ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಧೂಳಿನ ದಾರಿಯಲ್ಲಿ ಆರ್ಯರ ಹೆಜ್ಜೆಗಳು…”

ಸಂತೋಷಕುಮಾರ ಮೆಹೆಂದಳೆ

“ಯಾಂಖುಲ್ಲೇನ್..” ಹೀಗಂತ ಗೂಗಲ್ ಮಾಡಿದರೆ ಸ್ಪೆಲ್ಲಿಂಗ್ ಸರಿಯಾಗಿದ್ರೆ ಮಾತ್ರ ಒಂದಷ್ಟು ಪುಟ ತೆರೆದುಕೊಳ್ಳುತ್ತದೆ. ಮಣಿಪುರದ ತುತ್ತಾನುತುದಿ ದಾರಿ ಮೇಲೆ ಇದ್ದ ಬಿದ್ದ ಕಡೆಯಲ್ಲೆಲ್ಲಾ ಗನ್ ಹಿಡಿದುಕೊಂಡು ಕೋಬ್ರಾ ಪಡೆಯ ಸೈನಿಕರ ನಜರಿನ ಮಧ್ಯೆ ಹೊರಳಿ ನಿಂತ ಮರ್ರಮ್- ಪರೇನ್ ಹೈವೆ ಮೇಲೆ ಬರೊಬ್ಬರಿ 6 ತಾಸು ಪಯಣ ಮಾಡಿ ಈ ಯಾಂಖುಲ್ಲೇನ್ ತಲುಪಿದಾಗ ಇದನ್ನು ನೋಡೊಕೆ ಇಲ್ಲಿಗೆ ಬರಬೇಕಿತ್ತಾ ಎನ್ನಿಸಿದ್ದು ಸುಳ್ಳಲ್ಲ. ಆದರೆ ಹೋಗುವ ಸ್ಥಳಕ್ಕಿಂತ ಹೋಗುವ ವಿಶೇಷತೆ ಅದ್ಭುತ ಎನ್ನೋದಿದೆಯಲ್ಲ ಅದು ಅಕ್ಷರಶ: ನಿಜ.

ಅಲ್ಲಿ ಸಾಲು ಸಾಲಾಗಿ ಎರಡೂ ಕಡೆ ಅಗಾಧ ಅಳತೆಯ ಬಂಡೆಗಳನ್ನು ನೆಡಲಾಗಿದ್ದು, ಅಲ್ಲಲ್ಲಿ ಕೆಲವು ನೆಲಕ್ಕೆ ಉರುಳಿವೆ. ಅದರಲ್ಲೂ ಉರುಳಿದ ಕಲ್ಲುಗಳು ತಮ್ಮ ಅಗಾಧತೆಯಿಂದಾಗಿ ಖಾಸಗಿ ಜಮೀನುಗಳ ಮೇಲೆ ಬಿದ್ದಿದ್ದರೂ ಅಲ್ಲಾಡಿಸದೆ ಹಾಗೆ ಬಿಟ್ಟಿದ್ದಾರೆ. ತೀರ ರಸ್ತೆಯ ಪಕ್ಕದಲ್ಲೆ ಇರುವ ಯಾಂಖುಲ್ಲೇನ ಅತ್ಯಂತ ಹಿಂದುಳಿದಿರುವ ಹಳ್ಳಿ. ನೀರು ನಿಡಿ ರಸ್ತೆ ಕಾಣದ ವಾತಾವರಣಕ್ಕೆ ಎಲ್ಲೆಂದರಲ್ಲಿ ಎಗರುವ ಧೂಳಿನ ಲೇಪನದ ಮೆರಗು ಬೇರೆ. ಮಣಿಪುರ ಪ್ರವಾಸದಲ್ಲಿದ್ದಾಗ ಅವರ ಅಧಿಕೃತ ವೆಬ್‍ಸೈಟ್‍ನಲ್ಲೆಲ್ಲೂ ದಾಖಲಿಸದ ಈ ಪ್ರಮುಖ ಅಂಶ ಬೇರಾರದ್ದೋ ಬ್ಲಾಗ್‍ನಲ್ಲಿ ಎತ್ತಿ ತೋರಿಸಿದ್ದರಿಂದ ನಾನೂ ಮಣ್ಣಿನ ಹೊಂಡಗಳ ಆ ದಾರಿಯ ಮೇಲಿನ ಪ್ರವಾಸಕ್ಕೆ ಸಿದ್ಧನಾಗಿದ್ದೆ.

ನನ್ನ ಮಣಿಪುರದ ಪ್ರವಾಸವನ್ನು ಸಂಪನ್ನಗೊಳಿಸಿದವರು ಓನಿಲ್ ಎನ್ನುವ ಮಾನವ ಹಕ್ಕು ಹೋರಾಟಗಾರ ಸ್ನೇಹಿತ ಮತ್ತು ಗೋಬ್ಸಿ ಎನ್ನುವ ರಿಕ್ಷಾ ಚಾಲಕಿ ಮತ್ತು ಮಾಲಕಿ. ಅದರಲ್ಲೂ ತೀರ ಬೆಳಗಿನ ನಸಕು ಹರಿವ ಮೊದಲೇ ಆರಂಭಿಸೋಣ ಎಂದಿದ್ದ ಓನಿಲ್. ನನ್ನ ಲೆಕ್ಕದಲ್ಲಿ 80-90 ಕಿ.ಮೀ.ಗೆ ಅಷ್ಟು ಅಜೆರ್ಂಟ್ ಬೇಕಾ ಎಂದರೆ, “ಗುರುವೇ ಸಂಜೆಯೊಳಗೆ ಇಂಫಾಲ ವಾಪಸ್ಸು ಬಂದು ತಲುಪಿರಬೇಕು. ಇಲ್ಲವಾದರೆ ನೀನು ಮತ್ತು ನನ್ನ ಗಾಡಿ ಎರಡೂ ಗ್ಯಾರಂಟಿ ಇಲ್ಲ ಎಂದಿದ್ದ”

ಅದು ನಿಜವೂ ಆಗಿತ್ತು. ನಾನಿದ್ದ ಕಾಲಕ್ಕೆ ಸುಮಾರಾಗಿ ಮಣಿಪುರ ಪ್ರಕ್ಷುಬ್ಧವಾದ ಹೊತ್ತು. ಮೀಥೀ ಭಾಷೆಯ ಮೂಲ ಮಣಿಪುರಿಗಳಿಗೂ, ಸರಕಾರದ ಮುಖ್ಯವಾಹಿನಿಗೂ ಆಗಿ ಬರುತ್ತಿರಲಿಲ್ಲ. ಪರೋಕ್ಷವಾಗಿ ಕಟ್ಟರ್ ಮಾವೋವಾದಿಗಳ ಬೆಂಬಲ ಅವರಿಗಿತ್ತು. ಒಳಗೊಳಗೆ ಸಮುದಾಯಗಳ ಆಡಳಿತವೇ ಈಗಲೂ ನಡೆಯುವ ಮಣಿಪುರದಲ್ಲಿ, ಕೇಂದ್ರ ವಿಧಿಸಲಾಗಿದ್ದ “ಅಸ್ಫಾ” ಎನ್ನುವ ಮಿಲಿಟರಿ ಕಾನೂನು ತೆಗೆದು ಹಾಕುವಂತೆ ಹದಿನೈದು ವರ್ಷಗಳಿಂದ ಉಪವಾಸ ಕೂತಿದ್ದ ಇರೋಮ್ ರಾಜಕೀಯ ನೇತಾರರ ನೆತ್ತಿಯಲ್ಲಿ ಕೆಂಡದಂತೆ ಸುಡುತ್ತಿದ್ದಳು. ಹಾಗಾಗಿ ಬೆಳಗಿನ ಏಳು ಗಂಟೆಯಿಂದ ಸಂಜೆಯ ನಾಲ್ಕರವರೆಗೆ ಮಾತ್ರ ಇಂಫಾಲ ಸ್ವಲ್ಪ ರಂಗು ಪಡೆಯುತ್ತಿತ್ತೆಂದರೆ ಸುಳ್ಳಲ್ಲ. ಬಾಕಿ ಇದ್ದಕ್ಕಿದ್ದಂತೆ ಸೆ.144ಗೆ ಸಿಕ್ಕು ರಸ್ತೆಗಳು ನಿರ್ಮಾನುಷ್ಯವಾಗಿ ಬಿಡುತ್ತಿದ್ದವು. 2015 ರವರೆಗೂ ಇಂಫಾಲ ಹೊರತುಪಡಿಸಿದರೆ ಬೇರೆಲ್ಲೂ ಏಟಿಎಮ್‍ಗಳು ಇರಲೇ ಇಲ್ಲ. ಮುಖ್ಯ ವೃತ್ತವಾದ ಗಾಂಧಿಚೌಕದಲ್ಲಿ ಏಟಿಮ್ ಕಾಂಪ್ಲೆಕ್ಸ್ ಮಾಡಿ ಒಂದೇ ರೂಮಿನಲ್ಲಿ ಅನಾಮತ್ತು ಹದಿನೈದು ಮೆಶಿನ್ ಹೂಡಿಟ್ಟಿದ್ದ ವಿಚಿತ್ರ ಇವತ್ತಿಗೂ ಅಲ್ಲಿ ಮಾತ್ರ.

ಪರಿಸ್ಥಿತಿ ಎಷ್ಟು ಗಂಭೀರ ಇತ್ತೆಂದರೆ ಅಧಿಕೃತ ಪ್ರವಾಸಿಯಾಗಿದ್ದ ನಾನು ಬುಡಕಟ್ಟುಗಳ ಸ್ಥಳಕ್ಕೆ ಹೋಗಲು ದುಭಾಷಿಯೊಂದಿಗೆ ಗಾಡಿ ಹತ್ತುತ್ತಿದ್ದರೆ, ಅಲ್ಲಿವರೆಗೂ ನನ್ನ ಮೇಲೆ ನಿಗಾ ಇಡುತ್ತಿದ್ದ ಪೋಲಿಸು ಕೊನೆಯ ಕ್ಷಣದಲ್ಲೂ, ನಿನಗಿದೆಲ್ಲ ಬೇಕಾ..? ಬೆಚ್ಚಗೆ ಬೆಂಗಳೂರಲ್ಲಿ ಸಂಸಾರ ಮಾಡಿಕೊಂಡು ಇರೋದು ಬಿಟ್ಟು ಎಂದು ರಾಗ ಎಳೆಯುತ್ತಿದ್ದ. ಕಾರಣ ನನ್ನ ಪರಿಸ್ಥಿತಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಯಾವ ಠಾಣೆಯಲ್ಲಿ ನನ್ನ ಮಾಹಿತಿ ದಾಖಲು ಮಾಡಿರುತ್ತೇನೋ ಅವರ ಪರಿಸ್ಥಿತಿ ಗಂಭೀರ. ಟ್ಯಾಕ್ಸಿಗಳ ಮಾತೇ ಇರಲಿಲ್ಲ. ಆದಕ್ಕಾಗಿ ಪ್ರವಾಸಕ್ಕೆ ಓನಿಲ್‍ನದ್ದೇ ಕಾರು ಅಥವಾ ಬೈಕು. ಇಷ್ಟೆಲ್ಲಾ ಮಾಡಿಕೊಂಡು ಹೊರಟರೆ ಅನಾಮತ್ತಾಗಿ ಸಿಗುವ ಊರುಗಳಾದರೂ ಎಂಥೆವೆಂದಿರಿ..? ತ್ಸಾಂಗ್‍ಬಾಮ್, ಆವಾಂಗ್, ಸೆಕ್ಮಾಯಿ, ಕಾಂಘತೋಗ್ಬಿ, ಕುರುಪೋಕ್ಸಿ, ಸರ್ಮಮೇನಿಯಾ, ಲಂಗ್‍ಝೇಲ್, ಕೈಥಮಂಡಿ, ನ್ಯೂ ಕುರಾಂಗ್, ಲೈರೋಚಿಂಗ್ ಆಮೇಲೆ ತಡುಪಿ.

ಈ ತಡುಪಿ, ಯಾಂಖುಲ್ಲೇನ್ ಹಾಗು ಮಖೇಲ್ ಮಧ್ಯದ ಜಂಕ್ಷನ್. ಇಲ್ಲಿ ತಲುಪಿ ಯಾಂಖುಲ್ಲೇನ್ ವಿಚಾರಿಸಿದರೆ ಇಲ್ಲಿ ಮೀಥೀ ಭಾಷೆ ಕೂಡಾ ಬರಲ್ಲ. ಓನಿಲ್ ಕೂಡಾ ಕಂಗಾಲು. ಕೊನೆಗೆ ಅಂತರ್ಜಾಲದಿಂದ ಮೊದಲೆ ನಾನು ತೆಗೆದಿರಿಸಿಕೊಂಡಿದ್ದ ಚಿತ್ರ ತೋರಿಸಿದ ಮೇಲೆ, ಓಹ್.. ಗಾಯಿ ಬೂಯಿ..ಕುಂಯ್ ಕುಸ್ ಎನ್ನುತ್ತ ಒಂದು ದಾರಿ ತೋರಿದರು. ಅಲ್ಲಿಗೆ ದಿಕ್ಕು ಸಿಕ್ಕಿತ್ತು ಅಷ್ಟೇ . ತುಡುಪಿಯಲ್ಲಿ ಪೇಟ್ರೊಲ್ ಇತ್ಯಾದಿ ತೆಗೆದುಕೊಳ್ಳದಿದ್ದರೆ ವಾಪಸ್ಸು ನಾವು ರಸ್ತೆಯ ಮೇಲೆ ಎಂಬ ಎಚ್ಚರಿಕೆ ಬಂತು.

ಹಾಗೆ ಮಾರುತಿಯಲ್ಲಿ ಎಲ್ಲ ಸೇರಿಸಿಕೊಂಡು ಪರೇನ್ ಹೈವೆ ಎನ್ನುವ ಕೆಂಪು ಹುಡಿಯ ಮಣ್ಣಿನ ರಸ್ತೆಯಲ್ಲಿ ಇಪ್ಪತೈದರ ಅದ್ಭುತವಾದ ಸ್ಪೀಡಿನಲ್ಲಿ ಓಡಿಸುತ್ತ ಹೊರಟಿದ್ದೆ. ಹೆಚ್ಚಾಗಿ ಸ್ವತ: ಡ್ರೈವಿಂಗ್ ಮಾಡುವ ನಾನು ಓನಿಲ್‍ಗೆ ಮೊದಲೇ ಹೇಳಿದ್ದರಿಂದ ಅವನೂ ಪಕ್ಕಕ್ಕೆ ಸುಮ್ಮನೆ ಕುಳಿತಿದ್ದ. ಮರೆರ್ಂ ನಗರದಿಂದ ಸುಮಾರು 77 ಕಿ.ಮೀ. ಕರೆಯಿಸಿಕೊಳ್ಳುವುದು “ಝೀಮೈ” ಎಂದು. ಹೆಚ್ಚಿನವರಿಗೆ ಯಾಂಖುಲ್ಲೇನ್ ಎಂದು ಗೊತ್ತೆ ಇಲ್ಲ. ಕಾರಣ ಇದು ಝೀಮೈ ಬುಡಕಟ್ಟುಗಳ ವಸಾಹತು. ಅವರ ರೀತಿ ರಿವಾಜಿಗಳೇ ಇಲ್ಲಿನ ವ್ಯವಸ್ಥೆ. ಹೊರಗೆ ಹೋದ ಮಕ್ಕಳು ಇತ್ಯಾದಿ ಇಲ್ಲಿಗೆ ಬಂದ ಮೇಲೆ ಝೀಮೈಗಳಂತೆ ಬದುಕುತ್ತಾರೆ. ಒಟ್ರಾಶಿ ಆಧುನಿಕತೆ ತೆರೆದುಕೊಳ್ಳದಿರುವ ಆದರೆ ಮೊಬೈಲ್ ಲೀಲೆಯಿಂದ ಹೊರತಾಗಿರದ ಊರು.

ಇಲ್ಲಿ ಪುರಾತತ್ವ ಇಲಾಖೆ ಹೊರತಾಗಿ ಇನ್ನಾರಿಗೂ ಅರಿವಾಗದ ಶಿಲಾಯುಗದ ಭಾರೀ ಪಳೆಯುಳಿಕೆಗಳು ಕಿ.ಪೂ. 33 ಕ್ಕೂ ಮೊದಲಿನದು ಎಂದು ಗುರುತಿಸಲಾಗಿದೆ. ಆಗ ಆರ್ಯರು ಇದೆ ದಾರಿಯಲ್ಲಿ ಭಾರತ ಪ್ರವೇಶಿಸಿದರೆಂದೂ ಆ ಕುರುಹಾಗಿ ಹೀಗೆ ದೊಡ್ಡ ಮಟ್ಟದ ಬಂಡೆಗಳ ಸ್ಮಾರಕ ನೆಟ್ಟಿರಬಹುದೆಂದು ಒಂದು ಕತೆ ಹೇಳಿದರೆ, ಮೂಲತ: ಮಣಿಪುರಿಗಳ ಪೂರ್ವಜರ ಬದುಕು ಮತ್ತು ವಸಾಹತು ಆರಂಭಿಸಿದ್ದೇ ಇಲ್ಲಿ ಎನ್ನುವ ಐತಿಹ್ಯವೂ ಇದೆ. ಯಾವುದೇ ನಿಜವಾದರೂ ಮಾನವ ಮಾತ್ರದ ಶಕ್ತಿಯಿಂದ ನಿಲ್ಲಿಸಲಾಗದ ಅಗಾಧ ಅಳತೆಯ ಶಿಲಾರಚನೆಗೆ ಆಗಿನ ಕಾಲದಲ್ಲಿ ಬಳಸಿರಬಹುದಾದ ತಂತ್ರಜ್ಞಾನ ಏನಿದ್ದೀತು ಅರಿವಿಗೆ ನಿಲುಕುವುದಿಲ್ಲ. ಅದರಲ್ಲೂ ಈ ಮಖೇಲ್ ಅಪ್ಪಟ ಸ್ಮಶಾನದಂತಹ ಊರು. ಹೊರಗಿನವರನ್ನು ತೀರ ಸಂಶಯಿಸುವ ಬುಡಕಟ್ಟುಗಳ ನಿಯಮ, ಅತೀ ಮಡಿವಂತಿಕೆ, ಸಂಜೆ ಆರರಿಂದ ಬೆಳಗಿನ ಆರರವರೆಗೆ ಹೊರ ಊರಿನವರಿಗೆ ಪ್ರವೇಶವಿರದ ರಿವಾಜುಗಳು, ಏನೇ ಫಿರ್ಯಾದುಗಳಿದ್ದರೂ ಸ್ಥಳೀಯ ಮುಖಂಡರ ತೀರ್ಪು ಅಂತಿಮವಾಗುವ ಸೂಚನೆಗೆ ಹೊರಗಿನವರು ಹೇಗಾದರೂ ತಡೆದಾರು..? ಹಾಗಾಗಿ ಯಾಂಖುಲ್ಲೇನ್, ಮಖೇಲ್, ಝೀಮೈ, ಮರೆರ್ಂ, ಥಂಗಾಲ್, ಮೇಥೀ, ನೆಪಾಲ್ಸೆ.. ಹೀಗೆ ಹಲವು ಊರುಗಳಿದ್ದರೂ ಯಾವುದೂ ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡಿದ್ದೇ ಇಲ್ಲ. ಅದರಲ್ಲೂ ಕೇವಲ ಶೇ. 11 ಮಾತ್ರ ಜನವಸತಿ ಉಳಿದ ಶೇ.89 ಭಾಗ ಪರ್ವತದ ಹೆಗಲುಗಳೇ ತುಂಬಿರುವ ಪ್ರದೇಶದಲ್ಲಿ ಯಾಂಖುಲ್ಲೇನ್ ಇದ್ದರೂ ಗುರುತಿಗೆ ಸಿಕ್ಕಿದ್ದೆ ದೊಡ್ಡ ವಿಷಯ.

ಅಂತೂ ಬೆಳಗಿನಿಂದ ಸತತವಾಗಿ 20-25 ರ ವೇಗದಲ್ಲಿ ಹೊರಟು ಮಧ್ಯಾನ್ಹ ತಲುಪಿದೆನಲ್ಲ. ಎಲ್ಲ ನೋಡಿಕೊಂಡು ಆರ್ಯರ, ಮಣಿಪುರಗಳ ಪಾದಸ್ಪರ್ಶಿಯಲ್ಲಿಗ ಇರುವ ಗೊಬ್ಬರಗುಂಡಿಯಿಂದ ಅಚೆಗೆ ಬಂದು ಗಾಡಿ ಹತ್ತುವಾಗ ಏನೇ ಮಾಡಿದರೂ ಓನಿಲ್ ಗಾಡಿಕೊಡಲೊಲ್ಲ. ತಾನೆ ಓಡಿಸುತ್ತೇನೆಂದು ಕೂತಿದ್ದಾನೆ. ಆಯ್ತು ಮಾರಾಯ ಸ್ವಲ್ಪ ಓಡಿಸು ಎಂದು ಕೂತೆ. ಅನಾಮತ್ತು ಪರೇನ್ ಹೈವೆ ಎಂಬ ಸರ್ಕಲ್ ಬರುವವರೆಗೂ ಐದು ತಾಸು ಬಿಡದೆ ಓಡಿಸಿದ. ಅಮೇಲೂ ಕೊಡಲೇ ಇಲ್ಲ. ಯಾವ ಸೈಕಲ್ಲು, ಬೈಕು, ಇತರೆ ಕಾರು ಎಲ್ಲದಕ್ಕೂ ಇವನ ಸೈಡು, ಅವರು ಓವರ್ ಟೇಕು. “ಅರೇ ಓನಿಲ್.. ಥೋಡಾ ಸ್ಪೀಡ್ ಚಲಾವೋನಾ..” ಎಂದರೆ ಹೂಂ..ಎನ್ನುತ್ತಿದ್ದನೆ ಹೊರತಾಗಿ ಹದಿನೈದು ಇಪ್ಪತ್ತು ದಾಟಲಿಲ್ಲ.

ಆ ರಸ್ತೆಯಲ್ಲಿ ಅದಕ್ಕಿಂತ ವೇಗದ ಚಲಾವಣೆಗೂ ಪಕ್ಕಾಗುವಂತಿರಲಿಲ್ಲ ಬಿಡಿ. ಆದರೆ ಓವರ್ ಟೆಕ್‍ಗೆ ಅನುವು ಮಾಡಿಕೊಡಲು ವಿಪರೀತ ನಿಧಾನ ಮಾಡಿಬಿಡುತ್ತಿದ್ದ. ಅವರು ಹೋದ ಎಷ್ಟೋ ಹೊತ್ತಿನವರೆಗೂ ನಿಧಾನವೇ ಪ್ರಧಾನ. ಹಿಂದಿನಿಂದ ಬರುವ ಎಲ್ಲ ವಾಹನಕ್ಕೂ ವಿಶಾಲ ಜಾಗ ಕೊಡುತ್ತಾ ಕರುಣಾಮಯಿಯಾಗುತ್ತಾ ಅವರ ಕೈ ಬೀಸುವಿಕೆಗೆ ವಿನೀತನಾಗುತ್ತ.. ಅರೆರೆ ಇದೇನು ಎನ್ನಿಸಿ ನನಗಂತೂ ಸಹನೆ ಮುಗಿದೇ ಹೋಗತೊಡಗಿತ್ತು. ಹಾಗಂತ ಏನೇ ಹೇಳಿದರೂ ಹೂಂ.. ಹೂ..ಎನ್ನುತ್ತ ಇಂಫಾಲ ತಲುಪಿದಾಗ ಅಪರಾತ್ರಿಯ ಎಂಟುಗಂಟೆ. ಸಂಪೂರ್ಣ ನಗರ ಅರ್ಧ ಗೊರಕೆ ಮುಗಿಸಿತ್ತು. ಸುಮ್ಮನೆ ನೆಪಕ್ಕೆ ಗುಡ್‍ನೈಟ್ ಎಂದವನ ಹೆಗಲ ಮೇಲೆ ಕೈಯಿಟ್ಟ.

Yangkhullen Senapati, Manipur
ಯಾಂಖುಲ್ಲೇನ್ ಹಳ್ಳಿ

“ನಾವು ಏ.ಸಿ. ಹಾಕಿಕೊಂಡು ಮುಲಾಜಿಲ್ಲದೆ ಕಾರ್ ಚಲಾಯಿಸಿಕೊಂಡು ಬರುತ್ತೇವಲ್ಲ. ಅದು ಸುತ್ತಲಿನ ಕನಿಷ್ಟ ನೂ.ಮೀ.ವರೆಗೆ ಧೂಳು ಹಾರಿಸುತ್ತಿರುತ್ತೆ. ಅದರಲ್ಲೂ ಬಿಸಿಲು ರಸ್ತೆಯ ಈ ಪರಿಸ್ಥಿತಿ ಮಧ್ಯೆ ನಮ್ಮ ಜನ ಗ್ಲಾಸ್ ಹಾಕದೆ, ಕಾರಲ್ಲಿ ಕನಿಷ್ಟ ಆರೆಂಟು ಜನ ತೂರಿಕೊಂಡು ಓಡಾಡುವುದು ಮಾಮೂಲಿ. ಅವರಿಗೆಲ್ಲ ಕಷ್ಟವಾಗುತ್ತದಲ್ಲ. ಬೈಕ್ ಸೈಕಲ್ ಮೇಲಿದ್ದವರ ಪರಿಸ್ಥಿತಿ ದೇವರಿಗೆ ಪ್ರೀತಿ ಅಲ್ಲವಾ..? ಇಲ್ಲೆಲ್ಲ ಹೀಗೆ ಅಂಡರ್ ಸ್ಟ್ಯಾಂಡಿಂಗ್ ಬೇಕು. ನಾವೆಲ್ಲ ನಮ್ಮದೇ ಸಮುದಾಯದವರಲ್ಲವಾ..? ಅದಕ್ಕಾಗಿ ಅವರಿಗೆ ಸೈಡ್ ಕೊಡುತ್ತಿದ್ದೆ ನಿನಗೆ ಬೇಜಾರಾಗಿದ್ರೆ ಸಾರಿ.. ನನ್ನ ಮೇಲೆ ಕೋಪ ಬೇಡ..” ಎನ್ನಬೇಕೆ. ಸುಮ್ಮನೆ ಓನಿಲ್‍ನ ಹೆಗಲು ತಬ್ಬಿದ್ದೆ. ನೆನಪಾಗಿದ್ದು “ಧೊಂಗಡಿಗಳ ದುಖಾನಿನಲ್ಲಿ ಚಟ್ಟಾಯಿಗಳ ದರಬಾರು..” ಅದು ಮುಂದಿನ ವಾರಕ್ಕಿರಲಿ.