ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಿಳಿ ಕುಳ್ಳನ ನಡಿಗೆ ಕಪ್ಪು ನಕ್ಷತ್ರದತ್ತ!

ಮಹಾದೇವ ಕಾನತ್ತಿಲ
ಇತ್ತೀಚಿನ ಬರಹಗಳು: ಮಹಾದೇವ ಕಾನತ್ತಿಲ (ಎಲ್ಲವನ್ನು ಓದಿ)

ಇರುವೆ ನಡಿಗೆ -7

ಬಿಳಿ ಕುಳ್ಳನ ನಡಿಗೆ ಕಪ್ಪು ನಕ್ಷತ್ರದತ್ತ!

“ಅನು ಪುಟ್ಟೂ, ಹೇಗಿದ್ದೀ.. ನಕ್ಷತ್ರದ ಹುಟ್ಟು ಮತ್ತು ಬಾಲ್ಯದ ಬಗ್ಗೆ ವಿವರಿಸಿದ್ದೆ. ಎಷ್ಟು ಅರ್ಥ ಆಯ್ತು ನಿಂಗೆ?.”

ಮಾಮ, ನಾನು ‘ಜೋಜೋ’ ಇರುವೆ!, ನೀನು ತೊಟ್ಟಿಲು ತೂಗುತ್ತಾ ನಂಗೆ ನಿದ್ದೆ ಮಾಡಿಸಲು ಜೋಗುಳ ಹಾಡ್ತಿದ್ಯಂತೆ, ಅಮ್ಮ ಹೇಳ್ತಿದ್ರು. ಜೋಗುಳದ ಹಾಡಿನಲ್ಲಿಯೇ ಈ ನಕ್ಷತ್ರದ ಕಥೆ ಹೇಳ್ತಿದ್ರೆ ಇನ್ನೂ ಬೇಗ ಅರ್ಥ ಆಗ್ತಿತ್ತು ಮಾಮ!.
ಹ್ಞಾ, ಮೊನ್ನೆ ನೀನು, ವ್ಯೋಮಾಕಾಶದಲ್ಲಿ ಅಗಾಧ ಗಾತ್ರದ ಹೈಡ್ರೋಜನ್ ಅನಿಲದ ಮೋಡದೊಳಗೆ ಯಾವುದೋ ಒಂದು ಸಮಯದಲ್ಲಿ ಒತ್ತಡದ ಕೇಂದ್ರ ಸೃಷ್ಟಿ ಯಾಗಿ, ಅದು ಗುರುತ್ವಾಕರ್ಷಣೆಯ ಕೇಂದ್ರವಾಗಿ, ಆ ಅನಿಲದ ಮೋಡ ಒಂದು ಅನಿಲಗೋಲವಾಗುತ್ತೆ. ಗುರುತ್ವಾಕರ್ಷಣ ಶಕ್ತಿಯ ಪ್ರಭಾವದಿಂದಾಗಿ ಆ ಅನಿಲಗೋಳದ ಗಾತ್ರ ಕುಗ್ಗುತ್ತಾ ಹೋದಂತೆ, ಅದರ ಕೇಂದ್ರದಲ್ಲಿ ಅತ್ಯಂತ ಅಧಿಕ ಒತ್ತಡ ಮತ್ತು ಉಷ್ಣತೆ ಉತ್ಪನ್ನವಾಗುತ್ತೆ.

ಅಂತಹಾ ಸ್ಥಿತಿಯಲ್ಲಿ ಹೈಡ್ರೋಜನ್ ಪರಮಾಣುಗಳು ಸಂಯೋಜಿಸಿ, ಹೀಲಿಯಂ ಪರಮಾಣು ಉತ್ಪನ್ನವಾಗುತ್ತೆ. ಸ್ವಲ್ಪ ಪ್ರಮಾಣದ ದ್ರವ್ಯರಾಶಿ ಚೈತನ್ಯವಾಗಿ ಪರಿವರ್ತನೆಗೊಂಡು ಬೆಳಕಾಗಿ ಎಲ್ಲಾ ದಿಕ್ಕುಗಳಲ್ಲಿ ಹರಿದಾಗ, ಆ ಅನಿಲಗೋಳ, ನಕ್ಷತ್ರವಾಗಿ ಬೆಳಗುತ್ತೆ.

ಪರಮಾಣು ಫ್ಯೂಷನ್ ನಿಂದ ಹುಟ್ಟಿದ ಶಾಖದಿಂದ ಪ್ರಾಪ್ತವಾದ ಹೊರಮುಖೀ ಒತ್ತಡ ಗುರುತ್ವಾಕರ್ಷಣ ಶಕ್ತಿಯ ಒಳಮುಖೀ ಶಕ್ತಿಯನ್ನು ವಿರೋಧಿಸುತ್ತದೆ. ಈ ಹೊರಮುಖೀ ಮತ್ತು ಒಳಮುಖೀ ಬಲಗಳು, ಸಮಬಲಗಳಾದಾಗ, ನಕ್ಷತ್ರ ಒಂದು ಸಮತೋಲನವನ್ನು ಹೊಂದಿ ಸ್ಟೇಬಲ್ ನಕ್ಷತ್ರ ಆಗುತ್ತೆ. ಇವಿಷ್ಟು ನೀವು ಹೇಳಿದಿರಿ ಮಾಮ!.”

ಹ್ಞಾ ಅನು! ಒಳ್ಳೆಯ ಗ್ರಹಣ ಶಕ್ತಿ ನಿಂದು. ತೊಟ್ಟಿಲಲ್ಲಿ ಹೆಬ್ಬೆರಳು ಚೀಪುತ್ತಾ ನಿದ್ದೆ ಮಾಡುತ್ತಿದ್ದ ಪುಟಾಣಿ ಈಗ ದೊಡ್ಡವಳಾಗಿದ್ದಿ ಬಿಡು!. ಅಂತರ್ಮುಖೀ ಗುರುತ್ವಾಕರ್ಷಣ ಬಲ ಮತ್ತು ಉಷ್ಣಶಕ್ತೀಜನ್ಯ ಬಹಿರ್ಮುಖೀ ಒತ್ತಡದಿಂದಾದ ಈ ಸಮತೋಲನವನ್ನು ಕ್ಲಾಸಿಕಲ್ ಫಿಸಿಕ್ಸ್ ಮೂಲಕ ಅರ್ಥ ಮಾಡಿಕೊಂಡೆವು ನೋಡು. ಉಷ್ಣಶಕ್ತಿ ಯಿಂದಾದ ಬಹಿರ್ಮುಖೀ ಒತ್ತಡವನ್ನು ಭೌತಶಾಸ್ತ್ರದಲ್ಲಿ ಬಾಯ್ಲ್ಸ್ ನಿಯಮದ ಮೂಲಕ ಲೆಕ್ಕಹಾಕಲು ಬರುತ್ತೆ.

ನಕ್ಷತ್ರ ನಾಲ್ಕು ಹೈಡ್ರೋಜನ್ ಪರಮಾಣುಗಳನ್ನು ಸಂಕಲಿಸಿ ಒಂದು ಹೀಲಿಯಂ ಪರಮಾಣು ತಯಾರು ಮಾಡುತ್ತಾ ಹೀಗೇ ಪ್ರತೀ ನಿಮಿಷದಲ್ಲಿ ಲಕ್ಷಾಂತರ ಪರಮಾಣುಗಳನ್ನು ಕಬಳಿಸುತ್ತಾ, ಬೆಳಕನ್ನು ಉಗುಳುತ್ತಲೇ ಇರುತ್ತೆ.

ಮಿಲಿಯಗಟ್ಟಲೆ ವರ್ಷಗಳ ನಂತರ ನಕ್ಷತ್ರ ಗೋಲದ ಕೇಂದ್ರದಲ್ಲಿ ಹೈಡ್ರೋಜನ್ ನ ಸಂಗ್ರಹ ಮುಗಿದು ಅದು ಹೀಲಿಯಂ ಮಯವಾಗುತ್ತೆ. ಈಗ ಏನಾಗಬಹುದು ಹೇಳು ಅನು..”

” ಮಾಮ, ಹೈಡ್ರೋಜನ್ ಪರಮಾಣುಗಳು ಮುಗಿದು ಹೋದರೆ ನ್ಯೂಕ್ಲಿಯರ್ ಫ್ಯೂಷನ್ ನಿಂತು ಹೋಗಬಹುದು ಅಲ್ವಾ?.. ಅದು ನಿಂತರೆ ಅದರಿಂದಾಗಿ ಉತ್ಪತ್ತಿಯಾಗುತ್ತಿದ್ದ ಚೈತನ್ಯ ಕೂಡಾ ನಿಲ್ಲಬಹುದು. ಆಗ ಈ ಬಲಾಬಲಗಳ ಕುಸ್ತಿಯಲ್ಲಿ ಬಹಿರ್ಮುಖೀ ಒತ್ತಡ ಕಡಿಮೆಯಾಗಿ ಗುರುತ್ವಾಕರ್ಷಣ ಶಕ್ತಿಯ ಮೇಲುಗೈ ಆಗಬಹುದು. ಅಲ್ವಾ ಮಾಮಾ”

” ಇದೇ ಮಜಾ ನೋಡು ಪುಟ್ಟು!. ಎರಡೂ ಬಲಗಳು ಸಮಾನವಾಗಿದ್ದಾಗ ಸಮತೋಲನ ಅನುಭವಿಸಿದ ನಕ್ಷತ್ರದ ಕೇಂದ್ರ ಈಗ ಆಕಾರದಲ್ಲಿ ಸಣ್ಣದಾಗತೊಡಗುತ್ತೆ. ಅದರೆ ನಕ್ಷತ್ರದ ಹೊರಕವಚ ಹೈಡ್ರೋಜನ್ ನಿಂದ ಶ್ರೀಮಂತ ವಾಗಿದ್ದು ಹೀಲಿಯಂನಿಂದ ತುಂಬಿರುವ ಒಳಕೇಂದ್ರದಿಂದ ಕಳಚಿ ವ್ಯಾಕೋಚನಗೊಂಡು ದೊಡ್ಡ ಹೊರಕವಚವಾಗುತ್ತೆ ಸಪೂರ ವ್ಯಕ್ತಿ ಧರಿಸಿದ ದೊಗಳೆ ಅಂಗಿಯಂತೆ. ಅದರ ಹೊರಪದರದ ಉಷ್ಣತೆ ಸಾಕಷ್ಟು ಕಡಿಮೆಯಾಗಿ ಅದು ಕೆಂಪು ಕೆಂಡದಂತೆ ಭಾಸವಾಗುತ್ತೆ. ಇದಕ್ಕೆ ರೆಡ್ ಜೈಂಟ್ ಅಥವಾ ಕೆಂಪು ದೈತ್ಯ ಅನ್ನುತ್ತಾರೆ.

ನಕ್ಷತ್ರ ದ ಕೇಂದ್ರದಲ್ಲಿ ಅತಿಸಾಂದ್ರವಾದ ಹೀಲಿಯಂ ಇದ್ದರೆ, ಅದರಿಂದ ಬೇರ್ಪಟ್ಟು ಸಾಕಷ್ಟು ಎಕ್ಸ್ಪಾಂಡ್ ಆದ ಹೊರಪದರದಲ್ಲಿ ಹೈಡ್ರೋಜನ್ ಇರುತ್ತೆ.”

“ಮಾಮಾ ಹಾಗಿದ್ರೆ ಉರುವಲು ಮುಗಿದ ನಕ್ಷತ್ರದ ಅಂತ್ಯ ಇದೇ ಅಂತಾಯ್ತು ಅಲ್ವಾ?”

ಗಡಿಬಿಡಿ ಮಾಡಬೇಡ ಪುಟ್ಟು! ಪ್ರಪಂಚದ ಪ್ರಕ್ರಿಯೆಗಳು ಕೊನೆಯಾಗುವುದುಂಟೇ?!

ನಿಂಗೆ ಗೊತ್ತಲ್ವಾ, ದ್ರವ್ಯರಾಶಿ ಹೆಚ್ಚಿದ್ದಷ್ಟು ಗುರುತ್ವಾಕರ್ಷಣ ಶಕ್ತಿಯೂ ಹೆಚ್ಚು ಅಂತ.
ನಕ್ಷತ್ರದ ದ್ರವ್ಯರಾಶಿ ಸಾಕಷ್ಟು ಇದ್ದಪಕ್ಷದಲ್ಲಿ, ಗುರುತ್ವಾಕರ್ಷಣ ಶಕ್ತಿಯಿಂದಾಗಿ
ನಕ್ಷತ್ರದ ಕೇಂದ್ರದಲ್ಲಿ ಒತ್ತಡ ಹೆಚ್ಚಿ, ಎರಡು ಹೀಲಿಯಂ ಪರಮಾಣುಗಳನ್ನು ಒಂದರೊಳಗೊಂದು ನುರಿಯವ ಕೆಲಸ ಮಾಡುತ್ತೆ. ಅದು ಹೀಲಿಯಂ ಪರಮಾಣುಗಳ ಫ್ಯೂಷನ್ ಮತ್ತು ಅದರಿಂದ ಕಾರ್ಬನ್ ಪರಮಾಣು ಉತ್ಪತ್ತಿಯಾಗುತ್ತೆ.

ಕೆಲವು ಮಿಲಿಯ ವರ್ಷಗಳ ನಂತರ ಹೀಲಿಯಂ ಉರುವಲು ಮುಗಿದು, ಪುನಃ ಗುರುತ್ವಾಕರ್ಷಣ ಬಲ ಮತ್ತು ಒತ್ತಡದ ಬಲಗಳು ಸಮಬಲದ ಜಟ್ಟಿಗಳಾಗಿ ಹೋರಾಡಿದಾಗ ನಕ್ಷತ್ರ ಹೊಸ ಸಮತೋಲನದ ‘ ಇರುವೆ’ ಆಗುತ್ತೆ!. ಇದನ್ನು ಹೀಲಿಯಂ ನಕ್ಷತ್ರ ಅನ್ನುತ್ರಾರೆ.
ಮುಂದೆ ಹೀಲಿಯಂ ಉರುವಲು ಮುಗಿದಾಗ ಮೇಲಿನಂತೆಯೇ ಅಸಮತೋಲನ ನಂತರ ಹೊಸ ಸಮತೋಲನ ಕಂಡುಕೊಂಡು ಕಾರ್ಬನ್ ನಕ್ಷತ್ರ ಆಗುತ್ತೆ.
ಹೀಗೆ ಹಲವು ಸಮತೋಲನ ಮತ್ತು ಅಸಮತೋಲನ ಅನುಭವಿಸುತ್ತಾ ನಕ್ಷತ್ರ ಹೈಡ್ರೋಜನ್, ಹೀಲಿಯಂ, ಕಾರ್ಬನ್, ಆಕ್ಸೀಜನ್, ಸಿಲಿಕಾನ್, ಮತ್ತು ಕೊನೆಗೆ ಐರನ್ ನಕ್ಷತ್ರಗಳಾಗಿ ಪ್ರತೀ ಅಸಮತೋಲನದಿಂದ, ಹೊಸ ಸಮತೋಲನ ಕಂಡುಕೊಳ್ಳುತ್ತಾ ಒಂದೊಂದೇ ಘಟ್ಟಗಳನ್ನು ದಾಟುತ್ತಾ ನಡೆಯುತ್ತೆ.

ಕಬ್ಬಿಣ ( ಐರನ್) ನಂತರ ನ್ಯೂಕ್ಲಿಯರ್ ಫ್ಯೂಷನ್ ನಡೆಯಲು ಪರಮಾಣು ಸಿದ್ಧವಿರಲ್ಲ. ಆ ಹಂತದಲ್ಲಿ ನಕ್ಷತ್ರದ ಕೇಂದ್ರದ ಅತಿಸಾಂದ್ರ ಕೋರ್ ಮತ್ತು ಹೊರ ಭಾಗದ ಹೈಡ್ರೋಜನ್ ಕವಚವನ್ನು ಕಿತ್ತೆಸೆದು ಸೂಪರ್ನೋವಾ ವಿಸ್ಪೋಟನೆಗೆ ಒಳಗಾಗುತ್ತೆ ಮತ್ತು ಆಗಸವನ್ನು ಬೆಳಗುತ್ತೆ. ಇದನ್ನು ಕನ್ನಡದ ವಿಜ್ಞಾನ ಲೇಖಕರಾದ ಜಿ ಟಿ ನಾರಾಯಣ್ ರಾವ್ ಅವರು ” ಕೋಟಿಸೂರ್ಯಸಮಪ್ರಭಾ” ವಿಸ್ಪೋಟನೆ ಅಂತ ಕರೆದಿದ್ದಾರೆ. ಈ ನಕ್ಷತ್ರ ದ ಕೇಂದ್ರದಲ್ಲಿ ಇರುವ ಅತಿಸಾಂದ್ರ ದ್ರವ್ಯವನ್ನು ವೈಟ್ ಡ್ವಾರ್ಫ್, ಅಥವಾ ಶ್ವೇತಕುಬ್ಜ, ಬಿಳೀಕುಳ್ಳ! ಎಂದು ಕರೆಯುತ್ತಾರೆ.”

Possible Death of Solar System Seen in White Dwarf Stars

” ಮಾಮಾ, ಹಾಗಿದ್ದರೆ, ಎಲ್ಲಾ ನಕ್ಷತ್ರ ಗಳೂ ಈ ಎಲ್ಲಾ ಘಟ್ಟಗಳನ್ನು ದಾಟುತ್ತವೆಯೇ?”

” ಒಳ್ಳೆಯ ಪ್ರಶ್ನೆ ಪುಟ್ಟೂ, ಪ್ರತೀ ಘಟ್ಟವೂ ನಕ್ಷತ್ರದ ಅಗ್ನಿಪರೀಕ್ಷೆಯೇ. ಹೈಡ್ರೋಜನ್ ಪರಮಾಣುಗಳನ್ನು ಫ್ಯೂಷನ್ ಮಾಡಲು ಸುಲಭವಾದರೆ ಹೀಲಿಯಂ ಫ್ಯೂಷನ್ ಕಷ್ಟ. ಕಾರ್ಬನ್ ನದ್ದು ಇನ್ನೂ ಕಷ್ಟ. ಹೀಗೆ ಪರಮಾಣುವಿನ ಗಾತ್ರ ದೊಡ್ಡದಾದಂತೆ ಅವುಗಳ ಫ್ಯೂಷನ್ ಮತ್ತಷ್ಟು ಕಷ್ಟವಾಗುತ್ತಲೇ ಹೋಗುತ್ತೆ. ನಕ್ಷತ್ರದ ಗುರುತ್ವಾಕರ್ಷಣ ಶಕ್ತಿಗೆ ಆ ಫ್ಯೂಷನ್ ಮಾಡುವಷ್ಟು ಸಾಮರ್ಥ್ಯ ಇದ್ದರೆ ಮಾತ್ರ ಅದು ಈ ಘಟ್ಟಗಳನ್ನು ದಾಟುತ್ತದೆ. ಮೊದಲೇ ಹೇಳಿದಂತೆ, ಹೆಚ್ಚು ಗುರುತ್ವಾಕರ್ಷಣ ಶಕ್ತಿ ಪಡೆಯಲು, ನಕ್ಷತ್ರದ ದ್ರವ್ಯರಾಶಿ ಹೆಚ್ಚಿರಬೇಕು”

“ಮಾಮಾ, ನಮ್ಮ ಕ್ಲಾಸ್ ನಲ್ಲಿ ಒಬ್ಬ ಹುಡುಗ ಇದ್ದಾನೆ, ಕುಳ್ಳಗೆ ಗುಂಡಾಗಿ, ಬಿಳಿಯಾಗಿ ಇದ್ದಾನೆ.
ಮೊನ್ನೆ ಹೇಳಿದ್ದೆ ಅಲ್ವಾ, ಚಂದ್ರಶೇಖರ್ ಇಂಟಲಿಜೆಂಟ್ ಹುಡುಗ,ಅಂತ. ಅವನು ಡಿಸ್ಕವರಿ ಚಾನಲ್ ನೋಡಿ ಬಂದು ಈ ಕುಳ್ಳ ಹುಡುಗನಿಗೆ ವೈಟ್ ಡ್ವಾರ್ಫ್ ಅಂತ ಕೀಟಲೆ ಮಾಡ್ತಿದ್ದ.
ಈಗ ಗೊತ್ತಾಯಿತು ನೋಡು ವೈಟ್ ಡ್ವಾರ್ಫ್ ಅಂದರೆ ಏನು ಅಂತ!.

” ವೈಟ್ ಡ್ವಾರ್ಫ್ ಬಗ್ಗೆ ಕೀಟಲೆ ಯಾಕೆ!. ಅದರ ಬಗ್ಗೆಯೇ ವಿಜ್ಞಾನಿ ಚಂದ್ರಶೇಖರ್ ಅವರ ಸಂಶೋಧನೆ ಇರುವುದು. ಸೂರ್ಯನ ಗಾತ್ರ ಭೂಮಿಯ ಗಾತ್ರದ 109 ಪಟ್ಟು ಇದೆ. ಸೂರ್ಯ ಶ್ವೇತ ಕುಬ್ಜನಾದರೆ ಅವನ ಗಾತ್ರ ಭೂಮಿಯ ಗಾತ್ರದಷ್ಟು ಕುಗ್ಗುತ್ತದೆ. ಸಾಂದ್ರತೆ ಪ್ರತೀ ಕ್ಯೂಬಿಕ್ ಸೆಂಟಿಮೀಟರ್ ಗೆ 1000 kg. ಅಂದರೆ ಒಂದು ಸ್ಪೂನ್ ವೈಟ್ ಡ್ವಾರ್ಫ್ ದ್ರವ್ಯದ ತೂಕ, ಒಂದುಸಾವಿರ ಲೀಟರ್ ನೀರಿನ ತೂಕದಷ್ಟು!.”

” ಅಬ್ಬಾ! ಮಾಮ, ಹಾಗಿದ್ರೆ ಆ ದ್ರವ್ಯದಿಂದ ಟೀ ಮಾಡಿದರೆ, ಟೀ ಕಪ್ ಅನ್ನು ಎತ್ತಿ ಟೀ ಕುಡಿಯಲು, ಕ್ರೇನ್ ತರಬೇಕಾದೀತು! ಅಲ್ವಾ ಮಾಮಾ!”

” ಹೇ ಪುಟ್ಟೂ, ಅಬ್ಬಾ ನಿನ್ನ ಯೋಚನೆಯೇ!. ಆ ಬಿಳೀ ಕುಳ್ಳನ ಒಳಗೆ ಇನ್ನೂ ಹಲವು ವಿಚಿತ್ರಗಳಿವೆ.
ಅದರೊಳಗೆ, ಪರಮಾಣುಗಳು ಪರಮಾಣುಗಳ ಸ್ಥಿತಿ ಯಲ್ಲಿ ಇರಲ್ಲ. ಪರಮಾಣುವಿನಲ್ಲಿ ನ್ಯೂಕ್ಲಿಯಸ್ ನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಇರುತ್ತೆ, ಸುತ್ತ ಸುತ್ತುವ ಹಲವು ಇಲೆಕ್ಟ್ರಾನ್ ಇರುತ್ತಲ್ವಾ. ಈ ವೈಟ್ ಡ್ವಾರ್ಫ್ ನಲ್ಲಿ, ಪರಮಾಣುವಿನ ನ್ಯೂಕ್ಲಿಯಸ್ ನ ಸುತ್ತ ಇದ್ದ ಇಲೆಕ್ಟ್ರಾನ್‌ಗಳು ನ್ಯೂಕ್ಲಿಯಸ್ ನ ಹಂಗು ತೊರೆದು ಫ್ರೀ ಆಗಿ ತಿರುಗುತ್ತವೆ. ಹಾಗಾಗಿ ಇದಕ್ಕೆ ಇಲೆಕ್ಟ್ರಾನ್ ನಕ್ಷತ್ರ ಅಂತಲೂ ಕರೆಯುತ್ತಾರೆ.

ಈ ಇಲೆಕ್ಟ್ರಾನ್‌ಗಳ ಸ್ವಭಾವ ಈ ರೀತಿಯ ಸಾಂದ್ರತೆಯಲ್ಲಿ ಹೇಗೆ ಇರುತ್ತೆ?. ವೈಟ್ ಡ್ವಾರ್ಫ್ ನಕ್ಷತ್ರದ ಮರಣಶಯ್ಯೆಯೇ?. ಆ ನಡಿಗೆಯ ಮುಂದಿನ ಹೆಜ್ಜೆಗಳು, ನ್ಯೂಟ್ರಾನ್ ನಕ್ಷತ್ರ ಮತ್ತು ಕಪ್ಪುರಂಧ್ರ ( ಕಪ್ಪು ನಕ್ಷತ್ರ, ಬ್ಲಾಕ್ ಹೋಲ್) ನತ್ತ. ಆದರೆ ಅದಕ್ಕೂ ಕೆಲವು ನಿಬಂಧನೆಗಳು ಇವೆಯಲ್ಲಾ.
ಇವುಗಳ ಬಗೆಗಿನ ಸಂಶೋಧನೆ ನಡೆಸಿದ್ದು ಚಂದ್ರಶೇಖರ್ ಅವರು.
ತುಂಬಾ ಮಾತಾಡಿದೆವಲ್ವಾ. ಉಳಿದ ವಿಷಯ ನಾಳೆ ಮಾತಾಡೋಣ. ಆಯ್ತಾ ಪುಟ್ಟೂ..”

ಆಯ್ತು ಮಾಮ!. ಈಗ ನಾನು ನಿಮಗೆ ನಾನೇ ಮಾಡಿದ ರವಾ ಲಡ್ಡು ಕೊಡುವೆ. ತಿನ್ನಿ!. ಅದನ್ನೂ ವೈಟ್ ಡ್ವಾರ್ಫ್ ಅಂತ ಕರೀಬೇಡಿ ಮತ್ತೆ!.. 🙂 “