ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಹಿತ್ಯದ ಸವಿ ಹಂಚಿದ ಕವಿ ಸಂತ

ಎನ್. ಆರ್. ರೂಪಶ್ರೀ
ಇತ್ತೀಚಿನ ಬರಹಗಳು: ಎನ್. ಆರ್. ರೂಪಶ್ರೀ (ಎಲ್ಲವನ್ನು ಓದಿ)

   ಕವಿ ವಿಷ್ಣು ನಾಯ್ಕ ಅವರು ಇನ್ನಿಲ್ಲ ಎನ್ನುವ ಸುದ್ದಿ ಮನಸ್ಸಿಗೆ ಆಘಾತವನ್ನು ಉಂಟು ಮಾಡಿತು. ಕಾಲೇಜಿನ ದಿನಗಳಲ್ಲಿ ಅವರ ಜೊತೆ ಒಡನಾಡಿದ ನೆನಪುಗಳು ಸಾಲು ಸಾಲು ಬಂದು ಮನಸ್ಸಿನಲ್ಲಿ ಕೂತಿತು. ಕಥೆ ಕವನ ಲೇಖನಗಳನ್ನು ಬರೆಯುತ್ತಿದ್ದ ಪ್ರಾರಂಭದ ದಿನಗಳು. ಕವಿ ವಿಷ್ಣು ನಾಯ್ಕ್ ಅಂಕೋಲೆಯ ಅಂಬಾರ ಕೊಡ್ಲಿನಲ್ಲಿ ಕಾವ್ಯ ಕಮ್ಮಟವನ್ನು ನಡೆಸುತ್ತಿದ್ದರು. ಶ್ರೀ ಜಯಂತ್ ಕಾಯ್ಕಿಣಿ ಜಿಎಸ್ ಅವಧಾನಿ ,ಜಿಎಂ ಹೆಗಡೆ, ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುತ್ತಿದ್ದರು. ನಮ್ಮ ಕವಿತೆಗಳನ್ನು ತಿದ್ದಿ ತೀಡಿ ಇನ್ನಷ್ಟು ಬದಲಾವಣೆಗೆ ಅವಕಾಶ ಇದೆಯಾ ಎಂದು ನೋಡಿ ಎನ್ನುವ ಸಲಹೆ ಸೂಚನೆಗಳು ಕಾವ್ಯ ಕಮ್ಮಟದಲ್ಲಿ ವ್ಯಕ್ತವಾಗುತ್ತಿತ್ತು. ಬಹಳಷ್ಟು ದಿನಗಳ ಕಾಲ ಕಾವ್ಯ ಕಮ್ಮಟದ ಗುಂಗು ಮನಸ್ಸಿನಲ್ಲಿಯೇ ಉಳಿಯುತ್ತಿತ್ತು. ಇವೆಲ್ಲದರ ರೂವಾರಿ ವಿಷ್ಣು ನಾಯ್ಕ ಅವರು. ಬರವಣಿಗೆಯ ಪ್ರಾರಂಭದ ದಿನಗಳಲ್ಲಿ ಒಂದು ಗಟ್ಟಿ ಬುನಾದಿಯನ್ನು ಕಲ್ಪಿಸಿ ಕೊಟ್ಟವರು. ಅಂಕೋಲಕ್ಕೆ ಹೋದಾಗಲೆಲ್ಲ ವಿಷ್ಣುನಾಯ್ಕ ಅವರ ಜೊತೆಗೆ ಮಾತನಾಡದಿದ್ದರೆ ಸಮಾಧಾನ ಇರುತ್ತಿರಲಿಲ್ಲ. ಮುಂದಿನ ಭರವಸೆಯ ಕವಿಯೆಂದೇ ನನ್ನನ್ನು ಪರಿಚಯಿಸುತ್ತಿದ್ದರು.

ಆನಂತರದ ದಿನಗಳಲ್ಲಿ ನಾನು ನನ್ನ ಮೊದಲ ಕವನ ಸಂಕಲನ “ಮೌನ ಕಾಲ”ವನ್ನು ಹೊರತಂದೆ. ಮುನ್ನುಡಿಯನ್ನು ವಿಷ್ಣು ನಾಯ್ಕ್ ಅವರು ತುಂಬಾ ಪ್ರೀತಿಯಿಂದ ಬರೆದುಕೊಟ್ಟರು. ಅಲ್ಲದೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಶಿರಸಿಯಲ್ಲಿ ನಡೆದಾಗ ಬಂದು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕಾವ್ಯದ ಕುರಿತು ಮಾತನಾಡಿದರು. ಇನ್ನು ಅವರು “ಸಕಾಲಿಕ “ಎನ್ನುವ ವಾರಪತ್ರಿಕೆಯನ್ನು ಹೊರ ತಂದಾಗ ಶಿರಸಿಯ ಭಾಗದ ವರದಿಯನ್ನು ಮಾಡುವ ಜವಾಬ್ದಾರಿ ನನ್ನದಾಗಿತ್ತು. ನಾನು ಆಗಷ್ಟೇ ಪತ್ರಿಕೋದ್ಯಮವನ್ನು ಡಿಗ್ರಿಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ನನಗೆ ಪ್ರಾಯೋಗಿಕವಾಗಿ ವರದಿಯನ್ನ ಮಾಡಲು ಮತ್ತು ಅದನ್ನು ಪ್ರಕಟಿಸಲು ಬರವಣಿಗೆಗೆ ಪೂರಕವಾಗಿ ಸಕಾಲಿಕ ಕೆಲಸ ಮಾಡಿತು. ನನ್ನ ಬಹಳಷ್ಟು ಬರವಣಿಗೆಗಳು ಸಕಾಲಿಕದಲ್ಲಿ ಮೂಡಿ ಬಂದವು. ತುಂಬಾ ಗಂಭೀರವಾಗಿ ಮಾತನ್ನು ಕಡಿಮೆ ಆಡುತ್ತಿದ್ದ ವಿಷ್ಣು ನಾಯ್ಕ ಅವರು ಹಲವಾರು ಸಲ ತಮ್ಮ ಪತ್ರಿಕೆಗಳ ಬಗ್ಗೆ ಸಾಹಿತ್ಯ ಕಾವ್ಯದ ಬಗ್ಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯವನ್ನು ನನ್ನ ಜೊತೆ ನಡೆಸುತ್ತಲೇ ಇದ್ದರು. ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಅವರು ತುಂಬಾ ಸೂಕ್ಷ್ಮ ಮತಿಯವರು ಆಗಿದ್ದರು. ಅವರ “ಅರೆ ಖಾಸಗಿ” ಪ್ರಕಟವಾದಾಗ ಮತ್ತು ಬಹಳಷ್ಟು ಪುಸ್ತಕಗಳು ರಾಘವೇಂದ್ರ ಪ್ರಕಾಶನದಿಂದ ಪ್ರಕಟಗೊಂಡಾಗ ನನಗೆ ತಪ್ಪದೆ ಕಳಿಸುತ್ತಿದ್ದರು. “ಬೇಕು ಬೇಕೆನ್ನುವಾಗ ಬಿಡಬೇಕು ಜಾಗ” ಅವರ ಈ ಸಾಲುಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ.

ಕವಿ ವಿಷ್ಣು ನಾಯ್ಕ ಅವರಿಗೆ 75 ವರ್ಷಗಳು ತುಂಬಿದಾಗ ನಮ್ಮ ಸಾಹಿತ್ಯದ ಸಂಘಟನೆಯಾದ ಕವಿ ಕಾವ್ಯ ಬಳಗದ ವತಿಯಿಂದ ಪ್ರೀತಿಯಿಂದ ಸನ್ಮಾನಿಸಿದ್ದೆವು. ನಿಮ್ಮಂತ ಹೆಣ್ಣು ಮಕ್ಕಳು ಸಾಹಿತ್ಯ ಸಂಘಟನೆಯ ಮೂಲಕ ಬೆಳೆಯುತ್ತಿರುವುದು ತುಂಬಾ ಖುಷಿಯ ವಿಷಯ ಎಂದು ಸಂತೋಷ ಪಟ್ಟಿದ್ದರು. ವಿಷ್ಣು ನಾಯ್ಕ ಅವರು ನನಗೆ ಮಗಳಿಗೆ ತೋರುವ ಪ್ರೀತಿಯನ್ನು ತೋರಿದರು. ನನ್ನ ಪ್ರಾರಂಭಿಕ ಬರವಣಿಗೆಗೆ ಸಾಹಿತ್ಯ ಕಮ್ಮಟ ಮತ್ತು ಸಕಾಲಿಕ ಪತ್ರಿಕೆಯ ಮೂಲಕ ಗಟ್ಟಿ ನೆಲೆಯನ್ನು ಒದಗಿಸಿ ಕೊಟ್ಟಿದ್ದರು. ಬಹುಶಃ ಇನ್ನು ಅಂಬಾರ ಕೊಡಲಿನಲ್ಲಿ ಸಾಹಿತ್ಯದ ಪರಿಮಳ ಇರುವುದಿಲ್ಲ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಿಷ್ಣು ನಾಯ್ಕ ಅವರು ತಮ್ಮ ಬರವಣಿಗೆಯ ಮೂಲಕವೇ ಜನಮಾನಸದಲ್ಲಿ ನಿಲ್ಲುತ್ತಾರೆ. ಅಂಕೋಲಾದ ಸಾಹಿತ್ಯ ಸಮ್ಮೇಳನದಲ್ಲಿ ,ಕಾರವಾರದಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ,ಬಹಳಷ್ಟು ಸಲ ಕವಿಗೋಷ್ಠಿಗಳಲ್ಲಿ ಅವಕಾಶವನ್ನು ಕಲ್ಪಿಸಿ ನನ್ನಲ್ಲಿರುವ ಪ್ರತಿಭೆ ಹೊರಬರಲು ಸಹಕರಿಸಿದ್ದಾರೆ. ಅವರ ಜೊತೆ ಸಮ್ಮೇಳನದಲ್ಲಿ ಪಾಲ್ಗೊಂಡಾಗಲೆಲ್ಲ ಮೌನ ಕಾಲದ ಹುಡುಗಿ ಇವಳು ಎಂದು ಖುಷಿಯಿಂದ ನುಡಿಯುತ್ತಿದ್ದ ಮಾತುಗಳು ನೆನಪಾಗುತ್ತಿವೆ. ಅಲ್ಲದೆ ಮಾಡುವ ಕೆಲಸ ಒಳ್ಳೆಯದಾಗಿದ್ದರೆ ಶುಭ ಮುಹೂರ್ತ ಬೇಡವೇ ಬೇಡ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದ ಮಾತುಗಳು ನೆನಪಾಗುತ್ತಿವೆ. ವಿಷ್ಣು ನಾಯ್ಕ ಅವರು ಕವನವನ್ನು ಓದುತ್ತಿದ್ದ ರೀತಿ ಎಂಥವರನ್ನು ಸೆಳೆಯುತ್ತಿತ್ತು. ಸಾಹಿತ್ಯದ ಅಭ್ಯಾಸಗಳಿಗೆ ಒಂದು ಒಳ್ಳೆಯ ನೆಲೆಯನ್ನು ಕಲ್ಪಿಸಿಕೊಟ್ಟ ವಿಷ್ಣು ನಾಯ್ಕರಿಗೆ ನಾನು ನುಡಿ ನಮನವನ್ನು ಸಲ್ಲಿಸುತ್ತಿದ್ದೇನೆ.

ಎನ್ ಆರ್ ರೂಪಶ್ರೀ, ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಮೈಸೂರು