ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಮನುಷ್ಯ ಮೂಲತಃ ಸಂವೇದನಾಶೀಲ ಜೀವಿ. ಮೂಲ ಅವಶ್ಯಕತೆಗಳನ್ನು ಪೂರೈಸಿದ ಬಳಿಕ ಆತ ತನ್ನ ಬೌದ್ಧಿಕ ಆಯಾಮಗಳನ್ನು ಹಾಗೂ ಅವುಗಳ ಪರಿಧಿಗಳನ್ನು ಕಾಲ ಕಾಲಕ್ಕೆ ವಿಸ್ತರಿಸುತ್ತಲೇ ಬಂದಿದ್ದಾನೆ, ಸಾಹಿತ್ಯ, ಕಲೆ, ಸಂಗೀತಗಳು ಆಯಾ ಕಾಲದ ಸ್ಪಂದನೆಗನುಗುಣವಾಗಿ ಅವನ ಆಲೋಚನಾ ಲಹರಿಯನ್ನು ವ್ಯಕ್ತ ಪಡಿಸುವ, ಸಂವಹಿಸುವ ಮಾಧ್ಯಮವಾಗಿ ಶಕ್ತವಾಗಿ ಬಳಸಿಕೊಂಡಿದ್ದಾನೆ.
ಇತಿಹಾಸವನ್ನು ನೋಡುವುದಾದರೆ , ಎಲ್ಲೆಲ್ಲ್ಲಿ ಸಾಮಾಜಿಕ, ಭೌಗೊಳಿಕ, ರಾಜಕೀಯ ಸ್ತಿಥ್ಯಂತರ ಗಳಾಗಿವೆಯೋ ಅಲ್ಲಲ್ಲಿ,ಸಾಂಸ್ಕೃತಿಕ,ಜನಾಂಗೀಯ ವೈವಿಧ್ಯತೆ ಯ ಮೂಸೆಗಳಲ್ಲಿ… ಹುಟ್ಟಿ ಬಂದ ಭಾವತೀವ್ರತೆಗಳು ಬರಹಗಾರನ,ಕಲಾವಿದನ ಕೃತಿ ಹಾಗೂ ಪ್ರಸ್ತುತಿಗಳನ್ನು ಹೆಚ್ಚೆಚ್ಚು ಅಂದಗಾಣಿಸಿವೆ. ಅಲ್ಲಿ ಚಿಂತನೆಗಳನ್ನು ನಿಖರ, ಪ್ರಖರಗೊಳಿಸಿ ಗಾಯಗೊಂಡ ನಾಗರಿಕತೆಗಳಿಗೆ ತಂಪನ್ನೀಯುವ ಮುಲಾಮಿನಂತೆ ಕೆಲಸ ಮಾಡಿವೆ.
ಈ ಕಾಲದ , ಹೀಗೆ ಬಹು ಮುಖ ಆಯಾಮಗಳನ್ನು ಬದುಕಿನಲ್ಲಿ ಪ್ರವಹಿಸುವ, ಆ ಮೂಲಕ ಜೀವನ ದರ್ಶನ ಉಂಟು ಮಾಡುವ ಭಾರತದ ಅನೇಕ ಊರು,ಕೇರಿ, ನಗರಗಳಲ್ಲೆಲ್ಲ ಎತ್ತರದ ಸ್ಥಾನದಲ್ಲಿರುವ ನಗರಿ ಮುಂಬಯಿ. ನನಗೆ ಸ್ವತಃ ಮುಂಬಯಿಯ ವಹಿವಾಟು ಇಲ್ಲದಿದ್ದರೂ, ಆ ಊರಿನ ಬಗ್ಗೆ ತುಂಬಾ ಕೇಳಿದ್ದೇನೆ, ಓದಿದ್ದೇನೆ. ಅಲ್ಲಿ ಏನುಂಟು ಏನಿಲ್ಲ ..

ಕಡಲು,ತೆಂಗು,ಹಡಗು, ಮೀನು, ಮಳೆ, ಸೆಕೆ, ತಂಪು ಮಳೆ,ಧಾರಾಳವಾಗಿ ಹತ್ತಿಸಿ ಕೊಳ್ಳುವ ಲೋಕಲ್ ಟ್ರೈನ್ಸ್….. ಚಿತ್ತಾಲರು, ಕೈಕಿಣಿ…ಗಣಪತಿ ಬೊಪ್ಪನ ತಿದ್ದಿ ತೀಡಿದ ಕಣ್ಣುಗಳು, ಅರ್ಧ ಹರಿದ ಬಾಲಿವುಡ್ ಪೋಸ್ಟರ್ ಗಳು..,ರಸ್ತೆ ಬದಿಯ ರಿಲೈನ್ಸ್ ನ ಹೊಸ ಜಾಹಿರಾತುಗಳು , … ಇರುವೆಗಳಂಥ ಚಲಿಸುವ, ಚುರುಕಿನ ಮನುಷ್ಯರು, ಹುರುಪಿನ ಮಹಿಳೆಯರು, ಬಾಯಿ ತುಂಬ ವಡಾ ಪಾವ್ ತಿನ್ನುವ ಯುವಕರು, ಪಾನಿ ಪುರಿ ಬಾಯಲ್ಲಿಡುವ ಜೀನ್ಸ್ ತೊಟ್ಟ ಹುಡುಗಿಯರು,ಹಿಂದಿ ಹಾಡಿನ ಡ್ಯಾನ್ಸ್ ಕಲಿತ ಮಕ್ಕಳು, ಡೋಕ್ಲಾ ಪ್ರಿಯ ಗುಜ್ಜು ಭಾಯಿ,ಥ್ಯಾಂಕ್ಸ್ ಕೇಳದೆ ಸಹಾಯಕ್ಕೆ ಬಂದ ಅಪರಿಚಿತ ಕೈಗಳು..ಚಿಕ್ಕ ಮನೆ, ವಿಸ್ತಾರದ ಬದುಕು… ಕಪ್ಪು ಕನ್ನಡಕದ ನಿವೃತ್ತರು, ಮಾರ್ಕೆಟಿಂಗ್ ನಲ್ಲಿ ಫಂಟರು… …., ಆಗಾಗ್ಗೆ ಊರಿಂದ ಬರುವ ನೆಂಟರು… ಖಾಲಿ ಪೀಲಿ ಖಂಡಿತ ಅಲ್ಲದ ಕಾಲೀ ಪೀಲೀ ಟ್ಯಾಕ್ಸಿಗಳು, ಸಾಜನ್ ಚಿತ್ರದ ಹಾಡಿನ ಥರದ ಅಸ್ಪಷ್ಟ ಗುನುಗುಗಳು, ….
, ಮರಾಠಿ ಸದ್ದುಗಳ ಮಧ್ಯೆ ಭಾರತದ ಯಾವುದೋ ದಕ್ಷಿಣದ ಭಾಷೆಯ ಫೋನ್ ಸಲ್ಲಾಪಗಳು.. ಒಂದು ಬ್ಯಾಗ್ ಹಿಡಿದು ಸಿ. ಎಸ.ಟಿ . ಸ್ಟೇಷನ್ ನಲ್ಲಿ ಬಂದಿಳಿದು ಅಡ್ರೆಸ್ ಹುಡುಕುವ ಕನಸು ಇನ್ನೂ ಹಸಿಯಾಗಿರುವ ಕಣ್ಣುಗಳು… ಅಷ್ಟಲ್ಲದೇ ರಾತ್ರಿ ಕಣ್ಣು ಕುಕ್ಕುವ ಇಂದ್ರಲೋಕ …!

ಮುಂಬೈ ಭಾರತದ ಪಾಲಿಗೆ ಒಂದು melting pot. ಅಲ್ಲಿರುವ ಕನ್ನಡಿಗರು ಮುಂಬೈ ಜೀವನವನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಕನ್ನಡದ ಮಾತೃಭಾಷೆಯಲ್ಲಿ ಅಂತಃಕರಣವನ್ನು ಬಿಚ್ಚಿಡುವ ಯಾವ ಸದಾವಕಾಶವನ್ನೂ ಅವರು ವ್ಯರ್ಥ ಮಾಡಿಕೊಂಡಿಲ್ಲ. ಹೊರ ನಾಡಿನಲ್ಲೊಂದು ಒಳನಾಡನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು ಹಾಗೆ.

ಮುಂಬಯಿ ಕನ್ನಡಿಗರೂ ಅಲ್ಲಿ ಮನುಷ್ಯರಲ್ಲಿ ಮನುಷ್ಯರಾಗಿ ಬೆರೆಯುವ, ವೈವಿಧ್ಯತೆಗಳನ್ನು ಸಂಭ್ರಮಿಸುವ, ಪ್ರಸ್ತುತವಾಗಿ ಬದುಕುವ ಕಾಯಕ ಯೋಗಿಗಳಾಗಿ ಕಾಣುತ್ತಾರೆ.
ಪ್ರತಿಯೊಂದು ಅದ್ಭುತ, ಸೃಜನಾತ್ಮಕ ಕಲೆ ಮತ್ತು ಕೃತಿಗಳ ಹಿಂದೆ ಬದುಕಿನ ಎಲ್ಲ ರೀತಿಯ ಸ್ತರಗಳನ್ನು,ಸಹನೆ-ಅಸಹನೆಗಳನ್ನು, ಎಕ್ಸ್ತ್ರೆಮಿಟಿಗಳನ್ನು ಅನುಭವಿಸಿದ, ಮೀರಿದ ಮನೋಭಾವ ಕೆಲಸ ಮಾಡುತ್ತದೆ.. ಹಾಗಾಗಿಯೇ ಏನೋ ,ಮುಂಬಯಿಯ ಕಥೆಗಾರರಲ್ಲಿ ,ಲೇಖಕರಲ್ಲಿ ಅವರ ಬರಹಗಳ ಕ್ಯಾನವಾಸ್ (ವ್ಯಾಪ್ತಿ) ಸಾಕಷ್ಟು ಹಿಗ್ಗಿರುತ್ತದೆ.

ಮುಂಬಯಿ ನಸುಕು – ಮಹಾ ಸಂಚಿಕೆ

ಇಂತಹ ವಿಶಿಷ್ಟ ಮುಂಬಯಿಗೆ, ಮುಂಬಯಿಯ ಕನ್ನಡದ ಬರಹಗಾರರಿಗೆ ಅಂತಲೇ ಒಂದು ಚಿಕ್ಕ ಸಂಚಿಕೆ ಮಾಡುವ ಉದ್ದೇಶದಿಂದ ಕೆಲವು ತಿಂಗಳುಗಳ ಹಿಂದೆ ಡಾ. ಉಪಾಧ್ಯ ರ ಜೊತೆಗೆ ಮಾತನಾಡಿ ಈ ವಿಶೇಷ ಸಂಚಿಕೆಗೆ ಗೌರವ ಸಂಪಾದಕರಾಗಲು ಕೋರಿಕೊಂಡಿದ್ದೆವು. ಕೆಲವೇ ದಿನಗಳಲ್ಲಿ, ಮುಂಬಯಿಯ ಮಳೆಯಂತೆ ಧಾರಾಕಾರವಾಗಿ ಬರಹಗಳು ಹರಿದು ಬಂದವು. ಹದಿನೈದು ಇಪ್ಪತ್ತು ಅಂತಿದ್ರೆ ಬರೋಬ್ಬರಿ ಎಂಬತ್ತೈದು… ಒಂದಕ್ಕಿಂತ ಒಂದು ಚೆಂದ. ಉಪಾಧ್ಯರು ಸ್ವತಃ ಮಾತನಾಡಿ ಆಯಾ ವಿಷಯಗಳ ಬಗ್ಗೆ ಲೇಖನ ತರಿಸಿಕೊಂಡರು. ನೋಡು ನೋಡುತ್ತಿದ್ದಂತೆ ಸಂಚಿಕೆಯ ಹಿಂದೆ ಮಹಾ ಸೇರಿಕೊಂಡಿತು. ಒಂದರ ಬದಲಾಗಿ ನಾಲ್ಕೈದು ಸಂಪುಟಗಳಾಗಿ ಮಾಡಬೇಕಾಯ್ತು. ಇದರ ಮೊದಲ ಎಸಳು; ಭಾರತದ ಹೆಬ್ಬಾಗಿಲು , ಹದಿನಾರು ಲೇಖನಗಳನ್ನು ಒಳಗೊಂಡಿದ್ದು ಜುಲೈ ೩೧ ಕ್ಕೆ ಬಿಡುಗಡೆಯಾಗಿದೆ. ಓದುಗ ಪ್ರಿಯರ ಮನ ತಣಿಸಲು ಆಸಕ್ತಿಕರ ಲೇಖನಗಳ ಇನ್ನೂ ನಾಲ್ಕು ಸಂಪುಟಗಳು ಬರಲಿವೆ. ಕಾದು ನೋಡಿ.

ಡಾ. ಜಿ. ಎನ್ . ಉಪಾಧ್ಯ

ಮುಂಬಯಿಯ ಕನ್ನಡದ ಬೌದ್ಧಿಕ, ಸಾಹಿತ್ಯಿಕ ವಲಯಗಳು ನಿಂತ ನೀರಾಗಿಸದೆ ಸದಾ ಅಲೆಯೆಬ್ಬಿಸುವ ಕಾರ್ಯವನ್ನು ಅನೇಕ ಮಹನೀಯರು ಹಿಂದೆ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಹೀಗೊಂದು ಚೈತನ್ಯದ ಕೇಂದ್ರ ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ. ಪ್ರಸ್ತುತ ಇದರ ನೇತೃತ್ವ ವಹಿಸಿದವರು ಡಾ. ಜಿ. ಎನ್ . ಉಪಾಧ್ಯ ಅವರು. ನಾನು ಹಿಂದೆ ಕೇಳಿದಂತೆ, ಸ್ವತಃ ಕಂಡು ಕೊಂಡಂತೆ ಉಪಾಧ್ಯ ಅವರದು ಸ್ಪೂರ್ತಿಯುತ , ಅತ್ಯಂತ ಕ್ರಿಯಾ ಶೀಲ ವ್ಯಕ್ತಿತ್ವ. ವಿಶ್ವ ವಿದ್ಯಾಲಯದ ನೇರ ಕೆಲಸಗಳ ಜೊತೆಗೆ ನಾಡು, ನುಡಿಯ ಪರವಾಗಿ ಕೆಲಸ ಮಾಡುತ್ತಿರುವ ಮೇರು ವ್ಯಕ್ತಿ, ಕಾಯಕ ಯೋಗಿ. ಕನ್ನಡದ ನುಡಿ,ನಾಡಿಗೆ ಸಂಭಂದಿಸಿದಂತೆ ಪುಸ್ತಕಗಳ ಪ್ರಕಟಣೆ, ಚಿಂತನ ಶಿಬಿರಗಳು, ವಿಶ್ವ ವಿದ್ಯಾಲಯದ ಯೋಜನೆಗಳು, ತಂತ್ರಜ್ನಾನ ಬಳಕೆ ಅಲ್ಲದೆ, ಉದಯೋನ್ಮುಖ ಬರಹಗಾರರ ,ಸಂಶೋಧಕರ, ಅಭ್ಯಾಸಿಗಳ ಬೆಳವಣಿಗೆಗೆ, ಪ್ರೋತ್ಸಾಹಕ್ಕೆ ಅವರು ಪ್ರತಿ ನಿತ್ಯ ದಣಿವರಿಯದೇ ಕೆಲಸ ಮಾಡುತ್ತಿರುವುದು ಅತೀ ಪ್ರಶಂಶನೀಯ ಹಾಗೂ ಮಾದರಿ. ನಾವು ಕನ್ನಡಿಗರು ಅವರ ಸಾಧನೆಗೆ ಧನ್ಯವಾದ ಹೇಳಲೇಬೇಕು.

ನಸುಕು.ಕಾಮ್ ಮತ್ತು ಸತತ ಪ್ರಯೋಗಗಳು

ಕೇವಲ ಒಂದು ವರ್ಷದಲ್ಲಿ, ನಿಮ್ಮ ನಸುಕು.ಕಾಮ್ ಆರಂಭಿಸಿದ ಎಲ್ಲ ವಿಶೇಷ ಸಂಚಿಕೆ, ಪ್ರಸ್ತುತಿ ಹಾಗೂ ಪ್ರಯೋಗಗಳಿಗೆ ನಿರೀಕ್ಷೆ ಮೀರಿ ಬೆಂಬಲ ಕೊಟ್ಟ ಎಲ್ಲ ಕನ್ನಡಿಗರಿಗೂ ಈ ಮೂಲಕ ವಿನಯ ಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆಗಳು … . ಈ ಮುಂಬೈ ನಸುಕು ಮಹಾ ಸಂಚಿಕೆ ಕೂಡ ನಾವು ಆರಂಭಿಸಿದ ಅನೇಕ ಹೊಸ ಪ್ರಯೋಗಗಳಲ್ಲಿ ಒಂದು. ಇದಕ್ಕೆ ಸದಾ ಬೆಂಬಲಿಸಿ, ಸಹಕಾರ ನೀಡಿದ ಶ್ರೀ ಪ್ರಹ್ಲಾದ್ ರಾವ್, ಡಾ. ಗೋವಿಂದ ಹೆಗಡೆ, ಶ್ರೀ ತಲಗೇರಿ ಸೇರಿದಂತೆ ಇಡಿಯ ನಸುಕು ಸಂಪಾದಕ ವರ್ಗ ಹಾಗೂ ನಮ್ಮ ಸದಾ ಕಾಲದ ಸ್ಫೂರ್ತಿ ನಸುಕು ಸಲಹಾ ಸಮಿತಿ ಯ ಪ್ರತಿಯೊಬ್ಬರನ್ನೂ ನಾನು ಈ ಮೂಲಕ ಸ್ಮರಿಸುವೆ ಹಾಗೂ ವಂದಿಸುವೆ.
ಮುಂಬೈ ಬದುಕಿನ ಸ್ಪಂದನೆಗಳ ವ್ಯಾಪ್ತಿ ತುಂಬಾ ದೊಡ್ಡದು. ಮುಂಬೈ ಲೇಖಕರು ವರ್ತಮಾನದ ತಲ್ಲಣ, ಪಲ್ಲಟಗಳ, ಸಂಭ್ರಮ, ವಿಭ್ರಮಗಳನ್ನು,ತುಡಿತ,ಮಿಡಿತಗಳನ್ನು, ಸುಪ್ತ ಸಂವೇದನೆಗಳನ್ನು ತಮ್ಮ ಬರಹಗಳಲ್ಲಿ ಢಾಳಾಗಿ ಮೂಡಿಸುತ್ತಾ ಹೊಸ ಪ್ರಯೋಗಗಳನ್ನು , ಹೊಸ ಬಗೆಗಳನ್ನು ಹುಟ್ಟಿ ಹಾಕುತ್ತ, ಭವಿಷ್ಯದ ಕನ್ನಡ ಸಾಹಿತ್ಯ ಪರಂಪರೆಗೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ದಿಕ್ಕು ತೋರಿಸುವ, ಟ್ರೆಂಡ್ ಸೃಷ್ಟಿಸುವರೆಂಬ ಭರವಸೆ ಯೊಂದಿಗೆ …ಈ ಸಂಚಿಕೆಯ ಪ್ರಸ್ತುತ, ಮುಂಬರುವ ಎಲ್ಲ ಲೇಖಕರಿಗೂ , ಅದ್ಭುತವಾಗಿ ಸಂಪಾದಿಸಿಕೊಟ್ಟ ಗೌರವ ಸಂಪಾದಕರಾದ ಡಾ. ಜಿ. ಏನ್. ಉಪಾಧ್ಯರಿಗೂ ಹಾಗೂ ಅವರ ತಂಡಕ್ಕೂ ಇನ್ನೊಮ್ಮೆ ಪ್ರಣಾಮಗಳನ್ನು ಸಲ್ಲಿಸುತ್ತಾ, ಇಗೋ ಮುಂಬೈ ನಸುಕು ಮಹಾ ಸಂಚಿಕೆ ನಿಮ್ಮೆಲ್ಲರ ಓದಿಗಾಗಿ….
ಶುಭವಾಗಲಿ. ಅಲೌಕಿಕ ಆನಂದ ನೀಡುವ ಸಾಹಿತ್ಯ ಓದುವ, ಬರೆಯುವರ ಸಂತತಿ ನೂರ್ಮಡಿಗೊಳ್ಳಲಿ
.