ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮಬದುಕು-೧೬

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಹೂವಿನೆಸಳೆ ಹಾಲುಗಲ್ಲದಹಸುಳೆ
ಯಾಕೆ ಕುಂದಿದೆ ನಿನ್ನ ಮೊಗದ ಕಳೆ?
ಮಾಯವಾಯಿತೆ ತುಂಟತನ ಗಾಯಗಳಲಿ
ಸಿಪ್ಪೆ ಸುಲಿದ ಹಣ್ಣಿನಂತೆ
ಸಪ್ಪೆಯಾಯಿತೆ ಬಾಳು?

ಹೊಟ್ಟೆ ಹೊರೆಯಲು ಹೊತ್ತು ಹೊರೆ
ನೆತ್ತಿ ನೆರೆದಿಹುದು!
ಬಾಲ್ಯದಲ್ಲೇ ಮುಪ್ಪಿನ ಕರಾಳ ಛಾಯೆ ಅಡರಿಹುದು!
ನಿನ್ನಾಟದ ಪುಟ್ಟ ಕುಳ್ಳಿ ಹೇಗೆ ಒಡೆಯಿತು?
ಕರುಳಿನ ಎಳೆ ಎಲ್ಲಿ ಕಡಿಯಿತು?

ಅತ್ತು ಕರೆದು ರಂಪಾಟ ಮಾಡಿದರೂ ಬರಲಿಲ್ಲವೆ ಹತ್ತಿರ
ಯಾರೂ
ಇಲ್ಲವೇ?
ನಿನಗಾಗಿ ಮಿಡಿಯುವ ಜೀವ
ಅರಳದೇ ಮೊಗ್ಗೆ ಆಗೇ ಉಳಿದೆ
ಚಿವುಟಿದರೂ ಬಾಡಿದರೂ ಸೂಸುತಿದೆ ಪರಿಮಳ!

ಕಾಪಿಡು ನೀನು ಪ್ರತಿಯೊಂದು ದಳ
ಅರಳುವ ಚಣ ಬರುವತನಕ
ಕಾಯ ಬೇಕು ಅಲ್ಲಿಯತನಕ
ಮರಳುಗಾಡನಲೂ ಹರಿದು ಬರಬಹುದು
ನೀರಿನ ಝರಿ

ಲೋ ಬಾರೋ, ಈ ಮೇಜನ್ನು ಒರೆಸು ಚೆನ್ನಾಗಿ
ಎಂದು ಕರೆದವರು ಕಡೆಗಣಿಸಬಹುದು ನಿನ್ನ ಪುಟ್ಟ ಕೈಗಳನು
ಬಾರದೇ ಇರಬಹುದು ನೆನಪಿಗೆ ಅವರ ಪುಟ್ಟ ಕಂದಮ್ಮಗಳು

ವಾಹನದ ಗಾಲಿಗಳು ಸುಸ್ತಾಗಿ ಸವೆದು ಸವಕಲಾದಾಗ
ಮಾಲೀಕನ ಆದೇಶ ಹೊತ್ತು ತರುವಾಗ ಉಪಕರಣಗಳ
ಮುಚ್ಚಿದ ಅಂತಃಕರಣದ ಕದ ತೆರಯದೇ ಹೋಗಬಹುದು!

ಆದರೂ ಉರಿಯುತಿರು ಆರದೇ!
ನಿನ್ನ ಉರಿಯಿಂದ ಒಂದು ದಿನ ಕರಗಬಹುದು
ಮರಗಟ್ಠಿದ, ಹೆಪ್ಪುಗಟ್ಟಿದ ಹಿಮ
ಆಂತರಂಗದ ಪ್ರೇಮ ಗಂಗೆ ಹರಿಯಬಹುದೇನೋ?
ಎನೋ ಯಾರಿಗೆ ಗೊತ್ತು?

ಜಾಹೀರಾತು ಫಲಕಗಳಲಿ
ಭಿತ್ತಿಗಳಲಿ ನೋಡಿದರೂ ನಿನ್ನ ಚಿತ್ರ
ಚಿತ್ತದಲಿ ಇಳಿದಿಲ್ಲ ಇನ್ನೂ!
ಚೌಕಗಳಲ್ಲಿಯ ಈ ಅನುಕಂಪ
ಅಪಘಾತಗಳಿಗೆ ದಾರಿ: ನೀಡದು ತಂಪ!

ಮಾತುಗಳಿಗೇನು ಕೊರತೆ
ಅದು ಎಂದೆದಿಗೂ ಬತ್ತದ ಒರತೆ!
ಆತುಕೊಂಡಿವೆ ಆತುಮಗಳು ಮಾತಿಗೆ
ಜಾರಿದರೆ ಮಾತಿನ ಊರುಗೋಲು
ಉರುಳಿ ಬೀಳುವದು ಅಂತರಾತ್ಮ
ಮಾತು ಕೃತಿಯ ನಡುವೆ ಇರೆ ಬಿರುಕು
ತೋರುವ ಮರುಕು ಅದು ಬರೀ ಬಾಜಾರಿನ ಸರಕು!

ಹೊತ್ತಬೇಕಿದೆ ದೀಪ
ಬೆಳಗಿ ತುಂಬಬೇಕಿದೆ ಕಂಗಳಲಿ
ಒಲುಮೆಯ ಸೆಲೆ ಜಿನುಗಬೇಕಿದೆ
ಅಂತರಾತ್ಮಕೆ ಆಗಿ ಅಮೃತ ಸಿಂಚನ
ಆಗಬೇಕು ಸರ್ವರ ಬಾಳು ಹಸನ
ನಂದ ನಂದನರು ಆಡಲು ಉದಯಿಸಲಿ ಎಲ್ಲೆಡೆ ನಂದನವನ!

ಬಾಲ್ಯದ ಆಟಗಳಿಂದ ಹಾಗೂ ಶಾಲೆಗೆ ಹೋಗಿ ವಿದ್ಯಾಭ್ಯಾಸವನ್ನು ಕಲಿಯುವ ಅವಕಾಶಗಳಿಂದ ವಂಚಿತರಾಗಿ, ಚಿಕ್ಕ ವಯಸ್ಸಿನಲ್ಲೇ, ತಮಗೆ ಮೀರಿದ ಹೊರೆಯನ್ನು ಹೊತ್ತು ಬಳಲುತ್ತಿರುವ ಬಾಲ ಕಾರ್ಮಿಕರ ಬಗ್ಗೆ ವಿಚಾರ ಮಾಡಿದಾಗ, ನನ್ನ ಮನದಲ್ಲಿ ಮೇಲಿನ ಮಾತುಗಳು ಹೊಮ್ಮಿದವು. ದಿನ ನಿತ್ಯವೂ ನಾವು ನಮ್ಮ ದೈನಂದಿನ ಬದುಕಿನಲ್ಲಿ ಇಂತಹ ಎಷ್ಟೋ ಬಾಲಕರನ್ನು ಹೋಟೆಲ್ ಗಳಲ್ಲಿ, ಅಂಗಡಿಗಳಲ್ಲಿ, ವಾಹನದ ರಿಪೇರಿ ಶಾಪ್ ಗಳಲ್ಲಿ, ಇನ್ನು ಎಷ್ಟೋ ಸಲ ಚೌರಾಸ್ತಾ ( ಚೌಕ ಗಳಲ್ಲಿ), ಆಟಿಗೆ ಸಮಾನುಗಳನ್ನೋ ಅಥವಾ ಬೀಸಣಿಕೆಗಳನ್ನೋ ಮಾರುತ್ತ, ಕೊಂಡುಕೊಳ್ಳಲು ಅಂಗಲಾಚುವ ಮಕ್ಕಳನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಅವರ ದೈನ್ಯ ಸ್ಥಿತಿ ಬಹಳಷ್ಟು ಸಲ ನಮ್ಮನ್ನು ತಟ್ಟದೇ, ಎಲ್ಲವೂ ಮಾಮೂಲು ಎಂಬ ಧೋರಣೆ ತಾಳಿ, ಮರಗಟ್ಟಿದ ಮನದಿಂದ ಏನೂ ಸ್ಪಂದನೆ ಸೂಸದೆ, ಯಾಂತ್ರಿಕವಾಗಿ “ ರೊಬೋ” ಗಳಂತೆ, ಅವರ ದುಃಸ್ಥಿತಿಯನ್ನು ನೋಡಿಯೂ ನೋಡದಂತೆ ಮುಂದೆ ಸಾಗಿ ಬಿಡುತ್ತೇವೆ.

ನಮ್ಮ ವರ್ತನೆ ಹೀಗಿದ್ದು, ಬರೀ ಬಾಯ್ಮಾತಿನಿಂದ ಸಹಾನುಭೂತಿ ತೋರಿದರೆ, ಅದು ಬರೀ ಬೊಗಳೆಯಾಗುತ್ತದೆ. ಹಾಗೆಂದು, ಇಂತಹ ಮಕ್ಕಳಿಗಾಗಿ ನಾವು ಒಂದು ಆಶ್ರಮ ತೆಗೆಯಬೆಕು, ಅಥವಾ ಶಾಲೆಯ ಸ್ಥಾಪನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಿಲ್ಲಾ. ಯಥಾಶಕ್ತಿ, ನಾವು ಕೆಲವು ಮಕ್ಕಳಿಗಾದರೂ ಸಹಾಯ ಒದಗಿಸಿದರೆ, ನಮ್ಮ ಬಾಳು ನಿಜಕ್ಕೂ ಸಾರ್ಥಕ!.

ಇಂತಹ ಸಂಕಲ್ಪ ತಾಳಿ, ನಾವು ಈ ನಿಟ್ಟಿನಲ್ಲಿ ಮೊದಲು ಹೆಜ್ಜೆ ಇಟ್ಟು ಮುನ್ನಡೆಯಲು, ನಮ್ಮ ಮುಂದೆ ಬಹಳಷ್ಟು ಮಾದರಿಗಳಿವೆ; ಎಷ್ಟೋ ಮಹನೀಯರು ನಮ್ಮ ಎದುರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದಾರೆ. ಅಂಥವರಲ್ಲಿ ಅಗ್ರ ಶ್ರೇಣಿಯಲ್ಲಿ ಇದ್ದು ಬಾಲ ಕಾರ್ಮಿಕರ ಪುನರುತ್ಥಾನಕ್ಕಾಗಿ, ಪುನರ್ವಸತಿಗಾಗಿ ಶ್ರಮಿಸಿದ ಒಬ್ಬ ಹಿರಿಯ ಚೇತನ ಶ್ರೀಯುತ ಕೈಲಾಶ್ ಸತ್ಯಾರ್ಥಿ ಅವರ ಕುರಿತು ಮತ್ತು ಅವರ ಸಾಧನೆಗಳ ಬಗ್ಗೆ ಪ್ರಸ್ತಾಪಿಸಬೇಕೆಂದಿರುವೆ; ಅದೇ ಇಂದಿನ ಅಂಕಣದ ಹೂರಣ.

ಬಾಲಕರ ಹಕ್ಕುಗಳಿಗಾಗಿ ಹೋರಾಡಿ, ದುಃಸ್ಥಿತಿಯಲ್ಲಿ ಇರುವ ಮಕ್ಕಳನ್ನು ಹೊರತಂದು , ಅವರ ಪುನರ್ವಾಸದ ವ್ಯವಸ್ಥೆ ಮಾಡಿ, ಇಂತಹ ನತದೃಷ್ಟ ಬಾಲಕರ ಜೀವನದಲ್ಲಿ ಹೊಸ ಬೆಳಕನ್ನು ಬೆಳಗಿದ ಸತ್ಯಾರ್ಥಿ ಅವರ ಅಪೂರ್ವ ಸಾಧನೆಗಾಗಿ, ೨೦೧೪ ರಲ್ಲಿ ಅವರಿಗೆ ಶಾಂತಿ ( ಪೀಸ್) ಸ್ಥಾಪನೆಗಾಗಿ ನೋಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರು ಈ ಪ್ರಶಸ್ತಿಯನ್ನು ಪಾಕಿಸ್ತಾನ ದೇಶದ ಮಲಾಲಾ ಯ್ಯುಸುಫ್‌ಜಾಯಿ ಅವರ ಜೊತೆ ಹಂಚಿಕೊಂಡರು.

ಅವರು ಆಯ್ದು ಕೊಂಡ ಈ ದಾರಿ ಸುಗಮವಾಗಿರಲಿಲ್ಲ; ಮುಳ್ಳಿನ ಪಥದಲ್ಲಿ ಅವರಿಗೆ ನಡೆಯಬೇಕಾಯಿತು. ಅವರ ಈ ಪಯಣದಲ್ಲಿ ಎಷ್ಟೋ ಗಾಯಗಳನ್ನು ಅನುಭವಿಸಿ ನಗು ನಗುತ್ತಾ ಅದನ್ನು ಸಹಿಸಿ, ಧೃತಿಗೆಡದೆ ತಮ್ಮ ಗುರಿಯತ್ತ ಮುನ್ನಡೆದರು. ಮಕ್ಕಳ ಶೋಷಣೆಯ ವಿರುದ್ಧ ಸಂಘರ್ಷ ಸಾರಿದ ಅವರು, ವಿಶ್ವದಲ್ಲೇ ಅತಿ ಮಾನ್ಯತೆ ಪಡೆದು, ಜಗತ್ತಿನ ಹೋರಾಟಗಾರರ ಪಂಕ್ತಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ್ದಾರೆ. ಅವರ ನಿರಂತರ ಪರಿಶ್ರಮದಿಂದಾಗಿ, ವಿಶ್ವದಾದ್ಯಂತ, ಬಾಲಕರ ಹಿಂಸೆಯನ್ನು ತಡೆಯಲು ಎಷ್ಟೋ ಕಾನೂನುಗಳು ಜಾರಿಯಾಗಿವೆ. ನಿರ್ಭೀತಿಯಿಂದ, ಪಟ್ಟು ಬಿಡದೆ, ಸತತ ಪೀಡಿತ ಬಾಲಕರ ಸಮಸ್ಯೆಯನ್ನು ಎಲ್ಲರ ಗಮನಕ್ಕೆ ತಂದುದರ ಫಲವೇ, ಈ ಜಾಗತಿಕ ಮಟ್ಟದ ಲೆಜಿಸ್ಲೇಶನ್ ಗಳು. ಅವರೇ ಸ್ವತಃ ಸಾವಿರಾರು ಮಕ್ಕಳನ್ನು ದಾಸ್ಯದಿಂದ ಮುಕ್ತ ಮಾಡಿದ್ದಾರೆ.

ಸುಮಾರು ನಾಲ್ಕು ದಶಕಗಳಿಗೂ ಮೊದಲು, ಕೈಲಾಶ್ ಸತ್ಯಾರ್ಥಿ ಅವರು ಲಾಭದಾಯಕವಾದ ತಮ್ಮ ಎಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆಗೆ ರಾಜೀನಾಮೆ ನೀಡಿ, ತಮ್ಮ ಸ್ನೇಹಿತರ ಜೊತೆ ಸೇರಿ, ‘ಸಂಘರ್ಷ್ ಜಾರಿ ರಹೇಗಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಮಾಜಿಕ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದೇ ಇದರ ಮೂಲ ಉದ್ದೇಶವಾಗಿತ್ತು. ಈ ಸಮಯದಲ್ಲೇ, ವಸಲ್ ಎಂಬ ವ್ಯಕ್ತಿ, ಇಟ್ಟಿಗೆ ಭಟ್ಟಿಯೊಂದರಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ತನ್ನ ಮಗಳನ್ನು, ಇಟ್ಟಿಗೆ ಭಟ್ಟಿಯ ಮಾಲೀಕ ವೇಶ್ಯಾವಾಟಿಕೆಗೆ ಮಾರುತ್ತಿರುವ ವಿಷಯ ಗೊತ್ತಾಗಿ, ಸತ್ಯಾರ್ಥಿ ಅವರ ನೆರವು ಕೋರಿ ಬಂದನು. ಸತ್ಯಾರ್ಥಿ ಅವರು ಆ ಬಾಲಿಕೆಯನ್ನು ಪಾರು ಮಾಡಿದರಾದರೂ, ಅವರು ತಮ್ಮ ಪ್ರಥಮ ಪ್ರಯತ್ನದಲ್ಲಿ ಸಫಲರಾಗಲಿಲ್ಲ.
ಈ ಸಮಯದಲ್ಲೇ, ಸುಮಾರು ನಾಲ್ಕು ದಶಕಗಳ ಹಿಂದೆ,
“ ಬಚಪನ್ ಬಚಾವೋ” (ಬಾಲ್ಯವನ್ನು ಸಂರಕ್ಷಿಸಿ) ಸಂಸ್ಥೆಯ ಸ್ಥಾಪನೆಯಾಯಿತು. ದಾಸ್ಯದ ಬಂಧನದಿಂದ ಮಕ್ಕಳವಿಮೋಚನೆ ಮಾಡಿ ಅವರನ್ನು ಮುಖ್ಯಧಾರೆಯಲ್ಲಿ ಸೇರಿಸುವದೇ ಈ ಸಂಸ್ಥೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಆಡಳಿತ ವರ್ಗದ ಸಹಾಯದಿಂದ,ಇದಕ್ಕೆ ಪೂರಕವಾದ ಮಸೂದೆ -ಕಾನೂನುಗಳನ್ನು ತಯಾರಿಸಿ, ಕಾನೂನಿನ ಶ್ರೀರಕ್ಷೆ ಒದಗಿಸುವದೇ ಈ ಸಂಸ್ಥೆಯ ಮುಖ್ಯ ಗುರಿಯಾಗಿತ್ತು.
ಇದನ್ನು ಸಾಧಿಸಲು, ಸತ್ಯಾರ್ಥಿ ಅವರು ಬಹಳ ತಾಳ್ಮೆಯಿಂದ ಜನರ ಬೆಂಬಲವನ್ನು ಒಗ್ಗೂಡಿಸಿ, ೧೯೮೬ ರಲ್ಲಿ “ ಚೈಲ್ಡ್ ಲೇಬರ್ ಆಕ್ಟ್” – ಕಾರ್ಮಿಕ ಮಕ್ಕಳಿಗಾಗಿ ಮಸೂದೆ- ಕಾನೂನನ್ನು ಪ್ರವೇಶ ಪಡಿಸಲು ಕಾರಕರಾದರು.
ಈ ವರೆಗೆ, ಸುಮಾರು ೯೦,೦೦೦ ಮಕ್ಕಳನ್ನು , ದಾಸ್ಯದಿಂದ, ಕಳ್ಳಸಾಗಣೆಯಿಂದ, ಶೋಷಿತ ಬಾಲ ಕಾರ್ಮಿಕರಾಗಿ ದುಡಿಯುವದರಿಂದ, ಬಚಪನ್ ಬಚಾವೋ ಆಂದೋಲನ ಪಾರು ಮಾಡಿದೆ.

ಪಾರು ಮಾಡಿದ ಮಕ್ಕಳ ಪುನರ್ವಸತಿಗಾಗಿ, ಅವರು ೧೯೯೧ ರಲ್ಲಿ “ ಮುಕ್ತಿ ಆಶ್ರಮ್” ಎನ್ನುವ ಸ್ವಲ್ಪ ಕಾಲಿಕ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದರು. ಇದು ಸಾಲದು ಎಂದು ಮನಗಂಡ ಅವರು ೧೯೯೮ ರಲ್ಲಿ ದೀರ್ಘ ಕಾಲೀನ ಪುನರ್ವಸತಿ ಕೇಂದ್ರ “ ” ಬಾಲ ಆಶ್ರಮ್” ಅನ್ನು ಪ್ರಾರಂಭಿಸಿದರು. ಶೋಷಿತ ಮಕ್ಕಳ ಆರೈಕೆ ಹಾಗೂ ಸಂರಕ್ಷಣೆಗಳಿಗೆ ಈ ಆಶ್ರಮಗಳು ಮಾದರಿಯಾಗಿವೆ ಅಷ್ಟೇ ಅಲ್ಲ, ಆದರ್ಶಗಳಾಗಿವೆ.

ಅಂತರ್ ರಾಷ್ಟ್ರೀಯ ಸಾಮಾಜಿಕ- ರಾಜಕೀಯ ಪ್ರಣಾಳಿಕೆಯ ಕಾರ್ಯಸೂಚಿಯ ಮುಖ್ಯ ಭಾಗವಾಗಿ , ಶೋಷಿತ ಮಕ್ಕಳ ಸಮಸ್ಯೆಯನ್ನು ಸೇರಿಸಲು ಹೆಣಗಾಡಿ, ಅದಕ್ಕಾಗಿ ಅವರು “ ಮಾರ್ಚ ಅಗೇನ್ಸ್ಟ್ ಚೈಲ್ಡ್ ಲೇಬರ್ ಆಯೋಜಿಸಿ, ಸುಮಾರು ೮೦,೦೦೦ ಕಿಮಿ ಕ್ರಮಿಸಿ, ೧೦೩ ದೇಶಗಳಿಗೆ ಪರ್ಯಟಿಸಿ, ತೀರಾ ಕಳಪೆ ದರ್ಜೆಯ ಮಕ್ಕಳ ದುಡಿತದ ವಿರುದ್ಧ ಒಪ್ಪಂದವನ್ನು ಸ್ಥಾಪಿಸಲು ಯತ್ನಿಸಿದರು. ಅದರ ಫಲ ಸ್ವರೂಪವೇ “ ಐ.ಎಲ್. ಓ. ಕನ್ವೆನ್ಶನ್ ಸಂಖ್ಯೆ ೧೮೨;
ಈ ನಿಟ್ಟಿನಲ್ಲಿ, ಇದು ಐ.ಎಲ್. ಓ. ಕೈಕೊಂಡ ಪ್ರಥಮ ದೊಡ್ಡ ಹೆಜ್ಜೆ.

ನಮ್ಮ ದೇಶದಲ್ಲಿ, ಮಕ್ಕಳಿಗಾಗಿ ಉಚಿತ ಮತ್ತು ಕಡ್ಡಾಯ ವಿದ್ಯೆ ಯನ್ನು ಒದಗಿಸುವಗೋಸುಗ , ಅದನ್ನು ಸಂವೈಧಾನಿಕ ಚೌಕಟ್ಟಿನಲ್ಲಿ ತಂದು, ಮಕ್ಕಳ ವಿದ್ಯಾರ್ಜನೆಗಾಗಿ ದಾರಿ ಮಾಡಿ ಕೊಡುವದರಲ್ಲಿ, ಸತ್ಯಾರ್ಥಿ ಅವರ ಪಾತ್ರ ಬಹಳ ಮಹತ್ತರವಾದದ್ದು.

ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ( ಸಾಮಾನ್ಯ ಸಭೆ), ಯುನೆಸ್ಕೊ, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಸಮ್ಮುಖದಲ್ಲಿ, ಭಾಷಣದ ಮೂಲಕ ತಮ್ಮ ವಿಚಾರಗಳನ್ನು ಮಂಡಿಸಿದ ಶ್ರೇಯ ಶ್ರೀಯತ ಕೈಲಾಶ್ ಸತ್ಯಾರ್ಥಿ ಅವರದು. ಇದು ಅವರಿಗೆ ಸಂದ ಅಪರೂಪವಾದ ಗೌರವ.

ಆದರೆ, ನಾನು ಮೊದಲೇ ಹೇಳಿದಂತೆ, ಅವರಿಗೆ ಈ ಪಯಣ ಸುಗಮವಾಗಿರಲಿಲ್ಲ. ಅವರ ಈ ಸುದೀರ್ಘವಾದ ಸಾಧನಾ ಪಥದಲ್ಲಿ, ಎಷ್ಟೋ ದುಷ್ಟ ಶಕ್ತಿಗಳ- ಹಿತಾಸಕ್ತಿಗಳ ವಿರೋಧವನ್ನು ಎದುರಿಸಬೇಕಾಯಿತು. ಅವರ ಮೇಲೆ ಪ್ರಾಣಾಂತಕ ಹಲ್ಲೆಗಳೂ ನಡೆದವು. ಸತ್ಯಾರ್ಥಿ ಅವರು ನೀಡಿದ ಸಂದರ್ಶನವೊಂದರಲ್ಲಿ, ತಮ್ಮ ಬೆನ್ನ ಮೇಲೆ ಮೂಡಿದ ಬಾಸುಂಡೆಗಳನ್ನು ತೋರಿದಾಗ, ನನ್ನ ಕಣ್ಣುಗಳು ತುಂಬಿ ಬಂದವು.

ಆದರೂ,ಇದಾವದನ್ನೂ ಲೆಕ್ಕಿಸದೆ, ತಮ್ಮ ಉದ್ದೇಶಗಳಿಂದ ವಿಚಲಿತರಾಗದೆ
ಬಹಳಷ್ಟು ಸಾಧನೆಗೈದು, ಸಮಾಜದಲ್ಲಿ ನತದೃಷ್ಟ ಬಾಲಕರ ಜೀವನದಲ್ಲಿ ಬೆಳಕು ತಂದಿದ್ದಾರೆ.
ಸುತ್ತಲೂ ಅಂಧಕಾರ ಕವಿದಾಗ, ಬೆಳಕು ಪಸರಿಸಲು, ಸತ್ಯಾರ್ಥಿ ಅವರಂಥ ದೀವಿಗೆಗಳು ಸಮಾಜಕ್ಕೆ ಬಹಳ ಅವಶ್ಯಕ.
ಇಂತಹ ದೀವಿಗೆಗಳು ಎಂದಿಗೂ ಆರದಿರಲಿ, ಸದಾ ಬೆಳಗುತ್ತ ಇರಲಿ ಎಂದು ಹಾರೈಸುತ್ತ ವಂದನೆಗಳು.

.