ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೇತ್ರಿ ವಿಶ್ವನಾಥ ಶೆಟ್ಟಿ
ಇತ್ತೀಚಿನ ಬರಹಗಳು: ಪೇತ್ರಿ ವಿಶ್ವನಾಥ ಶೆಟ್ಟಿ (ಎಲ್ಲವನ್ನು ಓದಿ)

ನಾನು ಕಂಪಿಸುವ ಕೈಗಳಿಂದ ಪ್ರಶಸ್ತಿ ಬಂದ ಸುದ್ದಿಯ ಕೆಳಗಡೆ ಇರುವ ಚಿತ್ರ ಮತ್ತು ವರದಿ ತೋರಿಸಿದೆ’
ಕುಖ್ಯಾತ ಶಾರ್ಪ ಶೂಟರ್, ಶಾಸಕರ ಕೊಲೆ ಅಪರಾಧಿ ಚೋಟ ರಂಜನ್ ಬಂಧನ
‘ಹೌದು ಇದು ಪಿ ಟಿ ಐ ವರದಿ ನಾನೇ ಮಾಡಿದ್ದು.
ಏನಾಯ್ತು?…ಅಂದಾಗ,
ನಾನು ಮೌನವಾದೆ.
ಯಾವುದೇ ಸಂಕೋಚಕ್ಕೊಳಗಾಗದೆ ಎಲ್ಲಾ ಹೇಳಿ ಅಂದಾಗ ನಾನು ಮಾತಾದೆ…

ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥೆ ”ಅಂತರ್ಧ್ವನಿ” ಯಿಂದ..

ಬಾಳ ಸಂಜೆಯ ಬಾಗಿಲಲ್ಲಿ ನಿರೀಕ್ಷೆಯ ಕಣ್ಣುಗಳಿಂದ ಎದುರು ನೋಡುತ್ತಿದ್ದಾಳೆ ಅಮ್ಮ.ಇಂದಿಗೂ ಆಕೆಯ ಹೆಜ್ಜೆಯಲ್ಲಿನ ಉಲ್ಲಾಸ ಕಂಡಾಗ ಹದಿಹರೆಯ ನಾಚಬೇಕು.ಬಹಳ ಗಟ್ಟಿಗಿತ್ತಿ ಅವಳು.ಎಲ್ಲಾ ನೋವುಗಳನ್ನು ಮೂಟೆಕಟ್ಟಿ ಅಟ್ಟಕ್ಕೆಸೆದು ಬಿಟ್ಟಿದ್ದಾಳೆ.ಇರುವುದೊಂದೆ ಕನಸು ಅವನನ್ನೊಮ್ಮೆ ಕಣ್ತುಂಬಿಸಿಕೊಳ್ಳಬೇಕು.ಅಮ್ಮನ ಇಂದಿನ ಖುಷಿಗೆ ವಿಶೇಷ ಅರ್ಥವಿದೆ.ಅಮ್ಮನ ಖುಷಿಯನ್ನ ಅಳೆಯಲಾದೀತೇ? ಅಳೆಯುವುದಾದರೂ ಯಾವ ಮಾಪನದಲ್ಲಿ,

ಅದು ನನ್ನಿಂದ ಸಾಧ್ಯವೇ!?! ಈ ಖುಶಿಯನ್ನು ಶಾಶ್ವತವಾಗಿ ಆಕೆಗೆ ಉಣಬಡಿಸಲು!! ಯಾಕೋ ಅಬ್ಬಾ ಅನ್ನಿಸಿ ನೋವಿನ ಎಳೆಯೊಂದು ಸಂದೀಪನ ಮನದಲ್ಲಿ ಉಳಿದುಹೋಯಿತು.

ಮುಂಗಾರಿನ ಪ್ರಥಮ ಮಳೆ,ಕಿಟಕಿಯ ಹತ್ತಿರ ಬಂದು ಮುಖ ಆನಿಸಿ ನಿಂತ ಸಂದೀಪ.ಬೀಸುವ ಗಾಳಿಯೊಂದಿಗೆ ಹನಿಮಳೆಯ ಸಿಂಚನ ಮುಖವನ್ನ ಮುತ್ತಿಕ್ಕಿ ತಣ್ಣನೆಯ ಅನುಭವ ನೀಡಿತು. ಹಾಗೇ ಕಿಟಕಿಗೆ ಮುಖಮಾಡಿ ನಿಂತ ಸಂದೀಪನ ಮನಸ್ಸು ಹಳೆಯ ಪೇಪರನ್ನು ಕೆದಕುವಂತೆ ನೆನಪುಗಳನ್ನು ಹೆಕ್ಕಿ ಮೆಲ್ಲಲು ಶುರು ಮಾಡಿತು.

ಅಬ್ಬಾ !!!!! ಆ ದಿನ ತನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ದಿನ.
ಅಕ್ಕಲಕೋಟೆ ಕನ್ನಡ ಬಳಗದ ಕಥಾ ಸ್ಪರ್ಧೆಯಲ್ಲಿ ನಾನು ಬರೆದ ಕಥೆಗೆ ಪ್ರಥಮ ಪ್ರಶಸ್ತಿ,ಅದಲ್ಲದೆ ನಗರದ ಖ್ಯಾತ ಪೋಲಿಸ್ ಅಧಿಕಾರಿಯನ್ನು ಸಂದರ್ಶನ ಮಾಡಿದ ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಸಂಪಾದಕರು ಸ್ವಲ್ಪ ಜಾಸ್ತಿಯೇ ಅನ್ನುವಂತೆ ಹೊಗಳಿ ನನ್ನ ಫ಼ೋಟೊ ದೊಂದಿಗೆ ಪ್ರಕಟಿಸಿದ್ದರು..ನನಗೂ ಒಂಥರಾ ಆನಂದ.
ಅವರು ಹೊಗಳಲು ಕಾರಣ ಇಲ್ಲವೆಂದಲ್ಲ.ಈ ಸ್ಪರ್ಧೆಯಲ್ಲಿ ಭಾಗವಹಿಸು ಎಂದವರು ಅವರೇ. ಸ್ಪರ್ಧಿಸಿದ ಪ್ರಥಮದರಲ್ಲೇ ಪ್ರಥಮ ಬಹುಮಾನ ಬಂದ ಕಾರಣ ಅವರಿಗೂ ಸ್ವಲ್ಪ ಖುಷಿ.
ಯಾರನ್ನೂ ಹೆಚ್ಚಿಗೆ ಹತ್ತಿರ ಸೇರಿಸದ ನೇರ ನಿಷ್ಟೂರವಾದಿ ಸಂಪಾದಕರಿಗೆ ನಾನು ಅಂದರೆ ಸ್ವಲ್ಪ ಪ್ರೀತಿ ಜಾಸ್ತಿ.
ನಾನು ಪತ್ರಿಕೆಯತ್ತ ಮತ್ತೊಮ್ಮೆ ಕಣ್ಣಾಡಿಸಿದೆ ,ಒಡಲು ಉಕ್ಕಿ ಹರಿದು ಕಣ್ಣೀರಾಯಿತು.ಓದುತ್ತಾ ಸಾಗಿದೆ,ನಿಂತ ಸ್ಥಳ ಕಂಪಿಸಿದಂತೆ,ಟೇಬಲನ್ನು ಗಟ್ಟಿಯಾಗಿ ಹಿಡಿದುಕೊಂಡೆ.ಏನಾಗಿಹೋಯಿತಿದು!!!!!ಏ ಸಿ ರೂಮಲ್ಲಿಯೂ ಛಿಲ್ಲನೆ ಬೆವರಿಳಿಯಿತು.ನನ್ನನ್ನು ನಾನು ಸಾವರಿಸಿಕೊಳ್ಳಲು ಕಷ್ಟಪಡಬೇಕಾಯಿತು.
ಒಂದತ್ತು ನಿಮಿಷ ಕಳೆದಿರಬೇಕು ಸಂಪಾದಕರು ಕರೆದು ಕೂತ್ಕೊಳ್ಳಿ ಸಂದೀಪ್ ಅಭಿನಂದನೆಗಳು ಎಂದು ಕೈ ಮುಂದೆ ಮಾಡಿದಾಗ,ದುಃಖದ ಕಟ್ಟೆ ಒಡೆದು ಅಲ್ಲೇ ಕುಸಿದು ಕುಳಿತೆ.ಒಂದರೆಕ್ಷಣ ಕಕ್ಕಾಬಿಕ್ಕಿಯಾದ ಅವರು ಸಂದೀಪ್….ಸಂದೀಪ್ ಅನ್ನುತ್ತಾ ಸಮಾಧಾನಿಸಲು ಪ್ರಯತ್ನ ಪಟ್ಟು,ಸುಮ್ಮನೆ ನನ್ನನ್ನು ಅಳಲು ಬಿಟ್ಟರು.ಮಗುವಿನಂತೆ ಬಿಕ್ಕಿ ಅಳುತ್ತಿದ್ದ ನನ್ನೆದುರು ನೀರಿನ ಗ್ಲಾಸ್ ಇಟ್ಟು ಮೌನವಾದರು.ನೀರು ಕುಡಿದ ನಾನು ” ಕ್ಷಮಿಸಿ ” ಅಂತ ಎದ್ದೆ.
‘ಇಲ್ಲ ಕೂತಿರಿ’.
‘ಸರ್ ಒಂದು ವರದಿ ಇದೆ ಮಾಡಿ ಮತ್ತೆ ಮಾತಾಗುವೆ’ ಅಂದೆ.
ಇಂಟರ್ ಕಾಮ್ ಎತ್ತಿ ಮಿಸ್ಟರ್ ಹರೀಶ್ ಸಂದೀಪ ರ ಟೇಬಲ್ ನಲ್ಲಿ ಇರುವ ವರದಿ ಒಳಗಡೆ ಕಳಿಸಿ ಅಂದರು.
ಹರೀಶ್ ಬಾಗಿಲು ತಟ್ಟಿ ಒಳಗೆ ಬಂದು ಆ ವರದಿ ಕೊಟ್ಟು ಹೊರಡುವಾಗ ಅವರ ಒಂದು ಓರೆ ನೋಟ ನನ್ನೆಡೆಗೆ ಇತ್ತು.
ಅಲ್ಲೇ ಕುಳಿತು
ಮಾಡಿದ ವರದಿಯನ್ನು ಅವರೆದುರಿಗಿಟ್ಟೆ.

‘ಸಂದೀಪ್ ಅದಿರ್ಲಿ ಆಮೇಲೆ ನೋಡೋಣವಂತೆ……
‘ಈಗ ಹೇಳಿ ಏನಾಯ್ತು? ಅಷ್ಟು ಅಧೀರರಾದದ್ದು ಯಾಕೆ? ಕಥೆಗೆ ಪ್ರಶಸ್ತಿ ಬಂದದ್ದು ಸಂತಸವಾಗಬೇಕಿತ್ತು ನಿಮಗೆ.
ಏನೇ ಇದ್ದರೂ ನಿಸ್ಸಂಕೋಚವಾಗಿ ಹೇಳಿ ನಾನು ನಿಮ್ಮ ಬಾಸ್ ಅಂತ ಭಯ ಬೇಡ,ನೀವು ಇಲ್ಲಿ ಬರುವುದು ಹವ್ಯಾಸಕ್ಕಾಗಿ.ವೇತನ ಪಡೆದು ದುಡಿಯುವವರೂ ಸಹ ಇವತ್ತಿನ ದಿನಗಳಲ್ಲಿ ನಿಮ್ಮಷ್ಟು ನಿಯತ್ತಿನಿಂದ ದುಡಿಯಲಾರರು.
ಅಂತಹುದರಲ್ಲಿ ನಗರ ಸುತ್ತಿ ಸುದ್ದಿ ತಂದು ರಾತ್ರಿ ತನಕ ಕುಳಿತು,ನಡು ನಡುವೆ ನನ್ನ ಕೋಪಕ್ಕೆ ತುತ್ತಾಗಿ ದುಡಿಯುವ ನಿಮ್ಮ ನಿಯತ್ತನ್ನು ನಾನು ಯಾವತ್ತಿಗೂ ಗೌರವಿಸುತ್ತೇನೆ’.

ನಾನು ಕಂಪಿಸುವ ಕೈಗಳಿಂದ ಪ್ರಶಸ್ತಿ ಬಂದ ಸುದ್ದಿಯ ಕೆಳಗಡೆ ಇರುವ ಚಿತ್ರ ಮತ್ತು ವರದಿ ತೋರಿಸಿದೆ’
ಕುಖ್ಯಾತ ಶಾರ್ಪ ಶೂಟರ್, ಶಾಸಕರ ಕೊಲೆ ಅಪರಾಧಿ ಚೋಟ ರಂಜನ್ ಬಂಧನ
‘ಹೌದು ಇದು ಪಿ ಟಿ ಐ ವರದಿ ನಾನೇ ಮಾಡಿದ್ದು.
ಏನಾಯ್ತು?…ಅಂದಾಗ,
ನಾನು ಮೌನವಾದೆ.
ಯಾವುದೇ ಸಂಕೋಚಕ್ಕೊಳಗಾಗದೆ ಎಲ್ಲಾ ಹೇಳಿ ಅಂದಾಗ ನಾನು ಮಾತಾದೆ…
‘ಸರ್
ಈ ಚೋಟಾ ರಂಜನ್ ನನ್ನ ಖಾಸಾ ಅಣ್ಣ ಎಂದು ಗದ್ಗದಿತನಾದೆ’
ಎದುರಿಗಿದ್ದ ಸಂಪಾದಕರು ಒಂದು ಕ್ಷಣ ದಂಗಾದರು, ಅವರನ್ನು ಎದುರಿಸುವ ಎದೆಗಾರಿಕೆ ನನ್ನಲ್ಲಿರಲಿಲ್ಲ. ಮುಖ ತಗ್ಗಿಸಿದೆ.

‘ನೋಡಿ ಸಂದೀಪ್ ನೀವು ತುಂಬಾ ಧೈರ್ಯವಂತ ಹುಡುಗ ಒಂಥರಾ ಪಾದರಸ ಇದ್ದಂತೆ.ಇಷ್ಟು ಕುಗ್ಗುವುದು ನನಗೆ ಸರಿಕಾಣ್ತಾ ಇಲ್ಲ.ವಿಷಯ ಏನು ಅನ್ನುವುದನ್ನು ಮೊದಲು ತಿಳಿಸಿ.

ಸರ್ ರಂಜನ್ ಕೋಮಲವಾದ ಮನಸ್ಸಿನ ಹುಡುಗ, ಚಿಕ್ಕ ಪ್ರಾಯದಲ್ಲೇ ಊರನ್ನು ಬಿಟ್ಟು ಮುಂಬಯಿ ಸೇರಿದ.ನಮ್ಮವರೊಬ್ಬರ
ಕ್ಯಾಂಟೀನಿನಲ್ಲಿ ಕೆಲಸದಲ್ಲಿದ್ದ. ಮಾಲಕ ಆತನನ್ನು ರಾತ್ರಿ ಹಗಲು ದುಡಿಸಿಕೊಂಡು ಚಿಕ್ಕಾಸು ಕೊಡದೆ ಪಶುವಿನಂತೆ ನಡೆಸಿಕೊಂಡ.ಅವರ ಉಪದ್ರ ಅತಿ ಆದಾಗ ಹೇಗಾದರೂ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಠ ರಂಜನನಿಗೆ. ಅಲ್ಲಿಂದ ಹೊರ ಬಂದವನನ್ನು ಅಲ್ಲಿ ಇಲ್ಲಿ ಸುತ್ತಾಡಿ ಕೆಲಸವಿಲ್ಲದೆ ಅಲೆದಾಡುತ್ತಿದ್ದಾಗ ಆತನನ್ನು ಕೈ ಬೀಸಿ ಕರೆದದ್ದು ಮುಂಬಯಿ ರಂಗು ರಂಗಿನ ಭೂಗತ ಲೋಕ. ಕನಸು ಕಂಗಳ ಹುಡುಗ ಕತ್ತಲೆ ಜಗತ್ತನ್ನು ತನಗರಿವಿಲ್ಲದೆ ಹಿಂತಿರುಗಲಾರದಷ್ಟು ದೂರ ಪ್ರವೇಶಿಸಿಬಿಟ್ಟಿದ್ದ.
ಅಮ್ಮ ತಂಗಿ,ತಮ್ಮನ ಬದುಕಿಗೆ ತಾನು ಆಶ್ರಯದಾತನಾಗಬೇಕು.ಹೇಗಾದರೂ ಮಾಡಿ ಶ್ರೀಮಂತನಾಗಬೇಕು ಎನ್ನುವ ಹಟ ಆತನಲ್ಲಿ ಬೇರೂರಿತ್ತು.
ಕಳೆದ ನಾಲ್ಕು ವರ್ಷ ನಮ್ಮವರು ಅಂದುಕೊಂಡವರ ಪಾಲಾಯಿತು.
ಇನ್ನಾದರೂ ತನ್ನವರ ಚಿಂದಿ ಚೂರಾಗಿರುವ ಬದುಕನ್ನು ಭವ್ಯವಾಗಿ ಶೃಂಗರಿಸಬೇಕು ಎಂಬುದು ಅವನ ಆಸೆಯಾಗಿತ್ತು.ಪಾತಕ ಲೋಕ ಸೇರಿದ ಕೆಲವೇ ಕೆಲವು ದಿನಗಳಲ್ಲಿ ಆತ ಕುಖ್ಯಾತಿ ಪಡೆದದ್ದು ಶಾರ್ಪ ಶೂಟರ್ ಅಂತ.
ಹಲವು ಬಾರಿ ಆತನು ಜೈಲುವಾಸಿಯಾದರೂ ಹೆಚ್ಚಿನ ಬಾರಿ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿ ಆಗುತ್ತಿದ್ದ.
ಕೆಲವು ಸಲ ಅವನ ಗ್ಯಾಂಗ್ ನವರು ಅವನಿಗೆ ಜಾಮೀನು ಕೊಡುತ್ತಿದ್ದರು. ಪ್ರತಿ ಬಾರಿ ತಪ್ಪಿಸಿಕೊಂಡಾಗಲೂ ಒಂದಲ್ಲ ಒಂದು ಕಡೆ ಕೊಲೆ ಕೇಸಿನಲ್ಲಿ ಆತನ ಹೆಸರು ಕೇಳಿ ಬರುತ್ತಿತ್ತು.ಇದೀಗ ಸಿಕ್ಕಿ ಬಿದ್ದದ್ದು ನಗರದ ಖ್ಯಾತ ಶಾಸಕರೊಬ್ಬರ ಕೊಲೆ ಪ್ರಕರಣದಲ್ಲಿ!! ಇನ್ನು ಆತ ಹೊರಬರಲಾರ! ಬರಬಾರದು ಸಹ
ಎಂದು ಗಟ್ಟಿಯಾಗಿ ದೃಡ ಮನಸ್ಸಿನಿಂದ ಹೇಳಿದೆ.

ಸರ್ ಒಂದು ಮಾತು ಹೇಳುತ್ತೇನೆ ಆತ ಅಂಡರವರ್ಲ್ಡನಲ್ಲಿದ್ದರೂ ನಿಷ್ಟೂರವಾದಿಯಲ್ಲ. ಮಾನವೀಯ ಕಳಕಳಿ‌ ಆತನಲ್ಲಿ ಅದಮ್ಯವಾಗಿದೆ.
ಶಾಸಕರ ಕೊಲೆಗೆ ಕಾರಣ ನನಗೆ ಗೊತ್ತು.ದಕ್ಷಿಣ ಮುಂಬಯಿಯ ಅವರ ಏರಿಯಾದಲ್ಲಿ ಎಲ್ಲಾ ವ್ಯಾಪಾರಿಗಳಿಂದ ಅವರಿಗೆ ಹಪ್ತಾ ಹೋಗಬೇಕು.ಇಲ್ಲ ಅಂದರೆ ಶಾಸಕನ ಪುಡಾರಿ ಹುಡುಗರು ವ್ಯಾಪಾರ ಮಾಡಲು ಬಿಡಲ್ಲ.ಶಾಸಕರನ್ನು ಮಟ್ಟ ಹಾಕಲು ವ್ಯಾಪಾರಿಗಳು ರಂಜನನಿಗೆ ದುಂಬಾಲು ಬಿದ್ದರು.ಆತ ಈ ಕೆಲಸಕ್ಕೆ ನಯಾ ಪೈಸೆ ಪಡೆಯದೆ ಶಾಸಕರನ್ನು ಮುಗಿಸಿದ ಎನ್ನುವುದು ನನಗೆ ಗೊತ್ತಿರುವ ಸತ್ಯ ಅಂದೆ.

‘ನೀವು ರಂಜನ್ ಅನ್ನು ಮೀಟಾಗಿ ಎಷ್ಟು ಸಮಯ ಆಗಿದೆ
‘ನಂಬಿ ಸರ್ ಕಳೆದ ಹತ್ತು ವರ್ಷಗಳಿಂದ ನಾನು ಅವನ ಮುಖ ಕಂಡಿಲ್ಲ.ಆತ ಹಲವು ಬಾರಿ ನನ್ನ ಹೋಟೆಲಿಗೆ ಬರಲು ಪ್ರಯತ್ನಿಸಿದ.
ಸಮಾಜಘಾತುಕ ಅಂತ ನಾನು ಅವನನ್ನು ಹತ್ತಿರ ಸೇರಿಸಿಲ್ಲ.ಆದರೆ ಅವನ ಎಲ್ಲಾ ಆಗು ಹೋಗುಗಳನ್ನು ಅವನ ಹುಡುಗರ ಮುಖಾಂತರ ಅರಿತಿದ್ದೆ.
ಒಂದು ಕಾಕತಾಳೀಯ ನೋಡಿ,ಇವತ್ತು
ನಾನು ಸಂದರ್ಶನ ಮಾಡಿದ ಅಧಿಕಾರಿ ಅವನನ್ನು ಬಂಧಿಸಿರುವುದು,
ಇವತ್ತೇ ಅವನ ಬಂಧನದ ಸುದ್ದಿ ಬಂದಿರುವುದು,
ನನ್ನ ಕಥೆಗೆ ಪ್ರಶಸ್ತಿ ಬಂದ ಸುದ್ದಿ ನಗುಮುಖದ ಭಾವಚಿತ್ರದೊಂದಿಗೆ ಬಂದಿದ್ದರೆ,ಅವನ ಬಂಧನದ ಸುದ್ದಿ,ಕೈಕೊಳ ಹಾಗು ಮುಖಕ್ಕೆ ಕಪ್ಪುಪಟ್ಟಿಯೊಂದಿಗೆ ಬಂದಿದೆ.ಹೀಗಿರುವಾಗ ನಾನು ಹ್ಯಾಗೆ ಖುಷಿ ಅನುಭವಿಸಲು ಸಾಧ್ಯ
ಸರ್??

ಅಷ್ಟರಲ್ಲಿ… ಫ಼ೋನು ರಿಂಗಣಿಸಿತು….
ಸಂದೀಪ್ ಫ಼ೋನು ಎತ್ತಿ ಮಾತನಾಡಿ ಈಗ ಬಂದೆ ಅಂತ ಸಂಪಾದಕರು ಹೊರನಡೆದರು.
ಸಂಪಾದಕರಿಗೆ ಬಂದ ಕರೆಯಾದುದರಿಂದ ನಿಧಾನವಾಗಿ ಹಲೋ ಅಂದೆ,
‘ರಾಧಾಕೃಷ್ಣ ಅವರಾ..

‘ಸರ್ ಸಂಪಾದಕರು ಸ್ವಲ್ಪ ಹೊರಗಡೆ ಹೋದರು ತಾವ್ಯಾರು?
ನಾನು ಮುಂಬಯಿ ಕ್ರೈಂ ಬ್ರಾಂಚಿನಿಂದ ಸೀನಿಯರ್ ಪೋಲಿಸ್ ಆಫ಼ೀಸರ್ ದೇಶಪಾಂಡೆ.

ತಕ್ಷಣ ಅಂದೆ
ಸರ್ ನಾನು ಸಂದೀಪ್
ಓಹ್… ಸಂದೀಪ್
‘ನೀವಾ… ಇವತ್ತು ನನ್ನ ಸಂದರ್ಶನ ಓದಿದೆ ಚೆನ್ನಾಗಿ ಮಾಡಿರುವಿರಿ ಥ್ಯಾಂಕ್ಸ್ ನಿಮಗೆ’

‘ಪರವಾಗಿಲ್ಲ ಸರ್ ಅಷ್ಟು ಬ್ಯೂಸಿಯಾಗಿರುವಾಗಲೂ ನನ್ನೊಂದಿಗೆ ಮಾತಿಗೆ ಸಮಯ ಕೊಟ್ಟಿರುವಿರಿ.
ಸರ್ ನಿನ್ನೆ ದಿನ ಚೋಟಾ ರಂಜನ್ ಎಂಬ ಗ್ಯಾಂಗ್ ಲೀಡರ್ ನನ್ನು ಬಂಧಿಸಿದ್ದೀರಲ್ಲಾ ….ಆತನ ಬಗ್ಗೆ ಸ್ವಲ್ಪ
ಹೇಳಬಹುದಾ ಅಂತ ಮಾತಿಗೆಳೆದೆ.

ಮುಂಬಯಿ ಪಾತಕ ಲೋಕದಲ್ಲಿ ಚೋಟಾ ರಂಜನ್ ಬಹಳ ಹೆಸರುಳ್ಳವ,ಹಲವು ಬಾರಿ ಆತನನ್ನು ಬಂಧಿಸಿದರೂ ಆತನ ಹಿಂದಿರುವ ಬಲವಾದ ಕೈಗಳಿಂದ ಆತ ಜಾಮೀನು ಪಡೆಯುತ್ತಿದ್ದ.ಹಾಗೂ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಈ ಬಾರಿ ಆತ ಸೆರೆ ಸಿಕ್ಕಿರದಿದ್ದಲ್ಲಿ ಆತನನ್ನು ಮುಗಿಸುವ ಅಂದರೆ ಎನ್ ಕೌಂಟರ್ ಮಾಡಲು ನಮ್ಮ ಟೀಮಿಗೆ ಅನುಮತಿ ಸಿಕ್ಕಿತ್ತು.ಮುಂದಿನ ದಿನಗಳಲ್ಲಿ ಆತ ಹೊರಬರಲು ಸಾಧ್ಯವಿಲ್ಲ ಬಂದರೂ ಆತನ ಕಥೆ ಮುಗಿಯುತ್ತೆ.’

ಸರ್ ತುಂಬಾ ಉಪಯುಕ್ತ ಮಾಹಿತಿಯನ್ನು ಕೊಟ್ಟಿರುವಿರಿ ವಂದನೆಗಳು.ರಾಧಾಕೃಷ್ಣ ರವರು ಬಂದಾಗ ಕರೆ ಮಾಡಲು ಹೇಳುವೆ ಎಂದು ಫ಼ೋನು ಕೆಳಗಿಟ್ಟು ಆಳವಾದ ಉಸಿರನ್ನೆಳೆದುಕೊಂಡೆ.
ಕಣ್ಣ ಮುಂದೆ ಅಮ್ಮ ಬಂದು ಹೋದಳು.

ಇದು ನಡೆದು ಮತ್ತೆ ಹತ್ತು ವರ್ಷ ಕಳೆದಿರಬಹುದು.ಶಾಸಕರ ಕೊಲೆ ಕೇಸಿನಲ್ಲಿ ಒಳಹೋದ ಚೋಟಾ ರಂಜನ್ ಎರಡು ವರ್ಷ ಕಳೆಯುವುದರೊಳಗೆ ಹೊರಬಂದ. ಮುಂಬಯಿಯಲ್ಲಿ ಉಳಿದರೆ ತನ್ನನ್ನು ಮುಗಿಸಲಾಗುತ್ತೆ ಎಂಬುದನ್ನು ಆತ ಮೊದಲೇ ಅರಿತಿದ್ದ ಕಾರಣ ಊರು ಸೇರಿದ್ದ.ನನ್ನ ಗಮನಕ್ಕೆ ಬಾರದಂತೆ ಆತ ಅಮ್ಮನನ್ನು ಆಗಾಗ ಕದ್ದು ಮುಚ್ಚಿ ಸಿಕ್ಕಿ ಬರುತ್ತಿದ್ದ.ಅಮ್ಮನೂ ನನ್ನಲ್ಲಿ ಸುಳ್ಳು ಹೇಳುತ್ತಿದ್ದಳು ಎನ್ನುವುದು ನನಗೆ ಗೊತ್ತಿತ್ತು.ಹೇಗಿದ್ದರೂ ಹೆತ್ತಬ್ಬೆಗೆ ಹೆಗ್ಗಣ ಮುದ್ದು ಅಂದ ಹಾಗೆ ,ತಾಯಿ ಕರುಳಿಗೆ ಹಿರಿಯ ಮಗ ಅಂದರೆ ಸ್ವಲ್ಪ ಆಸೆ ಜಾಸ್ತಿಯೇ!!!

ಆಗಾಗ ಊರಿಗೆ ಹೋಗಿ ಅಮ್ಮನ ಆರೋಗ್ಯ ವಿಚಾರಿಸಿ ಬರುತ್ತಿದ್ದೆ.ಹಾಗೆಯೇ ಹೋಗಿದ್ದಾಗ ಒಂದು ದಿನ
ರಾತ್ರಿ ಊಟ ಮುಗಿಸಿ ಮಲಗುವ ಮುನ್ನ ಅಮ್ಮ ನಿಧಾನವಾಗಿ ಮಾತಿಗಿಳಿದಳು.
ಸ್ವಲ್ಪ ಆತಂಕ ಅವಳ ಮಾತಲ್ಲಿ ಮನೆ ಮಾಡಿತ್ತು..ಒಂದು ಮಾತು ಹೇಳಬೇಕಿತ್ತು ಅಂದಳು.
ಗೊತ್ತಮ್ಮ ಅಂದೆ.
ನನ್ನನ್ನೇ ದಿಟ್ಟಿಸಿ ನೋಡಿದಳು.
ಆಶ್ಚರ್ಯ ಅವಳಿಗೆ ….
ಅಮ್ಮ ರಂಜನ್ ವಿಷಯ ಅಲ್ವಾ!
ಹೇಳಮ್ಮಾ ಅಂದೆ.
ಈಗ ಆತ ತುಂಬಾ ಸುಧಾರಿಸಿದ್ದಾನೆ.ಮೊದಲಿನಂತೆ ಯಾವುದೇ ರಗಳೆಯಲ್ಲಿ ಇಲ್ಲ.ಅವನಿಗೊಂದು ಮದುವೆ ಮಾಡಿ ಬಿಡುವ ಎಲ್ಲೋ ಬದುಕಿರುತ್ತಾನೆ ಅಂದಳು.
ಅಮ್ಮ ನಿಮ್ಮ ಯಾವುದೇ ಆಸೆಗೂ ನನ್ನ ಅಡ್ಡಿ ಇಲ್ಲ. ಭೂಗತ ಜಗತ್ತಿನ ಜೊತೆ ಆತನ ಸಂಪರ್ಕ ಇಲ್ಲ ಅಂದರೆ ಖಂಡಿತ ಮಾಡಿ.ಅವನಿಗೆ ಬೇರಾವುದೇ ದುಶ್ಚಟಗಳಿಲ್ಲ.ಅದು ನನಗೂ ಗೊತ್ತು.ಆದರೆ ಅವನ ಯಾವುದೇ ಶುಭ ಕಾರ್ಯಕ್ಕೆ ನನ್ನನ್ನು ಕರೆಯಬಾರದು.ನನ್ನ ಈ ಮನೆಗೆ ಅವನು ಯಾವತ್ತಿಗೂ ಬರಬಾರದು,ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಅಪ್ಪಿತಪ್ಪಿ ಕೂಡ ಕಾಣಬಾರದು.
ನೀವು ಅವನ ಎಲ್ಲಾ ಶುಭ ಕಾರ್ಯಗಳಿಗೂ ಹೋಗಲು ನನ್ನ ಅಭ್ಯಂತರ ಇಲ್ಲ, ಎಂದು ಒಂದೇ ಉಸುರಿಗೆ ನಾನು ಹೇಳಿದಾಗ ಅಮ್ಮ ನಿರಾಳವಾದಳು.
ಸರಿ ಹಾಗಾದರೆ ಅಜ್ಜಿ ಮನೆಯಿಂದ ಅವನ ಮದುವೆಗೆ ದಿಬ್ಬಣ ಹೋಗಲಿ.
ಅದೂ….ಅಂತ ಅಮ್ಮ ಮುಂದುವರಿಸಿದಾಗ…
‘ಗೊತ್ತಮ್ಮ ಹುಡುಗಿ ಯಾರು ಅಂತ ಹೇಳಬೇಕಾಗಿಯೂ ಇಲ್ಲ ನೀವು ಮುಂದುವರಿಸಿ’ ಅಂತ ಹೇಳಿ ನಾನು ಮಲಗಲು ಹೋದೆ.
ಇನ್ನೇನು ನಿದ್ರೆಗೆ ಜಾರುವೆ ಅನ್ನುವಾಗ ಮೊಬೈಲ್ ರಿಂಗಣಿಸಿತು.ಯಾರಿರಬಹುದು ಎಂದು ಹಲೋ ಎಂದೆ.
ಸಂದೀಪ್,ನಾನು ರಂಜನ್ ಸ್ವಲ್ಪ ಹೊರಗೆ ಬರ್ತಿಯಾ? ಮನೆ ಎದುರುಗಡೆ ಇರೋ ಬಸ್ ನಿಲ್ದಾಣಕ್ಕೆ ಬಾ ಎಂದಾಗ ಅವನನ್ನು ಬೇಟಿಯಾಗಲು ಮನಸ್ಸು ಸ್ವಲ್ಪ ಹಿಂಜರಿಯಿತು.ಹೌದು ಅವನಲ್ಲಿ ನನಗೆ ಯಾವುದೇ ಬಾಂಧವ್ಯದ ಬೆಸುಗೆ ಇಲ್ಲ.ನನ್ನ ದೃಷ್ಟಿಯಲ್ಲಿ ಆತನೊಬ್ಬ ಸಮಾಜಘಾತುಕ,ಒಂದರೆಕ್ಷಣ ಯೋಚಿಸಿ… ಅಮ್ಮನಿಗೆ ಕೇಳಿಸದಂತೆ ಬಾಗಿಲು ತೆಗೆದು ರಂಜನ್ ಕರೆದತ್ತ ನಡೆದೆ.ನಿಲ್ದಾಣದ ಹಿಂದಿರುವ ದೊಡ್ಡ ಬಂಡೆ ಮೇಲೆ ಕುಳಿತುಕೊಂಡು ಒಂದಷ್ಟು ಹೊತ್ತು ಮಾತನಾಡಿ ಅವನಿಗೆ ಶುಭ ಹಾರೈಸಿ ಬಂದು ಮಲಗಿದೆ.

ಮಾರನೆಯ ದಿನ ಕರ್ಮ ಭೂಮಿ ಮುಂಬಯಿಗೆ ಪ್ರಯಾಣ ಬೆಳೆಸಿದೆ.
ಈಗ್ಗೆ ಮದುವೆಯಾಗಿ ಐದು ವರ್ಷದ ಗಂಡು ಮಗುವಿನ ಅಪ್ಪನಾಗಿ ನೆಮ್ಮದಿಯ ಬದುಕು ಸಾಗಿಸುತ್ತ ಇದ್ದ ರಂಜನ್.
ಆದರೆ ಆತನ ಜೀವನದ ದುರಂತ ಅಂತ್ಯವಾಗಿರಲಿಲ್ಲ.
ಮತ್ತೆ ಯಾವುದೋ ರಾದ್ದಾಂತ ಮಾಡಿಕೊಂಡು ಆತ ಕಂಬಿ ಒಳಗಡೆ ಹೋಗಿದ್ದಾನೆ.ಈ ಬಾರಿ ಮಾತ್ರ ಜೀವಾವಧಿ ಶಿಕ್ಷೆ ಅವನಿಗೆ.ಆದರೆ ಅವನ ನೆನಪಲ್ಲಿ ಅಮ್ಮ ಮಾತ್ರ ದಿನೇದಿನೇ ಕೊರಗುತ್ತಿದ್ದಾಳೆ.ಜೈಲಿನಲ್ಲಿದ್ದೇ ಅಲ್ಲಿಂದ ಅಮ್ಮನಿಗೆ ಕರೆ ಮಾಡುತ್ತಿದ್ದ.
ಕಳೆದ ಮಾರ್ಚ ತಿಂಗಳಲ್ಲಿ ಕರೆ ಮಾಡಿ ಹೇಳಿದ್ದನಂತೆ,…..
ಅಮ್ಮ ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಆದ ಕಾರಣ
ನಾಳೆ ನನ್ನನ್ನು ವಿಶಾಖಪಟ್ಟಣದ ಜೈಲಿಗೆ ಕಳುಹಿಸುತ್ತಾರೆ.ಮತ್ತೆ ನಿನ್ನೊಂದಿಗೆ ಎಂದು ಮಾತಾನಾಡುವೆನೋ ಗೊತ್ತಿಲ್ಲ ಎಂದವ ಮತ್ತೆ ಕರೆ ಮಾಡಿಲ್ಲ.
ಅವನ ಚಿಂತೆಯಲ್ಲಿ ಅಮ್ಮನ ಆರೋಗ್ಯ ಹದಗೆಟ್ಟಿದೆ.ನಾನು ಫ಼ೋನ್ ಮಾಡಿದಾಗ ಅಮ್ಮನ ಮೊದಲ ಮಾತು.. ರಂಜನ್ ಹೇಗಿದ್ದಾನೋ…
ಏನೋ ? ಪಾಪದ ಹುಡುಗ …ಹೇಗಾಗಿಹೋಯ್ತು ಅವನ ಬದುಕು!!! ಅವನು ಹೊರಬಂದರೆ ನಾನು ಶಾಂತವಾಗಿ ಕಣ್ಣುಮುಚ್ಚುವೆ….ಅಮ್ಮನ ಕೊರಳು ಉಬ್ಬಿ ಬಂದಂತಾಯಿತು….ತಡೆತಡೆದು ಬರೋ ಆ ಮಾತು ನನ್ನ ಕರುಳನ್ನು ಕತ್ತರಿಸುವಂತಿತ್ತು.

ಅಮ್ಮನ ಆರೋಗ್ಯ ಕಾಪಾಡಿಕೊಳ್ಳುವುದು ನನ್ನ ಪ್ರಮುಖ ಕರ್ತವ್ಯ.

ಅವಳ ವೇದನೆ ಏನು ಅನ್ನುವುದು ನನ್ನಷ್ಟು ಚೆನ್ನಾಗಿ ಬಲ್ಲವರಿಲ್ಲ.ರಂಜನ್ ಫ಼ೋನ್ ಕಾಲ್ ಮಾತ್ರ ಅವಳನ್ನು ಉಳಿಸುತ್ತೆ. ನನಗೆ ಅಮ್ಮ ಬೇಕು ಅದಕ್ಕಾಗಿ ಒಂದು ಉಪಾಯ ಮಾಡಿದೆ.
ತದ ನಂತರ ಅಂದರೆ ಕಳೆದ ಒಂದು ತಿಂಗಳಿಂದ ಮತ್ತೆ ನನ್ನಮ್ಮನ ಆರೋಗ್ಯದಲ್ಲಿ ತುಂಬಾ ಸುಧಾರಣೆ……
ನಾನು ಫ಼ೋನ್ ಮಾಡಿದ್ದ. ತಕ್ಷಣ ಅಮ್ಮನ ಉಲ್ಲಾಸದ ಸ್ವರ. ಸಂದೀಪ್ ಇವತ್ತು ರಂಜನ್ ಫ಼ೋನ್ ಮಾಡಿದ್ದ ಹತ್ತು ದಿನಕ್ಕಾಗಿ ಪೆರೋಲ್ ನಲ್ಲಿ ಹೊರಗೆ ಬಂದಿದ್ದನಂತೆ.ಊರಿಗೆ ಬರಲಾಗಲ್ಲ ಅಂತ ಹೇಳಿದ.ಇರಲಿ ಎಲ್ಲಾದರೂ ಆರಾಮದಿಂದ ಬದುಕಿದರೆ ಸಾಕು.ನಾನಂತೂ ಹೊಳೆಗೆರಗಿದ ಮರ ಯಾವತ್ತಾದರೂ ವಾಲಿಕೊಳ್ಳಲೇ ಬೇಕಲ್ವಾ….

ಬದುಕಿನ ಮುಸ್ಸಂಜೆಯಲ್ಲಿ ಮಗನ ಆಸರೆಯಲ್ಲಿರಬೇಕಾದ ಜೀವ .ಇದ್ದಷ್ಟು ದಿನ ಅಮ್ಮ ಖುಷಿಯಾಗಿರಬೇಕು !!!!!! ಅವಳ ನೆಮ್ಮದಿಯ ಬದುಕಿಗಾಗಿ ನಾನೊಂದು ತಪ್ಪು ಮಾಡಿರುವೆ.ಆ ತಪ್ಪು ಅವಳಿಗೆ ಮತ್ತಷ್ಟು ಬಲ ಕೊಡುತ್ತೆ…….

ನೆನಪುಗಳನ್ನು ಹೊತ್ತುಕೊಂಡು..

ಅದೆಷ್ಟು ಹೊತ್ತು ಹಾಗೇ ನಿಂತಿದ್ದನೋ ಸಂದೀಪ್…..ಸಂಜೆ ಸೂರ್ಯ ಮೆಲ್ಲನೆ ಅಸ್ತಮಿಸುತ್ತಿದ್ದ.ಭೋರೆಂದು ಅಳುತ್ತಿದ್ದ ಬಾನು ಸಮಾಧಾನಗೊಂಡಂತಿತ್ತು.
ಒಂದಷ್ಟು ಹೊತ್ತು ವಾಕಿಂಗ್ ಮಾಡಿ ಅಮ್ಮನಿಗೊಂದು ಕಾಲ್ ಮಾಡುವೆನೆಂದು ಮನೆಯಿಂದ ಹೊರಬಿದ್ದ ಸಂದೀಪ್.

ತನ್ನ ಪರಿವಾರದ ಸಂತಸ ಅಡಗಿರುವುದು ಅಮ್ಮನ ನಗುವಲ್ಲಿ …ಅವಳ ಲವಲವಿಕೆಯಲ್ಲಿ,ಹೆತ್ತ ಕರುಳಿನ ನೋವಿಗೆ ದನಿಯಾದ ಸಂದೀಪನ ಬದುಕೀಗ ಚಿನ್ನದ ತೊಟ್ಟಿಲು.

ಸ್ವರ ಬದಲಿಸಿ ವಾರಕ್ಕೊಮ್ಮೆ ಅಮ್ಮನಿಗೆ ಒಂದು ಕಾಲ್ ರಂಜನ್ ಹೆಸರಲ್ಲಿ ಮಾಡುವುದು ಸಂದೀಪ್ ನ ಬದುಕಿನ ಮುಖ್ಯ ಭಾಗವಾಯಿತು.

ಅಮ್ಮನೆಂಬ ಆಸ್ತಿಯನ್ನು ಉಳಿಸಿಕೊಳ್ಳುವ ಏಕೈಕ ಮಾರ್ಗವಾಗಿ ಸಂದೀಪ್ ಆಗಾಗ್ಗೆ ರಂಜನ್ ಆಗಬೇಕಾದ ಅನಿವಾರ್ಯತೆ ಅವನಿಗಿದೆ.

ಹಾಗಾದರೆ ಸಂದೀಪ್…
ತಪ್ಪಿತಸ್ತನಾ !!?!!