ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಸ್ಸಾಯಣ

ನಿರಂಜನ ಕೆ ನಾಯಕ
ಇತ್ತೀಚಿನ ಬರಹಗಳು: ನಿರಂಜನ ಕೆ ನಾಯಕ (ಎಲ್ಲವನ್ನು ಓದಿ)

ಈಗ ನಾನು ಹೇಳಲು ಹೊರಟಿರುವುದು ಬಸ್ಸಿನಲ್ಲಾದ ಒಂದು ಘಟನೆ. ಸರ್ಕಾರಿ ಬಸ್ಸಿನ ಕಂಬಿ ಮತ್ತು ಬಾಗಿಲು ಮುರಿದ ಕಥೆ ಕೇಳಿರುವ ನೀವು ಇದು ಕೂಡ ಅಂತಹುದೇ ಕಥೆಯೆಂದು ಭಾವಿಸುವುದು ತಪ್ಪಲ್ಲ. ಆದರೆ ಈ ಕಥೆಗೂ ಆ ಅಧ್ವಾನಕ್ಕೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಖಾಸಗಿ ಬಸ್ಸಿನಲ್ಲಿ. ಆ ದಿನ ಸಂಜೆ ನಾನು ಎಂದಿನಂತೆ ಮನೆಗೆ ಬಸ್ಸಿನಲ್ಲಿ ಹಿಂತಿರುಗುತ್ತಿದ್ದೆ. ಒಬ್ಬ ವ್ಯಕ್ತಿ ಬಿ. ಸಿ ರೋಡ್ ಬಳಿ ದಡಬಡಾಯಿಸಿ ಬಸ್ಸನ್ನೇರಿದ. ಸೀದಾ ನನ್ನ ಬಳಿ ಬಂದ ಆ ವ್ಯಕ್ತಿ “ಮೊಬೈಲ್ ಎಲ್ಲಿ?, ಮೊಬೈಲ್!!” ಎಂದು ಅರಚಿದ. ನಾನು ಅಚಾನಕ್ಕಾಗಿ ಆದ ಈ ಘಟನೆಯಿಂದ ಏನೂ ಅರ್ಥವಾಗದೇ ಪಿಳಿಪಿಳಿ ಕಣ್ಣುಬಿಟ್ಟೆ. ಅಷ್ಟರಲ್ಲೇ ನನ್ನ ಎದುರಿಗೆ ಕೂತಿದ್ದ ಹಿರಿಯ ವ್ಯಕ್ತಿ ತನ್ನ ಕಿಸೆಗೆ ಕೈ ಹಾಕಿ ಮೊಬೈಲ್ ಒಂದನ್ನು ಆ ಯುವಕನ ಕೈಗಿತ್ತರು. ಆ ಯುವಕನ ಪಿತ್ತ ಇನ್ನಷ್ಟು ನೆತ್ತಿಗೇರಿತು. ಹಿಗ್ಗಾಮುಗ್ಗ ಬೈಯಲು ಆರಂಭಿಸಿದ. ನನ್ನ ಕರ್ಣಗಳು ಇಲ್ಲಿಯವರೆಗೆ ಕೇಳದ ಬೈಗುಳಗಳು ಆ ಪಟ್ಟಿಯಲ್ಲಿದ್ದವು. ನನ್ನಂತೆ ಇತರರೂ ಕೂಡ ಏನಾಗುತ್ತಿದೆ ಎಂದು ಅರ್ಥವಾಗದೆ ಅವಕ್ಕಾದರು.

ಆ ಯುವಕನ ಬೈಗುಳ ಕೊಂಚ ಲಯ ಕಂಡುಕೊಂಡಾಗ ಆದದ್ದಾದರೂ ಏನೆಂಬುದು ಅರಿವಿಗೆ ಬಂತು. ಆ ಯುವಕ ಅದೇ ಬಸ್ಸಿನಲ್ಲಿ ಪಯಣಿಸುವಾಗ ಮರೆತು ತಾನು ಕುಳಿತ ಜಾಗದಲ್ಲೇ ಮೊಬೈಲ್ ಬಿಟ್ಟು ತೆರಳಿದ್ದ. ಅದು ಅವನ ಅರಿವಿಗೆ ಬರುವಾಗ ಕೊಂಚ ಸಮಯ ಉರುಳಿತ್ತು. ಕರೆ ಮಾಡಿ ಪ್ರಯತ್ನಿಸಿದಾಗ ಮೊಬೈಲ್ ರಿಂಗ್ ಆಗುತ್ತಿತ್ತಾದರೂ ಯಾರೂ ಕೂಡ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಬಸ್ಸಿಗೆ ಏರಿದ ಹಿರಿಯ ವ್ಯಕ್ತಿ ಬಸ್ಸಿನಲ್ಲಿದ್ದ ನಿರ್ವಾಹಕನ ಗಮನಕ್ಕೆ ಈ ವಿಚಾರ ತರದೇ ಸೀದಾ ಆ ಮೊಬೈಲನ್ನು ತಮ್ಮ ಜೇಬಿಗೆ ಇಳಿಸಿದ್ದರು. ಆದರೆ ಆ ಯುವಕ ವಿಚಾರಿಸಿದಾಗ ಸೈಲಂಟನಲ್ಲಿದ್ದ ಆ ಮೊಬೈಲ್ ಫೋನನ್ನು ಅವರೇ ತೆಗೆದು ಕೊಟ್ಟಿದ್ದು ಆಶ್ಚರ್ಯಕರ.

ಆ ಹಿರಿಯ ವ್ಯಕ್ತಿಯ ಅನುಭವಗಳ ಅಂತ:ಸತ್ವ ಜಾಗೃತವಾಗಿರಬೇಕು. ಆಸೆ ಮನುಜನ ಸಹಜ ಗುಣ. ಆ ಯುವಕ ಅವರನ್ನು ತೆಗಳದೇ ಆತ ಕೇಳಿದಾಗ ಕಿಂಚಿತ್ತು ಕ್ಷಣ ಯೋಚಿಸದೇ ತಮ್ಮದಲ್ಲದ ವಸ್ತುವನ್ನು ಮರಳಿಸಿದ ಅವರ ಗುಣವನ್ನು ಮೆಚ್ಚಿಕೊಳ್ಳಬಹುದಿತ್ತು. ಎಲ್ಲರ ಎದುರು ತಮ್ಮದಲ್ಲದ ವಸ್ತುವನ್ನು ಮರಳಿಸಿದ ಆ ಹಿರಿಯ ಜೀವವನ್ನು ಕಳ್ಳನೆಂದು ಕರೆಯಲಾಗದು. ತನ್ನ ವಸ್ತುವನ್ನು ಕಾಳಜಿಯಿಂದ ಕಾಯ್ದುಕೊಳ್ಳದ್ದು ಆ ಯುವಕನ ತಪ್ಪಲ್ಲವೇ? ಅಲ್ಲೇ ಅಡಗಿಸಿ ಮರೆಮಾಚಿ ಇಡುವ ಅವಕಾಶವಿದ್ದರೂ ಪ್ರಾಮಾಣಿಕತೆ ಮೆರೆದ ಆ ಹಿರಿಯ ಜೀವವನ್ನು ತೆಗಳಿದ್ದನ್ನು ನಾನು ಒಪ್ಪಲಾರೆ.