ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಗಜ಼ಲ್-೧

ನಿನ್ನನ್ನೂ ಮುಟ್ಟುವಂಥ ಮಾತುಗಳನ್ನು ಬರೆಯಬೇಕಿದೆ
ಒಳಗನ್ನು ತಟ್ಟುವಂಥ ನುಡಿಗಳನ್ನು ಬರೆಯಬೇಕಿದೆ

ಮೇಲುಮೇಲಿನ ಸಂಗತಿಗಳೇ ಬದುಕನ್ನು ತುಂಬುತ್ತಿವೆ
ಎದೆಯನ್ನು ಕಲಕುವಂಥ ಸಾಲುಗಳನ್ನು ಬರೆಯಬೇಕಿದೆ

ಕಂಬವನ್ನು ಸುತ್ತುತ್ತ ಸುತ್ತುತ್ತ ಮೊಟಕಾಗಿದೆ ಪರಿಧಿ
ಜಗವಿಡೀ ಪಲುಕುವಂಥ ಸೊಲ್ಲುಗಳನ್ನು ಬರೆಯಬೇಕಿದೆ

ಹುಸಿ ರಮ್ಯತೆಯಲ್ಲಿ ನೆಟ್ಟು ಹೂತುಹೋಗಿದೆ ಜೀವ
ವಾಸ್ತವಕ್ಕೆ ಮರಳಿಸುವಂಥ ಚರಣಗಳನ್ನು ಬರೆಯಬೇಕಿದೆ

ಎಂಥ ಆರ್ತತೆ ಅಭದ್ರತೆ ಆ ಕಣ್ಣುಗಳಲ್ಲಿ ಗೆಳೆಯ
ಭರವಸೆಯನು ಚಿಗುರಿಸುವಂಥ ವರ್ಣಗಳನ್ನು ಬರೆಯಬೇಕಿದೆ

ಯಾಂತ್ರಿಕ ನಗು-ನಡೆಗಳಲ್ಲಿ ಬೇಸತ್ತಿರುವೆ ‘ಜಂಗಮ’
ಇರುವನ್ನು ಹೊಸಯಿಸುವಂಥ ಪದಗಳನ್ನು ಬರೆಯಬೇಕಿದೆ

*****

ಗಜ಼ಲ್-೨

ಈ ರಾತ್ರಿ ಮುಗಿಯಬಹುದು ಅತ್ಯಂತ ದುಗುಡದಲ್ಲಿ
ಈ ದಾರಿ ತೆರೆಯಬಹುದು ಕೇವಲ ಉಮ್ಮಳದಲ್ಲಿ

ಎಂಥ ಆರ್ತತೆ ಇತ್ತು ಅವಳ ನಿವೇದನೆಯಲ್ಲಿ
ಒಲವು ಮೊರೆಯಬಹುದು ತುಂಬಿದ ತಳಮಳದಲ್ಲಿ

ಈ ಮೌನಕ್ಕೂ ಎಷ್ಟೆಲ್ಲ ಬಾಯಿಗಳಿವೆ ಸಖೀ
ನೀರವತೆಯು ಕರೆಯಬಹುದು ಅದುಮಿಟ್ಟ ಕಳವಳದಲ್ಲಿ

ಪ್ರತಿಯೊಂದು ಮಿಲನದ ಹಿಂದೆ ಎಂಥ ಉತ್ಕಂಠತೆ
ಎದೆ ಎದೆಗಳು ಬೆರೆಯಬಹುದು ಅತೀವ ದುಮ್ಮಾನದಲ್ಲಿ

ಆ ತಿರುವಿನ ಆಚೆ ಏನಿದೆಯೋ ಯಾರಿಗೆ ಗೊತ್ತು
ನಲುಮೆ ನಿನ್ನ ತೊರೆಯಬಹುದು ಕಾಣದ ತಲ್ಲಣದಲ್ಲಿ

ಎಲ್ಲದಕ್ಕೂ ಕೊನೆಯಿದೆ ಜಪ್ಪಿಸಿಕೊಂಡಿರು ‘ಜಂಗಮ’
ಚುಕ್ಕಿ ಮರಳಿ ಮಿನುಗಬಹುದು ಕವಿದ ಕಾವಳದಲ್ಲಿ

*****

ಗಜಲ್-೩

ಎದೆಯ ಗುಡಿಯಲ್ಲಿರಿಸಿ ನಿನ್ನ ಪೂಜಿಸುವೆ ತಪ್ಪೇನಿದೆ
ಜೀವದ ಕಣಕಣದಲ್ಲೂ ನಿನ್ನ ಪ್ರೇಮಿಸುವೆ ತಪ್ಪೇನಿದೆ

ನಿನ್ನ ಮಡಿಲು ನನಗೇ ಮೀಸಲಾಗಿದ್ದ ಕಾಲವಿತ್ತಲ್ಲ
ಮತ್ತೆ ಆ ದಿನಗಳು ಮರಳಲು ಕಾದಿರುವೆ ತಪ್ಪೇನಿದೆ

ಏನೆಲ್ಲ ಸಂಕೋಲೆಗಳು ಬಿಗಿದೇ ಇಡುತ್ತಿವೆ ನಮ್ಮ
ಮುಕ್ತಿ ತರುವ ಯಕ್ಷಿಣಿಗಾಗಿ ಹಂಬಲಿಸುವೆ ತಪ್ಪೇನಿದೆ

ಹನಿವ ಕಂಗಳ ಕಾಡಿಗೆ ಕರಗಿ ಕವಿಯಿತೇನು ಎದೆಗೆ
ಬಿಡದೆ ಕತ್ತಲ ಕಳೆವ ಬೆಳಕಾಗಿ ಬರುವೆ ತಪ್ಪೇನಿದೆ

ಮಣ್ಣು ಸೇರಿದ ಬದುಕು ಮತ್ತೆ ಗರಿಬಿಚ್ಚುತಿದೆ ‘ಜಂಗಮ’
ಪಯಣದಲಿ ಭಾಗಿಯಾಗಲು ನಿನ್ನ ಕರೆಯುವೆ ತಪ್ಪೇನಿದೆ

*****