ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಗದಾಪ್ತ ಸಂಜೀವಿನಿ ಡಾ.ಬಿ.ಎಂ ಹೆಗ್ಡೆ

ಕಲಾ ಭಾಗ್ವತ್
ಇತ್ತೀಚಿನ ಬರಹಗಳು: ಕಲಾ ಭಾಗ್ವತ್ (ಎಲ್ಲವನ್ನು ಓದಿ)

ಡಾ.ಬೆಳ್ಳೆ ಮೋನಪ್ಪ ಹೆಗ್ಡೆಯವರು ನಮ್ಮ ನಾಡಿನ ಹೆಸರಾಂತ ವೈದ್ಯರು. ತಮ್ಮ ಘನ ವ್ಯಕ್ತಿತ್ವದಿಂದ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿ ನಮ್ಮನಾಡಿನ, ದೇಶದ, ಕೀರ್ತಿಯನ್ನು ಎಲ್ಲೆಡೆ ಪಸರಿಸಿದ ಹೆಗ್ಗಳಿಕೆ ಇವರದ್ದು. ಬಹುಭಾಷಿಕ ಸಂವೇದನೆಯುಳ್ಳ ಹೆಗ್ಡೆಯವರ ಜೀವನ ಸಾಧನೆ ಜಗತ್ತಿಗೆ ಮಾದರಿಯಾಗಿದೆ. ಪದ್ಮಭೂಷಣ ಖ್ಯಾತಿಯ ಡಾ.ಬಿ.ಎಂ.ಹೆಗ್ಡೆಯವರು ದೇಶದ ಎರಡನೆಯ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೂ ಭಾಜನರಾಗಿರುವುದು ನಮ್ಮ ನಾಡಿನ ಹಿರಿಮೆ.ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ಈ ಕಿರು ಲೇಖನ.

ಕಲಾ ಭಾಗ್ವತ್, ಲೇಖಕರು

ಆರೋಗ್ಯವಂತ ಪ್ರಜೆಗಳು ದೇಶದ ಸಂಪತ್ತು ಎನ್ನುವುದು ಸಾರ್ವಕಾಲಿಕ ಸತ್ಯ. ಹೀಗಿರುವಾಗ ಪ್ರಜೆಗಳಲ್ಲಿ ಆರೋಗ್ಯ ಪ್ರಜ್ಞೆಯನ್ನು ಮೂಡಿಸುವ ವೈದ್ಯರೆಂದರೆ ಅಮೂಲ್ಯ ರತ್ನಗಳು.

ಈ ಭೂಮಿಯ ಮೇಲೆ ಯಾವುದೇ ಜೀವಿ ಅಮರವಾಗದಿದ್ದರೂ ಪ್ರತಿಯೊಂದು ಜೀವಿಗೆ ದಿನದಿನಕ್ಕೂ ರೋಗವನ್ನು ಗುಣಪಡಿಸುವ ಕೈಗಳು ಬೇಕಾಗುತ್ತವೆ. ವೈದ್ಯರಿಲ್ಲದ ಜಗತ್ತು ಕಲ್ಪನೆಗೆ ನಿಲುಕದ್ದು. ಇಂದು ಜಗತ್ತಿನಲ್ಲಿ ಜನರು ಹೆಚ್ಚು ಹೆಚ್ಚು ಆರೋಗ್ಯ ಪ್ರಜ್ಞೆಯನ್ನು ಪಡೆಯುತ್ತಿರುವಾಗ ದೇವರ ಪಕ್ಕದಲ್ಲಿ ಇರುವ ಸರ್ವೋಚ್ಚ ಆತ್ಮ ಎಂದು ವೈದ್ಯರ ಹುದ್ದೆಯನ್ನು ಪರಿಗಣಿಸಲಾಗಿದೆ. ಉತ್ತಮ ವೈದ್ಯರ ವಿಷಯ ಬಂದಾಗ ಈ ಹುದ್ದೆಯ ಗೌರವ ಮೂರು ಪಟ್ಟು ಹೆಚ್ಚುತ್ತದೆ. ಅಂತಹ ಹುದ್ದೆಗೆ ಅರ್ಹರಾಗಿದ್ದು ಸಾಮಾನ್ಯರೊಂದಿಗೆ ಸಾಮಾನ್ಯವಾಗಿರುವ ಅಸಾಮಾನ್ಯ ವೈದ್ಯರು ನಮ್ಮೆಲ್ಲರ ನಡುವೆ ಇರುವ ಡಾ.ಬೆಳ್ಳೆ ಮೋನಪ್ಪ ಹೆಗ್ಡೆಯವರು. ಕೇವಲ ಭೌತಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಮನುಷ್ಯನ ಒಳವನ್ನು ಅರಿತು ಆ ಮೂಲಕ ಆರೋಗ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟವರು. ತಮ್ಮ ಅಪಾರವಾದ ಜ್ಞಾನ ಮತ್ತು ಅಧಿಕೃತವಾದ ಮಾತಿನ ಮೂಲಕ ಜನಸಮುದಾಯದ ಕಣ್ಣು ತೆರೆಸುವ ನಿಸ್ಪೃಹ ವೈದ್ಯರು. ಆರು ದಶಕಗಳಷ್ಟು ಸುದೀರ್ಘ ಸಮಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ, ಶುಶ್ರೂಷೆ, ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ನಿರತರಾಗಿರುವ ಡಾ. ಹೆಗ್ಡೆಯವರ ಗುರಿ ಸದೃಢ ಸಮಾಜವನ್ನು ಕಟ್ಟುವುದು. ನಿಮ್ಮ ಆರೋಗ್ಯ ನಿಮ್ಮ ಕೈಲಿದೆ ಎಂಬುದು ಅವರ ಮೂಲ ಮಂತ್ರ.

ಆಧುನಿಕ ಯಾಂತ್ರಿಕ ಯುಗದಲ್ಲಿ ಅನೇಕ ರೀತಿಯ ಒತ್ತಡಗಳಿಂದ ಬದುಕುತ್ತಿರುವ ಜನರಿಗೆ ಆತ್ಮಸ್ಥೈರ್ಯವನ್ನು ಚೈತನ್ಯವನ್ನು ತುಂಬಿ ಉತ್ತಮ ಬದುಕಿಗೆ ಕಾರಣರಾದವರು. ಪ್ರಖ್ಯಾತ ಹೃದ್ರೋಗ ತಜ್ಞರಾಗಿ, ವೈದ್ಯಕೀಯ ವಿಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ, ಲೇಖಕರಾಗಿ ಅನೇಕ ರೀತಿಯಲ್ಲಿ ತಮ್ಮನ್ನು ಗುರುತಿಸಿಕೊಂಡವರು. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ತತ್ವವನ್ನು ಅಳವಡಿಸಿಕೊಂಡು ಇತರರೂ ಅದನ್ನು ಅನುಸರಿಸಿ ಪ್ರಕೃತಿಯಲ್ಲಿ ಒಂದಾಗಿ ಬಾಳಬೇಕೆಂಬ ಸಂದೇಶವನ್ನು ನೀಡುತ್ತಲೇ ಬಂದಿರುವವರು. ತಮ್ಮ ಅಪೂರ್ವ ವಾಕ್ಪಟುತ್ವದಿಂದ ಜನಸಾಮಾನ್ಯರ ಹೃದಯವನ್ನು ತಟ್ಟಿದವರು. ಪರಿಶ್ರಮ ಸಾಧನೆಯ ಮೂಲಕ ಕರ್ನಾಟಕದ ಭಾರತದ ಕೀರ್ತಿಯನ್ನು ವಿದೇಶಗಳಲ್ಲಿಯೂ ಪಸರಿಸಿದ ಹಿರಿಮೆ ಇವರದು. ಅಪ್ಪಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಡಾ.ಬಿ.ಎಂ.ಹೆಗ್ಡೆಯವರು ಅತ್ಯಂತ ಸರಳ ಜೀವಿ. ಎಲ್ಲರಂತೆಯೇ ನಾನೊಬ್ಬ ಸಾಮಾನ್ಯ ಎನ್ನುತ್ತಲೇ ಸಾಧನೆಯ ಮೆಟ್ಟಿಲೇರುತ್ತ ಬಂದ ದಿಟ್ಟ ವೈದ್ಯರು.

ಡಾ.ಹೆಗ್ಡೆಯವರು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸಿದ ಕ್ಷೇತ್ರಗಳ ಯಾದಿ ಅವರ ವೃತ್ತಿಜೀವನದ ಕ್ರಿಯಾಶೀಲ ಚಟುವಟಿಕೆಗಳಿಗೆ ಸಾಕ್ಷಿ. ವೈದ್ಯಕೀಯ ಪ್ರಪಂಚವನ್ನು ಸರಾಗವಾಗಿ ಸುತ್ತಿ ಅಲ್ಲಿರುವ ಹಿತ-ಅಹಿತಗಳನ್ನು ವಿಶ್ಲೇಷಿಸಿ ಅವುಗಳನ್ನು ಬೇರ್ಪಡಿಸುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ಪೂರಕವಾಗಿ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಅನುಭವಗಳನ್ನು ಹೊಂದಿದವರು. ಪಾಶ್ಚಾತ್ಯ ಹಾಗೂ ಭಾರತೀಯ ವೈದ್ಯಕೀಯ ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ಸಮಾನಾಂತರವಾಗಿ ಆಯುರ್ವೇದ ಹೋಮಿಯೋಪತಿ ಎಲ್ಲದರ ಬಗ್ಗೆ ಆಸಕ್ತಿ ಉಳ್ಳವರು. ಮಾನವೀಯತೆ ಹಾಗೂ ಅನುಕಂಪವನ್ನು ಜೀವನದ ಉಸಿರಾಗಿಸಿಕೊಂಡು ವೈದ್ಯವೃತ್ತಿಯನ್ನು ಜನಸೇವೆಗಾಗಿ ಮುಡಿಪಾಗಿಟ್ಟವರು.

ವೈದ್ಯಕೀಯದಲ್ಲಿ ಬಿ.ಎಂ ಹೆಗ್ಡೆಯವರದ್ದು ಬೇಷರತ್ತಾದ ಸೇವೆ. ವೈದ್ಯಕೀಯ ವಿಜ್ಞಾನಿಯಾಗಿ ಅವರು ಹವಾನಿಯಂತ್ರಿತ ಪ್ರಯೋಗಾಲಯಗಳಲ್ಲಿ ದೊಡ್ಡ ಅನುದಾನವನ್ನು ಪಡೆದು ಸಂಶೋಧನೆಯನ್ನು ಮಾಡಿದವರಲ್ಲ. ಅವರ ಮನಸ್ಸಿನಲ್ಲಿಯೇ ಅದು ನಿರಂತರ ನಡೆಯುತ್ತಿರುತ್ತದೆ. ದಿನನಿತ್ಯ ಬಳಸುವ, ಸಾಮಾನ್ಯರಿಗೂ ಕೈಗೆಟಕುವ ಆಹಾರದಲ್ಲಿಯೇ ಔಷಧೀಯ ಅಂಶಗಳನ್ನು ಕಂಡುಹಿಡಿದವರು ಅವರು. ಅನೇಕ ನೋಬೆಲ್ ಲಾರೆನ್ಸ್ ಗಳ ಜೊತೆಗೂಡಿ ಈ ನಿಟ್ಟಿನಲ್ಲಿ ಅನುಭವ ಪಡೆದವರು. ಕೇವಲ ಅಲೋಪತಿ ಪದ್ಧತಿಯಲ್ಲಿ ಮಾತ್ರ ಅವರ ಸಂಶೋಧನೆಯಾದದ್ದಲ್ಲ. ಹಿತ್ತಲ ಗಿಡವನ್ನು ಸಂಪೂರ್ಣವಾಗಿ ಬಳಸಿ ಅದನ್ನು ಔಷಧಿಯಲ್ಲಿ ಉಪಯೋಗಿಸುವ ವಿಧಾನವನ್ನು ತಿಳಿಸಿಕೊಟ್ಟವರು.ಪಾಶ್ಚಾತ್ಯ ಔಷಧಿ ವೈಜ್ಞಾನಿಕವಾಗಿದ್ದು ಸಾಕ್ಷಾಧಾರಗಳ ಆಧಾರಿತ ವಾದದ್ದು; ಆಯುರ್ವೇದದ ಔಷಧಿಗಳಿಗೆ ಸಾಕ್ಷಾಧಾರಗಳು ಇಲ್ಲ ಎಂದು ಈಗಿನ ಜನ ನಂಬಿದ್ದಾರೆ. ಆಯುರ್ವೇದವು ಪಾಶ್ಚಾತ್ಯ ವಿಜ್ಞಾನಕ್ಕಿಂತ ಹೆಚ್ಚು ವೈಜ್ಞಾನಿಕವಾದದ್ದು ಎಂಬುದು ಜನರಿಗೆ ಅರಿವಾಗಬೇಕು ಎನ್ನುವ ಹೆಗ್ಡೆಯವರು ಇದರ ಬಗ್ಗೆ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವನ್ನು ಅರುಹಿದವರು. ಪುನರಾವರ್ತಿತವಾಗುವ ರಾಸಾಯನಿಕ ಔಷಧಿಗಳಿಗಾಗಿ ಅಪಾರ ಹಣವನ್ನು ಖರ್ಚು ಮಾಡುವ ಬದಲು ಗಿಡಮೂಲಿಕೆಗಳ ಬಗೆಗಿನ ಸಂಶೋಧನೆಗೆ ಒತ್ತು ಕೊಟ್ಟರೆ ಹೆಚ್ಚು ಅನುಕೂಲವಾಗುವುದು. ಏಕೆಂದರೆ ಗೊತ್ತಿರುವುದನ್ನು ಮತ್ತೆ ಮತ್ತೆ ಪ್ರಯೋಗಕ್ಕೆ ಒಳಪಡಿಸಿದರೆ ಅದರಿಂದ ಸುಧಾರಣೆ ಸಾಧ್ಯವಿಲ್ಲ. ಆಯುರ್ವೇದದ ಔಷಧೋಪಚಾರ ಹಾಗೂ ಶಸ್ತ್ರಚಿಕಿತ್ಸೆಯನ್ನು ವೈಜ್ಞಾನಿಕ ವಿಧಾನಗಳಿಂದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಬೇಕು ಎಂಬುದು ವೈದ್ಯ ವಿಜ್ಞಾನಿಯ ಅಭಿಪ್ರಾಯ.

ಭಾರತದಲ್ಲಿ ಅದರಲ್ಲೂ ಕರಾವಳಿಯಲ್ಲಿ ಯಥೇಚ್ಛವಾಗಿ ಲಭ್ಯವಿರುವ  ತೆಂಗಿನೆಣ್ಣೆಯ ಬಗ್ಗೆ ಅಧ್ಯಯನ ಮಾಡಿ ಒಂದು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ಹೆಗ್ಗಳಿಕೆ ಹೆಗ್ಡೆಯವರದ್ದು. ಕೈಗೆಟಕುವ ಬೆಳ್ಳುಳ್ಳಿಗೆ ಕೋಟಿಯ ತಾಕತ್ತಿದೆ ಎಂದು ತೋರಿಸಿದ ಅವರು ಕ್ವಾಂಟಮ್ ಹೀಲಿಂಗ್, ಬೆಳ್ಳಿಯ ನ್ಯಾನೊ ಕಣಗಳ ಉಪಯೋಗ, ಅನೇಕ ಬಗೆಯ ಲಸಿಕೆಗಳು ಎಲ್ಲವುದರ ಬಗ್ಗೆ ಸಂಶೋಧನಾತ್ಮಕ ಅಧ್ಯಯನಗಳನ್ನು ಕೈಗೊಂಡಿರುತ್ತಾರೆ. ಇವೆಲ್ಲವುಗಳ ಹೊರತಾಗಿ ಮನಸ್ಸನ್ನು ಅನುಸರಿಸಿ ರೋಗಗಳು ಹೇಗೆ ಹುಟ್ಟಿಕೊಳ್ಳುತ್ತವೆ ಹಾಗೂ ಅದನ್ನು ಆ ಮೂಲಕವೇ ಹೇಗೆ ಗುಣಪಡಿಸಬಹುದು ಎಂಬ ವಿಷಯದ ಮೇಲೆ ಪ್ರಯೋಗಗಳನ್ನು ಕೈಗೊಂಡು ಉತ್ತಮ ಫಲಿತಾಂಶಗಳನ್ನು ಕಂಡುಕೊಂಡವರು. ಅವರ ಉದ್ದೇಶವಿಷ್ಟೇ.. ಜನಸಾಮಾನ್ಯರು ಯಾವುದೋ ಒಂದು ರೋಗವನ್ನು ಗುಣಪಡಿಸಿಕೊಳ್ಳಲು ಹೋಗಿ ಹತ್ತು ರೋಗಗಳಿಗೆ ತುತ್ತಾಗಬಾರದು ಎಂಬುದು. ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ಅತ್ಯಂತ ಕ್ರಿಯಾಶೀಲರಾಗಬೇಕು.

ಯುವ ವೈದ್ಯರು ರೋಗಿಯ ಮಾನಸಿಕ ಸ್ಥಿತಿಯನ್ನು ಸರಿಪಡಿಸಿ ಅನುಭೂತಿಯಿಂದ ಶುಶ್ರೂಷೆ ಮಾಡಬೇಕು. ಕೇವಲ ಹಣ ಗಳಿಕೆಯನ್ನೇ ಗುರಿಯಾಗಿ ಇಟ್ಟುಕೊಂಡರೆ ಇದು ಸಾಧ್ಯವಿಲ್ಲ ಎಂದು ಯುವಪೀಳಿಗೆಗೆ ತಿಳಿಹೇಳುತ್ತಾರೆ. ಆಧುನಿಕ ವೈದ್ಯಕೀಯ ತುರ್ತು ಚಿಕಿತ್ಸೆಗೆ ಮಾತ್ರ ಸೀಮಿತವಾಗಿರಬೇಕು ಎನ್ನುವ ಅವರು ಉಳಿದೆಲ್ಲ ಸಣ್ಣ ಅನಾರೋಗ್ಯಗಳಿಗೆ ವೈದ್ಯಕೀಯದ ಪರ್ಯಾಯ ಪದ್ಧತಿಗಳಾದ ಆಯುರ್ವೇದ, ಹೋಮಿಯೋಪತಿ ಮುಂತಾದವುಗಳನ್ನು ಅನುಸರಿಸಬೇಕು. ಏಕೆಂದರೆ ಆಯುರ್ವೇದವು ಮನುಷ್ಯನನ್ನು ಇಡಿಯಾಗಿ ನೋಡುತ್ತದೆಯೇ ವಿನಃ ದೇಹದ ಭಾಗಗಳನ್ನು ಬಿಡಿಯಾಗಿ ನೋಡುವುದಿಲ್ಲ. ಯಾವ ವೈದ್ಯಕೀಯ ಪದ್ಧತಿ ಯಾವ ಅನಾರೋಗ್ಯಕ್ಕೆ ಒಳ್ಳೆಯದೋ ಅವುಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಹೊಸ  ಪದ್ಧತಿಯನ್ನು ಮಾಡಬೇಕು. ಇವೆಲ್ಲವೂ ಒಂದೇ ಸೂರಿನಡಿಯಲ್ಲಿ ಎಲ್ಲರಿಗೂ ಲಭ್ಯವಾಗುವ ವ್ಯವಸ್ಥೆಯಾಗಬೇಕು ಎನ್ನುವ ಹೆಗ್ಡೆಯವರ ವಿಚಾರ ಅಮೂಲ್ಯವಾದದ್ದು.

ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿ ಕೇವಲ ಹಣ ಇರುವವರಿಗೆ ಮಾತ್ರ ಸೌಲಭ್ಯಗಳು ಲಭಿಸುವಂತಾಗಿರುವ ಈ ದಿನಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ದೊರೆಯಬೇಕು ಎಂಬುದು ಅವರ ಆಶಯ. ಡಾ.ಹೆಗ್ಡೆಯವರು ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ತಾವಾಯಿತು ತಮ್ಮ ವೃತ್ತಿಯಾಯಿತು ಎಂದು ಕುಳಿತವರಲ್ಲ. ಪರಿಸರದತ್ತ ಮುಖ ಮಾಡಿ ಸಾಮಾಜಿಕ ಹಾಗೂ ಶಿಕ್ಷಣ ರಂಗಗಳಲ್ಲೂ ಕೈಯಾಡಿಸಿ ಪರಿಣತಿ ಪಡೆದುಕೊಂಡವರು. ಅಲ್ಲಿರುವ ಓರೆಕೋರೆಗಳನ್ನು ಸರಿಪಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿರುತ್ತಾರೆ. ಇಂದಿನ ಅನೇಕ ಔಷಧಿಗಳು ಸಸ್ಯಜನ್ಯವಾದವುಗಳು. ನಿಸರ್ಗದಲ್ಲಿ ಲಭ್ಯವಿರುವ ಅವೆಲ್ಲವನ್ನೂ ಸರಿಯಾಗಿ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಅದರ ಸದುಪಯೋಗವಾಗಬೇಕು. ಪ್ರಕೃತಿಯನ್ನು ಸರಿಯಾಗಿ ಪೋಷಿಸಬೇಕು ಎನ್ನುವ ಅವರ ಮಾತು ಸಾರ್ವಕಾಲಿಕ ಸತ್ಯ.

ಆಧುನಿಕ ಜಗತ್ತಿನಲ್ಲಿ ಯಂತ್ರಗಳ ಹಾವಳಿ ಕೃತ್ರಿಮತೆಗೆ ಎಡೆ ಮಾಡುತ್ತಿದೆ. ನಿಸರ್ಗದೊಂದಿಗೆ ಒಡನಾಟವನ್ನು ಜನ ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯ ಪ್ರಕೃತಿಯಿಂದಲೇ ಹುಟ್ಟಿದ್ದು. ಅದರಲ್ಲೇ ಲೀನವಾಗುವುದು,ಎಲ್ಲರೂ ಪ್ರಕೃತಿಯ ಒಂದು ಭಾಗವೇ.ಉತ್ಸಾಹದಿಂದ ವಾಕಿಂಗ್ ಮಾಡುವಾಗ ಇವೆಲ್ಲವನ್ನೂ ಅನುಭವಿಸುವಂತಾಗಲಿ. ಜಗತ್ತನ್ನೇ ಜೀವಂತವಾಗಿಟ್ಟ ಸೂರ್ಯನ ಬೆಳಕಿಗೆ ದೇಹ ತೆರವಾಗಲಿ. ಏಕೆಂದರೆ ಪ್ರತಿಯೊಂದು ಜೀವಕೋಶವೂ ಸೂರ್ಯನ ಬೆಳಕಿನಿಂದಲೇ ಕ್ರಿಯಾಶೀಲವಾಗುವುದು. ಪ್ರಕೃತಿದತ್ತವಾದ ಅನೇಕ ನಿಯಮಗಳನ್ನು ಹಾಗೆಯೇ ಅನುಸರಿಸಬೇಕು. ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅನಾರೋಗ್ಯವಾಗುವುದು ಖಂಡಿತ ಎಂಬ ಎಚ್ಚರಿಕೆ ಹೇಳುತ್ತಾರೆ. ಆರೋಗ್ಯಕರ ಸಮಾಜದ ಬಗ್ಗೆ ಚಿಂತಿಸುವ ಹೆಗ್ಡೆಯವರಂತಹ ವೈದ್ಯರು ವೈದ್ಯಕೀಯ ಲೋಕಕ್ಕೆ ಬೆನ್ನೆಲುಬು.

ಸಮಾಜದಲ್ಲಿ ಸೌಲಭ್ಯಗಳ ಹಂಚಿಕೆಯಲ್ಲಿ ಶ್ರೀಮಂತ ಹಾಗೂ ಬಡವರ ನಡುವೆ, ಹಳ್ಳಿ- ಪಟ್ಟಣಗಳ ನಡುವೆ ಅಂತರವನ್ನು ಕಾಣುವ ಅವರು ಇದರ ಸುಧಾರಣೆ ಒಬ್ಬರು ಇಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಜೆಯೂ ಇದರ ಬಗ್ಗೆ ಹೆಚ್ಚಿನ ಗಮನವಹಿಸಿ ಕಾರ್ಯಪ್ರವೃತ್ತರಾಗಬೇಕು ಎನ್ನುತ್ತಾರೆ.

ಮಣಿಪಾಲದ ಕೆ.ಎಂ.ಸಿ ಹಾಗೂ ಮಾಹೆ ಸಂಸ್ಥೆಯಲ್ಲಿ ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಪೂರೈಸಿದ ಡಾ. ಹೆಗ್ಡೆಯವರು ಅಸಂಖ್ಯಾತ ರೋಗಿಗಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಜೀವದಾನ ನೀಡಿರುವರು. ಅಷ್ಟೇ ಅಲ್ಲ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಎಷ್ಟೋ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಇದ್ದು ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚಾಗಿ ಪ್ರಪಂಚದ ಎಲ್ಲ ದೇಶಗಳಲ್ಲೂ ಸಂಚರಿಸಿ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತಾದ ಸಮೀಕ್ಷೆಯ ಅಂಕಿ-ಅಂಶಗಳನ್ನು ಅಧಿಕೃತ ದಾಖಲೆಗಳೊಂದಿಗೆ ಗುರುತಿಸಿ ಅಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಡಾ. ಹೆಗ್ಡೆಯವರ ಸಲಹೆಗಳು ಅಮೂಲ್ಯ. ಸುಶಿಕ್ಷಿತ ಸಮಾಜವನ್ನು ಕಟ್ಟುವ ಹಿರಿದಾದ ಹಂಬಲ ಅವರದ್ದು. ದೇಶದ ಅನೇಕ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ಹೀಗೆ ಡಾ.ಬಿ.ಎಂ. ಹೆಗ್ಡೆಯವರು ಒಂದು ಮಾದರಿಯ ಸಮಾಜವನ್ನು ಕಟ್ಟಲು ಪೂರಕವಾದ ಎಲ್ಲಾ ಕ್ಷೇತ್ರಗಳಲ್ಲೂ ಆಳವಾದ ಅರಿವಿನ ಮೂಲಕ ಪರಿಣತಿಯನ್ನು ಪಡೆದಿರುವ ಜ್ಞಾನಿ,ಉತ್ತಮ ವಾಗ್ಮಿ. ಅಲ್ಲಿಯ ಒಳ್ಳೆಯ ಅಂಶಗಳನ್ನು ಎತ್ತಿ ಹಿಡಿಯುತ್ತ ಸರಿ ಇಲ್ಲದಿರುವುದನ್ನು ಮುಲಾಜಿಲ್ಲದೆ ಖಂಡಿಸುತ್ತ, ಪ್ರಶ್ನಿಸುತ್ತ, ಸರಿಪಡಿಸಬೇಕಾಗಿರುವುದರ ಬಗ್ಗೆ ಜನರಿಗೆ ಅರಿವು ನೀಡುತ್ತಾ ಬದುಕನ್ನು ಸಾರ್ಥಕ ಗಳಿಸಿಕೊಂಡವರು.

ವೈದ್ಯಶಾಸ್ತ್ರದ ಜ್ಞಾನವನ್ನು ಕೇವಲ ಶಿಕ್ಷಿತ ವರ್ಗದವರಿಗೆ ಅಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಮನಮುಟ್ಟುವಂತೆ ಪ್ರಚುರಪಡಿಸುವಲ್ಲಿ ಅಪ್ರತಿಮ ಯಶಸ್ಸನ್ನು ಪಡೆದ ಭಾರತೀಯ ವೈದ್ಯರೆಂದರೆ ಪದ್ಮಭೂಷಣ ಖ್ಯಾತಿಯ ಡಾ.ಬೆಳ್ಳೆ ಮೋನಪ್ಪ ಹೆಗ್ಡೆಯವರು. ಯಾವುದೇ ಪೂರ್ವಾಗ್ರಹವಿಲ್ಲದೆ ವೈದ್ಯಶಾಸ್ತ್ರದ ವಿಸ್ಮಯ ಲೋಕದ ಜೊತೆಗೆ ಜನಸಾಮಾನ್ಯರನ್ನು ಕರೆದುಕೊಂಡು ಹೋಗುವ ಪ್ರತಿನಿಧಿ ಹಾಗೂ ವಕ್ತಾರ. ತಮ್ಮ ಅಧಿಕೃತವಾದ ಮಾತಿನಿಂದ ಜನಸಮುದಾಯದ ಕಣ್ಣುತೆರೆಸುವ ಮೂಲಕ ವೈದ್ಯಲೋಕಕ್ಕೇ ಮಾದರಿಯಾದ ಅವರ ಸಾಧನೆಯ ಪರಿದಿ ಅಂತಾರಾಷ್ಟ್ರೀಯ ವಲಯದಲ್ಲೂ ವ್ಯಾಪಿಸಿದೆ.

ಎಳವೆಯಿಂದಲೇ ವೈದ್ಯಕೀಯ ಹಾಗೂ ಅಧ್ಯಾಪನದಲ್ಲಿ ತಮಗಿರುವ ಆಸಕ್ತಿಯನ್ನು ಸ್ವಯಂ ಪ್ರತಿಭೆಯಿಂದ ಬೆಳಗಿಸಿಕೊಂಡು ಯಶಸ್ಸಿನ ಮೆಟ್ಟಿಲುಗಳನ್ನು ಸಲೀಸಾಗಿ ಏರಿದವರು. ಅಪ್ಪಟ ಹಳ್ಳಿಯಲ್ಲಿ ಹುಟ್ಟಿ ಹತ್ತಾರು ಕನಸುಗಳನ್ನು ಕಟ್ಟಿ ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟವರು.ಅನೇಕ ಬಗೆಯ ಅಡೆತಡೆಗಳಿಂದ ವಿಚಲಿತನಾಗದೆ ತನ್ನ ಸ್ವಂತ ನಿರ್ಧಾರದಿಂದ ಮುನ್ನಡೆಯುತ್ತ ಬಂದ ಅಸಾಮಾನ್ಯರು. ಸಮಾಜದ ಅನೇಕ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ನಡೆಸಿ ತಜ್ಞರೆನಿಸಿಕೊಂಡ ಹೆಗ್ಡೆಯವರು ಅಲ್ಲಿರುವ ಓರೆಕೋರೆಗಳನ್ನು ಸರಿಪಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿರುತ್ತಾರೆ.

ಸದೃಢ ಸಮಾಜವನ್ನು ಕಟ್ಟುವ ಕನಸನ್ನು ಹೊತ್ತ ವೈದ್ಯಲೋಕದ ಮಹಾ ಅನುಭವಿ ಅವರು.

          ಹೆಚ್ಚಿನ ಪ್ರಜೆಗಳು  ಆರೋಗ್ಯವೆಂದರೆ  ರೋಗ ಇಲ್ಲದಿರುವುದು ಎಂದು ನಂಬಿರುತ್ತಾರೆ. ಹಾಗೆ ಆಗಲು ಹರಸಾಹಸ ಪಡುತ್ತಾರೆ. ಜೀವಮಾನದಲ್ಲಿ ಎಷ್ಟೊಂದು ಸಮಯವನ್ನು ಹಣವನ್ನು ಅದಕ್ಕಾಗಿ ವ್ಯಯಿಸುತ್ತಾರೆ. ಇವೆಲ್ಲದಕ್ಕೂ ಹೊರತಾದ ಜೀವನಕ್ರಮವೊಂದಿದೆ. ಅದನ್ನು ಸರಿಯಾಗಿ ಪಾಲಿಸಿ ಲವಲವಿಕೆಯಿಂದಿದ್ದರೆ ಅದೇ ನಿಜವಾದ ಆರೋಗ್ಯ ಎಂಬ ಅರಿವು ಮೂಡಿಸಿದವರು ಡಾ. ಬಿ.ಎಂ ಹೆಗ್ಡೆಯವರು. ಕೇವಲ ತನ್ನಲ್ಲಿಗೆ ಬರುವ ರೋಗಿಗಳಷ್ಟೇ ಅಲ್ಲದೆ ಸಮಾಜದ ಪ್ರತಿಯೊಬ್ಬ ಪ್ರಜೆಯೂ ಆರೋಗ್ಯವಾಗಿರಬೇಕು ಎಂಬ ಆಶಯ ಅವರದ್ದು.ಎಳವೆಯಿಂದಲೇ ವಿಶಾಲ ಮನೋಭಾವವನ್ನು ತನ್ನಲ್ಲಿ ಬೆಳಸಿಕೊಂಡ ಹೆಗ್ಡೆಯವರು ನನ್ನ ವೃತ್ತಿ ಜೀವನವನ್ನೂ ಜನಹಿತಕ್ಕಾಗಿ ಮೀಸಲಿಟ್ಟ ಅಪರೂಪದ ವ್ಯಕ್ತಿ, ಶಕ್ತಿ.

‘ಮಾನಸಿಕ ಆರೋಗ್ಯವೇ ನಿಜವಾದ ಆರೋಗ್ಯ’ ಎಂಬುದು ಅವರ ಮೂಲ ಮಂತ್ರ. ಸಣ್ಣಪುಟ್ಟ ಕಾಯಿಲೆಗಳಿಗೆ ರಾಸಾಯನಿಕಯುಕ್ತ ಪಾಶ್ಚಾತ್ಯ ಔಷಧವನ್ನು ಬಳಸಿ ಹೊಸದೊಂದು ರೋಗವನ್ನು ಹುಟ್ಟು ಹಾಕಿಕೊಳ್ಳುವ ಜನರ ಮನಸ್ಥಿತಿ ಬದಲಾಗಬೇಕು. ವೈದ್ಯ ನಮ್ಮೊಳಗೇ ಇದ್ದಾನೆ. ನಿಸರ್ಗ ಜನ್ಯನಾದ ಮಾನವ ನಿಸರ್ಗದಲ್ಲೇ ಲೀನವಾಗುವುದು. ಅದಕ್ಕಾಗಿ ನೈಸರ್ಗಿಕ ಚಿಕಿತ್ಸೆಗಳಿಂದಲೇ ಸಣ್ಣಪುಟ್ಟ ಕಾಯಿಲೆಗಳನ್ನು ಹೋಗಲಾಡಿಸಬಹುದು. ನಿಸರ್ಗವನ್ನು ಕಾಪಾಡಿಕೊಂಡು ಅದಕ್ಕೆ ನಮ್ಮನ್ನು ಆದಷ್ಟು ಮಟ್ಟಿಗೆ ತೆರವುಗೊಳಿಸಿ ಮನೋಸ್ಥೈರ್ಯದಿಂದ ಬದುಕುವ ಕಲೆಯನ್ನು ಅರಿಯಬೇಕು. ಇದರಿಂದ ವೈಯಕ್ತಿಕ ಹಾಗೂ ಸಾಮಾಜಿಕ ವಲಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು. ಇದು ದೇಶದ ಬೆಳವಣಿಗೆಗೂ ಪೂರಕ ಎನ್ನುತ್ತಾರೆ. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ತತ್ವವನ್ನು ತಾನೂ ಅಳವಡಿಸಿಕೊಂಡು ಇತರರೂ ಅದನ್ನು ಅನುಸರಿಸಿ ಪ್ರಕೃತಿಯ ಜೊತೆಗೆ ಒಂದಾಗಿ ಬಾಳಬೇಕೆಂಬ ಸಂದೇಶವನ್ನು ನೀಡುತ್ತಾರೆ.

ಸುಮಾರು ಆರು ದಶಕಗಳ ಸುದೀರ್ಘ ಸಮಯದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ, ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಸದಾ ನಿರತರಾಗಿರುವ ವೈದ್ಯರು ವಿದೇಶಗಳಲ್ಲಿ ಪ್ರಸಿದ್ಧ ನೋಬೆಲ್ ಲಾರೆನ್ಸ್ ಗಳ ಜೊತೆಗೂಡಿ ಪ್ರಯೋಗಗಳ ಮೂಲಕ ವೈದ್ಯಕೀಯದಲ್ಲಿ ಸಾಮಾನ್ಯರಿಗೂ ಅನುಕೂಲವಾಗುವಂತಹ ಅನೇಕ ಬಗೆಯ ಸಂಶೋಧನೆಗಳನ್ನು ಕೈಗೊಂಡು ಉತ್ತಮ ಫಲಿತಾಂಶವನ್ನು ಕಂಡುಕೊಂಡ ವಿಜ್ಞಾನಿ. ತಮ್ಮ ಅಪಾರ ಜ್ಞಾನ, ನೇರ ನಡೆ-ನುಡಿ, ಸರಳತೆ, ಸಜ್ಜನಿಕೆ, ಪರಹಿತಚಿಂತನೆ, ಜನಸಾಮಾನ್ಯರ,ಬಡವರ ಬಗ್ಗೆ ಅನುಕಂಪ, ಸಮಾಜವನ್ನು ಪರಿವರ್ತಿಸುವ ಕನಸು ಮುಂತಾದ ಉದಾತ್ತ ವಿಚಾರಗಳಿಂದ ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಪ್ರಶಂಸೆಗೆ ಪಾತ್ರರಾದವರು ಡಾ.ಬಿ.ಎಂ.ಹೆಗ್ಡೆಯವರು. ಯುವ ವೈದ್ಯರು,ಯುವ ಪೀಳಿಗೆಯವರು ಆರೋಗ್ಯಕರವಾದ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ತಮ್ಮ ಭಾಷಣ ಹಾಗೂ ಲೇಖನಗಳ ಮೂಲಕ ಅವರು ಕರೆನೀಡುತ್ತಾರೆ. ದೇಶ-ವಿದೇಶಗಳ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳಿಂದ ಗೌರವಿಸಲ್ಪಟ್ಟ ವೈದ್ಯ ಭೂಷಣರು ತಮ್ಮನ್ನು ಸಾಮಾನ್ಯನೆಂದೇ ಪರಿಚಯಿಸಿಕೊಳ್ಳುವುದು ವಿಶೇಷ. ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ,

ವೈದ್ಯಕೀಯ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ ಭಾರತದ ಶ್ರೇಷ್ಠ ಪ್ರಶಸ್ತಿಗಳಾದ ಬಿ.ಸಿ.ರಾಯ್ ಪ್ರಶಸ್ತಿ, ಜೆ.ಸಿ. ಬೋಸ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ, ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ. ಇತ್ತೀಚೆಗೆ ಘೋಷಣೆಯಾದ ಭಾರತದ ಎರಡನೆಯ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ಹೆಗ್ಡೆಯವರ ಸಾಧನೆಗೆ ಇನ್ನೊಂದು ಗರಿ.ಡಾ. ಬಿ.ಎಂ.ಹೆಗ್ಡೆಯವರ ಸಾಧನೆ ವೈದ್ಯ ಲೋಕವನ್ನು ಬೆಳಗುವ ದೀವಿಗೆಯಾಗಲಿ.

ಕಲಾ ಭಾಗ್ವತ್