ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಾಪೂ ಜೊತೆ ಇಂದು ಇಳಿ ಮಧ್ಯಾಹ್ನ

ಪ್ರಜ್ಞಾ ಮತ್ತಿಹಳ್ಳಿ
ಇತ್ತೀಚಿನ ಬರಹಗಳು: ಪ್ರಜ್ಞಾ ಮತ್ತಿಹಳ್ಳಿ (ಎಲ್ಲವನ್ನು ಓದಿ)

ಬಾ ಬಾಪೂ ಇಲ್ಲೇ ಕೂಡು
ಇಕ್ಕಟ್ಟಾದರೂ ಅಂಗಳಕ್ಕಿಳಿಯಲು
ವೈರಾಣು ಭಯ
ಗುಂಡು ಕನ್ನಡಕವ ಅರ್ಧ ಮುಚ್ಚಿದರೂ
ಮಾಸ್ಕ್ ಸರಿಸಬೇಡ
ಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂ
ಹಾರ ಮಂಗಳಾರತಿ
ಸಾಮೂಹಿಕ ಭಜನೆ ರಘುಪತಿ
ಮುಗಿಸಿ ಬಂದು ನಾಷ್ಟಾ ತಿಂದೆ
ಆದರೀ ಸಲ
ಏನೋ ಕಲಮಲ

ಕಳೆದ ವಾರ ನಿನ್ನ ಆತ್ಮಕತೆ ಓದಿದೆ
ಜೊಹಾನ್ಸಬರ್ಗ ಪ್ಲೇಗು ರೋಗಿಗೆ
ಗಂಜಿ ಕಾಯಿಸುವಾಗ
ಫೀನಿಕ್ಸ್ ಆಶ್ರಮದ ಪುಂಡು ಹುಡುಗರಿಗೆ
ಕವಾಯತು ಕಲಿಸುವಾಗ
ಬಿಚ್ಚಿಟ್ಟ ಕೋಟಿನ ಕಿಸೆಯಲ್ಲಿ
ಗುಜರಾತಿ ಕವಿತೆ
ಲೋಟ ನೀರು ಕೊಟ್ಟವನಿಗೆ ಊಟವಿಕ್ಕು
ಚಿಕ್ಕಾಸು ಕೊಟ್ಟವಗೆ ಚಿನ್ನದ ಮೊಹರು
ನೂರ್ಮಡಿ ಪ್ರತ್ಯುಪಕಾರಕೆ
ತೋಳು ಮಡಚಿ ತಯಾರಾದೆ
ಓ ಅಲ್ಲಿ ರಿಕ್ಷಾದಲ್ಲಿ ಲಾ ಅಡ್ಮಿಷನ್
ಮಾಡಿ ಬರುತ್ತಿರುವ ಹುಡುಗಿಗೆ
ಸಿರಿಂಜ್ ಚುಚ್ಚಿ ಎಳೆದೊಯ್ದು
ತಂದೆಸೆದ ರಕ್ತಮಯ ದೇಹ
ಜೀವತೊರೆವ ಘಳಿಗೆ ಕಿವಿಯಲುಸುರುವುದೆಂತು ಪೀಡಪರಾಯೇ

ಮೊನ್ನೆ ರಾತ್ರಿ ಎಲ್ಲರ ನೋವನು ಬಲ್ಲವನಾಗಲು ಬಯಸಿ ಹೊರಟಿದ್ದೆ
ಕಂದೀಲು ಹಚ್ಚಿದ ದೋಣಿಗಳು ತುಯ್ಯುವ ಅಲೆಯಲ್ಲಿ ನಿಧಾನ ಸಾಗಿದ್ದವು
ನಿದ್ದೆ ಜಗ್ಗುವ ರೆಪ್ಪೆಗಳ ಹಿಗ್ಗಿಸಿ ಹುಟ್ಟು ಹಾಕುವ ಬೆಸ್ತರು ಎಂದೂ ಕಣ್ಣು ಮುಚ್ಚಿದ ಮೀನುಗಳ ಕುರಿತು ಹಾಡುತ್ತಿದ್ದರು
ಕೈ ಮಗ್ಗದಂಗಡಿ ಮುಚ್ಚಿದ್ದಕ್ಕೆ ಧಣಿಯ ತೋಟಕ್ಕೆ ಮಣ್ಣು ಹೊರುವ ಹೆಂಗಸರು ಕೆಕ್ಕರಿಸುವ ನೋಟುಗಳ ಭಯಕ್ಕೆ ಕನಸಲ್ಲೂ ಕಿರುಚಿಬಿಟ್ಟರು

ಆಡಿನ ಹಾಲು ಕರೆದಿಟ್ಟ ಪಾತ್ರೆಯಲ್ಲಿ
ಸಣ್ಣಗೆ ನೊರೆಯ ಗುಳ್ಳೆಗಳೇಳುವಾಗ
ಕುಡಿದ ತುಟಿಯ ಮೇಲೊಂದು ಹಾಲಿನ ಮೀಸೆ ನಿನಗೂ ಮೂಡಿತ್ತೇನೋ ಅಲ್ಲವೇ ಬಾಪೂ

ಈ ಸಲ ಭಜನೆಗೆ ಧ್ವನಿಗೂಡಿಸುವಾಗ
ಗಂಟಲು ಗೊರಗೊರ ಕಣ್ಣು ಒದ್ದೆಯಾದರೂ
ಶಬ್ದ ಹೊರಡುತ್ತಿಲ್ಲ
ಹುಲ್ಲು ಕೊಯ್ಯುವ ಪುಟ್ಟಿಯ ದರದರ ಎಳೆದು ಮುಕುರುವಾಗ ತುಂಡಾದ ನಾಲಿಗೆ ಯದೇ ನೆನಪು
ಕ್ಷಮಿಸು ಬಾಪೂ ಮುಂದಿನ ಸಲ ದೊಡ್ಡ ಧ್ವನಿಯಲ್ಲಿ ಹಾಡುತ್ತೇನೆ
ಮೂಲೆಯಲ್ಲಿ ಇಟ್ಟ ಕೋಲ ಗಟ್ಟಿಯಾಗೂರುತ್ತ ಹೊರಡು ‌
ಸ‌ನ್ಮತಿ ಗಿಡ ಹೂಬಿಡುವ ತನಕ ಆಗಾಗ ಬರುತ್ತಿರು