ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಚಾರ ಸಿರಿಯಿಂದ ಸಾಹಿತ್ಯವನ್ನು ಬೆಳಗಿದ ಅಪ್ರತಿಮ ಲೇಖಕ

ಶ್ಯಾಮಲಾ ಮಾಧವ
ಇತ್ತೀಚಿನ ಬರಹಗಳು: ಶ್ಯಾಮಲಾ ಮಾಧವ (ಎಲ್ಲವನ್ನು ಓದಿ)

      ವೈಚಾರಿಕತೆಯ ದೀಪ್ತಿ ಯಿಂದ ಸಾಹಿತ್ಯ, ಶಿಕ್ಷಣ ಕ್ಷೇತ್ರವನ್ನು ಬೆಳಗಿದ ದೀಪವೊಂದು ತೈಲವಾರಿ ನಂದಿ ಹೋಗಿದೆ.

ನಮ್ಮೆಲ್ಲರ ಪ್ರಿಯ ಸಾಹಿತಿ ಕೆ.ಟಿ.ಗಟ್ಟಿ ಎಂದೇ ಖ್ಯಾತರಾದ ಕೂಡ್ಲು ತಿಮ್ಮಪ್ಪ ಗಟ್ಟಿಯವರು ಅಸಂಖ್ಯ, ಅನರ್ಘ್ಯ ಕೃತಿಗಳನ್ನು ರಚಿಸಿ ಓದುಗರ ಹೃದಯದಲ್ಲಿ ಶಾಶ್ವತವಾಗಿ ಉಳಿದವರು. ಅವರೀಗ ನಮ್ಮ ನಡುವಿನಿಂದ ನಿರ್ಗಮಿಸಿದ್ದಾರೆ.

    ಸುಧಾ ಪತ್ರಿಕೆಯಿಂದ ನಮ್ಮ ಹೃದಯದೊಳಗೆ ಇಳಿದು ಬಂದವರು, ಅಸಾಮಾನ್ಯ ಲೇಖಕ ಕೆ.ಟಿ.ಗಟ್ಟಿಯವರು. ‘ಶಬ್ದಗಳು ‘ ಕಾದಂಬರಿಯಿಂದ ತೊಡಗಿ ತಮ್ಮ‌ಕೊನೆಯ ಕೃತಿ’ ‘ಮೋಹ ಚುಂಬಿತ ಮಾಯೆ’ಯ ತನಕ ಆರು ದಶಕಗಳಷ್ಟು ಕಾಲ ಅವರು ಓದುಗರನ್ನು ಹಿಡಿದಿಟ್ಟ ಪರಿ ಅಸಾಧಾರಣವಾದುದು. ಕನ್ನಡ ವಾಙ್ಮಯವನ್ನು ಅವರು ಬೆಳೆಸಿದ ರೀತಿ ಅನನ್ಯವಾದುದು. ಬದುಕೆಂದರೆ ಬರಹವೇ ಆಗಿದ್ದ ಗಟ್ಟಿ ಅವರಿಗೆ ಬರಹವೇ ಬದುಕಾಗಿತ್ತು. ಬಾಲ್ಯದ ಬಡತನದ ಬವಣೆಯಿಂದ ಸ್ವಶಿಕ್ಷಿತರಾಗಿ ಬೆಳೆದು ಬಂದ ಅವರ ಕೈ ಹಿಡಿದುದು, ಪುಸ್ತಕಗಳು. ಯಕ್ಷಗಾನದ ಬೆನ್ನು ಹಿಡಿದು ಊರೂರು ಸುತ್ತುತ್ತಿದ್ದ ತಂದೆಯವರು ಹೊತ್ತು ತರುತ್ತಿದ್ದ ಪುಸ್ತಕಗಳು ಮತ್ತು ತಾಯಿ ಹಾಡುತ್ತಿದ್ದ ಪಾಡ್ದನಗಳು, ಮಲೆಯಾಳಿ ಪಾಟುಗಳು.

ಅವರು ರೂಪುಗೊಂಡ ಬಗೆಯನ್ನು ಅವರ ಆತ್ಮಕಥನ ‘ತೀರ’ ಗಾಢವಾಗಿ ಬಿಡಿಸಿಡುತ್ತದೆ.

       ಸುಧಾ ಪತ್ರಿಕೆ ನಮ್ಮೆದುರು ತೆರೆದಿರಿಸಿದ ‘ಶಬ್ದಗಳು’ , ‘ಕರ್ಮಣ್ಯೇ ವಾಧಿಕಾರಸ್ತೇ’, ‘ಸಾಫಲ್ಯ’ , ‘ಮೃತ್ಯೋರ್ಮಾ ಅಮೃತಂಗಮಯ:’ ‘ಅಬ್ರಾಹ್ಮಣ’ ಮುಂತಾದ ಕೃತಿಗಳ ಲೇಖಕರು ಅಜ್ಞಾತ ರಾಗಿಯೇ ಉಳಿದ ತಳಮಳ ಆಗ ನಮ್ಮದಾಗಿತ್ತು. ಆತ ಯಾರೋ ಭೌತ ವಿಜ್ಞಾನಿ ಆಗಿರಬಹುದೆಂದು ನನ್ನ ಎಣಿಕೆ ಯಾಗಿತ್ತು. ‘ಯುಧ್ಧ’, ‘ಯುಗಾಂತರ’ ಕೃತಿಗಳ ಒಡನೆ ಇಥಿಯೋಪಿಯಾದಿಂದ ಮರಳಿದ ಲೇಖಕರ ಪರಿಚಯ, ಫೋಟೋ, ವಿಳಾಸ ಲಭ್ಯವಿತ್ತು. ನನ್ನ ಮನದ ಅಸಂಖ್ಯ ಪ್ರಶ್ನೆಗಳ ಒಡನೆ ಬರೆದ ಪತ್ರ ಉಡುಪಿಯಲ್ಲಿ ಅವರನ್ನು ತಲುಪಿದ ಮರುದಿನವೇ ಅವರು ,ಸೋಮೇಶ್ವರ ಉಚ್ಚಿಲದ ನಮ್ಮ ಮನೆ ಬಾಗಿಲಲ್ಲಿ ಪ್ರತ್ಯಕ್ಷರಾಗಿದ್ದರು. ಆ ನಂಟೇ ಇಂದಿನ ವರೆಗಿನ ಸಾಹಿತ್ಯ ಸ್ನೇಹ ಬಂಧವನ್ನು ಬಿಗಿಯಿತು.

     ಗಟ್ಟಿ ಅವರು ತಮ್ಮಪ್ರಥಮ ಕೃತಿ ‘ಶಬ್ದಗಳು’ ಕಾದಂಬರಿಯಲ್ಲೇ ಮಾನವ ದೇಹದ ಸಾಧ್ಯತೆಗಳ ಬಗ್ಗೆ ವಿಚಾರ ಮಂಥನ ಮಾಡಿದವರು. ಆ ಕೃತಿಯ ಮೂಲಕ

ಓದುಗರಲ್ಲಿ ಸಂಚಲನ ಮೂಡಿಸಿದ ಅದ್ವಿತೀಯರು.ಬಳಿಕ ದೂರದ ಇಥಿಯೋಪಿಯಾದಲ್ಲಿ ಇದ್ದು, ‘ಕರ್ಮಣ್ಯೆ ವಾಧಿಕಾರಸ್ಥೆ’ ‘ಅಬ್ರಾಹ್ಮಣ’, ‘ಯುಗಾಂತರ’, ‘ಯುದ್ಧ’ ಕಾದಂಬರಿಗಳನ್ನು ಹರಿಯ ಬಿಟ್ಟವರು. ತಾಯ್ನಾಡಿಗೆ ಮರಳಿದ ಬಳಿಕ ‘ರಾಗಲಹರಿ’, ‘ಸ್ವರ್ಣಮೃಗ’, ‘ನಿರಂತರ’, ‘ಕೆಂಪು ಕಳವೆ’

ಮುಂತಾದ ಹಲವು ಕಾದಂಬರಿಗಳನ್ನೂ ಶಿಕ್ಷಣ ಸಂಬಂಧಿ ಕೃತಿಗಳನ್ನೂ, ವೈಚಾರಿಕತೆಯ ಉದ್ದೀ

ಪಕ ಉತ್ಕೃಷ್ಟ ಸಾಹಿತ್ಯವನ್ನೂ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದವರು. ಕವನ ಸಂಕಲನ, ಅನುವಾದ, ಮಕ್ಕಳ ನಾಟಕ, ತುಳು ಭಾಷೆಯಲ್ಲೂ ಕೃತಿಗಳು, ಅನುವಾದವನ್ನೂ ಕೈಗೊಂಡು ಭಾಷಾ ಸಿರಿಯನ್ನು ಮೆರೆದ ಅವರು, ಸ್ವಶಿಕ್ಷಿತರಾದವರಷ್ಟೇ ಅಲ್ಲ ತಾನೇ ಒಂದು ವಿಶ್ವವಿದ್ಯಾನಿಲಯ ಎನ್ನುವಂತೆ ಇದ್ದ ವರು. ಭಾಷಾ ಶಾಸ್ತ್ರದ, ಪ್ರಕಾಂಡ ಪಂಡಿತರು. ಆಂಗ್ಲ ವಿಶ್ವ ಸಾಹಿತ್ಯವನ್ನುಅರಗಿಸಿಕೊಂಡವರು.

     ಬದುಕು ಎಂದರೆ ಬರಹವೇ ಆಗಿರುವ ಗಟ್ಟಿಯವರ ಆಗಾಧ ಸಾಹಿತ್ಯ ಕೃಷಿ ಅವರ ಚಿಂತನಶೀಲ ಮನಸ್ಸಿನ ಪ್ರತಿಕೃತಿ. ಶಿಕ್ಷಕನೂ ಆಗಿದ್ದ ಈ ಸಾಹಿತಿಯಲ್ಲಿ ಶಿಕ್ಷಣ ಪ್ರಜ್ಞೆ ಪ್ರಖರವಾಗಿತ್ತು. ಅವರ ಆತ್ಮಕಥನ ‘ತೀರ’ದ ಮುಖ್ಯ ವಿಚಾರಸೆಲೆಯೂ ಶಿಕ್ಷಣವೇ. ಅದನ್ನು ಆತ್ಮ ಚಿಂತನವೆಂದು ಅವರು ಕರೆದುಕೊಂಡಿದ್ದಾರೆ. ನಿಜಕ್ಕೂ ಬಹುಮೂಲ್ಯ ಕೃತಿಯದು. ಒಟ್ಟು 49 ಕಾದಂಬರಿಗಳು, ಆತ್ಮಕಥನ, ನಾಲ್ಕು ಕಥಾ ಸಂಕಲನಗಳು, ಆರು ಪ್ರಬಂಧ ಸಂಕಲನಗಳು, ಒಂದು ಪ್ರವಾಸ ಸಾಹಿತ್ಯ, ಮೂರು ಕವನ ಸಂಕಲನಗಳು, ಹದಿನೇಳು ಬಾನುಲಿ ನಾಟಕಗಳು, ಹತ್ತೊಂಬತ್ತು ರಂಗನಾಟಕಗಳು, ಶಿಶು ಸಾಹಿತ್ಯದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ ಒಟ್ಟು ನಲವತ್ತು ನಾಟಕಗಳು, ತುಳುವಿನಲ್ಲಿ ಒಂದು ಕಾದಂಬರಿ , ‘ಉಷಾ ‘ಇಂಗ್ಲಿಷ್ ಕವಿತೆಗಳ ಅನುವಾದ, ಇಂಗ್ಲಿಷ್-ಕನ್ನಡ ಉಭಯ ಭಾಷಾಧ್ಯಯನದ ಎರಡು ಕೃತಿಗಳು ಶಿಕ್ಷಣದ ಬಗ್ಗೆ ಗುರುಗಳಾಗಿ, ತಂದೆ-ತಾಯಿ ಹಾಗೂ ಪೇರೆಂಟ್ ಆಸ್ ಎಜುಕೇಟರ್ಸ್’ ಎಂಬ ಮಹತ್ವದ ಕೃತಿಗಳು, ಇಂಗ್ಲಿಷ್ ವ್ಯಾಕರಣ ಹಾಗೂ ಉಪಯೋಗದ ಬಗ್ಗೆ ಐದು ಕೃತಿಗಳು.. ಇಂತಹ ಮಹತ್ವಪೂರ್ಣ,

ಅಗಾಧ ಸಾಹಿತ್ಯ ಸೃಷ್ಟಿಯ ಹಿಂದಿನ ಕರ್ತೃತ್ವ

ಶಕ್ತಿಗೆ ಸಮನಾದುದು ಬೇರೇನಿದ್ದೀತು ? ನಿನ್ನೆ-ಇಂದು- ನಾಳೆ’ ರಾಜಕೀಯ ಪ್ರಜ್ಞೆಯ ಬೃಹತ್ ಕಾದಂಬರಿ ಬಹಳ ಮುಖ್ಯವಾಗಿ ಉಲ್ಲೇಖಿಸಲೇಬೇಕಾದದ್ದು.

     ಉಜಿರೆಯ ಗುಡ್ಡಗಾಡಿನ ವನಶ್ರೀಯಲ್ಲಿ ಕೃಷಿಕನಾಗಿಯೂ ವಿಜೃಂಭಿಸಿದವರು ಗಟ್ಟಿಯವರು. ಸಾಹಿತ್ಯ ಕ್ಷೇತ್ರದ ಗಟ್ಟಿಗನನ್ನು ಮಣಿಸಿದುದು ಅಲ್ಲಿನ ಮಂಗಗಳು. ಕರಿಮೆಣಸು ಬಿಟ್ಟು ಬೇರೇನೂ ಕೈಗೆ ಸಿಗದಂತೆ ಎಲ್ಲವನ್ನೂ ಧ್ವಂಸವಾಗಿಸುವ ಮಂಗಗಳಿಗೆ ಕೊನೆಗೂ ಸೋತು ಅವರು ಕೈಚೆಲ್ಲಿದ್ದರು. ಮಂಗಗಳಿಲ್ಲದಿದ್ದರೆ ಸಾಹಿತ್ಯದೊಡನೆ ಆ ವನಶ್ರೀಯಲ್ಲಿ ಹಸುರಿನ ಕೃಷಿಯೂ ಪುಷ್ಕಳವಾಗಿರುತ್ತಿತ್ತು. ಹೋಮಿಯೋಪತಿ ವೈದ್ಯಕೀಯ ದಲ್ಲಿ ಶ್ರದ್ದೆ ಮತ್ತು ಅನುಸರಣೆ ಅವರ ಇನ್ನೊಂದು ವೈಶಿಷ್ಟ್ಯ. ಹೀಗೆ ಹಲವು ವಿಷಯಗಳಲ್ಲಿ ಆಸಕ್ತಿ ತಳೆದವರು ಗಟ್ಟಿಯವರು.

      ಮಾನವೀಯತೆಯ ಸಾಕಾರವಾಗಿದ್ದ ಕೆ.ಟಿ.ಗಟ್ಟಿ ಅವರಲ್ಲಿ ದೇವರು, ದಿಂಡರು, ಪೂಜೆ ಪುನಸ್ಕಾರಗಳಿರಲಿಲ್ಲ. ಇದ್ದುದು ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟು. ಪುಟಗಳನ್ನು ಬಿಡಿ ಬಿಡಿ ವಾಕ್ಯಗಳನ್ನು ಓದದೆ ಇಡಿಯ ಪುಟವನ್ನು ನೆಹರೂ ಅವರಂತೆ ಶೀಘ್ರವಾಗಿ ಗ್ರಹಿಸುವ ಬಗೆ ಅವರ ಅನನ್ಯತೆ, ಅದನ್ನು ಎಲ್ಲರಿಗೂ ತಿಳಿಸಿ ಕೊಟ್ಟಿದ್ದರು. ಭಾಷಾ ಶಾಸ್ತ್ರದ ಅರಿವಿದ್ದ ಅವರು ಇಂಗ್ಲಿಷ್ ಉಚ್ಚಾರದ ಬಗೆಗೂ ಉತ್ತಮ ಪರಿಜ್ಞಾನ ಹೊಂದಿದ್ದರು. ಅವರ ಅಬ್ರಾಹ್ಮಣ’, ‘ಕರ್ಮಣ್ಯೇ ವಾಧಿಕಾರಸ್ತೇ’ ಕೃತಿಗಳು ಸಾಮಾಜಿಕ ಸಂಚಲನವನ್ನೇ ಉಂಟು ಮಾಡಿದ್ದವು ಎನ್ನಲಡ್ಡಿಯಿಲ್ಲ. ಅವರ ಅಷ್ಟೂ ಕಾದಂಬರಿಗಳಲ್ಲಿ ಜನರ ಹೆಸರಾಗಲಿ, ಸ್ಥಳನಾಮಗಳಾಗಲೀ ಎಲ್ಲೂ ಪುನರಾವರ್ತನೆ ಆದುದು ಎಂಬುದೇ ಇಲ್ಲ. ಪಯಣದ ಆರಂಭದಲ್ಲಿ ಶುರುವಾಗುವ ಕಥೆ, ಕಾದಂಬರಿಯ ಮೊಳಕೆ ಬಸ್ ಇಳಿಯುವಾಗ ಪೂರ್ಣ ಹಂದರವಾಗಿ ರೂಪುಗೊಳ್ಳುತ್ತದೆ. ಎಂದು ಅವರು ಅನ್ನುತ್ತಿದ್ದರು. ಅತ್ಯಂತ ಬಡ, ಹಿನ್ನೆಲೆಯಿಂದ ಬಂದ ಗಟ್ಟಿಯವರ ಬೌದ್ಧಿಕ ಶ್ರೀಮಂತಿಕೆ ಅಪಾರ.

   ಉಜಿರೆಯ ವನಶ್ರೀಯಲ್ಲಿದ್ದಾಗ ಸಾಹಿತ್ಯ, ತೋಟದ ಕೃಷಿಯಲ್ಲಿ ನಿರಂತರ ತೊಡಗಿಕೊಂಡಿರುತ್ತಿದ್ದ ಗಟ್ಟಿಯವರು ನನ್ನನ್ನು ಕಂಪ್ಯೂಟ‌ರ್ ಬಳಕೆಗೂ ಪ್ರೇರೇಪಿಸಿದವರು. ಅರ್ಧಗಂಟೆಯಲ್ಲಿ ನೀವದರಲ್ಲಿ ಮಾಸ್ಟರ್ ಆಗ ಬಹುದು ಎಂದು ಹುರಿದುಂಬಿಸಿದವರು. ಹಾಗೆ ಆಧುನಿಕ ತಾಂತ್ರಿಕತೆ ಬಗ್ಗೆ ಮನದ ಮೂಲೆಯಲ್ಲ್ಲಿ ಕುತೂಹಲ ತೆರೆದಿಟ್ಟುಕೊಂಡಿದ್ದವರು.

   ನನ್ನ ಆರಂಭದ ಕೃತಿಗಳು ಬೆಳಕು ಕಾಣಲು ಕಾರಣರಾದವರು, ಸಾವಿರದ ಹನ್ನೆರಡು ಪುಟಗಳ ನನ್ನ ‘ಗಾನ್ ವಿತ್ ದ ವಿಂಡ್’ನ ಮಹಾಗಾತ್ರದ ಹಸ್ತಪ್ರತಿಯನ್ನು ಹೊತ್ತೊಯ್ದು ಬೆಂಗಳೂರ ಪ್ರಕಾಶಕರ ಕೈಯಲ್ಲಿಟ್ಟು ಅದು ಬೆಳಕಿಗೆ ಬರಲು ಕಾರಣರಾದವರು,ನನ್ನ ವಿಶ್ವಸಾಹಿತ್ಯ ಕೃತಿಗಳಿಗೆ ಮುನ್ನುಡಿ ಬರೆದವರು ನಮ್ಮ ಕೆ.ಟಿ.ಗಟ್ಟಿಯವರು.

   ಗಟ್ಟಿಯವರು ಮತ್ತವರ ಪತ್ನಿ ಯಶೋದಾ ಬರೆದ ಅಸಂಖ್ಯ ಪತ್ರಗಳು ನನ್ನ ಪತ್ರ ಭಂಡಾರದಲ್ಲಿ ಅನರ್ಘ್ಯ ನಿಧಿಯಾಗಿ ಉಳಿದಿವೆ. ಮಕ್ಕಳು ಚಿತ್‌ಪ್ರಭಾ, ಸತ್ಯಜಿತ್, ಪ್ರಿಯಾ ನನ್ನ ಮಕ್ಕಳಂತೆ ಪ್ರಿಯರಾಗಿ ಉಳಿದಿದ್ದಾರೆ.

ವೈಚಾರಿಕತೆಯ ಪ್ರದೀಪ, ಶಿಕ್ಷಣದ ಹೊಂಗಿರಣ ಕೆ.ಟಿ.ಗಟ್ಟಿ ಎಂಬ ಪ್ರಖರ ಸೂರ್ಯ ಇಂದು ಅಸ್ತಂಗತರಾಗಿದ್ದಾರೆ.

ಕೊರೊನಾ ಕಾಲದ ನಿರ್ಬಂಧ ಹಲವರನ್ನು ಮೂಲೆಗುಂಪಾಗಿಸಿದಂತೆ ನಮ್ಮ ಗಟ್ಟಿಯವರೂ ನಿಶ್ಚೇತನರಾಗುತ್ತಾ ನಡೆದರು. ನನ್ನ ಸಾಹಿತ್ಯ ಸ್ನೇಹ ಬಂಧ, ನನ್ನೆಲ್ಲ ಸಾಧನೆಗಳಿಗೆ ಮೂಲಾಧಾರವಾಗಿದ್ದ ಅವರ ಅಗಲಿಕೆ ನನ್ನ ಪಾಲಿಗಂತೂ ತುಂಬಲಾರದ ನಷ್ಟ .ಗಟ್ಟಿಯವರು ನಮ್ಮ ಸಾಹಿತ್ಯ ಕ್ಷೇತ್ರದ ಅನರ್ಘ್ಯ ನಿಧಿ. ಅವರನ್ನು ಕನ್ನಡ ನಾಡು ಹೇಗೆ ಕಂಡಿತು ಎಂಬ ಬಗ್ಗೆ ಮಾತು ಅನಗತ್ಯ. ಅವರು ಅಂತಹ ವಿಚಾರಗಳಿಗೆ ಹೊರತಾಗಿ ಬದುಕಿದವರು. ಕೇವಲ ಸಾಹಿತ್ಯವನ್ನೇ ಕೊನೆವರೆಗೂ ಉಸಿರಾಡಿ ఇల్లింద ಹೊರಟವರು. ಆದರೆ ಅವರ ಸಾಹಿತ್ಯ ಕೃತಿಗಳು, ವಿಚಾರಧಾರೆ ಮೂಲಕ ಸಾಹಿತ್ಯಾಸಕ್ತರೆಲ್ಲರ ಹೃದಯಗಳಲ್ಲಿ ಸದಾ ಜ್ವಲಂತರಾಗಿರುವವರು. ಅದರಲ್ಲಿ ಎರಡು ಮಾತಿಲ್ಲ

# ಶ್ಯಾಮಲಾ ಮಾಧವ ಮುಂಬೈ