುಗಳು ತಮ್ಮ ಎಟುಕಿಗೆ ಬಂದ ಕಿರಣವನ್ನು ಪ್ರತಿಫ‌ಲಿಸಲು ಯತ್ನಿಸುತ್ತವೆ.

ದೀಪ ಹಿಡಿದು

ಹುಡುಕಿದೆ ಬೆಳಕು

ಎನ್ನುವ ರಮೇಶನ ಬೆಳಕಿನ ದಾಹ ಇಂಗದಿರಲಿ.