ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪರಿಮಳದ ಅಂಗಳ

ಶ್ರೀಧರ ಬಳಗಾರ
ಇತ್ತೀಚಿನ ಬರಹಗಳು: ಶ್ರೀಧರ ಬಳಗಾರ (ಎಲ್ಲವನ್ನು ಓದಿ)

ಎಲ್ಲರ ಬಾಲ್ಯಕ್ಕೂತುಂಬಿಕೊಳ್ಳಲುತೊಟ್ಟಿಲ್ಲೊಂದಿರುವುದಾದರೆ ಅದುಖಂಡಿತವಾಗಿಯೂ ಅವರವರು ಹುಟ್ಟಿ ಬೆಳೆದ ಮಾಯೆಯಂತೆ ಕಾಡುವ ಊರೇ. ಸದಾ ನೆನಪಿನಲ್ಲಿ ಕ್ಷೀಣವಾಗಿ ಕೇಳಿಸುತ್ತಲೇ ಇರುವ ಈ ಜೋಗುಳದ ತೊಟ್ಟಿಲನ್ನು ತೂಗುವ,ಪ್ರತಿ ಕನಸಿನ ಕೊನೆಗೆ ಹಗಲನ್ನು ಬಿಡಿಸಿಕೊಡುವ ಈ ತಾಯಿಯ ಅದೃಶ್ಯ ಹಸ್ತಗಳು ಹಲವು:
ಕಾಡಿನ ಮೌನ, ಮುಗಿಲ ಪರ್ವತಗಳಾಚೆಯ ಧ್ಯಾನ, ಸಮುದ್ರದ ಘೋಷ, ಮೊದಲ ಮಳೆಯ ಕಂಪು ಮತ್ತು ಪ್ರತಿ ಮನೆಯ ಅಂಗಳದ ಪುಟ್ಟ ಸರೋವರದಲ್ಲಿ ಮಳೆ ಹನಿಗಳುಬೀಳಿಸುವ ಮಣ್ಣು ಮುತ್ತೈದೆಯ ಬಳೆಗಳು, ಮಡಲು ಕಟ್ಟಿದ ಶಾಲೆಯ ಹಿಂದಿನ ಗುಡ್ಡದ ಮೇಲೆ ನಿಂತ ಕಾಮನ ಬಿಲ್ಲು, ಬಯಲಾಟದ ಚಂಡೆಯ ಸದ್ದು, ಗೆಜ್ಜೆಯ ನಾದಕ್ಕೆಹಸಿರು ಚಿಗುರು ತುಂಬಿದ ಗದ್ದೆಯ ಬಯಲಲ್ಲಿ
ನೇಗಿಲು ಹಿಡಿದು ಹೂಡುವ ಕಂಬಳಿಕೊಪ್ಪೆಯ ಕೋಸ, ರಥೋತ್ಸವ, ಸುಗ್ಗಿಯ ಕುಣಿತದ ಕನವರಿಕೆಯಲ್ಲಿಯೇ ಇರುವ ಹಾದಿ ಬೀದಿಗಳು, ವಾಲಗದ ಹಾಡಿನ ದೇವಸ್ಥಾನದ ಮದುವೆಗೆ ಕೊಡೆ ಹಿಡಿದು ನಡೆವ ದಿಬ್ಬಣ, ಗಿಡದ ಸಂದಿಯಲ್ಲಿ ಮರಿ ಹಾರಿಸಿಕೊಂಡುಹೋದ ಹಕ್ಕಿಯ ಖಾಲಿ ಗೂಡನ್ನುನೋಡುತ್ತ ನಿಂತು ಬಿಟ್ಟ ಶಾಲೆಯ ಹುಡುಗ, ವನಬ್ಯಾಗಿನಲ್ಲಿರುವಬಣ್ಣದ,ತಾಜಾವಾಸನೆಯ ಗರಿಗರಿ ಪುಟದ ಪುಸ್ತಕಗಳು, ಅವನ ಶಾಲೆಗೆ ವರ್ಗವಾಗಿ ಬಂದ ಹೊಸ ಮಾಸ್ತರು, ಶಾಲೆಯ ದಿನಚರಿಯ ನಡುವೆ ತಟ್ಟನೆ ಎಲ್ಲಿಂದಲೋ ಬಂದು ಮಕ್ಕಳ ಕನಸನ್ನು ಅಪಹರಿಸಿಕೊಂಡು ಹೋಗಿ ಬಿಡುವ
ಬಿಂಕದ ಲಾರಿಗಳು, ಸಣ್ಣ ಮಳೆಯಲ್ಲಿಸೈಕಲ್ ತುಳಿಯುತ್ತ ಬಿಸಿ ಹಸಿಯ ಒದ್ದೆ ಸುದ್ದಿಯನ್ನು ಹಂಚುವ ಪೋಸ್ಟ್ ಮ್ಯಾನ್,ಮಾವಿನ ಹಣ್ಣು ಮಾಗುತ್ತಿರುವ ರಸ್ತೆಯ ಪಕ್ಕದ ದವಾಖಾನೆಗೆ ಸುಡು ಮೈ ಜ್ವರದಮಗುವನ್ನು ಎದೆಗವಚಿಕೊಂಡು ಓಡುವ, ಅರ್ಧಕ್ಕೆ ಗದ್ದೆ ಕೆಲಸ ಬಿಟ್ಟು ಬಂದ ಬಿಕ್ಕುವ ಹೆಂಗಸು ಎಲ್ಲರೊಳಗೂ ಇಂಥ ಜೀವ ಚಿತ್ರಗಳು ಇರುತ್ತವೆ. ಇವುಗಳಲ್ಲಿ ಹಲವು ಬಿರುನಡಿಗೆಯಲ್ಲಿ ಪಲ್ಲಕ್ಕಿಯಂತೆ ಹಾದು ಹೋದರೆ ಕೆಲವು ಮಾತ್ರ ದೇಗುಲದೆದುರುನಿಲ್ಲುವ ಶೃಂಗಾರ ಕಳಚಿಕೊಂಡ ತೇರಿನಂತೆ
ನೆನಪಿನಲ್ಲಿ ಬಣ್ಣ ಗೆಡದೆ ನಿಂತು ಬಿಡುತ್ತವೆ.
ಜಾತ್ರೆಗೆ ಬಂದ ತೊಟ್ಟಿಲನ್ನು ಏರುವಂತೆ ಅಂಕೋಲೆಯಲ್ಲಿ ನಾನು ಕೆಲ ದಿನಗಳನ್ನ ತೂರಿಕೊಂಡ ನೆನಪು.
ಅಂಕೋಲೆ ನನ್ನ ಭಾವಾಕಾಶದಲ್ಲಿ ಮಿನುಗಲು ಕಾರಣರಾದವರು ಕನ್ನಡ ಶಾಲೆಯಲ್ಲಿ ಪಾಠ ಮಾಡಿದ ಮಾಸ್ತರು. ಅಂಕೋಲೆಯ ಬಂದರ್‌ ರೋಡಿನ ಕೊನೆಯ ‘ಪರಿಮಳದಂಗಳ ‘.
ಸಣ್ಣ ಹಿತ್ತಲ ನಡುವೆ ಅವರ ಹಂಚಿನ ಮನೆ. ಮನೆಯ ಎದುರು ಡೊಂಕು ದಾರಿಯ ಗದ್ದೆಯ ಬಯಲು, ಆದರಂಚಿನ ಗುಡ್ಡದಾಚೆ ಸಮುದ್ರವಂತೆ. ಸದ್ದಿನಿಂದಲೇ ತನ್ನಿರುವನ್ನು ಸಾರುತ್ತ, ಕುತೂಹಲ ಕೆರಳಿಸುತ್ತ ರಹಸ್ಯವಾಗುಳಿದ ಅನಂತ ವಿಸ್ಮಯ. ಇಕ್ಕಟ್ಟಾದ ಬಂದ‌ರ್ ರೋಡಿನ ಆಚೀಚೆ ಎತ್ತರದ ಅಂಗಡಿಗಳ ಮುಂಗಟ್ಟುಗಳ ಮೇಲೆ ಕಾಣುವ ಹೊಲಿಗೆ ಯಂತ್ರವನ್ನು ಗಡಗಡನೆ ತುಳಿಯುವ
ಮನುಷ್ಯರ ಅಸಂಖ್ಯ ಕಾಲುಗಳನ್ನು ಮತ್ತು ಗಂಟೆ ಬಾರಿಸುತ್ತ ಸಾಗುವ ಆ ಪ್ರಮಾಣದ ಸೈಕಲ್ಲುಗಳನ್ನು ನಾನೆಲ್ಲಿಯೂ ನೋಡಿರಲಿಲ್ಲ ! ಹೊಲಿಗೆ ಯಂತ್ರದ ಮತ್ತು ಸೈಕಲ್ಲಿನ ಚಕ್ರಗಳ ಮೇಲೆ ದಿನವೂ ಊರು ಸವಾರಿ ಹೊರಡುವಂತೆ ಭಾಸವಾಗುತ್ತಿತ್ತು.

ಮಾಸ್ತರು ನನಗೆ ಜೈಹಿಂದ್ ಕೆಫೆಯಲ್ಲಿ ಊಟ ಮಾಡಿಸಿ, ಬಜಾರದಲ್ಲಿ ಮಾವಿನ ಹಣ್ಣು ತಿನ್ನಿಸಿ, ಸಮರ್ಥದಲ್ಲಿ ಸಿನೆಮಾ ತೋರಿಸಿ ಬಾವಿಕೇರಿಯ ಮಹಾಲೆಯವರ ಮನೆಯಲ್ಲಿ ಚೌತಿ ಗಣಪತಿ ತೋರಿಸಿದ್ದರು. ಅಂಕೋಲೆಗೆ ಒಮ್ಮೆ ಗಾಂಧಿ ಬಂದು ಹೋದ ಕತೆಯನ್ನು ಹೇಳಿದರು. ನಮ್ಮ ಶಾಲೆಯ ಕನ್ನಡ ಪುಸ್ತಕದಲ್ಲಿದ್ದ ‘ನನ್ನ ದೇಹದ ಬೂದಿ….ಪದ್ಯ ಬರೆದ ದಿನಕರ ದೇಸಾಯಿಯವರ ಮನೆಯನ್ನು ದೂರದಿಂದ ತೋರಿಸಿದರು. ಪೇಟೆ ಬಸ್ ನಿಲ್ದಾಣ ಎಲ್ಲೆಲ್ಲೂ ಮಾಸ್ತರುಗಳೇ ಓಡಾಡುತ್ತಿರುವಂತೆ ಭಾಸವಾಗಿ ಅಂಕೋಲೆಯ ಊರೇ ಪ್ರೀತಿಯ ಗುರೂಜಿಯಂತೆ ಕಾಣತೊಡಗಿತು.
ಆಮೇಲೆ ಆಗಾಗ ಅಂಕೋಲೆಯ ಬಸ್ ಸ್ಟಾಂಡಿನಲ್ಲಿ ಕ್ಷಣಕಾಲ ನಿಂತು ಹೊರಡುವ ಬಸ್ಸಿನಲ್ಲಿ ಕೂತೊ ಇಲ್ಲ ಅವಸರದಲ್ಲಿ ಟಾಯ್ಲೆಟ್ಟಿಗೆ ಹೋಗಿ ಬರುತ್ತಿದ್ದ ನಡುವೆಯಲ್ಲೊ ಹಳದಿ ಬುಶ್ ಶರ್ಟಿನ ಸೈಕಲ್ ಸವಾರಿಯ ಮುದುಕರಾಗಿರಬಹುದಾದ ನಿವೃತ್ತ ನನ್ನ ಗುರೂಜಿಯನ್ನು ಕಾಣಲು ಹಾತೊರೆದಿದ್ದೆ. ಕ್ಯಾಂಟೀನಿನ ಸಾರಿನ ಪರಿಮಳ ಮತ್ತು ‘ಬಡವನ ಗೋಳು ಹೊಟ್ಟೆಗಿಲ್ಲ ಕೂಳು’ ಎಂದು ಕೊಂಕಣಿ ಧಾಟಿಯಲ್ಲಿ ಹಾಡುತ್ತ ಬೇಡುವ ಮುದುಕ ಆವರಿಸಿಕೊಳ್ಳುತ್ತಿದ್ದಂತೆ ಬಸ್‌ಸ್ಟ್ಯಾಂಡಿನ ಆಗಮನ – ನಿರ್ಗಮನಗಳ ವಾತಾವರಣದಲ್ಲಿ ತಳಮಳ ಮಿಡಿಯಲು ಶುರುವಾಗುತ್ತಿತ್ತು. ಹಲವು ಊರಿನ ಮಾರ್ಗಗಳು ಛೇದಿಸುವ, ಹೊಸ ಮುಖಗಳು ಪರಿಚಯವಾಗದೇ ಕಣ್ಮರೆಯಾಗುವ ನಿಲುಗಡೆಯಲ್ಲಿ ವಿಚಿತ್ರ ಧಾವಂತವಿರುತ್ತದೆ.

ಇಂಥಾದ್ದೊಂದು ಧಾವಂತದ ಮಾಯಾಕ್ಷಣದಲ್ಲಿ, ಎಂಟು ದಿನಗಳ ನನ್ನ ಹಳೆಯ ವಾಸ್ತವ್ಯದಲ್ಲಿ ಒದಗಿದ ಅಂಕೋಲೆಯ ಜೀಕು ಕೇಳಿಸುತ್ತಲೇ ವಿಷ್ಣು ನಾಯ್ಕರು ಪ್ರತ್ಯಕ್ಷರಾದರು ಅವರನ್ನು ಪರಿಚಯಿಸಿದವರು ದಿವಂಗತ ಜಿ. ಎಸ್. ಅವಧಾನಿಯವರು.
ಬಣ್ಣದ ವೇಷಧಾರಿಯಂತೆ ಕೂದಲನ್ನು ಸೊಂಪಾಗಿ ಹಿಂಬಾಚಿದ ಅಗಲ ಹಣೆಯ ನಾಯ್ಕರನ್ನು ಅವಧಾನಿಯವರು ‘ಗೊತ್ತಿರಬೇಕಲ್ಲ ಇವರು ವಿಷ್ಣು ನಾಯ್ಕರು’ ಎಂದು ಪರಿಚಯಿಸಿದರು. ‘ಬಳಗಾರರ ಕಥೆಗಳನ್ನು ಓದಿದ್ದೇನೆ’ ದನಿ ಗಡಸಾಗಿತ್ತು. ತುಸು ತುಟ್ಟಿಯಾಗಿಯೇ ನಕ್ಕರು. ಮುಖದಲ್ಲಿ ಧರಿಸಿದ್ದ ಗಾಂಭೀರ್ಯ ಹೆಚ್ಚಾಯಿತೇನೊ ಎಂದು ಅನುಮಾನಿಸುವಂತಿತ್ತು ಆ ತುಂಟ ನಗು.
ಎಲ್ಲೋ ಒಂದಡೆ ಅವರ ನಿಲುವಿನಲ್ಲಿ ನನ್ನ ಲ್ಲಿ ಗುರೂಜಿಯ ಧರ್ತಿಯ ಛಾಯೆ ಇರುವಂತೆ ತೋರಿತು. ಹೊಸ ಪರಿಚಯದಲ್ಲಿ ಹೆಚ್ಚು ಹಚ್ಚಿಕೊಳ್ಳಬಾರದು ಸಲಿಗೆಯಿಂದ ಉಕ್ಕಬಾರದೆಂಬಂತೆ ದೂರದಲ್ಲಿ ಉಳಿದು ಸ್ವಲ್ಪ ಕಿರಿ ಕಿರಿ ಎನಿಸಿದರೂ ದುಂಡು ಮೈಕಟ್ಟಿನ ಅವರ ರೂಪ ಸುಂದರವಾಗಿಯೇ ಕಂಡಿತು. ನಾವು ಹೊರಟು ಹೋದರೂ ನಾಯ್ಕರು ಅದೇನೋ ನಿರೀಕ್ಷೆಯಲ್ಲಿ ಅಲ್ಲೇ ನಿಂತಿದ್ದರು.
ನಾಯ್ಕರು ಭೇಟಿಯಾಗಿರದಿದ್ದರೆ ಅಂಕೋಲೆ ನನಗೆ ಚಾರಿತ್ರಿಕ ಆಸಕ್ತಿಯಾಗಿ ಮಾತ್ರ ಉಳಿಯುತ್ತಿತ್ತೇನೊ. ಆದರೆ ಅವರು ಕೆಲ ಕಾಲ ನನ್ನ ತೂಗಿದ ಅಂಕೋಲೆಯ ತೊಟ್ಟಿಲನ್ನು ತನ್ನ ಮನೆಯ ಅಂಗಳಕ್ಕೆ ಎತ್ತಿಕೊಂಡು ಹೋಗಿದ್ದರು. ಹೀಗೆ ನಾಯ್ಕರು ನನ್ನ ಕುತೂಹಲದ ಬಳ್ಳಿಗೆ ಅಂಕೋಲೆಯ ವರ್ತಮಾನದ ಸಾಹಿತ್ಯ ಚಪ್ಪರದ ಆಸರೆಯನ್ನು ನೀಡಿದರು. ಆಗಲೇ ಅವರು ನನ್ನ ಎರಡನೇ ಕಥಾ ಸಂಕಲನವನ್ನು ಪ್ರಕಟಿಸಲು ಮುಂದೆ ಬಂದದ್ದು.

ಸರಕಾರಿ ಕಾರುಬಾರಿನ ಕಾರವಾರ ಮತ್ತು ಭೂಕೈಲಾಸದ ಗೋಕರ್ಣವನ್ನು ವಿಸ್ಮಯದ ಕ್ರಾಸಿನಲ್ಲಿ ನೋಡುತ್ತ ನಿಂತು ಬಿಟ್ಟ ಅಂಕೋಲೆಯನ್ನು ನಾಯ್ಕರು ತನ್ನ ಅಕ್ಷರ ಕಾಯಕದಲ್ಲಿ, ಮೇಲೆತ್ತಿಕೋ ಎಂದು ಮಗು ಕೈಗಳನ್ನು ಮೇಲೆತ್ತುವುದಿಲ್ಲವೆ ಹಾಗೆ ಎತ್ತಿಕೊಂಡರು. ಅಂಬಾರಕೊಡ್ಲಿನ ‘ಪರಿಮಳ’ದ ಅಂಗಳದಲ್ಲಿ ಕನ್ನಡದ ಕೊಳವನ್ನು ಕಟ್ಟಿಕೊಂಡರು. ದಿನಕರ ದೇಸಾಯಿಯವರ
ಹೋರಾಟದ ಹಳ್ಳಿಯ ನದಿ ನೀರನ್ನು ಗೌರೀಶ್ ಕಾಯ್ಕಿಣಿಯವರ ಸಮುದ್ರ ಚಿಂತನೆಯ ಸ್ವಾದಿಷ್ಟ ನೀರನ್ನೂ ಒಂದು ಹದದಲ್ಲಿ ತುಂಬಿಕೊಂಡರು. ನಿಂತಲ್ಲಿಂದಲೇ ಪ್ರಕಾಶಿಸಲು ‘ರಾಘವೇಂದ್ರ ಅಚ್ಚುಕೂಟವನ್ನು ಸ್ಥಾಪಿಸಿ ಪುಸ್ತಕಗಳನ್ನು ಪ್ರಕಟಿಸಿದರು. ಪ್ರತಿ ವರ್ಷ ಶಬ್ದ ಸಂಸಾರಿಗಳನ್ನೋ ಸನ್ಯಾಸಿಗಳನ್ನೂ ಕರೆದು ಕೊಳದಲ್ಲಿ ಸಾಹಿತ್ಯ ಸ್ನಾನ ಮಾಡಿಸಿದರು. ಅಕ್ಷರ ಅವಧೂತನಿಗೆ
ಸಾಂಸ್ಥಿಕ ಪ್ರತಿಷ್ಠಾನದ ರೂಪಕೊಟ್ಟರು. ಹೀಗೆ ಹರಕು – ಮುರಕು ಚಿಂದಿಯ ಗಂಜಿ ಊಟದ ಕೊಡ್ಲಿಗೆ ಬಂತು ಸಾಹಿತ್ಯ ಹಬ್ಬದ ಅಂಬಾರಿ ಹೊತ್ತ ವಿಷ್ಣು ನಾಯ್ಕರ ಸಾಹಸವೆಂಬ ಆನೆ. ಉಪ್ಪಿನ ಗಾಳಿ, ಕೊರಳ ಮೇಲಿನ ಬೆವರ ಹನಿ, ಆಪೂಸು, ಮಾಸ್ತರಿಕೆ, ಬಾಂಗ್ಡ ಮೀನು, ಒಣಗಿದ ಬಾವಿಗಳಲ್ಲಿ ಅಂಕೋಲೆ ಬತ್ತಿ ಹೋಗಬಾರದೆಂದು ನಾಯ್ಕರು ವಾರದ ‘ಸಕಾಲಿಕ’ ಸಂತೆಯನ್ನೂ ನಡೆಸತೊಡಗಿದರು.
ನನ್ನ ನೆನಪಿನ ಅಂಕೋಲೆಯ ತೊಟ್ಟಿಲನ್ನು ಇಳಿದು ವಿಷ್ಣು ನಾಯ್ಕರು ಹೊರಟು ಹೋಗಿದ್ದಾರೆ; ಆದರೆ, ತೊಟ್ಟಿಲು ತೂಗುತ್ತಲೇ ಇದೆ. ಅವರು ಬಿಟ್ಟು ಹೋದ ಜೀವನ ಪ್ರೀತಿಯ ಕಂಪು ಅವರ ಅಂಗಳದಲ್ಲಿದೆ.


ಶ್ರೀಧರ ಬಳಗಾರ.