ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಮ್ಮೆದೆಯಲ್ಲಿ ಪರಿಮಳವಾಗುಳಿದವರು….

ದೀಪಾ ಹಿರೇಗುತ್ತಿ
ಇತ್ತೀಚಿನ ಬರಹಗಳು: ದೀಪಾ ಹಿರೇಗುತ್ತಿ (ಎಲ್ಲವನ್ನು ಓದಿ)

ಸುಮಾರು ಹತ್ತು ವರ್ಷದ ಹಿಂದಿನ ಮಾತು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಕುಮಟಾ ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತೀ ವರ್ಷ ಭಾಗವಹಿಸುತ್ತಿದ್ದ ಸಮಯ. ವಿಷ್ಣು ನಾಯ್ಕರನ್ನು ನಮ್ಮ ಕೊಪ್ಪಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದೆ. ನಮ್ಮ ಕಾಲೇಜು ದಿನಗಳಿಂದಲೂ ಕಾವ್ಯ ಕಮ್ಮಟದ ಮೂಲಕ ಪರಿಚಯವಾದ ವಿಷ್ಣುನಾಯ್ಕರಲ್ಲಿ ಬಹು ಪ್ರೀತಿ ಸಲಿಗೆ. ಮದುವೆಯಾದ ಮೇಲೆ ನಾನು ಸುಧೀರ್‌ ಎರಡು ಮೂರು ಸಲ ಅಂಬಾರಕೊಡ್ಲಕ್ಕೆ ಭೇಟಿ ನೀಡಿದ್ದೆವು. ಚಾ ಕುಡಿದು ಉಪ್ಪಿಟ್ಟು ತಿಂದು ಪುಸ್ತಕ ಕೊಂಡು ತಮಾಷೆ ಮಾಡಿ ನಕ್ಕು ಬಂದಿದ್ದೆವು. ಅವರೂ ನಮ್ಮ ಮನೆಗೆ ಬರಲಿ ಎಂಬುದು ನನ್ನ ಸುಧೀರ್‌ ಇಬ್ಬರ ಆಸೆಯೂ ಆಗಿತ್ತು. ಬರಬೇಕು ಮಾರಾಯ್ತಿ ನಿಮ್ಮೂರಲ್ಲಿ ನನ್ನ ಮೊದಲ ಬ್ಯಾಚಿನ ವಿದ್ಯಾರ್ಥಿನಿ ಇದ್ದಾಳೆ, ಅವಳ ಮನೆಗೂ ಹೋಗಬೇಕು ಎನ್ನುತ್ತಿದ್ದರು.

ಎರಡು ಸಾವಿರದ ಹದಿನಾರು ಅಥವಾ ಹದಿನೇಳು ಇರಬಹುದೇನೋ. ವಿಷ್ಣು ನಾಯ್ಕರು ಕೊಪ್ಪಕ್ಕೆ ಬರುತ್ತೇನೆಂದು ಕರೆ ಮಾಡಿದರು. ಬಹಳ ಖುಶಿಯಾದರೂ ನಾವು ಮೇಲೆ ಮನೆ ಕಟ್ಟಿಸುತ್ತಿದ್ದುದರಿಂದ ತಲೆಬಿಸಿಯೂ ಆಯಿತು. ಎಲ್ಲ ಕಡೆ ಧೂಳು. ಏನು ಮಾಡುವುದು? ಒಂದು ನಾಲ್ಕು ತಿಂಗಳು ಬಿಟ್ಟು ಬನ್ನಿ ಗೆಸ್ಟ್‌ ರೂಮ್‌ ಆಗಿರುತ್ತೆ ಅಷ್ಟು ಹೊತ್ತಿಗೆ ಎನ್ನಲೇ ಅಂದುಕೊಂಡೆ. ಆದರೆ ನಮ್ಮ ಅತ್ತೆ ವಯಸ್ಸಾದವರು ಬರುತ್ತೇನೆ ಎಂದು ಹೇಳುವಾಗ ಮುಂದೆ ಹಾಕಬಾರದು ಎಂದರು. ಹಾಗಾಗಿ ಅವರಿಗೆ ಹೋಟೇಲಿನಲ್ಲಿ ರೂಮು ಮಾಡಿ ಊಟ ತಿಂಡಿಗೆ ಮನೆಗೆ ಬರುವ ವ್ಯವಸ್ಥೆ ಮಾಡಿದೆವು. ವಿಷ್ಣು ನಾಯ್ಕರು ಅವರ ಪತ್ನಿ ಮಗಳು ಅಳಿಯ ಎಲ್ಲರೂ ಬಂದರು. ಅವರ ವಿದ್ಯಾರ್ಥಿನಿಯ ಮನೆಗೂ ಹೋಗಿ ಬಂದೆವು. ಅವರು ನಮ್ಮ ಮನೆಗೆ ಬಂದು ಹೋದ ಕೆಲಸಮಯದಲ್ಲೇ ಅವರ ಪತ್ನಿ ಕವಿತಾ ಆಂಟಿ ತೀರಿಕೊಂಡರು. ನಮ್ಮೆಲ್ಲರಿಗೂ ಆಘಾತ. ಆರೋಗ್ಯವಾಗಿ ಚಟುವಟಿಕೆಯಿಂದಿದ್ದವರು ಹೀಗೆ ಹೋಗುವುದೇ? ನಮ್ಮತ್ತೆ ಹೇಳಿದ ಮಾತು ಎಷ್ಟು ಸತ್ಯ ಅನ್ನಿಸಿತು. ಆಮೇಲೆ ಅಂಬಾರಕೊಡ್ಲಕ್ಕೆ ಹೋಗಿ ಮಾತಾಡಿಸಿಕೊಂಡು ಬಂದಿದ್ದೆವು. ಇದ್ದಕ್ಕಿದ್ದಂತೆಯೇ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ಕಾಣುತ್ತಿದ್ದರು ವಿಷ್ಣು ನಾಯ್ಕರು. ಮತ್ತೆ ಹೊನ್ನಾವರದ ಸಹಯಾನದಲ್ಲಿ ಒಂದೆರಡು ಬಾರಿ ಸಿಕ್ಕಿದ್ದರು.

ಉತ್ತರ ಕನ್ನಡ ಜಿಲ್ಲೆಯ ಸಾಕ್ಷಿ ಪ್ರಜ್ಞೆಗಳಲ್ಲಿ ಒಬ್ಬರಾದ ವಿಷ್ಣುನಾಯ್ಕರು ಕಿರಿಯರಿಗೆ ವೇದಿಕೆ ಕೊಡಲು ಸದಾ ಹಾತೊರೆಯುತ್ತಿದ್ದರು. ತಾವು ವೇದಿಕೆಯ ಹಿಂದಿರುತ್ತಿದ್ದರು. ʼಪರಿಮಳʼದ ಅಂಗಳದಲ್ಲಿ ಅದೆಷ್ಟು ಉದಯೋನ್ಮುಖರಿಗೆ ವೇದಿಕೆ, ಬಹುಮಾನ, ಮೊದಲ ಕವಿತೆ ಓದುವ ಬೆರಗು, ಹಿರಿಯ ಸಾಹಿತಿಗಳೊಂದಿಗೆ ಒಡನಾಡುವ ಅವಕಾಶ ಸಿಕ್ಕಿದೆಯೋ!

ವೇಷಭೂಷಣದಲ್ಲಿ ಮಾತ್ರವಲ್ಲ, ಎಲ್ಲದರಲ್ಲೂ ಒಂದು ಶಿಸ್ತುಬದ್ಧ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರಿಗೆ ಸ್ಫೂರ್ತಿತುಂಬುತ್ತಿದ್ದರು. ಅಂಕೋಲಾದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಮಯ ಪಾಲನೆಗೆ ನಿರ್ದಿಷ್ಟ ಸಮಯವಾದೊಡನೆ ಬೆಲ್‌ ಆಗುವಂತಹ ದಿಟ್ಟತನವನ್ನೂ ಮುಲಾಜಿಲ್ಲದೇ ತೋರಿಸಿದ್ದರು. ಒಟ್ಟಿನಲ್ಲಿ ಅವರಿಗೆ ಎಲ್ಲವೂ ಅಚ್ಚುಕಟ್ಟಾಗಿರಬೇಕು ಅಷ್ಟೇ.

ರಾಘವೇಂದ್ರ ಪ್ರಕಾಶನದ ಮೂಲಕ ಹಲವಾರು ಉದಯೋನ್ಮುಖರ, ಪ್ರಸಿದ್ಧರ ಪುಸ್ತಕಗಳನ್ನು ಪ್ರಕಟಿಸಿದರು. ಗೌರೀಶ್‌ ಕಾಯ್ಕಿಣಿಯವರ ಸಮಗ್ರ ಸಾಹಿತ್ಯ ಪ್ರಕಟಣೆ ಅವುಗಳ್ಲೊಂದು. ಅತ್ಯುತ್ತಮ ಶಿಕ್ಷಕರೂ, ಕವಿಯೂ ಆಗಿದ್ದ ಅವರು ಜೀವಪರ ಚಿಂತನೆಗಳನ್ನು ಜೀವಂತವಾಗಿಡಲು ಕೊನೆಯವರೆಗೂ ಶ್ರಮಿಸಿದರು. ಸಾವು ಸಹಜ. ಆದರೆ ಯಾಕೋ ಮನಸ್ಸು ಮ್ಲಾನವಾಗಿದೆ.
ಹೋಗಿ ಬನ್ನಿ ಸರ್‌, ನಿಮ್ಮ ಪ್ರೀತಿ ನಮ್ಮೆಲ್ಲರಲ್ಲೂ ಸದಾ ನಿಮ್ಮ ನೆನಪನ್ನು ನಿರಂತರವಾಗಿಡುತ್ತದೆ.

ದೀಪಾ ಹಿರೇಗುತ್ತಿ