ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ – ೧೧

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಕವಿತೆ/ಕಾವ್ಯ ಹೇಗೆ ಎನ್ನುವುದನ್ನು ತಿಳಿಸಿ ಕೊಡುವುದು ಛಂದಸ್ಸು ಮತ್ತು ರಚಿತವಾದ ಕಾವ್ಯದ ತಿರುಳನ್ನು ತಿಳಿಸುವುದೇ ಮೀಮಾಂಸೆ ಎಂದು ತಿಳಿದ ಸಂಗತಿ. ಮೀಮಾಂಸೆಯ ವಿವಿಧ ಶಾಖೋಪಶಾಖೆಗಳ ಕುರಿತು ಸಾಕಷ್ಟು ಚರ್ಚಿಸಿಯಾಗಿರುವುದರಿಂದ,ಛಂದಸ್ಸಿನ ಕುರಿತು ಕ್ಲುಪ್ತವಾಗಿ ವಿವರಿಸಬಹುದು ಎಂದುಕೊಳ್ಳುತ್ತೇನೆ. ಈಗಾಗಲೇ ಹೇಳಿದಂತೆ, ಪದ್ಯವನ್ನು ರಚಿಸುವ ಶಾಸ್ತ್ರ ಈ ಛಂದಸ್ಸು.

ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.ಹೀಗಾಗಿ ಪ್ರಾರಂಭದ ದಿನಗಳಿಂದ ಮೊದಲ್ಗೊಂಡು ಆಧುನಿಕ ಕನ್ನಡಕ್ಜೆ ಬರುವಾಗ ಈ ಪರಿಷ್ಕರಣೆಗಳು ತಿಳಿಯುತ್ತದೆ.

ಶಾಸ್ತ್ರವೇತ್ತರ ಪ್ರಕಾರ, ಛಂದಸ್ಸಿನಲ್ಲಿ ಮೂರು ಮುಖ್ಯ ವಿಭಾಗಗಳಿವೆ.

  • ಪ್ರಾಸ.
  • ಯತಿ
  • ಗಣ.

ಇಂದಿಲ್ಲಿ ಪ್ರಾಸ ವಿಷಯದ ಕುರಿತು ವಿವರಿಸಲಾಗಿದೆ.

ಪ್ರಾಸ
ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.

ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.

ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವೆಂದು ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು. ಪ್ರಾಸಗಳಲ್ಲಿ ೧೬ ಪ್ರಕಾರಗಳಿವೆ. ೧. ಸಿಂಹ ಪ್ರಾಸ ೨. ಗಜ ಪ್ರಾಸ ೩. ವೃಷಭ ಪ್ರಾಸ ೪. ಅಜ ಪ್ರಾಸ ೫. ಅಶ್ವ ಪ್ರಾಸ (ಹಯ ಪ್ರಾಸ) ೬. ಶರಭ ಪ್ರಾಸ ೭. ವಿನುತ ಪ್ರಾಸ ೮. ಶಾಂತ ಪ್ರಾಸ ೯. ವರ್ಗ ಪ್ರಾಸ ೧೦. ಸಮೀಪ ಪ್ರಾಸ (ಸಮೀಪಗತ ಪ್ರಾಸ) ೧೧. ಅನು ಪ್ರಾಸ (ಅನುಗತ ಪ್ರಾಸ) ೧೨. ಅಂತ ಪ್ರಾಸ (ಅಂತಗತ ಪ್ರಾಸ) ೧೩. ದ್ವಿ ಪ್ರಾಸ (ದ್ವಿವರ್ಣ ಪ್ರಾಸ) ೧೪. ತ್ರಿ ಪ್ರಾಸ (ತ್ರಿವರ್ಣ ಪ್ರಾಸ) ೧೫. ದ್ವಂದ್ವ ಪ್ರಾಸ ೧೬. ಅಂತಾದಿ ಪ್ರಾಸ (ಆದ್ಯಂತ ಪ್ರಾಸ) ಪ್ರತಿಯೊಂದರ ವಾಖ್ಯೆ,ಉದಾಹಾರಣೆಗಳ ಅಗತ್ಯವಿಲ್ಲವೆಂದು ಭಾವಿಸಲಾಗಿದೆ.

ಪ್ರಾಸದ ವಿಚಾರವಾಗಿ ನಮಗೆ ಮಾಹಿತಿ ‘ಕವಿರಾಜ ಮಾರ್ಗ ‘ ದ ಎರಡನೆಯ ಅಧ್ಯಾಯದಲ್ಲಿ ಸಿಗುತ್ತದೆ.ಇದೊದು ಬಹು ಸ್ಥೂಲವಾದ ವಿವರಣೆ.

ನಮ್ಮ ಸಾಹಿತ್ಯವನ್ನು ನೋಡುವಾಗ ಈ ಪ್ರಾಸ ಮೌಖಿಕ ಸಾಹಿತ್ಯ ಎನಿಸಿಕೊಂಡ ಜಾನಪದದಲ್ಲಿ ಹೆಚ್ಚು ಕಾಣುತ್ತಿದೆ.ಜೋಗುಳ ಹಾಡುಗಳು,ನಂತರದ ದಿನಗಳಲ್ಲಿ ತ್ರಿಪದಿ ಗಳಲ್ಲಿ ಪ್ರಾಸ ಹೆಚ್ಚು ಪ್ರಚಾರಕ್ಕೆ ಬಂದಿತು ದ್ವಿತೀಯಾಕ್ಷರ ಪ್ರಾಸದ ಕೆಲವು ಮಾದರಿಗಳು.

ಕೂಸಿದ್ದ ಮನೆಗೆ ಬೀಸಣಿಕೆ ಯಾತಕ್ಕೆ

ಕೂಸು ಕಂದಮ್ಮ – ಒಳಹೊರಗ ಆಡಿದರ

ಬೀಸಣಿಕೆ ಗಾಳಿ ಸುಳಿದಾವೋ.

ಇನ್ನೊಂದು ಉದಾಹರಣೆ :

ಗೊಲ್ಲ ಕರೆದ ದನಿಯ ಕೇಳಿ

ಎಲ್ಲ ಹಸುಗಳು ಬಂದು ನಿಂತು

ಚಲ್ಲಿ ಸೋಸಿ ಹಾಲು ಕರೆಯಲು

ಅಲ್ಲಿ ತುಂಬಿತು ಬಿಂದಿಗೆ.

ಸರ್ವಜ್ಞನ ಒಂದು ವಚನ

ಸಾಲವನು ಕೊಂಬಾಗ ಹಾಲೋಗರುಂಡಂತೆ

ಸಾಲಿಗರು ಬಂದು ಎಳೆವಾಗ -ಕಿಬ್ಬದಿಯ

ಕೀಲು ಮುರಿದಂತೆ – ಸರ್ವಜ್ಞ.

ದ್ವಿತೀಯ ಪ್ರಾಸವನ್ನು ಆನಂದಿಸಬೇಕಾದರೆ ಕುಮಾರವ್ಯಾಸನಿಗೇ ಶರಣು ಹೋಗಬೇಕು.

ದೇವ ಬಂದನು ತನ್ನ ನೆನೆವರ

ಕಾವ ಬಂದನು ದೈತ್ಯಕುಲವನ

ದಾವ ಬಂದನು ಭಾಗವತಜನಲೋಲುಪನು ಬಂದ|

ಭಾವಿಸುವೊಡಘಹಾರಿ ಬಂದನು

ಓವಿ ಬಂದರೆ ತನ್ನ ಬೀರುವ

ದೇವ ಬಂದನು ವೀರನರಯಣ ಬಂದನರಮನೆಗೆ ||

ಪುರಂದರ ದಾಸರ ಒಂದು ಕೀರ್ತನೆ.

ನಿಮ್ಮ ಭಾಗ್ಯ ದೊಡ್ಡದೊ-ನಮ್ಮ ಭಾಗ್ಯ ದೊಡ್ಡದೊ|

ಸಮ್ಮತಿಯಿಂದ ನಾವು ನೀವು ಸಾಟಿಮಾಡಿನೋಡುವ ಬನ್ನಿ |

ಹೇಮ ಹೊನ್ನು -ಹಣಗಳಿಗೆ ಹೇರಳ ಭಯಗಳುಂಟು |

ರಾಮನಾಮ ದ್ರವ್ಯಕ್ಕೆ ಇನ್ನು ಯಾರಭಯವೂ ಇಲ್ಲ|

ಈ ಮೇಲೆ ಹೇಳಿದ ಮಾದರಿ ಗಳೆಲ್ಲವೂ ಆಯಾ ಸಾಹಿತ್ಯ ಘಟ್ಟಗಳಲ್ಲಿ ರಚಿತವಾಗಿರುವುದರಿಂಲೇ ಅವು ಶಾಶ್ವತ ಸಾಹಿತ್ಯ ಎನಿಸಿಕೊಂಡಿವೆ

ಒದಂತೂ ಖಾತರಿ.ಅಂದು ಕವಿತೆಯಲ್ಲಿ ಪ್ರಾಸ,ಉಪಮೆ,ರೂಪಕ, ಮುಂತಾದ ಅಲಂಕಾರಗಳಿರಬೇಕು ಎನ್ನುವ ಸೂತ್ರಗಳಿದ್ದವು.

ಇಂದು ಅವುಗಳನ್ನು ಪಾಲಿಸುತ್ತ ರಚಿಸಿದರೆ ಅದು ಹಳತು ಎನಿಸುತ್ತದೆ ಮತ್ತು ಹೊಂದಿಕೆಯೂ ಎನಿಸುವದಿಲ್ಲ.

ನಮ್ಮಕವಿತೆಯಲ್ಲಿ ಪ್ರಾಸ ಇರಬೇಕೇ ಬೇಡವೇ ಎನ್ನುವುದರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು,ವೈಚಾರಿಕ ಸಂಘರ್ಷಗಳು ನವೋದಯದ ಕಾಲದಲ್ಲಿ ಇದ್ದಂತೆ ತಿಳಿದು ಬರುತ್ತದೆ..ಬಿ.ಎಂ.ಶ್ರೀ ಯವರು ತಮ್ಮ ಇಂಗ್ಲಿಷ್ ಗೀತೆಗಳಲ್ಲಿ‌ ವಿಪುಲವಾಗಿ ಪ್ರಾಸಗಳನ್ನು ಬಳಸಿರು ವುದನ್ನು ಕಾಣುತ್ತೇವೆ. ಅವರ ‘ಕಾಣಿಕೆ’ ಪದ್ಯದ ಈ ಸಾಲುಗಳನ್ನು ನೋಡಿ:

ಮೊದಲು ತಾಯ ಹಾಲ ಕುಡಿದು,

ಲಲ್ಲೆಯಿಂದ ತೊದಲಿ ನುಡಿದು,

ಕೆಳೆಯರೊಡನೆ ಬೆಳೆದು ಬಂದ ಮಾತದಾವುದು

ನಲ್ಲೆಯೊಲವ ತೆರೆದು ತಂದ ಮಾತದಾವುದು

ಗೋವಿಂದ ಪೈಗಳಂತೂ ಪ್ರಾಸ ಬಿಡುವದೇ ನಿಶ್ಚಯ ಎನ್ನುವ ನಿರ್ಧಾರ ಕೈಕೊಂಡರು..ಪ್ರಾಸ ಎನ್ನುವುದು ಅಕ್ಷರದ ಪುನಾರವೃತ್ತಿ.ಆದರೆ ಅದು ಕೃತಕತೆ,ಏಕತಾನತೆ ಗಳಿಂದ ಕೂಡಿರುವಂತಾಗಿದ್ದರೆ ಬಿಡುವುದೇ ಒಳ್ಳೆಯದು ಪ್ರಾಸದ ಮೋಹ ಅತಿಯಾದರೆ ಅದು ಶಬ್ದಾಡಂಬರ ಆಗುತ್ತದೆ ಎನ್ನುವುದು ಎಲ್ಲ ವಾದ ವಿವಾದಗಳ ಒಮ್ಮತದ ಅಭಿಪ್ರಾಯವಾಗಿತ್ತು.

ಇನ್ನೂ ಸರಳ ಗೊಳಿಸಿ ಹೇಳಬೇಕೆಂದರೆ,ನೂರು ವರುಷಗಳ ಹಿಂದಿನ ನಮ್ಮ ಉಡುಗೆ ತೊಡುಗೆಗಳಿಗೂ ಇಂದಿನ ಉಡುಗೆ ತೊಡುಗೆಗಳಿಗೂ ಇರುವ ಅಂತರವನ್ನು ಗಮನಿಸಿ. ಏನೆಲ್ಲ ವ್ಯತ್ಯಾಸಗಳಿವೆ . ಅಂದಿನ ಪಂಚೆ , ಕಸೆ ಅಂಗಿ ಪೇಟಗಳನ್ನು ನಾವು ಇಂದು ಧರಿಸಿ ಓಡಾಡಬಹುದೇ ? ಅದು ಅಭಾಸವೆನಿಸದೇ ಇರಲಾರದು.ಯುಗಧರ್ಮಕ್ಕೆ ತಕ್ಕಹಾಗೆ ನಮ್ಮ ಚಟುವಟಿಕೆಗಳು ಬದಲಾಗತ್ತ ಹೋಗಿವೆ.ಪ್ಯಾಂಟ್, ಶರ್ಟಗಳು,ವೈವಿಧ್ಯಮಯ ಕ್ಯಾಪ್ ಗಳು ಇವುಗಳ ಸ್ಥಾನವನ್ನು ಆಕ್ರಮಿಸಿವೆ. ಹಳೆಯ ಕಾಲದ ಉಡುಗೆ ತೊಡುಗೆಗಳು ಇಂದು ಫ್ಯಾನ್ಸಿ ಡ್ರೆಸ್ ಗೆ ಬಳಕೆಯಾದಾವು !

ಈ ಮಾತು ನಮ್ಮ ಸಾಹಿತ್ಯ ಪ್ರಕ್ರಿಯೆಗಳಿಗೂ ಅನ್ವಯವಾಗುವದಿಲ್ಲವೇ ?

ವಚನಯುಗದವರಂತೂ ವಚನಗಳಿಗೆ ಗದ್ಯವನ್ನೇ ಹೆಚ್ಚು ಆಶ್ರಯಿಸಿದಂತೆ ತೋರುತ್ತದೆ. ಭಕ್ತಿ ಯುಗಕ್ಕೆ ಬಂದಾಗ ಪ್ರಾಸ ಮತ್ತೆ ಕಾಣಿಸಿಕೊಡಿತು. ಬಹುಶಃ ಗೇಯತೆಯಿಂದಾಗಿ ಅದು ಅಗತ್ಯ ಎನಿಸಿತು. ಹರಿದಾಸರ ಕೀರ್ತನೆಗಳು, ಷಟ್ಪದಿ ಗಳು, ರಗಳೆಗಳು ಪ್ರಾಸಗಳಿಂದ,ವಿಜೃಂಭಿಸಿದವು.ತ್ರಿಪದಿ ಗಳಲ್ಲಿ ಆದಿ ಅಂತ್ಯ,ಮಧ್ಯ ಪ್ರಾಸಗಳು ಶ್ರವ್ಯ ಎನಿಸಿ ದವು. ಭಕ್ತಿ ಯುಗದ ಒಂದು ದೃಷ್ಟಾಂತ ಹೇಳುವದಾದರೆ, ರಗಳೆ ಕವಿ ಎಂದು ಪ್ರಸಿದ್ಧನಾದ ಹರಿಹರ ರಗಳೆಯನ್ನು ಪ್ರಚುರಪಡಿಸಿದಾಗ ಅಂದಿನ ಅನೇಕ ಸಂಪ್ರದಾಯಿಗಳು ಮೂಗು ಮುರಿದರು.ಎಲ್ಲುಯತನಕ ಎಂದರೆ,ಹರಿಹರನಿಗೆ ಕಾವ್ಯರಚನೆ ಅಸಾಧ್ಯ ಎನ್ನುವ ಮಟ್ಟಿಗೆ. ಹೋಯಿತು. ಆಗ ಅವರಿಗೆ ಉತ್ತರರೂಪವಾಗಿ ‘ಗಿರಿಜಾ ಕಲ್ಯಾಣ’

ಷಟ್ಪದಿ ರಚಿಸಿ ಎಲ್ಲರ ಬಾಯಿ ಮುಚ್ಚಿಸಿದ.

ನವೋದಯ ಕಾಲಕ್ಕೆ ಬರುವಾಗ,ಪ್ರಾರಂಭದ. ದಿನಗಳಲ್ಲಿ ಇದ್ದ ಪ್ರಾಸ ಕ್ರಮೇಣ ಲಯ, ಗೇಯತೆಗಳಿಗೆ ತನ್ನ ಸ್ಥಾನ ಬಿಟ್ಟು ಕೊಟ್ಟಿತು.

ಯಾಕೆ ಈ ಮಾತು ಹೇಳಬೆಕಾಯಿತೆಂದರೆ ಸಾಂಪ್ರದಾಯಿಕ ಕಾವ್ಯ/ ಕವಿತೆ ರಚಿಸಬಹುದು ಆದರೆ ಹೊಸತನ್ನು ಕಂಡುಕೊಳ್ಳಲು ಸಾಧ್ಯಎನ್ನು ಪ್ರಯೋಗಶೀಲತೆ ನವ್ಯ ನವ್ಯೋತ್ತರ ಸಾಹಿತ್ಯಕ್ಕೆ ನಾಂದಿಯಾಯಿತು.

ನಮ್ಮ ನಡುವಿನ ಕವಿ ತಿರುಮಲೇಶರ ಪ್ರಕಾರ, ಪ್ರಾಸವೆನ್ನುವುದು ಶಬ್ದಾಲಂಕಾರ, ಇದು ಅರ್ಥಕ್ಕೆ ಯಾವ ಕೊಡುಗೆಯನ್ನೂ ನೀಡುವದಿಲ್ಲ.ಆದರೂ ಕನ್ನಡ ಕವಿಗಳು ಯಾಕೆ ಇದನ್ನು ಇರಿಸಿಕೊಂಡಿದ್ದಾರೆ.ಬಹುಶಃ ಲಯದ ಕಾರಣದಿಂದ.

ಅವರ ಮಾತಿನಲ್ಲಿ ಹೇಳುವುದಾದರೆ, “ಇಂದು ಮುಕ್ತಛಂದವೇ ಕವಿತಾ ರಚನೆಗಳ ವಿಧಾನ.ಎಂದರೆ,ಗೇಯತೆ,ವಾಗ್ಗೇಯತೆ,ಛಂದೋಬದ್ಧತೆ, ಪ್ರಾಸ ಅಲಂಕಾರ ರಹಿತವಾದ ರಚನೆಗಳು.ಮತ್ತು ಪ್ರಾಸ ನಮಗೆ ಕಾಣುತ್ತಿದ್ದರೆ, ಮಕ್ಕಳ ಪದ್ಯಗಳಲ್ಲಿ, ಭಾವ ಗೀತೆಗಳಲ್ಲಿ ಚುಟಕಗಳಲ್ಲಿ. ಇಂದಿನ ನಮ್ಮ ಕಾಲದಲ್ಲಿ ಕವಿತೆ ವೈಚಾರಿಕತೆಯತ್ತ ಸಾಗುತ್ತಿದೆ.ಕವಿಗಳು ಶಬ್ದ ಲಯಕ್ಕಿಂತ ಅರ್ಥಲಯಕ್ಕೆ ಪ್ರಾಧಾನ್ಯ ನೀಡುತ್ತಿದ್ದಾರೆ.ಎಂದರೆ ವಿಷಯಗಳನ್ನು,ವಿಷಯಗಳ ಜತೆಯೋ,ವಿರುದ್ಧವೋ ತರುವ ವಿಧಾನ . ಇದೊಂದು ಮುಕ್ತ ಪ್ರಪಂಚ.”

ಒಟ್ಟರ್ಥದಲ್ಲಿ ಹೇಳುವುದಾದರೆ ಎಲ್ಲದರಲ್ಲೂ ಆಧುನಿಕತೆಯನ್ನು ಬಯಸುವ ನಾವು ನಮ್ಮ ರಚನೆಗಳಲ್ಲಿ ಮಾತ್ರ ಹಳೆಯ ಶೈಲಿಯ ಹಿಂದೆ ಯಾಕೆ ಹೋಗುತ್ತೇವೆ.ಉತ್ತರ ಇಲ್ಲ.ಆದರೆ ಅಂತಹ ರಚನೆಗಳು ಕಾಲದೊಂದಿಗೆ ಸರಿದೂಗಲಾರವು ಗಂಭೀರ ಕವಿತೆ ಎನಿಸಿಕೊಳ್ಳಲಾರವು.ಇಂದಿನ ನಮ್ಮ ಕಾಲ ಯಾವುದೇ ಬಂಧವನ್ನು ಬಯಸುವದಿಲ್ಲ. ಆದರೆ ಕವಿಗೆ ಇದನ್ನೇ ಆಯ್ಕೆ ಮಾಡು ಎಂದು ಹೇಳಲು ಹೇಗೆ ಸಾಧ್ಯ ? ಸಂಪ್ರದಾಯಕ್ಕೆ ಜೋತು ಬೀಳ ಬೇಕೆ, ಕಾಲದೊಂದಿಗೆ ಕಾಲು ಹಾಕಬೇಕೆ ಎಂದು ನಿರ್ಧರಿಸಬೇಕೇ ಎನ್ನುವ ನಿರ್ಧಾರ ಕವಿಗೇ ಸೇರಿದ್ದು.

ಮುಕ್ತ ಛಂದದ ಮಾದರಿಯಾಗಿ ಗೊಪಾಲಕೃಷ್ಣ ಅಡಿಗರ ‘ಭೂತ’ಕವನದ ನಾಲ್ಕು ಸಾಲುಗಳು :

ಕಾಣುತ್ತಿವೆ ಭೂತಕಾಲದ ಭ್ರೂಣಗೂಡುಗಳು:

ಹುಗಿದ ಹಳಬಾವಿಯೊಳ ಕತ್ತಲ ಹಳಸು ಗಾಳಿ

ಅಂಬೆಗಾಲಿಟ್ಟು ತಕೆಕೆಳಗು ತೆವಳುತ್ತೇರಿ

ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೆಗರಿ ತೆಕ್ಕಾಮುಕ್ಕಿ

ಹಾಯುತ್ತಿದೆ ತುಳಸಿವೃಂದಾವನದ ಹೊದರಿಗೂ

೦-೦-೦

ಕೃತಜ್ಞತೆ

1.ಛಂದೋವಿಕಾಸ – ಡಿ ಎಸ್ ಕರ್ಕಿ

  1. ಇಂಗ್ಲಿಷ್ ಗೀತೆಗಳು – ಬಿ.ಎಂ.ಶ್ರೀ.
  2. ವಾಗರ್ಥ ವಿಲಾಸ – ಕೆ.ವಿ.ತಿರುಮಲೇಶ.