ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ – ೧೬

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಹರಿಶರಣ ಪೆಚ್ಚು ಬುಧಜನರಿಗೆ ಮೆಚ್ಚು
ದುರಿತವನಕೆ ಕಾಳ್ಗಿಚ್ಚು
ವಿರಹಿಗಳೆದೆದೆಗಿಚ್ಚು ವೀರರ್ಗೆ ಪುಚ್ಚು ಕೇ
ಳ್ವರಿಗಿದು ತನಿಬೆಲ್ಲದಚ್ಚು॥೩೯॥

ಈ ಕಾವ್ಯವು ಹರಿದಾಸರಿಗೆ ಶ್ರೇಯಸ್ಸಾಗಿಯೂ, ಪಂಡಿತರಿಗೆ ಮೆಚ್ಚಾಗಿಯೂ, ಪಾಪವೆಂಬ ಕಾಡಿಗೆ ದಾವಾಗ್ನಿಯೂ, ವಿರಹಿಗಳ ಎದೆಗೆ ಬೆಂಕಿಯೂ, ಸಹೃದಯರಿಗೆ ರುಚಿಕರವಾದ ಬೆಲ್ಲದ ಅಚ್ಚೂ ಆಗಿರುವುದು.

ಕನಕದಾಸರ, ‘ಮೋಹನ ತರಂಗಿಣಿ ‘ಕಾವ್ಯದ ಈ ಸಾಲುಗಳನ್ನು ನೋಡುವಾಗ, ಇಡೀ ಕನಕದಾಸರ ರಚನೆಗಳು ಕಣ್ಮುಂದೆ ನಿಲ್ಲುತ್ತವೆ. ದಾಸ ಕೂಟದ ಸದಸ್ಯರಾದ,ವ್ಯಾಸರಾಯರ ಶಿಷ್ಯರಾದ,ಪುರಂದರ ದಾಸರ ಸಮಕಾಲೀನರಾದ ಕನಕದಾಸರು, ಕೇಶವನ ಆರಾಧಕರಾಗಿ, ಧರ್ಮ, ಸಮಾಜ, ಸಂಸ್ಕೃತಿಯ ಹಿತಚಿಂತಕರಾಗಿ ಕಾಣಿಸಿಕೊಂಡು ನಡುಗನ್ನಡ ಕಾಲದ ಮಹತ್ವದ ಕವಿಗಳಲ್ಲಿ ಒಬ್ಬರು. ತಮ್ಮ ಅಪಾರವಾದ ಲೋಕಾನುಭವ, ಅಸಾಧಾರಣವಾದ ಪ್ರತಿಭೆ, ಸತ್ವಶೀಲವಾದ ವ್ಯಕ್ತಿತ್ವದಿಂದ – ಅದುವರೆಗೆ ಕೇವಲ ಕೀರ್ತನೆಗಳಿಗೆ ಮಾತ್ರ ಸೀಮಿತವಾಗಿದ್ದ ಹರಿದಾಸರ ಕ್ರಿಯಾಶೀಲತೆಯ ಪ್ರತಿಭೆಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ದು ಕನ್ನಡ ಕಾವ್ಯ ಪ್ರಪಂಚದಲ್ಲಿ ದಾಸಸಾಹಿತ್ಯಕ್ಕೆ ಘನತೆಯನ್ನು ತಂದು ಕೊಟ್ಟದ್ದು ಅವರ ಹಿರಿಮೆ. ೧)ಮೋಹನತರಂಗಿಣಿ ೨)ರಾಮಧಾನ್ಯ ಚರಿತೆ ೩) ನಳಚರಿತೆ ೪) ಹರಿಭಕ್ತಿಸಾರ ಮತ್ತು ೫) ನೃಸಿಂಹಸ್ತವ ಎಂಬ ಛಂದೋವೈವಿಧ್ಯತೆ ಹಾಗೂ ವಸ್ತುವೈವಿಧ್ಯತೆಯಿಂದ ಕೂಡಿದ ಕಾವ್ಯಗಳನ್ನು ರಚಿಸಿ ಕನ್ನಡ ಕವಿಗಳಲ್ಲಿ ಮೊದಲ ದಾಸರಾಗಿದ್ದಾರೆ. ಸಾಂಗತ್ಯದ ವೈಭವವನ್ನು ಹೆಚ್ಚಿಸಿದ ಕೆಲವೇ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಮೋಹನತರಂಗಿಣಿ ಎಂಬ ಬೃಹತ್ಕಾವ್ಯ ಮತ್ತು ನೃಸಿಂಹಸ್ತವ ಎಂಬ ಲಘುಕಾವ್ಯ ಸಾಂಗತ್ಯದಲ್ಲಿ ರಚಿತವಾಗಿವೆ. ಕನಕದಾಸರು ,”ಕವಿಗಳಲ್ಲಿ ದಾಸ, ದಾಸರಲ್ಲಿ ಕವಿ “ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾರೆ.

ಸಾಂಗತ್ಯ ಎಂದರೆ ಏನು ಎನ್ನುವದನ್ನು, ಸರಳವಾಗಿ ಡಾ.ಕರ್ಕಿಯವರು, ಸಾಂಗತ್ಯ ದ ಮೂಲ ಧಾತು ಸಂಗತಿ. ಒಂದು ಸಂಗತಿಯನ್ನು(incident) ನಿರೂಪಿಸುವದೇ ಸಾಂಗತ್ಯ ಎಂದು ಹೇಳುತ್ತ ಅದನ್ನೇ ಹಾಡಿನ ರೂಪದಲ್ಲಿ ಹೇಳುವುದೇ ಸಾಂಗತ್ಯ ಎಂದು, ಛಂದಸ್ಸಿನ ಪಾರಿಭಾಷಿಕ ಶಬ್ದದಲ್ಲಿ ಅದನ್ನು ‘ಹಾಡುಗಬ್ಬ’ ಎಂದು ಕರೆಯುತ್ತೇವೆ‌ ಎನ್ನುತ್ತ, ‘ಬೇಂದ್ರೆ’ಯವರ ಸಖೀಗೀತ​ ಸಂಕಲನದ ಈ ಕೆಳಗಿನ ಸಾಲುಗಳ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ತಂಗೀ ನೀನಿದಕೃತಿ ಮಾಡೆಂದಳಾ ಕಾವ್ಯ
ದಂಗ ನನಗ ಬಿರಿಸೆಂದೆ
ಸಂಗತಿ ಮಾಡಿದಳಮರಾಜೆ ನಾನದ
ನಂಗೀಕರಿಸಿ ಬರೆದನು.

ಅಂಶಗಣದಿಂದ ಮಾತ್ರಾಗಣಕ್ಕೆ ತೆರಳಿದ ಕಾವ್ಯ ಪ್ರಕಾರ ಸಾಂಗತ್ಯ. ಆದರೂ ಅದನ್ನು ಗುರುತಿಸುವುದು ಅಂದರೆ ಪ್ರಸ್ತಾರ ಹಾಕಿ ನೋಡುವುದು ಅಂಶಗಗಣಗಳ ಸೂತ್ರದಿಂದ​ಲೇ ! ಗಣವಿನ್ಯಾಸದಲ್ಲಿ ಅನೇಕ ಮಾರ್ಪಾಡುಗಳನ್ನು ಬೇರೆ ಬೇರೆ ಕವಿಗಳು ಕಾವ್ಯದ ಅಂದ ಹೆಚ್ಚಿಸಲೆಂದೋ ತಮ್ಮ ಪ್ರತಿಭೆ ಬೆಳಗಲೆಂದೋ ಮಾಡಿರುವ ವಿಚಾರಗಳು ಅತೀ ಅಕಾಡೆಮಿಕ್ ಆಗುವುದರಿಂದ ಅದನ್ನಿಲ್ಲಿ ವಿವರಿಸದೆ, ಗಣಗಳನ್ನು ಹಿಂದೆ ಮುಂದೆ ತರುವುದು, ಅಂಶಗಣದಿಂದ ಮಾತ್ರಾ ಗಣಕ್ಕೆ ಪರಿವರ್ತಿಸುವುದು ಹೀಗೆ; ಸಾಂಗತ್ಯ ಎನ್ನುವ ಹಾಡುಗಬ್ಬ, ಹೇಗೆ ರಸಿಕರ ಮನವನ್ನು ಸೂರೆಗೊಂಡಿತು ಎನ್ನುವ ಕೆಲ ಕವಿತೆಯ ತುಣುಕುಗಳನ್ನು ನೋಡುವುದು ಸಾಕು ಎನಿಸಿತು.

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣುಕಾಣದ ಗಾವಿಲರು.

ಸಂಚಿ ಹೊನ್ನಮ್ಮ
— ಹದಿಬದೆಯ ಧರ್ಮ.

ಇನ್ನೊಂದು ಮಾದರಿ:

ಧಾರೆಯನರೆದು ದಂಪತಿಗೆ ಕಂಕಣ ಕಟ್ಟಿ
ಪಾರಿಜಾತದ ಪುಷ್ಪ | ಮಳೆಗರೆಯೆ
ಮೂರ್ಲೋಕದೊಡೆಯ ತಾ ಲಾಜಹೋಮವ ಮಾಡೆ
ಕ್ಷೀರಾನ್ನವ ಸತಿ | ಸಹಿತಲುಂಡ.
–ನಾಡಪದಗಳಿಂದ

ಸಾಂಗತ್ಯವು ವರ್ಣನೆಗೆ ಹೇಳಿಮಾಡಿಸಿದ ಮಟ್ಟು. ವಿರಳವಿರಳವಾಗಿ ತರಳತರಳವಾಗಿ ಬಣ್ಣ,ಬೆಳಕು,ಬೆಡಗುಗಳನ್ನು ಸಾಂಗತ್ಯದ ಗತ್ತಿನಲ್ಲಿ ತೋರಿಸಿರುವ ಸಾಲುಗಳನ್ನು ಓದುವಾಗ ಉಂಟಾಗುವ ಅನುಭೂತಿ ಓದಿಯೇ ತಿಳಿಯುವಂತಹದ್ದು. ಕವಿ ಚಿಕ್ಕುಪಾದ್ಯಾಯ ರಚಿಸಿದ ‘ಶೃಂಗಾರ ಶತಕ ಸಾಂಗತ್ಯ’ ದ ನಾಲ್ಕು ಸಾಲು ಮಾದರಿಗಾಗಿ :

ಕುರುಳ ಬೆಡಂಗಿಯ ಕುಂಕುಮ ಗಂಧಿಯ
ಸರಸಯುತೆಯ ಸೌಖ್ಯವತಿಯ
ಎರಳಗಣ್ಣಿರೆಯಳ. ಎಳಮೆವೆತ್ತೆಸೆವಳ
ಪರಿಯ ಕೃಷ್ಣನೇ ಬಲ್ಲನೈಸೆ

ಸಾಂಗತ್ಯದಲ್ಲಿ ಬಹು ಪ್ರಸಿದ್ಧ ಕಾವ್ಯ ಎಂದರೆ ನಂಜುಂಡ ಕವಿಯ ಕುಮಾರ ರಾಮನ ಸಾಂಗತ್ಯ ೧೫೦೮ ರಲ್ಲಿ ಜೀವಿಸಿದ್ದ ಗಂಡುಗಲಿ ‌ಕುಮಾರರಾಮನ ಕತೆ, ಉತ್ತರರ್ನಾಟಕದಲ್ಲಿ ವೃತ್ತಿನಿರತ ಬಯಲಾಟ ತಂಡದವರು ‘ಗಂಡುಗಲಿ ಕುಮಾರರಾಮನ’ ಕಥೆ ಆಡುವುದನ್ನು ಅನೇಕಬಾರಿ ನೋಡಿದ್ದೇನೆ. ಶೃಂಗಾರ ಭರಿತ ಸಾಹಸಗಾಥೆ.ಇದೇ ಕವಿಯ ಭೈರವೇಶ್ವರ ಕಾವ್ಯವೂ ಅಷ್ಟೇ ಪ್ರಸಿದ್ಧಿ ಹೊಂದಿದೆ.

ರತ್ನಾಕರವರ್ಣಿಯ ‘ಭರತೇಶ ವೈಭವ ‘ ಸಾಂಗತ್ಯದಲ್ಲಿಯೇ ಮಹಾಕಾವ್ಯ ಎನಿಸಿಕೊಂಡಿದೆ. ಭರತೇಶ ವೈಭವದ ಭೋಗವಿಜಯ ಭಾಗದ,ಆಸ್ಥಾನ ಸಂಧಿಯ ೨ ನೆಯ ಪದ್ಯ ನೋಡಿ :

ಅಯ್ಯಯ್ಯ ಚೆನ್ನಾದುದನೆ ಕನ್ನಡಿಗರು
ರಯ್ಯಮಂ ಚಿದಿಯನೆ ತೆಲುಗಾ |
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೆಯ್ಯಬ್ಬಿ ಕೇಳಬೇಕಣ್ಣ ||

ಹದಿನಾಲ್ಕನೆಯ ಶತಮಾನದಲ್ಲಿ ಕಾಣದಿದ್ದ ಸಾಂಗತ್ಯ ೧೫, ೧೬, ೧೭, ೧೮ನೆಯ ಶತಮಾನಗಳಲ್ಲಿ ವಿಜೃಂಭಿಸಿತು. ಈ ಕಾಲಘಟ್ಟವನ್ನು’ ಸಾಂಗತ್ಯ ಯುಗ’ವೆಂದು ಗುರುತಿಸಲಾಗಿದೆ. ೧೯ನೆಯ ಶತಮಾನಕ್ಕೆ ಬರುವಾಗ ಇಳಿಮುಖಗೊಂಡಿತು.ಯಕ್ಷಗಾನಗಳಲ್ಲಿ ಸಾಂಗತ್ಯ ಪದಗಳನ್ನು ಅಲ್ಲಲ್ಲಿ ಕಾಣಬಹುದು.

ಅಧುನಿಕ ಕವಿಗಳಲ್ಲಿ,ಬೇಂದ್ರೆ ಯವರ ಹೆಸರನ್ನು ಈಗಾಗಲೇ ಸೂಚಿಸಲಾಗಿದೆ . ಉಳಿದವರು ಗಳಲ್ಲಿ ಪು.ತಿ.ನರಸಿಂಹಾಚಾರ, ಎಸ್.ವಿ.ಪರಮೇಶ್ವರ ಭಟ್ಟರು,ಡಿ.ಪದ್ಮನಾಭ ಶರ್ಮ ಕೆ.ಎಸ್.ನರಸಿಂಹ ಸ್ವಾಮಿ ಮುಂತಾದವರು ಸಾಂಗತ್ಯ ದಲ್ಲಿ ರಚನೆಗಳನ್ನು ಮಾಡಿರುವದನ್ನು ನೋಡಬಹುದು. ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಚಿರಪರಿಚಿತ ‘ಬಳೆಗಾರನ ಹಾಡು’ಕವಿತೆಯ ಈ ಸಾಲುಗಳು ನಿಮಗೆ ಮುದ ನೀಡಿಯಾವು :

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿಡುಗಣ್ಣು ನಿಲಿಸಿ.

ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ…

ತೀರ ಇಂದಿನ ಸಂದರ್ಭದಲ್ಲಿ ನೋಡುವಾಗ, ಸಾಂಗತ್ಯದ ಬಳಕೆ ಕಡಿಮೆಯಾಗಿದೆ .ಇದೊಂದು ಕೊರತೆ ಎನ್ನುವ ಕರ್ಕಿಯವರು ತ್ರಿಪದಿಯಂತೆ ಸಾಂಗತ್ಯವೂ ಕನ್ನಡದ ಜೀವಸ್ವರ. ನಮ್ಮ ಕವಿಗಳು ಈ ಜೀವಸ್ವರವನ್ನು ಉಳಿಸಿಯಾರು ಎನ್ನುವ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಜಾನಪದದಲ್ಲಿ ಸಾಂಗತ್ಯ ಬಳಕೆಯಾಗಿರುವ ಉದಾಹರಣೆ ಅಂಕಣದ ಮುಕ್ತಾಯಕ್ಕೆ ಸೊಗಸು ನೀಡೀತು :

ನೀರಿಗ್ಹೋಗೋ ಜಾಣಿ ನಿಲ್ಲು ನಾ ಬರತೀನಿ
ನಿನ್ನಾಣಿ ನಿನ್ನ ಕೊಡದಾಣಿ
ನಿನ್ನಾಣಿ ನಿನ್ನ ಕೊಡದಾಣಿ ಕೈಯಾನ
ಬಳಿಯಾಣಿ ನೀರ ಹೊಳಿಯಾಣಿ.
— ಗರತಿ ಹಾಡುಗಳು.