ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಮತೋಲನದ ಎಡ ಮತ್ತು ಬಲ

ಮಹಾದೇವ ಕಾನತ್ತಿಲ
ಇತ್ತೀಚಿನ ಬರಹಗಳು: ಮಹಾದೇವ ಕಾನತ್ತಿಲ (ಎಲ್ಲವನ್ನು ಓದಿ)

ಇರುವೆ ನಡಿಗೆ – ೪

ಇದುವರೆಗೆ :

ಇರುವ ಸ್ಥಿತಿಯೂ, ಸದಾ ಚಲನಶೀಲ ವಿದ್ಯಮಾನಗಳೂ ತುಂಬಿದ ಜಗತ್ತು. ಇರುವಿಕೆಯದ್ದು ಅವಸ್ಥೆಯಾದರೆ ಮತ್ತು ಚಲನಶೀಲತೆಗೆ ಅಗತ್ಯವಾದದ್ದು ವ್ಯವಸ್ಥೆ. ಚಲನಶೀಲತೆ, ಕ್ರಿಯೇಟಿವಿಟಿ, ಬದಲಾವಣೆ, ವಿಕಸನ ಇವುಗಳೆಲ್ಲವೂ ನ್ಯಾಚುರಲ್ ಆಗಿ ಸಂಭವಿಸಲು, ಗ್ರೇಡಿಯಂಟ್ ಮುಖ್ಯ.

ಡಾ. ಮಹಾದೇವ ಕಾನತ್ತಿಲ

ಸಮತೋಲನದ ಎಡ ಮತ್ತು ಬಲ

ನಿಮ್ಮ ಮನೆಯಲ್ಲೊಂದು ಮುದ್ದು ಮಗು ಹುಟ್ಟಿದೆ. ಆರೆಂಟು ತಿಂಗಳಾದಾಗ ಅದು ಅಂಬೆಗಾಲಿಕ್ಕಿ ನಂತರ ಹಜಾರದಲ್ಲಿ ಮೊದ ಮೊದಲು ನಡಿಗೆ ಆರಂಭ ಮಾಡುವಾಗ ಧೊಪ್ ಅಂತ ಬೀಳುತ್ತದೆ, ಒಮ್ಮೊಮ್ಮೆ ಎಡಕ್ಕೆ, ಒಮ್ಮೊಮ್ಮೆ ಬಲಕ್ಕೆ. ಎಡಕ್ಕೆ ಹೆಚ್ಚು ವಾಲಿದರೆ ಎಡಕ್ಕೂ, ಬಲಕ್ಕೆ ವಾಲಿದರೆ ಬಲಕ್ಕೂ ಬೀಳುವುದು ಸಹಜ. ಹಾಗೆ ಬಿದ್ದೂ ಎದ್ದೂ ಮಗು ನಡಿಗೆ ಕಲಿಯುತ್ತೆ. ನಡೆಯುತ್ತೆ. ತನಗರಿವಿಲ್ಲದೆಯೇ ಬ್ಯಾಲೆನ್ಸ್, ಸಮತೋಲನವನ್ನು ಮಗು ನಡೆಯುತ್ತಾ ಕಲಿಯುತ್ತದೆ.

ನಮ್ಮ ದೇಹದ ಭಾರ ಎಡಕ್ಕೆ ವಾಲಿದರೆ, ಅದನ್ನು ಕೂಡಲೇ ಬಲಭಾಗದತ್ತ ಸೆಳೆಯುವ ಶಕ್ತಿ ಬೇಕು. ಹಾಗೆಯೇ ಬಲಕ್ಕೆ ವಾಲಿದರೆ ಅದನ್ನು ಎಡದಿಕ್ಕಿಗೆ ಸೆಳೆಯುವ ಬಲವೂ ಬೇಕು. ಹಾಗಾದಾಗ ಮಾತ್ರ ನಡಿಗೆಯಲ್ಲಿ ಸಮತೋಲನ ಸಾಧ್ಯವಾಗುತ್ತೆ. ಈ ಎರಡೂ ಬಲಗಳು ಒಂದಕ್ಕೊಂದು ವಿರುದ್ಧವಾದವುಗಳಾದರೂ ಪರಸ್ಪರ ಪೂರಕವಾಗಿ ಕೆಲಸಮಾಡುವವು. ನಡಿಗೆಯಲ್ಲಿ ಸಮತೋಲನ ಕಾಪಾಡಲು ಎರಡೂ ಬಲಗಳು ಅಗತ್ಯವಾದವುಗಳು.

ನಮ್ಮ ದೇಹದ ಒಟ್ಟೂ ಸಮೀಕರಣದಲ್ಲಿಯೂ ಎಡ ಪಾರ್ಶ್ವ ಮತ್ತು ಬಲಪಾರ್ಶ್ವ ವನ್ನು ನಿಯಂತ್ರಿಸುವ ಎರಡು ಬಲಗಳು ಏರುಪೇರಾಗಿ ಅಸಮತೋಲನವಾದಾಗ ಪಕ್ಷವಾತ, ಪಾರ್ಶ್ವವಾಯು ( ಪ್ಯಾರಾಲೈಸಿಸ್) ಎಂಬ ಖಾಯಿಲೆ ಬರುತ್ತೆ ಅಲ್ಲವೇ?. ನಮ್ಮ ನಾಲಿಗೆಯನ್ನು ಉಪಯೋಗಿಸಿ ನಾವು ಆಡುವ ಮಾತಿನಲ್ಲೂ ಈ ಎಡ ಮತ್ತು ಬಲ ದ ಬಲಗಳ ಸಮತೋಲಿತ ಪ್ರಯೋಗ, ಸ್ಪಷ್ಟ ಉಚ್ಛಾರಣೆಗೆ ಅಗತ್ಯ. ಪ್ಯಾರಾಲಿಟಿಕ್ ಅಟ್ಯಾಕ್ ಆಗಿ ಸ್ವಲ್ಪವೇ ಚೇತರಿಸಿಕೊಂಡ ವ್ಯಕ್ತಿ ಮಾತಾಡುವಾಗ ನಾಲಿಗೆ ಒಂದು ಕಡೆಗೆ ಹೆಚ್ಚು ಸೆಳೆಯಲ್ಪಟ್ಟು ತೊದಲುವುದು ನೀವು ಗಮನಿಸಿರುತ್ತೀರಿ.

ಚಾಲಕ ಕಾರನ್ನು ನಡೆಸುವಾಗ ಮೊದಲು ಆಕ್ಸಲರೇಟರ್ ಅನ್ನು ಒತ್ತುತ್ತಾನೆ. ಅದು ವೇಗವರ್ಧಕ. ಕಾರು ವೇಗವಾಗಿ ಗಮಿಸತೊಡಗಿದಾಗ ಅಚಾನಕ್ ಆಗಿ ಎದುರುಗಡೆ ಒಂದು ಲಾರಿ ಬರುತ್ತಿದೆ!. ಕೂಡಲೇ ಚಾಲಕ ಬ್ರೇಕ್ ಒತ್ತಿ ಗಾಡಿಯನ್ನು ನಿಧಾನವಾಗಿಸಿ ಲಾರಿಗೆ ಸೈಡ್ ಕೊಡುತ್ತಾನೆ. ಬ್ರೇಕ್ ಇಲ್ಲವಾದಲ್ಲಿ ಆಕ್ಸಿಡೆಂಟ್ ಆಗಿ ಕಾರಿನ‌ ನಡಿಗೆ ನಿಯಂತ್ರಣ ತಪ್ಪುತ್ತಿತ್ತು. ಗಾಡಿಯಲ್ಲಿ ಬ್ರೇಕ್ ಇದೆ, ಆಕ್ಸಲರೇಟರ್ ಕೆಲಸ ಮಾಡುತ್ತಿಲ್ಲವಾದರೆ, ಕಾರು ಚಲಿಸುತ್ತಲೇ ಇರುತ್ತಿರಲಿಲ್ಲ. ಅದು ನಿಂತಲ್ಲೇ ಸ್ಥಿತವಾಗಿರುತ್ತಿತ್ತು.

ಕಾರಿನ ನಿಯಂತ್ರಿತ ಚಲನೆಗೆ ವೇಗವರ್ಧಕ ( ಆಕ್ಸಲರೇಟರ್) ಎಷ್ಟು ಮುಖ್ಯವೋ ವೇಗನಿರೋಧಕ( ಬ್ರೇಕ್) ಕೂಡಾ ಅಷ್ಟೇ ಮುಖ್ಯ. ಎರಡೂ ಒಂದಕ್ಕೊಂದು ವಿರುದ್ಧವಾದ ಬಲಗಳು.

ಅದೇ ರೀತಿಯಲ್ಲಿ ಸ್ಟಿಯರಿಂಗ್ ವೀಲ್ ಅನ್ನು ಎಡದಿಕ್ಕಿಗೂ ಮತ್ತು ಬಲದಿಕ್ಕಿಗೂ ಅಗತ್ಯಕ್ಕೆ ಅನುಗುಣವಾಗಿ ತಿರುಗಿಸಲು ಸಾಧ್ಯವಾದಾಗ ಮಾತ್ರ ಕಾರಿನ ದಿಕ್ಕು ನಿಯಂತ್ರಣದಲ್ಲಿ ಇರುತ್ತೆ.

ನನಗೆ ರಾತ್ರಿಯಿಡೀ ಜ್ವರ. ದೇಹದ ಉಷ್ಣತೆ 103 ಡಿಗ್ರಿ. ನನ್ನಾಕೆ ಹಣೆಯಲ್ಲಿ ಕೈಯಿಟ್ಟು ಹೇಳುತ್ತಾಳೆ, ಅರೇ, ಕೆಂಡದಂತೆ ಸುಡುತ್ತಿದೆ, ಹಣೆ. ಬೆಳಗಾದೊಡನೆ ಫ್ಯಾಮಿಲಿ ಡಾಕ್ಟರ್ ಬಂದು ಪರೀಕ್ಷೆ ಮಾಡಿ ಔಷಧಿ ಕೊಟ್ಟರು. ಔಷಧಿ ತಗೊಂಡು ಒಂದು ಘಂಟೆಯಲ್ಲಿ ದೇಹವಿಡೀ ಬೆವತಿತು. ಜ್ವರ ತಗ್ಗಿ, ದೇಹದ ಉಷ್ಣತೆ ಈಗ 98 ಡಿಗ್ರಿ.
ಗಮನಿಸಿ, ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ದೇಹ ಬೆವರಿ, ಬೆವರು ಆವಿಯಾಗಿ, ಕೂಲಿಂಗ್ ಇಫೆಕ್ಟ್ ಕೊಡುತ್ತೆ. ದೇಹದ ಉಷ್ಣತೆ ಸದಾ 98 ಡಿಗ್ರೀ ಇರುವಂತೆ ನೋಡಿಕೊಳ್ಳಲು, ದೇಹದೊಳಗೆ ಚೈತನ್ಯದ ಉತ್ಪತ್ತಿ ಆಗುತ್ತಲೇ ಇರುತ್ತದೆ. ಆಹಾರದ ಪಚನದಿಂದ ದೊರಕಿದ ಸಕ್ಕರೆಯನ್ನು ಶಕ್ತಿಯಾಗಿಸುವ ಕ್ರಿಯೆ ಉಷ್ಣತೆ ಹೆಚ್ಚು ಮಾಡುವುದಾದರೆ, ಬೆವರುವುದು ಮತ್ತು ಅದು ಆವಿಯಾಗುವುದು ಉಷ್ಣತೆ ಕಡಿಮೆ ಮಾಡುವ ಕ್ರಿಯೆ. ಇವೆರಡೂ ಕ್ರಿಯೆಗಳು ನಡೆಯುತ್ತಲೇ ಇರುತ್ತದೆ ಮತ್ತು ದೇಹದ ಉಷ್ಣತೆ 98 ಡಿಗ್ರಿ ಯಲ್ಲಿ ಸಮತೋಲಿತವಾಗಿರುತ್ತದೆ.

ನಾವು ತುಂಬಾ ದೈಹಿಕವಾಗಿ ಕಠಿಣ ಕೆಲಸ ಮಾಡುವಾಗ ದೇಹದೊಳಗೆ ಅದಕ್ಕೆ ಅಗತ್ಯವಾದ ಹಾಗೇ ತುಂಬಾ ಚೈತನ್ಯದ ಉತ್ಪತ್ತಿಯಾಗುತ್ತೆ. ಆಗ ದೇಹದ ಉಷ್ಣತೆ ಹೆಚ್ಚಾಗದಂತೆ ತಡೆಯಲು ದೇಹ ತುಂಬಾ ಬೆವರುತ್ತದೆ.

ದೇಹದ ಉಷ್ಣತೆಯಂತೆಯೇ ರಕ್ತದೊತ್ತಡ, ಪಲ್ಸ್ ರೇಟ್ ಇತ್ಯಾದಿ ನೂರಾರು ಪ್ಯಾರಾಮೀಟರ್ ಗಳು ನಿಯಂತ್ರಣದಲ್ಲಿರಲು ಹಲವು ವಿರುದ್ಧ ಬಲಗಳು ಕೆಲಸ ಮಾಡುತ್ತವೆ.

“ಈ ರೋಜು ಚಾಲ ಎಂಡ ಕೊಟ್ತುಂದಿ. ಖಚಿತಂಗಾ ಸಾಯಂತರಂ ವರ್ಷಂ ಒಸ್ತದಿ” ಅಂತ ಹೇಳುವುದು ನಾನು ಆಗಾಗ ಕೇಳುತ್ತೇನೆ. ನಿಜ ಹೇಳಬೇಕೆಂದರೆ, ಸೆಖೆ ತುಂಬಾ ಹೆಚ್ಚಾದಾಗ ಮಳೆ ತಂಪೆರೆದು ವಾತಾವರಣದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಇಲ್ಲಿ, ಬಿಸಿಲು ಉಷ್ಣತೆಯನ್ನು ಹೆಚ್ಚು ಮಾಡಿದರೆ, ಮಳೆ ಅದನ್ನು ತಗ್ಗಿಸುತ್ತದೆ!. ನೋಡಿದಿರಾ! ವಾತಾವರಣದ ತಾಪಮಾನದ ನಿಯಂತ್ರಣ ದಲ್ಲಿಯೂ ವಿರುದ್ಧ ಬಲಗಳು!

ಭೂಮಿ ಮೇಲಿನ ಒಟ್ಟೂ ಜೀವರಾಶಿಯ ಜೀವ ಸೆಲೆಯೇ ಜಲ. ಸಮುದ್ರದ ಜಲರಾಶಿಯ ಮೇಲ್ಮೈ, ಸೂರ್ಯಶಾಖದಿಂದ ಆವಿಯಾಗಿ, ಆ ಆವಿ ಮೋಡವಾಗಿ, ಭೂಭಾಗದತ್ತ ತೇಲಿ, ಪುನಃ ಜಲವಾಗಿ ಭಾಷ್ಪೀಕರಣವಾಗಿ ಮಳೆಯಾಗುತ್ತೆ. ಸಕಲ ಜೀವರಾಶಿ ಅದರಲ್ಲಿ ಮಿಂದು, ಅದನ್ನು ಕುಡಿದು ಜೀವಿಸುತ್ತದೆ. ಉಳಿದ ನೀರು ನದಿಯ ಮೂಲಕ ಪುನಃ ಸಮುದ್ರ ಸೇರುತ್ತದೆ.
ಈ ಸೈಕ್ಲಿಕ್ ವ್ಯವಸ್ಥೆ ನಡೆಯುವುದರ ಮೂಲದಲ್ಲಿ, ನೀರು ಆವಿಯಾಗುವಿಕೆ ( ಇವಾಪರೇಷನ್) ಮತ್ತು ಆವಿ( ಮೋಡ) ನೀರಾಗುವಿಕೆ ( ಕಂಡೆನ್ಸೇಷನ್) ಎಂಬ ಎರಡು ವಿರುದ್ಧ ಕ್ರಿಯೆಗಳು ನಡೆಯುತ್ತವೆ. ಯಾವುದೇ ಒಂದು ಮಾತ್ರ ನಡೆದರೆ, ಅದು ಈ ಸೈಕ್ಲಿಕ್ ವ್ಯವಸ್ಥೆಯನ್ನು ಸಮತೋಲನದಲ್ಲಿ ಇರಲಿಸಲು ಶಕ್ತವಲ್ಲ.

ನೀವು ಮನಸ್ಸಿನೊಳಗೇ ಹಲವು ಮಂಥನಗಳನ್ನು ನಡೆಸುವಾಗಲೂ ಮನಸ್ಸು ಒಮ್ಮೆ ಒಂದು ದಿಕ್ಕಿನಲ್ಲಿ ಯೋಚಿಸಿ, ಆಮೇಲೆ ವಿರುದ್ಧ ದಿಕ್ಕಿನಲ್ಲಿ ಪ್ರಶ್ನೆ ಮಾಡುತ್ತೆ. ಮತ್ತೆ ಪುನಃ ದಿಶೆ ಬದಲಿಸಿ ಉತ್ತರಿಸುತ್ತದೆ. ಈ ಪ್ರಶ್ನೆ ಮತ್ತು ಉತ್ತರ, ಪುನಃ ಪುನಃ ಆವರ್ತಿಸುತ್ರಾ ಚಿಂತನ ಮಂಥನ ನಡೆಯುತ್ತೆ. ಬರೇ ಪ್ರಶ್ನೆ ಅಥವಾ ಬರೇ ಉತ್ತರ ನಿಮ್ಮ ಮನಸ್ಸಿನಲ್ಲಿದ್ದಿದ್ದರೆ, ಯೋಚನೆ ನಿಂತೇ ಇರುತ್ತಿತ್ತು, ಅದು ನಡೆಯುತ್ತಿರಲಿಲ್ಲ. ಮನಸ್ಸು ಒಮ್ಮೆ ಇತ್ತ, ಮಗುದೊಮ್ಮೆ ಅತ್ತ ನಡೆದು ಒಂದು ಸಮತೋಲಿತ, ನಿಯಂತ್ರಿತ, ಆಹ್ಲಾದಕರ ಚರ್ಚೆಗೆ ಕಾರಣವೂ ಆಗುತ್ತದೆ, ಈ ಕ್ರಿಯೆ ಸೃಜನಶೀಲ ಸೃಷ್ಟಿಗೂ ಕಾರಣವಾಗುತ್ತೆ.

ಭಗವದ್ಗೀತೆಯಲ್ಲಿ ಯೋಗಾಚಾರ್ಯ ಶ್ರೀಕೃಷ್ಣ, ಸಮಚಿತ್ತ, ಸ್ಥಿತಪ್ರಜ್ಞತೆಯ ಬಗ್ಗೆ ಹೇಳುತ್ತಾನೆ. ಸುಖ ದುಃಖಗಳನ್ನು ಮತ್ತು ಇನ್ನಿತರ ಇಂದ್ರಿಯಗ್ರಾಹೀ ಅನುಭವ ವೈರುಧ್ಯಗಳನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿ ಅದು. ಅದನ್ನು ಸಾಧಿಸಲು ಪ್ರಾಣಾಯಾಮದಲ್ಲಿ ಒಂದು ಸಾಧನೆಯಿದೆ. ಅದೇ ನಾಡಿಶೋಧನ ಪ್ರಾಣಾಯಾಮ.
ನಮ್ಮ ದೇಹದ ಶಕ್ತಿಚಲನ ಕ್ರಿಯೆಯಲ್ಲಿ ಮುಖ್ಯವಾಗಿ ಮೂರು ನಾಡಿಗಳು. ಚಂದ್ರನಾಡಿ ( ಇಡಾ), ಸೂರ್ಯನಾಡಿ( ಪಿಂಗಳ) ಮತ್ತು ಸುಷುಮ್ನ ನಾಡಿ. ಸೂರ್ಯನಾಡಿ ಊರ್ಧ್ವಮುಖೀ ( ಮೇಲಕ್ಕೆಳೆಯುವ) ಬಲದ ನಾಡಿಯಾದರೆ ಚಂದ್ರ ನಾಡಿ ಅಧೋಮುಖೀ ( ಕೆಳಕ್ಕೆಳೆಯುವ) ಬಲವನ್ನು ನಿಯಂತ್ರಣ ಮಾಡುತ್ತೆ. ( ಇದನ್ನು gross ಆಗಿ, ಅಲೋಪತಿ ಸಿಸ್ಟಮ್ ನಲ್ಲಿ, ಸಿಂಪಥೆಟಿಕ್ ಮತ್ತು ಪ್ಯಾರಾಸಿಂಪಥೆಟಿಕ್ ನರ್ವಸ್ ಸಿಸ್ಟಮ್ ಜತೆಗೆ ಅನ್ವಯಿಸುತ್ತಾರೆ.)

ಉದಾಹರಣೆಗೆ ನಮ್ಮೊಳಗೆ ಚಂದ್ರನಾಡಿ ಸಕ್ರಿಯವಾದಾಗ ನಾವು ಶಾಂತಿಯನ್ನು, ಡಿಪ್ರೆಶನ್ ಅನ್ನು, ತಂಪನ್ನು, ದುಃಖವನ್ನು ಉದಾಸೀನತೆಯನ್ನು, ಸಮಾಧಾನವನ್ನು, ನಿದ್ರಾಸ್ಥಿತಿಯನ್ನು ಫೀಲ್ ಮಾಡುತ್ತೇವೆ. ಹಾಗೆಯೇ ಸೂರ್ಯನಾಡಿ ಡಾಮಿನೇಟ್ ಮಾಡಿದಾಗ ನಾವು ಉದ್ರೇಕ, ಕೋಪ, ಸಂತೋಷ, ಚುರುಕುತನ, ನಿದ್ರಾಹೀನತೆ ಗಳನ್ನು ಅನುಭವಿಸುತ್ತೇವೆ.

Yoga For Diabetes - Chandra Nadi Pranayama - Blood Purifier - YouTube

ಪ್ರಾಣಾಯಾಮದ ತತ್ವದ ಪ್ರಕಾರ, ಮೂಗಿನ ಎಡಹೊಳ್ಳೆಯಲ್ಲಿ ಪ್ರಾಣವಾಯು ಸಂಚರಿಸುವಾಗ ಚಂದ್ರನಾಡಿ ಮತ್ತು ಬಲಹೊಳ್ಳೆಯಲ್ಲಿ ಸಂಚರಿಸುವಾಗ ಸೂರ್ಯನಾಡಿ ಆಕ್ಟಿವ್ ಆಗುತ್ತೆ. ನಾಡಿಶೋಧನ ಪ್ರಾಣಾಯಾಮ ( alternate nostril breathing) ಮಾಡುವ ಮೂಲಕ ಈ ಎರಡೂ ನಾಡಿಗಳಲ್ಲಿ ಪ್ರಾಣವಾಯು ಸಮನಾಗಿ ಪ್ರವಹಿಸಿದರೆ, ನೀವು ಸ್ಥಿತಪ್ರಜ್ಞರಾಗಿ, ಮನಸ್ಸಿನ ಮೇಲೆ ಸಂಪೂರ್ಣ ಸಮತೋಲನವನ್ನು ಸಾಧಿಸುತ್ತೀರಿ. ಸೂರ್ಯನಾಡಿ ಮತ್ತು ಚಂದ್ರನಾಡಿ ಪರಸ್ಪರ ವಿರುದ್ಧ ದಿಕ್ಕಿನ ಬಲತತ್ವಗಳು ಎಂಬುದನ್ನು ಗಮನಿಸಿದಿರಾ.

ಈ ಮುಂದೆಯೇ ಹೇಳಿದಂತೆ, ಪ್ರಪಂಚದಲ್ಲಿ, ಪರಮಾಣುವಿನಿಂದ ಹಿಡಿದು, ಗ್ಯಾಲಕ್ಸಿ ವರೆಗೆ ಸದಾ ಕ್ರಿಯಾಶೀಲವಾದ ವ್ಯವಸ್ಥೆಯಿದೆ. ಆ ವ್ಯವಸ್ಥೆಯ ಇರುವಿಕೆಗೆ ಕಾರಣ ಅದರೊಳಗಿನ ಚಲನಶೀಲತೆಯಲ್ಲಿರುವ ಸಮತೋಲನ. ಸಮತೋಲನದ ತಲದಲ್ಲಿ ಎರಡು ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುವ ಬಲಗಳು ಕೆಲಸ ಮಾಡುವುದೇ ಆ ಸ್ಟೆಬಿಲಿಟಿಗೆ ಕಾರಣ. ಹಲವಾರು ವ್ಯವಸ್ಥೆಗಳಲ್ಲಿ ಸಮತೋಲನಕ್ಕೆ ಎರಡಕ್ಕಿಂತ ಹೆಚ್ಚು ಬಲಗಳೂ ಕೆಲಸ ಮಾಡುವುದು ಕಾರಣವಾಗಬಹುದು. ಆದರೆ ಕನಿಷ್ಠ ಎರಡು ವಿರುದ್ಧ ಬಲಗಳು ವ್ಯವಸ್ಥೆಯ ತಕ್ಕಡಿ ಸಮತೂಕವನ್ನು ಹೊಂದಲು ಅಗತ್ಯ.

ಮುಂದಿನ ವಾರಗಳಲ್ಲಿ, ಪ್ರಪಂಚದ ಜೀವ,ನಿರ್ಜೀವ, ಮೈಕ್ರೋ ಮತ್ತು ಮ್ಯಾಕ್ರೋ ವ್ಯವಸ್ಥೆಗಳ ಬಗ್ಗೆ ಒಂದೊಂದಾಗಿ ಮಾತಾಡುವೆ.

ನಮಸ್ಕಾರ.