ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರ್ವೋದಯ ಸಾಧನ-ಸೇವಾ ಜೀವನಕ್ಕೆ ಸೋಪಾನ ಇಂಟ್ರೋ

ಸುಮ ಚಂದ್ರಶೇಖರ್
ಇತ್ತೀಚಿನ ಬರಹಗಳು: ಸುಮ ಚಂದ್ರಶೇಖರ್ (ಎಲ್ಲವನ್ನು ಓದಿ)

ಮಾನವನಿಗೆ ಅನ್ನವೂ ಬೇಕು, ಬುದ್ಧಿಯೂ ಬೇಕು. ಅನ್ನ ತಿಂದು ದೇಹ ಬೆಳೆಯಬೇಕು, ಬುದ್ಧಿ ವಿವೇಕಕ್ಕೆ ಸಾಧನ ಆಗಬೇಕು. ಆತ್ಮಜ್ಞಾನ ತನ್ನನ್ನು ತಾನು ಅರಿಯಲು ನೆರವಾಗಬೇಕು. ಈ ಮೂರೂ ಮುಪ್ಪುರಿಗೊಂಡಾಗ ಗಾಂಧೀಜಿಯ ಕಲ್ಪನೆಯ ‘ರಾಮರಾಜ್ಯ’ Kingdom of God on earth ಸರ್ವೋದಯ ಆಗುತ್ತದೆ. ಸರ್ವೋದಯ ಸಮಾಜ ಸ್ಥಾಪನೆ ಭಾರತೀಯರೆಲ್ಲರ ಗುರಿ ಎಂದು ಘೋಷಿಸಿದರು.

ಸರ್ವಜನ ಹಿತಾಯ ಸರ್ವಜನಸುಖಾಯಕ್ಕಾಗಿ ಶುದ್ಧ ಸುಸಂಸ್ಕೃತ ಸಾಧನಗಳನ್ನು ಬಳಸಿಯೇ ನೂತನ ಸಭ್ಯತೆಯನ್ನು ಸ್ಥಾಪಿಸಬೇಕಾದ ಐತಿಹಾಸಿಕ ಅನಿವಾರ್ಯತೆ ಇಂದು ಕಂಡು ಬಂದಿದೆ. ಇದನ್ನೇ ಸರ್ವೋದಯ ಸೂತ್ರಗಳ ಸೂತ್ರ, ಬೀಜಮಂತ್ರ ಅಥವಾ ಪರಮಗುರಿ ಎನ್ನಬೇಕು ಇದೇ ಎಲ್ಲ ನಂಬಿಕೆಗಳ ನಂಬಿಕೆ ಎನ್ನೋಣ.


ಗಾಂಧೀಜಿ ಬದುಕಿದ್ದ ಕಾಲದಲ್ಲೂ ಅವರು ಸರ್ವೋದಯ ಶಬ್ದವನ್ನು ಹೆಚ್ಚಾಗಿ ಬಳಸಲಿಲ್ಲ. ಬಾಯಲ್ಲಿ ಹೇಳದೆ ಅದರ ಕಲ್ಪನೆ, ತತ್ವಗಳಿಗನುಸಾರವಾಗಿ ಬದುಕಿದರು. ಅದರತ್ತ ಸಾಗುವ ಕಾರ್ಯಕ್ರಮಗಳನ್ನು ರೂಪಿಸಿದರು. ಏಸುಕ್ರಿಸ್ತನ ಬಗೆಗೆ He died so that we may live ಎಂದು ಹೇಳುವಂತೆಯೇ ಗಾಂಧೀಜಿ ತಮ್ಮ ಅಂತಿಮ ಕ್ಷಣದವರೆಗೂ ಜನತೆಯನ್ನು ಸರ್ವೋದಯ ಪಥದಲ್ಲಿ ಮುಂದೊಯ್ದುರು. ಇಂದು ನಾವು ಗಾಂಧೀಜಿ ಅವರನ್ನು ರಾಷ್ಟ್ರಪಿತ, ಮನುಕುಲದ ಉದ್ದಾರಕ ಎನ್ನುತ್ತೇವೆ. ಆದರೆ ಅವರು ಸ್ವತಃ ನಡೆದು ತೋರಿಸಿದ ಸರ್ವೋದಯ ಪಥದಲ್ಲಿ ಅಡಿ ಇಡುತ್ತಿದ್ದೇವೆಯೇ? ಎಂಬುದನ್ನು ಆಲೋಚಿಸುವುದೇ ಇಲ್ಲ.

ಸರ್ವೋದಯದಲ್ಲಿ ಮಾನವನೇ ಪರಮಗಣ್ಯ. ಇಂದು ಕೆಲವರು ತಮ್ಮ ಬುದ್ಧಿಶಕ್ತಿಯನ್ನೇ ಬಂಡವಾಳವಾಗಿಟ್ಟುಕೊಂಡು ಸುಖವಾಗಿ ಹಾಯಾಗಿ ಬದುಕುತ್ತಾರೆ. ಅನೇಕರು ದೇಹಶಕ್ತಿಯನ್ನು ಬಳಸುತ್ತ ದುಡಿದು ದುಡಿದು ಸತ್ತು ಸುಣ್ಣವಾಗುತ್ತಾರೆ. ಅವರಿಗೆ ಜೀವನ ನರಕಪ್ರಾಯ. ತಿಳಿದವರು ಅಜ್ಞರಿಗೆ ತಿಳುವಳಿಕೆ ನೀಡಬೇಕು, ಬಲಿಷ್ಠರು ಬಲಹೀನರನ್ನು ಬಲಯುತರನ್ನಾಗಿಸಬೇಕು, ಹಣವಂತರು ಬಡವರ, ದೀನದಲಿತರ ಬಗೆಗೆ ಅನುಕಂಪ ತೋರಬೇಕು ಪ್ರತಿಯೊಬ್ಬರೂ ತಮತಮಗೆ ದೈವದತ್ತವಾಗಿ ಲಭಿಸಿದ ವಿಶೇಷ ಶಕ್ತಿಗಳನ್ನೆಲ್ಲ ಸಮಾಜದ ಏಳ್ಗೆಗಾಗಿ ವಿನಿಯೋಗಿಸಬೇಕು. ಇಂದು ಈ ಮನೋಭಾವ ಆಚರಣೆ ಇಲ್ಲದೆ ಸಮಾಜ ನಾನಾ ಹೆಸರುಗಳಲ್ಲಿ ಛಿದ್ರವಾಗಿಬಿಟ್ಟಿದೆ ಜಾತಿ-ವರ್ಗ, ಬಲಿಷ್ಟರು-ದುರ್ಬಲರು, ಜ್ಞಾನಿಗಳು-ಅಜ್ಞಾನಿಗಳು, ಧನಿಕರು-ದರಿದ್ರರು ಮುಂತಾಗಿ ಹಲವು ಹತ್ತು ತಾರತಮ್ಯಗಳಿಂದ ಛಿದ್ರ ವಿಛಿದ್ರವಾಗಿ ಹೋಗಿದೆ ಸಮಾಜ. ಸಮಾಜದಲ್ಲಿ ಯಾವ ಕೆಲಸವೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ. ಎಲ್ಲರೂ ಅವರವರ ಪಾಲಿಗೆ ಬಂದ ನಿಯಮಿತ ಕರ್ಮ ನಿರ್ವಹಿಸಿದಾಗ ಎಲ್ಲರಿಗೂ ಸಮಾನ ಮಾನ್ಯತೆ ಇರುತ್ತದೆ. ನಮ್ಮ ದೇಹವನ್ನೇ ಗಮನಿಸಿ, ಕಾಲು ಕೆಳಗಡೆ ಇರುವುದರಿಂದ ಅದನ್ನು ಕೀಳು ಎನ್ನಲಾದೀತೇ? ಕಾಲು ಮಾಡುವ ಕೆಲಸವನ್ನು ಕೈ ಮಾಡಲಾದೀತೇ? ಕಿವಿ ಮಾಡುತ್ತದೆಯೇ? ಇಲ್ಲಿ ‘ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಂ’ ಎಂದರೆ ಪ್ರತಿಯೊಬ್ಬ ಮನುಷ್ಯನೂ ತಮ್ಮ ತಮ್ಮ ಕೆಲಸಗಳಲ್ಲಿ ತನ್ಮಯನಾಗಿ ದುಡಿಯುವುದರಿಂದ ಸಿದ್ಧಿಯನ್ನು ಪಡೆಯುತ್ತಾನೆ ಎಂಬ ಗೀತಾ ವಾಕ್ಯವನ್ನು ನೆನಸಿಕೊಂಡು ಅದರಂತೆ ನಡೆಯತೊಡಗಬೇಕು.


ಬುದ್ಧಿಶಕ್ತಿ, ಶರೀರಶಕ್ತಿ ಎರಡೂ ಮಾನವನಿಗೆ ಬೇಕೇ ಬೇಕು. ಇವೆರಡರಲ್ಲಿ ಯಾವುದೊಂದು ಇಲ್ಲದಿದ್ದರೂ ಬದುಕು ಸಮತೋಲನ ಕಳೆದುಕೊಳ್ಳುತ್ತದೆ, ಕುಂಠಿತವಾಗುತ್ತದೆ. ಎರಡು ಶಕ್ತಿಗಳೂ ಚೆನ್ನಾಗಿ ಬೆಳೆಯಬೇಕು. ಹೀಗಲ್ಲದ ಸಮಾಜದಲ್ಲಿ ಸಹಜವಾಗಿಯೇ ಅಸಮಾನತೆ ಮೂಡುತ್ತದೆ. ಇದನ್ನು ವಿನೋಬಾಜಿ ಹಿಂದಿನವರು ಹೇಳುತ್ತಿದ್ದಂತೆ ಕುಂಟ ಕುರುಡ ನ್ಯಾಯಕ್ಕೆ ಹೋಲಿಸುತ್ತಾರೆ. ಕುರುಡ ಕುಂಟ ಇಬ್ಬರೂ ಅನ್ಯೋನ್ಯತೆಯಿಂದ ಪರಸ್ಪರ ಸಹಕಾರದಿಂದ ಬಾಳಿ ಇಬ್ಬರೂ ಮುಂದುವರಿಯುವ ಹಾಗೆ. ಕುಂಟ ಕುರುಡನ ಹೆಗಲ ಮೇಲೆ ಕುಳಿತು ಸಾಗುತ್ತಾನೆ, ಕುರುಡ ಕುಂಟ ತೋರಿದ ಹಾದಿಯಲ್ಲಿ ನಡೆಯುತ್ತಾನೆ. ಇಂದು ಸಮಾಜಕ್ಕೆ ಇದೇ ಸ್ಥಿತಿ ಬಂದಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅಷ್ಟೇ, ಅಭಿವೃದ್ಧಿ ಶೀಲ ದೇಶಗಳಲ್ಲೂ ಅಷ್ಟೇ.


ಕಾಯಕ ಎನ್ನುವುದು ಕಾಯದಿಂದ ಎಂದರೆ ಶರೀರದಿಂದ ಮಾಡುವಂತಹ ಕೆಲಸ. ಇದು ಯಾವುದೇ ಆದರೂ ಸಮಾಜರೂಪಿ ಈಶ್ವರನಿಗೆ ಅರ್ಪಿತವಾದ ಕೆಲಸ ಆಗಬೇಕು. ಇದನ್ನು ಹಿಂದಿನವರು ಯಜ್ಞ ಎಂದು ಕರೆದರು. ಯಜ್ಞ ಇಲ್ಲದೆ ಸಂಸಾರದ ಚಕ್ರ ಉರುಳುವಂತೆಯೇ ಇಲ್ಲ. ಇದನ್ನು ಎಂಟುನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆಗಿ ಹೋದ ಭಕ್ತಿ ಭಂಡಾರಿ ಬಸವಣ್ಣನವರು ‘ಕಾಯಕ’ ಎಂದು ಕರೆದದ್ದು ಕೆಲಸಕ್ಕೆ ಪಾವಿತ್ರ್ಯ ತಂದುಕೊಟ್ಟಿತು.

ಶ್ರಮನಿಷ್ಠೆ ಶ್ರಮಗೌರವಗಳ ಮೂಲಕ ಮಾನವ ಸಮತೆಯನ್ನು ಸಮಾಜದಲ್ಲಿ ಪ್ರತಿಷ್ಠಿಸಲೆತ್ನಿಸಿದರು. ಅಸ್ಪøಶ್ಯರನ್ನು ಮೇಲಕ್ಕೆತ್ತಲು, ಸ್ತ್ರೀಯರನ್ನು ಪುರುಷರ ಸಮಾನಸ್ತರಕ್ಕೆ ತರಲು ಯತ್ನಿಸಿದರು. ಅಹಿಂಸೆಯನ್ನು ಎತ್ತಿ ಹಿಡಿದರು. ಯಜ್ಞದ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿಹಿಂಸೆಯನ್ನು ಖಂಡಿಸಿದರು. ವಿಶ್ವದ ಸಕಲರಿಗೂ ಲೇಸನ್ನೇ ಬಯಸಿದರು. ಎರಡು ಸಾವಿರ ವರ್ಷಗಳ ಹಿಂದೆ ಬಾಳಿದ ಭಗವಾನ್ ಬುದ್ಧದೇವನೂ ಇದನ್ನೇ ಮಾಡಿದ. ಹಿಂದೂ ಧರ್ಮದಲ್ಲಿ ಎಲ್ಲ ಸಾಧುಸಂತರೂ ಇದನ್ನೇ ಮಾಡಿದರು. ಶ್ರಮಗೌರವ, ಶ್ರಮನಿಷ್ಠೆ, ಶ್ರಮಸಂಸ್ಕøತಿ ಮುಂತಾದವುಗಳಿಂದ ಆವರೆಗೆ ರೂಢಿಯಲ್ಲಿದ್ದ ವ್ಯತ್ಯಾಸಗಳನ್ನು ಅಳಿಸಿ ಹಾಕಿ ಸಮಾಜದಲ್ಲಿ ಸಮಾನತೆ, ಸಹೃದಯತೆ, ಸಾಮರಸ್ಯಗಳನ್ನು ಸ್ಥಾಪಿಸುವ ಕೆಲಸ ಮಾಡಿದರು.
ವೇದಾಂತ-ವಿಜ್ಞಾನ-ವಿಶ್ವಾಸ ಈ ಮೂರು ಶಕ್ತಿಗಳು ಜಗತ್ತಿನಲ್ಲಿ ಎಲ್ಲಿ ಸ್ಥಿರವಾಗಿ ನಿಲ್ಲುತ್ತವೆಯೋ ಅಲ್ಲಿ ಶಾಂತಿ ಮತ್ತು ಸಮೃದ್ಧಿ ಸ್ಥಾಪಿತವಾಗುತ್ತದೆ. ಇಲ್ಲಿ ‘ವೇದಾಂತ’ ಎಂದರೆ ವಾದ ವಿವಾದಾತ್ಮಕವಾದ ಮತ ಧರ್ಮಗಳಿಗೆ ಬದಲಾಗಿ ಸರ್ವವ್ಯಾಪಕ ಭಗವಂತನಲ್ಲಿ ಅಚಲ ನಂಬಿಕೆ ಹುಟ್ಟಬೇಕು. ಇದರಿಂದ ಸರ್ವಧರ್ಮ ಸಮಾಜ ತಾನಾಗಿಯೇ ಸ್ಥಾಪಿತವಾಗುತ್ತದೆ. ಅದೇ ರೀತಿ ‘ವಿಜ್ಞಾನ’ ಎಂದರೆ ಪ್ರಕೃತಿಯಲ್ಲಿ ಅಗೋಚರವಾಗಿರುವ ಶಕ್ತಿಗಳ ಸತತ ಅನ್ವೇಷಣೆ. ಇದು ಭೌತವಸ್ತುಗಳದ್ದಷ್ಟೇ ಅಲ್ಲ ಅಂತರಂಗದ ಸತ್ವದ ಅನ್ವೇಷಣೆ ಸಹ. ಇದರಿಂದ ಬದುಕು ಸಮೃದ್ಧವಾಗುವುದಲ್ಲದೆ ವೈಜ್ಞಾನಿಕ ಸಂಶೋಧನೆಗಳ ಬಗೆಗೆ ಯುಕ್ತ ಚಿಂತನೆ ಸಹ ಲಭಿಸುತ್ತದೆ.
‘ವಿಶ್ವಾಸ’ ಎಂದರೆ ಗುಂಪುಗುಳಿತನದ ಪಕ್ಷಗಳ ರಾಜನೀತಿಯಲ್ಲಿ ನಂಬಿಕೆ ಅಳಿಯುವುದು, ಅದರ ಸ್ಥಳದಲ್ಲಿ ‘ಜನತಂತ್ರ’ ಅಥವಾ ‘ಲೋಕನೀತಿ’ ಉದ್ಭವಿಸುವುದು. ಇದರಿಂದ ಮನುಜಕುಲ ವಿನಾಶದ ಹಾದಿಯಿಂದ ಪಾರಾದೀತು, ಅಣ್ವಸ್ತ್ರಗಳಿಂದ ಮಾರಣ ಹೋಮ ಸಂಭವಿಸದಂತೆ ತಡೆಯುವ ಆಶಾಕಿರಣ ಮೂಡೀತು.


ಭಾರತದ ‘ವೇದಾಂತ’ ಪಶ್ಚಿಮದ ‘ವಿಜ್ಞಾನ’ ಎರಡರ ಮಿಲನವಾಗಿ ಜಗತ್ತಿನಲ್ಲಿ ಸರ್ವೋದಯ ಉದಯವಾದೀತು. ಮಾನವಕುಲ ವಿಕಾಸದ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟೀತು. ವಿಜ್ಞಾನ+ಆತ್ಮಜ್ಞಾನ=ಸರ್ವೋದಯ; ವಿಜ್ಞಾನ-ಆತ್ಮಜ್ಞಾನ=ಸರ್ವನಾಶ, ಈ ಸಮೀಕರಣವನ್ನು ನಮ್ಮ ಮುಂದಿಟ್ಟಿರುವ ಆಚಾರ್ಯ ವಿನೋಬಾ ಅವರು ಆಯ್ಕೆಯ ಸ್ವಾತಂತ್ರ್ಯವನ್ನು ನಮಗೇ ಬಿಟ್ಟುಕೊಟ್ಟಿದ್ದಾರೆ.
ಮನುಷ್ಯ ಹಲವಾರು ತಪ್ಪು ಮಾಡುತ್ತಾನೆ. ಅವುಗಳಲ್ಲೆಲ್ಲ ಮಾನವ ಜೀವನದ ಪಾರಸ್ಪರಿಕ ಭಾವನೆಯನ್ನು, ಸ್ನೇಹ-ಸಹಾನುಭೂತಿಗಳ ಪ್ರಭಾವವನ್ನು ಗಮನಿಸದೆ, ಮನುಷ್ಯ ಎಂದರೆ ಒಂದು ಬಗೆಯ ಯಂತ್ರ ಎಂದು ತಿಳಿದು ಅವನ ವ್ಯವಹಾರ ಸೂತ್ರಗಳನ್ನು ಕಟ್ಟುವುದು ಬಹಳ ದೊಡ್ಡ ತಪ್ಪು. ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಈ ತಪ್ಪಿಗಾಗಿ ನಾವು ನಾಚಿಕೆಯಿಂದ ತಲೆ ಬಾಗಬೇಕು. ಮೇಲೆ ಮೇಲೆ ನೋಡಿದರೆ ಎಲ್ಲಾ ತಪ್ಪಿನಲ್ಲೂ ಏನೋ ಒಂದು ಸತ್ಯದ ಛಾಯೆ ಕಂಡಂತಾಗುತ್ತದೆ. ಲೌಕಿಕ ನಿಯಮಗಳಲ್ಲೂ ಹಾಗೆಯೆ. ಎಲ್ಲಾ ಸಂದರ್ಭಗಳಲ್ಲೂ ಎಲ್ಲರೊಡನೆಯೂ ಪರೋಪಕಾರ ಬುದ್ಧಿಯಿಂದ ನಡೆಯುವ ಕಡೆಗೆ ಒಳ್ಳೆಯ ಪರಿಣಾಮವನ್ನೇ ಮಾಡುತ್ತದೆ.

ಲೇಖಕರು: ಸುಮ ಚಂದ್ರಶೇಖರ್

(ಇತ್ತೀಚೆಗೆ ಪ್ರಕಟಗೊಂಡ ಯುವ ಲೇಖಕಿ ಸುಮ ಚಂದ್ರಶೇಖರ್ ರವರ ಗಾಂಧಿ ವ್ಯಕ್ತಿತ್ವ ದರ್ಶನ ಸಂಕಲನದ ‘ಸತ್ಯ ಪಥದ ನಿತ್ಯ ಸಂತ’ ಕೃತಿಯಿಂದ ಆಯ್ದ ಲೇಖನ)