ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೆಚ್ಚುಗೆ ಪಡೆದ 18 ಹನಿಗವಿತೆಗಳು

ನಸುಕು ಸ್ಪರ್ಧೆ 2021 ರ ನಿರ್ಣಾಯಕರ ಮೆಚ್ಚುಗೆ ಪಡೆದ ಕವಿತೆಗಳು

1 ಹೆಚ್. ಕೆ. ಮಹೇಶ್ ಭಾರದ್ವಾಜ್

ಬಾನ ನೇಕಾರ

ಬಾನ ಅಂಗಡಿಯಲ್ಲಿ ಅರಳೆ ಎಷ್ಟೊಂದು ಅಗ್ಗ!
ಸಂಧ್ಯೆಯಲಿ ನೇಯುವುದು ನೇಸರನ ಮಗ್ಗ
ಸಿದ್ಧವಾಗುವುದಿಲ್ಲಿ ವರ್ಣಮಯ ಸೀರೆ
ಕದ್ದನಿವ ಬಣ್ಣಗಳ ಎಲ್ಲಿಂದ ತೋರೆ?”

2. ರೂಪ ಮಂಜುನಾಥ

ಅಮ್ಮ, ಇವತ್ತೇನು breakfastu?
ಹೊಟ್ಟೆ ತಾಳ ಹಾಕ್ತಿದೆ, ಮಾಡಿ fastu!
ರೋಟಿ, ದಾಲ್ ತಡ್ಕಾ!
ಮಾಡಗಂಟಾ ತಡ್ಕಾ!


3. ಹನುಮಂತಸಿಂಗ ರಜಪೂತ

ಚೀನಾ ಕಮಾಲು
ಹೇ ಚೀನಾ
ನಂಬಿಕೆಯದಲ್ಲಾ ನಿನ್ನ ಮಾಲು
ಆದರೂ ಆಗಾಗ
ಮಾಡುತ್ತೀಯಾ ಕಮಾಲು
ಕೊನೆಗೂ ಸುತ್ತಿಸಿ ಬಿಟ್ಟಿಯಲ್ಲಾ
ಜಗತ್ತಿನ ಮೂಗಿಗೆ ರುಮಾಲು.!


4. ಡಾ. ಸದಾಶಿವ ದೊಡಮನಿ

ಕವಿತೆ ಇಷ್ಟವಾದರೆ
ಎದೆಯ ಮೇಲೆ ಹರವಿಕೊಳ್ಳಿ
ಇಲ್ಲವಾದರೆ
ತುಳಿಯದೇ ದಾಟಿ ಬಿಡಿ!


5. ಗುರುಪ್ರಸಾದ್ ಎಚ್.

ಬೆಳ್ಳಿಮೋಡಕ್ಕೆ ನೀನು ಕಾಡಿಗೆಯ ಹಚ್ಚಿ
ಕಳಿಸಿಕೊಟ್ಟಿರುವೆಯಲ್ಲಾ ಇಲ್ಲಿಗೆ,
ಈಗ ನನ್ನೆದೆಯಲ್ಲಿ
ಬರಿ ನಿನ್ನದೇ ನೆನಪಿನ ಮಳೆ…

6. ಆರತಿ ಘಟಿಕಾರ್

ಹುಡುಗನ ಫಜೀತಿ

ಬಸ್ಸಿನ ನೂಕುನುಗ್ಗಲಿನಲ್ಲೂ
ಆ ಬೆಡಗಿಯನ್ನೇ
ನೋಡುತ್ತಾ ಆದನವ
ಪರವಶ
ಆಗವನ ಪಾಕೀಟು
ಪರರ ವಶ !

7. ಮಾನಸ ವಿಜಯ್ ಕೈಂತಜೆ

ಜನ !!!

ಎಲ್ಲಿದೆ ಸ್ವಾಮಿ
ಉತ್ತೇಜನ??
ಮೊನ್ನೆಯ
ಕವಿಗೋಷ್ಠಿಗೆ
ಬಂದಿದ್ದ
ಸಭಿಕರು ಹತ್ತೇ ಜನ !!!


8. ಅಶೋಕ್ ವಳದೂರು

ಪರಿಸರ
ಪರಿಸರ ದಿನಕ್ಕೆ ಗಿಡನೆಟ್ಟು
ನೆಟ್ ನಲ್ಲಿ ಸಕತ್ ಸ್ಟೇಟಸ್ ಹಾಕಿಕೊಂಡ !
ವರ್ಷ ನಂತರ ಮತ್ತೆ ಆ ದಿನಕ್ಕೆ
ನೆಟ್ಟಲ್ಲಿ ಕಂಡಿದ್ದು ಬರಿ ಹೊಂಡ !

9. ಎಚ್.ಕೆ.ಶರತ್

“ಬದುಕು
ಈ ಕ್ಷಣದ
ತುಣುಕು”

10. ರಮೇಶ ಬಾಬು ಚಂದಕಚರ್ಲ

ಮಳೆ

ವಿರಹಿಗಳ ಸಂದೇಶಗಳ
ಭಾರಹೊತ್ತ ಮುಗಿಲುಗಳು
ಉಮ್ಮಳ ತಾಳಲಾರದೇ
ಬಿಕ್ಕಳಿಸಿ ಅತ್ತಾಗ
ನಮಗೆಲ್ಲಾ ಮಳೆ

11. ರವಿಶಂಕರ್ ಕಯ್ಯಾರ್

ಸರಿ
ಮತ್ತು
Sorry
ಗೊತ್ತಿದ್ದವ
ಸಂಸಾರಿ.

12. ಲೈನ್ಮನ್

ಗಾಯವಾದ ಕಡೆಲೆಲ್ಲಾ
ಬೀಜವೂರಿದ್ದೆ;
ಎದೆಯೀಗ
ಹೂದೋಟವಾಗಿದೆ.


13. ಅಬ್ಳಿ,ಹೆಗಡೆ

ಸ್ನೇಹ,ಸಂಬಂಧಗಳು
ಕತ್ತಲಲಿ ಮಿಂಚು.
ಬಾಳ ದಾರಿಯ ಬದಿಗೆ
ಒಂದೊಂದು ‘ಬೆಂಚು’.

14. ಮಹೇಶ್ ಹೆಗಡೆ

ಕನಸು….
ಕನಸೆನ್ನುವುದು ಸ್ವಾತಿಯ ಮಳೆಯು
ಸಿಂಚನದೊಳು ಬಯಕೆಯ ಕನವರಿಕೆ…
ಬೀಳುವ ಅಗಣಿತ ಹನಿಗಳ ರಾಶಿಯು
ಮುತ್ತಾಗುವುದು ಬರಿ ಬೆರಳೆಣಿಕೆ…


15. ಸುಧಾ ಎನ್.ತೇಲ್ಕರ್

ಹೈಕು
ಬೆಳ್ಳಿಯ ತಟ್ಟೆ;
ಮಲ್ಲೆ ಹೂ ಚೆಲ್ಲಾಪಿಲ್ಲಿ;
ಬಾನಲಿ ಹಬ್ಬ.”

16. ಮಾನಸ ಗಂಗೆ

ಬಿರುಗಾಳಿಗೆ ಆರಿ
ಹೋದದ್ದು ದೀಪಗಳಷ್ಪೆ
ಬೆಂಕಿಯ ಕಿಡಿಯೊಂದು
ಕಣ್ಣಲ್ಲಿಯೇ ಉಳಿದಿದೆ….”

17. ನಳಿನ ಬಾಲಸುಬ್ರಹ್ಮಣ್ಯ

“ಸುಖೀ ಸಂಸಾರ””

ನಮ್ಮ ಮನೆಗೆ ಬಡಿದಿಲ್ಲ ಎಂದೂ ಹಣದ ಗರ
ಅದಕ್ಕೇ ಇರಬೇಕು ನಮ್ಮದು ಸುಖೀ ಸಂಸಾರ.
ಹಣಕ್ಕಾಗಿ ಎಂದೂ ಚಾಚುವುದಿಲ್ಲ ನನ್ನಾಕೆ ಕರ
ಅವಳ ಬಳಿಯಲ್ಲೇ ಇದೆಯಲ್ಲಾ ನನ್ನೆಲ್ಲ ಪಗಾರ.”


18. ಪತ್ತಂಗಿ ಎಸ್. ಮುರಳಿ

ಫಲ

ನೆಲಕ್ಕೆ ಬಿದ್ದರೆ ಜಾಡಿ
ಹತ್ತಾರು ಹೋಳು
ಕಿವಿಯ ಹೊಕ್ಕರೆ
ಚಾಡಿ ಸಂಬಂಧ ಹಾಳು.