ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಾಪ್ಲಿನ್ ನೆನಪಾಗಿ..

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

ಚಿತ್ರ ಮತ್ತು ಬರಹ : ಜಬಿವುಲ್ಲಾ ಎಂ. ಅಸದ್..

ಇಂದು ಚಾಪ್ಲಿನ್ ನೆನಪಾದ, ತುಂಬಾ…. ಎಂದಿಲ್ಲದಂತೆ ನೆನಪಾದನು. ಕಾರಣ ಇಂದು ಕೇವಲ ಚಾರ್ಲಿ ಎಂಬ ಪಾತ್ರದ ಮುಖಾಂತರ ಮನಸೂರೆಗೊಂಡವನು, ಲೋಕದ ಡೊಂಕನ್ನು ತಂಬ ಅಭಿನಯದ ಮೂಲಕ ವಿಡಂಬಿಸಿದವನು, ನಮ್ಮೆಲ್ಲರ ಪ್ರೀತಿಗೆ ಪಾತ್ರನಾದವನು, ನಗುವಿಗೆ ಹೊಸತೊಂದು ಭಾಷ್ಯ ಬರೆದವನು, ಜಗತ್ತಿಗೆ ನಗುವುದಕ್ಕೆ ಕಾರಣನಾದವನು, ನಗುವುದನ್ನು ಮರೆತವರಿಗೆ ನಗಲು ಮತ್ತೆ ನೆನಪಿಸಿದವನು, ನಗಲು ಪ್ರೇರೇಪಿಸಿದವನು…. ಕೊನೆಗೆ ತನ್ನ ನಗುವನ್ನೇ ಇಡೀ ಜಗತ್ತಿಗೆ ಹಂಚಿ, ಕಾಣಿಕೆಯಾಗಿ ಕೊಟ್ಟು ಇನ್ನೆಂದೂ ಬಾರದಂತೆ ನಮ್ಮ ನಡುವಿನಿಂದ ಎದ್ದು ಏಕಾಂಗಿಯಾಗಿ ಅದೆಲ್ಲಿಗೊ ಸುಪ್ತ ಲೋಕಕ್ಕೆ ಹೊರಟು ಹೋಗಿಬಿಟ್ಟನಲ್ಲ, ಕೆಲವೆ ಕೆಲ ಜನರ ನಡುವೆ, ಹನಿಯುತ್ತಿದ್ದ ಮಳೆ ಹನಿಗಳ ನಡುವೆ, ಆ ಪುಟ್ಟ ಸ್ಮಶಾನದ ಕತ್ತಲ ನಿರವತೆಯಲ್ಲಿ….ಅದೆಷ್ಟು ನೊಂದಿದ್ದನವನು! ತಾನು ಬಯಸಿದ್ದೆಲ್ಲವನ್ನು ಕಳೆದುಕೊಂಡವನು —- ಅವನ ಬದುಕೇ ಒಂದು ಮುಚ್ಚಿದ ಹೊತ್ತಿಗೆ!

ನೆನಪಾದದ್ದು ಕೇವಲ ಚಾರ್ಲಿಯ ನಗುವಲ್ಲ, ಅವನ ನೋವು ಸಹ. ಬರಿ ನಟನೆಯಲ್ಲ ಬದುಕು ಸಹ. ಹುಸಿ ನಗುತ್ತಲೆ ನಿಜದ ನೋವನ್ನು ನುಂಗುತ್ತಿದ್ದವನ ಮನಸ್ಸಾದರೂ ಎಂತಹದ್ದಿರಬೇಕು?!ಮನಸ್ಸು ದುಃಖದ ಜಲಪಾತದ ಮುಂದಣ ಕೈಕಟ್ಟಿ, ಬಾಯಿ ಮುಚ್ಚಿ, ಗಲಾಟೆ ಮಾಡದ ಮಗುವಾಗಿ ಕುಂತಾಗ, ಬೇಸರವೆಂಬುದು ಮೊಡಗಟ್ಟಿ ಗುಡುಗಿದಾಗ, ವಿಷಣ್ಣತೆಯ ಝರಿಯಲ್ಲಿ ಕಾಲು ಇಳಿ ಬಿಟ್ಟು ಮೌನದಿ ಕೂತಾಗ ಮಾತ್ರ ಚಾಪ್ಲಿನ್ ಹೇಳಿದಂತಹ ನೋವಿನ ಮಧುರ ಮಾತುಗಳು ಅಂತರಂಗದಿಂದ ಹೊರಬರಲು ಸಾಧ್ಯವೇನೊ?!

ನಮ್ಮೆಲ್ಲರ ಪ್ರೀತಿಯ ಚಾರ್ಲಿ ಚಾಪ್ಲಿನ್ ಹೇಳುತ್ತಾನೆ: “ಜೋರಾಗಿ ಸುರಿವ ಮಳೆಯಲ್ಲಿ ಸಂಪೂರ್ಣ ನೆನೆಯುತ್ತ ನಡೆಯುವುದೆಂದರೆ ನನಗೆ ಖುಷಿಯೋ ಖುಷಿ, ಯಾಕೆಂದರೆ ಆಗ ನಾನು ಅಳುವುದು, ಕಂಬನಿಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ; ಕಾಣುವುದಿಲ್ಲ, ಮಳೆ ಸುರಿದು ಸುಮ್ಮನಾಗುತ್ತದೆ; ನಾನು ಹಾಗೆ! ಅತ್ತು ಅತ್ತು ಸುಮ್ಮನಾಗುತ್ತೇನೆ.”

Anyway,Happy birthday dear… “CHARLIE”We miss you.

◼️ ಜಬೀವುಲ್ಲಾ ಎಮ್. ಅಸದ್.