ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೃಪತುಂಗ ಶಾಲೆಯ ಉಡಪಾಚಾರ್

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಮಾಸಿಲ್ಲ ನೆನಪುಗಳು
ಉರುಳಿದರೂ
ವರ್ಷಗಳಾಗಿ ಮಾಸ
ಮಾಸದ ಚಿತ್ತ ಭಿತ್ತಿಯಲ್ಲಿ
ಎಲ್ಲವೂ ಹಸಿರು

ನೆತ್ತಿಯಲಿ ತುಂಬಿದ್ದು ಹತ್ತು
ದಿಕ್ಕುಗಳಿಗೂ
ಪಸರಿಸಿದೆ!
ನೀವು ಹೊತ್ತಿಸಿದ ದೀಪ
ಉರಿಯುತಿದೆ ಇನ್ನೂ
ಚೆಲ್ಲುತಿದೆ ಬೆಳಕ
ನಡೆವ ದಾರಿಯಲಿ!

ನಮ್ಮ ಚೇತನಗಳನೆಬ್ಬಿಸುವ
ಕೈಂಕರ್ಯದಲಿ
ನಿಮಗೆ ಸುಷುಪ್ತಿಯಲೂ
ಕಟ್ಟೆಚ್ಚರ!

ಆಗಸದ ರವಿಕಿರಣಗಳ ಜೊತೆ ನಿಮ್ಮ ಪೈಪೋಟಿ
ನಿಮಗೆ ನೀವೇ ಸಾಟಿ!
ಚಳಿಯೆನ್ನದೆ ಮಳೆಯೆನ್ನದೆ ಅಳೆಯುತಿದ್ದಿರಿ
ಶಹರಿನ ರಸ್ತೆಯ ಉದ್ದಗಲಗಳ
ಚುಮು ಚುಮು ನಸುಕಿನ
ಹೊತ್ತಿನಲಿ

ಹೊತ್ತಿಗೆಗಳ ಜೊತೆ ಸಂಧಿ
ಮಾಡಿಸುತ್ತಿದ್ದಿರಿ
ಇಂದು ಯಾವ ಶಿಷ್ಯನ ಕದವ ತಟ್ಟಲಿ ಬೇಕು?
ಜಾಡ್ಯದ ಹೊದಿಕೆಯ ತೆರೆದು ಎಸೆಯಲಿ ಬೇಕು?
ಎಂದು ಹಾಕುತ್ತಿದ್ದಿರಿ ಲೆಕ್ಕಾಚಾರ

ಮಕ್ಕಳ ಮೇಲೆ ನಿಮ್ಮ ಮಮತೆ ಅಪಾರ!
ಬೆಳಗಿದಿರಿ
ಒಲವ ದೀವಿಗೆಯ
ಸಾಲ ಪ್ರಣತಿಗಳ

ದೂಡಿದಿರಿ ಕವಿದ ತಮವ
ಹರಡಿತೆಲ್ಲೆಡೆ ಬೆಳಕು
ಎಂದೂ ಕುಂದದ ನಂದದ ಬೆಳಕು!

ಕಳೆದ ವಾರದ ಅಂಕಣದಲ್ಲಿ ನೃಪತುಂಗ ಶಾಲೆಯ ಬಗ್ಗೆ ಮತ್ತು ಅದರ ಏಳಿಗೆಗೆ ಕಾರಕರಾದ ದಿ. ಉಡಪಾಚಾರ್ ಹಾಗೂ ಅವರ ನಿಷ್ಠಾವಂತ ಅಧ್ಯಾಪಕ ತಂಡದ ವಿಷಯವಾಗಿ ಮತ್ತಷ್ಟು ಸಂಗತಿಗಳನ್ನು ಹಂಚಿಕೊಳ್ಳುವ ಬಯಕೆಯನ್ನು ನಿಮ್ಮ ಮುಂದೆ ವ್ಯಕ್ತಪಡೆಸಿದ್ದೆ. ಅದಕ್ಕೆ ಪೂರ್ವಭಾವಿಯಾಗಿ ಪೂಜ್ಯ ಗುರು ವೃಂದಕ್ಕೆ ‘ ನುಡಿ ನಮನ’ ಸಲ್ಲಿಸುವ ಪ್ರಯತ್ನ ಇಲ್ಲಿ ಮಾಡಿದ್ದೇನೆ.

ಬೆಳಕು ಹರಿಯುವ ಮುನ್ನ ನಸುಕಿನ ಸಮಯದಲಿ ಎದ್ದು, ಮೊದಲು ತಮ್ಮ ಮನೆಯಲ್ಲಿ ಮಲಗಿರುವ ವಿದ್ಯಾರ್ಥಿಗಳನ್ನು ಓದಲು ಎಬ್ಬಿಸುತ್ತಿದ್ದರು ( ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾರದ ಕೆಲವರು ಪಾಲಕರು ಅವರನ್ನು ದಿ. ಉಡಪಾಚಾರರ ಮನೆಯಲ್ಲಿ ವಾಸ ಮಾಡಿ ಅಭ್ಯಾಸ ಮಾಡಲು ಇಡುತ್ತಿದ್ದರು. ಅವರಲ್ಲಿ ಈಗ ಎಷ್ಟೋ ಜನ ಬಾಳಿನಲ್ಲಿ ಯಶವನ್ನು ಸಾಧಿಸಿ ಈಗಲೂ ಉಡಪಾಚಾರ ಅವರನ್ನು ಸ್ಮರಿಸುತ್ತಾರೆ)

ಆಮೇಲೆ, ಒಂದೊಂದು ದಿನ ಒಂದೊಂದು ಶಹರಿನ ಭಾಗವನ್ನು ಆಯ್ಕೆ ಮಾಡಿ ಅಲ್ಲಿರುವ ವಿದ್ಯಾರ್ಥಿಗಳನ್ನು ಓದಲು ಎಬ್ಬಿಸುತ್ತಿದ್ದರು. ಮಲಗಿಕೊಂಡ ವಿದ್ಯಾರ್ಥಿಗಳನ್ನು ಎಚ್ಚರಿಸಲು ಕೆಲವೊಮ್ಮೆ ಅವರ ಮುಖದ ಮೇಲೆ ನೀರು ಚಿಮುಕಿಸುತ್ತಿದ್ದರು. ವಿದ್ಯಾರ್ಥಿಗಳ ಸ್ವಂತ ತಂದೆ ತಾಯಂದಿರಿಗೆ ಇರದ ಕಾಳಜಿ ಉಡಪಾಚಾರರಿಗೆ ಇರುತ್ತಿದ್ದುದು ಗಮನಾರ್ಹವಾದ ಸಂಗತಿ.

ಅವರು ಎಲ್ಲರ ಮನೆಗೆ ಹೆಚ್ಚು ಕಮ್ಮಿ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು. ಪ್ರತಿಕೂಲ ವಾತಾವರಣವಿದ್ದರೂ, ಬಿಟ್ಟೂ ಬಿಡದೆ ಈ ಪರಿಪಾಠವನ್ನು ತಮಗಾಗಿ ಹಾಕಿಕೊಂಡಿದ್ದರು.

ಅಪ್ಪಟ ಗಾಂಧೀವಾದಿ, ನೃಪತುಂಗ ಶಾಲೆಯನ್ನು ಸೇರಿದ ಸ್ವಲ್ಪ ದಿನಗಳಲ್ಲಿ ಅವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ, ತಮ್ಮನ್ನು ತಾವು ದೇಶದ ಸ್ವಾತಂತ್ರ್ಯಕ್ಕಾಗಿ ಸಮರ್ಪಿಸಿಕೊಂಡದ್ದಲ್ಲದೆ , ನಿಜಾಮನ ಆಡಳಿತದಿಂದ ಹೈದೆರಾಬಾದ್ ವಿಮೋಚನೆಗಾಗಿಯೂ ಹೋರಾಟ ಮಾಡಿದರು. ೧೭ ಸೆಪ್ಟೆಂಬರ್ ೧೯೪೮ ರಲ್ಲಿ ಹೈದೆರಾಬಾದ್ ನಿಜಾಮನ ಆಡಳಿತದಿಂದ ವಿಮೋಚನೆಗೊಂಡ ನಂತರ ಮತ್ತೆ ತಮ್ಮ ನೆಚ್ಚಿನ ಕಲಿಸುವ ವೃತ್ತಿಯನ್ನು ಕೈಕೊಳ್ಳಲು ನೃಪತುಂಗ ಶಾಲೆಗೆ ವಾಪಸಾದರು. ಜುಲೈ ೧ ೧೯೫೫ ರಂದು ಮುಖ್ಯೋಪಾಧ್ಯಾಯರಾಗಿ ಶಾಲೆಯ ಸಾರಥ್ಯವನ್ನು ವಹಿಸಿದರು.

ಶ್ರೀಯುತ ಉಡಪಾಚಾರ ಅವರು ಭಾರತದ ಆಗಿನ ಅಧ್ಯಕ್ಷರಾದ ಶ್ರೀ ವಿ.ವಿ. ಗಿರಿ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವದು
ಭಾರತ ಸರ್ಕಾರ ( ಶಿಕ್ಷಣ ಮಂತ್ರಾಲಯ) ಶ್ರೀಯುತ ಉಡಪಾಚಾರ ಅವರಿಗೆ ಇತ್ತು ಗೌರವಿಸಿದ ಪ್ರಶಸ್ತಿ ಪತ್ರ
ದಿ. ಉಡಪಾಚಾರ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿಗಳ ಪದಕ

ದಿ.ಉಡಪಾಚಾರರ ನೇತೃತ್ವದಲ್ಲಿ , ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಬದ್ಧರಾದ ಅಧ್ಯಾಪಕರ ತಂಡ ಸನ್ನದ್ಧವಾಗಿ ನಿಂತಿತ್ತು. ದಿ.ಉಡಪಾಚಾರರು ಹಾಗೂ ನಮಗೆ ಪಾಠ ಹೇಳಿಕೊಟ್ಟ ಎಲ್ಲರನ್ನು ಸ್ಮರಿಸಿದಾಗ ಹೃದಯ ತುಂಬಿ ಬರುತ್ತದೆ. ಅವರೆಲ್ಲರೂ ನಮಗೆ ಇತ್ತ ನಿರ್ವ್ಯಾಜವಾದ ಪ್ರೀತಿಯನ್ನು ನೆನೆದಾಗ ಮನಸು ಕೃತಜ್ಞತಾ ಭಾವದಿಂದ ಭರಿತವಾಗುತ್ತದೆ. ಅವರಲ್ಲಿ ಕೆಲವರ ಹೆಸರನ್ನು ಇಲ್ಲಿ ಸ್ಮರಿಸಲು ಇಚ್ಛಿಸುತ್ತೇನೆ.

ರಾಸಾಯನ ಶಾಸ್ತ್ರವನ್ನು ಕಲಿಸಿದ ಶ್ರೀಯುತ ವೆಂಕೋಬ ರಾವ್, ಗಣಿತ ಶಾಸ್ತ್ರದ ಅಧ್ಯಾಪಕರುಗಳಾದ ಶ್ರೀಮತಿ ಸೋನು ಮೋಹನ್ ದಾಸ್ ಮತ್ತು ಶ್ರೀ ಗೋಪಾಲ ರಾವ್ ಕಂಪ್ಲಿ, ಶಾಮ್ ರಾವ್ ಮಾಸ್ತರ್, ಜೈವಿಕ ಶಾಸ್ತ್ರದ ಸುಬ್ರಮಣ್ಯಮ್ ಅವರು, ಹಿಂದಿ ಕಲಿಸಿದ ಗೋವಿಂದಾಚಾರರು, ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿ ಒಳ್ಳೆಯ ಬುನಾದಿ ಹಾಕಿಕೊಟ್ಟ ತಿರುಮಲ ರಾವ್ ಅವರು, ಇಂಗ್ಲಿಷ್ ವಿಷಯ ಹೇಳಿಕೊಟ್ಟ ಜಾನ್ ಕೃಷ್ಣಪ್ಪ, ಚಳಗೇರಿ ಸರ್ , ಫಿಸಿಕ್ಸ್ ಹೇಳಿಕೊಟ್ಟ ಶ್ರೀಮತಿ ರಮಾಕುಮಾರಿ, ಸಸ್ಯ ಶಾಸ್ತ್ರ( ಬಾಟನಿ) ಯ ಶ್ರೀಮತಿ ಪದ್ಮಾ, ಸಾಮಾಜಿಕ ಶಾಸ್ತ್ರದ ಶ್ರೀಮತಿ ಎಲ್ .ಕಪಿಲಾ ಮೇಡಂ, ಹೀಗೆ ಅನೇಕರು ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಇನ್ನೂ ಇಲ್ಲಿ ಹೆಸರಿಸದ ಅನೇಕರು ತಮ್ಮ ಒಲವಿನ ಧಾರೆಯನ್ನು ವಿದ್ಯೆಯ ಜೊತೆಗೆ ಬೆರೆಸಿ ನಮಗೆ ಉಣಬಡಿಸಿ ಪೋಷಿಸಿದ್ದಾರೆ.

ನಮ್ಮ ವ್ಯಕ್ತಿತ್ವವನ್ನು ರೂಪಿಸುವದರಲ್ಲಿ ದಿ. ಉಡಪಾಚಾರರ ಮತ್ತು ಅವರೆಲ್ಲರ ಪಾತ್ರ ಮಹತ್ತರವಾದದ್ದು.
ಶ್ರದ್ಧೆ -ನಿಷ್ಠೆಗಳಿಂದ ಹಾಗೂ ದಕ್ಷತೆಯಿಂದ, ಪ್ರತಿಭಾವಂತ ಅಧ್ಯಾಪಕ ತಂಡದ ಬೆಂಬಲದಿಂದ ಶ್ರೀಯುತ ಉಡಪಾಚಾರರು ಶಾಲೆಯ ಪುರೋಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತರು.

ಅವರ ಅವಿರತವಾದ ಶ್ರಮದಿಂದ ೬೦ ರ ದಶಕದಲ್ಲಿ ಶಾಲೆ ಉಛ್ರಾಯ ಸ್ಥಿತಿಯ ಉತ್ತುಂಗಕ್ಕೆ ಏರಿತು. ಫಲಿತಾಂಶಗಳು ಶೇಕಡಾ ನೂರಕ್ಕೆ ನೂರು ಇರುತ್ತಿದ್ದುದಲ್ಲದೆ ಪ್ರಥಮ ೧೦ ರ‍್ಯಾಂಕುಗಳಲ್ಲಿ ನೃಪತುಂಗ ಶಾಲೆಗೆ ಸಿಂಹಪಾಲು ಇರುತ್ತಿತ್ತು. ಹೈದರಾಬಾದ್ -ಸಿಕಂದರಾಬಾದ್ ಅವಳಿ ನಗರಗಳಲ್ಲಿ ಹೆಸರು ಮಾಡಿದ ನೃಪತುಂಗದ ಬೇಡಿಕೆ ಹೆಚ್ಚಾಗಿ ಪ್ರಮುಖ ಮಿಷನರಿ ಶಾಲೆಗಳಿಂದಲೂ ವಿದ್ಯಾರ್ಥಿಗಳು ನಮ್ಮ ಶಾಲೆಯನ್ನು ಸೇರ ತೊಡಗಿದರು.

ಶಹರಿನ ಅನೇಕ ಗಣ್ಯರ ವಲಯ – ವಿಶ್ವ ವಿದ್ಯಾಲಯದ ಪ್ರಾಚಾರ್ಯರು, ವೈದ್ಯರು ಮತ್ತು ಸಮಾಜದ ಎಲ್ಲ ಪ್ರಮುಖರ ಜೊತೆ ಸಂಪರ್ಕ ಹೊಂದಿದ್ದ ಉಡುಪಾಚಾರರು ಇವರೆಲ್ಲರ ಸೇವೆಯನ್ನು ಶಾಲೆಯ ಮಕ್ಕಳಿಗಾಗಿ ಬಳಸಿಕೊಳ್ಳುತ್ತಿದ್ದರು. ಕಾಲೇಜು ಮತ್ತು ವಿಶ್ವವಿದ್ಯಾಲಯದ ಪ್ರೊಫೆಸರ್ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಜರಗುತ್ತಿದ್ದವು. ಇಂತಹ ಉಪನ್ಯಾಸ ಮಾಲಿಕೆಯೊಂದರ ಅಡಿಯಲ್ಲಿ ಹಿರಿಯರಾದ ರಾಘವೇಂದ್ರ ಮಾನ್ವಿ ಅವರು ನಮ್ಮ ಶಾಲೆಗೆ ಆಗಮಿಸಿ ’ಮ್ಯಾಥಿವ್ ರ‍್ನಾಲ್ಡ್ ಅವರ ‘ ರೆಕ್ವಿಸಕ್ಯಾಟ್ ‘ ಕವಿತೆಯ ಪಾಠ ಮಾಡಿದ ನೆನಪು ಇನ್ನೂ ಹಸಿಯಾಗಿದೆ.
(ರಾಘವೇಂದ್ರ ಮಾನ್ವಿ ಅವರು ನೃಪತುಂಗ ಶಾಲೆಯ ಹಳೆಯ ವಿದ್ಯಾರ್ಥಿ ; ನನಗಿಂತ ಬಹಳ ವರ್ಷಗಳು ಸೀನಿಯರ್. )

ಹೀಗೆ ವಿವಿಧ ರೀತಿಗಳಿಂದ ಶಾಲೆಯ ಸ್ತರವನ್ನು ಗೌರೀಶಂಕರ ಶಿಖರಕ್ಕೆ ಕೊಂಡೊಯ್ದ ಶ್ರೀಯತ ಉಡಪಾಚಾರರಿಗೆ, ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ೧೯೬೯ ರಲ್ಲಿ ಭಾರತ ಸರ್ಕಾರ
‘ ರಾಷ್ಟ್ರಾಧ್ಯಕ್ಷ ಪ್ರಶಸ್ತಿ – ಪ್ರೆಸಿಡೆಂಟ್ಸ್ ಅವಾರ್ಡ್ , ರಾಷ್ಟ್ರೀಯ ಸನ್ಮಾನವನ್ನು ಇತ್ತು ಗೌರವಿಸಿತು. ಅಲ್ಲದೇ, ಅದೇ ವರ್ಷ ಆಂಧ್ರ ಪ್ರದೇಶ ಸರ್ಕಾರ ಅವರನ್ನು ನ್ಯಾಶನಲ್ ಕೌನ್ಸಿಲಾಫ್ ಎಜುಕೇಶನಲ್ ರಿಸರ್ಚ್ ಎಂಡ್ ಟ್ರೇನಿಂಗ್ ( ಎನ್ ಸಿ ಇ ಆರ್ ಟಿ) ಸದಸ್ಯರನ್ನಾಗಿ ನೇಮಕ ಮಾಡಿತು.

ಕನ್ನಡಿಗರಿಗೆ ಗರ್ವಕಾರಕವಾದ ಎರಡು ಸಂಸ್ಥೆಗಳಲ್ಲಿ ಒಂದಾದ ನೃಪತುಂಗ ಶಾಲೆಯಲ್ಲಿ ಆಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಬಹಳಷ್ಟು ಮಹತ್ವ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಷೆಯನ್ನು ಮೂಡಿಸಲು ಅವರಿಂದಲೇ ಪ್ರಯೋಗಗಳನ್ನು ಮಾಡಿಸಿ ಪ್ರೋತ್ಸಾಹಿಸಲಾಗುತ್ತಿತ್ತು. ನಮ್ಮ ಶಾಲೆಯ ಲ್ಯಾಬ್ ಗಳು ಉತ್ತಮ ಗುಣಮಟ್ಟದ್ದಾಗಿದ್ದು, ಮೆಡಿಕಲ್ ಕಾಲೇಜಿನ ಮೊದಲನೇ ವರ್ಷದಲ್ಲಿ ಕಲಿಯಬೇಕಾದ್ದನ್ನು ಶಾಲೆಯಲ್ಲಿಯೇ ಕಲಿತ ವಿಷಯ ಮೆಡಿಸಿನ್ ಕೋರ್ಸ ಮಾಡಿದ ನನ್ನ ಸಹಪಾಠಿಗಳಿಂದ ತಿಳಿದು ಬಂದಿತು.

ಎಡದಿಂದ ಬಲಕ್ಕೆ, ಗೋಸಲ್ ರಾವ್ ಮಾಸ್ತರ( ಶಾಲೆಯಲ್ಲಿ ನಡೆಯುವ ಪರೀಕ್ಷೆಗಳನ್ನು ಬಹಳ ದಕ್ಷವಾಗಿ ನಡೆಸುತ್ತಿದ್ದರು, examination branch- ಪರೀಕ್ಷಾ ಗೃಹದ ಉಸ್ತುವಾರಿ ಇವರದು), ಸುಬ್ರಹ್ಮಣ್ಯಂ ಸರ್, ನಮಗೆ ಜೈವಿಕ ಶಾಸ್ತ್ರ ( zoology) ಹೇಳಿಕೊಟ್ಟ ಗುರುಗಳು. ಹನ್ನೆರಡನೆಯ ತರಗತಿಯಲ್ಲೇ frog dissection ಬಗ್ಗೆ ಬಹಳ ಮುತುವರ್ಜಿಯಿಂದ ಹೇಳಿಕೊಡುತ್ತಿದ್ದರು. ನಮ್ಮ ಜೈವಿಕ ಶಾಸ್ತ್ರದ ಪ್ರಯೋಗಶಾಲೆ ಉತ್ತಮ ಮಟ್ಟದ್ದಾಗಿತ್ತು. ಅವರ ಪಕ್ಕದಲ್ಲಿ ದಿ. ಪೂಜ್ಯ ಉಡಪಾಚಾರರು🙏

‘ ಗ್ಯಾದರಿಂಗ್’ ಎಂದರೆ ನಮ್ಮ ಶಾಲಾ ದಿನ. ಈ ದಿನ ಬಂತೆಂದರೆ ಶಾಲೆಯನ್ನು ಮದುವಣಗಿತ್ತಯಂತೆ ಸಿಂಗರಿಸಲಾಗುತ್ತಿತ್ತು. ಹಿರಿಯರಾದ ಚಿಂತಾಮಣಿ ಮಾಸ್ತರ್, ಗೋಸಲ್ ರಾವ್ ಸರ್, ಏ .ಕೆ .ತಿರುಮಲ್ ರಾವ್ ಮಾಸ್ತರ್ ತಮ್ಮ ಕಲಾ ಕೌಶಲದಿಂದ ಶಾಲೆಯ ಆವರಣವನ್ನು ಒಂದು ಸುಂದರವಾದ ನಂದನವನ್ನಾಗಿ ಪರಿವರ್ತಿಸುವ ಮೋಡಿಯನ್ನು ನೆನೆದರೆ ನನಗೆ ಈಗಲೂ ಬೆರಗಾಗುತ್ತದೆ. ಇಡೀ ಶಾಲೆಯ ವಾತಾವರಣಕ್ಕೆ ಒಂದು ಹೊಸ ಕಳೆ ಬರುತ್ತಿತ್ತು.

ಇದಕ್ಕೆ ಕುಂದಣವಿಟ್ಟಂತೆ ನಡೆಯುವ
‘ ಟಾರ್ಚಲೈಟ್” – ಇದು ಕೋಲಿನ ಎರಡೂ ಬದಿಗೆ ಹತ್ತಿಯ ಉಂಡೆಗಳನ್ನು ಮಾಡಿ ಅವುಗಳನ್ನು ಎಣ್ಣೆಯಲ್ಲಿ ಅದ್ದಿ ಉರಿಸಿ, ಆ ಕೋಲುಗಳನ್ನು ಕೈಗಳಲ್ಲಿ ಹಿಡಿದು ಕವಾಯಿತು ಮಾಡುವದು ; ಇದು ನಮ್ಮ ಶಾಲಾದಿನದ ವಿಶೇಷ. ರಾತ್ರಿ ಹೊತ್ತಿನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಬಹಳ ನಯನ ಮನೋಹರವಾಗಿ ಕಾಣುತ್ತಿತ್ತು. ಆದರೆ, ಇದರಲ್ಲಿ ಅಪಾಯವಿಲ್ಲದಿರಲಿಲ್ಲ. ಇದಕ್ಕಾಗಿ ನಮ್ಮ ನಾಯ್ಡು ಸರ್ ( ಪಿಟಿ ಮಾಸ್ತರ್ ), ಅವರು ಭಾರತೀಯ ಸೈನ್ಯ ದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದವರು; ಅವರು ತಮ್ಮ ದಕ್ಷತೆಯಿಂದ ಮಕ್ಕಳಿಗೆ ಎಷ್ಟೋ ತಿಂಗಳ ತರಬೇತಿ ನೀಡುತ್ತದ್ದರು.
ಈ ಟಾರ್ಚ ಲೈಟ್ ನಲ್ಲಿ ನನ್ನ ತಂಗಿ ವಿಜಯಲಕ್ಷ್ಮಿ ಬಹಳ ವರ್ಷಗಳ ತನಕ ಇದರ ಮುಂಚೂಣಿಯಲ್ಲಿ ಇರುತ್ತಿದ್ದ ವಿಷಯವನ್ನು ನಿಮ್ಮ ಮುಂದೆ ಹಂಚಿಕೊಳ್ಳುವೆ.

ನೃಪತುಂಗ ಶಾಲೆ ಬರೀ ಪಠ್ಯವನ್ನು ಹೇಳಿಕೊಡುವ ಶಾಲೆಯಾಗಿರದೇ, ವಿದ್ಯಾರ್ಥಿಗಳ ಮೌಲ್ಯಗಳನ್ನು ರೂಪಿಸುವ ಒಂದು ಗುರುಕುಲವಾಗಿತ್ತು ; ನಮಗೆಲ್ಲ ಒಂದು ಪವಿತ್ರ ಸ್ಥಳವಾಗಿತ್ತು. ಆಗಿನ ಸಮಯದಲ್ಲಿ ಕಲಿತ ನಾವೆಲ್ಲ ಉಡಪಾಚಾರರ ಹಾಗೂ ಇತರ ಗುರುಗಳು ನಮಗಿತ್ತ ಪ್ರೇಮದ ಸಂಪತ್ತಿನ ಬಲದಿಂದ ಬಾಳಿನ ಪಯಣದಲ್ಲಿ ಸಾಗಿದ್ದೇವೆ. ಅದು ಎಂದಿಗೂ ಕರಗದ ನಿಧಿ. ಅದಕ್ಕೇ, ಹಳೆಯ ವಿದ್ಯಾರ್ಥಿಗಳಾದ ನಮಗೆಲ್ಲ ಶಾಲೆಯ ಜೊತೆ ಕರುಳಬಳ್ಳಿಯ ಸಂಬಂಧವಿದೆ.

ವಿದ್ಯಾರ್ಥಿಗಳ ಮೇಲಿನ ಅಪಾರ ವಾತ್ಸಲ್ಯದಿಂದ, ಅವರ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿ, ಶಾಲೆಗೆ ನಿಸ್ವಾರ್ಥ ಸೇವೆಗೈದ
ದಿ. ಉಡಪಾಚಾರರು ಬರೀ ನೃಪತುಂಗ ಶಾಲೆಯ ಪ್ರಾಧ್ಯಾಪಕರಾಗಿ ಉಳಿಯದೆ , ಶಿಕ್ಷಣ ಕ್ಷೇತ್ರದ ಧ್ರುವತಾರೆಯಾಗುತ್ತಾರೆ; ಮಕ್ಕಳ ಭವಿಷ್ಯವನ್ನು ಕೆತ್ತಿದ ಶಿಲ್ಪಿಯಾಗುತ್ತಾರೆ ; ವಿದ್ಯಾರ್ಥಿಗಳ ಮೇಲಿನ ವಾತ್ಸಲ್ಯದ ಪ್ರತೀಕವಾಗಿ ಸಾರ್ವತ್ರಿಕತೆಯನ್ನು ಪಡೆಯುತ್ತಾರೆ. ಅವರಿಗೆ ಹಾಗೂ ನಮಗೆ ಕಲಿಸಿದ ಎಲ್ಲ ಗುರುಗಳ ಪಾದದಡಿಯಲ್ಲಿ ಈ ಅಂಕಣದ ನಿವೇದನೆ.

ಉಡಪಾಚಾರ ಮಾಸ್ತರರಿಗೆ

ಆಚಾರ ವಿಚಾರಗಳ ನಡುವೆ ಇದ್ದಿಲ್ಲ ಎಳ್ಳಷ್ಟೂ ಕಂದರ
ಮಾಸ್ತರರೆ ಧರಿಸಿದ್ದಿರಿ ವಿಚಾರದ ಆತುಮಕೆ ಆಚಾರದ ಉಡುಪು
ಸಾಲಿಯ ಏಳಿಗೆಗಾಗಿ ಇಟ್ಟಿದ್ದಿರಿ ನಿಮ್ಮ ಬಾಳಿನ ಮುಡಿಪು
ವಿದ್ಯಾರ್ಥಿಗಳ ಭವಿಷ್ಯದ ಜವಾಬ್ದಾರಿ
ನಿಮ್ಮ ಮೇಲಿತ್ತು ಅಪಾರ
ಅವನ್ಯಾರು, ಇವನ್ಯಾರು, ನೀನ್ಯಾರು ನಾನ್ಯಾರು
ಅನ್ನದೆ ಇತ್ತಿರಿ ಎಲ್ಲರಿಗೂ ವಿದ್ಯೆಯ ಸಾರ
ನಿಮ್ಮ ಗುರುಕುಲದಿ ಕಲಿತವರು ಹತ್ಯಾರ ಮ್ಯಾಲಿನ ಸ್ತರ
ಗುರುತರದ ಕಾಯಕಗಳ ಕೈಕೊಂಡು
ಮಾಡ್ಯಾರ ನಿಮ್ಮ ಕನಸು ಸಾಕಾರ!
ಕಲ್ಲುಗಳ ಕೆತ್ತಿ ಮಾಡಿದಿರಿ ಮೂರ್ತಿ
ಹರಡಿತ್ತು ಎಲ್ಲೆಡೆ ನಿಮ್ಮ ಕೀರ್ತಿ
ರವಿಯು ಮೂಡಿ ತಮವ ತೊಳೆಎಯುವ ಮುನ್ನ
ಏಳುತ್ತಿದ್ದಿರಿ ನೀವು
ಚಿತ್ತದ ತಮವ ತೊಲಗಿಸಲು
ಬಿತ್ತಲು ಚೈತನ್ಯದ ಬೀಜ
ವಿದ್ಯಾರ್ಥಿಗಳ ಮನಗಳಲಿ
ಅಪ್ಪ ಅಮ್ಮಂದಿರಿಗಿಲ್ಲದ ಚಿಂತೆ ನಿಮಗೆ
ಎಲ್ಲಿ ಬಿದ್ದಾರೋ ಮಕ್ಕಳು
ಎಂಬ ಆತಂಕದಲಿ ನಿಮಗೆಲ್ಲಿಯ ನಿದ್ದೆ!
ಪೇರಿಸಿಟ್ಟಿರಿ ಒಂದೊಂದು ಇಟ್ಟಂಗಿ
ಇಟ್ಟಿರಿ ಕಳಶ
ಉತ್ತುಂಗಕ್ಕೇರಿಸಿ ನೃಪತುಂಗವ
ಸಾರಿದಿರಿ ಎಲ್ಲೆಡೆ ನಿಮ್ಮ ಸೇವೆ-ಸಂದೇಶ
ಮೀರಿ ನಿಂತಿರಿ ನೀವು ಕಾಲ-ಕೋಶ!
ನಿಮ್ಮ ಗರಡಿಯಲಿ ಪಳಗಿದೊಬ್ಬಬ್ಬ ವಿದ್ಯಾರ್ಥಿಗೆ
ತೋರಿದಿರಿ ನೀವು ಅವರವರ ದಾರಿ-
ತಪ್ಪದೆ ನಡೆದು ಸಾಗಿರಿ ಎಂದು
ತುಳಿದಿರಿ ನಡಿಗೆಯಲೆ ಶಹರದ ಉದ್ದಗಲಗಳ
ಮೂಡಿಸಿದಿರಿ ಹೆಜ್ಜೆಗುರುತುಗಳ
ನೀವು ಕೆತ್ತಿದ ಮೂರ್ತಿಗಳಲಿ
ಇನ್ನೂ ಮಾಯವಾಗಿಲ್ಲ ನಿಮ್ಮ ಕಲಾಕೌಶಲದ ಕುರುಹು
ಗುರುವೇ, ಮಹಾಶಿಲ್ಪಿಯೇ
ನಿಮಗೆ ನಮನ

ವಂದನೆಗಳು..