ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಸತ್ಯವೇ ದೈವವೆಂದಿ ಹಿಂಸೆ ಸಲ್ಲ ಎಂದಿ
ಗಾಂಧಿ ನೀನಂದು ಅಂದಿದ್ದು ಹುದುಗಿ ಹೋಯಿತೆ
ರಾಜಘಾಟದಲಿ
ಸುತ್ತ ಜಂಜಾಟಗಳ ನಡುವೆ ಮರೆತು ಹೋಗಿದೆ ಮಂತ್ರ
ಉಳಿದಿರುವದು ಈಗ ಬರೀ ತಂತ್ರ!
ಸ್ವತಂತ್ರ ಭಾರತದಲಿ ರಾಮರಾಜ್ಯದ ಕನಸು ಕಂಡಿದ್ದಿ
ಕಾಮರಾಜ್ಯವಾಗಿ ವಿಜೃಂಭಿಸುತಿಹುದೀಗ
ಹಪಾಪಿ ಪಿಪಾಸಿಗಳ ಅಟ್ಟಹಾಸ ಎಲ್ಲೆಡೆ
ಬೆಟ್ಟದಂಥ ಮಾತುಗಳಿಂದ ಮೆಟ್ಟುತಿಹೆವು ಅವರ
ಅಭಯ -ನಿರ್ಭಯ ದ ಭ್ರಮೆ ಆವರಿಸಿದೆ ಸುತ್ತಲೂ
ನೀನಿತ್ತ ಬೆಳಕು ಥಳಕು ಮಾತುಗಳಲಿ ಮಾಡಿ ಪೋಲು
ಆವರಿಸಿಹುದೀಗ ಸುತ್ತಲೂ ಕತ್ತಲು!
ನೀ ತೆತ್ತೆ ಪ್ರಾಣವ ಎಲ್ಲರ ಬಾಳ ಹಸನಾಗಿಸಲು
ಮಸಣವಾಗಿಹುದಿಂದು ದುಷ್ಕರ್ಮಿಗಳ ಹೇಯ ಕೃತ್ಯಗಳಿಂದ
ಪರಿಸರ
ಮಲಿನಗೊಂಡಿಹುದು
ಸ್ವಚ್ಛಗೊಳಿಸಲಿ ಬೇಕು ಅಂತರಂಗದ ಪೊರಕೆಯಿಂದ!
‘ನಿನ್ನ ತನುವಿರದಿರೆ ಏನು ನಿನ್ನತನವಿಲ್ಲಿಹುದು, ನಿನ್ನ ಮೂರ್ತಿಯು ಪ್ರತಿಯೊಂದು
ಮನದಲ್ಲಿಹುದು” ಎಂದು ನಂಬಿದ್ದೆ ನಾನು
ಮನದಿ ಮೂಡಿದ ನಿನ್ನ ಆತುಮವ ಕಿತ್ತು ಹೊರಗಟ್ಟಿ
ಬಗೆ ಬಗೆಯ ನಿನ್ನ ಆಕಾರದ ಪ್ರತಿಮೆಗಳ ಸಾಕಾರಗೊಳಿಸಿದೆವು
ಊರು ಊರುಗಳಲಿ ಸಂದಿಗೊಂದಿಗಳಲಿ
ಕೋಲು ಹಿಡಿದ ನಿನ್ನ ಪ್ರತಿಮೆ ಕಂಡರೆ ಸಾಕು
ಎಂಥ ರಾತ್ರಿಯೇ ಇರಲಿ
ಬಸ್ ನಿಲ್ದಾಣ ಹತ್ತಿರವೆಂದು ಖಾತ್ರಿ!
ಈಗಲೂ ನೆರೆಯುವದು ಜಾತ್ರೆ ನಿನ್ನ ಜನುಮ ದಿನದಂದು
ಹಾಕಿ ನಿನ್ನ ಕೊರಳಿಗೆ ಹೂಮಾಲೆಗಳ ಮುಚ್ಚಿಸಿ ನಿನ್ನ ನೆನಪಲಿ
ಕಚೇರಿ ಶಾಲೆಗಳ, ಬರೆಯಿಸಿ ನಿಬಂಧಗಳ, ಬಿಗಿದು ಭಾಷಣಗಳ
ಕೃತಾರ್ಥರಾದೆವೆಂಬ ಹುಸಿ ಸಮಾಧಾನದಲಿ ಇರುವದ ನೋಡಿ
ಮುಸಿ ಮುಸಿ ನಗುತಿರಬಹುದು ನೀನು
‘ ಹೇ ರಾಮ್’ ವೇ ನಿನ್ನ ಕೊನೆಯ ಮಾತೇನೂ
ಅಥವಾ ನಿನಗೆ ಇನ್ನೇನಾದರೂ ಹೇಳುವದಿದೆಯೇನು!
ಅರಹುವಿ ಹೇಗೆ ನಿನ್ನ ಮರ್ಮವ ; ಹಿಗ್ಗಿಸುವೆಯಾ ನಿನ್ನ ಆತುಮವ
ದಿಕ್ ದಿಗಂತಕೆ!
ನಿನ್ನ ಒಲವಿನ ಶಕ್ತಿಯಿಂದ ಆರಿಸುವೆಯ ಭುಗಿಲೆದ್ದ ಜ್ವಾಲೆಯನು
ಶಾಂತಿ ಅಹಿಂಸೆಗಳ ಪಾಠವನು ಸಾರಲು ಮತ್ತೆ
ಕಾಯ ತಾಳುವೆಯಾ ನೀನು
ಕಾಯಬೇಕೆ ನಾವು ಅಲ್ಲಿಯ ತನಕ
ಅಥವಾ ಮರಳಿ ಅರಳುವೆಯಾ ಮನ ಮನಗಳಲಿ !

ಈ ವಾರದ ಅಂಕಣವನ್ನು ನಾನು ಬರೆಯಲು ಪ್ರಾರಂಭಿಸಿದ್ದು ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜನುಮ ದಿನದಂದು. ಅದಕ್ಕೇ ಅಂಕಣದ ಶ್ರೀಕಾರ ಅವರ ಕುರಿತು ಬರೆದ ಸಾಲುಗಳಿಂದ ಮಾಡಿದೆ. ಈ ರೀತಿಯಾಗಿ ಅವರಿಗೆ ನಮನ ಸಲ್ಲಿಸುತ್ತ , ಸತ್ಯ ಹಾಗೂ ಅಹಿಂಸೆ’ ಗಳ ಮೇಲೆ ಅವರು ತೋರಿದ ‘ ಒಲವು’ ಹಾಗೂ ಅದನ್ನೇ ಧೃಡವಾಗಿ ನಂಬಿ, ದೇಶದ ಪ್ರಜೆಗಳಲ್ಲಿ ಅದರ ಬಗ್ಗೆ ಅಚಲವಾದ ವಿಶ್ವಾಸ ಮೂಡುವಂತೆ ಮಾಡಿ, ಹೋರಾಟಕ್ಕೆ ಹುರಿದುಂಬಿಸಿ ನಮ್ಮನ್ನು ಆಳುತ್ತಿದ್ದ ಬ್ರಟಿಶ್ ಸಾಮ್ರಾಜ್ಯಕ್ಕೇ ಸವಾಲನ್ನೆಸೆದ ಆ ಮಹಾಚೇತನಕೆ ಈ ಸಲದ ‘ಒಲವೆ ನಮ್ಮ ಬದುಕು’ ಅರ್ಪಿತ.


‘ಮುಂಬರುವ ಪೀಳಿಗೆಗಳು, ಇಂತಹ ಒಬ್ಬ ಖಂಡ –ಮಾಂಸಗಳಿಂದ ಯುಕ್ತನಾದ ವ್ಯಕ್ತಿ ಬದುಕಿ ಬಾಳಿ ಈ ಧರೆಯ ಮೇಲೆ ನಡೆದಿದ್ದರು ಎಂದು ನಂಬಲಾರರು’ ಎಂಬ ಮಾತನ್ನು ಗಾಂಧೀಜಿ ಅವರ ಬಗ್ಗೆ ಪ್ರಖ್ಯಾತ ವಿಜ್ಞಾನಿ ಅಲ್ಬರ್ಟ್ ಐನಸ್ಟಿನ್ ಅವರು ಆಡಿದ್ದು ಎಲ್ಲರಿಗೂ ಗೊತ್ತಿದ್ದದ್ದೇ. ವಿನೂತನವಾದ ತಮ್ಮ ಸತ್ಯಾಗ್ರಹ ಹಾಗೂ ಅಹಿಂಸೆಯನ್ನೇ ಆಧಾರವಾಗಿಟ್ಟುಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಸೆಯನ್ನು ಇತ್ತು ಅದರಿಂದ ತಮ್ಮ ಪ್ರಭಾವವನ್ನು ಜಗತ್ತಗೆಲ್ಲಾ ಬೀರಿ, ಎಷ್ಟೋ ಜಾಗತಿಕ ನಾಯಕರಿಗೆ ಸ್ಫೂರ್ತಿ – ಪ್ರೇರಣೆಗಳನ್ನು ನೀಡಿದ್ದಾರೆ. ಜಾಗತಿಕ ಮಟ್ಟದ ನಾಯಕರಾದ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ , ಅಂಗ್ ಸ್ಯಾನ್ ಸು ಗಾಂಧೀಜಿ ಯವರಿಂದ ಪ್ರಭಾವಿತರಾದವರಲ್ಲಿ ಪ್ರಮುಖರು. ಈ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ತಾವು ಹೊಸದಾಗಿ ಹುಟ್ಟು ಹಾಕಿದ್ದಲ್ಲಾ ಎಂಬ ಮಾತನ್ನು ಸ್ವತಃ ಮಹಾತ್ಮಾ ಅವರೇ ಹೇಳಿಕೊಂಡಿದ್ದಾರೆ. ಆ ದೃಷ್ಟಿಯಿಂದ ನೋಡಿದರೆ’ ಗಾಂಧಿ ತತ್ವವು ತತ್ವವೇ’ ಎಂಬ ಅನುಮಾನ ಹುಟ್ಟಿಕೊಳ್ಳುವದು. ಆದರೆ, ಈ ತತ್ವಗಳಲ್ಲಿ ಅಚಲವಾದ ನಂಬಿಕೆ ಇಟ್ಟು ಅದನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು , ಅದರಂತೆಯೇ ನುಡಿದು, ನಡೆದು ಬಾಳಿದ ಸರಳ, ವಿರಳ ವ್ಯಕ್ತಿ ಮಹಾತ್ಮಾ ಗಾಂಧಿ. ಈ ಕಾರಣಕ್ಕಾಗಿಯೇ ಅವರು ‘ ಯುಗಪುರುಷರ ಸಾಲಿಗೆ ಸೇರುತ್ತಾರೆ.


ಸತ್ಯಕ್ಕೆ ಪ್ರಾಧಾನ್ಯತೆ ನೀಡಿದ ಅವರು, ಅದರ ಒರೆಗಲ್ಲಿಗೆ ತಮ್ಮ ಜೀವನದ ಎಲ್ಲ ಘಟನೆಗಳನ್ನು ಒರೆಗೆ ಹಚ್ಚಿದ ವಿಷಯವನ್ನು ತಮ್ಮ ಆತ್ಮ ಕಥೆ ‘ ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರುತ್-ಸತ್ಯದ ಜೊತೆ ನನ್ನ ಪ್ರಯೋಗಗಳು’ ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಅವರು ವಿಜ್ಞಾನಿಯಂತೆ ನಿರ್ಭಾವುಕರಾಗಿ ಮಾಡುತ್ತಿದ್ದು ಅದರ ಪ್ರಯೋಗಗಳಿಂದ ತಿಳಿದು ಬಂದ ಅಂಶಗಳಿಂದ ಅವರು ತಮ್ಮ ಮುಖ್ಯವಾದ ನಿರ್ಣಯಗಳನ್ನು ತೆಗೆದು ಕೊಂಡ ವಿಷಯದ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಯೋಗಗಳಿಂದಾಗಿ ಅವರಿಗೆ ಮಹಾತ್ಮ ಎಂಬ ಬಿರುದು ಬಂದಿದ್ದರೂ, ಅದು ಅವರು ಅಪೇಕ್ಷಿಸಿದ್ದಲ್ಲ ಹಾಗೂ ಆ ಬಿರುದು ಅವರಿಗೆ ಸಂತಸವನ್ನು ಕೊಡದೆ ನೋವನ್ನುಂಟು ಮಾಡಿದ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಮುಚ್ಚು ಮರೆಯಿಲ್ಲದೆ ಬಿಚ್ಚು ಮನಸಿನಿಂದ ತಮ್ಮ ಜೀವನದ ಸಂಗತಿಗಳನ್ನು ಜಗತ್ತಿನ ಮುಂದೆ ಒಡ್ಡಿಕೊಳ್ಳುವ ಧೈರ್ಯ, ಪ್ರಾಮಾಣಿಕತೆಗಳಿಂದಾಗಿ ಅವರು ಪ್ರತ್ಯೇಕವಾಗಿ, ವಿಶ್ವದ ಇತಿಹಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಳಿಸುತ್ತಾರೆ.
ಮೋಹನದಾಸ್ ಕರಮ್ ಚಂದ್ ಗಾಂಧಿ ಯವರು ಭಾರತದ ಸ್ವಾತಂತ್ರ್ಯದ ಹೋರಾಟದ ಮುಂಚೂಣಿಯಲ್ಲಿ ಬರುವ ಮೊದಲು ಅವರು ದಕ್ಷಿಣ ಆಫ್ರಿಕಾ ದೇಶದಲ್ಲಿದ್ದರು. 1893 ರಲ್ಲಿ ಆ ದೇಶಕ್ಕೆ ತೆರಳಿದ ಅವರು ಡರ್ಬನ್ ಪಟ್ಟಣವನ್ನು ಸೇರಿ ಕೆಲುವೇ ದಿನಗಳಲ್ಲಿ ಅಲ್ಲಿಯ ಸಮಾಜದಲ್ಲಿರುವ ವಿಷಮತೆಗಳನ್ನು ಕಂಡು, ಅದನ್ನು ಸಹಿಸದೆ ಸಮಾನತೆಯಗೋಸುಗ ಅಹಿಂಸಾ ಮಾರ್ಗದ ಹೋರಾಟವನ್ನು ಪ್ರಾರಂಭಿಸಿದರು.
ಪ್ರೆಟೋರಿಯಾ ದಲ್ಲಿ ಗಾಂಧೀಜಿ ಅವರು ಟ್ರೇನ್ ನಲ್ಲಿ ಪ್ರಥಮ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುತ್ತಿರುವಾಗ, ಅದನ್ನು ಸಹಿಸದ ಬಿಳಿಯ ಪ್ರಯಾಣಿಕನೊಬ್ಬನ ದೂರು ಕೊಟ್ಟಾಗ, ಪ್ರಥಮ ದರ್ಜೆಯ ಟಿಕೇಟ್ ಇದ್ದರೂ ಗಾಂಧೀಜಿ ಅವರು ಬೋಗಿಯಿಂದ ತಳ್ಳಲ್ಪಟ್ಟರು. ಪ್ಲಾಟ್ಫಾರ್ಮ ಮೇಲೆ ಬಿದ್ದ ಅವರು ಅಧಿಕಾರಿಗಳಿಗೆ ಸವಾಲೆಸೆದರು. ತಮ್ಮ ದೇಶವಲ್ಲದ ದೇಶ; ಗಾಂಧೀಜಿ ಅವರ ಸ್ಥಳದಲ್ಲಿ ಬೇರೆ ಯಾರಾದರೂ ಆಗಿದ್ದರೆ, ಈ ಅಪಮಾನವನ್ನು ನುಂಗಿ ತೆಪ್ಪಗೆ ಅಧಿಕಾರಿಗಳಿಗೆ ಬಗ್ಗುತ್ತಿದ್ದರು. ಆದರೆ ಗಾಂಧಿ ಜಿ ಅವರು ತಮಗಾದ ಅವಹೇಳನೆಯನ್ನು ವ್ಯಯಕ್ತಿಕವಾದದ್ದು ಎಂದು ಭಾವಿಸದೆ, ಅದು ಅಲ್ಲಿ ನಿವಸಿಸುವ ಭಾರತೀಯರ ಮತ್ತು ಸ್ಥಳೀಯ ಆಫ್ರಿಕನ್ ರ ಮೇಲಿನ ಶೋಷಣೆ ಎಂದು ಪರಿಗಣಿಸಿ, ಆಡಳಿತದ ದಬ್ಬಾಳಿಕೆಯೆ ವಿರುದ್ಧ ಹೋರಾಡಲು 1894 ರಲ್ಲಿ ‘ ನ್ಯಾಟಲ್ ಇಂಡಿಯನ್ ಕಾಂಗ್ರೆಸ್’ ಸಂಸ್ಥೆಯ ಸಂಘಟನೆ ಮಾಡಿದರು.


ವರ್ಗ ಭೇದ,ವರ್ಣ ಭೇದ ಯಾವುದೇ ರೀತಿಯ ತಾರತಮ್ಯಗಳಿಲ್ಲದ ಮಾನವ ಸಮಾಜದ ಕನಸು ಕಂಡ ಅವರಿಗೆ ಮಾನವ ಕುಲದ ಅಭ್ಯುದಯವೇ ಮುಖ್ಯವಾಗಿತ್ತು. ಇದು ಗಾಂಧೀಜಿ ಅವರಿಗೆ ಮಾನವತೆಯ ಬಗೆಗಿದ್ದ ಒಲವಿನ ದ್ಯೋತಕವಲ್ಲವೆ. ಮುಂದೆ 1896 ರಲ್ಲಿ ಭಾರತಕ್ಕೆ ಬಂದು ದಕ್ಷಿಣ ಆಪ್ರಿಕಾ ದೇಶಕ್ಕೆ ಹಿಂತಿರುಗುವಾಗ ತಮ್ಮ ಜೊತೆ 800 ಜನ ಭಾರತೀಯರನ್ನು ಒಟ್ಟುಗೂಡಿಸಿ ತಮ್ಮ ಜೊತೆ ಅಲ್ಲಿಗೆ ಕರೆದು ಕೊಂಡು ಹೋಗಿ ಅಸಮಾನತೆಯ ವಿರುದ್ಧ ಅಹಿಂಸಾತ್ಮಕ ಚಳುವಳಿ ಸಾರಿದರು. ಈ ಪ್ರತಿಭಟನೆಗಳಲ್ಲಿ ಗಾಂಧೀಜಿ ಅವರು ಗಾಯಗೊಂಡರೂ, ಅವರು ಧೃತಿಗೆಡದೆ ತಮ್ಮ ಹೋರಾಟವನ್ನು ಮುಂದುವರಿಸಿದರು. ಅಲ್ಲಿ ಎಷ್ಟೋ ಸಲ ಅವರು ಜೈಲುವಾಸವನ್ನು ಅನುಭವಿಸಬೇಕಾಗಿ ಬಂತು.
ಇಲ್ಲಿಯ ತನಕ ಇಂಗ್ಲಿಷ್ ಬ್ಯಾರಿಸ್ಟೆರ್ ಹುದ್ದೆಯ ಹಾಗೂ ಅದರ ಸ್ತರವನ್ನು ನಿಭಾಯಿಸಲು ಉನ್ನತ ಮಟ್ಟದ ಜೀವನವನ್ನು ಸಾಗಿಸಬೇಕೆಂದು ಅಂದುಕೊಂಡಿದ್ದ ಗಾಂಧಿಜಿ ಅವರು ಅದರಲ್ಲಿಯ ಪೊಳ್ಳುತನವನ್ನು ಮನಗಂಡು, ಆದಷ್ಟು ಸರಳ ಹಾಗೂ ನಿರಾಡಂಬರ ಜೀವನ ನಡೆಸಬೇಕೆಂಬ ನಿರ್ಧಾರಕ್ಕೆ ಬಂದು ತಮ್ಮ ಬೇಡಿಕೆಗಳನ್ನು ಕಮ್ಮಿ ಮಾಡುತ್ತಾ ಹೋದರು. ಇದೇ ಸಮಯದಲ್ಲಿ, ತಮ್ಮ ವಕಾಲತ್ ನಿಂದ ಬಿಡುವು ಮಾಡಿಕೊಂಡು ವಾರದ ಎರಡು ದಿವಸಗಳನ್ನು ರೋಗಿಗಳ ಶುಷ್ರೂಷೆಗಾಗಿ ಮುಡಿಪಾಗಿಟ್ಟರು. ಸುಮಾರು 20 ವರ್ಷಗಳ ಕಾಲ ಅವಿರತವಾಗಿ ದಕ್ಷಿಣ ಆಫ್ರಿಕಾದಲ್ಲಿ ಚಳುವಳಿ ನಡೆಸಿದ ಅವರು 1915 ರಲ್ಲಿ ಭಾರತಕ್ಕೆ ಮರಳಿದರು.
ಭಾರತಕ್ಕೆ ಮರಳಿದ ಅವರು ದೇಶದ ಪರಿಸ್ಥಿತಿಯನ್ನು ಖುದ್ದಾಗಿ ನೋಡಲು ಇಡೀ ದೇಶದ ಯಾತ್ರಯನ್ನು ಕೈಗೊಂಡರು. ಈ ಸಮಯದಲ್ಲಿ, ಹೊಟ್ಟೆ ಬಟ್ಟೆಗಳಿಗೂ ಕೊರತೆಯಿದ್ದು ಕಿತ್ತು ತಿನ್ನುವ ಬಡತನವನ್ನು ನೋಡಿದರು. ಸಮಾಜವನ್ನು ನಾಚಿಸುವಂಥ ಅಸ್ಪøಶ್ಯತೆ ದೇಶದಲ್ಲಿದ್ದು ಅದರಿಂದ ಪೀಡಿತ ದಲಿತವರ್ಗದವರ ಬಗ್ಗೆ ಮಮ್ಮಲ ಮರುಗಿ ಅದನ್ನು ನಿವಾರಿಸಲು ಪಣ ತೊಟ್ಟರು. ಉಡಲು ತೊಡಲು ಬಟ್ಟೆ ಇಲ್ಲದವರನ್ನು ನೋಡಿ ಕರಗಿದ ಅವರು, ತಾವೂ ಒಂದು ಧೋತರ ಮತ್ತು ಅಂಗವಸ್ತ್ರವನ್ನೇ ಇಡೀ ಜೀವಮಾನ ಉಡಲು ನಿರ್ಧರಿಸಿದರು. ದೇಶದ ಬಡವರಿಗೆ, ದೀನರಿಗೆ, ದಲಿತರಿಗೆ ಮಿಡಿಯುವ , ಅವರ ಏಳಿಗೆಗಾಗಿ ತುಡಿತ ಹೊಂದಿದ ಗಾಂಧೀಜಿ ಅವರು ದೇಶದ ಜನರ ಕಣ್ಣಲ್ಲಿ ಮಹಾತ್ಮರೆನಿಸಿಕೊಂಡರು. ( ಮಹಾತ್ಮ ಎಂಬ ಬಿರುದನ್ನು ಕವಿ ರವೀಂದ್ರನಾಥ್ ಟಾಗೋರ್ ಅವರು ಇವರಿಗೆ ಇತ್ತದ್ದು ಎಂಬ ಪ್ರತೀತಿಯೂ ಇದೆ).
ಗಾಧೀಜಿ ಅವರು ಬ್ರಟಿಷ್ ವಸಾಹತುಶಾಹಿಯ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡಿದರೂ ಬ್ರಿಟಿಷ್ ಜನರ ಬಗ್ಗೆ ಅವರಿಗೆ ಕಹಿ ಭಾವನೆ ಇರಲಿಲ್ಲ. ಅವರು ತಮ್ಮ ಸತ್ಯಸಂಧತೆಯಿಂದಾಗಿ ಮತ್ತು ಸರ್ವ ಜನರ ಹಿತ – ಸದ್ಭಾವನೆಗಳಿಂದಾಗಿ ಎಲ್ಲರ ಮನವನ್ನು ಗೆದ್ದವರಾಗಿದ್ದರು. ಗಾಂಧೀಜಿ ಅವರ ಜೊತೆ ಮಾತು ಕತೆ ಹಾಗೂ ಸಂಧಾನಗಳನ್ನು ನಡೆಸುತ್ತಿರುವ ಲಾರ್ಡ ಐರ್ವಿನ್ ಅವರ ಧೋರಣೆಯನ್ನು ಸಹಿಸದ ವಸಾಹತುಶಾಹಿಯನ್ನು ಬೆಂಬಲಿಸುವ ವಿನ್ಸ್ಟನ್ ಚರ್ಚಿಲ್ ಅವರು ‘ ಅರ್ಧ ನಗ್ನ ಫಕೀರ ಎಂದು ಗಾಂಧೀಜಿ ಅವರನ್ನು ಸಂಬೋಧಿಸಿದ್ದು ಮತ್ತು ಇಂಥವರು ಇಂಗ್ಲೆಂಡ್ನ ವೈಸರಾಯರ ಅರಮನೆಯಲ್ಲಿ ಕಾಲಿಡಲು ಅನರ್ಹರು ಎಂದು ಆಡಿದ ಚುಚ್ಚು ಮಾತು ಈಗ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.
ಬಹಳ ವರ್ಷಗಳ ನಂತರ 1944 ರಲ್ಲಿ ಗಾಂಧೀಜಿ ಅವರು ವಿನ್ಸಟನ್ ಚರ್ಚಿಲ್ ಅವರಿಗೆ ಬರೆದ ಪತ್ರದಲ್ಲಿ, ‘ ಅರ್ದ ನಗ್ನ ಫಕೀರ ಎಂದ ನಿಮ್ಮ ಮಾತನ್ನು ಅಭಿನಂದನೆಯ ಮಾತೆಂದು ಪರಿಗಣಿಸುತ್ತೇನೆ’ ಎಂದು ನಿರ್ಭಾವುಕರಾಗಿ, ಯಾವುದೇ ರೀತಿಯ ಅಸಮಾಧಾನ- ಕಹಿಗಳಿಲ್ಲದೆ ಉಲ್ಲೇಖ ಮಾಡಿದ್ದು , ಗಾಂಧೀಜಿ ಅವರು ಬ್ರಿಟಿಷರ ಬಗ್ಗೆಯೂ ರಾಗರಹಿತರಾಗಿದ್ದರು ಎಂಬುದನ್ನು ಸೂಚಿಸುತ್ತದೆ.


ಸರ್ವೋದಯ, ಸಮಾಜದ ಎಲ್ಲ ವರ್ಗಗಳ ಅಭ್ಯುದಯ, ಕೋಮು ಸೌಹಾರ್ದತೆ, ಸಾಮರಸ್ಯದಿಂದ ಕೂಡಿದ ವಿಶ್ವ ಮಹಾತ್ಮಾ ಅವರ ಆಶಯವಾಗಿತ್ತು. ಈ ಆಶಯಗಳಿಗೆ ತಮ್ಮ ಸರ್ವಸ್ವವನ್ನೂ ಧಾರೆಯೆರೆದಿದ್ದರು. ತಮಗೆ ಅತ್ಯಂತ ಪ್ರಿಯವಾದ ಈ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸಲು ತಮ್ಮ ಪ್ರಾಣವನ್ಣೂ ತ್ಯಾಗ ಮಾಡಲು ಸಿದ್ಧರಿದ್ದರು.
ಈ ಅತೀವವಾದ ಒಲವಿನಿಂದ ಪ್ರೇರಿತರಾದ ಅವರು, ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುವಾಗ, ಮಹಾತ್ಮಾ ಅವರು ಕೋಮು ಗಲಭೆಯನ್ನು ತಡೆಯಲು ಕಲಕತ್ತಾ ದಲ್ಲಿ ಇದ್ದರು. ಕೋಮು ಗಲಭೆಗಳನ್ನು ನಿಲ್ಲಿಸಲು 13 ಜನೆವರಿ 1948 ರಂದು ಆಜೀವ ಉಪವಾಸವನ್ನು ಕೈಕೊಂಡರು. ತಮ್ಮ ಉಪವಾಸ ಸತ್ಯಾಗ್ರಹಗಳಿಂದ ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದ ಅವರು, ತಮ್ಮ ಇತರ ಉದ್ದೇಶಗಳನ್ನು ಸಾಧಿಸಲೂ ‘ಉಪವಾಸದ’ಅಸ್ತ್ರ ವನ್ನು ಬಳಸುತ್ತಿದ್ದರು. ಹೀಗೆ ಅವರು ಉಪವಾಸ ಕೈಕೊಂಡಾಗಲೆಲ್ಲ ಅವರ ಬಗ್ಗೆ ಅಪಾರ ಪ್ರೀತಿ ಇದ್ದ ದೇಶದ ಪ್ರಜೆಗಳು, ಪ್ರಮುಖ ನಾಯಕರು ಅವರ ಇಚ್ಛೆಯಂತೆ ನಡೆದುಕೊಳ್ಳುವದಾಗಿ ಆಶ್ವಾಸನೆಯಿತ್ತು ಅವರ ಮನವೊಲಿಸಿ ಅವರ ಉಪವಾಸವನ್ನು ಮುರಿಸುತ್ತಿದ್ದರು.


ಉಪವಾಸದಿಂದ ಕ್ಷೀಣಿಸಿದ ಮಹಾತ್ಮಾ ಅವರ ಆರೋಗ್ಯವನ್ನು ಗಮನಿಸಿ, ಎಲ್ಲ ಧರ್ಮದ ಮುಖಂಡರು ಬಂದು ಕೋಮು ಗಲಭೆಗಳನ್ನು ನಿಲ್ಲಿಸುವದಾಗಿ ವಚನ ಕೊಟ್ಟಾಗ, ಮಹಾತ್ಮಾ ಅವರು 6ನೆಯ ದಿನ ತಮ್ಮ ಉಪವಾಸವನ್ನು ಮುರಿದರು. ಅವರ ಉಪವಾಸದಲ್ಲಿ , ಅವರ ನೈತಿಕತೆಯಲ್ಲಿ ಅಗಾಧವಾದ ಶಕ್ತಯಿತ್ತು. ಪಂಜಾಬಿನಲ್ಲಿ ನಡೆದ ಕೋಮು ಗಲಭೆಗಳನ್ನು ತಡೆಯಲು ಪೋಲಿಸು ಪಡೆಗಳು ವಿಫಲವಾದಲ್ಲಿ, ಮಹಾತ್ಮಾ ಒಬ್ಬರೇ ಕಲ್ಕತ್ತಾದಲ್ಲಿ ಜರುಗಿದ ಭೀಷಣ ಗಲಭೆಗಳನ್ನು ತಮ್ಮ ಪ್ರೀತಿಯ ಅಸ್ತ್ರದಿಂದ ಮುಕ್ತಾಯಗೊಳಿಸಿದರು. ಈ ಅಹಿಂಸೆಯ ಪೂಜಾರಿ 30 ಜನೆವರಿ 1948 ರಂದು ಬಂದೂಕಿನ ಗುಂಡಿಗೆ ಬಲಿಯಾಗಿ ಉರುಳಿದ್ದು ಒಂದು ವಿಪರ್ಯಾಸ!

‘ಈ ರೀತಿ ಒಂದು ಯುಗದ ಅಂತವಾಯಿತು’
ಅಹಿಂಸಾ ಮಾರ್ಗದಿಂದ ಹೋರಾಡಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯ ಬೇಕೆಂದು ಪ್ರತಿಪಾದಿಸಿದ ಗಾಂಧೀಜಿ ಅವರ ಜೊತೆ ಅವರ ಸಮಕಾಲೀನ ಸ್ವಾತಂತ್ರ್ಯ ಯೋಧರಲ್ಲಿ ಭಿನ್ನಾಭಿಪ್ರಾಯಗಳು ಇದ್ದದ್ದು ಎಲ್ಲರಿಗೆ ಗೊತ್ತಿದ್ದದ್ದೇ. ಅಷ್ಟೇ ಏಕೆ, ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರಾಗಿದ್ದರೂ, ಸುಭಾಶ್ ಚಂದ್ರ ಬೋಸ್ ರು ತಮ್ಮ ಪ್ರತಿಸ್ಪರ್ಧಿ ಪಟ್ಟಾಭಿ ಸೀತಾರಾಮಯ್ಯ ಅವರನ್ನು ಪರಾಜಯಗೊಳಿಸಿ ಅಖಿಲ ಭಾರತದ ಕಾಂಗ್ರೆಸ್ ನ ಅಧ್ಯಕ್ಷರಾಗಿ ಚುನಾಯಿತರಾದಾಗ, ಅವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದರು. ಇದರಿಂದ ನೊಂದ ಸುಭಾಶ್ ಬೋಸ್ ರು ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆಯನ್ನು ಇತ್ತರು. ಆದರೂ ‘’ ಎ.ಎನ್.ಐ ಸ್ಥಾಪಿಸಿ ತಮ್ಮದೇ ಆದ ಹೋರಾಟದ ಹಾದಿಯನ್ನು ಆಯ್ದುಕೊಂಡ ಸುಭಾಶ್ ಬೋಸ್ ರಿಗೆ ಮಹಾತ್ಮಾ ಅವರ ಬಗ್ಗೆ ಅಪಾರವಾದ ಗೌರವವಿತ್ತು.
ದಕ್ಷಿಣ ಆಫ್ರಿಕಾದ ರೈತಾಂಗ ‘ಬೋಯರ್” ಅವರು ಬ್ರಿಟಿಷ್ ರ ದಬ್ಬಾಳಿಕೆಯ ವಿರುದ್ಧ ಸಾರಿದ ಸಮರದಲ್ಲಿ ಗಾಂಧಿ ಜಿ ಅವರಿಗೆ ಬೊಯೆರ್ ರೈತಾಂಗ ದ ಬಗ್ಗೆ ಅನುಕಂಪವಿದ್ದರೂ ಬ್ರಿಟಿಷ್ ಸರ್ಕಾರಕ್ಕೆ ಬೆಂಬಲ ನೀಡಿದ ಸಂಗತಿಯ ಬಗ್ಗೆಯೂ ಸಾಕಷ್ಟು ಜನರ ಆಕ್ಷೇಪಣೆಯಿತ್ತು. ದೇಶ ಭಕ್ತ ಹಾಗೂ ಕ್ರಾಂತಿಕಾರಿ ಯೋಧರಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರನ್ನು ಗಲ್ಲಿಗೇರಿಸುವದರಿಂದ, ಗಾಂಧೀಜಿ ಬ್ರಿಟಿಷ್ ಸರ್ಕಾರದ ಮೇಲಿದ್ದ ತಮ್ಮ ವರ್ಚಸ್ಸಿನಿಂದ ಉಳಿಸಬಹುದಾಗಿತ್ತು ಎಂದು ಎಷ್ಟೋ ಇತಿಹಾಸಕಾರರು ಹಾಗೂ ಗಾಂಧಿ ಜಿ ಅವರ ಸಮಕಾಲೀನರು ಅಭಿಪ್ರಾಯಪಟ್ಟಿದ್ದು ಸರ್ವವಿದಿತ. ಆದರೆ ಅದು ಈ ಅಂಕಣದ ವ್ಯಾಪ್ತಿಗೆ ಮೀರಿದ್ದು. ಈ ಅಂಶಗಳು ಇದ್ದಾಗ್ಯೂ ( ನಾಟ್ ವಿತ್ ಸ್ಟಾಂಡಿಂಗ್)
ಮಹಾತ್ಮಾ ಗಾಂಧಿ ಅವರ ಸಾಧನೆಗಳನ್ನು,ಅವರು ಕೊಟ್ಟ ಸತ್ಯ ಮತ್ತು ಅಹಿಂಸೆಯ ಮಾರ್ಗಗಳ ಮಹತ್ವವನ್ನು ಕಡೆಗಣಿಸಲು ಸಾಧ್ಯವಿಲ್ಲ. ಅವರು ತಮ್ಮ ಸತ್ಯ ನಿಷ್ಠತೆಯಿಂದ, ಅಹಿಂಸೆಯಲ್ಲಿ ಅಚಲ ವಿಶ್ವಾಸದಿಂದ ಜಗತ್ತಿನ ಮೇಧಾವಿಗಳನ್ನು, ವಿಶ್ವ ನಾಯಕರನ್ನು ಪ್ರಭಾವಿಸಿದ್ದಾರೆ.

ಅಮೇರಿಕಾದ ಮಾಜಿ ಅಧ್ಯಕ್ಷರಾದ ಬರಾಕ ಒಬಾಮಾ ಅವರು ಎಷ್ಟೋ ಸಲ ಗಾಂಧಿ ಜಿ ಅವರ ಪ್ರಭಾವ ತಮ್ಮ ಮೇಲೆ ಇರುವದಾಗಿ ಹೇಳಿಕೊಂಡಿದ್ದಾರೆ. ಬಾಪೂಜಿ ಅವರಂಥ ಮಹಾನ್ ಪುರುಷರು ನಮಗೆ ಬಳುವಳಿಯಾಗಿ ಇತ್ತ ಶಾಂತಿ, ಸತ್ಯ ಅಹಿಂಸೆಗಳ ಮಾರ್ಗವನ್ನು ಎಲ್ಲರೂ ಅನುಸರಿಸಿ, ಅವರು ಕಂಡ ರಾಮ ರಾಜ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ. ಅದರಿಂದ ದೇಶದಲ್ಲಿ ಒಲವು- ಸೌಹಾರ್ದಗಳು ಮೂಡಿ ಎಲ್ಲರ ಬಾಳು ಹಸನಾಗುವದೆಂಬ ವಿಷಯದಲ್ಲಿ ಎರಡು ಮಾತಿಲ್ಲ.
ಸುತ್ತಲೂ ನಡೆಯುತ್ತಿರುವ ಅತ್ಯಾಚಾರಗಳಿಂದ, ಹಿಂಸಾಕಾಂಡಗಳಿಂದ ಮನಸು ವಿಚಲಿತಗೊಂಡಾಗ, ಮಹಾತ್ಮಾ ಗಾಂಧೀಜಿ ಅವರಂಥ ಧೀಮಂತ, ನೈತಿಕ ಸತ್ವವುಳ್ಳ ವ್ಯಕ್ತಿ ನಮ್ಮ ನಡುವೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನಿಸದೆ ಇರದು.
ದುರದೃಷ್ಟವಶಾತ್ ಗಾಂಧೀಜಿ ಅವರು ನಮ್ಮ ನಡುವೆ ಇಲ್ಲ. ಆದರೆ ಅವರು ಬಿತ್ತಿದ ಶಾಂತಿ, ಅಹಿಂಸೆ, ಸತ್ಯ ದ ಬೀಜಗಳಿಗೆ ನೀರೆರದು ನೋಡೋಣ. ಅದರಿಂದ ದೇಶದಾದ್ಯಂತ ಒಲವಿನ ಹಸಿರು ಚಿಗುರಬಹುದು ಎಂಬ ಆಶಾಭಾವದೊಡನೆ…
ವಂದನೆಗಳು