ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಾಣಿಜ್ಯ ನಗರಿಯಲ್ಲೊಂದು ವೃಕ್ಷಸಂಕುಲದ ಜೀವನಾಡಿ

ವಿಶ್ವನಾಥ್ ಅಮೀನ್
ಇತ್ತೀಚಿನ ಬರಹಗಳು: ವಿಶ್ವನಾಥ್ ಅಮೀನ್ (ಎಲ್ಲವನ್ನು ಓದಿ)

ಮುಂಬಯಿ ಮಹಾನಗರ ಹಲವು ಮಾಯೆಗಳನ್ನು ಅಂತರ್ಗತ ಮಾಡಿಕೊಂಡಿರುವ ಒಂದು ಮಾಯಾನಗರಿ.ನಿರಂತರ ವಾಣಿಜ್ಯ ಹಾಗೂ ಹಣಕಾಸು ಚಟುವಟಿಕೆಗಳ ಮೂಲಕ ದೇಶದ ವಾಣಿಜ್ಯನಗರಿ, ಆರ್ಥಿಕ ರಾಜಧಾನಿ ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಒಂದು ಕಾಲದಲ್ಲಿ ಭೂಗತ ಚಟುವಟಿಕೆಗಳ ಮೂಲಕ ಕುಖ್ಯಾತಿಯನ್ನು ಪಡೆದುಕೊಂಡಿದ್ದ  ಮುಂಬಯಿ ಇದೀಗ ಬೆಳೆಯುತ್ತಿರುವ ಪ್ರವಾಸೋದ್ಯಮ,ಹೆಚ್ಚುತ್ತಿರುವ ವಾಣಿಜ್ಯ ಚಟುವಟಿಕೆಗಳು ,ವಿಭಿನ್ನ ಸಂಸ್ಕೃತಿಯ ಜನರ ವಾಸ್ತವ್ಯದ ಮೂಲಕ ವಿಶ್ವದ ಗಮನವನ್ನು ಸೆಳೆದುಗೊಂಡಿದೆ. ಒಂದು ಕಡೆ ಕೊಳಚೆಗೇರಿ ಪ್ರದೇಶಗಳು ಮತ್ತೊಂದು ಕಡೆ ಹೋಟೆಲ್ ಉದ್ಯಮ. ಮತ್ತಷ್ಟು ಆಳವಾಗಿ  ನೋಡಿದರೆ ಸಣ್ಣಪುಟ್ಟ ಉದ್ಯಮಗಳು ನಗರದ ವೈಶಿಷ್ಟತೆಗೆ ಸಾಕ್ಷಿಯಾಗಿ ನಿಂತಿವೆ. ದೇಶದ ಮೂಲೆ ಮೂಲೆಗಳಿಂದ ವಲಸೆ ಬಂದಿರುವ ಜನರಿಗೆ ಆಶ್ರಯ ಕೊಟ್ಟಿರುವ ಮುಂಬಯಿ ವಿಶ್ವದರ್ಜೆಯ ನಗರವಾಗಿ ಗುರುತಿಸಿಕೊಳ್ಳಲು ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿದೆ. ಅದೇ ಕಾರಣಕ್ಕಾಗಿ ಇಲ್ಲಿನ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಬುಲೆಟ್ ರೈಲು ಮೆಟ್ರೋ ರೈಲ್ವೆ ಯೋಜನೆಗಳ ಅನುಷ್ಠಾನ ನಗರದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ  ಭಾವಿಸಲಾಗಿದೆ. ಒಂದು ಕಡೆ ಉಪನಗರ ರೈಲ್ವೆ ಸೇವೆ ಮತ್ತೊಂದು ಕಡೆ ಪ್ರವಾಸಿಗರನ್ನು ಆಕರ್ಷಿಸುವ ವಿಶಾಲ  ಬೀಚ್ ಗಳು ಮತ್ತು ಪ್ರವಾಸಿ ತಾಣಗಳು. ಅದೆಲ್ಲದಕ್ಕೂ ಒಗ್ಗಿಕೊಂಡು ನಿಂತಿರುವ ಬಾಂದ್ರಾ ಸೀಲಿಂಕ್ ಇದೆಲ್ಲವೂ ಮುಂಬಯಿಯ ವೈಶಿಷ್ಟ್ಯತೆಗಳಿಗೆ ಹಿಡಿದ ಕನ್ನಡಿಯಂತಿದೆ. ಜನಸಂಖ್ಯೆಗೆ ತಕ್ಕಂತೆ ಬೆಳೆಯುತ್ತಿರುವ ಮಹಾನಗರಿ ವಿಶ್ವದರ್ಜೆಯ ನಗರವಾಗಿ ಗುರುತಿಸಿಕೊಳ್ಳಲು ಅಗತ್ಯ ಹಾಗೂ ಆಧುನಿಕ ತಂತ್ರಜ್ಞಾನ ಆಧರಿತ ಸೌಕರ್ಯಗಳಿಗಾಗಿ ಎದುರುನೋಡುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವ ಕಾರ್ಯಗಳು ತಡೆಯಿಲ್ಲದೆ   ನಡೆಯುತ್ತಿವೆ. ದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗುತ್ತಿರುವ ಮೆಟ್ರೋರೈಲು ಮುಂಬಯಿ ಪ್ರಗತಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಪ್ರಮುಖ  ನಗರಗಳಲ್ಲಿ ಜಾರಿಗೆ ಬಂದಿರುವಂತೆ ಮುಂಬಯಿಯಲ್ಲಿ ಕೂಡ ಮೆಟ್ರೋ ಯೋಜನೆ ನಗರ ಸಾರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸುತ್ತಿರುವoತೆ ಗೋಚರಿಸುತ್ತಿದೆ.

ಮುಂಬಯಿಯ ಜೀವನಾಡಿಯಾಗಿರುವ ಉಪನಗರ ರೈಲು ಸೇವೆಯ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ ಮಹಾನಗರದಲ್ಲಿನ ಅಂತಹ ಪರಿಸ್ಥಿತಿಯನ್ನು ಬದಲಾಯಿಸಲು ವಿವಿಧ ಹಂತಗಳ ಮೆಟ್ರೋ  ಯೋಜನೆಯನ್ನು ರೂಪಿಸಲಾಗಿದೆ. ಮಹಾನಗರದ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಭವಿಷ್ಯದಲ್ಲಿ ಸಾರಿಗೆಯ ಒತ್ತಡ ಕೂಡ ಹೆಚ್ಚಾಗಲಿದ್ದು ಅಂತಹ ಒತ್ತಡವನ್ನು ಸಮತೋಲನಕ್ಕೆ ತರುವಲ್ಲಿ ಮೆಟ್ರೋ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿದೆ. ಮೆಟ್ರೋ ದೇಶದ ದೊಡ್ಡ ನಗರಗಳ ಮುಖವನ್ನೇ ಬದಲಾಯಿಸಬಲ್ಲ ಪ್ರಮುಖ ಮೂಲಸೌಕರ್ಯ ಯೋಜನೆಯೆಂದು ಆರಂಭದಿಂದಲೂ ಬಿಂಬಿಸುತ್ತಾ ಬರಲಾಗಿದೆ.ನಗರದಲ್ಲಿ ಲೋಕಲ್ ರೈಲು ಸೇವೆ ಸಂಪರ್ಕ ಅಸಾಧ್ಯವಾಗಿರುವ ಪ್ರದೇಶಗಳಲ್ಲಿ ಈಗಾಗಲೇ ಹಲವು ಹಂತದ ಮೆಟ್ರೋ ರೈಲ್ವೆ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಈಗ ಅತ್ಯಂತ ಪ್ರಮುಖ ವೆನ್ನಲಾದ ಮೆಟ್ರೋ 3 ಯೋಜನೆ ಸಾಕಷ್ಟು ರೀತಿಯ ಗೊಂದಲ ,ವಿವಾದಗಳ ಕಾರಣ ನೆನೆಗುದಿಗೆ ಬಿದ್ದಿದೆ. ಅದಕ್ಕೆ ಮುಖ್ಯ ಕಾರಣ ಉಪನಗರ  ಗೊರೆಗಾವ್ ನ ಆರೆಕಾಲೋನಿಯಲ್ಲಿರುವ ಅರಣ್ಯಪ್ರದೇಶವನ್ನು ಈ ಯೋಜನೆಯ ಕಾರ್ ಶೆಡ್ ನಿರ್ಮಾಣಕ್ಕಾಗಿ ಆಯ್ದುಕೊಂಡಿರುವುದು.

ಪರಿಸರವಾದಿಗಳ ಪ್ರಬಲವಾದ ವಿರೋಧ ಮತ್ತು ಸ್ಥಳೀಯರ ಆಕ್ಷೇಪದ ಹೊರತಾಗಿಯೂ ಬಲವಂತವಾಗಿ ಯೋಜನೆಯನ್ನು ಅರೆಕಾಲೋನಿಯಲ್ಲಿ ಕಾರ್ಯಗತಗೊಳಿಸಲು ಒಂದಲ್ಲ ಒಂದು ರೀತಿಯ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಆರೆ ಕಾಲೋನಿ ಅರಣ್ಯ ಪ್ರದೇಶವೆಂದರೆ ಮಹಾನಗರಿ ಮುಂಬಯಿಯಲ್ಲಿ ಅತ್ಯಂತ ಅಮೂಲ್ಯವೆಂದು ಗುರುತಿಸಲ್ಪಟ್ಟ ನೈಸರ್ಗಿಕ ಪರಿಸರವಾಗಿದೆ. ಇದನ್ನು ಒಂದು ರೀತಿಯಲ್ಲಿ ನಗರದ  ವೃಕ್ಷಸಂಕುಲದ ಜೀವನಾಡಿ ಎಂದು ಕರೆದರೂ ಅಚ್ಚರಿಪಡಬೇಕಾಗಿಲ್ಲ. ದೇಶದ  ಅದೆಷ್ಟು ನಗರಗಳಲ್ಲಿ ದಟ್ಟವಾದ ಸುಂದರ ಅರಣ್ಯ ಪ್ರದೇಶಗಳನ್ನು ನಾಶಗೊಳಿಸಿ ಹಲವಾರು ಯೋಜನೆಗಳನ್ನು ಕಾರ್ಯಗತ ಗೊಳಿಸುವ ಮೂಲಕ ಹಸಿರು ವಲಯ ಪ್ರದೇಶಗಳು ವಿನಾಶದ ಅಂಚಿಗೆ ತಲುಪಿವೆ. ಆದರೆ ಮುಂಬಯಿಯಂತಹ ಬೆಳೆಯುತ್ತಿರುವ ಹೈಟೆಕ್ ಸಿಟಿಯಲ್ಲಿ ಆರೆ ಕಾಲೋನಿ ಅರಣ್ಯಪ್ರದೇಶವನ್ನು ಯಾವುದೇ  ಹಾನಿಯಾಗದ ರೀತಿಯಲ್ಲಿ ಜೋಪಾನವಾಗಿ ಕಾಯ್ದುಕೊಂಡು ಬರಲಾಗಿದೆ. ಕೇವಲ ಬೃಹದಾಕಾರದ ಗಗನಚುಂಬಿ  ಕಟ್ಟಡಗಳು, ರೈಲ್ವೆ ಮಾರ್ಗಗಳು ಮೇಲ್ಸೇತುವೆಗಳು, ಕೊಳಚೆಗೇರಿ ಪ್ರದೇಶಗಳು, ಕೈಗಾರಿಕೆಗಳು , ಉಪ್ಪುನೀರಿನ ಪ್ರದೇಶ  ತುಂಬಿಕೊಂಡಿರುವ ಮುಂಬಯಿಯಲ್ಲಿ  ವಾಯುಮಾಲಿನ್ಯದ ನಡುವೆ ಶುದ್ಧ ಗಾಳಿಯನ್ನು ಒದಗಿಸುತ್ತಿರುವ ಏಕಮಾತ್ರ ಹಸಿರು ವಲಯ ಆರೆ ಕಾಲೋನಿ. ಉಸಿರಾಡಲು ಶುದ್ಧ ಗಾಳಿ ಬೇಕು ವಾಯು ವಿಹಾರಕ್ಕಾಗಿ ಮರಗಳಿರುವ ಪ್ರದೇಶ ಉತ್ತಮ. ಮುಂಬಯಿಯಲ್ಲಿ ಅಂತಹ ಸ್ಥಳವನ್ನು ಕಾಣಬಹುದಾದರೆ ಅದು ಆರೆ ಕಾಲೋನಿ.  ಪ್ರಾಣಿ-ಪಕ್ಷಿಗಳಿಗೆ ತಂಗಲು ಆರೆ ಕಾಲೋನಿ ಅರಣ್ಯ ಪ್ರದೇಶ ಆಶ್ರಯವನ್ನು ಒದಗಿಸಿದೆ.ಇಲ್ಲಿನ  ಸ್ಥಳೀಯರು ಕೂಡ ಅಲ್ಲಿನ ಅರಣ್ಯ  ಪ್ರದೇಶದಲ್ಲಿರುವ ಅಮೂಲ್ಯ ಮರಗಳನ್ನು ಜೋಪಾನವಾಗಿ ರಕ್ಷಣೆ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ. ದೇಶದ ಪ್ರಮುಖ ಭಾಗಗಳಲ್ಲಿ ಅರಣ್ಯ ಪ್ರದೇಶಗಳು ಅತಿಕ್ರಮಣವಾಗಿ ಅಲ್ಲಿನ ವನ್ಯಜೀವಿಗಳು ನೆಲೆಯನ್ನೇ ಕಳೆದುಕೊಂಡರೆ  ಮುಂಬಯಿಯಂತಹ ಮಹಾನಗರದಲ್ಲಿ ಆರೆ ಕಾಲೋನಿ ವಿವಿಧ ಜಾತಿಯ ವನ್ಯ ಜೀವಿಗಳಿಗೆ ಆಶ್ರಯತಾಣವಾಗಿ ಉಳಿದುಕೊಂಡಿದೆ.

ಮೆಟ್ರೋ ಯೋಜನೆಗೆ ಕಾರ್ ಶೆಡ್ ನಿರ್ಮಾಣ ಮಾಡುವ ನೆಪದೊಂದಿಗೆ ಆರೆ ಕಾಲೋನಿಯ ಸುಂದರ ಪರಿಸರವನ್ನು ನಾಶ ಮಾಡಲು ಪರಿಸರವಾದಿಗಳ ವಿರೋಧದ ನಡುವೆಯೂ ಇನ್ನಿಲ್ಲದ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರವಾಗಿದೆ. ಕಾರ್ ಶೆಡ್ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗ ಆರೆ ಕಾಲೋನಿಯ ಅರಣ್ಯ ಪ್ರದೇಶದಲ್ಲಿದೆ. ಅದು ಸಾಮಾನ್ಯ ಜಾಗವಲ್ಲ.ಬೆಲೆಬಾಳುವ ಮತ್ತು ಸ್ಥಳೀಯ ಜನರು ಜೀವ ತುಂಬಿಕೊಂಡಿರುವ ಹಚ್ಚಹಸಿರು ಮರಗಳಿರುವ ಪ್ರದೇಶ ಅದು.ಮಹಾರಾಷ್ಟ್ರದಲ್ಲಿರುವ ಕೆಲವೇ ಹಚ್ಚಹಸಿರು ಕಾನನಗಳಿರುವ ಪ್ರದೇಶಗಳ ಪೈಕಿ ಈ ಆರೆ  ಕಾಲೋನಿ ವಾಣಿಜ್ಯ ನಗರಿಯಲ್ಲಿ ನೈಸರ್ಗಿಕ ಪರಿಸರದ ಜೊತೆಗೆ ಬೆಸೆದುಕೊಂಡಿರುವ ಒಂದು ಕೊಂಡಿಯಂತಿದೆ. ಸ್ಥಳೀಯ ಜನರಿಗೆ ಇಲ್ಲಿನ ಸುಂದರ ಪರಿಸರದ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ಅಲ್ಲಿರುವ ಹಚ್ಚಹಸಿರಿನ ಮರಗಳನ್ನು ಪ್ರೀತಿಸುವ ಈ ಜನರು ಅಂತಹ ವೃಕ್ಷಗಳ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿ ನಿಂತವರು. ಅದೇ ಆರೆ ಕಾಲೋನಿಯನ್ನು  ಮೆಟ್ರೋರೈಲು ಯೋಜನೆಯ ಕಾರ್ ಶೆಡ್ ನಿರ್ಮಾಣಕ್ಕಾಗಿ  ನಾಶಪಡಿಸಲು ದಿಲ್ಲಿಯಿಂದಲೇ ಪ್ರಯತ್ನ ನಡೆದಾಗ ಇಲ್ಲಿನ ಜನ , ಪರಿಸರವಾದಿಗಳು ಮತ್ತು ವಿದ್ಯಾರ್ಥಿಗಳು ಅದರ ವಿರುದ್ಧ ಸೆಟೆದು ನಿಂತು ಹೋರಾಟಕ್ಕೆ ಮುಂದಾದರು.

ಕಾರ್ ಶೆಡ್ ನಿರ್ಮಾಣಕ್ಕೆ ಇಲ್ಲಿನ ಸಾವಿರಾರು ಮರಗಳನ್ನು ಕಡಿಯಲಾಗುವುದೆಂಬ ಸುದ್ದಿ ಕೇಳಿದ ಬಳಿಕ ಇಲ್ಲಿನ ಜನರಿಗೆ ಹೃದಯವೇ ಒಡೆದು ಹೋಗುವಂತಹ ಅನುಭವವಾಗಿದೆ. ಪರಿಸರ ಕಲುಷಿತ,ಅರಣ್ಯ ನಾಶ ಪ್ರಕೃತಿ ವಿನಾಶದ ಕಾರಣ ಜಾಗತಿಕ ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿರುವ ಈ ಕಾಲದಲ್ಲಿ ಬೆಳೆದುನಿಂತ ಮರಗಳಿರುವ ಸುಂದರ ಹಸಿರು ಪರಿಸರವನ್ನು ಪ್ರೀತಿಸುವ ಜನರು ಸಿಗುವುದೇ ತುಂಬಾ ಅಪರೂಪ. ಅದರಲ್ಲೂ ಮುಂಬಯಿಯಂತಹ ಆರ್ಥಿಕ ಹಾಗೂ ಸಾಮಾಜಿಕ ಪ್ರಕಾರಗಳೆರಡರಲ್ಲೂ ಬೆಳೆಯುತ್ತಿರುವ ನಗರದಲ್ಲಿ ಹಸಿರು ಪರಿಸರಕ್ಕೆ ಸಾಕ್ಷಿಯಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಅಲ್ಲಿನ ಸ್ಥಳೀಯರು. ವೃತ್ತಿಪರರುಮತ್ತು ಪರಿಸರವಾದಿಗಳು ವಿರೋಧಿಸುತ್ತಿದ್ದಾರೆಂದರೆ ಅದರ ಹಿಂದೆ ಬಲವಾದ ಕಾರಣವೂ ಇದೆ.ಮೆಟ್ರೋ ಯೋಜನೆಗಾಗಿ ಇಲ್ಲಿ ಕೇವಲ ಒಂದೆರಡು ಮರಗಳಲ್ಲ ಸಾವಿರ ಸಾವಿರ ಸಂಖ್ಯೆಯ ಮರಗಳ ಮಾರಣಹೋಮವಾಗುತ್ತದೆ. ಈಗಾಗಲೇ ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಕಳೆದುಕೊಂಡಿರುವ  ಆರೆ ಕಾಲೋನಿಯಲ್ಲಿ ಮತ್ತೆ 3000ಕ್ಕೂ ಅಧಿಕ ಮರಗಳನ್ನು ನಾಶಪಡಿಸುವ ಬಗ್ಗೆ ಅಂದಾಜಿಸಲಾಗಿದೆ. ಅಂದರೆ ಇಲ್ಲಿನ ಎಷ್ಟು ಎಕರೆ ಪ್ರದೇಶದ ಅರಣ್ಯ ನಾಶವಾಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಒಂದು ಕಡೆ  ಆರೆ ಕಾಲೋನಿಯಲ್ಲಿ ಅರಣ್ಯ ಪ್ರದೇಶವನ್ನು ನಾಶಪಡಿಸುವ ಲಾಬಿ ಮತ್ತೊಂದು ಕಡೆ ಅರಣ್ಯಪ್ರದೇಶವನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಲಾಬಿಯ ನಡುವೆ ಕೈಗಾರಿಕೋದ್ಯಮ ನಗರದ ಹೃದಯ ಭಾಗದಲ್ಲಿರುವ ಪ್ರಮುಖ ವೃಕ್ಷ ಸಂಕುಲವೊಂದು ಕರಗಿ ಹೋಗುವಂತೆ ಮಾಡಲು ಮನಸ್ಸು ಮಾಡಿರುವುದು ಮಾತ್ರ ಸತ್ಯ. ಪರಿಸರವಾದಿಗಳ ಜೊತೆಗೆ ಸಾಮಾನ್ಯ ಜನರು ಕೂಡ  ಆರೆ ಕಾಲೋನಿಯನ್ನು ಉಳಿಸಲು ಪ್ರತಿಭಟನೆ ನಡೆಸುತ್ತಾ ಬಂದವರು. ಆರೆ ಕಾಲೋನಿಯಲ್ಲಿ ಮರಗಳನ್ನು ನಾಶಪಡಿಸುವ ಕಾರ್ಯ ನಡೆದಾಗ ಇಡೀ ಮುಂಬಯಿ ಜನತೆ ಟ್ವಿಟರ್ ,ಫೇಸ್ಬುಕ್ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ  ಆರೆ ‘ಕಾಲೋನಿ ಉಳಿಸಿ ಆಂದೋಲನ’ಕ್ಕೆ ಬೆಂಬಲವನ್ನು ನೀಡಲಾರಂಭಿಸಿದರು ಕಾರ್ ಶೆಡ್ ನಿರ್ಮಾಣಕ್ಕೆ 5000ಕ್ಕೂ ಹೆಚ್ಚು ಮರಗಳ ನಾಶವೆಂದರೆ ಇದು ಪ್ರಕೃತಿಮಾತೆಗೆ ನೀಡಲಾಗುವ ಎಷ್ಟು ದೊಡ್ಡ ಹೊಡೆತ ವಾಗಿರುತ್ತದೆ ಎಂಬುದನ್ನು ಪ್ರತಿಯೊಬ್ಬ ಪರಿಸರಪ್ರಿಯರು ಯೋಚಿಸಬೇಕಾಗಿದೆ. ಪರಿಸರ ವಿನಾಶದ ಆತಂಕದ ಕಾರಣ ಕಾರ್ ಶೆಡ್ ಯೋಜನೆಯನ್ನು ಆರೆ ಕಾಲೋನಿಯಿಂದ ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನ ನಡೆದಾಗ ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾತ್ರ ಈ ಯೋಜನೆ ಆರೆಕಾಲೋನಿಯಲ್ಲೆ ನಿರ್ಮಾಣವಾಗಬೇಕು ಎಂಬ ಲಾಬಿಯನ್ನು ಮುಂದುವರಿಸುವ ಮೂಲಕ ಪರಿಸರ ನಾಶದ  ಕಡೆಗೆ ತಮ್ಮ  ಇಚ್ಛಾಶಕ್ತಿಯನ್ನು ಪ್ರದರ್ಶಿಸಿವೆ.ಒಂದು ಕಡೆ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಪಾದಿಸುವ ಸರಕಾರ ಮತ್ತೊಂದು ಕಡೆ ತನ್ನ ಕೈಯಿಂದಲೇ ಪರಿಸರನಾಶದ ಕಡೆಗೆ ಸಾಗುತ್ತಿರುವುದು ದುರದೃಷ್ಟಕರವೆಂದೇ ಹೇಳಬೇಕಾಗುತ್ತದೆ.

ಪರಿಸರವಾದಿಗಳು ಮತ್ತು ಸ್ಥಳೀಯ ಜನರ ವಿರೋಧದ ಹೊರತಾಗಿಯೂ ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟಿನಿಂದ ಆದೇಶವನ್ನು ಪಡೆದುಕೊಂಡು ಇಲ್ಲಿ ಮರಗಳನ್ನು ನಾಶಪಡಿಸುವ ಕಾರ್ಯವನ್ನು ನಡೆಸಲಾಯಿತು.ರಾಜ್ಯದಲ್ಲಿ ಆರೆ ಕಾಲೋನಿಯಲ್ಲಿ ಕಾರ್ ಶೆಡ್ ನಿರ್ಮಾಣದ ಪರವಾಗಿದ್ದ ಸರಕಾರ ಬದಲಾಗಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆರೆ ಕಾಲೋನಿ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ನಗರದ ಹೃದಯ ಭಾಗದಲ್ಲಿರುವ ಈ ಸುಂದರ ಪರಿಸರ ಬೃಹತ್ ಕೈಗಾರಿಕೆಗಳ ನಿರ್ಮಾಣದ ಹೊರತಾಗಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವಾಗ ಈಗ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಿರುವ ವೃಕ್ಷ ಸಂಕುಲವೊಂದನ್ನು ನಾಶಪಡಿಸಿ ಅಲ್ಲಿರುವ ವಿಶೇಷವಾದ ವನ್ಯಜೀವಿಗಳನ್ನು ನೆಲೆ ಇಲ್ಲದಂತೆ ಮಾಡುವ ಪ್ರಯತ್ನ ನಡೆದಿದೆ. ಆರೆ ಕಾಲೋನಿಯ ಅಮೂಲ್ಯ ಮರಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟವನ್ನು ಚಿವುಟಿಹಾಕಲು ದೊಡ್ಡಮಟ್ಟದಲ್ಲಿ ಸಂಚು ಕೂಡ ನಡೆದಿದೆ. ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕೆ ಆರೆ ಕಾಲೋನಿಯಿಂದ ಪರ್ಯಾಯವಾದ ಜಾಗವನ್ನು ಆಯ್ದುಕೊಳ್ಳಲು ಅವಕಾಶವಿದೆ. ಮುಂಬಯಿಯ ನೈಸರ್ಗಿಕತೆಗೆ ಜೀವ ತುಂಬಿರುವ ಆರೆ ಕಾಲೋನಿ ಅರಣ್ಯ ಪ್ರದೇಶ ಮೂಲಸೌಕರ್ಯ ಯೋಜನೆಯ ನೆಪದಲ್ಲಿ ನಶಿಸಿಹೋಗಬಾರದು. ಇದು ಪರಿಸರವಾದಿಗಳು ಮತ್ತು ಮುಂಬಯಿ ಜನತೆಯ ಆಶಯ ಕೂಡ ಆಗಿದೆ. ಸಾವಿರಾರು ಸಂಖ್ಯೆಯ ಹಸಿರು ಮರಗಳನ್ನು ನಾಶಪಡಿಸಿ ಸುಂದರ ಪ್ರಕೃತಿಗೆ ಕೊಡಲಿಯೇಟು ಕೊಡುವ ಬದಲು ಮೆಟ್ರೋ ಕಾರ್ ಶೆಡ್ ಯೋಜನೆಗೆ ಪರ್ಯಾಯ ಜಾಗವನ್ನು ಆಯ್ದುಕೊಂಡರೆ ಪರಿಸರಪ್ರಿಯರ ಭಾವನೆಯನ್ನು ಗೌರವಿಸಿದಂತೆ ಆಗುತ್ತದೆ. ಯಾವುದೇ ಯೋಜನೆಗಾಗಿ ಸ್ಥಳೀಯ ಜನರು ಮತ್ತು ಪರಿಸರದ ಹಿತವನ್ನು ಬಲಿಕೊಟ್ಟು ಅಭಿವೃದ್ಧಿ ನಡೆಸುವುದು ಸೂಕ್ತವಲ್ಲ. ಆರೆ ಕಾಲೋನಿಯಲ್ಲಿ ಸುಮಾರು 5000 ಮರಗಳನ್ನು ಕಡಿದು ಅದಕ್ಕೆ  ಪರ್ಯಾಯವಾಗಿ 50 ಸಾವಿರ ಗಿಡಗಳನ್ನು ನೆಡಬಹುದು. ಆದರೆ ಗಿಡಗಳು ನೆಟ್ಟ ಮಾತ್ರಕ್ಕೆ ಮರಗಳಾಗಿ ಬೆಳೆಯಲು ಸಾಧ್ಯವಿಲ್ಲ. ಇಂತಹ ಗಿಡಗಳನ್ನು ಅದೆಷ್ಟು ವರ್ಷಗಳ ಕಾಲ ಸಾಕಿ ಬೆಳೆಸಬೇಕಾಗುತ್ತದೆ. ಇಷ್ಟೊಂದು ವರ್ಷಗಳ ಅವಧಿಯಲ್ಲಿ ಉಂಟಾಗುವ ಪರಿಸರ ಹಾನಿಯನ್ನು ಹೇಗೆ ತುಂಬಲು ಸಾಧ್ಯವಿದೆ.ಆರೆ ಕಾಲೋನಿಯ  ಮರಗಳನ್ನು ಉಳಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ದೊಡ್ಡಮಟ್ಟದ ಅಭಿಯಾನ ನಡೆಯಿತು. ಇದು ವಾಣಿಜ್ಯ ನಗರಿಯಲ್ಲಿ ಆರೆ ಕಾಲೋನಿ ಅರಣ್ಯ ಪ್ರದೇಶದ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಅಭಿವೃದ್ಧಿ ಯೋಜನೆಗಳಿಗಾಗಿ ಹಸಿರು ಪ್ರದೇಶಗಳನ್ನು ನಾಶಪಡಿಸುತ್ತಾ ಹೋದರೆ ಪರಿಸರ ಸಂರಕ್ಷಣೆಗಾಗಿ  ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಅರ್ಥವಿರಲಾರದು.

ದೇಶದಲ್ಲಿ ಅದೆಷ್ಟೋ ದೊಡ್ಡ ನಗರಗಳು ಹೈಟೆಕ್ ಸಿಟಿಗಳಾಗಿ ಬೆಳೆದಿದ್ದು ಅಂತಹ ನಗರಗಳಲ್ಲಿ ಅರಣ್ಯಪ್ರದೇಶವನ್ನು ಕಾಣಲು ಸಾಧ್ಯವಿಲ್ಲ. ಆದರೆ ಮುಂಬಯಿಯಂತಹ ಜಾಗತಿಕ ವ್ಯಾಪಾರ ತಾಣದಲ್ಲಿ ಆರೆ ಕಾಲೋನಿ ವೃಕ್ಷ ಸಂಕುಲದ ಜೀವನಾಡಿಯಾಗಿ ಗುರುತಿಸಲ್ಪಟ್ಟಿದೆ. ಜನತೆಯಿಂದ ಜನರಿಗಾಗಿ ಜನರಿಗೋಸ್ಕರ ಪರಿಸರ ಉಳಿಯಬೇಕು. ಪರಿಸರವನ್ನು ಬೆಳೆಸುವವರು ಅದರ ರಕ್ಷಣೆ ಮತ್ತು ಜೋಪಾಸನೆಯ ಹೊಣೆಗಾರಿಕೆಯನ್ನು ಕೂಡ ಹೊಂದಿರುತ್ತಾರೆ. ಆರೆ ಕಾಲೋನಿ ಅರಣ್ಯ ಪ್ರದೇಶ ಕೇವಲ ಅಲ್ಲಿನ ಜನಸಂಖ್ಯೆ ಮತ್ತು ವನ್ಯಜೀವಿಗಳಿಗೆ ಮಾತ್ರವಲ್ಲ ಇಡೀ ಜೈವಿಕ ಪರಿಸರಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಮೆಟ್ರೋ ರೈಲು ಎಂಬ ಸಾರಿಗೆನಾಡಿಗಾಗಿ  ಅರೆಕಾಲೋನಿ ಪ್ರಕೃತಿಯೆಂಬ ಇನ್ನೊಂದು ಜೀವ ನಾಡಿಯನ್ನು ನಾಶಪಡಿಸುವುದು ಸಮಂಜಸವಾಗದು.