ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೋಷಗಳಿಂದ ಮುಕ್ತವಾಗಿರಬೇಕು ಸಂವಹನ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಮನುಷ್ಯನ ದಿನಚರಿ ಪ್ರಾರಂಭವಾಗುವುದೇ ಸಂವಹನದಿಂದ. ಸಂವಹನ ಎಂದರೆ ಎದಿರಿಗೆ ಇರುವವರೊಂದಿಗೆ ಸಂಪರ್ಕ ಸಾಧಿಸುವುದು, ಸಂದೇಶ ನೀಡುವುದು ಎಂದು ಅರ್ಥೈಸಬಹುದು ಇದು ಭಾಷೆಯ ಮೂಲಕ, ಸಂಜ್ಞೆಯ ಮೂಲಕ, ಬರವಣಿಗೆಯ ಮೂಲಕವೂ ಆಗಬಹುದು.  Communication   ಸರಿಯಾಗಿರದೆ  ತುಸು ಎಡವಿ Mis Communication ಆದರೆ ಆಗುವ  ಅನರ್ಥಗಳನ್ನು ಊಹಿಸಲಾಗದು.  ಈ ಸಂವಹನ ಎಂಬ ಸಾಫ್ಟ್ವೇರ್ ಸರಿಯಾಗಿರಬೇಕು ಇಲ್ಲವಾದರೆ ಆ  ಕರಪ್ಟ್ ಆದಂತೆ. ಇಲ್ಲಿ ಕಿವಿತಪ್ಪು, ಕೈತಪ್ಪು, ಕಣ್‌ತಪ್ಪು ಎಂಬ ವೈರಸ್‌ಗಳು ನುಗ್ಗಿದರೆ ಬದುಕೇ ಅಯೋಮಯ. ಏನೆ ಆದರೂ ನಾವಡೋ ಮಾತು ಹೇಳುವ ವಿಚಾರ ತಲುಪಿಸುವ ಸುದ್ದಿ ಸರಿಯಾದವರಿಗೆ ಸರಿಯಾದ ಸಮಯದಲ್ಲಿ ತಲುಪಿದರೆ ಚೆನ್ನ ಇಲ್ಲವಾದರೆ ಆಪತ್ತು ಕಟ್ಟಿಟ್ಟ ಬುತ್ತಿ.

              ಒಮ್ಮೆ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಒಂದೊಳ್ಳೆ ಉತ್ತರ ಪತ್ರಿಕೆ ಸಿಕ್ಕಿತು. ಅಲ್ಲಿ ವಿಶ್ವಾಮಿತ್ರರ ಹೆಂಡತಿ ಹೆಸರು ಏನು? ಎಂದು ಕೇಳಿದ ಪ್ರಶ್ನೆಗೆ ಅದೇ ಧಾಟಿಯಲ್ಲಿ ವಿಶ್ವಾಮಿತ್ರರ ಹೆಂಡತಿ ಹೆಸರು “ಮೇನಕ” ಎಂದಿತ್ತು ನಂತರದ ಪತ್ರಿಕೆಗಳಲ್ಲಿ ಅದೇ ರೀತಿ ಇದ್ದು ಕಡೆಯ ಪತ್ರಿಕೆ ಬರುವ ಹೊತ್ತಿಗೆ ವಿಶ್ವಾಮಿತ್ರರ ಹೆಂಡತಿ ಹೆಸರು”ಏನಕ್ಕ” ಎಂದಾಗಿತ್ತು. ಪಳಗಿದ ಮೌಲ್ಯಮಾಪನದ ಕೈಯಾಗಿದ್ದ ಅಧ್ಯಾಪಕರು ಸಹೋದ್ಯೋಗಿ ಮಿತ್ರರಿಗೆ ಪ್ರಾರಂಭದ ವಿದ್ಯಾರ್ಥಿ ಬರೆದ ಉತ್ತರ ಸರಿ ಇದೆ, ಅದ್ಹೇಗೊ ಕಡೆ ವಿದ್ಯಾರ್ಥಿ ತಲುಪುವ ಹೊತ್ತಿಗೆ ಈ ರೀತಿ ಆಗಿದೆ ಎಂದರು. ಇಲ್ಲಿ ಆಗಿರುವುದು ಸಂಹವಹನ ದೋಷ. ಅಧ್ಯಾಪಕರ ಕಣ್ಣುತಪ್ಪಿಸಿ ಸಹವಿದ್ಯಾರ್ಥಿಗಳಲ್ಲಿ ಬರೆದಾಗ ಹೀಗಾಗಿದೆ ಎನ್ನೋಣ. ಇನ್ನೊಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಬಹುದು. ಪೋಲೀಸ್ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯವರಿಗೆಲ್ಲಾ ಒಂದು ಸುತ್ತೋಲೆ ಹೊರಡಿಸಬೇಕಾಗಿತ್ತು. ಡಿಕಟ್ಟೇಷನ್ ಕೊಟ್ಟರು ಆತುರದಿಂದ ಸಿಬ್ಬಂದಿ “ಬಹುಜನ ಪಾರ್ಟಿಯ” ಕಾರ್ಯಕ್ರಮವಿರುವುದರಿಂದ ಸೂಕ್ತ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಟೈಪ್ ಮಾಡುವ ಬದಲು “ಭೋಜನ ಪಾರ್ಟಿಗೆ” ಸಕಲ ಸಿದ್ಧತೆ ಆಗಬೇಕು ಎಂದು ಟೈಪ್ ಮಾಡಿಬಿಟ್ಟಿದ್ದರು. ಸಂವಹನ ಸರಿಯಾಗಿಲ್ಲದೆ ಇದ್ದರೆ ಸಂವಹನ ದೋಷ ಉಂಟಾದರೆ ಈ ರೀತಿಯ ಅಭಾಸಗಳು ಖಂಡಿತ ಆಗುತ್ತವೆ.  ಸರಿಯಾಗಿ ತಿಳಿಯದ ಭಾಷೆಯೊಂದಿಗೆ ಸಂವಹನ   ಮಾಡುವಾಗಂತೂ ಜಾರೂಕರಾಗಿರಬೇಕು ಇಲ್ಲವಾದರೆ ಖಾನಪಕಾನೇಕೇಲಿಯೇ ಲಕಡಿ ಚಾಹಿಯೇ  ಎಂದಿದ್ದನ್ನು  ಅರ್ಥ  ಮಾಡಿಕೊಳ್ಳದೆ ಲಡ್ಕಿಯನ್ನು ಮುಂದೆ ತಂದು ನಿಲ್ಲಿಸಿದಂತಾಗುತ್ತದೆ.

              ಸಂವಹನ ಕ್ರಿಯ ಎಂಬುದು ಸರಿಯಾಗಿ ಇರಬೇಕು ಇಲ್ಲವಾದರೆ ಮನಸ್ಥಾಪಗಳು ಖಂಡಿತವಾಗಿಯೂ ಆಗುತ್ತವೆ. ಹಣ್ಣಿನ ಮಾರುಕಟ್ಟೆಯ ಬಳಿ “ಕೆ.ಜಿ.ಗೆ ಐವತ್ತು ಕೆ.ಜಿಗೆ ಐವತ್ತು” ಎಂದು ಕರೆಯುವ ಸದ್ದು ಕೇಳಿ ಅಗ್ಗದ ಬೆಲೆಯಲ್ಲಿ ಹಣ್ಣು ಸಿಗುತ್ತದೆ ಸರಿ! ಒಂದು ಕೆ.ಜಿ. ತೂಗಪ್ಪ ಎಂದು ಐವತ್ತು ರೂಗಳನ್ನು ಕೊಡಹೋದರೆ ವ್ಯಾಪಾರಿ ಅರ್ಥ ಕೆ.ಜಿ.ಗೆ ಮುವತ್ತು ಎನ್ನುತ್ತಾನೆ. ಗ್ರಾಹಕ ಮರು ಮಾತನಾಡದೆ ಪೆಚ್ಚುಮೋರೆ ಹಾಕಿಕೊಂಡು ಧಿಡೀರ್ ಎಂದು ಖರೀದಿಗೆ ಇಳಿದ ತಪ್ಪಿಗೆ  ಹಣ ತೆತ್ತು ಬರಬೇಕಾಗುತ್ತದೆ. ಇಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಮಾಡುವ “ದೋಷಯುಕ್ತ ಸಂವಹನ” ಕ್ರಿಯೆ ಎದ್ದು ಕಾಣುತ್ತದೆ. ಇನ್ನು ಆಫರ್ಗಳನ್ನು ಘೋಷಿಸಿ ಕಡೆಯಲ್ಲಿ ಚಿಕ್ಕದೊಂದು ನಕ್ಷತ್ರ ಚಿಹ್ನೆ ಹಾಕಿರುತ್ತಾರೆ ಅದೂ ಬುದ್ಧಿವಂತಿಕೆಯ ಸಂವಹನ ಕೊಟ್ಟ ಹಾಗೆ ಮಾಡಿ ಗ್ರಾಹಕರನ್ನು ಸೆಳೆಯುವ ತಂತ್ರ.

              ಎಲ್ಲಾ ಸರಿ ಈ ಸಂವಹನ ದೋಷದ ಛಾಯೆ ವಿದ್ಯಾರ್ಥಿನಿಯರ ಮೇಲೆ ಬಿದ್ದರೆ ಏನುಗತಿ? ನನ್ನ ಸ್ನೇಹಿತೆ ಆಕೆಯ ಇನ್ನೊಬ್ಬ ಆತ್ಮೀಯ ಗೆಳತಿಯ ಮಗಳಿಗೆ ಪ್ರೀತಿಯಂದ ಅಂಡಮಾನ್ ಪ್ರವಾಸಕ್ಕೆ ಹೋಗಿದ್ದ ಸಲುವಾಗಿ ತಂದ ಉಡಗೊರೆಯನ್ನು ತಲುಪಿಸಬೇಕಾಗಿತ್ತು. ಬೇಗ ತಲುಪಿದರೆ ಚೆನ್ನಾಗಿರುತ್ತದೆ ಎಂದು ಕಾಲೇಜಿನ ವಾಚ್‌ಮನ್ ಬಳಿ ವಿಳಾಸ ಹೇಳಿ ಕೊಡುತ್ತಾರೆ. ವಾಚ್ಮ್ಯಾನ್ ಇದು ಯಾರಿಗೆ? ಯಾವಾಗ?ಯರು? ತಲುಪಿಸಿದರು ಎಂಬ ಮಾಹಿತಿಯನ್ನು ಸರಿಯಾಗಿ ಹೇಳದೆ ಹೇಗೋ ತಲುಪಿಸುತ್ತಾನೆ. ಪಡ್ಡೆ ಹುಡುಗರ ಕುತೂಹಲ ಮನಸ್ಸಿಗೆ ಪ್ರಚೋದನೆ ನೀಡದೆ ಇರುತ್ತದೆಯೇ? ಸತ್ಯ ತಿಳಿಯದೆ ಚಿಕ್ಕ ವಿಚಾರವನ್ನು ದೊಡ್ಡದು ಮಾಡಿ ಬಿಟ್ಟರು “  ಯಾರೊ ಗಿಫ್ಟ್ ಮಾಡಿದ್ದಾರಂತೆ ಆಕೆಗೆ” ಎಂದರೆ ಇನ್ನೊಬ್ಬ ವಿದ್ಯಾರ್ಥಿ ಯಾರಿಗೆ?,  ಎಲ್ಲಿ?, ಯಾವಾಗ?, ಹೇಗೆ? , ಪ್ರಶ್ನೆಗಳನ್ನು ಹಾಕಿ ಬಿಡುತ್ತಾನೆ. ಒಂದೊಳ್ಳೆಯ ವಿಚಾರ ದಿಕ್ಕು ತಪ್ಪಿ ರಾಡಿಯಂತಾಗುತ್ತದೆ. ವಿಚಾರ ತಿಳಿದ ಸೌಮ್ಯ ಸ್ವಭಾವದ ಹುಡುಗಿ ಉಡಗೊರೆಯ ದಿಸೆಯಿಂದ ಆದ ಗೊಂದಲಗಳಿಂದ ನೊಂದುಕೊಂಡು ತಾಯಿ ಬಳಿ ಹೇಳಿಕೊಳ್ಳುತ್ತಾಳೆ. ಯಾಕೆ ಹೀಗಾಗಬೇಕು? ಕಲಿಕೆ, ಆರೋಗ್ಯ, ಭಾವನತೀವ್ರತೆ, ಮಾನಸಿಕ ಒತ್ತಡ ಮುಂತಾದ ವಿಷಯಗಳಲ್ಲಿ ಹದಿಹರೆಯದವರು ಸಿಲುಕಿ ಒದ್ದಾಡುತ್ತಿರುತ್ತಾರೆ.

              “ಯಾರು ಏನು ಹೇಳಿದರು ತಪ್ಪೆ!, ಬುದ್ಧಿವಾದ ಹೇಳೋರೆಲ್ಲ ಕೆಟ್ಟವರು! ಎಂಬ ಭಾವನೆಯವರು  ಆ ವಯಸ್ಸಿನವರಾಗಿರುತ್ತಾರೆ. ತಪ್ಪು ಮಾಡದ ಮಕ್ಕಳ ಮೇಲೆ ಇಂತಹ ಅಪವಾದಗಳು ಬಂದುಬಿಟ್ಟರೆ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಮಾಯಕ ಮಕ್ಕಳಲ್ಲಿ , ಸೂಕ್ಷ್ಮ ಮನಸ್ಸಿನ ಮಕ್ಕಳಲ್ಲಿ ಈ ರೀತಿಯ  ಸಂವಹನ ದೋಷಗಳಾದರೆ ಆದರೆ ದುರಂತಗಳು ಸಂಭವಿಸುತ್ತದೆ. ಆಗ ಪೋಷಕರ ಗತಿ ಏನು? ಮಾತಿಗೋ, ಟೈಂ ಪಾಸಿಗೋ ಹಾಗೆ ಬಂದು ವಿಚಾರವನ್ನು ಗಾಳಿಗೆ ತೂರಿ ಕೈಬಿಟ್ಟರೆ ಅದರ ಪರಿಣಾಮ ಅಮಾಯಕರ ಮೇಲೆ ಆಗಬಾರದು ಅಲ್ಲವೇ?

              ಸಂವಹನ ದೋಷ ಎಂಬುದು ಗಂಭಿರ ವಿಚಾರಗಳಿಗೆ ಮಾತ್ರ ಕಾರಣವಾಗುತ್ತದೆ ಎನ್ನುವ ಹಾಗಿಲ್ಲ, ಹಾಸ್ಯಕ್ಕು ಎಡೆಮಾಡಿಕೊಡುತ್ತದೆ.ವಿಜ್ಞಾನದ ಶಿಕ್ಷಕರೊಬ್ಬರು ಎಲೆಕ್ಟಿçಕ್ ಸರ್ಕ್ಯೂಟ್  ಬಗ್ಗೆ ಪ್ರಾಯೋಗಿಕವಾಗಿ ಹೇಳಿಕೊಡಲು ವೈರ್, ಪಿವಿಸಿಪೈಪ್, ಎಲ್ಬೋಗಳನ್ನು ತರ ಹೇಳಿದ್ದರು. ದೂರದ ಊರಿನಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗದ ಕಾರಣ ಯಾವುದಕ್ಕೆ ಏನು ಎತ್ತ ಎಂದು ಸರಿಯಾಗಿ ತಿಳಿಕೊಳ್ಳದೆ ತಂದೆ  ಮಗಳಿಗಾಗಿ ಗದ್ದೆಗೆ ನೀರು ಹರಿಸುವ ಪಿ.ವಿ.ಸಿ.ಪೈಪು ಮತ್ತು ಎಲ್ಬೊಗಳನ್ನು ಅಪ್ಪ ದೊಡ್ಡ ಬ್ಯಾಗ್‌ವೂಂದರಲ್ಲಿ ತಂದಾಗ ಎಲೆಕ್ಟ್ರಿಕ್  ವಸ್ತುಗಳನ್ನು ಬೇಕೆಂದು ಬೇಡಿಕೆ ಇಟ್ಟಿದ್ದ ಹುಡುಗಿಗೆ ಧನ್ಯವಾದಗಳನ್ನು ಹೇಳಬೇಕೋ ನಗಬೇಕೋ ಗೊತ್ತಾಗಲಿಲ್ಲ. ತಂದ ವಸ್ತುಗಳು ಹಾಳಾಗಲಿಲ್ಲ ಉಪಯೋಗಕ್ಕೆ ಬಂದವು ಅನ್ನಿ! . ಆದರೆ ಸಂವಹನ ದೋಷದಿಂದ ಮನುಷ್ಯನ ಶ್ರಮ ಹಾಗು ಸಮಯ ವ್ಯರ್ಥವಾಗುತ್ತದೆ. ಇಂತಹ ಹೊಣೆಗಾರಿಕೆಯನ್ನು ನಾವೇ ಅಲ್ಲವೇ ಹೊರಬೇಕಾದದ್ದು! ನಷ್ಟ ನಷ್ಟವೇ ಅಲ್ಲವೇ?.

              ಗಂಭೀರವಾಗಿ ಹೇಳುವುದಾದರೆ ಸಮಾಜ ಸುಧಾರಣೆ ಎಂಬ ಜವಾಬ್ದಾರಿ ಹೊರದಿದ್ದರೂ “ಸಂವಹನ ದೋಷ” ಎಂಬ ಪ್ರಮಾದ ಮಾಡಬಾರದು. ಸಾಂಸಾರಿಕವಾಗಿ ಇಂತಹ ತಪ್ಪು ಸಂವಹನದಿಂದ ಭಿನ್ನಾಭಿಪ್ರಾಯಗಳು ಬಂದರೆ ಸರಿಮಾಡಲು ಪ್ರಯಾಸ ಪಡಬೇಕು ಗೊತ್ತಿಲ್ಲದೆ ಆಗುವ ಸಂವಹನ ದೋಷವನ್ನು ಸರಿಮಾಡಬಹುದು. ಉದ್ದೇಶ ಪೂರ್ವಕವಾಗಿ ತಪ್ಪು ಸಂವಹನ ಮಾಡುವ ಚಾಡಿಕೊರರು ಮರಳು ಮಾಡುವ ಮಾದೇವಿಯರು, ಕುತಂತ್ರ ಹೆಣೆಯುವ ಕಿಟ್ಟಪ್ಪರು ಇದ್ದು ಬಿಟ್ಟರಂತೂ ಮನೆ ಹಾಳೇ ಬಿಡಿ! ಯಾರೆ ಆಗಲಿ ಸಂವಹನ ಸರಿಯಾಗಿ ಮಾಡಬೇಕು.

              ಅಶೋಕ ಮಹಾರಾಜ ಯುದ್ಧಭೂಮಿಯಲ್ಲಿ ಹೋರಾಡುವ ಸಂದರ್ಭದಲ್ಲಿ ಮಗ ಕುನಾಲನಿಗೆ ವ್ಯಾಸಂಗ ಆರಂಭಿಸಿಸುವ ಸಲುವಾಗಿ ಪತ್ರವೂಂದನ್ನು ಬರೆಯುತ್ತಾನೆ. ‘ಅಧ್ಯಾಪಯೇತ್’ [ಓದಿಸತಕ್ಕದ್ದು] ಎಂದು ಬರೆದದ್ದನ್ನು ಪತ್ರ ಓದಿ ಹೇಳುವ ವ್ಯಕ್ತಿ ಅಂಧಾಪಯೇತ್ [ಕುರುಡನನ್ನಾಗಿ ಮಾಡುವುದು] ಎಂದು ಓದುತ್ತಾನೆ. ಅರಮನೆಯ ಜನರು ಪರಾಮರ್ಶೆ ನಡೆಸದೆ ಅರಸನ ಆಜ್ಞೆ ಎಂದು ಹುಡುಗನ ಕಣ್ಣುಕಿತ್ತು ಕೂರಿಸುತ್ತಾರೆ. ತಪ್ಪು ಸಂವಹನದ ಕಾರಣದಿಂದ ಅರಸನಾಗಬೇಕಾದವನು ಕುರುಡನಾಗುತ್ತಾನೆ. ಇದು ಜೀವ ಹಾಗು ಜೀವಮಾನದವರೆಗೂ ತನ್ನ ವ್ಯಾಪ್ತಿಯನ್ನು ಹೊಂದುತ್ತದೆ.

              ಏನೇ ಆಗಲಿ ನಾವುಗಳು ವಿಷಯವನ್ನು ಸಂಪೂರ್ಣ ಖಾತ್ರಿಗೊಳಿಸಿಕೊಂಡನಂತರ ಬೇರೆಯವರಿಗೆ ಹೇಳಬೇಕಾಗುತ್ತದೆ. ಸಂವಹನ ಸಾಧನಗಳ ಈ ಸುವರ್ಣ ಯುಗದಲ್ಲಿ ಗಾಳಿಗಿಂತಲೂ ಸುದ್ದಿ ಕ್ಷಣಾರ್ಧದಲ್ಲಿ ಎಲ್ಲೆಡೆ ವ್ಯಾಪಿಸುತ್ತದೆ.  ಸಂವಹನ ದೋಷಗಳು ಪುಕ್ಕಟೆ ಮನರಂಜನೆ, ಕುತಂತ್ರಿಗಳ ಮಾತಿಗೆ ಆಹಾರ ಎರಡೂ ಆಗುತ್ತದೆ. ಆತುರದಿಂದ ನುಡಿದರೆ ಹಣ, ಮರ‍್ಯಾದೆ, ಸ್ನೇಹ, ಭಾಂದವ್ಯ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಆತುರದಿಂದ ನುಡಿದರೆ “ಅತೂಕದ ಮಾತು”, ಯೋಚಿಸಿ ನುಡಿದರೆ “ಮೌಲ್ಯಯುತವಾದ ಮಾತು” ಅಲ್ಲವೇ!

              ಒಟ್ಟಾರೆಯಾಗಿ ವಿಷಯ ಒದರುವ ಧಾವಂತ, ಹಣ ಉಳಿಸುವ, ಸಮಯ ಉಳಿಸುವ ಧಾವಂತದಲ್ಲಿ ವಿನಾಕಾರಣ ಅಚಾತುರ್ಯಗಳು ಸಂಭವಿಸುತ್ತದೆ. ತಪ್ಪು ಸಂವಹನಗಳು ಒಳ್ಳೆಯ ಕಲಿಕಾವಾತಾವರಣವನ್ನು, ಸಂಭ್ರಮದ ವಾತಾವರಣವನ್ನು ಆಹುತಿ ತೆಗೆದುಕೊಂಡು ಬಿಡುತ್ತೆವೆ.  ಆಗದಂತೆ ತಡೆಯುವ ಒಳ್ಳೆಯ ಮನಸ್ಸು, ಸಾಕ್ಷರತೆ ನಮ್ಮಲ್ಲಿ ಇರಬೇಕು, ಇದನ್ನು ಯಾವುದೇ ವಿಶ್ವ ವಿದ್ಯಾನಿಲಯಗಳೂ ಕಲಿಸಲು ಸಾಧ್ಯವಿಲ್ಲ, ಕಲಿಸುವ ವಿದ್ಯೆಯೂ ಅಲ್ಲ. ತನಗೆ ತಾನೆ ಹೊಳೆಯುವ ಸೂಕ್ಷ್ಮಗಳು. ನಮ್ಮ ವಿಚಾರಗಳು ಇತರರಿಗೆ ಸೂಕ್ತ ರೀತಿಯಲ್ಲಿ ನಾವಂದುಕೊಂಡಂತೆ ಸಂವಹನ ಆಗಬೇಕು. ಅದನ್ನುಳಿದು ಸಂಹಾರ ಮಾಡುವಂತಿರಬಾರದು.

ಚಿತ್ರ ಕೃಪೆ Ndepend