ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇಹಕ್ಕೆ ಚೈತನ್ಯ ತರುವ ಸಂಕ್ರಾಂತಿ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಸಂಕ್ರಾಂತಿ ಎಂದರೆ ‘ಪರ್ವಕಾಲ’, ‘ಪುಣ್ಯಕಾಲ’. ಸೂರ್ಯ ತನ್ನ ಪಥವನ್ನು ಬದಲಿಸುವಕಾಲ. ‘ಉತ್ತರಾಯಣ ಪುಣ್ಯಕಾಲ’ ಎಂದೂ ಕರೆಯುವುದು ಇದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಮಕರ ರಾಶಿಗೆ ಬದಲಾಗುವುದು ಎಂದಾಗಿದೆ. ಈ ಆಚರಣೆಯು ಸೂರ್ಯದೇವನ ಗತಿಯನ್ನು ಅನುಸರಿಸಿ ಆಚರಿಸಲಾಗುತ್ತದೆ. ಇಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶವಾಗುತ್ತಾದ್ದರಿಂದ ಶಾಸ್ತ್ರಕಾರರು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ ಎನ್ನುತ್ತಾರೆ. ಈ ಕಾಲವು ಸ್ವರ್ಗದ ಬಾಗಿಲನ್ನು ತೆರೆದಿರುವ ಕಾಲವೆಂದೂ ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗ ಪಡೆಯುತ್ತಾರೆ ಎಂಬ ಐತಿಹ್ಯವೂ ಇದೆ. ಆದುದರಿಂದ ಮಹಾಭಾರತದ ಕಥೆಯಲ್ಲಿ ಭೀಷ್ಮ ಇಹಲೋಕ ತ್ಯಜಿಸಲು ಈ ಕಾಲದ ನಿರೀಕ್ಷೆಯಲ್ಲಿದ್ದುದನ್ನು ಉದಾಹರಿಸುತ್ತಾರೆ. ಈ ಕಾಲದಲ್ಲಿ ಹಗಲು ಬೆಳಕಿನ ಅವಧಿ ಕಡಿಮೆಯಾಗಿರುತ್ತದೆ. ಸಂಕ್ರಾಂತಿಯ ನಂತರ ಹಗಲಿನ ಅವಧಿ ಹೆಚ್ಚಳವಾಗುವುದರ ಜೊತೆಗೆ ಸೂರ್ಯನ ಪ್ರಖರತೆಯೂ ಭೂಮಿಯ ಮೇಲೆ ಹೆಚ್ಚಾಗುತ್ತದೆ.

ಇನ್ನೊಂದು ಪೌರಾಣಿಕ ಕಥೆಯ ಉಲ್ಲೇಖವನ್ನು ಇಲ್ಲಿ ಉಲ್ಲೇಖಿಸುವುದಾದರೆ ಬ್ರಹ್ಮದೇವ ತಿಮಿರಾಸುರನಿಗೆ ವರ ನೀಡಿರುತ್ತಾನೆ. ಆದರ ಪರಿಣಾಮವಾಗಿ ಆತ ಋಷಿಮುನಿಗಳಿಗೆ ಇನ್ನಿಲ್ಲದ ಹಾಗೆ ತೊಂದರೆ ಕೊಟ್ಟು ಪೀಡಾಕಾರಕನಾಗಿರುತ್ತಾನೆ. ದಿಕ್ಕುಕಾಣದ ಮುನಿಗಳೆಲ್ಲ ಸೂರ್ಯದೇವನಲ್ಲಿ ರಕ್ಷಣೆ ಬೇಡುತ್ತಾರೆ. ಆಗ ಸೂರ್ಯದೇವ ಕರ್ಕ ಮತ್ತು ಮಕರ ಎಂಬೆರೆಡು ದೇವತೆಗಳ ಸಹಿತ ತಿಮಿರಾಸುರನ ವಧೆಗೆ ಮುಂದಾಗುತ್ತಾನೆ. ಮಕರ ದೇವತೆ ತಿಮಿರಾಸುರನ ಹೊಟ್ಟೆಗೆ ಭರ್ಚಿಯಿಂದ ಇರಿದಾಗ ಹೊಟ್ಟೆಯಿಂದ ಎಳ್ಳು ಹೊರಬಂದು ತಿಮಿರಾಸುರ ಹತನಾಗುತ್ತಾನೆ. ಅಂದಿನಿಂದ ಎಳ್ಳನ್ನು ಅಮೃತದಂತೆ ಪೂಜಿಸುವ ಪ್ರತೀತಿ ಬಂತು ಎನ್ನುತ್ತಾರೆ.. ಎಳ್ಳನ್ನು ‘ಶಿವನ ಅಂಶ’ವೆಂದೂ ‘ಪೀಡಾ ಪರಿಹಾರಕ’ ಎಂದೂ ಕರೆಯುತ್ತಾರೆ. ಸಂಕ್ರಾಂತಿಯ ದಿನ ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ಬೀರಿ, ಸಂಜೆ ದೇವರಿಗೆ ಎಳ್ಳೆಣ್ಣೆಯ ದೀಪವನ್ನು ಹೊತ್ತಿಸುವುದು ವಾಡಿಕೆ ಅಂದರೆ ಇಡೀ ಸಂಕ್ರಾಂತಿಯ ದಿನ ಎಳ್ಳಿಗೆ ಪ್ರಾಧಾನ್ಯತೆ. ಸಂಧ್ಯಾಕಾಲದಲ್ಲಿ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಆರತಿ ಮಾಡಿ ದೃಷ್ಟಿ ತೆಗೆಯುವ ಪದ್ಧತಿ ಈ ಪರ್ವಕಾಲದಲ್ಲಿದೆ. ಮಕರ ಸಂಕ್ರಾಂತಿಯನ್ನು ಆಚರಿಸಿದರೆ ಸಾಕು ಒಂದು ಸಂವತ್ಸರದ ಹನ್ನೆರಡೂ ಸಂಕ್ರಮಣಗಳನ್ನು ಆಚರಿಸಿ ಫಲಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಕರ್ನಾಟಕದಲ್ಲಿ ಸಂಕ್ರಾಂತಿ ಎಂಬ ಹೆಸರಿನಿಂದ ಕರೆಯುತ್ತೇವೆ. ಗ್ರಾಮೀಣರೂ ಸಂಕ್ರಾಂತಿ ಎಂದೇ ಕರೆಯುವುದು ವಾಡಿಕೆ. ನಮ್ಮಲ್ಲಿ ನಾಡಹಬ್ಬ ದಸರವನ್ನು ಆಚರಿಸುವಂತೆ ಆಂಧ್ರ, ತೆಲಂಗಾಣದವರು ಈ ನಾಡಹಬ್ಬವನ್ನು ಎರಡು ಮೂರು ದಿನಗಳವರೆಗೆ ಆಚರಿಸುತ್ತಾರೆ. ಕರ್ನಾಟಕದಲ್ಲಿ ಯುಗಾದಿಗೆ ಇರುವ ವಿಶೇಷತೆ ಆಂಧ್ರದವರಿಗೆ ಸಂಕ್ರಾಂತಿ ಆಚರಣೆಯಲ್ಲಿದೆ. ಹಾಗಾಗಿ ಇದನ್ನು “ಪೆದ್ದ ಪಡಂಗ” ಎಂದೇ ಕರೆಯುತ್ತಾರೆ. ತಮಿಳುನಾಡಿನಲ್ಲಿ “ಪೊಂಗಲ್” ,“ಕನುಹಬ್ಬ”ವೆಂದೂ ಪ್ರಚಲಿತವಾಗಿದೆ. ನಮ್ಮಲ್ಲಿ ನಾಗರಪಂಚಮಿಯಲ್ಲಿ ಅಣ್ಣತಮ್ಮಂದಿರ ಏಳಿಗೆಗೆ ಹೆಣ್ಣು ಮಕ್ಕಳು ಪೂಜೆ ಮಾಡುವಂತೆ ಅಲ್ಲಿನ ಹೆಣ್ಣು ಮಕ್ಕಳೂ ತವರು ಮನೆಗೆ ಹೋಗಿ ಈ ಹಬ್ಬವನ್ನು ಆಚರಿಸುತ್ತಾರೆ. ಹಾಗೆ ಹಳದಿ ಬಣ್ಣದ “ಕನು”ವನ್ನು ಗೋವುಗಳಿಗೆ ನೀಡುತ್ತಾರೆ. ದ್ರಾವಿಡ ಸಂಪ್ರದಾಯಸ್ಥರಿಗೆ “ಮಕರಸಂಕ್ರಾಂತಿ” ವಿಶೇಷ ಸಂಭ್ರಮದ ಆಚರಣೆಯಾಗಿದೆ. ಊರಾಚೆ ಬಯಲಿನಲ್ಲಿ ಎಲ್ಲರೂ ಒಟ್ಟು ಸೇರಿ ಅಲಂಕೃತ ಹೊಸ ಮಡಕೆಗಳಲ್ಲಿ ಹೊಸ ಅಕ್ಕಿಯಿಂದ ಪೊಂಗಲ್ , ತಯಾರಿಸಿ ಜಾನಪದ ಹಾಡು ನೃತ್ಯಗಳೊಂದಿಗೆ ಸಂಭ್ರಮಿಸುತ್ತಾರೆ. ಹೊಸ ಅಕ್ಕಿಯಿಂದ ಪೊಂಗಲ್ ತಯಾರಿಸುವಾಗ ಚೆನ್ನಾಗಿ ಬಂದರೆ ಆ ವರ್ಷ ಚೆನ್ನಾಗಿರುತ್ತದೆ ಇಲ್ಲವಾದರೆ ಕಷ್ಟ ಬರುವುದು ಎಂಬ ನಂಬಿಕೆಯೂ ಅವರಲ್ಲಿದೆ.

ಕೇರಳದಲ್ಲಿ ಅಯ್ಯಪ್ಪನ ಆರಾಧನೆ ವಿಶೇಷವಾಗಿರುತ್ತದೆ. ಬಂಗಾಳ ಮತ್ತು ಅಸ್ಸಾಂನಲ್ಲಿ “ಭೋಗಲಿಬಿಹು” ಎಂದು ಕರೆದರೆ ಗುಜರಾತ್ ಹಾಗು ಮಹಾರಾಷ್ಟ್ರಗಳಲ್ಲಿ ಗಾಳಿಪಟವನ್ನು ಹಾರಿಸಿ ಹಬ್ಬವನ್ನು ಆಚರಿಸುತ್ತಾರೆ.ಅಲಹಾಬಾದ್ನಲ್ಲಿ ಕುಂಭ ಮೇಳಗಳು ನಡೆಯುವುದು ಈ ಪರ್ವಕಾಲದಲ್ಲಿಯೇ. ಒಟ್ಟಾರೆಯಾಗಿ ಈ ಮಾಸದಲ್ಲಿ ವಿಷ್ಣುವಿನ, ಶಿವನ ಆರಾಧನೆ ಮುಖ್ಯವಾಗಿ ಆಗುತ್ತದೆ. ಧನುರ್ಮಾಸ ವೃತಾಚರಣೆ ಮಾಡುವವರು ಸಂಕ್ರಾಂತಿಯ ದಿನಕ್ಕೆ ಉದ್ಯಾಪನೆ ಮಾಡುತ್ತಾರೆ. ತಮಿಳುನಾಡು ಪ್ರಾಂತ್ಯದ ಹೆಣ್ಣುಮಕ್ಕಳು “ಆಂಡಾಳ್ ತಾಯರ್” ಅಥವಾ “ಗೋಧಾದೇವಿ”ಯನ್ನು ರುಕ್ಮಿಣಿಯ ಇನ್ನೊಂದು ಅವತಾರವೆಂದು ತಿಳಿದು ಆರಾಧನೆ ಮಾಡುತ್ತಾರೆ “ಗೋಧಾದೇವಿ” ಈ ಮಾಸದಲ್ಲೇ ವೃತಾಚರಣೆ ಮಾಡಿ ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆದಳೆಂಬ ಪ್ರತೀತಿ ಇದೆ.. ಹನ್ನೆರಡು ಆಳ್ವಾರರಲ್ಲಿ ಒಬ್ಬಳಾಗಿರುವ ಈಕೆ ಅಲಂಕಾರ ಪ್ರಿಯೆಯೂ ಹೌದು. “ತಿರುಪ್ಪಾವೈ” ಎಂಬ ೩೦ ಚೌಪದಿಗಳನ್ನು ರಚಿಸಿದ್ದಾಳೆ. ಇದನ್ನು ಪಾಶುರಮ್ಗಳೆಂದು ಕರೆಯುತ್ತಾರೆ. ಅಂತಹ ಪಾಶುರಂಗಳನ್ನು ದಿನಕ್ಕೆ ಒಂದರೆಂತೆ ದೇವಾಲಯಗಳಲ್ಲಿ ಇಲ್ಲವೆ ಮನೆಗಳಲ್ಲಿಯೇ ಸೂರ್ಯೋದಯಕ್ಕೆ ಮೊದಲೇ ತಮ್ಮ ತಮ್ಮ ಮನೆಗಳಲ್ಲಿ ಹೆಣ್ಣುಮಕ್ಕಳು ಪಠಣೆ ಮಾಡಿಕೊಳ್ಳುತ್ತಾರೆ. ದೊಡ್ಡ ದೊಡ್ಡ ರಂಗೋಲಿಗಳನ್ನು ಬಿಡಿಸಿ, ಅಲಂಕರಿಸಿ ರಂಗೋಲಿಗಳನ್ನೇ ಆರಾಧಿಸುವ ಕ್ರಮವೂ ಇದೆ. “ತಿರುಪ್ಪಾವೈ” ಮೂಲ ತಮಿಳಿನಲ್ಲಿದೆ ಇದನ್ನು ಕನ್ನಡಕ್ಕೆ ನಾ. ಗೀತಾಚಾರ್ಯ ಅವರು ತಂದಿದ್ದಾರೆ. ಧನುರ್ಮಾಸದ ಕಡೆಯ ದಿನದಂದು ಮುತ್ತೈದೆಯರು ಅಂದರೆ “ಕನುಹಬ್ಬ”ದಂದು ವಿಶೇಷ ಅಭೀಷೇಕ, ಅಲಂಕಾರ, ನೈವೇದ್ಯಗಳನ್ನು ಗೋಧಾದೇವಿಗೆ ಸಮರ್ಪಿಸಿ ತಮ್ಮ ವೃತಗಳನ್ನು ಉದ್ಯಾಪನೆ ಮಾಡಿ ತಾಂಬೂಲ ವಿನಿಮಯ ಮಾಡಿಕೊಳ್ಳುತ್ತಾರೆ.

ಅಲ್ಲದೇ ದೇಶಾಚಾರ, ಕಾಲಾಚಾರಕ್ಕೆ ತಕ್ಕಂತೆ ಇಷ್ಟದೈವ, ಕುಲದೈವದ ಆರಾಧನೆ ಭಜನೆಗಳನ್ನೂ ಮಾಡುವುದಿದೆ. ಪ್ರತಿವರ್ಷವೂ ಜನವರಿ ೧೪ಕ್ಕೆ ಈ ಹಬ್ಬದ ಆಚರಣೆ ಇರುತ್ತದೆ.ಕೆಲವೊಮ್ಮೆ ಜನವರಿ ೧೫ಕ್ಕೂ ಆಚರಿಸುವುದಿದೆ.

ಸಂಕ್ರಾಂತಿ ಎಂದಾಗ ಎಳ್ಳು ಬೆಲ್ಲ, ಹಸಿಕಡಲೆಗಿಡ, ಸಿಹಿಗೆಣಸು, ಕಬ್ಬು ಸಕ್ಕರೆ ಅಚ್ಚುಗಳು, ಸಿಹಿ ಪೊಂಗಲ್ ಖಾರ ಪೊಂಗಲ್ಗಳೇ ನೆನಪಾಗುತ್ತವೆ. . ಪೊಂಗಲ್ ಹೆಸರು ಬೇಳೆ , ಕಾಳುಮೆಣಸು, ಜೀರಿಗೆ ಇತ್ಯಾದಿಗಳನ್ನು ಬಳಸಿ ಮಾಡುವುದು ಇದರಲ್ಲಿನ ಕಾಳುಮೆಣಸು ಶೀತವಾಗುವುದನ್ನು ತಡೆಯುತ್ತದೆ , ಜೀರಿಗೆ ಪಿತ್ತಹರವಾಗಿ ಮಾಡುತ್ತದೆ. ಸಿಹಿಪೊಂಗಲ್ ಅರ್ಥಾತ್ ಸಕ್ಕರೆಪೊಂಗಲ್ ಇದರಲ್ಲಿ ತುಪ್ಪವನ್ನು ಒಣ ಹಣ್ಣುಗಳನ್ನು ಹೆಚ್ಚಾಗಿ ಬಳಸುವುದರಿಂದ ಶಕ್ತಿ ವರ್ಧಜಕವಾಗಿಯೂ ಕಾಂತಿವರ್ಧಕವಾಗಿಯೂ ಕೆಲಸ ಮಾಡುತ್ತದೆ. “ಸಂಕ್ರಾಂತಿ” ಎಂದರೆ ಇನ್ನೊಮ್ಮೆ ನೆನಪಾಗುವುದು ಅವರೆಕಾಯಿ ಇದರಿಂದ ತರಹೇವಾರಿ ಅಡುಗೆ ಮಾಡಿ ಇಲ್ಲವೇ ಅವರೆಕಾಯಿಯನ್ನು ಹಾಗೆಯೇ ಬೇಯಿಸಿ ತಿನ್ನುವುದಿದೆ. ಅವರೆಕಾಳು ಉಪ್ಪಿಟ್ಟು, ಅವರೆಕಾಳು ಹುರಿಗಾಳು ಇನ್ನೂ ವಿಶೇಷವೇ ಬಿಡಿ! ಈ ಸಮಯದಲ್ಲಿಯೇ ಸಿಗುವ ಹಸಿಕಡಲೆಕಾಳನ್ನು ಬಳಸಿ ಕೋಸಂಬರಿ ಸಲಾಡನ್ನು ತಯಾರಿಸುತ್ತಾರೆ.

ಆದುನಿಕತೆ ಬಂದಂತೆ ಕಪ್ಪು ಎಳ್ಳಿನ ಹೊರಕವಚ ತೆಗೆದು ಬಿಳಿ ಎಳ್ಳನ್ನು ಬಳಸುವ ರೂಢಿ ಬಂದಿದೆ. ಅಲ್ಲದೇ ಈ ಪರ್ವ ಕಾಲದಲ್ಲಿ ಎಳ್ಳು ಕೊಬ್ಬರಿಗೆ ಹೆಚ್ಚಿ ಆದ್ಯತೆ. ಚಳಿಗಾಲದಲ್ಲಿ ಕಳೆದುಕೊಂಡ ಚರ್ಮದ ಕಾಂತಿ ಮೂಡಲು ಇವುಗಳು ಸಹಾಯಕಾರಿ ಎನ್ನುತ್ತಾರೆ. ಹಾಗೆ ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಕಡಲೆಬೀಜ ಆರೋಗ್ಯಕ್ಕೆ ಉತ್ತಮ ಒಂದು ವೇಳೆ ಇದರಿಂದ ಪಿತ್ತ ಉದ್ದೀಪನವಾದರೆ ಬೆಲ್ಲ ಅದನ್ನು ಕಳೆಯುತ್ತದೆ.

ಜನವರಿ ಮೊದಲಿನಿಂದಲೆ ಅಂದರೆ ೧೫-೨೦ ದಿನಗಳ ಮೊದಲಿನಿಂದಲೂ ಸಂಕ್ರಾಂತಿಯಲ್ಲಿ ಮನೆ ಮನೆಗೆ ಬಂಧುಮಿತ್ರರಿಗೆ ಹಂಚುವ ಎಳ್ಳನ್ಮು ಹೆಣ್ಣು ಮಕ್ಕಳು ತಯಾರು ಮಾಡುತ್ತಾರೆ. ಇದನ್ನು ಸಂಕ್ರಾಂತಿ ಎಳ್ಳು, ಬೀರೆಳ್ಳು, ಎಂದೂ ಕರೆಯುತ್ತಾರೆ . ಹಂಚಲು ಸುಲಭವಾದ ಎಳ್ಳಿನ ಮಿಶ್ರಣ ಮಾಡಲು ಸಾಕಷ್ಟು ತಾಳ್ಮೆ ಬೇಕು, ಕ್ರಿಯಾಶೀಲತೆ ಮತ್ತು ಏಕಾಗ್ರತೆ ಇದ್ದರೆ ಎಳ್ಳಿನ ಮಿಶ್ರಣ ಹಂಚಲು, ನೋಡಲು, ಸವಿಯಲು ಚೆನ್ನಾಗಿರುತ್ತದೆ.(ಎಳ್ಳು, ಒಣಕೊಬ್ಬರಿ, ಹುರಿದು ಸಿಪ್ಪೆ ತೆಗೆದ ನೆಲಗಡಲೆಬೀಜ, ಹುರಿಕಡಲೆ ಮಿಶ್ರಣ ಸೇರಿ ಸಂಕ್ರಾಂತಿ ಎಳ್ಳು ಆಗುತ್ತದೆ. ಅಲಂಕಾರಕ್ಕೆ ಜೀರಿಗೆ ಮಿಠಾಯಿ, ಸುಣ್ಣದ ಕಲ್ಲನ್ನು ಸೇರಿಸಬಹುದು)ಇನ್ನು ಉತ್ತರಕರ್ನಾಟಕದಲ್ಲಿ ಎಳ್ಳು ಮತ್ತು ಬೆಲ್ಲ ಸೇರಿಸಿ ಕುಸುರೆಳ್ಳು ಎಂಬ ಖಾದ್ಯವನ್ನು ತಯಾರಿಸುತ್ತಾರೆ. ಎಳ್ಳಿನಲ್ಲಿ ಮೇದಸ್ಸು ಫ್ಲೋರಿಕ್ಆಮ್ಲವೆಲ್ಲಾ ಇರುವುದರಿಂದ ಚರ್ಮಕ್ಕೆ ಮೃದುತ್ವವನ್ನು ಕೂದಲುಗಳಿಗೆ ಹೊಸ ಹೊಳಹನ್ನು ತಂದು ಕೊಡುತ್ತದೆ.

ಸಂಕ್ರಾಂತಿ ಎಂದರೆ “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು” ಎಂಬ ವಾಕ್ಯ ನೆನಪಾಗುತ್ತದೆ. ಇದೊಂದು ಧನಾತ್ಮ​ಕತೆಯ ಸಂಕೇತವೂ ಹೌದು!ಎಳ್ಳು -ಬೆಲ್ಲ ಎಂಬಂತೆ ಬೆಲ್ಲಕ್ಕೆ ಇಲ್ಲಿ ವಿಶೇಷತೆ ಹೆಚ್ಚು “ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ” ಇಲ್ಲಿ ಬೆಲ್ಲದ ಮಹತ್ವದ ಬಗ್ಗೆ ಸರ್ವಜ್ಞ ಒತ್ತಿ ಹೇಳುತ್ತಾನೆ. ಬೆಲ್ಲ ಬೆರೆಸಿದ ಹಾಲನ್ನು ಕುಡಿದರೆ ಸ್ಥೂಲಕಾಯ ನಿವಾರಣೆ ಆಗುತ್ತದೆ. ರಕ್ತ ಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಿ ಮೂಳೆಗಳಿಗೆ ಶಕ್ತಿಯನ್ನು ಕೊಡುತ್ತದೆ. ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ಹಾಗು ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.. ಅಂತಹವರು ಬೆಲ್ಲ ಬೆರೆಸಿದ ಹಾಲನ್ನು ಸೇವನೆ ಮಾಡುತ್ತಾರೆ. ಬೆಲ್ಲ ಮತ್ತು ಹರಿಶಿಣದ ಹಾಲು ಪ್ರಾಕೃತಿಕವಾಗಿ ರೋಗ ನಿರೋಧಕ ಶಕ್ತಿಯ ಗುಣಗಳನ್ನು ಹೊಂದಿರುತ್ತದೆ. ಹಾಗಾಗಿ ಇದರಿಂದ ವೈರಸ್ ನ​ ಸೋಂಕು ಕಡಿಮೆಯಾಗುತ್ತದೆ.

ಸಂಕ್ರಾಂತಿ ಎಳ್ಳು ಹಂಚುವಾಗ ವೀಳ್ಯದೆಲೆ –ಅಡಿಕೆ, ಕಬ್ಬು, ಬಾಳೆ, ಕಿತ್ತಳೆ ಹಣ್ಣನ್ನು ಕೊಡುವುದಿದೆ. “ವೀಳ್ಯವಿಲ್ಲದ ಬಾಯಿ ಕೂಳು ಇಲ್ಲದ ನಾಯಿ” ಎಂದು ಸರ್ವಜ್ಞ ಹೇಳಿದ್ದಾನೆ.ಇಲ್ಲಿ ತಾಂಬೂಲದಿಂದ ಆಗುವ ಲಾಭವನ್ನು ಇಲ್ಲಿ ಹೇಳಬಹುದು. ಊಟ ತಿಂಡಿ ಸೇವಿಸಿದ ಬಳಿಕ ದಿನಕ್ಕೆ ಒಂದರಿಂದ ಮೂರು ಬಾರಿಯವರೆಗೆ ವೀಳ್ಯದೆಲೆ ಅಡಿಕೆ, ಏಲಕ್ಕಿ , ಲವಂಗ ಇತ್ಯಾದಿ ಸೇವಿಸಿದರೆ ಕಫ ಆಗುವುದಿಲ್ಲ. ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಇದರ ಉಪಯೋಗ ಗಮನಿಸಿ ಇದನ್ನುಹಸಿರು ಬಂಗಾರ ಎನ್ನುತ್ತಾರೆ. ಸೋಂಕನ್ನು ತಡೆಗಟ್ಟುವ ಶಕ್ತಿ ಆಸ್ಟ್ರೆಯೋ ಫೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗ ಇದರಿಂದ ಕಡಿಮೆಯಾಗುತ್ತದೆ.

ಕಬ್ಬು ಇದನ್ನು “ಇಕ್ಷು” ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಮನಸ್ಸಿನ ಉಲ್ಲಾಸಕ್ಕೆ , ತಂಪಿಗೆ,ದೇಹ ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬನ್ನು ಇಷ್ಟಪಡದವರಿಲ್ಲ. ಇದಕ್ಕೆ ಪಚನ ಕ್ರಿಯೆಯನ್ನು ಜಾಗೃತಗೊಳಿಸುವ ಗುಣವಿದೆ ಹಾಗೆ ಸಹಜ ಶರ್ಕರವಿರುವುದರಿಂದ ಇದು ದೇಹಕ್ಕೆ ಬೇಕಾಗಿರುವ ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತದೆ. ಜಾಂಡಿಸ್\ಕಾಮಾಲೆ ವ್ಯಾಧಿಗೆ ರಾಮಬಾಣವಾಗಿರುವ ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲುಗಳು ಶುಭ್ರವಾಗುತ್ತವೆ, ಬಲವಾಗುತ್ತವೆ. ಇದರ ಜೊತೆಗೆ ಕೊಡುವ ಕಿತ್ತಳೆ ಹಣ್ಣು ಇದರಲ್ಲಿ ವಿಟಮಿನ್ ‘ಸಿ’ ಇರುತ್ತದೆ. ಕೊರೊನಾ ಕಾಲದಲ್ಲಿ ಹೆಚ್ಚು ಕೇಳಿಬಂದ ವಿಟಮಿನ್ ಹೆಸರು ‘ಸಿ’. ಹಸಿವನ್ನು ಹೆಚ್ಚಿಸುವ ಇದರಲ್ಲಿ. ಖನಿಜಾಂಶವೂ ಹೆಚ್ಚಿರುತ್ತದೆ. ಇದರ ಸಿಪ್ಪೆಯನ್ನು ಒಣಗಿಸಿ ಚರ್ಮದ ಆರೈಕೆಗೆ ಫೇಶಿಯಲ್ಗಳಲ್ಲಿ, ಸ್ಕ್ರಬ್ಬರ್ಗಳಂತೆ ಬಳಸುವುದಿದೆ.

ಮುಖ್ಯವಾಗಿ ಸಂಕ್ರಾಂತಿ ಎಂದರೆ ರೈತರಿಗೆ ವಿರಾಮದ ಕಾಲ ತಾವು ಬೆಳೆದ ಧಾನ್ಯಗಳನ್ನು ವಿಕ್ರಯಿಸುವ ಕಾಲ. ಒಕ್ಕಲುತನಕ್ಕೆ ಸಹಾಯ ಮಾಡಿದ ರಾಸುಗಳಿಗೆ ವಿಶ್ರಾಂತಿ ಕೊಡುವ ಮತ್ತು ಮುಂದಿನ ಮುಂಗಾರಿಗೆ ಸಿದ್ಧಮಾಡುವ ಕಾಲ ಎಂದೂ ಕರೆಯುತ್ತಾರೆ. ಸಂಕ್ರಾಂತಿ ಸಮಯದ ಹೊತ್ತಿಗೆ ರೈತರು ಬೆಳೆಗಳನ್ನು ಕಟಾವು ಮಾಡಿರುತ್ತಾರೆ ಹಾಗಾಗಿ ರೈತರು ರಾಸುಗಳನ್ನು ಶಿಸ್ತಾಗಿ ಕಾಯುವುದಿಲ್ಲ ಇದನ್ನು “ಪೋಲಿ ಬಿಡುವುದೂ” ಎಂತಲೂ ಆಡುಭಾಷೆಯಲ್ಲಿ ಕರೆಯುತ್ತಾರೆ. ಸಂಕ್ರಾಂತಿಯ ಸಂಜೆ ಹೋರಿಬೆದರಿಸುವ ಸ್ಪರ್ಧೆಗಳು ಆಯೋಜಿಸಲ್ಪಡುತ್ತವೆ. ಊರಮುಂದೆ ಕಿಚ್ಚು ಹೊತ್ತಿಸಿ ಅದರಲ್ಲಿ ತಮ್ಮ ರಾಸುಗಳನ್ನು ಹಾಯಿಸುತ್ತಾರೆ ಕಾರಣ ಇವುಗಳ ಮೈಮೇಲಿದ್ದ ಕ್ರಿಮಿಕೀಟಗಳು ನಿವಾರಣೆಯಾಗಲಿ ಎಂಬ ಕಾರಣಕ್ಕೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಜಲ್ಲಿಕಟ್ಟು ಉತ್ಸವವೂ ನೆನಪಾಗುತ್ತದೆ ಇದು ಆಯ ತಪ್ಪಿದರೆ ಮಾರಣಾಂತಿಕವೂ ಹೌದು!. ಒಟ್ಟಾರೆಯಾಗಿ ಸಂಕ್ರಾಂತಿ ಕಾಲದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ವಿರಾಮ ಇಡುವ ಕಾಲ. ದೇವತಾಕಾರ್ಯ, ಮದುವೆ ಮುಂಜಿ ಇತ್ಯಾದಿಗಳನ್ನು ರೈತರು ಸಂಕ್ರಾಂತಿಯ ನಂತರವೇ ಆಚರಿಸುವುದು ವಾಡಿಕೆ.
ಸಂಕ್ರಾಂತಿ ಮುಗಿದು ರಥಸಪ್ತಮಿಯ ನಂತರ ನಾಡಿನಾದ್ಯಂತ ರಥೋತ್ಸವದ ಪರ್ವಕಾಲವೇ ಆರಂಭವಾಗುತ್ತದೆ. ಆನಂತರ ಮದುವೆ ಲಗ್ನಕಾಲ ಎನ್ನುವುದು ವಾಡಿಕೆ.ಹಿಂದಿನ ಮದುವೆಗಳೆಲ್ಲವೂ ಯುಗಾದಿಗೆ ಪ್ರಾರಂಭ​ವಾಗಿ ಆಷಾಢ ಮಾಸದ ವೇಳೆಗೆ ಸಂಪನ್ನವಾಗುತ್ತಿದ್ದವು. ಕಾಲ ಬದಲಾದಂತೆ ಈಗ ಎಲ್ಲಾ ಕಾಲದಲ್ಲೂ ಮದುವೆಗಳಾಗುತ್ತವೆ. Year Plan ಎಂದು ನಾವೇನು ಕರೆಯುತ್ತೇವೆಯೋ ಅದನ್ನು ರೈತರೂ ಹೇಗೆ ಅನೂಚಾನವಾಗಿ ಆಚರಿಸಿಕೊಂಡು ಬಂದಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ. ದಕ್ಷಿಣಾಯನವನ್ನು ಕೃಷಿಗೆ ಬಳಸಿಕೊಂಡ ರೈತ ಉತ್ತರಾಯಣವನ್ನು ಪೂಜೆ ಇತ್ಯಾದಿ ಶುಭ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುತ್ತಾರೆ. “ಸಂಕ್ರಾಂತಿ” ಎಂದರೆ ದಾನಗಳನ್ನು ನೀಡಲು ಪರ್ವಕಾಲ ಎಂಬ ಮಾತೂ ಇದೆ.ಸಂಕ್ರಾಂತಿ ಬಂದರೆ ಪ್ರಕೃತಿಯಲ್ಲಿ sum ಕ್ರಾಂತಿಯಾಗುವುದಂತೂ ಸರಿ. ಚಳಿಯ ವಾತಾವರಣ ಹೋಗಿ ಬಿಸಿಲಿನ ವಾತಾವರಣ ಬರುತ್ತದೆ. ವಸಂತ ಋತುವಿನಾಗಮನಕ್ಕೆ ಮುನ್ನುಡಿ ಬರೆಯುತ್ತದೆ. ಇಂತಹ ಹಬ್ಬಗಳು ನಮ್ಮಲ್ಲಿ ಹೊಸ ಶಕ್ತಿ, ಹೊಸಚೈತನ್ಯ , ಸಂಘಟನಾ ಮನೋಭಾವ ಮತ್ತು ಹೊಸ ಹುರುಪನ್ನು ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.
ಕೊರೊನಾ ಕಳೆಯಿತು ಅನ್ನುವಷ್ಟರಲ್ಲಿ ಬ್ರಿಟನ್ ವೈರಸ್ ಕಾಲಿಟ್ಟಿದೆ . ಹಕ್ಕಿ ಜ್ವರ ಭೀತಿಯೂ ಇದೆ. ಜೊತೆಗೆ ಆಶಾದಾಯಕವೆಂದರೆ ಆತ್ಮನಿರ್ಭರ ಭಾರತೀಯರೆ ಸಂಶೋಧಿಸಿರುವ ಲಸಿಕೆಗಳು ಬಳಕೆಗೆ ಸಿದ್ಧವಾಗಿವೆ. ಇದು ಭಾರತೀಯರ ಪಾಲಿಗೆ “ಲಸಿಕಾ ಸಂಕ್ರಾಂತಿ”ಯೇ ಸರಿ. ಇರುವ ಎಲ್ಲ ಅಡಚಣೆಗಳು ಕಳೆದು ಈ ವರ್ಷವು ರಥೋತ್ಸವ, ಹಬ್ಬ ಹರಿದಿನ ಸುಗ್ಗಿ ಸಂಭ್ರಮಗಳಿಂದ ತುಂಬಿ ತುಳುಕಲಿ ಜಾನಪದ ಆಚರಣೆ ಮರೆಯಾಗದಿರಲಿ ಎಂದು ಆಶಿಸೋಣವೇ?