ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮನುಕುಲದ ಸಂಜೀವಿನಿ ನಗು

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ನವರಸಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಹಾಸ್ಯ ಹಾಸ್ಯದ ಹೊನಲನ್ನು ಹರಿಸುವ ನಗು ಮನಸ್ಸಿನ ರೋಗಗಳಿಗೆ ಸಿದ್ಧೌಷಧ ಎಂದರೆ ತಪ್ಪಾಗದು.ನಗು ಮುಖದವರ ನವೋಲ್ಲಾಸವನ್ನು ಮತ್ತಷ್ಟು ಹೆಚ್ಚಿಸಲು ನಗುವೆಂಬ ನಗ ಬೇಕು. ಜಗತ್ತಿನಲ್ಲಿ ಸಂತೋಷಕ್ಕಿರುವ ಏಕೈಕ ಸಾರ್ವತ್ರಿಕ ಭಾಷೆಯೆಂದರೆ ನಗು. ಮಾತುಗಳು ಅರ್ಥವಾಗದೇ ಇದ್ದರೂ ಭಾಷೆ ಬಾರದೆ ಇದ್ದರೂ ನಗುವೊಂದು ಎಲ್ಲರನ್ನೂ ಏಕಕಾಲಕ್ಕೇ ಕಮ್ಯನಿಕೇಟ್ ಮಾಡಿ ಬಿಡುತ್ತದೆ. ಸವಿಯಾದ ಹಿತವಾದ ಅನುಭವವನ್ನು ವ್ಯಕ್ತಪಡಿಸುವ ಮುಖದ ಚಲನೆಗೆ ನಗು ಎನ್ನಬಹುದು. ನೈಸರ್ಗಿಕವಾಗಿ ಪ್ರತಿಯೊಬ್ಬರಲ್ಲಿಯೂ ಏರ್ಪಡುವ ಸಹಜ ಕ್ರಿಯೆ. “ನಗು” ಎಂಬ ಪದ ಕೇಳಿದ ಕೂಡಲೆ ಎಲ್ಲರ ಮುಖದಲ್ಲೂ ನಗೆಯೊಂದು ಸುಳಿದು ಮಾಯವಾಗುತ್ತದೆ.

ನಗುವುದು ಒಂದು ಸಾಂಕ್ರಾಮಿಕ ಎನ್ನಬಹುದು. ಸಿಹಿ ಸತ್ಯ ಇದು! ಹೌದು! ನಗು ಆರೋಗ್ಯವನ್ನು ಹೆಚ್ಚಿಸುವ ಸಾಂಕ್ರಾಮಿಕವಾಗಿದೆ. ನಾವು ನಗುವ ವ್ಯಕ್ತಿಯನ್ನು ನೋಡಿದಾಗ ಅವರ ಮುಖ ಭಾವವನ್ನು ಅರ್ಥೈಸಿಕೊಳ್ಳಲು ನಮ್ಮ ಮೆದುಳು ನಗುವನ್ನು ಮರು ಸೃಷ್ಠಿ ಮಾಡುತ್ತದೆ. . ಆಗ ನಮ್ಮಲ್ಲೂ ಒಂದು ನಗು ಸುಳಿಯುತ್ತದೆ. ಹೀಗೆ ನಗು ಎಲ್ಲರಲ್ಲೂ ಮೂಡುತ್ತದೆ ಹಾಗಾಗಿ ಇದೊಂದು ಸಾಂಕ್ರಾಮಿಕ ರೋಗ. ನಗು ಸದಾ ಚೈತನ್ಯವಾಗಿರುವಂಥದ್ದು ಇದಕ್ಕೆ ತಯಾರಿ ಬೇಕಿಲ್ಲ! ಬೇರೆಯವರ ನಗು ಕೇಳುತ್ತಿದ್ದರೆ ನಗು ಬರುತ್ತದೆ. ಮನುಷ್ಯ ಹುಟ್ಟುವಾಗಲೆ ನಗುವುದನ್ನು ಕಲಿತಿರುತ್ತಾನೆ . ಮಗು ಸುತ್ತ ಮುತ್ತಲಿನ ಪರಿಸರವನ್ನು ಮತ್ತು ಧ್ವನಿಯನ್ನು ಕೇಳಿ ಅದನ್ನು ಅನುಸರಿಸಲು ಪ್ರಯತ್ನಿಸುತ್ತದೆ. ನಗು ನಮ್ಮನ್ನು ಸುಂದರ ಮತ್ತು ಆರ್ಷಕರನ್ನಾಗಿ ಮಾಡುತ್ತದೆ. ಹಾಗೆ ವಯಸ್ಸನ್ನು ಸಹಜವಾಗಿ ಮರೆಮಾಚುವ ಶಕ್ತಿ ನಗುವಿಗಿರುತ್ತದೆ. 70% ನಗು ಮುಖದವರು ಸಿಂಗಾರ ಮಾಡಿಕೊಂಡವರಿಗಿಂತ ಚೆಂದವಾಗಿ ಕಾಣುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.

ಇದು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಹೆಣ್ಣು ಗಂಡಿಗಿಂತ ಹೆಚ್ಚು ಭಾವನಾತ್ಮಕವಾಗಿರುವ ಕಾರಣದಿಂದ ಹೆಚ್ಚು ನಗುತ್ತಾಳೆ.

ವೈಜ್ಞಾನಿಕ ಅಧ್ಯಯನದ ಪ್ರಕಾರ ಮನುಷ್ಯರು ನಗುವನ್ನು 300 ಅಡಿ ದೂರದಿಂದಲೇ ಗುರುತಿಸಬಲ್ಲರು. ಇದು ಮಿತ್ರರು ಹಾಗು ಶತ್ರುಗಳನ್ನು ಕಂಡು ಹಿಡಿಯಲು ಇರುವ ವರದಾನವೆಂದೇ ಕರೆಯಬಹುದು. ಧನ್ಯವಾದ, ಅಸಹಾಯಕತೆ, ವ್ಯಂಗ್ಯ, ತಾತ್ಸಾರ, ತಿರಸ್ಕಾರ, ಹತಾಶೆ ಹೇಳಲೂ ನಗು ಬೇಕು. ಹತ್ತು ಮಾತುಗಳ ಧ್ವನಿಯನ್ನು ಒಂದೇ ನಗುವಿನಲ್ಲಿ ಕ್ಷಣಾರ್ಧದಲ್ಲಿ ಹೇಳಿಬಿಡಬಹುದು. ನಗು ಒಂದು ಸಾರ್ವತ್ರಿಕ ಭಾಷೆ. ಧ್ವನಿಮೂಲದ ಭಾಷೆ. ಜಾತಿ, ಮತ, ನೆಲ-ಜಲ ವರ್ಣಭೇದಗಳಲ್ಲು ಇದು ಸಾರ್ವತ್ರಿಕವಾಗಿ ಉಳಿದಿದೆ.

ಒತ್ತಡದ ಕೆಲಸದಲ್ಲೂ ಹೆಚ್ಚಾಗಿ ನಗುವವರು ಪ್ರಾಮಾಣಿಕರು , ಆತ್ಮ ವಿಶ್ವಾಸಿಗಳು ಹಾಗು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಆದರೆ ನಾಟಕೀಯ ನಗು ನಗುವವರು ಹೆಚ್ಚಿನ ಸಮಯ ತನ್ನ ಪ್ರಭಾವ ಉಳಿಸಿಕೊಳ್ಳಲಾರದು. ಒಂದು ದಿನ ನಕ್ಕು ಸುಮ್ಮನಾಗುವುದಲ್ಲ ಪ್ರತಿ ದಿನ ನಗುವವರು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಹಾಗಾಗಿ ಒಂದು ನಗು ಹದಿನೈದು ಹೆಜ್ಜೆಯ ನಡಿಗೆಗೆ ಸಮ ಎನ್ನುತ್ತಾರೆ.

ಮಾತು ನಗುವಿಗೆ ಪ್ರಮುಖ ಕಾರಣ ಕಾಲ ಬದಲಾದಂತೆ ನಾವು ನಾವೆಲ್ಲರೂ ಮೌನಿಗಳಾಗುತ್ತಿದ್ದೇವೆ, ಕೆಲಸದ ಒತ್ತಡವನ್ನು ಹೊತ್ತು ವೇಗದ ಜಗದಲ್ಲಿ ನಾವೆಲ್ಲಿ ಹಿಂದೆ ಬೀಳುತ್ತೇವೆಂದು ಓಡುತ್ತಲೇ ಸೋತು ಹೋಗುತ್ತಿದ್ದೇವೆ. ಅದಕ್ಕೆ ಅವಕಾಶ ನೀಡದೆ ಜೀವನ ನಮಗೆ ಕೊಡುವ ಎಲ್ಲ ಸಂತೋಷಗಳನ್ನು ಮುಕ್ತವಾಗಿ ಅನುಭವಿಸಿ,ಆನಂದಿಸಿ ಗೆಲ್ಲಬೇಕು, ಪರಸ್ಪರ ಸಂಬಂಧಗಳನ್ನು ವೃದ್ಧಿಸಿಕೊಳ್ಳಬೇಕು.

ನಗೆಯು ಬರುತ್ತಿದೆ ಎನಗೆ
ನಗೆಯು ಬರುತ್ತದೆ.
ಜಗದೊಳಿರುವ ಮನುಜರೆಲ್ಲ
ಹಗರಣ ಮಾಡುವುದ ಕಂಡು
ಪರ ವನಿತೆಯೊಮೆಗೊಲಿದು
ಹರುಷದಿಮದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಸುತಿಹೆ ಕಂಡು
ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷಯಪುಂಜನಾಗಿ
ಸ್ವಾಮಿ ಪುರಂದರ ವಿಟ್ಠಲನ
ನಾಮ ನೆನೆಯುವರ ಕಂಡು

ಕುಹಕ ನಗೆ ಯಾವ ಕಾಲಕ್ಕೂ ಇರಬಾರದು. ಮುದ್ದು ನಗು, ಮುಗ್ಧ ನಗು ಬೇಕು. ನಾಭಿಯಿಂದ ನಗು ಬರಬೇಕು ಅಂದರೆ ಮನಸ್ಸಿನ. ಆಂತರ್ಯದಿಂದ ಬರಬೇಕು ಎನ್ನುವುದಿದೆ. ಆದರೆ ನಗು ಅಕಾರಣವಾಗಿರಬಾರದು. ಅಳು ಸಕಾರಣವಾಗಿರಬೇಕು. ನಗೆಯ ಪ್ರಭೇದಗಳ ಕಡೆ ಸ್ವಲ್ಪ ಗಮನಹರಿಸಿದರೆ. ನಸುನಗೆಯು ಬಾಯಿಯ ಎರಡೂ ಬದಿಯ ಹತ್ತಿರದ ಸ್ನಾಯುಗಳನ್ನು ಬಾಗಿಸಿ ರೂಪುಗೊಂಡ ಮುಖಭಾವ. ನಸುನಗೆ ಕಣ್ಣುಗಳ ಮೂಲೆಯಲ್ಲಿರುವ ಸ್ನಾಯುಗಳ ಸಂಕೋಚನವನ್ನು ಒಳಗೊಂಡಿರುತ್ತದೆ. ಹುಸಿನಗು, ಮುಸಿನಗು ಕಿರುನಗೆ ಹೂನಗೆ,ಮಂದಹಾಸ, ಮುಗ್ಧನಗೆ , ಪರಿಹಾಸ, ನಿಷ್ಕಳಂಕ ನಗೆ,ಬಿರುನಗು,ಅಬ್ಬರದ ನಗು, ಸಂಕೋಚ, ರಸಿಕನಗೆ, ವಿರಹಾಸ, ಒಲವಿನಾಸ ಮುಂತಾದ ನಗೆಗಳ ವಿಧಗಳನ್ನು ಇಲ್ಲಿ ಉಲ್ಲೇಖಿಸಬಹುದು. ಯಾವ ಜಾತಿಯ ನಗುವೇ ಆಗಿರಬಹುದು ಆದರೆ ಇತರರಿಗೆ ಕಿರಿಕಿರಿಯಾಗಿರಬಾರದು . ಮರೆಯಲ್ಲಿ ನಿಂತುಕೊಂಡು ವ್ಯಂಗ್ಯಗಳನ್ನಾಡಿಕೊಂಡು ಅನ್ಯರನ್ನು ತೇಜೋವಧೆಗೆ ದೂಡಬಾರದು. ಇದನ್ನು ಪೈಶಾಚ್ಯ ನಗುವೆನ್ನಬಹುದೇನೋ? ನಮ್ಮ ನಗುವೇನಿದ್ದರೂ ಮುದುಡಿದ ಮನಸ್ಸುಗಳನ್ನು ಅರಳಿಸುವಂತಿರಬೇಕು. ಘಾಸಿಗೊಳಿಸುವಂತಿರಬಾರದು, ಗೊಂದಲಸೃಷ್ಟಿಸಿ ಇಲ್ಲವೆ ಮಜಾ ತೆಗೆದುಕೊಳ್ಳುವಂತಿರಬಾರದು . ಕೆಲವೊಮ್ಮೆ ಅಕಾರಣ ನಗು ಅವರ ಮಾನಸಿಕ ದೌರ್ಬಲ್ಯವನ್ನು ಸಾಬೀತುಮಾಡುತ್ತದೆ.

ಹಾಗಂತ ಎಲ್ಲಾ ಕಾಲಕ್ಕೂ ನಗು ಸಾರ್ವತ್ರಿಕವಲ್ಲ. ಮಕ್ಕಳ ತಪ್ಪುಗಳನ್ನು ತಿದ್ದುವಾಗ ಈ ನಗುವಿದ್ದರೇ ಹೇಗೆ? ತಪ್ಪುಗಳ ತೀವ್ರತೆ ಮಕ್ಕಳಿಗೆ ಅರ್ಥವಾಗುವುದಾದರೂ ಹೇಗೆ? ಅಂಥ ಸಂದರ್ಭಗಳಲ್ಲಿ ಸಿಡುಕೂ ಇರಬೇಕು. ಇನ್ನು ಯಾವಾಗಲೂ ನಗುವವರು ಸರಿ ಎನ್ನುವುದು ಭ್ರಮೆ. ನಗು ನಗುತ್ತಲೇ ಅರ್ಧ ಊರು ಹಾಳುಮಾಡುವ ದುಷ್ಟಗುಣವಿರುತ್ತದೆ. ಅಂಥವರಲ್ಲಿ ಅಟ್ಟಹಾಸ ಪ್ರವೃತ್ತಿಯೂ ಹೆಚ್ಚು. ನಗುವವರೆಲ್ಲ ಒಳ್ಳೆಯವರೆಂಬ ಪೂರ್ವಾಗ್ರಹ ಪೀಡಿತತನವೂ ತಪ್ಪು. ಅಂಥ ಕೆಟ್ಟ ನಗುವಿನಿಂದಲೇ ಶಕುನಿ ದುರ್ಯೋಧನನಿಗೆ ದುರ್ಭೋದೆ ಮಾಡಿದ್ದು. ಇನ್ನು ಕೆಲವರು ತಮ್ಮ ಕೆಟ್ಟ ನಗುವಿನಿಂದಲೇ ಎದುರಿಗಿರುವವರ ಮನೋಬಲವನ್ನು ತಗ್ಗಿಸಿಬಿಡುತ್ತಾರೆ. ಇನ್ನು ಕೆಲವರು ಆ ಸಮಾಧಾನದ ನಗುವಿನಿಂದಲೇ ಎದುಗಿದ್ದವರ ಮನೋಸ್ಥೈರ್ಯ ಹೆಚ್ಚಿಸುತ್ತಾರೆ. ನಾಟಕೀಯ ನಗು ಅನ್ಯಾರ್ಥಗಳಿಗೆ ಹಾದಿ ಮಾಡಿಕೊಡುತ್ತದೆ. ನಗು ಸಹಜವಾಗಿ ಬರಬೇಕು.ಎಂಥ ಕಠಿಣ ಸಿಟ್ಟನ್ನು ಮುರಿಯುವ ಶಕ್ತಿ ಇದಕ್ಕಿದೆ..ಹ್ಯಾಪ್ ಮೋರೆ, ಹರಳೆಣ್ಣೆ ಕುಡಿದವರಂತೆ ಇದ್ದರೂ ಅವರ ವೃತವನ್ನು ಕ್ಷಣಾರ್ಧದಲ್ಲಿ ಈ ನಗು ಮುರಿಯುತ್ತದೆ. ನೊಂದ ಮನಸ್ಸುಗಳಿಗೂ ಸಾಂತ್ವನ ಹೇಳುವುದು ಈ ನಗುವೇ. ನಗುತಾ ನಗುತಾ ಬಾಳೋಣ ಹೃದಯದ ಮಾಧುರ್ಯದ ಸಂಕೇತ ದ್ವೇಷ ಅಸೂಯೆಗಳನ್ನು ಹಿಂದಿಕ್ಕುವ ಶಕ್ತಿ ಇದಕ್ಕಿದೆ. ವ್ಯಂಗ್ಯದಿಂದ ಅಣಕ ಮಾಡಿಕೊಂಡು ನಗುವ ಹಾಗಿಲ್ಲ ನಮ್ಮ ನಗುವಿನಿಂದ ಇತರರಿಗೆ ಸಂತೋಷವಾಗಬೇಕು.

ಸಂಘಜೀವಿಯಾದ ಮಾನವನಿಗೆ ನಗು ಜೇಬಿನಲ್ಲಿರುವ ನಗ (ಹಣ)ವಿದ್ದಂತೆ. ದಿನನಿತ್ಯದ ಬದುಕಿನ ವ್ಯಾಪಾರದಲ್ಲಿ ನಗು ಅವಿಭಾಜ್ಯ ಅಂಗ. ಸಂತೋಷವೆಂಬ ನಗಬೇಕು ಅಂದರೆ ನಗಲೇಬೇಕು.

ನಗುವುದುಸಹಜ ಧರ್ಮ, ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯದ ಧರ್ಮ ನಗುವನಗಿಸಿ ನಗುತಬಾಳುವ ವರವ

ಎಂಬ ಡಿವಿಜಿಯವರ ಮಾತುಗಳು ನಮ್ಮ ನಡುವೆ ಸಾರ್ವಕಾಲಿಕವಾಗಿರಬೇಕಾದರೆ ನಗುವ ಕುರಿತು ಇನ್ನು ಏನು ಹೇಳುವುದಿದೆ.