ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಬ್ರಾಯ ಚೊಕ್ಕಾಡಿ
ಇತ್ತೀಚಿನ ಬರಹಗಳು: ಸುಬ್ರಾಯ ಚೊಕ್ಕಾಡಿ (ಎಲ್ಲವನ್ನು ಓದಿ)

ಎಷ್ಟೊಂದು ವಿಶಾಲವಾಗಿದೆ ಆ ಮರ!
ಸಮೃದ್ಧವಾಗಿದೆ ಹೂ, ಹಣ್ಣುಗಳಿಂದ
ತುಂಬಿದೆ ಚಿಲಿಪಿಲಿಗಳ ಹಕ್ಕಿಗಳಿಂದ
ಗುಟುಕು ಕೊಡುತ್ತಿವೆ ಅಲ್ಲಿ
ಮರಿಗಳಿಗೆ ತಮ್ಮದೇ ಗೂಡುಗಳಲ್ಲಿ.
ಇಡೀ ಭೂಮಿಗೆ ನೆರಳು ನೀಡುವ ಹಾಗೆ
ಬಿಚ್ಚಿದೆ ತನ್ನ ರೆಂಬೆ ಕೊಂಬೆಗಳ ಛತ್ರಿ.ಅಡಿಯಲ್ಲಿ
ವಿಶ್ರಮಿಸುವಂತಿದೆ ಆರಾಮಾಗಿ
ನಡೆದು ಸುಸ್ತಾದ ಪಾಂಥ.

ದೂರ ಅಸ್ತಮಿಸುತ್ತಿರುವ ಸೂರ್ಯ
ಚೆಲ್ಲಿದ ಬೆಳಕು
ಪ್ರತಿಫಲಿಸುತ್ತಿದೆ
ಹಲವು ವರ್ಣಗಳಾಗಿ.
ಅದೊ ,ಅದೋ,ನೀರ ಹೊತ್ತ ನೀರೆಯರ
ಕುಶಲ ಸಂಭಾಷಣೆಯೂ ಅಲ್ಲೇ,ಆಯಾಸ ಪರಿಹಾರಕ್ಕೆ
ಆ ಮರದ ನೆರಳಲ್ಲೇ.

ಈ ನಡುವೆ ಮರಕುಟಿಕವೊಂದು
ಕುಟುಕುತ್ತಿದೆ ಮರವ.ಆದರೂ
ಸುಮ್ಮನೇ ನಿಂತಿದೆ ಮರ
ಅಪಾರ ಸಹನೆಯಲ್ಲಿ.

–ಎಲ್ಲ,ಎಲ್ಲ
ಆ ಮರದ ಚಿತ್ರದಲ್ಲಿ!
ಅರರೇ,
ನಿಜದ ಮರವೆಲ್ಲಿ?