ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮ ಬದುಕು- ೯

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |ವರ್ತತೇ ಸತತಂ ಹೃಷ್ಟಃ ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ ||

ಅಂದರೆ, ‘ ಎಲ್ಲ ಜಡ ಮತ್ತು ಚೇತನ ವಸ್ತುಗಳನ್ನು ತನ್ನಂತೆಯೇ ಎಂದು ತಿಳಿದು, ಅವುಗಳ ಹಿತಕ್ಕಾಗಿಯೂ ಶ್ರೇಯಸ್ಸಿಗಾಗಿಯೂ ಮಂಗಳಕ್ಕಾಗಿಯೂ ಆನಂದದಿಂದ ಎಲ್ಲ ಕಾಲದಲ್ಲೂ ಪೂರ್ಣ ಮನಸ್ಸಿನಿಂದ ನಡೆದುಕೊಳ್ಳುವದೇ ದಯೆ’.
‘ದಯವಿಲ್ಲದ ಧರ್ಮವೆದೇವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯಾ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
ಎಂದು ಅದಕ್ಕೇ ಹೇಳಿಲ್ಲವೇ ನಮ್ಮ ಬಸವಣ್ಣನವರು. ಅಷ್ಟೇ ಅಲ್ಲ, ದಯೆ ಇಲ್ಲದ ಧರ್ಮ ಅದೆಂತಹ ಧರ್ಮ ಎಂದಿದ್ದಾರೆ. ಹಾಗಾಗಿ ಎಲ್ಲ ಧರ್ಮದ ತಳಹದಿ ದಯೆ. ದಯೆ , ಕರುಣೆ ಅನುಕಂಪ, ಇವು ನಮ್ಮ ಜೀವನದ ಮೂಲ ಮಂತ್ರವಾದಾಗಲೇ ನೆಮ್ಮದಿ ಮತ್ತು ಸುಖದಿಂದ ಬಾಳಲು ಸಾಧ್ಯ. ಈ ದಯೆ, ಮಾನವರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ತೋರಬೇಕೆಂದು ನಮ್ಮ ಧರ್ಮ ಸಾರಿ ಹೇಳುತ್ತದೆ. ಮಾನವರ ಬಗ್ಗೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳ ಪ್ರತಿ ನಾವು ಸಂವೇದನಾಶೀಲರಾಗಿರಬೇಕೆಂದು ಪುರಾತನ ಕಾಲದಿಂದಲೂ ನಮ್ಮ ಗುರು-ಹಿರಿಯರು ನಮಗೆ ಬೋಧಿಸುತ್ತಾ ಬಂದಿದ್ದಾರೆ. ಎಲ್ಲ ಪ್ರಾಣಿಗಳ ಹಿತವನ್ನು ಬಯಸಿದಾಗ ನಮ್ಮಮನಸ್ಸು ಪರಿಶುದ್ಧಗೊಳ್ಳುತ್ತದೆ.
ಪರರ ನೋವನ್ನು , ಜೀವಿಗಳ ಕಷ್ಟಗಳನ್ನು ನೋಡಿಯೂ ಮರುಗದ, ಕರಗದ ಮನಸ್ಸು ಒಂದು ಪಾಷಾಣದಂತೆ. ಪರರ ನೋವಿಗೆ ಸ್ಪಂದಿಸದೆ ಇರುವದಾಗಲಿ, ಅವರ ನೋವಿನಲ್ಲಿ ಸುಖ ಕಾಣುವದಾಗಲಿ ಮನುಷ್ಯನಿಗೆ ತರವಲ್ಲ, ಅದು’ ಸ್ಯಾಡಿಸಂ’ ಎಂದು ಕರೆಸಿಕೊಳ್ಳುತ್ತದೆ. ಇದರಿಂದ ಮನಸು ಕಲುಷಿತಗೊಳ್ಳುತ್ತದೆ. ಇಂತಹ ಮಲಿನವನ್ನು ಮನದಿಂದ ತೆಗೆದು ಹಾಕಿ, ಎಲ್ಲ ಜೀವರಾಶಿಗಳ ಪ್ರತಿ ಅಂತಃಕರಣದಿಂದ ನಾವು ವ್ಯವಹಾರ ಮಾಡಿದಲ್ಲಿ ಎಲ್ಲೆಡೆ ಶಾಂತಿ ಸದ್ಭಾವನೆಗಳು ನೆಲೆಗೊಳ್ಳುತ್ತವೆ.

ಹಿಂದಿನ ಅಂಕಣದಲ್ಲಿ ಬಿಶ್ನೋಯಿ ಜನಾಂಗದ ಪರಿಸರ ಪ್ರೇಮ, ಹಾಗೂ ನಿಸರ್ಗದ ಜೊತೆ ಸಾಮರಸ್ಯದಿಂದ ಬಾಳುವ ಅವರ ಜೀವನ ಶೈಲಿಯ ಕುರಿತು ಪ್ರಸ್ತಾಪ ಮಾಡುತ್ತ, ಆ ಜೀವನ ಶೈಲಿಗೆ ಕಾರಣವಾದ ಅವರು ತಮಗಾಗಿ ಹಾಕಿಕೊಂಡಿರುವ ಕೆಲವು ಪ್ರಮುಖವಾದ ತತ್ವಗಳ/ ನಿಯಮಗಳ ಉಲ್ಲೇಖ ಮಾಡಿದ್ದೆ. ಅವುಗಳನ್ನು ನಿಷ್ಠೆಯಿಂದ ಪಾಲಿಸುವ ಅವರ ವಿಶೇಷತೆಯ ಕುರಿತು ನಿಮ್ಮ ಜೊತೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದೆ. ಅವರ ಮುಖ್ಯ ತತ್ವಗಳಲ್ಲಿ ಒಂದಾದ ‘ ಅಮರ ರಖಾವೆ ಥತ್’ ಅಂದರೆ ನಿರ್ಲಕ್ಷ್ಯಕ್ಕೆ ಗುರಿಯಾದ, ಜನರು ಕೈಬಿಟ್ಟ ಪ್ರಾಣಿಗಳಿಗೆ ಆಶ್ರಯ ನೀಡುವದು ಎಂದರ್ಥ. ಈ ಮಹತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಹನೀಯರುಗಳ ಕುರಿತು ಹೆಚ್ಚು ಮಾಹಿತಿಯನ್ನು ಹಂಚಿಕೊಳ್ಳುವದಾಗಿ ನಿಮಗೆ ಈಗಾಗಲೇ ತಿಳಿಸಿದ್ದೆ. ಅಂಕಣಕ್ಕೆ ಸ್ಪಂದಿಸುತ್ತ ನಮ್ಮ ಗುಂಪಿನ ಹಿರಿಯ ಸದಸ್ಯರಾದ ಮೀರಾ ಜೋಷಿ ಅವರು ಪೇಜಾವರ ಮಠದ ಶ್ರೀಗಳಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ನಿರ್ವಹಿಸುತ್ತಿರುವ ಉಡುಪಿಯ ಬಳಿಯಲ್ಲಿರುವ ನೀಲಾವರದ ಗೋಶಾಲೆಯ ವಿಚಾರನ್ನು ತಿಳಿಸಿದ್ದರು. ಆ ಮಹನೀಯರ ಕೈಂಕರ್ಯದಿಂದಲೇ ಈ ವಿಷಯಕ್ಕೆ ನಾಂದಿ ಹಾಕುವೆ.
ಪೇಜಾವರ ಮಠದ ಪ್ರಸ್ತಾಪ ಬಂದಾಗ ವಿಶ್ವ ಪ್ರಸನ್ನ ತೀರ್ಥರ ಗುರುಗಳಾದ, ಮಹಾತಪಸ್ವಿಗಳಾದ ಶ್ರೀ ಶ್ರೀ ವಿಶ್ವೇಶ ತೀರ್ಥರ ಸ್ಮರಣೆ ಬಾರದೆ ಇರಲು ಹೇಗೆ ಸಾಧ್ಯ. ಶ್ರೀಗಳು 1938 ರಲ್ಲಿ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರಿಂದ ದೀಕ್ಷೆ ಪಡೆದು ,ಅಧ್ಯಾತ್ಮದ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಆದರೆ, ಅಧ್ಯಾತ್ಮದ ಉತ್ತುಂಗದಲ್ಲಿಯೂ ಅವರು ಸಮಾಜಮುಖಿಯಾಗಿ ಕೈಕೊಂಡ ಹಲವಾರು ಲೋಕ ಕಲ್ಯಾಣದ ಕಾರ್ಯಗಳ ಬಗ್ಗೆ ಇಲ್ಲಿ ಹೇಳ ಬಯಸುವೆ.

ಬಡ ವಿದ್ಯಾರ್ಥಿಗಳಿಗಾಗಿ ಎಷ್ಟೋ ವಿದ್ಯಾ ಸಂಸ್ಥೆಗಳನ್ನು , ಹಾಸ್ಟೆಲುಗಳನ್ನು ಸ್ಥಾಪಿಸಿದ ಅಗ್ಗಳಿಕೆ ವಿಶ್ವೇಶ ತೀರ್ಥ ಶ್ರೀಗಳವರದು. ಬಡ ವಿದ್ಯಾರ್ಥಿಗಳಿಗೆ ಒದಗಿಸಿದ ಉಚಿತ ಹಾಸ್ಟೆಲ ವಾಸ್ತವ್ಯದ ಸೌಲಭ್ಯವನ್ನು ಸಹಸ್ರಾರು ವಿದ್ಯಾರ್ಥಿಗಳು ಪಡೆದ ಸಂಗತಿ ಉಲ್ಲೇಖನಾರ್ಹ. ಅವರು ನಮ್ಮನ್ನು ಅಗಲುವ ದಿನಗಳ ಮುಂಚೆ ಹೈದರಾಬಾದಿಗೆ ಆಗಮಿಸಿದ್ದು, ಬೃಹತ್ ಸಮಾವೇಶವನ್ನು ಆಯೋಜಿಸಿ, ಧರ್ಮ ಗ್ರಂಥವಾದ,’ ಸುಧಾ’ ಪಾಠ ಮಾಡಿದ ಪಂಡಿತರಿಗೆ ಸನ್ಮಾನಿಸಿದ ಕಾರ್ಯಕ್ರಮದ ಕೆಲವು ವಿಶೇಷ ಸಂಗತಿಗಳು ನನ್ನ ಮನದಲ್ಲಿ ಮನೆ ಮಾಡಿವೆ. ಒಲವೇ ಸಾಕಾರಗೊಂಡತ್ತಿದ್ದ ವಿಶ್ವೇಶ ತೀರ್ಥರು ಸದಾ ಪ್ರಸನ್ನ ವದನರಾಗಿದ್ದು, ಎಲ್ಲರನ್ನೂ ಮುಗುಳ್ನಕ್ಕು ಪ್ರೀತಿ ಮತ್ತು ಅಂತಃ ಕರಣದಿಂದ ಮಾತನಾಡಿಸುವ ರೀತಿ ಬೆರುಗು ಮೂಡಿಸುತ್ತಿತ್ತು. 88 ರ ಇಳಿವಸ್ಸಿನಲ್ಲೂ ಅವರ ಸೈರಣೆ ಅಚ್ಚರಿ ಮೂಡಿಸುವಂತಿತ್ತು. ಹಗಲಿಡೀ ಅಧ್ಯಾತ್ಮದ ಕಾರ್ಯಕ್ರಮಗಳು ನೆರವೇರಿದ ಬಳಿಕ, ಮೂರು ದಿನಗಳವರೆಗೆ ಜರುಗಿದ ಈ ಬೃಹತ್ ಸಮಾರಂಭದ ಪ್ರತಿ ರಾತ್ರಿಯಂದು ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರೀಗಳವರು ಇಡೀ ದಿನ ದಣಿದರೂ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಪರಿ ಬಹಳ ಅನನ್ಯವೆನೆಸಿತು. ಚಿಕ್ಕ ಮಕ್ಕಳ ಕಾರ್ಯಕ್ರಮಗಳನ್ನು ಸಹ ಅವರು ಅಷ್ಟೇ ಪ್ರೀತಿಯಿಂದ ನೋಡಿ, ಕಾರ್ಯ ಕ್ರಮ ಮುಗಿಯುವ ತನಕ ಕುಳಿತುಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರ ಬೆನ್ನು ತಟ್ಟಿದಾಗ, ಕಲಾವಿದರಿಗೆ ಆಗುತ್ತಿದ್ದ ಆನಂದ ಹೇಳತೀರದು.

ಕೆಲವೊಂದು ಕಾರ್ಯಕ್ರಮಗಳಿಗೆ ಆಗಮಿಸುವ ಮುಖ್ಯ ಅತಿಥಿಗಳು ,ಅದರಲ್ಲೂ ರಾಜಕಾರಣಿಗಳು, ನಾಯಕರು ತಡವಾಗಿ ಆಗಮಿಸಿ, ನೃತ್ಯ ಅಥವಾ ನಾಟಕ ನಡೆಯುತ್ತದ್ದರೆ ಅದನ್ನು ಅವರಿಗಾಗಿ ನಿಲ್ಲಿಸಿ, ಕಲಾವಿದರನ್ನು ಕಡೆಗಣಿಸಿ ತಮ್ಮ ಭಾಷಣಗಳನ್ನು ಬಿಗಿದು, ಆಭಾಸವೆನಿಸಿದರೂ ಸಭೆಯಿಂದ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಹೊರಟು ಹೋಗುವವರು, ಕಲಾವಿದರನ್ನು ಗೌರವಿಸುವದನ್ನು ವಿಶ್ವೇಶ ತೀರ್ಥರ ಆಚರಣೆಯಿಂದ ಕಲಿಯಬೇಕು.
ಪಶು ಪ್ರಾಣಿಗಳ ಮೇಲೆ ಶ್ರೀಗಳವರಿಗೆ ಅಪಾರವಾದ ಪ್ರೀತಿಯಿತ್ತು. ಅದರಲ್ಲೂ ಗೋರಕ್ಷಣೆಯ ವಿಷಯ ಅವರ ಹೃದಯಕ್ಕೆ ತೀರಾ ಹತ್ತಿರವಾಗಿತ್ತು. ದೇಶದ ಸಹಸ್ರಾರು ದನಗಳು ದೇಶದಿಂದ ವಿದೇಶಕ್ಕೂ ಕಳ್ಳುಸಾಗಣೆಯಾಗಿ ಕಸಾಯಿಖಾನೆಗೆ ಹೋಗುತ್ತಿದ್ದ ವಿಷಯವನ್ನು ಅರಿತ ಅವರು, ಇಂತಹ ದನಗಳನ್ನು ಕಾಪಾಡಲು ದೇಶದಾದ್ಯಂತ ಆಶ್ರಯಗಳನ್ನು ಸ್ಥಾಪಿಸಲು ಒತ್ತು ನೀಡಿದರು. ಹಳ್ಳಿಗಳಲ್ಲಿ ರೈತರ ಕುಟುಂಬದ ಸದಸ್ಯರಂತೆಯೇ ಸಹಬಾಳ್ವೆ ಮಾಡುವ ದನ ಕರುಗಳನ್ನು ಮಾರುವ ಅನಿವಾರ್ಯತೆ, ರೈತನಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಂದ ಸಂದಿಗ್ಧತೆಯೆಂದು ಅವರು ಅರಿತಿದ್ದರು. ( ಬಾಲ್ಯದಲ್ಲಿ ನಾನು ಹಳ್ಳಿಗೆ ಹೋಗುತ್ತಿದ್ದಾಗ, ಮನೆಗಳಲ್ಲಿಯ ಹಟ್ಟಿಯ ಪ್ರತಿಯೊಂದು ಎತ್ತಿಗೆ, ಗೋವಿಗೆ ಪ್ರತ್ಯೇಕವಾಗಿ ಹೆಸರಿಟ್ಟು ಪ್ರಿತಿಯಿಂದ ಕರೆದಾಗ, ಅವುಗಳು ಅಷ್ಟೇ ಒಲವು ತೋರಿ ಅಂಬಾ ಎನ್ನುತ್ತಿದ್ದುದು, ಇನ್ನೂ ನನ್ನ ಚಿತ್ತ ಭಿತ್ತಯಲ್ಲಿ ಕೆತ್ತಿದಂತಿದೆ.)

ಇಂತಹ ಪರಿಸ್ಥಿತಿಯಲ್ಲಿ ಅವುಗಳಿಗೆ ಆಶ್ರಯ ನೀಡುವ ಮಹತ್ವವನ್ನು ಮನಗಂಡ ಅವರು, ಉಡುಪಿಯ ಹತ್ತಿರ ಕೊಡವೂರು ಎಂಬ ಹಳ್ಳಿಯಲ್ಲಿ ಗೋಶಾಲೆಯನ್ನು ಸ್ಥಾಪಿಸಿದರು. ಸುಮಾರು 17 ವರ್ಷಗಳ ಹಿಂದೆ ಚಾಲನೆಗೊಂಡ ಈ ಗೋಶಾಲೆ ವಯಸ್ಸಾದ, ರೋಗಗ್ರಸ್ತ ಆಕಳುಗಳ ಶುಶ್ರೂಷೆ ಮತ್ತು ಆರೈಕೆಗಳು ನಡೆಯುತ್ತಿದ್ದು, ಪೀಡಿತ, ಹಿಂಸಿತ ಗೋವುಗಳ ಅಭಯ ಧಾಮವಾಗಿತ್ತು. ಆದರೆ, ಆಕಳುಗಳ ಸಂಖ್ಯೆ ಬೆಳೆದಂತೆ, ಗೋಶಾಲೆಯನ್ನು ನೀಲಾವರಕ್ಕೆ ಸ್ಥಳಾಂತರಿಸಲಾಯಿತು. ಸುಮಾರು 35 ಎಕರೆ ಜಮೀನಿನ ವಿಸ್ತೀರ್ಣ ಹೊಂದಿದ ಈ ಗೋಶಾಲೆ ‘ ಗೋವರ್ಧನ ಗಿರಿ ಟ್ರಸ್ಟ್” ಅಡಿ ನಡೆಯುತ್ತಿದ್ದು, ಪ್ರಸ್ತುತ 1200 ಹೆಚ್ಚಿನ ಆಕಳುಗಳಿಗೆ ಆಶ್ರಯವನ್ನು ನೀಡುತ್ತಿದೆ. ನೀಲಾವರದ ಈ ಗೋಶಾಲೆ, ವಿಶ್ವೇಶ ತೀರ್ಥರ ಶಿಷ್ಯಂದಿರಾದ, ಹಾಗೂ ಈಗಿನ ಪೇಜಾವರ ಅಧೋಕ್ಷಜ ಮಠದ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ಅಧ್ಯಕ್ಷತೆಯಲ್ಲಿ ಸಮರ್ಥವಾಗಿ ನಿರ್ವಹಿಸಲ್ಪಡುತ್ತಿದೆ. ಸ್ವತಃ ಶ್ರೀಗಳವರೇ ಮುತುವರ್ಜಿ ವಹಿಸಿ, ಪ್ರೀತಿಯಿಂದ ಆಕಳುಗಳಿಗೆ ಸ್ನಾನ ಮಾಡಿಸುತ್ತಾರೆ, ಮಮತೆಯಿಂದ ಮೇವು ಉಣಿಸಿ ಅವುಗಳನ್ನು ತಣಿಸುತ್ತಾರೆ. ಗೋಶಾಲೆಯ ಎಲ್ಲ ಆಕಳು –ಕರುಗಳಿಗೆ ಸ್ವಾಮಿಗಳ ಮೇಲೆ ಬಹಳ ಮಮತೆ. ಸ್ವಾಮಿಜಿ ಅವರು ಗೋಶಾಲೆಗೆ ಭೇಟಿ ಕೊಟ್ಟಾಗಲೆಲ್ಲ ಅವುಗಳು ಪ್ರಕಟಿಸುವ ಪ್ರೇಮವನ್ನು ಕಣ್ಣಾರೆ ಕಂಡರೇನೆ ಅದರ ಭಾವಪೂರ್ಣತೆ ಹಾಗೂ ಸಂವೇದನೆಯಿಂದ ಕೂಡಿದ ಆ ಬಂಧದ ಅರಿವು ಆಗುತ್ತದೆ. ಎಷ್ಟೋ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಾಗದ ಈ ಮೂಕ ಪಶುಗಳಿಗಿರುವ ಸ್ವಾಮಿಜಿ ಅವರ ಮೇಲಿನ ಪ್ರೇಮವನ್ನು, ಅಂಕಣಕ್ಕೆ ಅನುಬಂಧವಾಗಿ ಸೇರಿಸಿರುವ ಕೆಳಗಿನ ‘ ವೀಡಿಯೋ ಕ್ಲಿಪ್ ‘ ಸಾರುತ್ತದೆ. ಆಕಳ ಕರುವೊಂದು ಅಂತಃಕರಣ ಮತ್ತು ಮಮತೆಯಿಂದ ಸ್ವಾಮೀಜಿ ಅವರನ್ನು ಆವರಿಸಿ, ಅವರ ಗಲ್ಲವನ್ನು ತನ್ನ ನಾಲಿಗೆಯಿಂದ ಪ್ರೀತಿಯಿಂದ ಸವರುವದನ್ನು ನೋಡಿದಾಗ, ಎಲ್ಲರೂ ಮೂಕ ವಿಸ್ಮಿತರಾಗುವದು ಖಚಿತ! ಈ ದೃಶ್ಯದ ತುಣುಕನ್ನು ಹಂಚಿಕೊಂಡು ಉಪಕರಿಸಿದ ಮೀರಾ ಜೋಷಿ ಅವರಿಗೆ ಅನೇಕ ಧನ್ಯವಾದಗಳು.

ಮಠದ ಆವರಣದಲ್ಲಿ ತನ್ನ ಗುಂಪಿನಿಂದ ಬೇರ್ಪಟ್ಟ ಹೆಬ್ಬಾವಿನ ಮರಿಯೊಂದು ಸಿಲುಕಿಕೊಂಡಿದ್ದು, ಅದು ದನಗಳ ಕೊಟ್ಟಿಗೆ ಹತ್ತಿರ ಸಾಗುವುದನ್ನು ನೋಡಿದ ಸ್ವಾಮೀಜಿ ಅವರು, ಹಾವಿನ ಮರಿ ಹಸುಗಳ ಕಾಲುಗಳ ಕೆಳಗೆ ಸಿಕ್ಕು ಸಾಯಬಾರದೆಂದು, ಅದನ್ನು ಹಿಡಿದು ತೋಟದಲ್ಲಿ ಬಿಟ್ಟು ರಕ್ಷಿಸಿದರು. ಹೀಗೆ, ಸರ್ಪದ ಮೇಲೂ ಕರುಣೆ ತೋರಿ ಅದಕ್ಕೆ ಸಂರಕ್ಷಣೆ ನೀಡಿದ ಶ್ರೀಗಳವರು ಅಕ್ಷರಶಃ ‘ ದಯೆಯೇ ಧರ್ಮದ ಮೂಲ’ ಎಂಬ ಉದಾತ್ತ ತತ್ವವನ್ನು ಮೈಗೂಡಿಸಿಕೊಂಡ ಮಹನೀಯರು.

ಈ ಎಲ್ಲ ವಿಷಯಗಳು ಸ್ವಾಮೀಜಿ ಅವರ ಪಶು- ಪ್ರಾಣಿಗಳ ಬಗೆಗಿರುವ ದಯಾ ಮತ್ತು ಕರುಣಾ ಭಾವಗಳಿಗೆ ದ್ಯೋತಕ.
ಪ್ರಾಣಿ ದಯೆ ಬರೀ ಬಾಯ್ಮಾತಲ್ಲ, ಅದು ಹೃದಯದಾಳದಿಂದ ಬರುವ ನಿಜವಾದ ಸಂವೇದನೆ ಹಾಗೂ ಅನುಭೂತಿಯೆಂದು ತೋರಿಕೊಟ್ಟು, ಸಕಲ ಜೀವ ರಾಶಿಗಳ ಬಗೆಗಿನ ಅಪಾರ ಒಲುಮೆಯನ್ನು ಅಧ್ಯಾತ್ಮದಲ್ಲಿ ಅಳವಡಿಸಿಕೊಂಡು, ಅದನ್ನು ಅನುಷ್ಠಾನಕ್ಕೆ ತಂದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಅನುಕರಣೀಯರು. ಅವರು ನಮ್ಮ ಆದರ್ಶವಾಗಬೇಕು. ಅವರಿಂದ ಪ್ರೇರಿತರಾಗಿ ನಾವು ಕಿಂಚಿತ್ತಾದರೂ ಪ್ರಾಣಿಗಳಲ್ಲಿ ದಯೆ ತೋರಿದಲ್ಲಿ , ಈ ಭೂಮಿ ನಿಸ್ಸಂದೇಹವಾಗಿಯೂ ನೆಮ್ಮದಿಯ ತಾಣವಾಗುವದು. ಇಂತಹ ಗುರುಗಳಿಗೆ ಸಹಸ್ರ ನಮನಗಳು.


ಮುಂದಿನ ಅಂಕಣದಲ್ಲಿ, ಬಿಶ್ನೋಯಿ ಜನಾಂಗದ ‘ ಅಮರ ರಖಾವೆ ಥತ್’ ತತ್ವದ ಮತ್ತೊಂದು ಉಜ್ವಲವಾದ ನಿದರ್ಶನ ಕೊಡಲು ಯತ್ನಿಸುವೆ. ವಂದನೆಗಳು.