ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಏಳಿಂಜೆ ನಾಗೇಶ್ ಪೂಜಾರಿ
ಇತ್ತೀಚಿನ ಬರಹಗಳು: ಏಳಿಂಜೆ ನಾಗೇಶ್ ಪೂಜಾರಿ (ಎಲ್ಲವನ್ನು ಓದಿ)

 ಬಾಲಿವುಡ್ ನಲ್ಲಿ ಒಂದು ನೆಲೆ ಕಾಣಬೇಕಾದರೆ ಅಥವಾ ನಿರ್ಮಾಪಕ, ನಿರ್ದೇಶಕರ ಗಮನ ಸೆಳೆಯಬೇಕಾದರೆ ಪ್ರಣಯ ಪ್ರಸಂಗದ ಗಾಳಿಸುದ್ದಿ ಹರಡಿರಬೇಕು.ಆದ್ದರಿಂದಲೇ ಅದಕ್ಕಾಗಿಯೇ ನಟ ನಟಿಯರು ಪ್ರೇಮ ಬಲೆ ಸೃಷ್ಟಿಸಿ ಅದರಲ್ಲಿ ಬೀಳುತ್ತಿರುವುದು ಈಗೀಗ ಸಾಮಾನ್ಯವಾಗಿ ಬಿಪಾಶಾ ಬಸು,ರಣಬೀರ್ ಕಪೂರ್- ದೀಪಿಕಾ ಪಡುಕೋಣೆ, ರಣವೀರ್ ಸಿಂಗ್_ಅನುಷ್ಕಾ ಶರ್ಮಾ,ದೀಪಿಕಾ ಪಡುಕೋಣೆ – ರಣವೀರ್ ಸಿಂಗ್,ಅನುಷ್ಕಾ- ವಿರಾಟ್ ಕೊಹ್ಲಿ(ಕ್ರಿಕೆಟಿಗ), ಕರೀನಾ ಕಪೂರ್ – ಶಾಹಿದ್ ಕಪೂರ್, ಸೈಫ್ ಅಲಿ ಖಾನ್ – ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ- ಶಾಹಿದ್ ಕಪೂರ್ ಮತ್ತಿತರರ ಪ್ರೇಮ ಪ್ರಸಂಗಗಳನ್ನು ಗಮನಿಸಬಹುದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಈ ಪ್ರಣಯ ಜೋಡಿಗಳನ್ನು ಹಾಕಿಕೊಂಡು ಚಿತ್ರ ತಯಾರಿಸಲು ನಿರ್ದೇಶಕ, ನಿರ್ಮಾಪಕರು ಮುಗಿ ಬೀಳುತ್ತಿರುವುದು. ಈ ಮೂಲಕ ಆ ಜೋಡಿಗೂ ಒಂದಷ್ಟು ಕೆಲಸ ಸಿಗುವುದು. ಹೆಚ್ಚಿನವರು ಈ ರೀತಿ ಕೆಲಸ ಪಡೆದು ಬಳಿಕ ಕೆಲಸದ ಅವಕಾಶ ಕಡಿಮೆ ಆಗುತ್ತಿರುವುದು ಗೋಚರವಾಗುತ್ತಲೇ ತಮ್ಮ ಜತೆಗಾರಿಕೆಯನ್ನು ತುಂಡರಿಸಿ ಬಿಡುವುದನ್ನು ನಾವು ಕಾಣುತ್ತಿದ್ದೇವೆ.ಅಂತಹ ಸ್ಯಾಂಪಲ್ ಗಳನ್ನು ಇಲ್ಲಿ ನೋಡೋಣ…

* ಕಾಜೋಲ್ ಳ ಅಜ್ಜಿ ಶೋಭನಾ ಸಮರ್ಥ್ ತನ್ನ ಪತಿಗೆ ವಿಚ್ಛೇದನ ನೀಡಿದ ಬಳಿಕ 10 ವರ್ಷಗಳ ಕಾಲ ತನ್ನ ಮೂವರು ಪುತ್ರಿಯರೊಂದಿಗೆ ವಾಸಿಸಿದ್ದರು.ತಾವು ಬೇರೆಬೇರೆಯಾದ ಬಳಿಕ ನಟಿ ಶೋಭನಾರ ಪತಿಯು ನಾದಿರಾರೊಂದಿಗೆ ಸಂಬಂಧವಿಟ್ಟುಕೊಂಡಿದ್ದು ಸಾಯುವ ತನಕ ಆಕೆಯೊಂದಿಗೆ ಇದ್ದಿದ್ದರು.ಶೋಭನಾ ಸಮರ್ಥ್ ರ ಮಲಸಹೋದರಿ ನಳಿನಿ ಜಯವಂತ್ ಮತ್ತು ಅಶೋಕ್ ಕುಮಾರ್ ಜತೆಯಾಗಿ 11ಚಿತ್ರಗಳಲ್ಲಿ ಕೆಲಸ ಮಾಡಿದ್ದರು.ಈ ಅವಧಿಯಲ್ಲಿ ಬಿಟ್ಟುಬಿಡದ ಸಂಬಂಧವನ್ನು ಹೊಂದಿದ್ದರು. ಅವರ(ಅಶೋಕ್ ಕುಮಾರ್) ಪತ್ನಿ ಕುಡುಕಿಯಾಗಿದ್ದರು. ಇದರಿಂದ ಬೇಸತ್ತ ಅವರು ಮನೆ ಬಿಟ್ಟು ನಳಿನಿ ವಾಸಿಸುತ್ತಿದ್ದ ಅದೇ ಬೀದಿಯಲ್ಲಿ ಮನೆ ಮಾಡಿಕೊಂಡು ನೆಲೆಸತೊಡಗಿದರು. ಆದರೆ ನಳಿನಿ ಅವರು ಅಶೋಕ್ ಕುಮಾರ್ ಸೇರಿದಂತೆ ಎಲ್ಲಾ ಸಾಮಾಜಿಕ ಸಂಪರ್ಕದಿಂದ ದೂರವುಳಿದು ತನ್ನ 80ರ ಹರೆಯದಲ್ಲಿ ನಿಧನ ಹೊಂದಿದರು.

* ನಟಿ ಮೀನಾ ಕುಮಾರಿ ಅವರು ಕಮಲ್ ಅಮ್ರೋಹಿಯನ್ನು ವಿವಾಹವಾಗಿದ್ದರೂ ರಾಜೇಂದ್ರ ಕುಮಾರ್, ರಾಜ್ ಕುಮಾರ್, ಪ್ರದೀಪ್ ಕುಮಾರ್ , ಧರ್ಮೇಂದ್ರ ಮತ್ತು ಭರತ್ ಭೂಷಣ್ ರೊಂದಿಗೂ ಅಫೇರ್ ಹೊಂದಿದ್ದರು.
ಪ್ರೇಮ್ ನಾಥ್ ಮಧುಬಾಲಾರಿಗೆ ಪ್ರಪೋಸ್ ಮಾಡಿದ್ದರು.ಆದರೆ ಆಕೆ ಅದನ್ನು ತಿರಸ್ಕರಿಸಿದ್ದರು.ಪ್ರದೀಪ್ ಕುಮಾರ್ ಮತ್ತು ಭರತ್ ಭೂಷಣ್ ರಿಂದಲೂ ಆಕೆಗೆ ಪ್ರಪೋಸ್ ಬಂದಿತ್ತು.ಆದರೆ ಆಕೆ ಮಾತ್ರ ಕಿಶೋರ್ ಕುಮಾರ್ ಗೆ ಪ್ರಪೋಸ್ ಮಾಡಿದ್ದರು.
ಮಧುಬಾಲಾ ದಿಲೀಪ್ ಕುಮಾರ್ ರಿಂದ ದೂರವಾಗಲು ಕಾರಣವಾದದ್ದು ಬಿ.ಆರ್.ಚೋಪ್ರಾರ ‘ನಯಾ ದೌರ್’  ಚಿತ್ರ ಹೊರತು ಅವರ ತಂದೆ ಅಲ್ಲ ಎನ್ನಲಾಗುತ್ತಿದೆ. ಆ ಚಿತ್ರಕ್ಕೆ ಗ್ವಾಲಿಯರ್ ನ ಬೆಟ್ಟ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿತ್ತು.ಅದು ಡಕಾಯಿತರು ಸುಳಿದಾಡುತ್ತಿದ್ದ ಪ್ರದೇಶವಾದ್ದರಿಂದ ತಾಣವನ್ನು ಬದಲಾಯಿಸುವಂತೆ ಮಧುಬಾಲಾರ ತಂದೆ ಕೇಳಿಕೊಂಡರು. ಆದರೆ ಬೆಟ್ಟ ಪ್ರದೇಶವೇ ಬೇಕಾಗಿದ್ದ ಕಾರಣ ನಿರ್ಮಾಪಕರು ಅದಕ್ಕೆ ನಿರಾಕರಿಸಿದರು.ದಿಲೀಪ್ ಕುಮಾರ್ ಜತೆ  ಮಧುಬಾಲಾಗೆ ಉತ್ತಮ ಸಂಬಂಧವಿದ್ದ ಕಾರಣ ನಿರ್ಮಾಪಕರು ಮಧುಬಾಲಾರನ್ನು ಒಲಿಸುವ ಕಾರ್ಯವನ್ನು ದಿಲೀಪ್‌ ಕುಮಾರ್ ಗೆ ವಹಿಸಿ‌ಕೊಟ್ಟರು.ಆದರೆ ಆಕೆ ತಂದೆಯ ಆಜ್ಞೆಯನ್ನು ತಿರಸ್ಕರಿಸಲು ಒಪ್ಪಲಿಲ್ಲ. ಚಿತ್ರದಿಂದ ಹೊರಬರಲು ಆಕೆ ತೀರ್ಮಾನಿಸಿದಾಗ ನಿರ್ಮಾಪಕರು ಆಕೆಯ ವಿರುದ್ಧ ದೂರು ದಾಖಲಿಸಿದರು. ಇದರಿಂದಾಗಿ ದಿಲೀಪ್ ಕುಮಾರ್ ಈಕೆಯ ಮೇಲೆ ಕೋಪಗೊಂಡಿದ್ದರು ಎನ್ನಲಾಗುತ್ತಿದ್ದರೂ ಅದು ಸತ್ಯವಲ್ಲ ಎನ್ನುವುದಾಗಿ ಬಾಲಿವುಡ್ ಮೂಲಗಳು ಹೇಳುತ್ತಿದ್ದವು. ಆದರೂ ಇವರಿಬ್ಬರ ಪ್ರೇಮ ಸುಖಾಂತ್ಯವಾಗಲಿಲ್ಲ.

ಮಧುಬಾಲಾ ಅಸೌಖ್ಯಗೊಂಡ ಬಳಿಕ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಲು ಯೋಜನೆ ಹಾಕಿಕೊಂಡಿದ್ದರು.ಈ ಮಧ್ಯೆ ಕಿಶೋರ್ ಕುಮಾರ್ ಮದುವೆಯ ಪ್ರಸ್ತಾಪವನ್ನು  ಮುಂದಿಟ್ಟರು. ಮೊದಲು ಲಂಡನ್ ಗೆ ಹೋಗಿ ಅಲ್ಲಿಯ ವೈದ್ಯರಿಂದ ಕ್ಲೀನ್ ಚಿಟ್ ಪಡೆದ ಬಳಿಕ ವಿವಾಹವಾಗು ಎಂಬುದಾಗಿ ತಂದೆ ಮಧುಬಾಲಾರಿಗೆ ಹೇಳಿದರೂ ಆಕೆ ಕೇಳದೆ ದಿಲೀಪ್ ಕುಮಾರ್ ರ ಮೇಲಿನ ಕೋಪದ ಭರದಲ್ಲಿ 1960ರಲ್ಲಿ ತನ್ನ 27ರ ಹರೆಯದಲ್ಲಿ ಗಾಯಕ ಕಿಶೋರ್ ಕುಮಾರ್ ರನ್ನು ವಿವಾಹವಾದರು.
ಆಕೆ ಹೆಚ್ಚು ಸಮಯ ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ಕಿಶೋರ್ ಕುಮಾರ್ ಆಕೆಯನ್ನು ಕರೆ ತಂದು ಮುಂಬಯಿಯ ಕಾರ್ಟರ್ ರೋಡ್ ನಲ್ಲಿನ ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟುಬಿಟ್ಟರು. ಜತೆಗೆ ನರ್ಸ್ ಮತ್ತು ಡ್ರೈವರ್‌ ಗಳನ್ನೂ ನೀಡಿದ್ದರು ಎನ್ನಲಾಗುತ್ತಿದೆ. ಕಿಶೋರ್ ಕುಮಾರ್ ನಾಲ್ಕು ತಿಂಗಳಿಗೊಮ್ಮೆ ಹೋಗಿ ಅವರನ್ನು‌ ಭೇಟಿಯಾಗುತ್ತಿದ್ದರು. ಆರೋಗ್ಯವಂತಳಾಗಿದ್ದ ಸಮಯ ಚಿತ್ರರಂಗದ ಹಾಟ್ ಪ್ರಾಪರ್ಟಿ ಆಗಿದ್ದ ತಾನು ಅನಾರೋಗ್ಯಗೊಂಡು ಹಾಸಿಗೆ ಹಿಡಿದ ಬಳಿಕ ಯಾರೊಬ್ಬರೂ ತನ್ನ ಆರೋಗ್ಯ ವಿಚಾರಿಸಲು ಬಾರದಿದ್ದುದರಿಂದ ಬಹಳವಾಗಿ ನೊಂದಿದ್ದರು ಆಕೆ. ಕೊನೆಗೆ ತನ್ನ 36 ರ ಹರೆಯದಲ್ಲಿ ಇಹಲೋಕ ತ್ಯಜಿಸಿದರು.

* ಮಧುಬಾಲಾರಿಂದ ದೂರವಾದ ಬಳಿಕ ದಿಲೀಪ್ ಕುಮಾರ್ ವೈಜಯಂತಿ ಮಾಲಾ ಗೆ ಗಾಳ ಹಾಕತೊಡಗಿದರು.ಆದರೆ ಯಾವುದೋ ಕಾರಣಕ್ಕೆ ಈ ಸಂಬಂಧ ಪಕ್ಕಾ ಆಗಲಿಲ್ಲ. ದಿಲೀಪ್‌ ಕುಮಾರ್ ಮೆಲ್ಲ ಮೆಲ್ಲನೆ ವಹೀದಾ ರೆಹಮಾನ್ ಗೆ ಕಣ್ಣು ಹಾಕತೊಡಗಿದರು.ಅವರೊಂದಿಗೆ ಡೇಟಿಂಗ್ ನಡೆಸತೊಡಗಿದರು.ಆದರೆ ಕೊನೆ ಕ್ಷಣದಲ್ಲಿ ಆಕೆಗೆ ಕೈಕೊಟ್ಟು ಸಾಯಿರಾ ಬಾನು ಅವರ ಕೈ ಹಿಡಿದರು.ಮದುವೆಯಾಗುವ ಮೊದಲು ವಿದ್ಯಾವಂತ ನಟಿ ಎಂದೇ ಗುರುತಿಸಿಕೊಂಡಿದ್ದ ವಿವಾಹಿತೆ ಕಾಮಿನಿ ಕೌಶಲ್ ಜತೆಗೂ ದಿಲೀಪ್ ಕುಮಾರ್ ಯಾನೆ ಯೂಸುಫ್ ಖಾನ್ ಪ್ರಣಯ ನಡೆಸುತ್ತಿದ್ದುದು ಆ ಸಮಯ ಭಾರೀ ಪ್ರಚಾರ ಪಡೆದಿತ್ತು. ಕಾಮಿನಿ ತನ್ನ ಸಹೋದರಿ (ಎರಡು ಮಕ್ಕಳ ತಾಯಿ) ಮೃತ ಪಟ್ಟ ಬಳಿಕ ಸಹೋದರಿ ಗಂಡನನ್ನೇ ವಿವಾಹವಾದರು.ಕಾಮಿನಿಯ ಸಹೋದರ ಮಿಲಿಟರಿ ಅಧಿಕಾರಿ ಸೆಟ್ ಗೆ ಬಂದು ತನ್ನ ಸಹೋದರಿ(ಕಾಮಿನಿ)ಯ ಮೇಲೆ ಕಣ್ಣಿಡಲಾರಂಭಿಸಿದ ಬಳಿಕ ದಿಲೀಪ್ ಕುಮಾರ್ ಮೆಲ್ಲನೆ ಆಕೆಯ ಬದುಕಿನಿಂದ ಜಾರಿಕೊಂಡರು.

ಮದುವೆಗೆ ಮುಂಚೆ  ಸಾಯಿರಾ ಬಾನು ವಿವಾಹಿತ ನಟ ರಾಜೇಂದ್ರ ಕುಮಾರ್ ಜತೆ ಸಂಬಂಧ ಹೊಂದಿದ್ದರು.ಮೀನಾ ಕುಮಾರಿ ಜತೆ  ಡೇಟಿಂಗ್ ನಡೆಸುತ್ತಿದ್ದ ಧರ್ಮೇಂದ್ರ ಜತೆಗೂ ಸಾಯಿರಾ  ಪ್ರೇಮ ಸಲ್ಲಾಪ ನಡೆಸಿದ್ದರು ಎನ್ನುತ್ತವೆ ಬಾಲಿವುಡ್ ಮೂಲಗಳು.
ವೈಜಯಂತಿ ಮಾಲಾ ನಿರಾಕರಿಸುತ್ತಿದ್ದ ಹೊರತಾಗಿಯೂ ರಾಜ್ ಕಪೂರ್ ಆಕೆಯ ಜತೆ ಡೇಟಿಂಗ್ ನಡೆಸುತ್ತಿದ್ದರು.ನರ್ಗೀಸ್ ಜತೆ ಸಂಬಂಧ ಹೊಂದಿರುವುದಕ್ಕಾಗಿ ಕಪೂರ್ ರ ಪತ್ನಿ ಕೋಪಗೊಂಡುದುದರಿಂದಾಗಿ ವೈಜಯಂತಿ ಜತೆಗಿನ ಸಂಬಂಧವನ್ನೂ ಕೊನೆ ಕ್ಷಣದಲ್ಲಿ ಕೈಬಿಟ್ಟರು. ವೈಜಯಂತಿ ಮಾಲಾ ಅಬಾರ್ಷನ್ ಕೂಡಾ ಮಾಡಿಸಿದ್ದರು ಎಂಬುದಾಗಿ ಆ ಕಾಲದಲ್ಲಿ ಪ್ರಚಾರದಲ್ಲಿತ್ತು. ಕೊನೆಗೆ ಈಕೆ ಕಪೂರ್ ರ ಖಾಸಗಿ ವೈದ್ಯನನ್ನೇ ವಿವಾಹವಾದರು.ಈತ ಕೂಡಾ ವಿವಾಹಿತನಾಗಿದ್ದು ಪತ್ನಿಯನ್ನು ತೊರೆದಿದ್ದರು.

* ನರ್ಗೀಸ್ ರೊಂದಿಗೆ 16 ಚಿತ್ರಗಳಲ್ಲಿ  ರೊಮಾನ್ಸ್ ನಡೆಸಿದ ವಿವಾಹಿತ ( ಪತ್ನಿ ಕೃಷ್ಣಾ) ರಾಜ್ ಕಪೂರ್ ಗೆ ಅಸಲಿಯಾಗಿಯೂ ಆಕೆಯ ಮೇಲೆ ಮೋಹ ಉಂಟಾಗಿತ್ತು. ಅವರಿಬ್ಬರ ಜೋಡಿಯ ಪ್ರಣಯ ಪರದೆಯಲ್ಲಿ ಎಷ್ಟು ಜನಪ್ರಿಯವಾಯಿತೋ ಅಷ್ಟೇ ಅವರ ನಿಜ ಬದುಕಿನ ಪ್ರಣಯ ಕೂಡಾ ಪ್ರಚಾರ ಗಿಟ್ಟಿಸಿಕೊಂಡಿತು.ತಾನು ಮುಸ್ಲಿಂ ಆಗಿದ್ದ ಕಾರಣ ಮದುವೆಗೆ ತೊಂದರೆಯಾದೀತು ಎಂಬ ಕಾರಣಕ್ಕೆ  ಆಕೆ ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರನ್ನ ಭೇಟಿಯಾಗಿ ಸಹಕರಿಸುವಂತೆ ಕೇಳಿಕೊಂಡಿದ್ದರು.ಆದರೆ ಆಕೆಯ ಆಸೆ ಕೈಗೂಡಲಿಲ್ಲ. ಪ್ರಣಯ ಭಗ್ನಗೊಂಡ ಬಳಿಕ ಆಕೆ ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಕಪೂರ್ ತನ್ನ  ಆರ್.ಕೆ.ಸ್ಟುಡಿಯೋದ ಕಚೇರಿಯಲ್ಲಿ ನರ್ಗೀಸ್ ರ ಫೋಟೋ ಇಟ್ಟುಕೊಂಡಿದ್ದರು. ನರ್ಗೀಸ್- ರಾಜ್ ಕಪೂರ್ ರ ಪ್ರೇಮಾಂಕುರದ ಸಮಯ ನರ್ಗೀಸ್ ಗೆ ಕೇವಲ 19 ವರ್ಷ ವಯಸ್ಸಾಗಿತ್ತು.
*  1957 ರಲ್ಲಿ ‘ಮದರ್ ಇಂಡಿಯಾ’ ಚಿತ್ರದ ಚಿತ್ರೀಕರಣ ಸಂದರ್ಭ ಸೆಟ್ ನಲ್ಲಿ  ಅಗ್ನಿ ಅನಾಹುತವಾಗಿ ಸುನಿಲ್ ದತ್ತ್ ಮತ್ತು ನರ್ಗೀಸ್ ತೀವ್ರವಾಗಿ ಜಖಂಗೊಂಡರು.ಈ ಘಟನೆ ಅವರಿಬ್ಬರ ಹೃದಯದಲ್ಲಿ ಪ್ರೇಮಾಂಕುರಕ್ಕೆ ಕಾರಣವಾಯಿತು. ವಿಶೇಷವೆಂದರೆ ನರ್ಗೀಸ್ ಮತ್ತು ಸುನಿಲ್ ದತ್ತ್  ಈ ಚಿತ್ರದಲ್ಲಿ ತಾಯಿ‌ ಮಗನ ಪಾತ್ರ ನಿಭಾಯಿಸುತ್ತಿದ್ದರು.ರಾಜ್ ಕಪೂರ್ ಜತೆಗಿನ ತನ್ನ ಪ್ರೇಮದ ಬಗ್ಗೆಯೂ ನರ್ಗೀಸ್ ಸುನಿಲ್ ದತ್ತ್ ಬಳಿ ಹೇಳಿಕೊಂಡಿದ್ದರು.ದತ್ತ್ ಆಗ ತಾನೇ ಚಿತ್ರರಂಗಕ್ಕೆ  ಪಾದಾರ್ಪಣೆ ಮಾಡಿದ್ದ ಕಲಾವಿದ .ಮದರ್ ಇಂಡಿಯಾ ಚಿತ್ರದ ನಟನೆಗಾಗಿ ದತ್ತ್  ತಿಂಗಳಿಗೆ 10- 12 ರೂಪಾಯಿ ಸಂಬಳ ಪಡೆಯುತ್ತಿದ್ದರೆ ನರ್ಗೀಸ್ ಆ ಚಿತ್ರಕ್ಕೆ ಒಟ್ಟು 50 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು.ಕೊನೆಗೆ ಈ ಪ್ರೇಮ ವಿವಾಹದ ವರೆಗೆ ಸಾಗಿತು.

* ಪರ್ವೀನ್ ಬಾಬಿ ಮಹೇಶ್ ಭಟ್ ರೊಂದಿಗೆ ದೀರ್ಘ ಕಾಲ ಸಂಬಂಧವನ್ನು ಹೊಂದಿದ್ದರು.ಜತೆಗೆ ಅಮಿತಾಭ್ ಬಚ್ಚನ್, ಡ್ಯಾನಿ, ಫಿರೋಝ್ ಖಾನ್ ಜತೆಗೂ ಸಲುಗೆಯಿಂದಿದ್ದರು.
* ಶತ್ರುಘ್ನ ಸಿನ್ಹಾ ಅವರು ರೀನಾ ರಾಯ್ ರೊಂದಿಗೆ ಮೂರು ವರ್ಷ ಗಳ ಕಾಲ ಡೇಟಿಂಗ್ ನಡೆಸಿ ಕೊನೆಗೆ ಆಕೆಗೆ ಕೈಕೊಟ್ಟು ಪೂನಂರನ್ನು‌ ವಿವಾಹವಾದರು. ಆದರೂ ರೀನಾ ಶತ್ರುಗಾಗಿ ಜೀವ ಬಿಡುತ್ತಿದ್ದರು. ಕೊನೆಗೆ ವೃತ್ತಿ ಬದುಕಿನ ಉತ್ತುಂಗದಲ್ಲಿ ದ್ದಾಗಲೇ  ಚಿತ್ರರಂಗ ತೊರೆದು ಮೊಹ್ಸಿನ್ ಖಾನ್ ರನ್ನು ವಿವಾಹವಾದರು. ಶತ್ರುಘ್ನ ಸಿನ್ಹಾರ ಪುತ್ರಿ ಸೋನಾಕ್ಷಿ ನೋಡಲು ರೀನಾರನ್ನು ಹೋಲುತ್ತಿರುವುದು ಕಾಕತಾಳೀಯವಾದರೂ ಈಕೆ ಶತ್ರುಘ್ನ – ರೀನಾರ ಪ್ರೇಮದ ಗುಟ್ಟಿನ ಕೂಸು
ಎಂಬಲ್ಲಿಯವರೆಗೆ ಸುದ್ದಿ ಹರಡಿತ್ತು.
* ಬಾಲಿವುಡ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಪ್ತಣಯ ಕತೆ ಅಮಿತಾಭ್ ಬಚ್ಚನ್ ರೇಖಾರದ್ದು. ಜಯಾರನ್ನು ವಿವಾಹವಾದ ಬಳಿಕವೂ ಬಚ್ಚನ್ ರೇಖಾ ಪ್ರಣಯ ಮುಂದುವರಿದಿತ್ತು. ಈ ರಿಯಲ್ ಪ್ರೇಮಕತೆಯನ್ನು ಆಧರಿಸಿ ‘ ಸಿಲ್ ಸಿಲಾ’ ಚಿತ್ರವೂ ತಯಾರಾಗಿತ್ತು. ಅಮಿತಾಭ್, ರೇಖಾ ಮತ್ತು ಜಯಾ ಬಚ್ಚನ್ ಇದರಲ್ಲಿ ನಟಿಸಿದ್ದರು. ಇತ್ತ ರೇಖಾ – ಅಮಿತಾಭ್ ರ ಪ್ರಣಯವನ್ನು ಗಟ್ಟಿಗೊಳಿಸಲು ಸಹಕರಿಸಿದವರು ರೇಖಾರ ಖಾಸಾ ಗೆಳತಿ ಶ್ರೀದೇವಿ ಎನ್ನಲಾಗುತ್ತಿದೆ. ಹೀಗೆ ಸಹಕರಿಸುತ್ತಾ ಸಹಕರಿಸುತ್ತಾ ಸ್ವತಃ ಶ್ರೀದೇವಿಗೆ ಬಚ್ಚನ್ ರ ಮೇಲೆ ಮೋಹವುಂಟಾಗಿತ್ತು ಎನ್ನಲಾಗುತ್ತಿದೆ.ಆದರೆ ಜಯಾ ಬಚ್ಚನ್ ರ ಬಿಗಿ ಹಿಡಿತದಿಂದಾಗಿ ಬಚ್ಚನ್ ಸಂಸಾರ ಉಳಿಯಿತು. ರೇಖಾ ಯಾ ಶ್ರೀದೇವಿ ಗೆ ಬಚ್ಚನ್ ರನ್ನು ಬುಟ್ಟಿಗೆ ಹಾಕಲು ಸಾಧ್ಯವಾಗಲೇ ಇಲ್ಲ.
* ಇತ್ತ ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ನಡುವಿನ ಪ್ರೇಮಜ್ವಾಲೆ ದಟ್ಟವಾಗಿ ಹೊತ್ತಿ ಉರಿಯಲು ಆರಂಭಿಸಿತ್ತು.ಅವರಿಬ್ಬರು ವಿವಾಹವಾಗಿದ್ದರು ಎಂಬ ಸುದ್ದಿಯೂ ಹಬ್ಬಿತ್ತು.ಮಿಥುನ್ ಚಕ್ರವರ್ತಿ ಹೆಲೆನಾ ಲುಕೆ ಎಂಬವರನ್ನು ವಿವಾಹವಾಗಿ ವಿಚ್ಛೇದನ ನೀಡಿದ್ದರು.ಬಳಿಕ ಗಾಯಕ ಕಿಶೋರ್ ಕುಮಾರ್ ರ ಮಾಜಿ ಪತ್ನಿ , ನಟಿ ಯೋಗಿತಾ ಬಾಲಿಯನ್ನು ವಿವಾಹವಾಗಿ ನಾಲ್ಕು ಮಕ್ಕಳನ್ನು ಪಡೆದಿದ್ದರು.ಅನಾಥ ಹೆಣ್ಣುಮಗುವೊಂದನ್ನು ದತ್ತು ಪಡೆದು ಸಾಕುತ್ತಿದ್ದು ಆಕೆಯೂ ನಟನಾ ರಂಗಕ್ಕೆ ಕಾಲಿಟ್ಟಿದ್ದಾಳೆ.ಈ ಮಧ್ಯೆ ಶ್ರೀದೇವಿ ಜತೆಗಿನ ಸಂಬಂಧದ ಗಾಳಿ ಸುದ್ದಿ ಹಬ್ಬಿ ಠುಸ್ಸ್ ಆಗಿ ಕೊನೆಗೆ ಶ್ರೀದೇವಿ ಇಬ್ಬರು ಮಕ್ಕಳ ತಂದೆ ನಿರ್ಮಾಪಕ ಬೋನಿಕಪೂರ್ ರನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾದರು.ಹಿರಿಯ ಪುತ್ರಿ ಜಾನ್ಹವಿ ಕಪೂರ್ ಈಗ ನಟಿಯಾಗಿ ಗುರುತಿಸಿಕೊಂಡಿದ್ದಾರೆ.ಕೆಲ ವರ್ಷಗಳ ಹಿಂದೆ ಆಕೆ ದುರಂತ ಸಾವನ್ನಪ್ಪಿದರು.
* ದೇವಾನಂದ್ ಮತ್ತು ಸುರೈಯ್ಯಾರ ಪ್ರೇಮ ಪ್ರಕರಣ ಕೂಡಾ ಬಾಲಿವುಡ್ ನಲ್ಲಿ ಬಹಳ ಕುತೂಹಲಕಾರಿಯಾದದ್ದು. ದೇವಾನಂದ್ ರ 6ಚಿತ್ರಗಳಿಗೆ ನಾಯಕಿಯಾಗಿ ನಟಿಸಿದ್ದ ಸುರೈಯ್ಯಾ ಸ್ವತಃ ಗಾಯಕಿ ಕೂಡಾ ಆಗಿದ್ದು,ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದ್ದರು. 1948ರಲ್ಲಿ ‘ವಿದ್ಯಾ’ ಚಿತ್ರದ ಚಿತ್ರೀಕರಣ ವೇಳೆ ಸುರೈಯ್ಯಾ ಕೂತಿದ್ದ ದೋಣಿ ಮುಳುಗಲಾರಂಭಿಸಿತು. ಮುಳುಗುತ್ತಿದ್ದ ಆಕೆಯನ್ನು ದೇವಾನಂದ್ ರಕ್ಷಿಸಿದರು. ಈ ಘಟನೆ ಅವರಿಬ್ಬರ ನಡುವಿನ ಪ್ರೇಮಾಂಕುರಕ್ಕೆ ನಾಂದಿಯಾಯಿತು.

1949ರಲ್ಲಿ ‘ ಜೀರಸ್’ ಚಿತ್ರದ ಚಿತ್ರೀಕರಣ ಸಮಯ ದೇವಾನಂದ್ ಸುರೈಯ್ಯಾಗೆ ಪ್ರಪೋಸ್ ಮಾಡಿದರು. 3 ಸಾವಿರ ರೂಪಾಯಿ ಬೆಲೆಯ ಉಂಗುರವನ್ನು ಆಕೆಯ ಬೆರಳಿಗೆ ತೊಡಿಸಿ ನಿಶ್ಚಿತಾರ್ಥವನ್ನು‌ನಡೆಸಿದರು.ಸದ್ಯ ಆ ಉಂಗುರದ ಬೆಲೆ 30 ಲ.ರೂ.ಗೂ ಅಧಿಕವಾಗಿದೆ. ಈ ಸುದ್ದಿ‌ ಅಪ್ಪಟ ಮುಸ್ಲಿಂ ಆಗಿದ್ದ ಸುರೈಯ್ಯಾ ರ ತಂದೆ ಮತ್ತು ಪರಿವಾರದವರಿಗೆ ತಿಳಿದಾಗ ಮನೆಯಲ್ಲಿ ಅಲ್ಲೋಲ ಕಲ್ಲೋಲವಾಯಿತು. ತಂದೆ ಇದಕ್ಕೆ ಒಪ್ಪಿಗೆ ನೀಡದ ಕಾರಣ ಈ ಸಂಬಂಧ ಮುರಿದು ಬಿತ್ತು.ಇಬ್ಬರೂ ಬೇರೆಬೇರೆಯಾದರು.ಆದರೆ ಸುರೈಯ್ಯಾಗೆ ಇದು ಭಾರೀ ದೊಡ್ಡ ಆಘಾತವಾಯಿತು. ಆಕೆ ಮುಂದಕ್ಕೆ ಮದುವೆಯೇ ಆಗಲಿಲ್ಲ. 1951 ರಲ್ಲಿ  ‘ಸಿತಾರೆ’ ಚಿತ್ರದಲ್ಲಿ ದೇವಾನಂದ್ ಜತೆಗೆ ಕೊನೆಯ ಬಾರಿಗೆ ನಟಿಸಿದ್ದ ಈಕೆ ಬಳಿಕ  ಯಾವತ್ತೂ ದೇವಾನಂದ್ ಜತೆ ನಟಿಸಿಲ್ಲ.ಬಾಲಿವುಡ್ ನ ಇತರ ಪ್ರೇಮಕತೆಯ ಗಾಳಿಸುದ್ದಿಯಂತೆ ಇದನ್ನೂ ಗಾಳಿಸುದ್ದಿ ಎನ್ನಲಾಗಿತ್ತು.ಆದರೆ ಆಕೆ ಕುಮಾರಿಯಾಗಿಯೇ ಉಳಿದಿರುವುದು ಆಕೆ ನಿಜವಾಗಿಯೂ ದೇವಾನಂದ್ ರನ್ನು ಪ್ರೇಮಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿತ್ತು.2004ರಲ್ಲಿ ಆಕೆ ನಿಧನರಾದರು.
ತಾನು ಝೀನತ್ ಅಮಾನ್ ರ ಪ್ರೇಮದಲ್ಲಿ ಸಿಲುಕಿದ್ದೆ ಎಂಬುದಾಗಿ ದೇವಾನಂದ್ ಸ್ವತಃ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದರು. ಆಕೆಯನ್ನು‌ ಕರಕೊಂಡು ಪಾರ್ಟಿಗಳಿಗೆ ಹೋಗುತ್ತಿದ್ದೆ ಮತ್ತು ಆಕೆಯ ಸೊಂಟ ಸುತ್ತು ಬಳಸುತ್ತಿದ್ದೆ ಎಂದೂ ಬರೆದಿದ್ದಾರೆ. ಜತೆಯಾಗಿ‌ ಕೆಲವೊಂದು ಹಿಟ್ ಚಿತ್ರಗಳನ್ನು‌ ನೀಡಿದ ಬಳಿಕ ಈ ಜೋಡಿಯ ಬಗ್ಗೆ ಗಾಳಿಸುದ್ದಿ ಹಬ್ಬಿರುವುದು ನಿಜ. ಸುರೈಯ್ಯಾರ ಬಳಿಕ  ಮೋನಾ ಸಿಂಗ್ ಜತೆಗೂ ಸುತ್ತಾಡಿದ್ದ ದೇವಾನಂದ್ ಕೊನೆಗೆ ಮೋನಾ ಸಿಂಗ್ ರನ್ನು 1954 ರಲ್ಲಿ “ಟ್ಯಾಕ್ಸಿ ಡ್ರೈವರ್” ಚಿತ್ರದ ಸೆಟ್ ನಲ್ಲಿ ಮಧ್ಯರಾತ್ರಿ  ವಿವಾಹವಾದರು. ಕಲ್ಪನಾ ಕಾರ್ತಿಕ್ ಎಂಬುದು ಈಕೆಯ ಮತ್ತೊಂದು ಹೆಸರು.

* ಮೂಲತಃ ಕನ್ನಡಿಗ ,ಜಿ.ಎಸ್.ಬಿ. ಸಮಾಜದ ವಸಂತ ಕುಮಾರ್ ಶಿವಶಂಕರ್ ಪಡುಕೋಣೆ ಯಾನೆ ಗುರುದತ್ತ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ., ಸಿನೇಮಾಟೋಗ್ರಾಫರ್, ಸಂಗೀತ ಜ್ಞಾನಿ ಮತ್ತು ನಿರ್ದೇಶಕ. ತನ್ನ ‘ ಸಿಐಡಿ ‘ ಚಿತ್ರದ ಮೂಲಕ ಚಿತ್ರರಂಗ ಕ್ಕೆ ಪರಿಚಯಿಸಲ್ಪಟ್ಟ ತಮಿಳುನಾಡು ಮೂಲದ ವಹೀದಾ ರೆಹಮಾನ್ ಗುರುದತ್ತ್ ಜತೆ ‘ ಪ್ಯಾಸಾ’ , ‘ ಕಾಗಝ್ ಕೆ ಫೂಲ್’, ‘ ಸಾಹಿಬ್ ಬೀವಿ ಔರ್ ಗುಲಾಮ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈ ನಡುವೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ಹತ್ತು ವರ್ಷ ಗಳ ಕಾಲ ಜತೆಯಾಗಿ ಕಳೆದಿದ್ದರು.ಆದರೆ ವಹೀದಾ ಯಾವತ್ತೂ ತಮ್ಮ ನಡುವೆ ಪ್ರೇಮ, ಪ್ರಣಯ ಸಂಬಂಧವಿತ್ತೆಂಬುದನ್ನು ಒಪ್ಪಿಕೊಳ್ಳಲಿಲ್ಲ. ಗುರುದತ್ತ್ ಬಾಂಗ್ಲಾದೇಶಿ ಸಂಜಾತೆ, ಹಿನ್ನಲೆ ಗಾಯಕಿ ಗೀತಾ ದತ್ತ್ ರನ್ನು‌  ವಿವಾಹವಾಗಿ ಮೂವರು ಮಕ್ಕಳನ್ನು ಪಡೆದಿದ್ದರು.ಆದರೂ ಈ ನಡುವೆ ವಹೀದಾರ ನಡುವೆ ಚಕ್ಕಂದ ಮುಂದುವರಿದಿತ್ತು. ಪತ್ನಿ ಇವರ ಈ ಆಟದಿಂದ ಬೇಸತ್ತು ದೂರ ಸರಿದರು.ಈ ನೋವಿನಿಂದ ಗುರುದತ್ತ್ 1964 ಅಕ್ಟೋಬರ್ 10 ರಂದು ವಿಪರೀತ ಕುಡಿತ ಮತ್ತು ನಿದ್ದೆ ಗುಳಿಗೆ ಸೇವನೆಯಿಂದ ಇಹಲೋಕ ತ್ಯಜಿಸಿದರು.
* ಸ್ಮಿತಾ ಪಾಟೀಲ್ ಹಿಂದಿ‌ಚಿತ್ರರಂಗದ ಅನನ್ಯ ಪ್ರತಿಭೆ.ಸ್ಮಿತಾ ಚಿತ್ರರಂಗದಲ್ಲಿ ಬಹುಬೇಗನೆ ಗಮನ ಸೆಳೆದಂತೆ ರಾಜ್ ಬಬ್ಬರ್ ರ ಗಮನವನ್ನೂ ಸೆಳೆಯತೊಡಗಿದರು.ನಾದಿರಾರನ್ನು ವಿವಾಹವಾಗಿದ್ದ ರಾಜ್ ಗೆ ಜೂಹಿ ಮತ್ತು ಆರ್ಯ ಎಂಬ ಮಕ್ಕಳು‌ ಜನಿಸಿದ್ದರು. ನಂತರ ಹೆಂಡತಿಯನ್ನು ತೊರೆದು ಸ್ಮಿತಾರನ್ನು‌ ವಿವಾಹವಾದರು.ಇವರಿಗೆ ಪ್ರತೀಕ್ ಹುಟ್ಟಿದ. ಆದರೆ ಸ್ಮಿತಾ ಪಾಟೀಲ್ 1986 ಡಿಸೆಂಬರ್  13 ರಂದು ತನ್ನ 31ರ ಗರೆಯದಲ್ಲಿ ಪ್ರತೀಕ್ ಗೆ ಜನ್ಮ ನೀಡಿದ  2 ವಾರಗಳ ಬಳಿಕ ಇಹಲೋಕ ತ್ಯಜಿಸಿದರು. ಸ್ಮಿತಾರ ಸಾವಿನ ಬಳಿಕ ಮಕ್ಕಳನ್ನು‌ ನೋಡಿಕೊಳ್ಳುವ ಉದ್ದೇಶದಿಂದ. ನಾದಿರಾ ಮತ್ತೆ ರಾಜ್ ಬಬ್ಬರ್ ರ ಬಳಿ ಸೇರಿಕೊಂಡರು.
* 1975 ರಲ್ಲಿ “ಖೇಲ್ ಖೇಲ್ ಮೆ ” ಚಿತ್ರದಲ್ಲಿ ಮೊದಲ ಬಾರಿಗೆ ರಿಷಿ ಕಪೂರ್ ಮತ್ತು ನೀತು ಸಿಂಗ್ ಜತೆಯಾಗಿ ನಟಿಸುತ್ತಿದ್ದಾಗಲೇ ಇಬ್ಬರ ಹೃದಯದಲ್ಲೂ ಪೇಮದ ಬೀಜ ಮೊಳಕೆಯೊಡೆಯತೊಡಗಿತ್ತು. ನಂತರ ಯಶ್ ಚೋಪ್ರಾರ ” ಕಭೀ ಕಭೀ” ಚಿತ್ರದಲ್ಲೂ ಜತೆಯಾಗಿ ನಟಿಸತೊಡಗಿದರು.ಅಷ್ಟೊತ್ತಿಗಾಗಲೇ ಪ್ರೇಮದ ಗಿಡ ಎತ್ತರವಾಗಿ ಬೆಳೆದಿತ್ತು.ಹಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದ ಇವರು ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದರು.ಇವರಿಬ್ಬರ ನಿಶ್ಚಿತಾರ್ಥ ನಡೆದ ಘಟನೆ ಕೂಡಾ ಬಹಳ ಸ್ವಾರಸ್ಯಕರ ವಾದುದು. ರಿಷಿ ಕಪೂರ್ ರ ಅಕ್ಕ ರೀತೂ ನಂದಾರ ವಿವಾಹ  ಸಮಾರಂಭ ದೆಹಲಿಯಲ್ಲಿ ನಡೆಯುತ್ತಿತ್ತು.ಇಡೀ ಕಪೂರ್ ಪರಿವಾರ ಅಲ್ಲಿ ಸೇರಿತ್ತು. ನೀತು ಸಿಂಗ್ ರನ್ನೂ ಅಹ್ವಾನಿಸಲಾಗಿತ್ತು. ಸಹೋದರನನ್ನು‌ ಕಂಡ ರಣಧೀರ್ ಕಪೂರ್ ಹೀಗೆ ಪ್ರಶ್ನಿಸತೊಡಗಿದರು. ” ನೀನು ಮದುವೆಯಾಗಿ ಮಕ್ಕಳನ್ನು ಪಡೆದು ಸಂಸಾರ ಸಾಗಿಸಲು ಬಯಸುವೆಯಾ?” .ಅದಕ್ಕೆ ರಿಷಿ ‘ ಹೌದು ‘ ಎಂದು ಉತ್ತರಿಸಿದರು.” ನೀನು‌ ನೀತಳನ್ನು  ಪ್ರೀತಿಸುತ್ತಿದ್ದೀಯಾ” ರಣಧೀರ್ ಪ್ರಶ್ನಿಸಿದರು. ” ಹೌದು” ಎಂದು ಉತ್ತರಿಸಿದರು ರಿಷಿ. ” ಬೇರೆ ಯಾರನ್ನಾದರೂ ಮದುವೆಯಾಗಲು ಬಯಸಿದ್ದೀಯಾ?” ಎಂದು ರಣಧೀರ್ ತಮ್ಮನನ್ನು ಪ್ರಶ್ನಿಸಿದರು.ರಿಷಿ ‘ ಇಲ್ಲ’ ಎಂದು ಉತ್ತರಿಸಿದರು. ” ಹಾಗಾದರೆ ನಿನ್ನ ಸಮಸ್ಯೆ ಏನು? ” ರಣಧೀರ್ ಕೇಳಿದಾಗ ರಿಷಿ ‘ ಏನೂ ಇಲ್ಲ’ ಎಂದರು. ಅದೇ ಸಮಾರಂಭದಲ್ಲಿ ಕೂಡಲೇ ನೀತು- ರಿಷಿಯ ನಿಶ್ಚಿತಾರ್ಥದ ಘೋಷಣೆ ಮಾಡಿದ ರಣಧೀರ್ ಕೂಡಲೇ ದೆಹಲಿಗೆ ಬರುವಂತೆ  ನೀತುರ ತಾಯಿಗೆ ಕರೆ ಮಾಡಿ ಅಂದು ಸಂಜೆಯೇ ನಿಶ್ಚಿತಾರ್ಥ ನೆರವೇರಿಸಿ ಬಿಟ್ಟರು.

* ಹೇಮಾ ಮಾಲಿನಿಗೆ ವಿವಾಹಿತ ಧರ್ಮೇಂದ್ರ ಇಷ್ಟವಾಗತೊಡಗಿದರು. ಆದರೆ ಯಾಕೋ ಅವರ ಸಂಸಾರವನ್ನು ಹಾಳುಗೈಯ್ಯುವ ಕೆಲಸ ತನ್ನಿಂದಾಗಬಾರದು ಎಂಬ ಅಳುಕು‌ ಕೂಡಾ ಆಕೆಯಲ್ಲಿತ್ತು. ವಿವಾಹಿತನಾಗಿರುವ ಹೊರತಾಗಿಯೂ ಇತರ ನಟಿಯರತ್ತ ದೃಷ್ಟಿ ಹಾಕಿ ಸೋತು ಹೋಗಿರುವ ಧರ್ಮೇಂದ್ರ ರಿಗೆ ಹೇಮಾ ಎಂದರೆ ಇಷ್ಟವಾಗತೊಡಗಿದ್ದರು.ಒಂದು ದಿನ ಸ್ವತಃ ಧರ್ಮೇಂದ್ರ ಹೇಮಾರ ಬಳಿ ನಾನು‌ ನಿನ್ನನ್ನು  ವಿವಾಹವಾಗಲು ಬಯಸಿದ್ದೇನೆ ಎಂದು ಹೇಳಿದಾಗ ಆಕೆಗೆ ಧರ್ಮೇಂದ್ರರನ್ನು ಕೈಬಿಡಲು ಇಷ್ಟವಾಗಲಿಲ್ಲ. ಕೂಡಲೇ ಒಪ್ಪಿಕೊಂಡರು. ಆದರೆ ಒಬ್ಬ ಹೆಂಡತಿ ಇರುವಾಗ ಮತ್ತೊಬ್ಬಳನ್ನು  ಹೆಂಡತಿಯಾಗಿ ಸ್ವೀಕರಿಸಲು ಹಿಂದೂ ವಿವಾಹ ಪದ್ಧತಿಯಲ್ಲಿ ಸಾಧ್ಯವಿಲ್ಲ. ಆದ್ದರಿಂದ ಅವರು ಧರ್ಮ ಬದಲು ಮಾಡಿ ವಿವಾಹವಾಗಿ ಬಳಿಕ ಒಂದು ವರ್ಷದ ನಂತರ ಅಯ್ಯಂಗಾರ್ ಶೈಲಿಯಲ್ಲಿ ಮದುವೆಯಾದರು.ಆಗ ಸನ್ನಿ ದೇವೊಲ್ ಗೆ 14-15 ರ ಹರೆಯವಾಗಿತ್ತು.ಹೇಮಾ ಮಾಲಿನಿ‌ ತನ್ನ ಆತ್ಮ ಚರಿತ್ರೆಯಲ್ಲಿ ಹೇಳಿರುವಂತೆ ಆಕೆಗೆ ಜಿತೇಂದ್ರ ಜತೆಗೂ ಪ್ರೇಮಾಂಕುರವಾಗಿತ್ತು. ಒಂದು ದಿನ ತಿರುಪತಿಗೆ ಹೋಗಿ ಅಲ್ಲಿ ವಿವಾಹವಾಗುವುದಾಗಿಯೂ ಇಬ್ಬರೂ ನಿರ್ಧರಿಸಿದ್ದರಂತೆ.ಆದರೆ ಧರ್ಮೇಂದ್ರ ರಿಂದಾಗಿ ಅದು ಸಾಧ್ಯವಾಗಲಿಲ್ಲ. ಸಂಜೀವ್ ಕುಮಾರ್ ರ ಮೇಲೂ ತನಗೆ ಪ್ರೇಮ ಮೂಡಿತ್ತು ಎಂದು ಆಕೆ ತನ್ನ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.ಜಯಪ್ರದಾ, ಶ್ರೀದೇವಿ, ರೇಖಾರಂತಹ ನಟಿಯರ ಜತೆ ಜಿತೇಂದ್ರ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರಿಂದಲೋ ಏನೋ ಆ ನಟಿಯರ ಜತೆಗೂ ಇವರ ಹೆಸರನ್ನು ಥಳುಕು ಹಾಕಲಾಗಿತ್ತು.
* ಸಂಜಯ್ ದತ್ತ್ ರ ವೃತ್ತಿ ಬದುಕಿನಲ್ಲಿ ರಂಗು ರಂಗಿನ ಪುಟಗಳು ಬಹಳಷ್ಟಿವೆ. ಕಿಶೋರ್ ಕುಮಾರ್ ಮತ್ತು ರಾಜ್ ಕಪೂರ್ ರಂತೆ ಸಂಜಯ್ ದತ್ತ್ ಕೂಡಾ  ಬಾಲಿವುಡ್ ನ ಕೃಷ್ಣ ಕನ್ಹಯ್ಯಾ ಎಂದರೂ ತಪ್ಪಾಗದು.ಟೀನಾ ಮುನಿಮ್ ಸಂಜಯ್ ದತ್ತ್ ರ ಪ್ರಥಮ ಗರ್ಲ್ ಫ್ರೆಂಡ್. 1981ರಲ್ಲಿ ದತ್ತ್ ನ ಮೊದಲ ಚಿತ್ರ ‘ ರಾಕಿ’ ( Rocky) ಯ ಸೆಟ್ ನಲ್ಲಿ ಇವರಿಬ್ಬರು ಮುಖಾಮುಖಿಯಾದರು.  ತೆರೆಯಲ್ಲಿನ ಪ್ರೇಮಜ್ವಾಲೆ ನಿಜ ಬದುಕಿನಲ್ಲೂ ಉರಿಯಲಾರಂಭಿಸಿತ್ತು ಎನ್ನಲಾಗುತ್ತಿದೆ. ಆದರೆ ಇದು ಹೆಚ್ಚು ದಿನ ಉರಿಯಲಿಲ್ಲ. ಟೀನಾ ತನಗಿಂತ ಬಹಳ ಹಿರಿಯ ರಾಜೇಶ್ ಖನ್ನಾ ರತ್ತ ಒಲವು ತೋರಿಸತೊಡಗಿರುವುದು ಈ ಬೇರ್ಪಡುವಿಕೆಗೆ ಕಾರಣ ಎನ್ನಲಾಗುತ್ತಿದೆ.ಆದರೆ ಬಳಿಕ ಟೀನಾ ಉದ್ಯೋಗಪತಿ ಅನಿಲ್ ಅಂಬಾನಿಯನ್ನು ವಿವಾಹವಾದರು.
ಡ್ರಗ್ಸ್ ಲೋಕದಲ್ಲಿ ಹೆಚ್ಚು ಕಡಿಮೆ ತನ್ನನ್ನು ತಾನು‌ ಕಳಕೊಂಡಿದ್ದ ಸಂಜಯ್ ಬಳಿಕ ಬಾಲಿವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು.ಹೆಚ್ಚು ಪ್ರಸಿದ್ಧಳಲ್ಲದ ನಟಿ ರಿಚಾ ಶರ್ಮಾರನ್ನು ವಿವಾಹವಾದರು. 1988 ರಲ್ಲಿ  ತ್ರಿಶಾಲಾಳ ಜನನವಾಯಿತು.ಆದರೆ ಹೆರಿಗೆಯಾದ ಎರಡು ತಿಂಗಳಲ್ಲೇ ರಿಚಾಗೆ ಕ್ಯಾನ್ಸರ್ ಇರುವುದು ಬೆಳಕಿಗೆ ಬಂತು.ದಂಪತಿ ಬೇರೆ ಬೇರೆಯಾದರು.ರಿಚಾ ಮಗಳೊಂದಿಗೆ ಅಮೆರಿಕಾಗೆ ತೆರಳಿ ತನ್ನ ಪಾಲಕರೊಂದಿಗೆ ನೆಲೆಸತೊಡಗಿದರು.1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ  ಸಿಲುಕಿ ಜೈಲು ಶಿಕ್ಷೆಗೊಳಗಾಗಿದ್ದ ದತ್ತ್ ಬಳಿಕ ಸುಪರ್ ಮಾಡೆಲ್ ನಿಂದ ನಟಿಯಾದ ಲಿಸಾ ರೇ ಯ ಪ್ರೇಮ ಪಾಶಕ್ಕೆ ಬಿದ್ದರು.ಲಿಸಾ ರೇ ಈ ಸಂಬಂಧದ ಬಗೆಗಿನ ಸುದ್ದಿಯನ್ನು ಅಲ್ಲಗಳೆಯುತ್ತಿದ್ದರೂ ಹಲವು ಸಮಾರಂಭಗಳಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು.ಆದರೆ ಈ ಸಂಬಂಧ ಹೆಚ್ಚು ಸಮಯ ಬಾಳಲಿಲ್ಲ.ನಂತರ ಸಂಜಯ್ ಹೆಸರು ಕೇಳಿಸಿಕೊಳ್ಳಲಾರಂಭಿಸಿದ್ದು ಧಕ್ ಧಕ್ ಕನ್ಯೆ ಮಾಧುರಿ ದೀಕ್ಷಿತ್ ಜತೆ. ” ಖಳ್ ನಾಯಕ್” ಚಿತ್ರದ ಸಮಯ ಇವರಿಬ್ಬರೂ ಮದುವೆ ಮಾಡಿಕೊಂಡಿದ್ದಾರೆ ಎಂಬಲ್ಲಿಗೂ ಸುದ್ದಿ ತಲುಪಿತ್ತು.ಆದರೆ ಆ ಚಿತ್ರ ಬಿಡುಗಡೆಗೊಳ್ಳುವ  ಹೊತ್ತಿಗೆ ಅವರ ಸಂಬಂಧ ಮುರಿದು ಬಿದ್ದಿರುವ ಸುದ್ದಿ ಹೊರಬಿದ್ದಿತ್ತು.ಅನಿಲ್‌ ಕಪೂರ್ ಜತೆಗೆ ಕೂಡಾ ಮಾಧುರಿಯ ಕೆಲವು ಚಿತ್ರಗಳು ನಿರ್ಮಾಣಗೊಂಡಿದ್ದು ಪರದೆ ಮೇಲಿನ ಉತ್ತಮ ಜೋಡಿಯಾಗಿ ಗುರುತಿಸಿಕೊಂಡಿದ್ದರು. ಈ ಪ್ರಸಿದ್ಧಿಯೇ ಇವರಿಬ್ಬರ ನಡುವೆ ಸಂಬಂಧ ಇದೆ ಎಂಬ ಸುದ್ದಿಯನ್ನು ಹುಟ್ಟು ಹಾಕಿತ್ತು.ಇದು‌ ಕೇವಲ ಗಾಳಿ ಸುದ್ದಿಯಲ್ಲ, ನಿಜವಾಗಿಯೂ ಇವರ ನಡುವೆ ಸಂಬಂಧ , ಗೆಳೆತನ ಇತ್ತು ಎಂಬುದಾಗಿಯೂ ಜನ ಆಡಿಕೊಳ್ಳುತ್ತಿದ್ದರು.
ಮಾಧುರಿಯಿಂದ ದೂರವಾದ ಬಳಿಕ ಸಂಜಯ್ ಕಣ್ಣು  ಬಿದ್ದದ್ದು ಮಾಡೆಲ್ ರಿಯಾ ಪಿಳ್ಳೈ ಮೇಲೆ. ಸಂಜಯ್ ದತ್ತ್ 13 ತಿಂಗಳ ಕಾಲ ಜೈಲಿನಲ್ಲಿದ್ದಾಗ ನಿತ್ಯ ಜೈಲಿಗೆ ಹೋಗಿ ದತ್ತ್ ರನ್ನು ಭೇಟಿಯಾಗುತ್ತಿದ್ದರು.ಜೈಲಿನಿಂದ ಬಿಡುಗಡೆಯಾದ ಕೂಡಲೇ ಸಂಜಯ್ 1998 ರಲ್ಲಿ ರಿಯಾರನ್ನು‌ ವಿವಾಹವಾದರು. ಆದರೆ ದುರದೃಷ್ಟವಶಾತ್ ಈ ದಾಂಪತ್ಯ ಕೂಡಾ ಹೆಚ್ಚು ಸಮಯ ಉಳಿಯಲಿಲ್ಲ.ಬೇರೆ ಬೇರೆಯಾಗಿ‌ ವಾಸಿಸತೊಡಗಿದ ದಂಪತಿ‌ ಕೊನೆಗೆ 2005 ರಲ್ಲಿ ವಿಚ್ಛೇದನ ಪಡಕೊಂಡರು.ರಿಯಾ ಬಳಿಕ ಟೆನಿಸ್ ತಾರೆ ಲಿಯಾಂಡರ್‌ ಪೇಸ್‌ ರನ್ನು ವಿವಾಹವಾದರು. ದಶಕವನ್ನೂ ಪೂರೈಸದ ರಿಯಾ- ಪೇಸ್ ದಾಂಪತ್ಯ ಕೂಡಾ ಮುರಿದು ಬಿತ್ತು.ಅದಕ್ಕಿಂತ ಮೊದಲು‌ ಪೇಸ್ ನಟಿ ಮಹಿಮಾ ಚೌಧರಿಯ ಜತೆ ಈಲೂ ಈಲೂ ನಡೆಸುತ್ತಿದ್ದರು.ಆ ಪ್ರಣಯವೂ ಭಗ್ನಗೊಂಡಿತ್ತು.
2002 ರಲ್ಲಿ ” ಕಾಂಟೆ ” ಚಿತ್ರದ ಸಮಯ ನಟಿ ನಾಡಿಯಾ ದುರ್ರಾನಿ ಜತೆ ಸಂಜಯ್ ಹತ್ತಿರವಾಗಿದ್ದುದು ರಿಯಾ ದತ್ತ್ ರಿಂದ ದೂರವಾಗಲು‌ ಕಾರಣ ಎನ್ನಲಾಗುತ್ತಿತ್ತು. ನಾಡಿಯಾ ವಿವಾಹ ವಿಚ್ಛೇದಿತೆ ಮತ್ತು ಒಂಬತ್ತು ವರ್ಷದ ಮಗಳನ್ನು ಹೊಂದಿದ್ದಳು.ಅಮೆರಿಕದಲ್ಲಿ ಚಿತ್ರೀಕರಣ ಮುಗಿಸಿ ಭಾರತಕ್ಕೆ ಮರಳಿ ಬಂದ ಬಳಿಕವೂ ದತ್ತ್ ಆಕೆಯ ಸಂಪರ್ಕದಿಂದ ದೂರವಾಗಲಿಲ್ಲ. 2005 ರಲ್ಲಿ ಮತ್ತೆ ಬೆಳಕಿಗೆ ಬಂದ ಈಕೆಯನ್ನು ಸಂಜಯ್ ಸ್ವತಃ ತನ್ನ ಗರ್ಲ್ ಫ್ರೆಂಡ್ ಎಂಬುದಾಗಿ ಮಿತ್ರರಿಗೆ ಪರಿಚಯಿಸಿಕೊಡುತ್ತಿದ್ದರು. ಮದುವೆಯ ಸುದ್ದಿ‌ ಕೂಡಾ ಹಬ್ಬಿತ್ತು. ಆದರೆ  ದತ್ತ್ ಬದುಕಿಗೆ ಬಂದಷ್ಟೇ ವೇಗವಾಗಿ ಆಕೆ ಹೊರಟೂ ಬಿಟ್ಟಳು.ಈ ಮಧ್ಯೆ ಸುಷ್ಮಿತಾ ಸೇನ್‌ ಜತೆಗೂ ದತ್ತ್ ರ ಹೆಸರು ಥಳುಕು‌ ಹಾಕಿಕೊಂಡಿತ್ತು.
ನಾಡಿಯಾಳೊಂದಿಗೆ ಸಂಬಂಧ ಮುಂದುವರಿಯುತ್ತಿದ್ದ ಸಮಯವೇ  ದತ್ತ್ ಜತೆ ಸಂಪರ್ಕ ಹೊಂದಿದಾಕೆ ದಿಲ್ ನವಾಝ್ ಶೇಖ್ ಯಾನೆ ಮಾನ್ಯತಾ. ಆಗ ಸಂಜಯ್ ನ ಪುತ್ರಿ ತ್ರಿಶಾಲಾಗೆ 22 ವರ್ಷ ವಯಸ್ಸಾಗಿದ್ದರೆ ಮಾನ್ಯತಾಗೆ 36 ವರ್ಷ. ವೃತ್ತಿ ಬದುಕನ್ನು ಬಹಳ ಗಂಭೀರವಾಗಿ  ದತ್ತ್ ಪರಿಗಣಿಸಲಾರಂಭಿಸಿ ನಿರ್ಮಾಣ ಸಂಸ್ಥೆಯನ್ನೂ ಹುಟ್ಟು ಹಾಕಿದ್ದರು. ಮಧ್ಯಮ ವರ್ಗದಿಂದ ಬಂದಿದ್ದ ಮಾನ್ಯತಾ ಬಾಲಿವುಡ್ ನಲ್ಲಿ ಗಾಡ್ ಫಾದರ್ ಗಳಿಲ್ಲದೆ ಒದ್ದಾಡುತ್ತಿದ್ದರು.ಆಗ ದತ್ತ್ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಕೊನೆಗೆ ಅವರಿಬ್ಬರೂ ವಿವಾಹವಾದರು. ಅವಳಿ ಮಕ್ಕಳನ್ನು ಪಡೆದಿದ್ದಾರೆ.ಈ ಮಧ್ಯೆ ಕೆಲ ವರ್ಷದ ಜೈಲು ಶಿಕ್ಷೆ ಯನ್ನು  ಅನುಭವಿಸಿ ಮತ್ತೆ ನಟನೆಯಲ್ಲಿ ತೊಡಗಿಕೊಂಡಿರುವಾಗಲೇ ಸಂಜಯ್ ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಸದ್ಯ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
* 1980 ರಲ್ಲಿ ಪದ್ಮಿನಿ ಕೊಲ್ಹಾಪುರೆ ಬಾಲಿವುಡ್ ನಲ್ಲಿ ನೆಲೆ ಕಾಣತೊಡಗಿದರು.”ಐಸಾ ಪ್ಯಾರ್ ಕಹಾಂ” ಚಿತ್ರದ ಚಿತ್ರೀಕರಣ ಸಮಯ ಚಿತ್ರದ ನಿರ್ದೇಶಕ ,ತನಗಿಂತ ಹಲವು ವರ್ಷ ಹಿರಿಯನಾಗಿರುವ ತು ತು ಶರ್ಮಾ ಮತ್ತು ಪದ್ಮಿನಿ ನಡುವೆ  ಪ್ರೇಮಾಂಕುರವಾಯಿತು. ಕೂಡಲೇ ಮದುವೆಯೂ ಆಯಿತು. ನಂತರ ಸಿನಿಮಾಕ್ಕೆ ಗುಡ್ ಬೈ ಹೇಳಿದರು.
* ಮಾಜಿ ಪತ್ನಿ, ಪ್ರಸಿದ್ಧ ಸ್ಕ್ರಿಪ್ಟ್ ಲೇಖಕಿ ಹನಿ ಇರಾನಿಯವರೊಂದಿಗೆ ಸಿನಿಮಾ ಗೀತೆ ರಚನೆಕಾರ ಜಾವೇದ್ ಅಖ್ತರ್ ಅವರ ಹೃದಯ ಭಗ್ನಗೊಂಡಿದ್ದರೆ ಇತ್ತ ಅಂತಾರಾಷ್ಟ್ರೀಯ ಖ್ಯಾತಿಯ ನಿರ್ಮಾಪಕ ಶೇಖರ್ ಕಪೂರ್ ರೊಂದಿಗೆ ನಟಿ ಶಬಾನಾ ಆಜ್ಮಿಯವರ ಪ್ರೇಮ ಭಗ್ನ ಗೊಂಡಿತ್ತು.ಶಬಾನಾರ ತಂದೆ ಮತ್ತು ಜಾವೇದ್ ಅಖ್ತರ್ ಇಬ್ಬರೂ ಉರ್ದು ಸಾಹಿತ್ಯ ಲೋಕದಲ್ಲಿ ಜನಪ್ರಿಯರು. ಶಬಾನಾರ ತಂದೆ ಕೈಫಿ ಆಜ್ಮಿ ಯವರನ್ನು ಭೇಟಿಯಾಗಲು ಜಾವೇದ್ ಕೈಫಿಯವರ ಮನೆಗೆ ಭೇಟಿ ನೀಡುತ್ತಲೇ ಇದ್ದರು.ಆ ಸಂದರ್ಭದಲ್ಲಿ ಈ ಭಗ್ನ ಹೃದಯಗಳಲ್ಲಿ ಪ್ರೇಮದ ಬೀಜ ಮೊಳಕೆಯೊಡಲಾರಂಭಿಸುತ್ತದೆ. ಇವರಿಬ್ಬರೂ ತಮ್ಮ ಪ್ರೇಮವನ್ನು‌ ನಿರಾಕರಿಸುತ್ತಲೂ ಇರಲಿಲ್ಲ ಅಥವಾ ಒಪ್ಪಿಕೊಳ್ಳುತ್ತಲೂ ಇರಲಿಲ್ಲ.ಈ ಬಗ್ಗೆ ಬಹಳಷ್ಟು ಗಾಳಿಸುದ್ದಿ ಹಬ್ಬಿತ್ತು.ಕೊನೆಗೆ 1984 ರ ಡಿಸೆಂಬರ್ 10ರಂದು ಬಾಳಸಂಗಾತಿಗಳಾಗಿಯೇ ಬಿಟ್ಟರು.ಜಾವೇದ್ ಅಖ್ತರ್ ಮತ್ತು ಹನಿಗೆ ಫರ್ಹಾನ್ ಅಖ್ತರ್ ಮತ್ತು ಝೋಯಾ ಅಖ್ತರ್ ಎಂಬಿಬ್ಬರು ಮಕ್ಕಳಿದ್ದಾರೆ. ಶಬಾನಾಗೆ ಮಕ್ಕಳಿಲ್ಲ.ಇವರನ್ನೇ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.
ಫರ್ಹಾನ್ ಅಖ್ತರ್ ನಿರ್ದೇಶನದ ಮೊದಲ ಚಿತ್ರ ” ದಿಲ್‌ ಚಾಹ್ತಾ ಹೈ ” ಮೂಲಕ ಬಾಲಿವುಡ್ ಗೆ ಬಂದಾಕೆ ಹೇರ್ ಸ್ಟೈಲಿಸ್ಟ್ ಅಧುನಾ ಭಬಾನಿ.ಆಕೆ ಬ್ರಿಟಿಷ್ ಸಂಜಾತೆ. ಫರ್ಹಾನ್ ಗಿಂತ ಏಳು ವರ್ಷ ಹಿರಿಯಳು.ಜತೆಯಾಗಿ‌ ಕೆಲಸ ಮಾಡುತ್ತಿದ್ದಂತೆ ಇಬ್ಬರಲ್ಲೂ ಪ್ರೇಮಾಂಕುರವಾಯಿತು.ಬಾಲಿವುಡ್ ನ ಇತರರಂತೆ ಸುದ್ದಿಯನ್ನು ನಿರಾಕರಿಸುತ್ತಾ ಬಂದ ಇವರಿಬ್ಬರೂ 2000 ನೇ ಇಸವಿಯಲ್ಲಿ ಮದುವೆಯಾದರು.ಶಕ್ಯ ಮತ್ತು ಅಕಿರಾ ಎಂಬಿಬ್ಬರು ಹೆಣ್ಣುಮಕ್ಕಳ ಜನನವಾಯಿತು.ದಾಂಪತ್ಯಕ್ಕೆ ಹದಿನಾರು ವರುಷವಾದಂತೆ ಸಂಸಾರ ಕಹಿಯಾಗತೊಡಗಿತು.” ರಾಕ್ ಆನ್ ” ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದ ಫರ್ಹಾನ್ ಮತ್ತು  ನಟಿ ಶ್ರದ್ಧಾ ಕಪೂರ್ ನಡುವೆ ಕಿಚಿಡಿ ಬೇಯುತ್ತಿದೆ ಎಂಬ ಸುದ್ದಿ ಹಬ್ಬಿತ್ತು.ಆದರೆ ಬಳಿಕ ಶಾಂತವಾಯಿತು. 2016 ರಲ್ಲಿ ಫರ್ಹಾನ್ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟರು.
2018 ರಲ್ಲಿ ಫರ್ಹಾನ್ ಹೃದಯವನ್ನು ಟಿವಿ ನಟಿ ಶಿಬಾನಿ ದಾಂಡೇಕರ್ ಕದ್ದಳು.ಅಲಿಖಿತ ನಿಯಮದಂತೆ ಮತ್ತೆ ಇಬ್ಬರೂ ಸಂಬಂಧವನ್ನು ನಿರಾಕರಿಸುತ್ತ ಬಂದರು.2019 ರಲ್ಲಿ ಸಂಬಂಧ ಒಪ್ಪಿಕೊಂಡ ಜೋಡಿ‌ ವಿವಾಹವಾಗಲು ನಿರ್ಧರಿಸಿದೆ.
ಅತ್ತ  ಅಧುನಾ ಕೂಡಾ ನಟ ಡಿನೋ ಮೊರಿಯಾನ ಸಹೋದರ ನಿಕೋಲ್ ಮೊರಿಯಾ ಜತೆ ಪ್ರಣಯ ನಡೆಸುತ್ತಿದ್ದರೆಂಬ ಸುದ್ದಿ ಹಬ್ಬಿತ್ತು.
* ಕ್ರಿಕೆಟ್ ಮತ್ತು ಸಿನಿಮಾದ ಮಧ್ಯೆ ಮದುವೆ ಸಂಬಂಧವನ್ನು ಆರಂಭಿಸಿ ದವರು ಶರ್ಮಿಳಾ ಠಾಗೋರ್  ಮತ್ತು ಮನ್ಸೂರ್ ಅಲಿ‌ಖಾನ್ ಪಟೌಡಿ.1965 ರಲ್ಲಿ ಶರ್ಮಿಳಾ ಠಾಗೋರ್ ದೆಹಲಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಕಾಮನ್  ಫ್ರೆಂಡ್ ಒಬ್ಬರ ಮೂಲಕ ಪಟೌಡಿಗೆ  ಶರ್ಮಿಳಾ ರ ಪರಿಚಯವಾಯಿತು.ಈ ಪರಿಚಯ ಸ್ನೇಹಕ್ಕೆ ತಿರುಗಿ‌ನಾಲ್ಕು ವರ್ಷ ಗಳ ಕಾಲ ಪ್ರೇಮಿಗಳಾಗಿ ತಿರುಗಾಡುತ್ತಿದ್ದ ಇವರಿಬ್ಬರೂ 1969 ರಲ್ಲಿ ಮದುವೆ ಯಾದರು. ಮದುವೆಯ ಬಳಿಕ ಶರ್ಮಿಳಾ ಹೆಸರು ಮತ್ತು ಧರ್ಮ ಬದಲಾಯಿಸಲಿ ದ್ದಾರೆ ಎಂಬ ಸುದ್ದಿ ಆ ಕಾಲದಲ್ಲಿ ಹಬ್ಬಿತ್ತು. ಆದರೆ ಹೆಸರನ್ನು ಬದಲಾಯಿಸಲಿಲ್ಲ. ಇದು ಹಿಂದು ಮುಸ್ಲಿಂ ವಿವಾಹವಾದ್ದರಿಂದ  ಬಹಳ ಬಿಸಿಬಿಸಿ ಸುದ್ದಿಯೂ ಆಗಿತ್ತು.
ಆ ನಂತರ ನೀನಾ ಗುಪ್ತಾ ಕ್ರಿಕೆಟಿಗ ವಿವ್ ರಿಚರ್ಡ್ಸ್ ಜತೆ ಪ್ರಣಯ ನಡೆಸಿ ಹೆಣ್ಣು‌ ಮಗುವೊಂದನ್ನು ಪಡೆದರೂ ವಿವಾಹ ವಾಗಲಿಲ್ಲ. ಕೆಲ ವರ್ಷಗಳ ಹಿಂದೆ ನೀನಾ ಬೇರೊಬ್ಬನನ್ನು ವಿವಾಹವಾದರು.ಆ ಬಳಿಕ ಸುದ್ದಿಯಾದ ಜೋಡಿ ಸಂಗೀತಾ ಬಿಜಲಾನಿ-ಮೊಹಮ್ಮದ್ ಅಝರುದ್ದೀನ್.

1989 ರಲ್ಲಿ ಸಂಗೀತಾ ಬಿಜಲಾನಿ  ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದಾಗ ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಪ್ರಸಿದ್ಧ ನಟನಾಗಿ‌ ಮಿಂಚುತ್ತಿದ್ದ. ಸಹಜವಾಗಿ ಅವರಿಬ್ಬರ ನಡುವೆ ಪರಿಚಯ, ಸ್ನೇಹ, ಪ್ರೇಮ ಹುಟ್ಟಿಕೊಂಡಿತು.ಆದರೆ ಆ ಪ್ರೇಮ ಹೆಚ್ಚು ಸಮಯ ಬಾಳಲಿಲ್ಲ.ಬೇರೆ ಬೇರೆ ಯಾದರು.ಆದರೂ ಅವರಿಬ್ಬರ ನಡುವೆ ಇಂದಿಗೂ ಗೆಳೆತನವಿದೆ.ಸಲ್ಮಾನ್‌ನಿಂದ ದೂರವಾದ ಬಳಿಕ ಕ್ರಿಕೆಟಿಗ ಅಝರುದ್ದೀನ್ ನನ್ನು ಬಿಜಲಾನಿ‌ ಬುಟ್ಟಿಗೆ ಹಾಕಿಕೊಂಡಳು.ಪತ್ನಿ ಆಯೇಷಾ ಮತ್ತು ಮಕ್ಕಳನ್ನು ತೊರೆದು ಅಝರ್ ಸಂಗೀತಾಳ ತಾಳಕ್ಕೆ ಕುಣಿದು ಆಕೆಯನ್ನು ವಿವಾಹವಾದ.
ಆಂಗ್ಲ ಕ್ರಿಕೆಟಿಗ ಉಸ್ಮಾನ್ ಅಫ್ಜಲ್ ಜತೆ ಅಮೃತಾ ಅರೋರಾ (ಮಲೈಕಾ ಅರೋರಾಳ ಸಹೋದರಿ) 4 ವರ್ಷ ಲವ್ವಿಡವ್ವಿ ನಡೆಸಿ ಬಳಿಕ ಉದ್ಯಮಿ ಶಕೀಲ್ ಲಡಕ್ ನನ್ನು ವಿವಾಹವಾದಳು.
ಭಾರತೀಯ ಕ್ರಿಕೆಟಿಗ ಹರ್ಬಜನ್ ಸಿಂಗ್ ನ ಪ್ರಾಮಾಣಿಕತೆ ಮತ್ತು ದೇಶ ಮತ್ತು ಕ್ರಿಕೆಟ್ ಬಗ್ಗೆ ಆತನಿಗಿದ್ದ ಭಕ್ತಿಯನ್ನು ಕಂಡು ಮೋಹಗೊಂಡವಳು ನಟಿ ಗೀತಾ ಬಸ್ರಾ. ದೀರ್ಘ ಕಾಲ ಡೇಟಿಂಗ್ ನಡೆಸಿದ ಬಳಿಕ 2015 ರಲ್ಲಿ ಸತಿಪತಿಗಳಾದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ರ ಪ್ರೇಮಕತೆ ಹೆಚ್ಚು ಪ್ರಚಾರ ಪಡೆದಿತ್ತು. ನಾಲ್ಕೈದು ವರ್ಷಗಳ ಕಾಲ ಊರು – ದೇಶ ವಿದೇಶ ಜತೆಯಾಗಿ  ಸುತ್ತಾಡಿದ ಜೋಡಿ 2017 ರಲ್ಲಿ ವಿವಾಹವಾಯಿತು. ಈಗ ಅನುಷ್ಕಾ ಹೆಣ್ಣುಮಗುವಿನ ತಾಯಿಯಾಗಿದ್ದಾಳೆ.
ಕಿಮ್ ಶರ್ಮಾ ಮತ್ತು ದೀಪಿಕಾ ಪಡುಕೋಣೆ ಜತೆ ಹೆಸರು ಥಳುಕಿ ಹಾಕಿಸಿಕೊಂಡಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ಬಳಿಕ ಬಾಡಿಗಾರ್ಡ್ ಚಿತ್ರದಲ್ಲಿ‌ ಪೋಷಕ ಪಾತ್ರ ನಿಭಾಯಿಸಿದ್ದ  ಹಝೆಲ್ ಕೀಚ್ ಳ ಪ್ರೇಮ ಪಾಶಕ್ಕೆ ಬಿದ್ದು 2016 ರಂದು ಸಪ್ತಪದಿ ತುಳಿದರು.

ಕ್ರಿಕೆಟ್ ತಂಡದ ಕ್ಯಾಪ್ಟನ್ ರವಿ ಶಾಸ್ತ್ರಿ ಮತ್ತು ಅಮೃತಾ ಸಿಂಗ್ ರ ಪ್ರೇಮ ಸಂಗತಿ ಆ ಕಾಲದಲ್ಲಿ ಬಹಳ ಬಿಸಿಬಿಸಿ ಸುದ್ದಿಯಾಗಿತ್ತು.ಆದರೆ ಮದುವೆ ವಿಚಾರದ ತನಕ ಸಾಗಲಿಲ್ಲ.ಅಮೃತಾಳನ್ನು ಸೈಫ್ ಅಲಿ ಖಾನ್ ಬುಟ್ಟಿಗೆ ಹಾಕಿ ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿಸಿ ಕೆಲ ವರ್ಷಗಳ ಹಿಂದೆ ತೊರೆದುಬಿಟ್ಟ.ಅಮೃತಾ ಸೈಫ್ ಗಿಂತ ಬಹಳ ವರ್ಷ ಹಿರಿಯಳು ಎಂಬುದು ವಿಶೇಷ.
ಚಕ್ ದೇ ಇಂಡಿಯಾ ಚಿತ್ರದಲ್ಲಿನ ನಟನೆ ಕಂಡು ನಟಿ ಸಾಗರಿಕಾ ಘಾಟೆಯತ್ತ ಒಲವು ಹರಿಸಿದ ಕ್ರಿಕೆಟಿಗ ಝಹೀರ್ ಖಾನ್ 2017ರಲ್ಲಿ ಆಕೆಯನ್ನು ವಿವಾಹವಾದ .ಅದಕ್ಕಿಂತ ಮೊದಲು ಝಹೀರ್ ಖಾನ್ ಇಶಾ ಶರ್ವಾಣಿ ಜತೆ 10 ವರ್ಷಗಳ ಕಾಲ ಸುತ್ತಾಡಿಕೊಂಡಿದ್ದ.
ರೀನಾ ರಾಯ್ ಮತ್ತು ಪಾಕ್ ಕ್ರಿಕೆಟಿಗ ಮೊಹ್ಸಿನ್ ಖಾನ್ ರ ಪ್ರೇಮ ಕಾದಂಬರಿ ಆ ಕಾಲದಲ್ಲಿ ಬಹಳ ಸುದ್ದಿಯಲ್ಲಿತ್ತು. ಚಿತ್ರರಂಗವನ್ನು ತೊರೆದು ಆತನನ್ನು ವಿವಾಹವಾದಳು.ಆದರೆ ದಾಂಪತ್ಯ ಹೆಚ್ಚು ಸಮಯ ಉಳಿಯಲಿಲ್ಲ.
ಸೌರವ್ ಗಾಂಗೂಲಿಯ ಹೆಸರು ನಟಿ ನಗ್ಮಾಳ ಜತೆ ಕೇಳಿ ಬಂದಿತ್ತು. ಇದರಿಂದಾಗಿ ಆತನ ಕ್ರಿಕೆಟ್ ಬದುಕಿಗೂ ತೊಂದರೆ ಯಾಯಿತು.ಕೊನೆಗೆ ಆತ ಡೋನಾಳನ್ನು ವಿವಾಹವಾದ.
ಆಸ್ಟ್ರೇಲಿಯನ್ ಕ್ರಿಕೆಟಿಗ ಶೌನ್ ತೌಟ್  ಮತ್ತು ಮಾಡೆಲ್ ಮಶೂಮ್ ಸಿಂಘಾ ಅವರ ಭೇಟಿ ಐಪಿಎಲ್ ಸಮಯ ವಾಯಿತು. ಮದುವೆಯಾಗಿ ಈಗ ಅಡಿಲೇಡ್ ನಲ್ಲಿದ್ದಾರೆ.
* ಎಂಭತ್ತರ ದಶಕದಿಂದ ಇಂದಿನವರೆಗೂ ಬಾಲಿವುಡ್ ನಲ್ಲಿ ದೀರ್ಘ ಕಾಲ ಮತ್ತು ಅತಿ ಹೆಚ್ಚು ಪ್ರೇಮ ಪ್ರಕರಣ ಗಳನ್ನು ಸೃಷ್ಟಿ ಸಿರುವ ನಟನೆಂದರೆ ಅದು ಸಲ್ಮಾನ್ ಖಾನ್. ಸಂಗೀತ ಬಿಜಲಾನಿಯನ್ನು ಪ್ರೇಮಿಸುವ ಮೊದಲು ಆತ ಸೋಮಿ‌ ಅಲಿ ಎಂಬ ನಟಿಯನ್ನು ಪ್ರೀತಿಸುತ್ತಿದ್ದ.ಆದರ್ಶ ಪ್ರೇಮಿಗಳು ಎಂಬುದಾಗಿ ಜನ ಆಡಿಕೊಳ್ಳುತ್ತಿದ್ದಂತೆಯೇ ಬೇರೆಯಾಗಿಬಿಟ್ಟರು.ನಂತರ ಬಲೆಗೆ ಬಿದ್ದವಳೇ ಸಂಗೀತ ಬಿಜಲಾನಿ.


1999 ರಲ್ಲಿ ” ಹಮ್ ದಿಲ್ ದೇ ಚುಕೇ ಸನಮ್ ” ಚಿತ್ರದ ಚಿತ್ರೀಕರಣ ಸಮಯ ಸಲ್ಲೂನ ಹೃದಯ ಕದ್ದವಳು ವಿಶ್ವ ಸುಂದರಿ  ಐಶ್ವರ್ಯಾ  ರೈ. ಸಲ್ಮಾನ್‌ ಖಾನ್ ನ ಬದುಕಲ್ಲಿ‌ ಹಲವು‌ ಪ್ರೇಯಸಿಯರು  ಬಂದು ಹೋಗಿದ್ದರೂ ಐಶ್ವರ್ಯಾ ಜತೆಗಿನ ಪ್ರೇಮ ಬಹಳ ಪ್ರಚಾರ ಪಡೆದಿತ್ತು. 2002 ರ ಹೊತ್ತಿಗೆ ಈ ಪ್ರೇಮಕ್ಕೆ ಕೆಟ್ಟ ದೃಷ್ಟಿ ಬಿತ್ತು.ಸಲ್ಮಾನ್- ಐಶ್ವರ್ಯಾ ನಡುವೆ ವೈಮನಸ್ಸು ಹುಟ್ಟಿಕೊಂಡಿತು.ತನಗೆ ಮಾನಸಿಕ, ದೈಹಿಕ  ಕಿರುಕುಳ ನೀಡುತ್ತಿದ್ದಾನೆ ಎಂಬುದಾಗಿ ಐಶ್ವರ್ಯಾ ಪೊಲೀಸ್ ದೂರನ್ನೂ ನೀಡಿದ್ದಳು.ಒಂದು ದಿನ ಮಧ್ಯರಾತ್ರಿ ಕಂಠಪೂರ್ತಿ  ಕುಡಿದು ಆಕೆಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ. ಐಶ್ವರ್ಯಾಳ ವಿರಹದಲ್ಲಿ ಬೇಯುತ್ತಿದ್ದ ಸಲ್ಮಾನ್ ಐಶ್ವರ್ಯಾ ಳನ್ನೇ ಹೋಲುವ ಕನ್ನಡತಿ ಸ್ನೇಹಾ ಉಳ್ಳಾಲ್ ಳನ್ನು ‘ ಲಕ್ಕಿ ‘ ಚಿತ್ರದಲ್ಲಿ ಹಾಕಿ ಜತೆಯಾಗಿ ನಟಿಸಿ ಐಶ್ ಳನ್ನು ಉರಿಸಲು ಪ್ರಯತ್ನಿಸಿದ್ದ.ಆದರೆ ಚಿತ್ರವೂ ಗೆಲ್ಲಲಿಲ್ಲ, ನಟಿಯೂ ಗೆಲ್ಲಲಿಲ್ಲ.
ಮಾಡೆಲ್ ಕತ್ರಿನಾ ಕೈಫ್ ಜಾಹೀರಾತುಗಳಲ್ಲಿ ನಟಿಸುತ್ತಿದ್ದ ಸಮಯ  ಸಲ್ಮಾನ್ ಸಹೋದರಿಗೆ ಹತ್ತಿರವಾದಳು.ಸಹೋದರಿಯ ಮೂಲಕ ಸಲ್ಲೂಗೆ ಕತ್ರಿನಾಳ ಪರಿಚಯವಾಯಿತು. ”  ಮೈನೆ ಪ್ಯಾರ್ ಕ್ಯೋಂ ಕಿಯಾ” ಚಿತ್ರದ ಮೂಲಕ ಈಕೆಗೆ ಬ್ರೇಕ್‌ ನೀಡಿದ ಸಲ್ಮಾನ್ ಕ್ರಮೇಣ ಈಕೆಗೆ ಹತ್ತಿರವಾಗತೊಡಗಿದ…ಪ್ರೇಮ ಪಾಶಕ್ಕೆ ಸಿಲುಕಿದ.ಬಾಲಿವುಡ್ ನ ಅಪೂರ್ವ ಜೋಡಿಗಳು ಎಂಬ ಹೆಗ್ಗಳಿಕೆ ಗೂ ಪಾತ್ರರಾಗತೊಡಗಿದರು.ಸಲ್ಮಾನ್ ನ ದುರಾದೃಷ್ಟವೋ ಅಥವಾ ಪ್ರೇಯಸಿಯರನ್ನು ಉಳಿಸಿಕೊಳ್ಳುವ ಕಲೆ ಆತನಿಗೆ ತಿಳಿದಿಲ್ಲವೋ ಗೊತ್ತಿಲ್ಲ.ಅಂತೂ ಕತ್ರಿನಾ ಕೂಡಾ ಸಲ್ಮಾನ್ ನಿಂದ ದೂರವಾದಳು.ಸಲ್ಮಾನ್  ಮದುವೆಗೆ ಒತ್ತಾಯಿಸಿದ_ ಆದರೆ ಆಕೆ ಅದಕ್ಕೆ ತಯಾರಿಲ್ಲ….ಆದ್ದರಿಂದ ಸಂಬಂಧ ಮುರಿದು ಬಿತ್ತು ಎಂಬ ಕಾರಣವೂ ಪ್ರಚಾರವಾಗತೊಡಗಿತು.
ಆ ಬಳಿಕ ರೊಮಾನಿಯಾದ ವಿವಾಹಿತ ಕಿರುತೆರೆ ನಟಿ  ಲುಲಿಯಾ ವಂಟೂರ್ ಜತೆ ಗೆಳೆತನ ಆರಂಭಿಸಿದ್ದ ಬಗ್ಗೆ ಸುದ್ದಿ ದಟ್ಟವಾಗಿ ಹಬ್ಬಿತ್ತು.ಸದ್ಯ ಅವರಿಬ್ಬರ ಗೆಳೆತನದ ಅಪ್ ಡೇಟ್ ಇಲ್ಲ.
* ಸಲ್ಮಾನ್ ಖಾನ್ ಬಳಿಕ ಕತ್ರಿನಾ ಕೈಫ್ ಹೆಸರು ಕೇಳಿ ಬರತೊಡಗಿದ್ದು ರಣಬೀರ್ ಕಪೂರ್ ಜತೆ. ಆದರೆ ಈ ಸುದ್ದಿಯಲ್ಲಿ ಸತ್ಯಾಂಶ ಬಹಳ ಕಡಿಮೆ ಇರಬಹುದು.ಆದ್ದರಿಂದ ಇದಕ್ಕೆ ಯಾರೂ ಹೆಚ್ಚು  ಗಮನಕೊಡಲಿಲ್ಲ.ಆದರೂ ರಣಬೀರ್ ಮತ್ತು ಕತ್ರಿನಾ ಹೊಸ ಮನೆ ಮಾಡಿ  ಜತೆಯಾಗಿ ವಾಸಿಸತೊಡಗಿದ್ದಾರೆ, ಶೀಘ್ರವೇ ಗಟ್ಟಿಮೇಳ ಮೊಳಗಲಿದೆ ಎಂಬಲ್ಲಿಯವರೆಗೆ ಸುದ್ದಿ ಹರಡಿತ್ತು.ಆದರೆ ಸುದ್ದಿ ಸುದ್ದಿಯಾಗಿಯೇ ಉಳಿಯಿತು.
* ಐಶ್ವರ್ಯಾ ರೈ ಯನ್ನು  ಹೊರತು ಪಡಿಸಿ ಸಲ್ಮಾನ್ ನ ಇತರ ಎಲ್ಲಾ ಪ್ರೇಯಸಿಯರು ಪ್ರೇಮ ಭಗ್ನಗೊಂಡ ಬಳಿಕವೂ ಆತನೊಂದಿಗೆ ಉತ್ತಮ ಸಂಬಂಧವನ್ನು ಮುಂದುವರಿಸಿರುವುದು ವಿಶೇಷತೆಯಾಗಿದೆ. ಇತ್ತ ಸಲ್ಮಾನ್‌ನಿಂದ ದೂರವಾದ ಐಶ್ವರ್ಯಾ ಬಳಿಕ ಹೋದದ್ದು ವಿವೇಕ್ ಒಬೆರಾಯ್ ನ ತೆಕ್ಕೆಗೆ.ಅಲ್ಪ ಸಮಯ ಇವರಿಬ್ಬರ ನಡುವೆ ಗೆಳೆತನ ಸುತ್ತಾಟವಿತ್ತಾದರೂ ಹೆಚ್ಚು ಸಮಯ ಉಳಿಯಲಿಲ್ಲ. ಈಕೆಯ ವಿಚಾರದಲ್ಲಿ ಸಲ್ಮಾನ್ – ವಿವೇಕ್ ನಡುವೆ ಹೊಯ್ಕೈಯೂ ನಡೆದಿತ್ತು.ವಿವೇಕ್ ನಿಂದ ಪ್ರೇಮ ಭಗ್ನವಾದ ಬಳಿಕ ಐಶ್ವರ್ಯಾ ಳ ಪ್ರೇಮಜ್ವಾಲೆ ತನಗಿಂತ ಕಿರಿಯ ಅಭಿಷೇಕ್  ಬಚ್ಚನ್ ನ ಹೃದಯದಲ್ಲಿ ಉರಿಯಲಾರಂಭಿಸಿತು.ಅತ್ತ ಕರಿಶ್ಮಾ ಕಪೂರ್ ಳ ಪ್ರೇಮ ಜಾಲಕ್ಕೆ ಬಿದ್ದು ನಿಶ್ಚಿತಾರ್ಥ ವಾಗಿ ಇನ್ನೇನು ವಿವಾಹವಾಗಲಿದೆ ಎನ್ನುವಾಗ ಕರಿಶ್ಮಾ ಕೈಕೊಟ್ಟಳು.ಇದರಿಂದಾಗಿ ಅಭಿಯ ಹೃದಯ ಭಾರವಾಗಿತ್ತು. ಆ ಸಮಯವೇ ತಂಗಾಳಿಯಂತೆ ಬಂದ ಐಶ್ವರ್ಯಾಳನ್ನು  ಸ್ವೀಕರಿಸಿ ವಿವಾಹವಾಗಿ ಒಂದು ಮಗುವನ್ನು ಪಡೆದ.
ಅತ್ತ ಅಭಿಷೇಕ್ ಗೆ ಕೈಕೊಟ್ಟ ಕರಿಶ್ಮಾ ಕಪೂರ್ ದೆಹಲಿ ಮೂಲದ ಉದ್ಯಮಿ ಸಂಜಯ್ ಕಪೂರ್ ನ ಎರಡನೇ ಪತ್ನಿಯಾಗಿ ಹೋದಳು.ಆದರೆ ಆರಂಭದಿಂದಲೂ ಕಚ್ಚಾಟದ ದಾಂಪತ್ಯ ಅವರದ್ದಾಯಿತು.ಹೇಗೂ ಸುಧಾರಿಸಿದರೂ ಇಬ್ಬರು ಹೆಣ್ಣು ಮಕ್ಕಳಾದ ಬಳಿಕ ಅಸಾಧ್ಯವಾಗಿ ವಿಚ್ಛೇದನವಾಯಿತು. ಸಂಜಯ್ ಕಪೂರ್ ಪ್ರಿಯಾ ಸಚ್ ದೇವ್ ಎಂಬಾಕೆಯೊಡನೆ ಸುತ್ತಾಡುತ್ತಿದ್ದುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅವರಿಬ್ಬರೂ ಈಗ ವಿವಾಹವಾಗಿದ್ದಾರೆನ್ನಲಾಗುತ್ತಿದೆ.
* ತಾಯಿ ಶರ್ಮಿಳಾ ಠಾಗೋರ್ ಕ್ರಿಕೆಟಿಗ ಪಟೌಡಿಯನ್ನು ಪ್ರೇಮಿಸಿ ವಿವಾಹವಾ ದಂತೆ ಇತ್ತ ಮಗ ಸೈಫ್ ಅಲಿ ಖಾನ್ ಚಿತ್ರರಂಗಕ್ಕೆ ಬಂದು ಸ್ವಲ್ಪ ಸಮಯದಲ್ಲೇ ಬಾಲಿವುಡ್ ನ ಸ್ಥಾಪಿತ ನಟಿ ಅಮೃತಾ ಸಿಂಗ್ ರನ್ನು ಮೋಹಿಸತೊಡಗಿದರು. ಇದು ಇಡೀ ಬಾಲಿವುಡ್ ಅನ್ನೇ ಆಶ್ಚರ್ಯ ಚಕಿತಗೊಳಿಸಿತು.ಕಾರಣ ಅಮೃತಾ ಸಿಂಗ್ ಸೈಫ್ ಗಿಂತ ಬಹಳ ಹಿರಿಯರಾಗಿದ್ದರು. ಐಶ್ವರ್ಯಾ ರೈ ಅಭಿಷೇಕ್ ಗಿಂತ ಎರಡು ವರ್ಷ ಹಿರಿಯಳಾಗಿರುವುದರಿಂದ ಅದೇನೂ ಹೆಚ್ಚು ಸುದ್ದಿಯಾಗಲಿಲ್ಲ.ಆದರೆ ಅಮೃತಾ ಸೈಫ್ ಗಿಂತ 12 ವರ್ಷ ಹಿರಿಯರಾಗಿದ್ದರು. ಸೈಫ್ 1970 ಆಗಸ್ಟ್ 16 ರಂದು ಹುಟ್ಟಿದ್ದರೆ ಅಮೃತಾ  1958 ಫೆಬ್ರವರಿ 9 ರಂದು ಜನಿಸಿದ್ದರು. ಅವರಿಬ್ಬರ ನಡುವೆ ಹುಚ್ಚು ಪ್ರೇಮವಿತ್ತು.
1991ರಲ್ಲಿ  ವಿವಾಹವಾದ ಸೈಫ್ – ಅಮೃತಾಗೆ ಇಬ್ರಾಹಿಂ ಮತ್ತು ಸಾರಾ ಎಂಬಿಬ್ಬರು ಮಕ್ಕಳು ಜನಿಸಿದರು.ಇದೇ ಸಾರಾಳ ಹೆಸರು ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿತ್ತು. 13 ವರ್ಷಗಳ ಸಂಸಾರ ಸಾಗಿಸಿದ ಸೈಫ್ 2004ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದರು.ಇದಕ್ಕೆ ಕಾರಣ  ಸ್ವಿಸ್ ಮಾಡೆಲ್ ರೋಸಾ ಕ್ಯಾಟಲೋನಾ ಎಂಬಾಕೆಯ ಹಿಂದೆ ಸೈಫ್ ಸುತ್ತಾಡ ತೊಡಗಿರುವುದು ಎನ್ನಲಾಗಿತ್ತು. ವಿಚ್ಛೇದನದ ಬಳಿಕ ಇವರಿಬ್ಬರ ( ಸೈಫ್- ರೋಸಾ) ಪ್ರೇಮ ಪುರಾಣ ಮಾಧ್ಯಮ ಗಳಿಗೆ ಉತ್ತಮ ಆಹಾರ ಒದಗಿಸ ಲಾರಂಭಿಸಿತು. ಕೆನ್ಯಾದಲ್ಲಿ ಇವರಿಬ್ಬರ ಮೊದಲ ಭೇಟಿಯಾಗಿತ್ತು.ಮೂರು ವರ್ಷ ಗಳ ಕಾಲ ಪ್ರೇಮಿಗಳಾಗಿ‌ ಕಾಲ ದೂಡಿದರು. ಆದರೆ ಸೈಫ್ ತನ್ನ ಮೊದಲ ಮದುವೆ,ಮಕ್ಕಳ ಬಗ್ಗೆ  ತಿಳಿಸದೆ ರಹಸ್ಯ ವಾಗಿಟ್ಟಿದ್ದ. ಮುಂಬಯಿಗೆ ಬಂದ ಬಳಿಕ ವಷ್ಟೇ ಆಕೆಗೆ ಇದು ತಿಳಿಯಿತು.ಈ ಕಾರಣ ಕ್ಕೆ ಆಕೆ ಸೈಫ್ ನನ್ನು ತೊರೆದಳು.
ಕರೀನಾ ಕಪೂರ್ ಹೆಸರು ಹಲವರ ಜತೆ ಸೇರಿಕೊಂಡಿತ್ತು.  2004 ರಲ್ಲಿ ” ಫಿದಾ” ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ಸಂದರ್ಭದಲ್ಲಿ ಕರೀನಾ ಕಪೂರ್ – ಶಾಹಿದ್ ಕಪೂರ್ ನ ಪ್ರೇಮದ ಬಲೆಗೆ ಬಿದ್ದಳು. ” ಜಬ್ ವೀ ಮೆಟ್ ” ಚಿತ್ರವನ್ನು ಹೊರತು ಪಡಿಸಿ ಇವರಿಬ್ಬರು ನಟಿಸಿರುವ ಚಿತ್ರಗಳೆಲ್ಲಾ  ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದವು. ಕರೀನಾ – ಶಾಹಿದ್ ಮೂರು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ” ಜಬ್ ವೀ ಮೆಟ್ ” ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಬೇರೆಬೇರೆಯಾದರು. ಇದು ಚಿತ್ರದ ಪ್ರಚಾರ ತಂತ್ರ ಎಂಬುದಾಗಿ ಮಾಧ್ಯಮಗಳು ಹೇಳತೊಡಗಿದರೂ ಸುದ್ದಿ ಪಕ್ಕಾ ಆಗಿತ್ತು. ಇವರು ಬೇರೆಬೇರೆ ಯಾಗುವುದಕ್ಕೆ ಹಲವು ಊಹಾಪೋಹ ಗಳು ಹುಟ್ಟಿಕೊಂಡಿದ್ದವು.ಇವರಿಬ್ಬರ ನಡುವೆ ತಪ್ಪು ಗ್ರಹಿಕೆಗಳು ಇದ್ದವು. ಕರೀನಾ- ಸೈಫ್ ಹತ್ತಿರವಾಗುತ್ತಿದ್ದುದು, ಶಾಹಿದ್ – ಅಮೃತಾ ರಾವ್ ಗೆ ಹತ್ತಿರ ವಾಗುತ್ತಿದ್ದುದು ಇದಕ್ಕೆ ಕಾರಣ ಎನ್ನಲಾಗು ತ್ತಿತ್ತು. ಶಾಹಿದ್ ಜತೆ ಸಂಬಂಧದಲ್ಲಿರುವಾ ಗಲೇ ಕರೀನಾ ಸೈಫ್ ನನ್ನು ಪ್ರೀತಿಸುತ್ತಿ ದ್ದಾಳೆ  ಎಂಬ ಸುದ್ದಿಯನ್ನು ಇಂಗ್ಲಿಷ್ ಟ್ಯಾಬ್ಲೋಯ್ಡ್  ಪತ್ರಿಕೆಯೊಂದು ಮೊದಲ ಬಾರಿಗೆ  ವರದಿ ಮಾಡಿತ್ತು. ಕರೀನಾ ಅದನ್ನು‌ ನಿರಾಕರಿಸಿದ್ದಳು.
ಶಾಹಿದ್ ಗೆ ಕೈಕೊಟ್ಟ ಬಳಿಕ ಕರೀನಾ ಕೂಡಾ ಸೈಫ್ ಜತೆಗಿನ ಸಂಬಂಧವನ್ನು ಒಪ್ಪಿಕೊಂಡಳು. ಸೈಫ್ ಅಲಿ ಖಾನ್ ತನಗಿಂತ 11 ವರ್ಷ ಕಿರಿಯಳಾದ ಕರೀನಾ ಕಪೂರ್ ಳನ್ನು ಪ್ರೇಮಿಸತೊಡಗಿದ ಸುದ್ದಿಯನ್ನು ಇತರ ಪತ್ರಿಕೆ , ಸುದ್ದಿ ವಾಹಿನಿಗಳೂ ಪ್ರಕಟಿಸಿದವು.ಕೊನೆಗೆ ಸೈಫ್ ಕೂಡಾ ಈ ಸುದ್ದಿಯನ್ನು ಧೃಡ ಪಡಿಸಿದರು.ಯಶ್ ರಾಜ್ ಫಿಲ್ಮ್ಸ್ ನ ” ಟಶನ್ ” ಚಿತ್ರದ ಸಮಯ ಇವರ ನಡುವಿನ ಪ್ರೇಮ ಮತ್ತಷ್ಟು ಬಲಗೊಂಡಿತು.
ಕರೀನಾ ಸೈಫ್ ನನ್ನು ವಿವಾಹವಾಗುವುದು ಕಪೂರ್ ಪರಿವಾರಕ್ಕೆ ಆರಂಭದಲ್ಲಿ ಇಷ್ಟವಿರಲಿಲ್ಲ. ಕಾರಣ ಆತ ವಿವಾಹಿತ ಮತ್ತು ಅನ್ಯ ಧರ್ಮೀಯ ಎಂಬುದು. ಆದರೆ ಕರೀನಾಳ ಹಠಕ್ಕೆ ಎಲ್ಲರೂ ಸಮ್ಮತಿಸಬೇಕಾಯಿತು. ಇವರಿಬ್ಬರ ವಿವಾಹ ದಿನಾಂಕ ಎರಡೆರಡು ಬಾರಿ ನಿಗದಿಯಾಗಿ ಮುಂದೂಡಲ್ಪಟ್ಟಿತು. ಮದುವೆಯಾದ ಬಳಿಕ ತನಗೆ ಚಿತ್ರಗಳ ಬೇಡಿಕೆ ಕಡಿಮೆಯಾದೀತು ಎಂಬ ಹೆದರಿಕೆ ಕರೀನಾಳದ್ದು. ಅಂತೂ ಕೊನೆಗೂ ಮದುವೆಯಾಗಿ‌ಬಿಟ್ಟರು.ಒಂದು ಗಂಡು ಮಗುವಿನ ತಾಯಿಯಾಗಿರುವ ಕರೀನಾ ಈಗ ಎರಡನೇ ಮಗುವಿನ ನಿರೀಕ್ಷೆ ಯಲ್ಲಿದ್ದಾಳೆ.
2013 ರಲ್ಲಿ ಸೈಫ್ ಅಲಿಖಾನ್ ಗೆ ಕಂಸ್ಲ್ ಹಾಸನ್ ರ ಪುತ್ರಿ ಶ್ರುತಿ ಹಾಸನ್ ಜತೆಗೆ ಸಲುಗೆಯ ಗೆಳೆತನವಿದೆ ಎಂಬ ಸಂಶಯ ಕರೀನಾಳನ್ನು ಕಾಡತೊಡಗಿತ್ತು.ಅದಕ್ಕಾಗಿ ಆಕೆ ತನ್ನ ಸ್ಪಾಟ್ ಬಾಯ್ ಒಬ್ಬನನ್ನು ಸ್ಟಿಂಗ್ ಆಪರೇಶನ್ ಗಾಗಿ ಶ್ರುತಿಯ ಮನೆಗೆ ಕಳುಹಿಸಿಕೊಟ್ಟಿದ್ದಳು.ಇದು ಸ್ವಲ್ಪಮಟ್ಟಿನ ಸುದ್ದಿಯನ್ನು ಮಾಡಿತ್ತು. ಶ್ರುತಿಯನ್ನು ಹಿಂಬಾಲಿಸಿದ ಯುವಕನ ಬಂಧನ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.ಇದು ನಿಜ ಸುದ್ದಿ.ಆದರೆ ಆ ಯುವಕನನ್ನು ಕರೀನಾಳೇ ಬಿಟ್ಟಳು ಎಂಬುದು ಮಾತ್ರ ಗಾಳಿಸುದ್ದಿಯಾಗಿತ್ತು. ನಿಜ ಏನೆಂಬುದು ಕೊನೆಗೂ ಗೊತ್ತಾಗಲೇ ಇಲ್ಲ.

ಕಮಲ್‌ ಹಾಸನ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಭಾಷೆಯನ್ನು ಮೀರಿ ನಿಂತು  ಬೆಳೆದ ಕಲಾವಿದ. ಅವರ ಬಣ್ಣದ ಬದುಕು ಹೇಗೆ ರಂಗು ರಂಗಾಗಿದೆಯೋ ಹಾಗೆಯೇ ಖಾಸಗಿ ಬದುಕು‌ ಕೂಡಾ ರಂಗು ರಂಗಾ ಗಿದೆ. ವೃತ್ತಿ ಬದುಕಿನ ಆರಂಭದಲ್ಲೇ ಶ್ರೀ ವಿದ್ಯಾ ಎಂಬ ಸಹ ಕಲಾವಿದೆಯೊಡನೆ ಹಾಸನ್ ರ ಪ್ರಣಯ ಲೀಲೆ ಆರಂಭ ಗೊಂಡಿತ್ತು.1970 ರಲ್ಲಿ‌ ಆರಂಭಗೊಂಡಿತ್ತೆ ನ್ನಲಾಗಿದ್ದ ಇವರ ಪ್ರಣಯ 2008 ರಲ್ಲಿ “ಥಿರಕ್ಕಥಾ” ಎಂಬ ಮಲಯಾಳಂ ಚಿತ್ರದ ಬಿಡುಗಡೆಯೊಂದಿಗೆ  ಬಹಿರಂಗ ಗೊಂಡಿತು. ಅನೂಪ್ ಮೆನನ್ ಮತ್ತು‌ ಪ್ರಿಯಾ ಮಣಿ ನಟನೆಯ ಈ ಚಿತ್ರ ಕಮಲ್ ಹಾಸನ್ ಮತ್ತು ಶ್ರೀವಿದ್ಯಾರ ಪ್ರಣಯ ಬದುಕನ್ನೇ ಆಧರಿತವಾದದ್ದು ಎನ್ನಲಾಗುತ್ತಿದ್ದು , ಅನೂಪ್ ಕಮಲ್ ಹಾಸನ್ ರ ಮತ್ತು ಪ್ರಿಯಾಮಣಿ ಶ್ರೀವಿದ್ಯಾರ ಪಾತ್ರವನ್ನು ನಿಭಾಯಿಸಿದ್ದರು. ಶ್ರೀವಿದ್ಯಾ 2006 ರಲ್ಲಿ‌ ನಿಧನ ಹೊಂದಿ ದರು.
1978ರಲ್ಲಿ‌ ಕಮಲ್ ಹಾಸನ್ ತನ್ನ 24 ರ ಹರೆಯದಲ್ಲೇ ಪ್ರಸಿದ್ಧ ನೃತ್ಯಗಾರ್ತಿ, ತನಗಿಂತ ಹಿರಿಯಳಾಗಿದ್ದ ವಾಣಿ ಗಣಪತಿ ಅವರನ್ನು ಸ್ವಲ್ಪ ಸಮಯ ಪ್ರೀತಿಪ್ರೇಮದ ಬಳಿಕ ವಿವಾಹವಾದರು.ಮದುವೆಯ ಬಳಿಕ ಗಂಡನ ಚಿತ್ರಗಳಿಗೆ ಡ್ರೆಸ್ ಡಿಸೈನರ್ ಆಗಿ‌ ಕಾರ್ಯ ನಿರ್ವಹಿಸತೊಡಗಿದ ವಾಣಿ ಗಂಡನ ಜತೆಯೇ ಎಲ್ಲಾ ಸಮಾರಂಭ ಗಳಲ್ಲಿ ಹಾಜರಾಗುವ ಮೂಲಕ ಪ್ರಸಿದ್ಧಿಗೆ ಬಂದರು.ಆದರೆ ಹತ್ತು ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನವಾಯಿತು. ವಾಣಿ ಗಣಪತಿ ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ಪ್ರಕಾರ, ಈಕೆಗೆ ಮಕ್ಕಳಾಗಲಿಲ್ಲ ಎಂಬುದೇ ವಿಚ್ಛೇದನಕ್ಕೆ ಕಾರಣವಂತೆ. ಈ ನಡುವೆ ಕಮಲ್ ಗೆ ಸಾರಿಕಾ ಜತೆಗೂ ಸಂಬಂಧ ವಿತ್ತು. ಸಾರಿಕಾ ಗರ್ಭಿಣಿಯಾಗುವವರೆಗೂ ವಾಣಿ‌ ಮತ್ತು ಕಮಲ್ ರ ದಾಂಪತ್ಯ ಮುಂದುವರಿದಿತ್ತು. ಕೊನೆಗೆ ವಾಣಿಗೆ ಕೈಕೊಟ್ಟು ಸಾರಿಕಾರ ಕೈ ಹಿಡಿದರು ಕಮಲ್.
ಮದುವೆಗೆ ಕೆಲ ವರ್ಷಗಳ ಮೊದಲೇ ಕಮಲ್ ಮತ್ತು ಸಾರಿಕಾ ಜತೆಯಾಗಿಯೇ ವಾಸಿಸುತ್ತಿದ್ದರು.1986 ರಲ್ಲಿ ಪುತ್ರಿ ಶ್ರುತಿಯ ಜನನವಾಯಿತು.ಆದರೆ ಇವರು ವಿವಾಹವಾದದ್ದು 1988 ರಲ್ಲಿ.1991 ರಲ್ಲಿ ಎರಡನೇ ಪುತ್ರಿ ಅಕ್ಷರಾಳ ಜನನ ವಾಯಿತು. ಕ್ರಮೇಣ ಇವರ ದಾಂಪತ್ಯ ದಲ್ಲೂ ಬಿರುಕು‌ ಮೂಡಲಾರಂಭಿಸಿತು. ಮತ್ತೋರ್ವ ನಟಿ ಸಿಮ್ರಾನ್ ಜತೆ ಕಮಲ್ ಅವರ ಚಕ್ಕಂದ ಆರಂಭವಾಗಿತ್ತೆನ್ನ ಲಾಗಿದ್ದು , ಇದು ಸಾರಿಕಾಗೆ ಸಹಿಸಲಾ ಗಲಿಲ್ಲ.
ಒಮ್ಮೆ ಸಾರಿಕಾ ತನ್ನ ಮನೆಯ ಟಾರಸಿ ಯಿಂದ ಕೆಳಕ್ಕೆ ಬಿದ್ದು ತೀವ್ರವಾಗಿ ಜಖಂ ಗೊಡಿದ್ದರು. ಮಾಧ್ಯಮಗಳು ಇದನ್ನು ಆತ್ಮಹತ್ಯೆ ಪ್ರಯತ್ನ ಎಂಬುದಾಗಿ ಬಿಂಬಿಸ ತೊಡಗಿದವು. ವಾಣಿ ಗಣಪತಿ ಹೇಳುವಂತೆ , ಕಮಲ್ ಯಾವತ್ತೂ ನೇರ ವಾಗಿ ಡೈವೋರ್ಸ್ ನೀಡುವಂತೆ ಪತ್ನಿ ಯನ್ನು ಕೇಳುವುದಿಲ್ಲ..ಪತ್ನಿಯೇ ಸ್ವತಃ ಡೈವೋರ್ಸ್ ಕೇಳುವಂತಾಗುವಂತಹ  ಪರಿಸ್ಥಿತಿಯನ್ನು ಅವರು ನಿರ್ಮಿಸುತ್ತಿ ದ್ದರು. ಸಾರಿಕಾ ಆಸ್ಪತ್ರೆಯಲ್ಲಿದ್ದರೂ ಕೇವಲ ಒಂದು ಬಾರಿ ಮಾತ್ರ ಕಮಲ್ ಪತ್ನಿ( ಸಾರಿಕಾ) ಯನ್ನು ನೋಡಲು  ಆಸ್ಪತ್ರೆಗೆ ಭೇಟಿ ನೀಡಿದ್ದರು.2002 ರಲ್ಲಿ ಡೈವೋರ್ಸ್ ಗೆ ಅರ್ಜಿ ಹಾಕಿದರು. 2004 ರಲ್ಲಿ ವಿಚ್ಛೇದನವಾಯಿತು. 18 ವರ್ಷಗಳ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟರು.2004 ರಿಂದ ಗೌತಮಿ ಜತೆ ಕಮಲ್ ಲಿವ್  ಇನ್‌ ರಿಲೇಶನ್ಸ್ ಹೊಂದಿದ್ದರು. 13 ವರ್ಷ ಗಳ ಈ ಸಂಬಂಧಕ್ಕೆ 2016ರಲ್ಲಿ ಅಂತಿಮ ತೆರೆ ಎಳೆದರು.ಗೌತಮಿ  ಉದ್ಯಮಿ ಸಂದೀಪ್ ಭಾಟಿಯಾರನ್ನು  1998 ರಲ್ಲಿ‌ ವಿವಾಹವಾಗಿದ್ದು ಒಂದು ಹೆಣ್ಣು ಮಗುವನ್ನು ಪಡೆದು 1999ರಲ್ಲಿ ಗಂಡನನ್ನು ತೊರೆದಿದ್ದರು.
ತನಗೆ ಮದುವೆಯಲ್ಲಿ ನಂಬಿಕೆಯೇ ಇಲ್ಲ ಎನ್ನುವ ಕಮಲ್ ರ ಹೆಸರು ರೇಖಾ, ಶ್ರೀದೇವಿ, ಸಿಲ್ಕ್‌ಸ್ಮಿತಾ ಮತ್ತು ಅಮಲಾ ಜತೆಗೂ ಕೇಳಿ ಬಂದಿತ್ತು.

*  ” ತೂ ಚೀಸ್ ಬಡೀ ಹೈ ಮಸ್ತ್ ಮಸ್ತ್…”ಎಂದು ರವೀನಾ ಟಂಡನ್ ಳ ಹಿಂದೆ ಸುತ್ತುತ್ತಿದ್ದ ಬಾಲಿವುಡ್ ನ ಖಿಲಾಡಿ ಅಕ್ಷಯ್ ಕುಮಾರ್ ಕೆಲವು ವರ್ಷ ಆಕೆಯೊಂದಿಗೆ ಸುತ್ತಾಡಿದ್ದ.ಅವರಿಬ್ಬರೂ ಗುಟ್ಟಾಗಿ ವಿವಾಹವಾಗಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿತ್ತು.ಆದರೆ ಆ ಸುದ್ದಿಗೆ ಪುಷ್ಟಿ ದೊರಕಿಲ್ಲ. ಅಕ್ಷಯ್ ಕೈ ಕೊಟ್ಟ ಬಳಿಕ ರವೀನಾ ಸಿನಿಮಾ ವಿತರಕ ಅನಿಲ್ ಥಡಾನಿಯನ್ನು ವಿವಾಹವಾದಳು. ಅನಿಲ್ ಮೊದಲು ನತಾಶಾ ಎಂಬಾಕೆಯನ್ನು ವಿವಾಹವಾಗಿ ಡೈವೋರ್ಸ್  ಕೊಟ್ಟಿದ್ದರು.ಒಂದು ವಿಷಯ ಗಮನಿಸಿ ಹೆಚ್ಚಿನ ಬಾಲಿವುಡ್ ನಟಿಯರು ಸೆಕೆಂಡ್ ಹ್ಯಾಂಡ್ ಪುರುಷರನ್ನೇ ಹೆಚ್ಚಾಗಿ ಗಂಡನನ್ನಾಗಿ ಮಾಡಿಕೊಳ್ಳುವ ಚಾಳಿ ಅಂಟಿಕೊಂಡಿದೆ.ಈ ಬಗ್ಗೆಯೇ ಒಂದು ದೊಡ್ಡ ಲೇಖನ ಬರೆಯಬಹುದು.
ಆಯೇಷಾ ಜುಲ್ಕಾಳಿಗಾಗಿ ಪೂಜಾ ಭಾತ್ರಾಳಿಗೆ  ಕೈಕೊಟ್ಟ ಅಕ್ಷಯ್ ಬಳಿಕ ಶಿಲ್ಪಾ ಶೆಟ್ಟಿಗಾಗಿ ರವೀನಾಗೆ ಕೈಕೊಟ್ಟ. ಬಳಿಕ ಟ್ವಿಂಕಲ್ ಖನ್ನಾಳಿಗಾಗಿ ಶಿಲ್ಪಾಗೆ ಕೈಕೊಟ್ಟ ವಂಚಕ ರಸಿಕ ಈತ.ಕೊನೆಗೂ ಆತನ ಪ್ರೇಮದ ಗಾಡಿ ರಾಜೇಶ್ ಖನ್ನಾ- ಡಿಂಪಲ್ ಕಪಾಡಿಯಾರ ಪುತ್ರಿ ನಟಿ ಟ್ವಿಂಕಲ್ ಳನ್ನು ವಿವಾಹವಾಗುವ ಮೂಲಕ ಒಂದು ಶಾಶ್ವತ ನಿಲ್ದಾಣವನ್ನು ತಲುಪಿತು.ಅಕ್ಷಯ್ ನ ಹೆಸರು ಹಿರಿಯ ನಟಿ ರೇಖಾ, ಪ್ರಿಯಾಂಕ ಚೋಪ್ರಾ,ಕತ್ರಿನಾ ಕೈಫ್ ಜತೆಗೂ ಕೇಳಿ ಬಂದಿತ್ತು.ಆದರೆ ಆ ಸುದ್ದಿಯಲ್ಲಿ ಹುರುಳಿರಲಿಲ್ಲ.
*
ರವೀನಾ ಗೆ ಅಜಯ್ ದೇವಗನ್ ಜತೆಗೂ ಗೆಳತನಕ್ಕೂ ಮೀರಿದ ಸ್ನೇಹವಿತ್ತು ಎನ್ನಲಾಗುತ್ತಿತ್ತು. ಕರಿಶ್ಮಾ ಕಪೂರ್ ಜತೆಗೂ ಹೆಸರು ಸೇರಿಸಿಕೊಂಡಿದ್ದ ಅಜಯ್ ಬಳಿಕ ಕಾಜೊಲ್ ಳನ್ನು  ಪ್ರೇಮಿಸಿ ವಿವಾಹವಾಗ ಇಬ್ಬರು ಮಕ್ಕಳನ್ನು ಪಡೆದು ಸುಖ ಸಂಸಾರ ಸಾಗಿಸುತ್ತಿದ್ದಾರೆ. ಈ ಮಧ್ಯೆ ಮಹಿಮಾ ಚೌಧರಿ ಜತೆ ಹೆಚ್ಚು ಸಲುಗೆ ಬೆಳೆಸಿಕೊಂಡಿದ್ದ ಅಜಯ್ ನ ಸಂಸಾರದಲ್ಲಿ ಒಮ್ಮೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು.ಬಳಿಕ ಶಾಂತಗೊಂಡಿತು.
ರವೀನಾಳಿಗೆ ಕೈಕೊಟ್ಟ ಬಳಿಕ ಅಕ್ಷಯ್ ನ ಸಂಪರ್ಕ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿಯೊಂದಿಗಾಯಿತು.” ಮೈ‌ ಖಿಲಾಡಿ ತೂ ಅನಾಡಿ ” ಚಿತ್ರದ ಸೆಟ್ ನಲ್ಲಿ ಇವರ ಮೊದಲ ಭೇಟಿಯಾಗಿತ್ತು.ಭೇಟಿಯ ಬಳಿಕ ಪರಿಚಯ- ಸ್ನೇಹ ಕೊನೆಗೆ ಪ್ರೇಮಕ್ಕೆ ತಿರುಗಿತು. ಇನ್ನೇನು ಇವರಿಬ್ಬರೂ ವಿವಾಹವಾಗಲಿದ್ದಾರೆ ಎನ್ನುವ ಹೊತ್ತಿಗೆ ಆತನ ಕಣ್ಣು ಟ್ವಿಂಕಲ್ ಮೇಲೆ ಬಿತ್ತು.ಅಕ್ಷಯ್ ಜತೆಗಿನ ಪ್ರೇಮ ಭಗ್ನವಾದ ಬಳಿಕ ಶಿಲ್ಪಾ ಉದ್ಯಮಿ‌ ರಾಜ್‌ ಕುಂದ್ರಾನನ್ನು ವಿವಾಹವಾದಳು.ಈತ ಕೂಡಾ ಮೊದಲೊಂದು ವಿವಾಹವಾಗಿ ಹೆಂಡತಿಯನ್ನು ತೊರೆದಿದ್ದ.
* ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ‘ ಸತ್ಯಮೇವ ಜಯತೆ ‘ ಎಂಬ ಟಿವಿ ಮಾಲಿಕೆಯಲ್ಲಿ ಸಂಸಾರ,ದೇಶ,ದುರ್ವ್ಯಸನ ಇತ್ಯಾದಿಗಳ ಬಗ್ಗೆ ಎಷ್ಟೇ ಪರಿಣಾಮಕಾರಿಯಾದ ಕಾರ್ಯಗಳನ್ನು ನೀಡಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿರಲಿ ಆದರೆ ಆತ ಈ ದೇಶವನ್ನು ಗೌರವಿಸುತ್ತಿದ್ದಾನೆಯೇ ಎಂಬ ಬಗ್ಗೆ ಸಂಶಯ ಮೂಡುವ ರೀತಿಯಲ್ಲಿ ವರ್ಷಗಳಿಂದ ವರ್ತಿಸುತ್ತಿರುವುದು ಗಮನಕ್ಕೆ ಬರುತ್ತಿದೆ.ಅದೇ ರೀತಿ ಆತ ಹೆಣ್ಣನ್ನು ಗೌರವಿಸುತ್ತಿದ್ದಾನೆಯೇ ಅಥವಾ ಭೋಗದ ವಸ್ತು ಎಂದು ಪರಿಗಣಿಸಿ ದ್ದಾನೆಯೇ, ಮಕ್ಕಳಿಗೆ ತಂದೆಯ ಪ್ರೀತಿ ಸಂಪೂರ್ಣವಾಗಿ ಸಿಗುವಂತೆ ನೋಡಿ ಕೊಂಡಿದ್ದಾನೆಯೇ? ಎಂಬ ಪ್ರಶ್ನೆಯೂ ಅತನ ಚರಿತ್ರೆ ನೋಡಿದಾಗ ಉದ್ಭವವಾಗುತ್ತದೆ.
“ಕಯಾಮತ್ ಸೆ ಕಯಾಮತ್ ತಕ್ ” ಚಿತ್ರದ ” ಪಾಪಾ ಕೆಹ್ತೆ ಹೈ ಬಡಾ ನಾಮ್ ಕರೇಗಾ…’ ಹಾಡಿನ ದೃಶ್ಯದಲ್ಲಿ ಕಂಡು ಬಂದಿದ್ದ ಸಾಮಾನ್ಯ ಹುಡುಗಿ ರೀನಾ ದತ್ತ್ ಎಂಬಾಕೆಯನ್ನು ಪ್ರೀತಿಸತೊಡಗಿದ ಆಮಿರ್ ತನ್ನ 21,ರ ಹರೆಯದಲ್ಲೇ 1986 ಎಪ್ರಿಲ್ 18 ರಂದು ಆಕೆಯನ್ನು ವಿವಾಹವಾದ.ಆಕೆ ಮುಸ್ಲಿಂ ಅಲ್ಲ ಎಂಬ ಕಾರಣಕ್ಕೆ ಆತನ ಮನೆಯವರು ಈ ಮದುವೆಯನ್ನು ವಿರೋಧಿಸಿದ್ದರು. ಈ ಮದುವೆಯನ್ನು ಆಮಿರ್ ಬಹಳ ಗುಟ್ಟಾಗಿಟ್ಟಿದ್ದರು.ಆ ಕಾರಣಕ್ಕಾಗಿಯೇ ರೀನಾ‌ಮದುವೆ ಬಳಿಕವೂ ಟ್ರಾವೆಲ್ ಏಜೆನ್ಸಿಯಲ್ಲೇ ಕೆಲಸ ಮುಂದುವರಿಸಿ ದ್ದರು. ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳನ್ನು ಪಡೆದ ರೀನಾ, ಆಮಿರ್ ಕೆಲಸದಲ್ಲಿ ಹೆಚ್ಚು ಕೈ ಜೋಡಿಸುತ್ತಿರಲಿಲ್ಲ. ಲಗಾನ್ ಚಿತ್ರದ ನಿರ್ಮಾಪಕಿಯಾಗಿ ಮಾತ್ರ ಆಕೆ ತನ್ನನ್ನು ತೊಡಗಿಸಿಕೊಂಡಿದ್ದರು.ಆ ಚಿತ್ರದ ಬಳಿಕ 2002ರ ಡಿಸೆಂಬರ್ ನಲ್ಲಿ ದಂಪತಿ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ 15 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ ಇಟ್ಟರು.ಆಮಿರ್ ತನ್ನ ಪತ್ನಿಯನ್ನು ತೊರೆಯುತ್ತಿದ್ದಾನೆ ಎಂಬುದನ್ನು ನಂಬಲು ಬಾಲಿವುಡ್ ತಯಾರಿರಲಿಲ್ಲ.ಯಾಕೆಂದರೆ ಅವರ ದಾಂಪತ್ಯ ಮೇಲ್ನೋಟಕ್ಕೆ ಅಷ್ಟು ಅನ್ಯೋನ್ಯವಾಗಿತ್ತು. ರೀನಾಳ ಜತೆ ಸಂಸಾರ ಸಾಗಿಸುತ್ತಿದ್ದಂತೆಯೇ ಆಮಿರ್ ನ ಸಂಬಂಧ ನಟಿ ಮಮತಾ ಕುಲಕರ್ಣಿಯ ಜತೆಗೆ ನಿರಾತಂಕವಾಗಿ ಸಾಗುತ್ತಿತ್ತು.ಈ ವಿಚಾರವಾಗಿ ದಂಪತಿ ಮಧ್ಯೆ ಕಲಹಗಳೂ ನಡೆಯುತ್ತಿದ್ದವಂತೆ.ನಟನ ಅಸಂತುಷ್ಟ ಪತ್ನಿ ಕೊನೆಗೂ ವಿಚ್ಛೇದನವೇ ಲೇಸೆಂದು ನಿರ್ಧರಿಸಿದರು.
ರೀನಾ ಲಗಾನ್ ಚಿತ್ರದ ನಿರ್ಮಾಪಕಿ ಯಾಗಿದ್ದರೆ ಕಿರಣ್ ರಾವ್ ಸಹಾಯಕ ನಿರ್ದೇಶಕಿಯಾಗಿದ್ದರು.ಈ ಚಿತ್ರದ ನಿರ್ಮಾಣ ಸಮಯ ಆಮಿರ್ ಹೃದಯ ಕಿರಣ್ ಳ ಪ್ರೇಮರಾಗ ಹಾಡತೊಡಗಿತು, ಅನುರಾಗ ಅರಳಿತು.2005 ರ ಡಿಸೆಂಬರ್ 28 ರಂದು ಸತಿಪತಿಗಳಾದರು. ಗಮನಿಸ ಬೇಕಾದ ಸಂಗತಿ ಏನು ಗೊತ್ತೇ? ಹಿಂದುಸ್ತಾನದಲ್ಲಿ ತನ್ನ ಪತ್ನಿ ಮಕ್ಕಳು ಆಸುರಕ್ಷರಾಗಿದ್ದಾರೆ ಎನ್ನುವ ಈತ ಎರಡು ಬಾರಿಯೂ ಹಿಂದೂ ಕನ್ಯೆಯರನ್ನೇ ವಿವಾಹವಾಗಿರುವುದು. ಕಿರಣ್ ಗೆ ಒಮ್ಮೆ ಗರ್ಭಪಾತವಾದ ಬಳಿಕ ಮುಂದಕ್ಕೆ ಮಕ್ಕಳಾಗುವುದು ಕಷ್ಟವಾಯಿತು.ಆ ಕಾರಣಕ್ಕಾಗಿ ಆಮಿರ್ ಬಾಡಿಗೆ ತಾಯಿ‌ ಮೂಲಕ ಗಂಡು ಮಗುವನ್ನು ಪಡೆದರು.ಇವರಿಬ್ಬರ ನಡುವೆಯೂ ಸಂಬಂಧ ಸರಿ ಇಲ್ಲ ಎಂಬ ಸುದ್ದಿ‌ಕೆಲ ವರ್ಷಗಳ ಹಿಂದೆ ಹರಡಿತ್ತು. ಬಳಿಕ ಎಲ್ಲವೂ ಶಾಂತಗೊಂಡಿತು.
* ಗೋವಿಂದ ಸುಖಿ ಸಂಸಾರಸ್ಥ ನಟ ಎಂಬುದಾಗಿ ಎಲ್ಲರೂ ಭಾವಿಸಿದ್ದ ನಡುವೆ ಗೋವಿಂದನ ಹೆಸರು ರಾಣಿ ಮುಖರ್ಜಿ ಜತೆ ಕೇಳಿ ಬಂದಿತ್ತು.ಬಳಿಕ ರಾಣಿಯ ಕಣ್ಣು ಬಿದ್ದದ್ದು ಯಶ್ ಚೋಪ್ರಾರ ಪುತ್ರ, ಬಾಲಿವುಡ್ ನ ಪ್ರಮುಖ ನಿರ್ಮಾಪಕ ಆದಿತ್ಯ ಚೋಪ್ರಾ. ಆದಿತ್ಯ ಚೋಪ್ರಾ ವಿವಾಹಿತನಾಗಿದ್ದು,ಪತ್ನಿಗೆ ವಿಚ್ಛೇದನ ನೀಡಿದ್ದರು.ಬಳಿಕ ರಾಣಿ- ಆದಿತ್ಯ ಸತಿ ಪತಿಗಳಾದರು.
ರಾಣಿ ಮುಖರ್ಜಿಯೊಂದಿಗೆ ಸ್ನೇಹ ಬೆಳೆಸುವ ಮೊದಲು ಗೋವಿಂದನೊಂದಿಗೆ ಸಲುಗೆಯಿಂದಿದ್ದವಳು ನಟಿ ನೀಲಂ ಕೊಠಾರಿ.ಕೆಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಈ ಜೋಡಿ ರಿಯಲ್ ಲೈಫ್ ನಲ್ಲೂ ಜತೆಯಾಗಿಯೇ ಹೆಚ್ಚಾಗಿ ಕಾಣಿಸತೊಡಗಿತು.ಗೋವಿಂದನ  ತೆಕ್ಕೆಯಿಂದ ಜಾರಿದ ಬಳಿಕ ಈಕೆ ಬಾಬಿ ದೇವೊಲ್ ನ ಬಳಿ ಸಾಗಿದಳು.ಎರಡು ವರ್ಷಗಳ  ಕಾಲ ಈಲೂ ಈಲೂ ಎಂದು ರಾಗ ಹಾಡಿದ ಬಾಬಿ ಒಂದು ದಿನ ಇದ್ದಕ್ಕಿದ್ದಂತೆ ನೀಲಂಗೆ ಕೈಕೊಟ್ಟ.ತಮ್ಮ ಮುದ್ದಿನ ಮಗನಿಗೆ ಸಿನಿಲೋಕದ ಸೊಸೆಯನ್ನು ತರುವುದು ಮನೆಯವರಿಗೆ ಇಷ್ಟವಿರಲಿಲ್ಲ ಎಂಬುದು ಇದಕ್ಕೆ ಕೊಟ್ಟಿರುವ ಕಾರಣವಾಗಿತ್ತು.ಆದರೆ ಅಸಲಿ‌ ಕಾರಣ ಬಾಬಿಯ ಮನಸ್ಸು ಪೂಜಾ ಭಟ್ ಳ ಮೇಲಿದ್ದದ್ದು.ಕೆಲ ಸಮಯದಲ್ಲೇ ಆಕೆ ಬಾಬಿಗೆ ಗುಡ್ ಬೈ ಹೇಳಿಬಿಟ್ಟಳು.ನೀಲಂ ಬಳಿಕ ನಟ ಸಮೀರ್ ಸೋನಿಯನ್ನು ವಿವಾಹವಾದಳು.
* ಕರೀನಾಳಿಂದ ತಿರಸ್ಕರಿಸಲ್ಪಟ್ಟ ಶಾಹಿದ್ ಕಪೂರ್ ಪ್ರಿಯಾಂಕಾ ಚೋಪ್ರಾ ಳ ಪ್ರೇಮಿಯಾಗಲು ಪ್ರಯತ್ನಿಸಿದ.ಆದರೆ ಇಲ್ಲೂ ಸೋತು ಹೋದ. ಪ್ರಿಯಾಂಕಾ ಳಿಗಾಗಿ ಶಾರೂಖ್ ತನ್ನ ಪತ್ನಿ ಗೌರಿ ಖಾನ್ ಳನ್ನು ತೊರೆಯಲಿದ್ದಾನೆ ಎಂಬಲ್ಲಿಗೂ ಸುದ್ದಿ ತಲುಪಿತ್ತು. ಎಲ್ಲೆಲ್ಲೂ ಶಾರೂಖ್ ಪ್ರಿಯಾಂಕಾ ಜತೆಯಾಗಿ ಅಂಟಿಕೊಂಡೇ ಇರುತ್ತಿದ್ದುದು ಇದಕ್ಕೆ ಪುಷ್ಟಿ ಕೊಟ್ಟಿತ್ತು. ಗೌರಿ ಪ್ರಿಯಾಂಕಾಳಿಗೆ ತಕ್ಕ ಶಾಸ್ತಿಯನ್ನೂ ಮಾಡಿದ್ದ ಸುದ್ದಿ ಬಂದಿತ್ತು. ಪ್ರಿಯಾಂಕಾ ಶಾರೂಖ್ ನೊಂದಿಗೂ ಹೆಸರು ಹಾಳು ಮಾಡಿಸಿಕೊಂಡ ಬಳಿಕ ಹೊಸತಾಗಿ ಆಕೆಯ ಹೆಸರು ಸಲ್ಮಾನ್ ಖಾನ್ ನೊಂದಿಗೆ ಸೇರಿಕೊಳ್ಳುವ ಸಾಧ್ಯತೆಗಳು ಸೃಷ್ಟಿಯಾಗತೊಡಗಿತ್ತು. ಕೊನೆಗೂ ಪ್ರಿಯಾಂಕಾ ಅಮೆರಿಕನ್   ಸಿಂಗರ್ ತನಗಿಂತ ಕಿರಿಯ , ನಿಕ್ ಜೋನಸ್ ನನ್ನು 2018 ರಲ್ಲಿ ವಿವಾಹವಾದಳು.
* ದೀಪಿಕಾ ಪಡುಕೋಣೆ ತನ್ನ ಮಾಡೆಲಿಂಗ್ ನ ಸಮಯದಲ್ಲಿ ಪ್ರೀತಿಸುತ್ತಿದ್ದುದು ನಿಹಾರ್ ಪಾಂಡ್ಯ ಎಂಬ ಮಾಡೆಲ್ ನನ್ನು.ಈಕೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದ ಆತ ತನ್ನ ಮನೆಯಲ್ಲೇ ನಿಲ್ಲಲ್ಲೂ ವ್ಯವಸ್ಥೆ ಮಾಡಿದ್ದ. ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ನಟಿಸಿದ ಪ್ರಥಮ ಚಿತ್ರ ” ಓಂ ಶಾಂತಿ ಓಂ”  ಯಶಸ್ಸಾದದ್ದೇ ತಡ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಮರುಳಾಗಿ  ನಿಹಾರ್ ಗೆ ಸೋಡಾ ಚೀಟಿ ಕೊಟ್ಟೇ ಬಿಟ್ಟಳು. ಯುವರಾಜ್  ತಮ್ಮ ಸಂಬಂಧಕ್ಕೆ ಸ್ವಲ್ಪ ಕಾಲಾವಕಾಶವನ್ನು ನೀಡಬೇಕೆಂದು  ಬಯಸಿದ್ದ. ಆದರೆ ಅಷ್ಟರೊಳಗೆ ಆಕೆಯ ಹೃದಯ ಬಾಲಿವುಡ್ ನ ಯುವನಟ ರಣಬೀರ್  ಕಪೂರ್ ನನ್ನು ಬಯಸಿ ಆತನ  ತೋಳತೆಕ್ಕೆಯಲ್ಲಿ ಬಂಧಿಯಾಗಿ ಬಿಟ್ಟಳು. ರಣಬೀರ್ ನ ತಾಯಿ ನೀತಾ ಕಪೂರ್ ಮತ್ತು ರಿಷಿ‌ ಕಪೂರ್  ಈಕೆಯನ್ನು ತಮ್ಮ ಸೊಸೆಯಾಗಿ ಸ್ವೀಕರಿಸುವ ಸಿದ್ಧತೆ ಮಾಡಿಕೊಂಡಿದ್ದರು. ಎರಡು ವರ್ಷಗಳ ಪ್ರಣಯದ ಬಳಿಕ  ರಣಬೀರ್ ಗೆ ಕತ್ರಿನಾ ಮುದ್ದು ಮುದ್ದಾಗಿ ಕಾಣಿಸಿಕೊಳ್ಳತೊಡಗಿದ ಕಾರಣ ದೀಪಿಕಾಗೆ ಕೈಕೊಟ್ಟ.ರಣಬೀರ್ ನ ಹೃದಯದಿಂದ  ಹೊರಬಿದ್ದ ಬಳಿಕ 2010ರಲ್ಲಿ ಆಕೆಗೆ ಸಿಕ್ಕಿದ್ದು ವಿಜಯ್ ಮಲ್ಯನ ಪುತ್ರ ಸಿದ್ಧಾರ್ಥ್ ಮಲ್ಯ.ಆದರೆ ಒಂದೆರಡು  ವರ್ಷದಲ್ಲಿ ಆತನಿಂದಲೂ ದೂರವಾದ ಆಕೆ ಮತ್ತೆ ಹಳೆಯ ಗೆಳೆಯ  ನಿಹಾರ್ ನ ಬಳಿ ಸಾಗಿದ್ದಾಳೆ ಎಂಬ ಸುದ್ದಿ ಇತ್ತು.ಅಲ್ಲಿಂದ ರಣವೀರ್ ಸಿಂಗ್ ನ ಗಾಳಕ್ಕೆ ಸಿಕ್ಕಿಬಿದ್ದ  ಆಕೆ ಕೆಲ ಸಮಯ ಸುತ್ತಾಟದ ಬಳಿಕ ಆತನನ್ನು ವಿವಾಹವಾಗಿ ಬಿಟ್ಟಳು.
* ದೀಪಿಕಾಳಿಂದ ದೂರವಾದ ರಣಬೀರ್ ಕಪೂರ್ ತನ್ನ ‘ ರಾಕ್ ಸ್ಟಾರ್’ ಚಿತ್ರದ ಸಹನಟಿ  ನರ್ಗೀಸ್ ಫಖ್ರಿಯೊಂದಿಗೆ ಸರಸವಾಡಲಾರಂಭಿಸಿದ.ಆದರೆ ಇದು ಹೆಚ್ಚು ಸಮಯ ಮುಂದುವರಿಯಲಿಲ್ಲ.ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ, ಏಂಜಲಿನಾ ಜಾನ್ಸನ್ ಜತೆಗೂ ರಣಬೀರ್ ನ ಹೆಸರು ಕೇಳಿಬಂದಿತ್ತು.ಆ ಬಳಿಕ ಮತ್ತೆ ಹಳೆ ಗೆಳತಿ ಕತ್ರಿನಾ ಕೈಫ್ ಗೆ ಹತ್ತಿರವಾಗತೊಡಗಿದೆ.ಇಬ್ಬರೂ ವಿದೇಶದಲ್ಲಿ ರಜಾ ಮಜಾ ಅನುಭವಿಸಿದ್ದರು.ಅವರಿಬ್ಬರೂ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.ಆದರೆ ಆ ಸುದ್ದಿ ಠುಸ್ಸ್ ಆಗಿ ಈಗ ಆಲಿಯಾ ಭಟ್ ಜತೆಗಿದ್ದು ಮದುವೆ ಸುದ್ದಿ ಹರಿದಾಡುತ್ತಿದೆ.ಆದರೆ ಕೊನೆಕ್ಷಣದ ಫಲಿತಾಂಶ ಏನು ಎಂದು ಈಗಲೇ ಹೇಳಲಾಗದು.
ರಿತೇಶ್ ದೇಶ್ ಮುಖ್ ಜೆನೆಲಿಯಾ ಡಿಸೋಜಾಳನ್ನು ಕೆಲವರ್ಷ ಸುತ್ತಾಡಿಸಿ ಬಳಿಕ ವಿವಾಹವಾಗಿ ಸುಖ ಸಂಸಾರ ಸಾಗಿಸುತ್ತಿದ್ದಾನೆ.ನೃತ್ಯ ನಿರ್ದೇಶಕಿ‌ ಫರ್ಹಾ ಖಾನ್ ತನಗಿಂತ ಬಹಳ ಕಿರಿಯ ಮಂಗಳೂರು ಮೂಲದ ಮೊಗವೀರ ಹುಡುಗ ಶಿರಿಶ್ ಕುಂದರ್ ನನ್ನು ವಿವಾಹವಾಗಿ ಏಕ ಕಾಲದಲ್ಲಿ ತ್ರಿವಳಿಗಳಿಗೆ ಜನ್ಮ ನೀಡಿದ್ದಾರೆ.ಪ್ರತಿಕ್ ಬಬ್ಬರ್ ಆಮಿ ಜಾಕ್ಸನ್ ಳನ್ನು ಕೆಲ ಸಮಯ ಪ್ರೀತಿಸಿ ಕೈಕೊಟ್ಟ.
ವಿದ್ಯಾಬಾಲನ್- ಸಿದ್ಧಾರ್ಥ್ ರಾಯ್ ಕಪೂರ್ ಪ್ರೇಮಿಸಿ ವಿವಾಹವಾಗಿ ಬಿಟ್ಟರೆ ಜಾಕ್ಲಿನ್ ಫೆರ್ನಾಂಡಿಸ್ – ಸಾಜಿದ್ ಖಾನ್ ಬಾಲಿವುಡ್ ನಲ್ಲಿ ರಂಗೇರಿಸಿ ಕೊನೆಗೆ ದೂರವಾಗಿ ಬಿಟ್ಟರು.ರಣವೀರ್ ಸಿಂಗ್ ಜತೆಗೆ ಅನುಷ್ಕಾ ಶರ್ಮಾ ಹೆಸರು ಥಳುಕು ಹಾಕಿಕೊಂಡಿದ್ದರೂ ಆತ ಕೈ ಹಿಡಿದದ್ದು ದೀಪಿಕಾ ಪಡುಕೋಣೆಯದ್ದು.ಅನುಷ್ಕಾ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ವಿವಾಹವಾದಳು.ಮಾಡೆಲ್,ನಟ ಮಿಲಿಂದ್ ಸೊಮನ್ ಮೊದಲು  ಮೈಲೆನೆ ಜಂಪನೊಯಿ ಎಂಬಾಕೆಯನ್ನು 2006ರಲ್ಲಿ ವಿವಾಹವಾಗಿ 2009 ರಲ್ಲಿ ತೊರೆದು ತನಗಿಂತ 26 ವರ್ಷ ಕಿರಿಯಳಾದ ಅಂಕಿತಾ ಕೊನ್ವರ್ ಎಂಬಾಕೆಯನ್ನು ಪ್ರೇಮಿಸಿ 2018 ರಲ್ಲಿ ವಿವಾಹವಾದರು.
* ಕನ್ನಡ ಸೇರಿ ದಕ್ಷಿಣ ದ ಚತುರ್ಭಾಷೆಯಲ್ಲಿ ನಟಿಸಿದ್ದ ಯಶಸ್ವೀ ನಟ ಶರತ್ ಬಾಬು ಮೂರನೇ ಮದುವೆಯ ತಯಾರಿ ಮಾಡಿದ್ದರು.ಆದರೆ ಅದು ಕೈಗೂಡಿರುವ ಸುದ್ದಿ ಬರಲಿಲ್ಲ.69 ರ ಹರೆಯದ ಶರತ್ ಬಾಬು ತಾನಿನ್ನೂ ಮೂವತ್ರೈದರ ಯುವಕನ ದೇಹ ಮತ್ತು ಶಕ್ತಿಯನ್ನು ಹೊಂದಿದ್ದೇನೆ ಎಂದಿದ್ದಾರೆ.ಶರತ್ ಬಾಬು ಮೊದಲ ಪತ್ನಿ ರಮಾಪ್ರಭಾಗೆ 1995 ಮತ್ತು 2011ರಲ್ಲಿ ಎರಡನೇ ಪತ್ನಿ ಸ್ನೇಹಲತಾ ನಂಬಿಯಾರ್ ಗೆ ಡೈವೋರ್ಸ್ ನೀಡಿದ್ದಾರೆ.
* ರಾಕೇಶ್ ರೋಶನ್ ಪುತ್ರ ಹೃತಿಕ್ ರೋಶನ್ ಟಿವಿ ಧಾರಾವಾಹಿ ಟಿಪು ಸುಲ್ತಾನ್ ಖ್ಯಾತಿಯ ಸಂಜಯ್ ಖಾನ್ ರ ಪುತ್ರಿ ಸುಸಾನೆ ಖಾನ್ ಜತೆ 4 ವರ್ಷಗಳ ಕಾಲ ಡೇಟಿಂಗ್ ನಡೆಸಿ ಬಳಿಕ ವಿವಾಹವಾಗಿ‌ ಹೃದಾನ್ ಮತ್ತು ರೆಹಾನ್ ಎಂಬಿಬ್ಬರು ಮಕ್ಕಳನ್ನು ಪಡೆದಿದ್ದಾರೆ.
ಮದುವೆಯಾದ 13 ವರ್ಷಗಳ ನಂತರ ವಿಚ್ಛೇದನವೂ ಆಯಿತು. ಹೃತಿಕ್ ರೋಶನ್  ‘ ಕೈಟ್ಸ್’ ಚಿತ್ರದ ವಿದೇಶಿ‌ ನಟಿ ಬಾರ್ಬರಾ ಮೋರಿ ಜತೆ ಹೃತಿಕ್‌ ಹತ್ತಿರವಾದದ್ದು  ಈ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ.2009 ರಲ್ಲಿ‌ ಒಮ್ಮೆ ಗಂಟುಮೂಟೆ ಕಟ್ಟಿಕೊಂಡು ತವರಿಗೆ ಹೋಗಿದ್ದ ಸುಸಾನೆ ಮರಳಿ ಬಂದಿದ್ದಳು. ಎಲ್ಲವೂ ಸರಿ ಹೋಯಿತು ಎನ್ನುವಾಗ ಮತ್ತೆ ಕಲಹ ಆರಂಭವಾಯಿತು.ಈ ಬಾರಿ ಸುಸಾನೆ ನಟ ಅರ್ಜುನ್ ರಾಮ್ ಪಾಲ್ ಗೆ ಹತ್ತಿರ ವಾಗಿದ್ದಾಳೆ ಎಂಬುದು ಕಾರಣ ಎಂದು ಬಾಲಿವುಡ್ ಪಡಸಾಲೆಯಲ್ಲಿನ ಸುದ್ದಿಯಾಗಿತ್ತು.ಕೊನೆಗೆ ಬಂದ ಸುದ್ದಿ‌ ಹೃತಿಕ್ ಕಂಗನಾ ರಣಾವತ್ ಳಿಗೆ ಹತ್ತಿರವಾಗಿದ್ದುದೇ ಈ ಎಲ್ಲಾ ಬಿರುಕಿಗೆ ಕಾರಣ ಎನ್ನುತ್ತಿತ್ತು.ಆದರೆ ಯಾರ ಸಂಬಂಧವೂ ಗಟ್ಟಿಯಾಗಲಿಲ್ಲ.ಸುಝಾನೆಗೆ ಅರ್ಸಲನ್ ಗೋನಿ ಜತೆ ಸ್ನೇಹವಾಗತೊಡಗಿದೆ ಎಂಬುದು ತಾಜಾ ಗಾಳಿ ಸುದ್ದಿ.
* ಬೋನಿ ಕಪೂರ್- ಮೋನಾ ಕಪೂರ್ ದಂಪತಿಯ ಪುತ್ರ ಅರ್ಜುನ್ ಕಪೂರ್ ನಟಿ,ಡಾನ್ಸರ್ ಮಲೈಕಾ ಅರೋರಾ ಕೂಡಾ ತಾನೂ ಪಾಸಿಟಿವ್ ಎಂದು ಘೋಷಿಸಿಕೊಂಡಿರು ವುದು ಕೆಲವರಿಗೆ ಆಶ್ಚರ್ಯ ಉಂಟು ಮಾಡಿಸಿದರೆ ಕಥೆ ಗೊತ್ತಿದ್ದವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಸಲ್ಮಾನ್ ಖಾನ್ ನ ಸಹೋದರ ಅರ್ಬಾಝ್ ಖಾನ್ ಗೆ 1998 ರಿಂದ 2017 ರವರೆಗೆ ಪತ್ನಿಯಾಗಿದ್ದುಕೊಂಡು ಸದ್ಯ 18 ರ ಹರೆಯದ ಪುತ್ರ ಅರ್ಹಾನ್ ನನ್ನು ಹೊಂದಿರುವ (ಈಗ47 ರ ಹರೆಯದ) ಮಲೈಕಾ ಅರೋರಾ ಪತಿಗೆ ವಿಚ್ಛೇದನ ನೀಡಿದ ಸಮಯ 35(ಈಗ)ರ ಹರೆಯದ ಅರ್ಜುನ್ ಕಪೂರ್ ಜತೆ ಸಲುಗೆಯ ಗೆಳೆತನ ಹೊಂದಿದ್ದಾಳೆ ಎಂದು ಬಾಲಿವುಡ್ ಪಡಸಾಲೆಯಲ್ಲೆ ಗುಸುಗುಸು ಸುದ್ದಿ ಹರಡಿದ್ದಾಗ ಯಾರೊಬ್ಬರೂ ನಂಬಲಿಲ್ಲ. ಡೈವೊರ್ಸ್ ಗೆ ಈ ಪ್ರೇಮ ಪ್ರಕರಣವೇ ಕಾರಣ ಎಂಬುದು ಬಳಿಕ ಮೆಲ್ಲಮೆಲ್ಲನೆ ಅರ್ಥವಾಗತೊಡಗಿತು.ಆದರೆ ಈವರೆಗೂ ಅವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಈ ಪ್ರೇಮ ಸಂಬಂಧ  ಮಾತ್ರ ನಿಜ ಎಂಬುದು ಹೆಚ್ಚಿನವರಿಗೆ ಗೊತ್ತಾಗಿ ಹೋಗಿತ್ತು.