ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ – ೪

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)


ಸಮಯೋಚಿತ,ಸಂದರ್ಭೋಚಿತ,ಕಾಲೋಚಿತ ಪದಗಳನ್ನು ನಾವು ಕೇಳಿಯೇ ಇರತ್ತೇವೆ.ಸಮಯಕ್ಕೆ ಅನುಗುಣವಾಗಿ, , ಸಂದರ್ಭಕ್ಕನುಸಾರ,ಕಾಲಕ್ಕೆತಕ್ಕಂತೆ ಪದಪ್ರಯೋಗಗಳನ್ನು ನಾವು ನಮ್ಮ ಮಾತುಗಳಲ್ಲಿ,ನಮ್ಮಕಾವ್ಯ,ಕವನಗಳಲ್ಲಿ,ಕತೆ ಪ್ರಬಂಧಗಳಲ್ಲಿ,ಉಪನ್ಯಾಸ,ವಿಷಯ ಮಂಡನೆಗಳಲ್ಲಿ ಬಳಸುತ್ತೇವೆ.ಯಾಕೆನ್ನಿ;ನಮ್ಮ, ಮಾತಿನ, ಮತ್ತಿತರ ಸಂಗತಿಗಳ ಅಂದ ಹೆಚ್ಚಿಸಲು,ಒಪ್ಪ ಓರಣವಾಗಿಸಲು,
ಮೇಲೆ ಹೇಳಿದ ಮೂರೂ ಸಂಗತಿಗಳಿಗೆ ಸಾಮಾನ್ಯವಾದ ಒಂದು ಪದ ಇದೆ.’ಉಚಿತ’.ಹಾಗಾದರೆ ಯಾವುದೀ ಉಚಿತ.

ಮಗುವಿಗೆ, ತಾಯಿ ಮಗ್ಗುಲಾಗುವುದು,ಹೊಟ್ಟೆ ಸರಿಯುವುದು,ಕೂಡುವುದು,ಅಂಬೆಗಾಲಿಡುವುದು,ಏಳುವುದು,ನಡೆಯುವುದು, ನಗು,ಸಂಜ್ಞೆ, ಮಾತು ಇತ್ಯಾದಿ.ಕೊನೆಗೆ ಯಾವುದು ಸರಿ ಯಾವುದು ತಪ್ಪು ಎನ್ನುವದನ್ನು ತಿಳಿಸುತ್ತಾಳೆ. ಈ ಯಾವುದು ಸರಿ ಯಾವುದು ಸರಿ ಅಲ್ಲ ಎನ್ನವಿಕೆಯೇ ಉಚಿತ ಎಂದು ವಾಖ್ಯಾನಿಸಬಹುದು.ಈ ಉಚಿತವೇ ಸಾಹಿತ್ಯಕ್ಕೆ ಬಂದಾಗ ತೀ.ನಂ.ಶ್ರೀ ಯವರು ಹೇಳುವಂತೆ ಒಂದು ಕೃತಿಯನ್ನು ಕುರಿತು ,ಅದರ ಕಥಾವಸ್ತು ,ಪಾತ್ರಗಳು,ಶೈಲಿಯನ್ನು ಗಮನಿಸುವುದು ಇಂದಿನ ಸರ್ವೆಸಾಮಾನ್ಯ ವಿಮರ್ಶಾ ವಿಧಾನವಾಗಿದೆ.ರಸ ಮರೆಯವುದುಂಟು.ಅದು ನಮ್ಮ ಹಿಡಿತಕ್ಕೆ ಮೀರಿದ್ದು ಎಂದೋ ರಸದ ಬಗ್ಗೆ ಓದುಗ ಗಮನಿಸುವುದು ಅಷ್ಟರಲ್ಲೇ ಇದೆ ಎಂದೋ ಎನೋ ?ಆದರೆ ಅದಿಲ್ಲದೇ ಏನೂ ಇಲ್ಲ, ಕಾವ್ಯವೂ ಇಲ್ಲ. ಬೇಂದ್ರೆಯವರಂತೂ ರಸವೇ ಜೀವನ ಎಂದಿದ್ದಾರೆ.ಸಿಹಿ,ಕಹಿ,ಒಗರು,ಉಪ್ಪು ಖಾರ,ಹುಳಿ ಮುಂತಾದ ಷಡ್ರಸಗಳಿಲ್ಲದ ಊಟವೂ ಸಪ್ಪೆ !

ಒಂದು ಕಾವ್ಯ/ಕವಿತೆಗೆ, ರಸವೇ ಪ್ರಧಾನ.ಕಥೆ, ಪಾತ್ರ,ಶೈಲಿಗಳನ್ನು ಪ್ರತ್ಯೇಕವಾಗಿ ನೋಡುವಾಗ ಅವುಗಳಿಗೆ ಸ್ವಾತಂತ್ರ್ಯ ಇಲ್ಲ.ರಸವನ್ನು ದೃಷ್ಟಿಯಲ್ಲಿಟ್ಟುಕೊಂಡಾಗ ಇವು ಸತ್ವಶಾಲಿಗಳಾಗಬಲ್ಲವು. ಸಹೃದಯಿ ಅನುಭವಿಸುತ್ತಾನೆ ವಿಮರ್ಶಕ ಪರಿಶೀಲಿಸುತ್ತಾನೆ.ಕಾವ್ಯದ ಎಲ್ಲಾ ಸಂಗತಿಗಳಿಗೂ ಮತ್ತು ರಸಸ್ವಾದನೆಯ ಮಧ್ಯೆ ಹೊಂದಾಣಿಕೆ ನಿರ್ಮಿಸುವದೇ ನಾವು ಉಚಿತ ಎಂದು ಕರೆಯುವ ಔಚಿತ್ಯ.ಕಾವ್ಯದ ಪ್ರಮುಖ ಅಂಗಗಳಾದ ಅಲಂಕಾರ, ಗುಣ, ರೀತಿ, ಧ್ವನಿ, ರಸ ಇವುಗಳನ್ನು ಹೇಗೆ ಉಚಿತವಾಗಿ ಬಳಸಿಕೊಳ್ಳಬೇಕು,ಕಾವ್ಯದ ಯಾವ ಸಂದರ್ಭದಲ್ಲಿ ಯಾವ ವಿಷಯಗಳಿಗೆ ಪ್ರಾಮುಖ್ಯತೆ ದೊರೆಯುತ್ತದೆ,ಯಾವುದು ಉಚಿತ ಯಾವುದು ಅನುಚಿತ ಎಂಬ ಪರಿಜ್ಞಾನ ನೀಡುವುದೇ ಔಚಿತ್ಯ. ಭರತಮುನಿಯಿಂದ ಹಿಡಿದು, ದಂಡಿ,ಭಾಮಹ, ಅಭಿನವಗುಪ್ತ,ರುದ್ರಭಟ್ಟ, ಕುಂತಕ ಆನಂದವರ್ಧನ ಮೊದಲಾದ ಎಲ್ಲಾ ಮೀಮಾಂಸಕಾರರು ಔಚಿತ್ಯ ದ ಬಗ್ಗೆ ಉಲ್ಲೇಖಿಸಿದ್ದರೂ ವಿವರವಾಗಿ ಬರೆದವನು ಕ್ಷೇಮೇಂದ್ರ.ಅವನ ‘ ಔಚಿತ್ಯ ವಿಚಾರ ಚರ್ಚಾ ‘ ಕೃತಿಯ ಮೂಲಕ ಔಚಿತ್ಯಕ್ಕೆ ಮೀಮಾಂಸೆಯಲ್ಲಿ ಒಂದು ಸಿದ್ದಾಂತದ ಸ್ಥಾನ ಕಲ್ಪಿಸಿದ.ಪದೌಚಿತ್ಯ,ಸಂದರ್ಭ ಔಚಿತ್ಯರಸೌಚಿತ್ಯ ಮೊದಲಾದ೨೭,ಔಚಿತ್ಯಗಳ ವಿವರಣೆ ಸಿಗುತ್ತದೆ. ಅವನ ಕೃತಿಯಲ್ಲಿ ಸಿಗುತ್ತದೆ. ಸಂಸ್ಕೃತ ಕನ್ನಡ ಕಾವ್ಯಗಳಲ್ಲಿ ಔಚಿತ್ತ್ಯದ ಸೊಬಗನ್ನು ಕಾಣಬಹುದಾಗಿದೆ ಕ್ಷೇಮೇಂದ್ರನ ಸಿದ್ದಾಂತದನ್ವಯ ಕಾವ್ಯಶರೀರಕ್ಕೆ ಪದ, ವಾಕ್ಯ, ಪ್ರಬಂಧಾರ್ಥ, ಗುಣ, ಅಲಂಕಾರ, ರಸ, ಕ್ರಿಯಾಪದ, ಕಾರಕ, ಲಿಂಗ, ವಚನ, ವಿಶೇಷಣ, ಉಪಸರ್ಗ, ನಿಪಾತ, ಕಾಲ, ದೇಶ, ಕುಲ, ವ್ರತ, ತತ್ತ್ವ, ಸತ್ವ, ಅಭಿಪ್ರಾಯ, ಸ್ವಭಾವ, ಸಾರಸಂಗ್ರಹ, ಪ್ರತಿಭೆ, ಅವಸ್ಥೆ, ವಿಚಾರ, ಹೆಸರು, ಅಶಂಸನೆ. ಈ ಎಲ್ಲ ಕಾವ್ಯಾಂಗಗಳಲ್ಲಿ ವ್ಯಾಪ್ತಿಯಾದ, ಜೀವಾಳವೇ ಔಚಿತ್ಯ.


ಕವಿತೆ ಬರಹಗಳನ್ನು ಅಂದಗೊಳಿಸಬೇಕೆಂದು ಕೆಲವು ಬಾರಿ ಅನೌಚಿತ ಪದಗಳ ಬಳಕೆಯಾಗಿರುವುದು ಕಾಣುತ್ತೇವೆ.ಪದೌಚಿತ್ಯ ಹೇಗೆ ಕವಿತೆಯ ಜೀವಾಳ ಎನ್ನುವದಕ್ಕೆ ನಮಗೆ ಬೇಂದ್ರೆ ಗಿಂತ ಉತ್ತಮ ಉದಾ ಹರಣೆ ಯಾಕೆ ಬೇಕು ?ಉಚಿತ ಪದಗಳ ಆಯ್ಕೆ ಮತ್ತು ಅವುಗಳೊಂದಿಗೆ ಆಟವಾಡುವದನ್ನು ನಾವು ಅವರಿಂದ ಕಲಿಯಬೇಕು

ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ
ಕಾಲಾಗ ಸುಳೀತಿತ್ತ
ಎರಗಿ ಹಿಂದಕ್ಕುಳಿತಿತ್ತ.

ನಿಧಾನವಾಗಿನೋಡಿ.ಪ್ರತಿ ಪದ ಹೇಗೆ, ಉಚಿತವಾಗಿ ಬಳಕೆಯಾಗಿದೆ.ಬರೀ ಮೇಲಿನ ಸಾಲುಗಳು ಮಾತ್ರವೇ ಅಲ್ಲ ಅವರ ‘ರಾಗರತಿ’ ಕವಿತೆಯ ಪ್ರತಿ ಪದವೂ ಔಚಿತ್ಯ ದಿಂದ ತುಂಬಿದೆ.

ಮುಗಿಲ ಮಾರಿಗೆs ರಾಗರತಿ ನಂಜ ಏರಿತ್ಯs
ಆಗ ಸಂಜೆಯಾಗಿತ್ತs.

ಕಾಮಿ,ಸುಳಿ,ಎರಗಿ ಪದಗಳನ್ನು ಗಮನಿಸಿ !
ನಮ್ಮ ದೈನಂದಿನ ಜೀವನದಲ್ಲಿಯೂ ನಾವು ಬಳಸುವ ಸಂಗತಿಗಳೂ ಉಚಿತಾನುಚಿತ ಉದಾಹರಣೆಗಳನ್ನು ಒಳಗೊಂಡಿರುತ್ತವೆ. ನಮ್ಮ ಚಲನ ಚಿತ್ರ ಗಳನ್ನೇ ತೆಗೆದುಕೊಳ್ಳಿ ಗಂಭೀರ, ವೀರ ರಸದಿಂದ ಏಕ್ದಂ ಶೃಂಗಾರ ರಸಕ್ಕೆ ಹೋಗಿಬಿಡುತ್ತದೆ. ಗಂಭೀರವಾಗಿ ಸಾಗುತ್ತಿರುವ ಕಥಾವಸ್ತುವಿನ ನಡುವೆ ಹಠಾತ್ತಾಗಿ ನಾಯಕ ನಾಯಕಿಯರ ಹಾಡು ಕುಣಿತ ಆರಂಭವಾಗಿಬಿಡುತ್ತದೆ ರಸಾಭಾಸ ! ರಸ-ವಿರಸ ಯಾರಿಗೆ ಬೇಕು ? ತಮ್ಮ ನೆಚ್ಚಿನ ನಟ ಸ್ಟೆಪ್ ಹಾಕುವುದು ಬೇಕು!! .ಮನೋರಂಜನೆಗೆ ಪ್ರಾಧಾನ್ಯ
.ಯಾವುದೇ ಕೃತಿಯಲ್ಲಿ ಕಥಾವಸ್ತು, ಪಾತ್ರಗಳು, ಶೈಲಿ, ಸನ್ನಿವೇಶ ರಚನೆ, ಭಾಷೆ ಎಲ್ಲಾ ಅಂಗಗಳೂ ರಸಕ್ಕೆ ಅಧೀನವಾಗಿಯೇ ಬರಬೇಕು.ಈ ಅಂಗಗಳು ರಸಕ್ಕೆ ಅನುಗುಣವಾಗಿ ಬಂದಾಗ ಅದು ಉಚಿತವೆನಿಸುತ್ತದೆ. ಅದರ ಬದಲಾಗಿ ಈ ಅಂಗಗಳು ರಸಕ್ಕೆ ಹೊಂದಿಕೆಯಾಗದೇ ಹೋದಾಗ ಅನುಚಿತವೆನಿಸುತ್ತದೆ. ಹೀಗೆ ಕಾವ್ಯ-ನಾಟಕಗಳ ಸಮಗ್ರ ಅಂಗಗಳು ರಸಕ್ಕೆ ಅನುಗುಣವಾಗಿ ಬಂದಿದೆಯೇ ಇಲ್ಲವೇ ಎಂಬ ಪರಿಶೀಲನೆಯೇ “ಔಚಿತ್ಯ ತತ್ವ”.
ಯಾವುದೇ ಸಾಹಿತ್ತಿಕ ಸಂಗತಿಯಲ್ಲಿ ಬರಹಗಾರ/ಕವಿ/ನಾಟಕಕಾರ ತನ್ನ ಪ್ರತಿಭೆಯ ಮೂಲಕ ರಸಸ್ವಾದನೆಯನ್ನು ಸಹೃದಯರಲ್ಲಿ ಮೂಡಿಸಲು ಮೀಮಾಂಸೆಯ ಎಲ್ಲ ಪರಿಕರಗಳನ್ನು ಬಳಸಿಕೊಂಡಿರುತ್ತಾನೆ.ಆದರೂ ಒಂದು ವೇಳೆ ರಸಭಂಗ ಎಂದರೆ ಓದುಗ/ವಿಮರ್ಶಕ ರನ್ನು ಆಕರ್ಷಿಸುವಲ್ಲಿ ಕೊರತೆ ಉಂಟಾಗಿದ್ದರೆ ಅದಕ್ಕೆ ಅನೌಚಿತ್ಯವೇ ಕಾರಣವಿರಬೇಕು.

ಅನೌಚಿತ್ಯಾದೃತೇನಾನ್ಯದ್ರಸಭಂಗಸ್ಯ ಕಾರಣಂ|
ಪ್ರಸಿದ್ಧೌಚಿತ್ಯ ಬಂಧಸ್ತು ರಸಸ್ಯೋಪನಿಷತ್ ಪರಾ ||

{ಅನೌಚಿತ್ಯವನ್ನು ಬಿಟ್ಟರೆ, ರಸಭಂಗಕ್ಕೆ,ಬೇರೆ ಕಾರಣವಿಲ್ಲ.ಲೋಕಶಾಸ್ತ್ರಗಳಲ್ಲಿ ಪ್ರಸಿದ್ದವಾಗಿರಯವ ಔಚಿತ್ಯವನ್ನರಿತು ಅಂಗಗಳನ್ನು ಅಳವಡಿದುವದೇ ರಸದ ಪರಮ ರಹಸ್ಯ }.

ಕಾಲೋಚಿತ ಎಂದರೆ ಆಯಾ ಕಾಲಕ್ಕೆ ತಕ್ಕಂತೆ ಬೆಳೆದು ಬಂದ ಪ್ರಕಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವ್ಯಕ್ತ ಗೊಳಿಸುವ ಕ್ತಿಯೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳುವುದೇ ಸರಿಯಾದದ್ದು ಎಂದು ಹೇಳಬೇಕಾಗಿಲ್ಲ.ಸಾಹಿತ್ಯ ನಡೆದು ಬಂದ ದಾರಿ ನೋಡುವಾಗ ಎಲ್ಲಾ ಪ್ರಸಿದ್ಧ ಕವಿಗಳು ಕಾದಂಬರಿಕಾರರು,ನಾಟಕಕಾರರು, ಕಾಲಮಾನದ ಚೌಕಟ್ಟಿನಲ್ಲಿ ರಚನೆ ಮಾಡಿದ್ದರಿಂದಲೇ ಇಂದು ಅನುಪವಾದ ಸಾಹಿತ್ಯ ಸಿರಿ ಕನ್ನಡ ನುಡಿಗೆ ದಕ್ಕಿದೆ.

ಕೊನೆಯದಾಗಿ ಒಂದು ಮಾತು. ಈ ಮೀಮಾಂಸೆಯ ಮಾತು ಹೇಳುವಾಗ ಖ್ಯಾತ ವಿಜ್ಞಾನಿ ನ್ಯೂಟನ್ ಹೇಳಿದಂತೆ, ನಾನೂ ಬಾಲಕ. ನನ್ನ ಮುಂದೆ ಸಾಹಿತ್ಯದ ಅಪಾರ ಸಾಗರವಿದೆ.ನನ್ನ ಬೊಗಸೆಗೆ ದಕ್ಕಿದ್ದನ್ನೇ ನಿಮ್ಮ ಮುಂದೆ ಇರಿಸಿದ್ದೇನೆ.ತಪ್ಪು ಒಪ್ಪುಗಳಿಗೆ ಸ್ವಾಗತ.