ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ reuters

ರಶಿಯಾ ಯುಕ್ರೇನ್ ಜಟಾಪಟಿ: ಶೀತಲ ಸಮರ ಸೀಸನ್ 2?

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)


ಯುಕ್ರೈನ್ ದೇಶಕ್ಕೆ ಹೊಂದಿಕೊಂಡ ಕಪ್ಪು ಸಮುದ್ರದ (ಬ್ಲಾಕ್ ಸೀ) ಕರಾವಳಿಯಲ್ಲೀಗ ಅಲೆಗಳ ಅಬ್ಬರ ಇತ್ತೀಚೆಗೆ ಜೋರಾಗಿದೆ. ರಶಿಯಾ ಬೃಹತ್ ಯುದ್ಧ ನೌಕೆಗಳ ರಭಸದ ಚಟುವಟಿಕೆಗಳು ಇದಕ್ಕೆ ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಯಾವುದೇ ಕ್ಷಣದಲ್ಲಿ ರಶಿಯಾ ಯುಕ್ರೈನ್ ಮೇಲೆ ಯುದ್ಧ ಸಾರುತ್ತದೆ ಎಂಬುದನ್ನು ಅಮೇರಿಕ ಏರು ದನಿಯಲ್ಲಿ ಹೇಳುತ್ತಿರುವುದನ್ನು ನೀವು ಕೇಳಿರುತ್ತೀರಿ. ಇದೊಂದು ಕೇವಲ ಒಂದು ಭೌಗೋಳಿಕ ಪ್ರದೇಶದ ಸರ್ವಾಧಿಪತ್ಯದ ಜಟಾಪಟಿ ಅಷ್ಟೇನಾ ಅಥವಾ ಅದಕ್ಕೆ ಮೀರಿದ ಆಯಾಮಗಳೇನಾದರೂ ಇವೆಯಾ ಎಂಬುದರ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ.

ಈ ಹಿಂದೆ ಮೊದಲು ಶೌರ್ಯ ಸಂದೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು

೧೯೯೧ ರಲ್ಲಿ ಸೋವಿಯತ್ ಒಕ್ಕೂಟ ಪತನ ಗೊಳ್ಳುತ್ತಿದ್ದಂತೆ ಪ್ರತ್ಯೇಕವಾಗಿ ಸ್ವತಂತ್ರ ಘೋಷಿಸಿಕೊಂಡ ಪ್ರಮುಖ ರಾಷ್ಟ್ರಗಳಲ್ಲಿ ಯುಕ್ರೈನ್ ಒಂದು. ಪೂರ್ವಕ್ಕೆ ರಷಿಯಾ, ಉತ್ತರಕ್ಕೆ ಬೆಲಾರುಸ್, ಪಶ್ಚಿಮಕ್ಕೆ ಪೋಲೆಂಡ್,ಸ್ಲೊವಾಕಿಯ ಹಂಗೇರಿ ಹಾಗೂ ದಕ್ಷಿಣಕ್ಕೆ ರೊಮಾನಿಯ, ಮಾಲ್ಡೋವಾ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಯುಕ್ರೇನ್ ಗೆ ದಕ್ಷಿಣದಲ್ಲಿ ಕಪ್ಪು ಸಮುದ್ರ ಹಾಗೂ ಅಜೋವ್ ಸಮುದ್ರಗಳ ಕರಾವಳಿ ಪಟ್ಟಿ ಕೂಡ ಇದೆ. ರ ಷಿಯಾದ ಪ್ರಭಾವದಿಂದ ಕಳಚಿಕೊಂಡು ಹೊಸದಾಗಿ ರೂಪುಗೊಂಡ, ಪೂರ್ವ ಯುರೋಪ್ ಖಂಡದ ಪ್ರಮುಖ ಆಯಕಟ್ಟಿನ ರಾಷ್ಟ್ರ ಯುಕ್ರೇನ್ ನ ಮೇಲೆ ರಶಿಯಾ ಕಣ್ಣು ಹಾಕಲು ಕಾರಣವೇನು ಎಂದು ಅರಿಯುವ ಮೊದಲು, ಅಲ್ಲಿನ ಕಳೆದೆರಡು ದಶಕಗಳ ಇತಿಹಾಸವನ್ನು ಅವಲೋಕಿಸೋಣ.

ಸೋವಿಯತ್ ಪತನವಾಗಿ ಶೀತಲ ಸಮರ ಮುಗಿಯುತ್ತಿದ್ದಂತೆ, ಅಮೇರಿಕ ಹಾಗೂ ಯೂರೋಪಿನ ಮಿತ್ರ ರಾಷ್ಟ್ರಗಳು ಯುಕ್ರೇನ್ ನನ್ನು ಕೂಡ ಒಂದು ಸಾರ್ವ ಭೌಮ ರಾಷ್ಟ್ರವಾಗಿ ಮಾನ್ಯ ಮಾಡಿದವು. ತನ್ನದೇ ವಿಭಿನ್ನ ಸಂಸ್ಕೃತಿ,ರಾಷ್ಟ್ರೀಯತೆಯ ತಳಹದಿಯಲ್ಲಿ ಯುಕ್ರೈನಿನ ಜನತೆ ಉಜ್ವಲ ಭವಿಷ್ಯದ ಕನಸು ಕಂಡರು. ಅನೇಕ ವಿಷಯಗಳಲ್ಲಿ ಸಾಮ್ಯತೆ ಇದ್ದರೂ ಮೂಲ ಯುಕ್ರೈನಿಗರು ರಶಿಯನ್ನರಿಗಿಂತ ಭಿನ್ನ. ರಾಜಧಾನಿ ಕೀವ್ ಸೇರಿದಂತೆ ಪಶ್ಚಿಮ ಮತ್ತು ಕೇಂದ್ರ ಭಾಗಗಳಲ್ಲಿ ಸುಮಾರು ೭೭ ಪ್ರತಿಶತದಷ್ಟು ಯುಕ್ರೈನಿಗರನ್ನು ಕಾಣಬಹುದು.ಮೂಲ ಸೋವಿಯತ್ ರಶಿಯಾದಿಂದ ಬೇರೆಯಾದರೂ ಕೂಡ ಹೆಚ್ಚು ಕಮ್ಮಿ ಹದಿನೇಳು ಪ್ರತಿಶತ ರಶಿಯನ್ ಜನಸಂಖ್ಯೆ ಕೂಡ ಆ ದೇಶದಲ್ಲಿದೆ. ಇವರು ಸಾಮಾನ್ಯವಾಗಿ ಪೂರ್ವ ಭಾಗದ ಕ್ರೈಮಿಯಾ ಮತ್ತು ಡಾನ್ಬಾಸ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

೨೦೧೦ ರ ಹೊತ್ತಿಗೆ ಯುಕ್ರೇನ್ ನ್ಯಾಟೋ ಸೇರಿದಂತೆ ಅಮೇರಿಕ ಹಾಗೂ ಯೂರೋಪಿನ ಜೊತೆಗೆ ಹೆಚ್ಚು ಆತ್ಮೀಯ ಸಂಬಂಧ ಬೆಳೆಸಿಕೊಂಡಿತು. ಸೋವಿಯತ್ ಕಾಲದಲ್ಲಿ, ಯುಕ್ರೈನ್ ನ ಚೆರ್ನೋಬಿಲ್ ಅಣು ದುರಂತದ ತರುವಾತ ನಡೆದ ಅಣು ತ್ಯಾಜ್ಯಗಳ ವಿಲೇವಾರಿಯಲ್ಲಿ ಅಮೇರಿಕ ಹಾಗೂ ಇತರ ರಾಷ್ಟ್ರಗಳು ನೆರವಾಗಿದ್ದವು. ೨೦೧೦ ರ ಬಳಿಕ ದೇಶವನ್ನು ಆಳಿದ ಮೂವರು ಅಧ್ಯಕ್ಷರುಗಳು ತಮ್ಮ ಅಂತರಿಕ ಹಾಗೂ ವಿದೇಶೀ ನೀತಿಗಳಿಂದ ಪ್ರಸ್ತುತ ಯುಕ್ರೇನಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದಾರೆ. ಮೊದಲು ಬಂದ ಅಧ್ಯಕ್ಷ ವಿಕ್ಟರ್ ಯಾನುಕೊವಿಚ್ ನಾಲ್ಕು ವರ್ಷ ಅಧಿಕಾರದಲ್ಲಿದ್ದ. ಪ್ರಮುಖವಾಗಿ ಈತ ಹಾಗೂ ಅವನ ಪಕ್ಷ, ಮೂಲ ರಶಿಯನ್ ಹಾಗೂ ಸೋವಿಯತ್ ಸಂಸ್ಕೃತಿಯ ಕಟ್ಟಾ ಬೆಂಬಲಿಗರು. ಅಂತೆಯೇ ನೆರೆಯ ಯೂರೋಪು ಹಾಗೂ ಅಮೇರಿಕಾದ ಬದ್ಧ ವಿರೋಧಿಗಳು. ಮಾಸ್ಕೋ ಕೃಪಾ ಕಟಾಕ್ಷದ ಅವರ ನೀತಿಗಳು ಪ್ರಗತಿಪರ ಧೋರಣೆಯನ್ನು ಹೊಂದಿರಲಿಲ್ಲ. ಆದರೆ ಬಹು ಸಂಖ್ಯಾತ ಯುಕ್ರೈನಿಗರಿಗೆ ಪಾಶ್ಚಿಮಾತ್ಯ ಯೂರೋಪಿನ ಪರ ಒಲವು. ಅವರ ಹಾಗೆ ಪ್ರಜಾ ಪ್ರಭುತ್ವವಾದಿ, ಸುಧಾರಕ ನೀತಿಯ ರಾಷ್ಟ್ರವಾಗಿ ಯುಕ್ರೈನ್ ಬೆಳೆಯಬೇಕು ಎಂದು ಬಯಸುವವರು.

ಪುಟಿನ್ ಜೊತೆ ಯಾನುಕೊವಿಚ್

ಆದರೆ ಅಧ್ಯಕ್ಷ ೨೦೧೦ ರಲ್ಲಿ ಯಾನುಕೊವಿಚ್ ರಶಿಯಾದೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾನೆ. ರಷಿಯಾ ತನಗೆ ಪೂರೈಸುತ್ತಿದ್ದ ನೈಸರ್ಗಿಕ ಅನಿಲ ಬೆಲೆಯನ್ನು ಮೂವತ್ತು ಪ್ರತಿಶತ ಕಡಿತ ಮಾಡುವುದಾಗಿ ಹಾಗೂ ಅದಕ್ಕೆ ಪ್ರತಿಯಾಗಿ ರಶಿಯಾ ಯುಕ್ರೈನಿನ ಕಪ್ಪು ಸಮುದ್ರದ ಸೆವೊಸ್ತೋಪೋಲ್ ಎಂಬಲ್ಲಿ ಇನ್ನೂ ೨೫ ವರ್ಷಗಳ ಕಾಲ ನೌಕಾ ದಳವನ್ನು ಪ್ರತಿಷ್ಟಾಪಿಸಿಕೊಂಡಿರಬಹುದು ಎಂಬ ಒಪ್ಪಂದಕ್ಕೆ ಸಹಿ ಹಾಕುತ್ತಾನೆ. ಇದು ಭೂಗೋಳಿಕವಾಗಿ ರಶಿಯಾಗೆ ವ್ಯೂಹಾತ್ಮಕವಾಗಿ ಅನುಕೂಲ ಸಿಂಧುವಾದದ್ದು. ಆದರೆ ಇದು ಯುಕ್ರೇನಿನ ಸುತ್ತ ಮುತ್ತ ರಷ್ಯನ್ನರ ನಿಯಂತ್ರಣವನ್ನು ಹೆಚ್ಚಿಸುತ್ತದೆ ಎಂದು ಅಲ್ಲಿನ ಜನತೆ ತೀವ್ರ ಅಸಮಾಧಾನಪಟ್ಟುಕೊಳ್ಳುತ್ತಾರೆ. ರಶಿಯಾದ ಈ ನಡೆ ಅಮೆರಿಕವನ್ನೂ ಸೇರಿದಂತೆ ನೇಟೊ ರಾಷ್ಟ್ರಗಳನ್ನು ಚಿಂತೆಗೆ ದೂಡುತ್ತದೆ. ಇಷ್ಟೇ ಅಲ್ಲದೇ ಯಾನುಕೊವಿಚ್ ನ ಎಲ್ಲ ನೀತಿಗಳು, ಜನತೆಗೆ ಸೋವಿಯತ್ ಮಾದರಿಯಲ್ಲಿ ಕಂಡು ಬಂದುದು ಹಾಗೂ ಸರಕಾರದ ಮೇಲೆ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಆತನ ಹಾಗೂ ಸರಕಾರದ ಜನಪ್ರಿಯತೆಯನ್ನು ಪಾತಾಳಕ್ಕಿಳಿಸುತ್ತದೆ.

೨೦೧೩ ಆರಂಭದಲ್ಲಿ ಜನತೆಯ ಮೆಚ್ಚುಗೆಯನ್ನು ಮತ್ತೆ ಗಳಿಸಿಕೊಳ್ಳುವ ನಿಟ್ಟಿನಲ್ಲಿ, ಯಾನುಕೊವಿಚ್ ಯೂರೋಪಿನ ಒಕ್ಕೂಟದ ಜೊತೆಗೆ ಸಂಬಂಧ ವರ್ದಿಸುವ ಒಪ್ಪಂದದ ಬಗ್ಗೆ ಮಾತನಾಡಲು ಶುರು ಮಾಡುತ್ತಾನೆ. ರಶಿಯಾದ ನೆರಳಿನಿಂದ ಹೊರ ಬಂದು ಯೂರೋಪಿನ ಆಧುನಿಕ ಮತ್ತು ಆರ್ಥಿಕ ಸುಧಾರಣಾವಾದದ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಕಟ್ಟುವ ಕನಸು ಕಾಣುತ್ತಿದ್ದ ಯುಕ್ರೈನಿನ ಜನತೆ, ತಮ್ಮ ಅಧ್ಯಕ್ಷನನ್ನು ತೀವ್ರವಾಗಿ ನಂಬುತ್ತಾರೆ. ಆದರೆ ೨೦೧೩ ನವೆಂಬರ್ ಬರುವ ಹೊತ್ತಿಗೆ ಯಾನುಕೊವಿಚ್ ಈ ನಿರ್ಧಾರವನ್ನು ಅನಾಮತ್ತಾಗಿ ರದ್ದುಗೊಳಿಸಿಬಿಡುತ್ತಾನೆ. ಆಗ ಇಡೀ ರಾಷ್ಟ್ರವೇ ಬೀದಿಗಿಳಿಯುತ್ತದೆ. ಯುರೋಮೈಡನ್ ಎಂದು ಕರೆಯಲ್ಪಡುವ ಚಳುವಳಿ ಬೃಹದಾಕಾರವಾಗಿ ಬೆಳೆದು ಯಾನುಕೊವಿಚ್ ಮಣಿದು ಯುಕ್ರೇನ್ ಮತ್ತು ಯುರೋಪಿಯನ್ ಒಕ್ಕೂಟದ ಜತೆಗಿನ ಸಂಬಂಧದ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಬೇಕಾಗುತ್ತದೆ ಮತ್ತು ಕೂಡಲೇ ಅಧಿಕಾರದಿಂದಿಳಿದು ತನ್ನ ಆಪ್ತರೊಡನೆ ರಶಿಯಾಕ್ಕೆ ಪಲಾಯನ ಮಾಡುವ ಸ್ಥಿತಿ ಸೃಷ್ಟಿಯಾಗುತ್ತದೆ.

ಯುರೋಮೈಡನ್ ಚಳುವಳಿ

ಇದೆಲ್ಲ ಒಂದು ಹಂತಕ್ಕೆ ಬಂದು ಮುಟ್ಟುತ್ತಲೇ,ಅದೇ ಸಮಯಕ್ಕೆ ರಶಿಯನ್ ಭಾಷಿಕರು ಹಾಗೂ ಸೋವಿಯತ್ ಬೆಂಬಲಿಗರು ಬಹು ಸಂಖ್ಯಾತರಾಗಿರುವ ಪೂರ್ವ ಯುಕ್ರೈನಿನ ಕೆಲ ಭಾಗಗಳಲ್ಲಿ ಉಗ್ರ ಪ್ರತಿರೋಧ ಭುಗಿಲೇಳುತ್ತದೆ. ಆ ಸಮಯದಲ್ಲಿ,ರಶಿಯಾದ ಪಡೆಗಳು ಯುಕ್ರೈನಿನ ಭಾಗವಾದ ಕ್ರೈಮಿಯಾವನ್ನು ಕೂಡಲೇ ಆಕ್ರಮಿಸಿಕೊಂಡು ಬಿಡುತ್ತವೆ.ಅಷ್ಟೇ ಅಲ್ಲದೆ ರಶಿಯಾದ ಕೈಗೊಂಬೆಯ ಸರಕಾರವನ್ನು ಅಲ್ಲಿ ಸ್ಥಾಪಿಸಲಾಗುತ್ತದೆ. ಒಂದು ದೇಶದ ಅಂತರಿಕ ವ್ಯವಹಾರಗಳಲ್ಲಿ ಮೂಗು ತೋರಿಸಿದ ರಶಿಯಾದ ಈ ನಡೆಯನ್ನು ಯುಕ್ರೈನ್ ಮತ್ತು ಅಂತಾರಾಷ್ಟ್ರೀಯ ಜಗತ್ತು ತೀವ್ರವಾಗಿ ವಿರೋಧಿಸಿದರೆ,ರಶಿಯಾ,ಬೇಕಿದ್ದರೆ ಆ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿ ನೋಡುವ ಎಂದು ವಾದ ಮಾಡಿಕೊಂಡು ಬಂದಿದೆ.ಅಲ್ಲಿ ರಶಿಯನ್ ಸಂಸ್ಕೃತಿ, ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಹಾಗೂ ಅವರಿಗೆ ರಶಿಯಾ ಬೇಕು,ಅದು ಅವರ ಹಕ್ಕು ಎನ್ನುವದು ಮಾಸ್ಕೋದ ವಾದ.

ಹೀಗೆ ೨೦೧೪ ಯುಕ್ರೈನ್ ಮೂರು ಮುಖ್ಯ ಐತಿಹಾಸಿಕ ಪಲ್ಲಟಗಳಿಗೆ ಸಾಕ್ಷಿಯಾಯಿತು. ಯುರೋಮೈಡನ್ ಚಳುವಳಿಯ ಮುಕ್ತಾಯ, ಪೆಟ್ರೋ ಪೋರೋಸೆಂಕೊ ಹೊಸ ಅಧ್ಯಕ್ಷನಾಗಿ ನೇಮಕಗೊಂಡಿದ್ದು ಹಾಗೂ ರಶಿಯಾ ಕ್ರೈಮೀಯಾ ವಶ ಪಡಿಸಿಕೊಂಡಿದ್ದು. ಆಗ ಅಧ್ಯಕ್ಷನಾಗಿದ್ದ ಪುಟಿನ್ ಯುಕ್ರೈನಿನ ಡಾನ್ಬಾಸ್ ಪ್ರದೇಶದ ರಷ್ಯನ್ನರ ಬಗ್ಗೆ ವಿಶೇಷ ಒಲವು,ಬೆಂಬಲ ತೋರಿಸತೊಡಗಿದ. ಒಂದು ಹೆಜ್ಜೆ ಮುಂದೆ ಹೋಗಿ ಯುಕ್ರೇನಿನ ಡೊನೆಟ್ಸ್ಕ್, ಲುಗಾನ್ಸ್ಕ್ ಸೇರಿದಂತೆ ಡಾನ್ಬಾಸ್ ಪ್ರದೇಶದಲ್ಲಿ ಹುಟ್ಟಿಕೊಂಡ ಪ್ರತ್ಯೇಕತಾವಾದಿ ಬಂಡುಕೋರರಿಗೆ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳನ್ನೂ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ, ತರಬೇತಿ ನೀಡುವ ಕೆಲಸಕ್ಕೆ ಕೂಡ ರಶಿಯಾ ಮುಂದಿಟ್ಟುಕೊಳ್ಳುತ್ತದೆ. ಜುಲೈ ೨೦೧೪ ರಲ್ಲಿ ಆಕಸ್ಮಿಕವಾಗಿ ಈ ಬಂಡುಕೋರರು ಹೊಡೆದುರುಳಿಸಿದ ನೃತದೃಷ್ಟ ಮಲೇಷಿಯನ್ ಏರ್ ಲೈನ್ಸ್ ಎಂ ಎಚ್ 17, ಇದೇ ಡಾನ್ಬಾಸ್ ಪ್ರದೇಶದಲ್ಲಿ ರಶಿಯನ್ ನಿರ್ಮಿತ ಬಿ.ಯು.ಕೆ. ಎಂ ೧ ಯುದ್ಧ ಕ್ಷಿಪಣಿಗೆ ಬಲಿಯಾದದ್ದು ನಿಮಗೆ ಇನ್ನೂ ನೆನಪಿರಬಹುದು.

ಸೆಪ್ಟೆಂಬರ್ ೨೦೧೪ ರಲ್ಲಿ ಬೆಲಾರೂಸ್ ನ ರಾಜಧಾನಿ ಮಿನ್ಸ್ಕ್ ನಲ್ಲಿ , ಡಾನ್ಬಾಸ್ ಪ್ರದೇಶದ ಸುತ್ತ ಯುಕ್ರೈನ್ ಹಾಗೂ ರಶಿಯಾದ ಯುದ್ಧ ವಿರಾಮ ಕುರಿತ ಎರಡು ಸಂಧಾನ ಪ್ರಯತ್ನಗಳು ವಿಫಲಗೊಂಡವು. ಕಾರಣ ಆ ಕೆಲವು ಪ್ರದೇಶಗಳನ್ನು ಸ್ವತಂತ್ರಗೊಳಿಸುವ ರಶಿಯಾದ ಷರತ್ತಿಗೆ ಯುಕ್ರೈನ್ ಸ್ವಾಭಾವಿಕವಾಗಿ ಒಪ್ಪದೇ ಇದ್ದದ್ದು. ಡಾನ್ಬಾಸ್ ಮತ್ತು ಕ್ರೈಮೀಯಗಳು ಔದ್ಯೋಗಿಕವಾಗಿ ಶ್ರೀಮಂತ ಪ್ರದೇಶಗಳು ಆಗಿರುವುದನ್ನು ಇಲ್ಲಿ ಗಮನಿಸಬೇಕು. ಅಂತೆಯೇ ಅಲ್ಲಿ ಚುನಾವಣೆಗಳು ನಡೆಸಬೇಕೆಂದರೆ ರಶಿಯಾ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಿ ಎಂದು ಯುಕ್ರೈನ್ ಹೇಳಿದರೆ, ರಷ್ಯ, ಇಲ್ಲ ಮೊದಲು ಆ ಪ್ರದೇಶಗಳಿಗೆ ಸ್ವಾಯತ್ತತೆ ಕೊಡಿ, ನಂತರವೇ ಚುನಾವಣಾ ಎಂದು ಪಟ್ಟು ಹಿಡಿದಿದೆ. ಅಂತೆಯೇ ಯುಕ್ರೈನ್ ಜನತೆ ತನ್ನ ಯಾವ ಭೂ ಭಾಗವನ್ನೂ ಕಳೆದುಕೊಳ್ಳಲು ಶತಾಯ ಗತಾಯ ಇಷ್ಟಪಡುವುದಿಲ್ಲ ಎನ್ನುವುದು ಕೂಡ ಅಷ್ಟೇ ದಿಟ.

ಹೀಗೆ ರಶಿಯಾದ ಕಪಿಮುಷ್ಟಿಯಿಂದ ತನ್ನ ಭಾಗವನ್ನು ರಕ್ಷಿಸಿಕೊಳ್ಳಲು ಯುಕ್ರೈನ್ ಗೆ ಅಮೇರಿಕ ಮತ್ತು ನೇಟೋ ದ ಬೆಂಬಲ ಬೇಕೇ ಆಗುತ್ತದೆ. ಯುಕ್ರೈನ್ನಿನ ಜನತೆ ಕೂಡ ಯುರೋಪನ್ನು ಇಷ್ಟ ಪಡುತ್ತಾರೆ. ಆದರೆ, ಈ ವರೆಗೆ ಯುರೋಪ್ ಮತ್ತು ನೇಟೊ ರಾಷ್ಟ್ರಗಳು ಯುಕ್ರೈನ್ ಬಗ್ಗೆ ಸಂತಾಪ, ಬೆಂಬಲ ಬಿಟ್ಟರೆ ಹೆಚ್ಚಿದನ್ನೇನೂ ಮಾಡಿಲ್ಲ ಏಕೆ ಎಂಬುದಕ್ಕೆ ಎರಡು ಪ್ರಮುಖ ಕಾರಣಗಳನ್ನು ಮುಂದಿಡಬಹುದು. ಒಂದು, ಯುಕ್ರೈನ್ ನನ್ನು ಯುರೋಪಿನಲ್ಲಿ ಸೇರಿಸಿಕೊಂಡರೆ, ಅಲ್ಲಿಂದ ಇತರ ಯುರೋಪಿಗೆ ವಲಸೆಗಳು ತೀವ್ರಗೊಳ್ಳಬಹುದು . ಅಲ್ಲದೇ, ಈಗಾಗಲೇ ಬಿಕ್ಕಟ್ಟು ಇರುವುದರಿಂದ, ಇಡೀ ಯುರೋಪ್ ಹಾಗೂ ನೇಟೊ ರಶಿಯಾದ ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರುವ ಪರಿಸ್ಥಿತಿ ಕೂಡ ನಿರ್ಮಾಣಗೊಳ್ಳುತ್ತದೆ ಎಂಬುದು ಕೂಡ ಪ್ರಮುಖ ಅಂಶಗಳು.

ಈಗಾಗಲೇ ಅಂತರಿಕವಾಗಿ ಕೂಡ ಪ್ರಬಲವಾಗಿರುವ ಪುಟಿನ್ ವಿಶ್ವದಲ್ಲಿ ರಶಿಯಾಗೆ ಕಳೆದು ಹೋದ ಮಹತ್ವವನ್ನು ಮತ್ತೆ ಮರಳಿಸುವ ಹುನ್ನಾರದಲ್ಲಿ ಇದ್ದ ಹಾಗೆ ತೋರುತ್ತದೆ. ಈ ನಡುವೆ ಅಫ್ಘಾನಿಸ್ತಾನ್ ದಲ್ಲಿ ತೀವ್ರ ಮುಖಭಂಗ, ಹಿನ್ನಡೆ ಅನುಭವಿಸಿದ ಬೈಡೆನ್ ನೇತೃತ್ವದ ಅಮೇರಿಕ, ಯುಕ್ರೈನ್ ವಿಷಯವನ್ನು ತನ್ನ ಮೈ ಮೇಲೆ ಎಳೆದುಕೊಳ್ಳುವುದು ಮುಂಚಿನಷ್ಟು ಸುಲಭವಲ್ಲ ಎನ್ನಿಸುತ್ತದೆ. ರಶಿಯಾ ಇದನ್ನು ಉಪಯೋಗಿಸಿ ಮುಂದುವರೆದರೆ ಮತ್ತೆ ಶೀತಲ ಸಮರ ಶುರುವಾಗಬಹುದೇ? ತೃತೀಯ ಯುದ್ಧದ ಭೀತಿ ಹೆಚ್ಚಲಿದೆಯೇ? ಉಕ್ರೈನಿನ ಡಾನ್ಬಾಸ್ ಪ್ರದೇಶದಲ್ಲಿ ರಶಿಯನ್ನರು ಪ್ರಜಾಪ್ರಭುತ್ವವಾದಿ ಚುನಾವಣೆ , ಸ್ವಾಯತ್ತತೆ ಎನ್ನುವ ಪದಗಳನ್ನು ಉಪಯೋಗಿಸಿ ರಾಜ ತಾಂತ್ರಿಕ ಜಾಣ್ಮೆ ತೋರಿಸುತ್ತಿದುದರಿಂದ ವಿಶ್ವಕ್ಕೆ ರಶಿಯವನ್ನು ಸಾರಾಸಗಟಾಗಿ ತರಾಟೆಗೆ ತೆಗೆದುಕೊಳ್ಳಲು ಮಹತ್ವದ ಕಾರಣಗಳು ಸಿಗುತ್ತಿಲ್ಲ.

ಅಮೇರಿಕವೊಂದೇ ರಶಿಯಾದ ವಿರುದ್ಧ ಎತ್ತರದ ದ್ವನಿಯಲ್ಲಿ ಪ್ರತಿರೋಧ ತೋರುತ್ತಿದ್ದರೆ, ಅದರ ಮಿತ್ರಕೂಟ ಯುರೋಪ್ ಏಕೆ ರಶಿಯಾವನ್ನು ಉಗ್ರವಾಗಿ ಖಂಡಿಸುವಲ್ಲಿ ಹಿಂಜರಿಯುತ್ತಿದೆ ಎನ್ನುವುದಕ್ಕೆ ಇನ್ನೊಂದು ಬಲವಾದ ಕಾರಣ ಇದೆ. ಒಂದು ವೇಳೆ ರಶಿಯಾ ಯುಕ್ರೈನ್ ಮೇಲೆ ದಾಳಿ ನಡೆಸಿದರೆ, ಅಮೇರಿಕ ರಶಿಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಬಹುದು. ಇಂಥ ನಿರ್ಧಾರಕ್ಕೆ ಯುರೋಪ್ ಬೆಂಬಲ ಕೊಡುವ ಸಾಧ್ಯತೆ ಕಮ್ಮಿ ? ಯೂರೋಪಿನ ಅನೇಕ ರಾಷ್ಟ್ರಗಳಿಗೆ ರಶಿಯಾ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ. ಯುಕ್ರೈನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಏನಾದರೂ ದಿಗ್ಬಂಧನ ಹೇರಿದರೆ, ರಶಿಯಾದ ಅನಿಲ ಪೂರೈಕೆ ನಿಂತು ಹೋಗುವುದು ಮತ್ತು ಅದರ ಬಿಸಿ ನೇರವಾಗಿ ತಟ್ಟುವುದು ಯುರೋಪಿಗೇ., ಶೆಲ್ ಸೇರಿದಂತೆ ಐದು ಪ್ರಮುಖ ತೈಲ ಕಂಪನಿಗಳು, ಅದನ್ನು ನೆಚ್ಚಿಕೊಂಡ ಉದ್ಯಮಗಳು ತತ್ತರಿಸಿ ಹೋಗಿ, ಯುರೋಪಿನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವ ಅಪಾಯ ಉಂಟಾಗಬಹುದು.

ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನನ್ನ ಈಸ್ಟೋನಿಯಾ ದೇಶದ ಸಹೋದ್ಯೋಗಿ ಹೇಳುವಂತೆ ಅಲ್ಲಿ ಅನಿಲದ ಬೆಲೆ ಈಗಾಗಲೇ ಆಕಾಶಕ್ಕೇರಿದೆಯಂತೆ. ಸ್ವತಃ ಯುಕ್ರೇನ್ ಗೆ ಕೂಡ ಅದು ದೊಡ್ಡ ಹೊಡೆತವೇ. ಅಮೇರಿಕಾದ ಬೈಡೆನ್ ರಶಿಯಾ ಯಾವುದೇ ವೇಳೆ ಯುಕ್ರೈನ್ ಮೇಲೆ ಯುದ್ಧ ಸಾರುತ್ತೆ ನೋಡಿ ಅಂತ ಕೂಗಿ ಕೂಗಿ ಹೇಳುತ್ತಿದ್ದರೆ, ಸ್ವತಃ ಯುಕ್ರೈನ್ ನ ಪ್ರಸ್ತುತ ಅಧ್ಯಕ್ಷ ಜೆಲೆನ್ಸ್ಕಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸುಖಾ ಸುಮ್ಮನೆ ಟೆನ್ಸನ್ ಕ್ರಿಯೇಟ್ ಮಾಡಬೇಡಿ ಅಂತ ಕರೆ ಕೊಟ್ಟಿದ್ದಾನೆ.

ಅಮೇರಿಕ ಮತ್ತು ಕೆಲ ರಾಷ್ಟ್ರಗಳು ತಮ್ಮ ಪಡೆಗಳನ್ನು ಯುಕ್ರೈನ್ ನ ನೆರವಿಗೆ ಧಾವಿಸುವ ಯೋಜನೆಯಲ್ಲಿದ್ದರೆ, ವಿಶ್ವದ ಅನೇಕ ದೇಶಗಳು ಎಚ್ಚರಿಕೆಯಿಂದ ವಿದ್ಯಮಾನಗಳನ್ನು ವೀಕ್ಷಿಸುತ್ತಿವೆ.. ರಶಿಯಾ ತಮ್ಮ ಪಡೆಗಳನ್ನು ಸನ್ನದ್ಧಗೊಳಿಸಿದ್ದರೂ ಕೂಡ, ತಾನು ಆಕ್ರಮಣ ಮಾಡುವ ಯೋಚನೆ ಇಲ್ಲ ಎಂಬ ಹೇಳಿಕೆ ಕೊಟ್ಟಿದೆ. ಹಾಗಾಗಿ ಅಮೆರಿಕಕ್ಕಿಂತ, ವಿಶ್ವ ಸಂಸ್ಥೆ ಮಧ್ಯ ಪ್ರವೇಶಿಸುವುದೇ ಸರಿಯಾದದ್ದು ಎಂಬ ರಶಿಯಾದ ನಡೆಗೆ ಭಾರತ ಕೂಡ ಸಹಮತ ವ್ಯಕ್ತಪಡಿಸಿದೆ.. ರಶಿಯಾ ಈ ವಿಷಯದಲ್ಲಿ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದೆ.

ಕೋವಿದ್ ನಿಂದ ಈಗಷ್ಟೇ ಸುಧಾರಿಸಿಕೊಳ್ಳುತಿರುವ ಜಗತ್ತಿಗೆ ಮೂರನೆಯ ಜಾಗತಿಕ ಯುದ್ಧದಂತ ಪರಿಸ್ಥಿತಿ ಖಂಡಿತ ಅನಗತ್ಯ. ಹಾಗಾಗಿ ಯುಕ್ರೈನ್ ವಿಷಯದಲ್ಲಿ ಮುಂದಿನ ನಡೆ ಒಟ್ಟಾರೆ ವಿಶ್ವ ಶಾಂತಿಯ ದೃಷ್ಟಿಯಿಂದ ಆಶಾದಾಯಕವಾಗಿರಲಿ ಎಂದು ಹಾರೈಸುತ್ತಾ ಮುಂದಿನ ಬೆಳವಣಿಗೆಗಳಿಗಾಗಿ ಕಾದು ನೋಡುವ.

ಕೊನೆಗೂ ರಶಿಯಾ ಯುಕ್ರೇನ್ ನ ಮೇಲೆ ಪೂರ್ಣ ಪ್ರಮಾಣದ ಯುದ್ದ ಘೋಷಿಸಿದೆ. ಕ್ರೈಮಿಯಾ ತರವೇ ಡಾನ್ ಬಾಸ್ ಮಾತ್ರ ಕಬಳಿಸುವ ಇರಾದೆಯೇ ಅಥವಾ ಪೂರ್ತಿ ಯುಕ್ರೇನ್ ರಶಿಯಾ ತೆಕ್ಕೆಗೆ ಬರಲಿದೆಯೆ ? ಶಾಂತಿಯುತ ಕೀವ್ ಸೇರಿದಂತೆ ಪಶ್ಚಿಮ ಯುಕ್ರೇನ್ ನ ನಿದ್ರಿಸುತ್ತಿದ್ದ ನಗರಗಳ ಮೇಲೆ ಕೂಡ ಕ್ಷಿಪಣಿಗಳ ದಾಳಿ ಕೆಲ ಸಮಯದ ಆಗಲೇ ಆರಂಭ ವಾಗಿದೆ. ಡಾನ್ ಬಾಸ್ ಪ್ರದೇಶ ಸ್ವತಂತ್ರ ಎಂದು ಮೊನ್ನೆ ಘೋಷಿಸಿದಾಗಿಂದ ಸುಮಾರು ತೊಂಬತ್ತು ಸಾವಿರಕ್ಕೂ ಹೆಚ್ಚಿನ ನಿರಾಶ್ರಿತರು ರಶಿಯಾದ ಗಡಿ ದಾಟಿದ್ದಾರೆ.
ಈಗಂತೂ ಪೂರ್ಣ ಪ್ರಮಾಣದ ಯುದ್ಧ ಶುರು ವಾಗಿದೆ. ಜಗತ್ತಿನ ಮಾರುಕಟ್ಟೆ ಕುಸಿದಿದೆ. ಈ ಮುಂಚೆ ನನ್ನ ಈಸ್ಟೋನಿಯಾ ಸಹೋದ್ಯೋಗಿ ಹೇಳಿದಂತೆ ಯುರೋಪಿ ನ ಕೆಲ ರಾಷ್ಟ್ರ ಗಳಲ್ಲಿ ಅನಿಲ ಸರಬರಾಜು ವ್ಯತ್ಯಯ ಗೊಂಡು ಬೆಲೆ ತಾರಕಕ್ಕೇರಿದೆ.
ಇದೀಗ ನ್ಯಾಟೋ ಹಾಗೂ ಅಮೇರಿಕಾದ ಮುಂದಿನ ನಡೆ ಕಾದು ನೋಡಬೇಕಿದೆ. ಇನ್ನೂ ಯುಕ್ರೇನ್ ನ್ಯಾಟೋ ಒಕ್ಕೂಟ ಸೇರಿರಲಿಲ್ಲ. ಅದನ್ನು ರಶಿಯಾ ಮುಂಚಿನಿಂದ ಪ್ರಬಲವಾಗಿ ವಿರೋಧಿಸುತ್ತಿದೆ. ರಷ್ಯಾದ ಮಿಲಿಟರಿ ಕೂಡ ಪ್ರಬಲವಾದದ್ದು ಜೊತೆಗೆ ಚೈನಾ ಬೈಲೊರಶಿಯ ಮುಂತಾದವುಗಳ ಬೆಂಬಲ ಇದೆ. ಯುಕ್ರೇನ್ ನ ಜನತೆ ಕೂಡ ದೇಶ ಭಕ್ತಿಯಲ್ಲಿ ಕಮ್ಮಿ ಇಲ್ಲ. ಪ್ರಾಣ ಹೋದರೂ ರಶಿಯಾ ವನ್ನು ಅಷ್ಟು ಸುಲಭದಲ್ಲಿ ಒಪ್ಪಲಾರರು.
ಆದರೆ ಯುದ್ಧದಿಂದ ಒಂದಕ್ಕೊಂದು ಅವಲಂಬಿತ ಜಾಗತಿಕ ಮಾರುಕಟ್ಟೆ ಮೇಲೆ ಉಂಟಾಗುವ ಪರಿಣಾಮ ಒಳ್ಳೆಯದಲ್ಲ. ಭಾರತದ ಮಾರುಕಟ್ಟೆ ಇವತ್ತು ಕುಸಿತ ಕಂಡಿದೆ.
ವಿಶ್ವದ ಎಲ್ಲ ರಾಷ್ಟ್ರಗಳೂ ಮುಂದಾಗಿ ಯುದ್ಧವನ್ನು ಹಾಗೂ ಬಿಕ್ಕಟ್ಟನ್ನು ಕೊನೆಗಾಣಿಸಬೇಕು.