ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ ೧೩

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ನಾದಲಯ ಮತ್ತು ಛಂದಸ್ಸು

ನಾದ ಬ್ರಹ್ಮಾಂಡದ ಕೇಂದ್ರ ಜೀವ.ನಮ್ಮಗಳಲ್ಲಿ ನಾದ ಹುಟ್ಟುವ ಸ್ಥಾನ ನಾಭಿ ಎಂದು ರತ್ನಾಕರವರ್ಣಿ ಹೇಳುವುದು ಕೇಳಿ :

ನಾಭಿಯಿಂದಿಳಿಸಿ ಎದೆಯೊಳೋಲಾಡಿಸಿ|
ಶೋಭೆಯ ಮಾಡಿ ಕಂಠದೊಳು |
ಆ ಭೂಪ ಮೆಚ್ಚಿರಾಗಿಸಿದರು ಶ್ರೀದೇವಿ |
ಶೋಭನವನು ಪಾಡುವಂತೆ ||

ನಾಭಿಯು ನಾದದ ಉಗಮಸ್ಥಾನವೇ ಆಗಿರಬಹುದು. ಆದರೆ ನಾದವನ್ನು ಗ್ರಹಣ ಮಾಡಿ
ಅದರ ಸುಖಾನುಭವವನ್ನು, ರಸಾನುಭವವನ್ನು ಅನುಭವಿಸುವ ಸ್ಥಾನ ಯಾವುದು ? ಅದು ಹೃದಯ ಎನ್ನುವದರಲ್ಲಿ ಎರಡು ಮಾತಿಲ್ಲ! ಭಾವತರಂಗಗಳೇ
ಸ್ವರ ತರಂಗಳಾಗಿ ಪರಿಣಮಿಸುತ್ತವೆ. ಯಾಕೆಂದರೆ,ಭಾವದ ಸ್ಥಾನ ಮೇಲೆ ಹೇಳಿದ ಹಾಗೆ ಹೃದಯವೇ,ನಾದವನ್ನು ಪ್ರಚೋದಿಸುವ ಸ್ಥಾನ ಎಂಬುದು ತಾರ್ಕಿಕವಾಗಿ, ಋಜುವಾತಗಿದೆ.ನಾದ ಬ್ರಹ್ಮನ ಪೀಠ, ಹೃದಯ ಕಮಲ ವೆಂದು ತಿಳಿದುಕೊಂಡಾಗ ಈ ನಾದ,ಉಗಮ,ಗ್ರಹಣ ಪ್ರಚೋದನೆ; ಈ ಮೂರನ್ನೂ
ಸೂಚಿಸುವುದು ಹೃದಯ !!

‘ಬಾಹ್ಯ ಪ್ರಪಂಚವು ಅಂತರಂಗವನ್ನು ನಾದಲಯದ ಮೂಲಕ ಕರೆಯುತ್ತದೆ.ಅಂತರಂಗವು ಬಾಹ್ಯ ಪ್ರಪಂಚಕ್ಕೆ ನಾದ ಲಯದ ಮೂಲಕವೇ ಉತ್ತರವನ್ನೀಯುತ್ತದೆ ‘

ಎನ್ನುತ್ತಾರೆ ಡಾ.ಡಿ.ಎಸ್.ಕರ್ಕಿಯವರು.ಇವರು ಸ್ವತಃ ಕವಿಗಳೂ ಆಗಿರುವುದರಿಂದ ಹೊಸ ಛಂದಸ್ಸಿನ ನಾಡಿಗಳು ಹೇಗೆ ನುಡಿಯುತ್ತವೆ ಎಂಬುದನ್ನು ಅಧಿಕಾರಯುತವಾಗಿ ವಿವರಿಸುತ್ತಾರೆ.
ಈ ರೀತಿ, ಬಾಹ್ಯ ಮತ್ತು ಅಂತರಂಗ ಜಗತ್ತಿನ ಸಂಪರ್ಕದ
ಕೊಂಡಿ ಈ ನಾದ.ಇದನ್ನು ನಾವು ನಮ್ಮ ಕಾವ್ಯ/ಕವಿತೆಗಳಿಗೆ ಅನ್ವಯಿಸಿ ಕೊಂಡಾಗ ನಾದಲಯದ ಅನುಭೂತಿ ಉಂಟಾಗಲು ಅಗತ್ಯವಾದ ಉಪಕರಣವೇ ಛಂದಸ್ಸು. ಕಾವ್ಯ ದಲ್ಲಿರುವ ಈ ನಾದಲಯವು ಸರ್ವತ್ರವಾಗಿರುವ ಒಂದು ವಿಶಿಷ್ಟ ರೂಪ ಇದೆಯಲ್ಲ ಎನ್ನುವ ಒಂದು ಸಿದ್ಧ ವಾಕ್ಯವೇ ಛಂದಸ್ಸು ಎಂದು ಯಾರಿಗಾದರೂ ತಿಳಿಯುವ ಅಂಶ. ಒಂದು ಕಾವ್ಯ ಹೋಗಲಿ ಒಂದು ಗೀತೆಯ ಅಂತರಂಗ ಅರಿಯಲು ಪ್ರಯತ್ನಿಸಿದಾಗ,ಅದರಲ್ಲಿ, ನಾದ,ಭಾವ ಮತ್ತು ಭಾಷೆ – ಹೀಗೆ ಮೂರು ಅಂಗಗಳಿರುತ್ತವೆ.ಇನ್ನೂ ಸರಳವಾಗಿ ಹೇಳಬಹುದಾದರೆ ಭಾವ ಕಾವ್ಯದ ಜೀವ. ನಾದ ಮತ್ತು ಭಾಷೆಗಳು ಆ ಜೀವದ ಸ್ವರೂಪವನ್ನು ತಿಳಿಯುವ ಸಾಧನಗಳು. ಗದ್ಯದ ಭಾವವನ್ನು ಪ್ರಕಟಿಸಲು ನಾವು ಭಾಷೆಯನ್ನು ಅವಲಂಬಿಸಿದರೆ ಪದ್ಯವು ನಾದಲಯವನ್ನು ಅವಲಂಬಿಸುತ್ತದೆ.ಲಯ ಇಲ್ಲದೆ ಮಾನವ ಇಲ್ಲ ಎನ್ನುವ ಸರಳ ಸಂಗತಿಯನ್ನು ತಿಳಿದಿರುವಂತೆ, ಒಂದು ಕಾವ್ಯದಲ್ಲಿ, ಅರ್ಥ ಗ್ರಹಣ ಕ್ಕಿಂತ,ರಸ ಗ್ರಹಣಕ್ಕೆ ಹೆಚ್ಚಿನ ಮಹತ್ವವಿದೆ . ಇನ್ನು ಈ ಛಂದಸ್ಸಿನ ರಹಸ್ಯವೆಂದರೆ ಭಾವ ಅತಿ ಸೂಕ್ಷ್ಮ; ಭಾಷೆ ಸ್ಥೂಲ, ಈ ನಾದಲಯವು ಇವೆರಡರ ಮಧ್ಯವರ್ತಿಯಾಗಿದ್ದು ಅವುಗಳಲ್ಲಿ ತಾಳ-ಮೇಳಗಳನ್ನುಂಟು ಮಾಡುತ್ತದೆ.ಛಂದಸ್ಸಿಲ್ಲದೆ,ಈ ಪ್ರಕ್ರಿಯೆ ಸಾಧ್ಯವೇ ? ಇಲ್ಲ ಕಾವ್ಯ/ಕವಿತೆ ರೂಪಗೊಳ್ಳಬೇಕಾದರೆ ಈ ಎಲ್ಲ ಪ್ರಕ್ರಿಯೆಗಳು ಮನದಟ್ಟಾಗಲೇ ಬೇಕು. ” ಛಂದಸ್ಸು ಕವಿಯ ಕಣ್ಣಿನ ಬೆಳಕು ” ಎನ್ನುತ್ತಾನೆ ನಾಗವರ್ಮ :

ಛಂದಮನರಿಯದೆ ಕವಿತೆಯ ದುಂದುಗದೊಳ್ ತೋಳಲಿ ಸುಳಿವ ಕುಕವಿಯೆ ಕರುಡುಂ||

ಹೇಗೆ, ನುಡಿ,ನಾದ,ಛಂದಸ್ಸುಗಳು ಅರಸಿಕನ್ನೂ ರಸಿಕನಾಗಿಸ ಬಲ್ಲವು ಎಂಬುದನ್ನು ಭಾಷೆ ಬೆಳೆದುಬಂದ ಎಲ್ಲಾ ಘಟ್ಟಗಳನ್ನು ಅವಲೋಕಿಸುವಾಗ ತಿಳಿದುಬರುತ್ತದೆ.ಪುರಂದರ ದಾಸರ ಈ ಕೀರ್ತನೆ ನೋಡಿ:

ರವಿಚಂದ್ರ ಬುಧ ನೀನೆ ರಾಹುಕೇತುವು ನೀನೆ |
ಕವಿ ಗುರುವು ಶನಿಯು ಮಂಗಳನು ನೀನೆ ||
ದಿವ ರಾತ್ರಿಯು ನೀನೆ ನವವಿಧಾನವು ನೀನೆ|
ಭವರೋಗಹರ ಭೇಷಜನು ನೀನೆ || ಸಕಲಗ್ರಹಬಲನೇನೆ ಸರಸಿಜಾಕ್ಷನಿಖಿಳ ನೀನೆ ವಿಶ್ವವ್ಯಾಪಕನೆ ||


ಇಲ್ಲಿ ಛಂದಸ್ಸಿನ ಲಕ್ಷಣಗಳು ಭಾಷೆ,ನಾದಲಯಗಳ,ಪ್ರಾಸ ಗಳ ಯತಿ,ಮೊದಲಾದ ಎಲ್ಲಗುಣಗಳು ಇರುವದನ್ನು ಕಾಣುತ್ತೇವೆ.

ಬೇಂದ್ರೆ ಯವರಂತೂ ಅಕ್ಷರಶಃ ನಾದ ಬ್ರಹ್ಮರೇ ಆಗಿದ್ದಾರೆ :

ಬಂತ್ಯಾಕ ನಿಮಗ ಇಂದ ಮುನಿಸು
ಬೀಳಲಿಲ್ಲ ನಮಗ ಇದರ ಕನಸು
ರಾಯ ತಿಳಿಯಲಿಲ್ಲ ನಿಮ್ಮ ಮನಸು ||
ನೀವು ಹೊರಟಿದ್ದೀಗ ಎಲ್ಲಿಗೆ ?
ಗಮಗಮಾ ಗಮಾಡಸ್ತಾವs ಮಲ್ಲಿಗಿ |
ನೀವು ಹೊರಟಿದ್ದೀಗ ಎಲ್ಲಿಗೆ ?

ಕನ್ನಡ ಕವಿಗಳಲ್ಲಿ ನಾದಲಯ ಹೊರ ಹೊಮ್ಮಿದ್ದು,ಸರಳ ರಗಳೆ ಗೀತರೂಪಕ,ಗೀತನಾಟಕ,ಗಳಲ್ಲಿ ಎಂದು ಗರುತಿಸ ಬಹುದು.ಕುವೆಂಪು ಅವರ ರಾಮಾಯಣ ದರ್ಶನಂ, ಸರಳರಗಳೆಯಲ್ಲಿದ್ದು, ಹೊಸ ನಾದಲಯ ಮತ್ತು ಛಂದಸ್ಸುಗಳ ಎರಕವೇ ಎನ್ನಬಹುದು.ಅವರ ಪಕ್ಷಿ ಕಾಶಿ ಯ ಈ ಸಾಲುಗಳು ನಿಶ್ಚಿತ ಪ್ರಾಸ ವಿನ್ಯಾಸದಿಂದ ಕೂಡಿದ್ದು, ನಾದದ ಅಂದದಿಂದ ಮನವನ್ನು ಮುದಗೊಳಿಸುವ ಕ್ರಿಯೆ ಅನನ್ಯ.

ಹಾಡಿದನು ಗಮಕಿ
ನಾಡು ನಲಿದುದು ರಸದ ಕಡಲಿನಲಿ ಧುಮುಕಿ
ಈಅರಣ್ಯಾಕಾಶಗಳ ಬ್ರಹ್ನೌನ್ಮಾದದಲಿ
ಕತ್ತಲಲಿ ಕನಸಾದ ವಿಸ್ತೀರ್ಣ ಧಾತ್ರಿಯಲಿ
ಚೈತ್ರ ರಾತ್ರಿಯಲಿ.

ಕುವೆಮಪು ಅವರದು ಪ್ರೌಢ ಭಾಷೆ. ಆದರೆ ಅಡಿಗರ ಪ್ರಾರಂಭದ ಕವಿತೆಗಳಲ್ಲಿ ಮುಕ್ತ ಛಂದವಿದ್ದರೂ ನಾದದ ಗುಂಗು ಇದ್ದೇ ಇರುವದು ಗಮನಿಸಬೇಕಾದ ಅಂಶ.ಅವರ ‘ಭೂಮಿಗೀತ’ ಕವಿತೆಯ ಬಹು ಇಷ್ಟವಾದ ಸಾಲುಗಳು :

ಮರಿಕುದುರೆ ಕೆನೆದು ಕುಣಿದಿತ್ತು
ಸುತ್ತಲೂ ಹುಲ್ಲು, ಹುರುಳಿ
ಬಂಗಾರದ ಕಡಿವಾಣ, ರನ್ನ ಲಗಾಮು;
ತಲೆ ಮೇಲೆ ಮೂರು ಬಣ್ಣದ ಮುಕುಟಗರಿ ಬೆಡಗು;
ಹಿಂದೆ ಕರಕರಕಟರು ಷಾಃಪಸಂದಿನ ತೊಡವು.
ನಡಮುರಿವ ತನಕ ನಡೆದದ್ದೆ ಸುಗ್ಗಿಯ ಕುಣಿತ.

ನಾದಲಯಕ್ಕೆ ಮಾತ್ರ ಈ ಪದ್ಯಭಾಗದ ಆಯ್ಕೆ.ಅರ್ಥ ವಿವರಿಸಲು ಅಲ್ಲ.೧೯೫೯ ರಲ್ಲಿ ಮೊದಲಿಗೆ ಪ್ರಕಟವಾದ ಈ ಭೂಮಿಗೀತ ಕವನ ಸಂಕಲನ ಮೂರು ಮುದ್ರಣ ಕಂಡಿರುವುದು ಒಂದು ಐತಿಹಾಸಿಕ ದಾಖಲೆಯೇ ಸರಿ.ಅದರ ಮುನ್ನಡಿಯಲ್ಲಿ ಅನಂತಮೂರ್ತಿಯವರು ಅಡಿಗರು ಸ್ವತಃ ಬೆಳೆಯುದಲ್ಲದೆ ವಿಮರ್ಶಕರನ್ನೂ ಬೆಳೆಸುತ್ತಾರೆ ಎನ್ನುವುದು ಇಲ್ಲಿ ಉಲ್ಲೇಖನೀಯ.

ಹೊಸಗನ್ನಡ ಛಂದಸ್ಸಿನ ನಾದಲಯಕ್ಕೆ ಚಂದ್ರಶೇಖರ ಕಂಬಾರರ ಹೆಸರನ್ನು ತೆಗೆದುಕೊಳ್ಳುವುದು ಅತೀ ಜರೂರು.ಅವರ ಪದ್ಯಗಳು ಕುಣಿಯುತ್ತವೆ ಮತ್ತು ಓದುಗನನ್ನು ಕುಣಿಸುತ್ತವೆ. ಅವರ ಕಾಡು ಕುದುರೆ ಗೀತೆಯನ್ನು ನೋಡೋಣ.ಅದು ಚಲನಚಿತ್ರ ವಾಗಿಯೂ ಹೆಸರು ಮಾಡಿತು. ಚಂದ್ರಶೇಖರ ಕಂಬಾರರ ಹಾಡುಗಳು ನೆನಪಿಗೆ ಬರಲಾರಂಭಿಸಿದರೆ ಅದರ ಗುಂಗಿನಿಂದ ಹೊರಬರುವುದೇ ಕಷ್ಟ.

ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ.

ನಾದ,ಭಾಷೆ,ಲಯ, ಮಾಧುರ್ಯಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲಿಕ್ಕಿಲ್ಲ ಎಂದು ಅನಿಸುತ್ತದೆ.

ನಾದಲಯ ಮತ್ತು ಛಂದಸ್ಸು ಯಾವುದೇ ಕವಿತೆಯ ಪರಸ್ಪರ ಬಿಡಿಕೊಳ್ಳಲಾರದ ನಂಟು ಹೊಂದಿವೆ ಎನ್ನುವುದನ್ನು ಸಾಬೀತು ಪಡಿಸುವುದರ ಜೊತೆಗೆ ಮುಕ್ತ ಛಂದಸ್ಸಿನ ಲ್ಲಿಯೂ ನಾದಲಯ ಅಗತ್ಯ ಎನ್ನುವದನ್ನು ತಿಳಿಯುವುದೇ ಕವಿತಾ ರಚನೆಯ ಮತ್ತು ಅದರ ಯಶಸ್ಸಿನ ಗುಟ್ಟು.ಕವಿಯಾದವನಿಗೆ ಒಳಮನಸ್ಸಿನಲ್ಲಿ ಇದ್ದೇ ಇರುತ್ತದೆ.
ಡಾ.ಕರ್ಕಿಯವರು ಕವಿಗಳು ಎಂದು ಈಗಾಗಲೇ ಹೇಳಿದ್ದೇನೆ. ಅವರ ಕವಿತೆ ‘ ಛಂದೋ ನಟಿಗೆ ‘ ಕವಿತೆಯ ನಾಲ್ಕು ಪಂಕ್ತಿಗಳು

ಛಂದೋನಟಿಗೆ

ಓ ತಾಳ-ಲಯ-ಲೋಲೆ
ಶ್ರೀ ಕಾವ್ಯ- ಪದ – ಲೀಲೆ
ಛಂದೋ – ನಟಿಯೆ ಚೆಂದ
ದಲ್ಲಿ ಬರುವೆ
ಭಾವವನು ಬಂಧದಲಿ ಬಿಡಿಸಿ ತರುವೆ

            ೦-೦-೦

ಆಕರ:
ಕನ್ನಡ ಛಂದೋವಿಕಾಸ : ಡಿ.ಎಸ್ ಕರ್ಕಿ
ಪಕ್ಷಿ ಕಾಶಿ : ಕುವೆಂಪು.
ಒಲವೆ ನಮ್ಮ ಬದುಕು : ದ.ರಾ.ಬೇಂದ್ರೆ
ಭೂಮಿಗೀತ : ಗೋಪಾಲ ಕೃಷ್ಣ ಅಡಿಗ
ಕಾಡು ಕುದುರೆ : ಚಂದ್ರಶೇಖರ ಕಂಬಾರ.