ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವೈಶಾಖದ ಕಲ್ಯಾಣಿ ಲಕ್ಕಾರನ್ನು ನೆನಪಿಸಿದ ಸಾಂಕ್ರಾಮಿಕ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಕೊರೊನಾ ಎರಡನೆ ಅಲೆ ಬರುತ್ತೆ! ಬರಲ್ಲ!ಬರಬಾರದು! ಬಂದರೂ ವ್ಯಾಕ್ಸ್ಇನೇಷನ್ ಸಿಕ್ಕಿದೆ ತೊಂದರೆಯಿಲ್ಲ! ಇತ್ಯಾದಿ ಇತ್ಯಾದಿ ವಾದಗಳ ನಡುವೆಯೂ ಕೊರೊನಾ ಎರಡನೆ ಅಲೆ ಇನ್ನಿಲ್ಲದ ಹಾಗೆ ಕಾಡುತ್ತಿದೆ. ಉಸಿರನ್ನೆ ಹಿಡಿದು ನಲುಗಿಸುತ್ತಿದೆ. ರೂಪಾಂತರಿಯಾಗಿರುವ ಈ ಕೊರೊನಾ ತಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲಿದವರು ಎನ್ನುವ ಸುದ್ದಿಯನ್ನು ಗಮನಿಸುತ್ತಿದ್ದೇವೆ ಆಮ್ಲಜನಕ ,ಕೊರತೆಯೋ, ಹಾಸಿಗೆ ಸಿಗುವುದು ತಡವೋ ಅಥವಾ ಭಯಬಿದ್ದು ಆಸ್ಪತ್ರೆಗಳಿಗೆ ಹೋಗದೆ ಉಸಿರಾಟದ ಸಮಸ್ಯೆ ಉಲ್ಬಣಿಸಿದ ನಂತರ ಕಡೆ ಹಂತದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ! ಆದರೆ ಸಾವುಗಳು ನಮ್ಮನ್ನು ಕಂಗೆಡಿಸುತ್ತಿವೆ.


ಈಗ್ಗೆ ಏಳು ದಿನಗಳ ಹಿಂದೆ ಗೊತ್ತಾದ ಸುದ್ದಿ ಪ್ರಕಾರ ಮುನ್ನೆಲೆಯ ಕೊರೊನಾ ವಾರಿಯರ್ ಬೆಂಗಳೂರಿನ ಪೊಲೀಸ್ ಒಬ್ಬರು ಕೋವಿಡ್ ಕಾರಣಕ್ಕೆ ತಮ್ಮ ತಾಯಿಯನ್ನು ಕಳೆದುಕೊಂಡು ಚಿತಾಗಾರದ ಬಳಿ ಶವ ಬಂದ ಆ್ಯಂಬ್ಯುಲೆನ್ಸ್ ಬಂದಾಗ ಆ ಆ್ಯಂಬ್ಯುಲೆನ್ಸ್ ಹಿಡಿದು ಬಿಕ್ಕಿ ಬುಕ್ಕಿ ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಹಾಸನದ ಹಿಮ್ಸ್ ಆಸ್ಪತ್ರೆಯಲ್ಲೂ ಕೊರೊನಾ ಬಂದು ಉಸಿರಾಟದ ಸಮಸ್ಯೆಯಿಂದ ನರಳಾಡುವ ಅಮ್ಮನನ್ನು ನೋಡಲಾರದ ಮಗ ಆಸ್ಪತ್ರೆಯ ಏಳನೆ ಮಹಡಿಗೆ ಹೋಗಿ ನೇಣು ಬಿಗಿದುಕೊಂಡಿದ್ದಾರೆ . ಈ ಸುದ್ದಿಗಳು ಸಾವುಗಳು ಎಂಥವರ ಕಣ್ಣುಗಳನ್ನೂ ಕೂಡ ಆರ್ದ್ರಗೊಳಿಸುತ್ತವೆ.
ಕೊರೊನಾ ವಾರಿಯರ್ ಪೊಲೀಸ್ ಒಬ್ಬರು ತಮ್ಮ ತಾಯಿಯ ಶವಕಂಡು ದುಃಖಿಸುವಾಗ ತಕ್ಷಣಕ್ಕೆ ನೆನಪಾದದ್ದೆ ಚದುರಂಗರ ಈ ‘ವೈಶಾಖ’ ಕಾದಂಬರಿ.

ಇಂಥ ಸನ್ನಿವೇಶ ವೈಶಾಖ ಕಾದಂಬರಿಯ ಕಡೆ ಭಾಗದಲ್ಲಿದೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸ್ವ ಪ್ರಶಸ್ತಿಗಳೂ ಸಂದಾಯವಾಗಿವೆ. ಪೋಲಿಸ್ ಒಬ್ಬರ ತಾಯಿ ಕೊರೊನಾದಿಂದ ಮರಣಿಸಿದಂತೆ ‘ವೈಶಾಖ’ ಕಾದಂಬರಿಯಲ್ಲಿಯೂ ಪ್ಲೇಗ್ ಮಾರಿಗೆ ಬಲಿಯಾದ ಅಮ್ಮ ಕಲ್ಯಾಣಿ. ಆಕೆಯ ಸಂಸ್ಕಾರ ಮಾಡುವ ಮಗ ಲಕ್ಕಾನ ಸನ್ನಿವೇಶ ಬರುತ್ತದೆ. ಲಕ್ಕಾ ಕಾರಣಾಂತರಗಳಿದ ಬಹಿಷ್ಕಾರಕ್ಕೆ ಒಳಗಾಗಿರುತ್ತಾನೆ. ತಾಯಿ ಕಲ್ಯಾಣಿ ಮಗನನ್ನು ಆ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗದೆ ಊರಿನವರ ಕಣ್ಣು ತಪ್ಪಿಸಿ ದಿನವೂ ಎರಡೆರಡು ರೊಟ್ಟಿ ಮಾಡಿಮಾಡಿ ಅವುಗಳ ನಡುವೆ ಉಳ್ಳೀಜುನುಕ (ರೊಟ್ಟಿಯೊಂದಿಗೆ ತಿನ್ನಲು ಕಡಲೆ ಹಿಟ್ಟಿನಿಂದ ತಯಾರಿಸಿದ ಖಾದ್ಯ, ಈ ಕಾದಂಬರಿಯಲ್ಲಿ ಹುರುಳಿ ಕಾಳಿನಿಂದ ಮಾಡಿದ ಖಾದ್ಯ) ಸೇರಿಸಿ ಸ್ಯಾಲೆ ನೆರೆಗೆ ಸಂದಿಗೆ ಸಿಕ್ಕಿಸಿ ಮಗನಿಗೆ ಕೊಟ್ಟು ಬರುತ್ತ ಇರುತ್ತಾಳೆ. ಮಗನೂ ಬೇಡ ಬೇಡವೆಂದೇ ತಿನ್ನುತ್ತಿರುತ್ತಾನೆ.

ಅಧ್ಯಾಯ ಮೂವತ್ತೇಳರಲ್ಲಿ ಕಾದಂಬರಿಕಾರು ಆಕೆಯ ಆರೋಗ್ಯ ಸನ್ನಿವೇಶವನ್ನು ಹೀಗೆ ವಿವರಿಸುತ್ತಾರೆ. ‘ಬದುಕು ಇಂಗೆ ಮಂಠಾಡಿಕೊಂಡೇ ವಾರದ ಮೇಲೆ ವಾರ ಅದರ ಮೇಲೆವಾರ ಕಳಿತು . ಕದ್ದು ಕದ್ದು ಕಲ್ಯಾಣಿ ಲಕ್ಕಂಗೆ ರಾಗಿರೊಟ್ಟಿ ಜಿನಕಾನೊ, ಖಾರನೊ ಅವೆರಡು ರೊಟ್ಟಿ ವಳಿಗಿಟ್ಟು, ತನ್ನ ಸೀರೆ ನೆರಿಗೆಗೆ ಸಿಕ್ಕಿಸಿ ತಕ್ಕೋಂಡೋಗದ ಮಾತ್ರ ನಿಲ್ಲಿಸಲಿಲ್ಲ ಆದರೆ ಈಚೆಗೆ ನಾಕೈದು ಜಿನದಿಂದೊಳ ಜ್ವರ ಬಂದು ಅವಳು ಪೂರ ಸೋತಿದ್ದಳು ಸಿವುನಿ “ ಇದ್ಯಾನವ್ವ ನಿನ್ನ ಮೈಯಿ ನಾಕು ಜಿನದಿಂದಲೂವೆ ಕುದ್ದೋಯ್ತಾ ಕುಂತದೆ, ಈ ಸ್ತಿತಿಲಿ ನೀ ರೊಟ್ಟಿ ತಕ್ಕಂಡು ಅಣ್ಣನ್ನ ತಾವಿಗೆ ಹ್ವಾಗದು ಬ್ಯಾಡ, ಜ್ವರ ಬುಟ್ಟ ಮ್ಯಾಲೆ ಹ್ವಾಗೀವಂತೆ” ಎಂದು ತಡೆದರೂ ಆಕೆ ಛಲ ಬಿಡದೆ ಮಗನ್ನು ನೋಡಲು ಹೊರಟಳು. ನಾಕು ಜಿನದಿಂದ ಎಡದ ಕಂಕುಳಲ್ಲಿ ಅದೇನೊ ಕುರದಂಗೆ ಎದ್ದು ಬುಟ್ಟು ಕಲ್ಯಾಣಿಗೆ ಅದು ಬ್ಯಾರೆ ಬಾಯಿ ಬಡಿದುಕೊಳ್ಳುವಷ್ಟು ನೋವು.ನಂಜೇಗೌಡರ ಹೊಲದ ತೆವರೀಲಿ ಇದ್ದ ಬ್ಯಾಲದ ಮರಗಿ ಒರಗಿ “ಮರದ ಹಣ್ಣ ಅದೇಟು ತಿಂದಿದ್ನೊ” ಎನ್ನುತ್ತಲೆ ಅಲ್ಲಯೇ ಮಲಗಿಕೊಳ್ಳಬೇಕೆನ್ನಿಸಿ “ ಕುಂತಿದ್ದಂಗೇಯ ವಕ್ಕಡೀಕೆ ಮಂಟಿಗಂಡಿದ್ಲು”. ಅಂದರೆ ಜರ ಹಾಗು ಗೆಡ್ಡಯ ದೆಸೆಯಿಂದ ಆಕೆ ಸಾವನ್ನಪ್ಪಿದ್ದಳು ಎಂದು ಕಾದಂಬರಿಕಾರರು ಬರೆಯುತ್ತಾರೆ.

ಕಾದಂಬರಿಕಾರು ಅಧ್ಯಾಯ ಮೂವತ್ತೆಂಟರಲ್ಲಿ ‘ಸಿವಿನಿಗೆ ತನ್ನ ತಾಯಿ ಸತ್ತದ್ದು ಪ್ಲೇಗಿನಿಂದಲೇ ಎಂಬುವುದು ಈಗ ಖಚಿತವಾಗಿತ್ತು. ಕಲ್ಯಾಣಿಯ ಕಂಕುಳಲ್ಲಿ ಎದ್ದಿದ್ದ ಗಂಟೇ ಅವಳ ನಂಬಿಕೆಗೆ ಪ್ರಮಾನವಾಗಿತ್ತು’ ಎಂದು ಬರೆಯುತ್ತಾರೆ.( ಪ್ಲೇಗನ ವಿಧಗಳಲ್ಲಿ ಒಂದಾದ “ಗಡ್ಡೆ ಪ್ಲೇಗ್” ಕಾರಣಕ್ಕೆ ಮರಣಿಸುತ್ತಾಳೆ) ತಾಯಿ ಸತ್ತ ಸುದ್ದು ಲಕ್ಕಾನಿಗೆ ತಿಳಿದ ಮೇಲೆ ಆತ ಬೇಗ ಆ ಶವವನ್ನು ಕಲ್ಲುಮಂಟಿಗೆ ತೆಗೆದುಕೊಂಡು ಹೋಗುತ್ತಾನೆ. ಅವುಗಳ ಕಾಲುಗಳನ್ನು ಮಡಿಸಿ ಕೂರಿಸಲು ನೋಡುತ್ತಾನೆ ಆದರೆ ಅವು ಆಗಲೆ ಬಿಗಿದುಕೊಂಡಿರುತ್ತವೆ. ಸಾಕು ನಾಯಿ ಬೊಡ್ಡ ಆ ಶವದ ಕಾಲಗಳ ನೆಕ್ಕುತ್ತಾ ಇರುತ್ತದೆ. ಹಾಗೆ ಅದು ಶವದ ನೆರಿಗೆಗಳನ್ನು ಎಳೆದಾಗ ನೆರಿಗೆ ಬಿಚ್ಚಿ ರೊಟ್ಟಿಗಳು ಕೆಳಕ್ಕೆ ಬೀಳುತ್ತವೆ. ರೊಟ್ಟಿ ಕಚ್ಚಿಕೊಂಡು ಅವರ ಸಾಕು ನಾಯಿ ಓಡಿ ಹೋಗುತ್ತದೆ. ಲಕ್ಕಾ ತಾಯಿಯ ಸೀರೆಯ ನೆರಿಗೆಗಳನ್ನು ಸರಿ ಮಾಡುವಾಗ ತಾಯಿಯ ಹೊಕ್ಕಳ ಸುತ್ತ ರೊಟ್ಟಿ ಅಗಲಕ್ಕೆ ಸುಟ್ಟ ಗಾಯದ ಕಲೆ ಕಪ್ಪಗೆ ಕಾಣಿಸುತ್ತದೆ. ಆಗ ಲಕ್ಕನಿಗ ಅನ್ನಿಸುತ್ತದೆ ದಿನವೂ ಬಿಸಿ ರೊಟ್ಟಿಯನ್ನು ಅಮ್ಮ ಹೇಗೆ ತರುತ್ತ ಇದ್ದಳು ಎಂದು . ಆತ ದಿವೂ ಕೇಳುತ್ತಿರುತ್ತಾನೆ. ರೊಟ್ಟಿ ಅದು ಹೇಗೆ ಬಿಸಿ ಇರುತ್ತದೆ ಎಂದು. ಅದಕ್ಕೆ ಕಲ್ಯಾಣಿ ಯಾವಾಗಲೂ ಹಾರಿಕೆಯ ಉತ್ತರವನ್ನೇ ಕೊಡುತ್ತಿರುತ್ತಾಳೆ. ಇನ್ನೂ ರೊಟ್ಟಿ ಬಿಸಿಯಾಗಿರುವಾಗಲೆ ರೊಟ್ಟಿ ಮಡಿಸಿ ತನ್ನ ಸೀರೆಯ ನೆರಿಗೆಗೆ ಸಿಕ್ಕಿಸಿ ತೆಗೆದುಕೊಂಡು ಹೋಗುತ್ತಿದ್ದಳು.ಅವಳಿಗೆ ದಿನದಲ್ಲಿ ಒಂದು ಹೊತ್ತದರೂ ಮಗ ಅಮ್ಮನ ಕೈಯ ರೊಟ್ಟಿಗಳನ್ನು ತಿನ್ನಬೇಕೆಂದು ಇರುತ್ತದೆ.

ತಾಯಿಯ ಶವ ಸಂಸ್ಕಾರ ಮಾಡುವ ಕಾಲಕ್ಕೆ ಕಾದಂಬರಿಕಾರರು “ಅವ್ವನ ವೊಟ್ಟೆಗೆ ಮೊಕ ಆಂತು ಲಕ್ಕ ಕಣ್ಣೀರಿನಿಂದ್ಲೆ ಅವ್ವನ ವೊಟ್ಟೆ ತೊಳೀತಿದ್ದ ಅಂಗಿರುವಾಗ ಅವ್ನ ಮನಸ್ಸು ಇಂದಕೆ ಇಂದಕೋಯ್ತು” ಎಂದು ಬರೆಯುತ್ತಾರೆ. ಅಂದರೆ ಅವ್ವ ಅವನನ್ನು ಕೂಲಿ ಮಾಡಿ ಸಾಕಿದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಅಂತು ಪ್ಲೇಗ್ ಕಲ್ಯಾಣಿ ಮತ್ತು ಮಗ ಲಕ್ಕಾನನ್ನು ಬೇರ್ಪಡಿಸಿತ್ತು. ಎಂಥ ನೋವಿನ ಸಂಗತಿ ಅಲ್ಲವೆ! ಆಂಧ್ರ ಪ್ರದೇಶದ ತಾಯಿಯ ಶವವನ್ನು ಸಾಗಿಸಲು ಆ್ಯಂಬ್ಯುಲೆನ್ಸ್ ಸಿಗದೆ ಇದ್ದಾಗ ಸ್ವತಃ ಬೈಕ್ನಲ್ಲಿಯೇ ಶವವನ್ನು ಸಾಗಿಸಿದ ದೃಶ್ಯವಂತೂ ಹೀಗೂ ಆಯಿತೇ ಅನ್ನಿಸುತ್ತದೆ. ನಾಗರೀಕ ಬದುಕಿನ ಶೈಲಿ ಉನ್ನತಿಯಿಂದ ಧೀಢೀರನೆ ಅವನತಿಯತ್ತ ಹೊರಳಿಬಿಡುತ್ತಿದೆಯೋ ಎಂಬ ಸಂಶಯ ನಮ್ಮನ್ನು ಕಾಡದೆ ಇರುವುದಿಲ್ಲ.

ಸುಮಾವೀಣಾ
ಹಾಸನ