ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಾತ್ರ ಪರಿಚಯ

ಪೂರ್ಣಿಮಾ ಸುರೇಶ್ ಬರೆದ ಕವಿತೆ...! ಪಾತ್ರ ಪರಿಚಯ, ಸುಪ್ತ ದರ್ಶನ... !
ಪೂರ್ಣಿಮಾ ಸುರೇಶ್
ಇತ್ತೀಚಿನ ಬರಹಗಳು: ಪೂರ್ಣಿಮಾ ಸುರೇಶ್ (ಎಲ್ಲವನ್ನು ಓದಿ)

ಬೆಳಕಿಗೆ ತೆರೆದುಕೊಂಡಾಗಷ್ಟೇ ಕತ್ತಲಿನ ಪರಿಚಯ.

ಪೂರ್ಣಿಮಾ ಸುರೇಶ್ ಅವರ “ಪಾತ್ರ ಪರಿಚಯ” ಕವಿತೆಯಿಂದ

ಕವಿತೆ

ನಿನ್ನ ನಗೆ ನನ್ನಲಿ ಅಡಗಿದೆ
ನೀನು ಕಾಣಬೇಕಷ್ಟೆ.

ಗೋಡೆಯನ್ನು ಹೊತ್ತು ನಾವು
ಅಲೆದಾಯಿತು
ನೀನು ಬಿಡು! ಕೋಟೆಯನ್ನೇ
ಕಟ್ಟಿರುವೆ.

ಒಳಗಡೆ ಯುದ್ಧದ ತಾಲೀಮು,ತಂತ್ರ-
ಪ್ರತಿತಂತ್ರ,ಘೋಷಣೆ,
ಹರಿತಗೊಳ್ಳುವ ಖಡ್ಗಗಳು.

ಕೋಟೆಯಾಚೆಗಿನ ಈ ಮುಖ
ಕಾಣಿಸುವುದೆಂತು?
ಈ ಅಪಧಮನಿ
ಅಭಿದಮನಿಗಳಲ್ಲಿ ರಕ್ತದ ಜೊತೆ
ಭಾವಗಳೂ ಹರಿದಾಡುತ್ತವೆ.
ಎಲ್ಲೋ ಅಂಚಿನಲಿ ಬಾನು ಭುವಿ
ತುಟಿ ಒತ್ತಿದಾಗ
ನನ್ನೊಳಗಿನ ಕಡಲಲ್ಲಿ ಅಲೆಗಳ
ಅಬ್ಬರ.

ಅನ್ನಿಸುವುದು ಸಹಜ ತಾನೇ?

ಬೆಳಕಿಗೆ ತೆರೆದುಕೊಂಡಾಗಷ್ಟೇ
ಕತ್ತಲಿನ ಪರಿಚಯ.

ನನ್ನ ಬಾಹುಗಳನು ವಿಸ್ತರಿಸಿ
ಕೋಟೆ ಸಮೇತ
ನಿನ್ನ ಬಿಗಿದಪ್ಪುವಾಸೆ.

ಜಗವಿದು ಮಾಯೆ ಅನ್ನುವೆಯಾ?

ಈ ಸೆಳೆತ,
ಅರಿವಿಗೆ ನಿಲುಕದ ಅಧ್ಯಾತ್ಮ. ‌‌‌‌‌‌‌‌
ನೀನು ತುಂಬಿದ ದರ್ಶನ.

ನನಗೆ ನನ್ನ ನಗೆಯನ್ನು
ಕಾಣುವ ತವಕ
ಪರಿಚಯಿಸು.