ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಲ್ಲಮಪ್ರಭು ವಚನಗಳಲ್ಲಿ ಸಂಗೀತ ವಿಚಾರಗಳು

ವಿದುಷಿ ಡಾ. ಶ್ಯಾಮಲಾ ಪ್ರಕಾಶ್
ಇತ್ತೀಚಿನ ಬರಹಗಳು: ವಿದುಷಿ ಡಾ. ಶ್ಯಾಮಲಾ ಪ್ರಕಾಶ್ (ಎಲ್ಲವನ್ನು ಓದಿ)

‘ಎರಡೆಂಬತ್ತು ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು’(ಸಮಗ್ರ ವಚನ ಸಂಪುಟ2, 2001, ಪು.169) ಎಂಬ ಅಲ್ಲಮನ ವಚನದಲ್ಲಿ ವಚನಗಳನ್ನು ಹಾಡುತ್ತಿದ್ದರೆಂಬುದಕ್ಕೆ ಮತ್ತು ನಿರಂತರವಾಗಿ ಹಾಡುತ್ತಿದ್ದರೆನ್ನುವುದಕ್ಕೆ ಪುರಾವೆ ದೊರೆಯುತ್ತದೆ. ಅಲ್ಲಮನು ಮದ್ದಳೆ ವಾದನದಲ್ಲಿ(ಹರೆ) ಪ್ರವೀಣನಾಗಿದ್ದನೆಂಬುದು ಹರಿಹರ, ಚಾಮರಸರ ಕಾವ್ಯಗಳಲ್ಲಿ ವೇದ್ಯವಾಗುವ ವಿಚಾರ. ಅದಕ್ಕೆ ಪೂರಕವಾಗಿ ಅಲ್ಲಮನ ವಚನವೇ ಸಾರುವಂತೆ, ‘ನಿಮ್ಮ ಲೀಲೆ ನಿಮ್ಮ ವಿನೋದ ನಿಮ್ಮ ಹರೆ ನಿಮ್ಮ ಕೊಳಲು’(ವ.1304.ಪು.384) ಎನ್ನುವಲ್ಲಿ ಶಿವನ ಲೀಲಾ ವಿನೋದಗಳನ್ನು ಒಳಗೊಂಡ ವಚನಗಳನ್ನು ಹಾಡುವಾಗ ಹರೆ, ಕೊಳಲು ಮೊದಲಾದ ವಾದ್ಯಗಳು ಬಳಕೆಯಾಗುತ್ತಿದ್ದವೆಂದು ಊಹಿಸಬಹುದಾಗಿದೆ. ‘ಕಂಡು ಕೇಳಿದ ಗೀತವಾದ್ಯ ನೃತ್ಯಾದಿಗಳೆ ಲಿಂಗದ ಕೇಳಿಕೆ’(ವ. 942. ಪು. 283) ಮತ್ತು ‘ಎನ್ನ ಶ್ರೋತ್ರದಲ್ಲಿ ನಿಮಗೆ ಪಂಚ ಮಹಾ ವಾದ್ಯದ ಕೇಳಿಕೆ’(ವ. 975. ಪು. 293) ಎಂಬ ವಚನಗಳ ಸಾಲುಗಳಲ್ಲಿ ತಾನು ಕೇಳಿ ಸುಖಿಸಿದ ಗೀತವಾದ್ಯಗಳು, ಪಂಚಮಹಾವಾದ್ಯಗಳು, ತಾನು ಕಂಡು ನಲಿದ ನೃತ್ಯಗಳೆಲ್ಲವೂ ಶಿವನಿಗೂ ಅರ್ಪಿತವಾಗುವುವೆಂಬ ಅರ್ಪಣಾ ಮನೋಭಾವವಿದೆ. ಇಲ್ಲಿ ವಿಶಿಷ್ಟಾದ್ವೈತದ ತಿರುಳನ್ನೂ ಅಲ್ಲಮನು ಎತ್ತಿ ಹಿಡಿದಿದ್ದಾನೆ.
ಅಲ್ಲಮ ಪ್ರಭುವಿನ ಬೆಡಗಿನವಚನಗಳು ಹಲವು ಒಗಟಿನ ರೂಪದಲ್ಲಿವೆ.

ಭೂಮಿಯಾಕಾಶವನೊಂದು ಮಾಡಿ
ಚಂದ್ರ ಸೂರ್ಯರಿಬ್ಬರ ತಾಳವ ಮಾಡಿ
ವಾಯು ನಿದ್ರೆಗೆಯ್ದೆಡೆ ಆಕಾಶ ಜೋಗುಳವಾಡಿತ್ತು
(ವ.63. ಪು.181)
ಎಂಬ ನಿಗೂಢ-ಬೆಡಗಿನ ಕಾವ್ಯಾತ್ಮಕ ಸಾಲುಗಳಲ್ಲೂ ಅಲ್ಲಮನ ಸಂಗೀತದ ಒಲವು ಪ್ರದರ್ಶಿತವಾಗಿದೆ.
ದಶವಿಧ ನಾದಗಳು: ಕನ್ನಡ ಕಾವ್ಯಗಳಲ್ಲಿ ಪಂಚ ಮಹಾವಾದ್ಯಗಳ ಉಲ್ಲೇಖವು ಅನೇಕ ಕಡೆ ಬಂದಿದೆ. ಅಂತೆಯೇ ದಶವಿಧ ವಾದ್ಯಗಳ ಉಲ್ಲೇಖವೂ ಇದೆ. ಅಲ್ಲಮಪ್ರಭು ಈ ದಶವಿಧ ವಾದ್ಯಗಳನ್ನು ತನ್ನ ವಚನದಲ್ಲಿ ಪ್ರಸ್ತಾಪಿಸಿದ್ದಾನೆ.
ಭ್ರಮರನಾದ ವೀಣಾನಾದ ಘಂಟಾನಾದ
ಭೇರಿನಾದ ಮೇಘನಾದ ಪ್ರಣವನಾದ
ದಿವ್ಯನಾದ ಸಿಂಹನಾದ ಶರಭನಾದ ಮಹಾನದಂಗಳು
(812 – 240)
ಎಂದು ವಿವರಿಸಿ ಮತ್ತೊಂದೆಡೆ ಇವನ್ನು ‘ದಶವಿಧಸುನಾದ’ (ವ.1540) ವೆಂದಿದ್ದಾನೆ.
ನಾದದ ಮಹತ್ವ:
ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವು ಐವತ್ತೆರಡು ಅಕ್ಷರದೊಳಗೂ
ಐವತ್ತೆರಡಕ್ಷರಗಳೆಲ್ಲವು ಒಂದು ಜಿಹ್ವೆಯೊಳಗೂ
ಆ ಜಿಹ್ವೆ ನಾದದೊಳಗೂ, ಆ ನಾದ ಬ್ರಹ್ಮದೊಳಗೂ
ಆ ನಾದ ಬ್ರಹ್ಮದ ಸಂಚವ ತಿಳಿದೊಡೆ ಗುಹೇಶ್ವರ ತಾನೇ
(ವ.1533 ಪು.456)
ಎಂದು ಹೇಳಿ ಅಲ್ಲಮಪ್ರಭು ನಾದವನ್ನು ನಾದಬ್ರಹ್ಮವೆಂದು ಕರೆಯುತ್ತಾನೆ.
13ನೇ ಶತಮಾನದ ಶಾಙ್ರ್ಞದೇವನು,
ಚೈತನ್ಯಂ ಸರ್ವಭೂತಾನಾಂ ವಿವೃತಂ ಜಗದಾತ್ಮನೇ
ನಾದಬ್ರಹ್ಮ ತದಾನಂದಂ ಅದ್ವಿತೀಯಮುಪಾಸ್ಮಹೇ

(‘ಶಾಙ್ರ್ಗದೇವನ ಸಂಗೀತ ರತ್ನಾಕರ’,ಡಾ. ರಾ. ಸತ್ಯನಾರಾಯಣ, ಪದ್ಯ 217, ಪ್ರಕರಣ-3, ಕನ್ನಡ ವ್ಯಾಖ್ಯಾನ – ಸಂಪುಟ 1, ಭಾಗ – 1, ಪು.175)
ಎಂದು ನಾದವನ್ನು ಪೂಜನೀಯವಾಗಿಸಿದ್ದಾನೆ. ಅಲ್ಲಮಪ್ರಭು 12ನೇ ಶತಮಾನದಲ್ಲಿಯೇ ನಾದಬ್ರಹ್ಮವೆಂದು ವಚನದಲ್ಲಿ ಉಲ್ಲೇಖಿಸಿರುವುದು ಗಮನಾರ್ಹ. ಮತ್ತೊಂದು ಅಲ್ಲಮನ ವಚನದಲಿ ‘ವೇದನಾದದೊಳಡಗಿತ್ತು’(ವ.1531 ಪು.455) ಎಂದು ಹೇಳಲಾಗಿದೆ.
ಬಸವಣ್ಣನವರನ್ನು ಪ್ರಶಂಸಿಸುತ್ತಾ,
ಅನಾದಿಪುರುಷ ಬಸವಣ್ಣ
ನಾದಪುರುಷ ಬಸವಣ್ಣ
ನಾದಮಂತ್ರಗಳು ಪಂಚಮಹಾವಾದ್ಯಂಗಳು
ನಿಮ್ಮ ಮುಂದಿರ್ದೂ ನಿಮ್ಮ ಕಾಣವೆನುತ್ತಿಹವು
(759- 209)
ಹೀಗೆ ನಾದದ ಮೂಲಕ ಬಸವಣ್ಣನ ಎತ್ತರ ಬಿತ್ತರಗಳನ್ನು ವರ್ಣಿಸಲಾಗಿದೆ.
ಒಂದು ಅಪರೂಪದ ವಚನ-ವ್ಯಾಖ್ಯಾನ: ‘ಸ್ವರದ ಹುಳ್ಳಿಯ ಕೊಂಡು ಗಿರಿಯ ತಟಾಕಕ್ಕೆ ಹೋಗಿ ಹಿರಿಯರು ಓಗರವ ಮಾಡುತ್ತಿದ್ದರು’(ವ.251) – ಅಲ್ಲಮನ ಈ ವಚನಕ್ಕೆ ಅಪೂರ್ವವಾದ ಅರ್ಥವಿವರಣೆಯನ್ನು ಡಾ. ಡಿ.ಆರ್.ನಾಗರಾಜ್‍ರವರು ಉಪನಿಷತ್ತಿನ ಆಧಾರವಾಗಿ ನೀಡಿದ್ದಾರೆ. “ಛಾಂದೋಗ್ಯದಲ್ಲಿ ‘ಸ್ವರ’ ಪರಿಕಲ್ಪನೆಯನ್ನು ಕುರಿತಂತೆ ಮಹತ್ವದ ಹೊಳಹು ಸಿಗುತ್ತದೆ. ದೇವತೆಗಳು ಸಾವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಮೊದಲು ಛಂದಸ್ಸಿನಲ್ಲಿ ಅಡಗಿಕೊಳ್ಳುತ್ತಾರೆ. ಛಂದಸ್ಸಿನಲ್ಲೂ ಹರುಕುಂಟು. ಹೀಗಾಗಿ ಅಲ್ಲೂ ಅಪಾಯ ತಪ್ಪದೇ ದೇವತೆಗಳು ‘ಸ್ವರ’ದಲ್ಲಿ ಹುದುಗಿಕೊಳ್ಳುತ್ತಾರೆ”(‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’, ಡಾ. ಡಿ.ಆರ್.ನಾಗರಾಜ್, 1999) ಎಂಬ ವಿವರಣೆಯಲ್ಲಿ ಸ್ವರದ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ.
ಧಾತು-ಮಾತು: ಅಲ್ಲಮನು ತನ್ನ ವಚನವೊಂದರಲ್ಲಿ ‘ಧಾತು ಮಾತು ಪಲ್ಲಟಿಸಿದೊಡೆ ಗಮನವಿನ್ನೆಲ್ಲಿಯದೋ’(ವ.266) ಎಂದು ಹೇಳಿ ಸಂಗೀತದಲ್ಲಿ ಧಾತು-ಮಾತುಗಳಿಗಿರುವ ಸಂಬಂಧ, ಅವುಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ್ದಾನೆ. ಸಂಗೀತದಲ್ಲಿ ಹಾಡುವ ಸಾಹಿತ್ಯವೇ ಮಾತು. ಆ ಗೇಯ ಸಾಹಿತ್ಯವನ್ನು ಹೇಗೆ ಹಾಡಬೇಕೆಂದು ಸೂಚಿಸುವ ಮಟ್ಟುವನ್ನೇ ಧಾತುವೆನ್ನಲಾಗುತ್ತದೆ. ಧಾತು – ಮಾತುಗಳು ಬೇರೆಯಾಗಿ ಬಿಟ್ಟರೆ ವಾಗ್ಗೇಯ ರಚನೆಗೆ ಅರ್ಥವೇ ಇಲ್ಲದಂತಾಗುತ್ತದೆ. ಶಾಙ್ರ್ಗದೇವನು, ‘ಧಾತು ಮಾತು ಸಮಾಯುಕ್ತಂ ಗೀತಮಿತ್ಯುಚ್ಚತೇ ಬುಧೈಃ’(ಡಾ. ಪದ್ಮಾ ಮೂರ್ತಿ, ‘ಸಂಗೀತ ಲಕ್ಷಣ ಸಂಗ್ರಹ’, 1981, ಪು.88) ಎಂದಿದ್ದಾನೆ. ಈ ಧಾತು-ಮಾತು ಶಾಙ್ರ್ಗದೇವನಿಗೂ ಮೊದಲೇ ಅಲ್ಲಮನಲ್ಲಿ ಮೂಡಿಬಂದಿದೆ(ಡಾ. ಸರ್ವಮಂಗಳಾ ಶಂಕರ್, ‘ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ’, 2008, ಪು.94) ಎಂಬ ವಿಚಾರ ಗಮನಾರ್ಹವಾಗಿದೆ. ಅಲ್ಲಿಗೆ 12ನೇ ಶತಮಾನಕ್ಕೇ ಹೀಗೆ ಸ್ವರಲಿಪಿ ಬರೆಯುವ ಅಭ್ಯಾಸವಿತ್ತು ಮತ್ತು ಅಲ್ಲಮಪ್ರಭುವಿಗೆ ಇದರ ಬಗೆಗೆ ಪರಿಪೂರ್ಣ ಮಾಹಿತಿ ಇತ್ತು ಎಂದೆನ್ನಬಹುದು.
ಹೀಗೆ ಅಲ್ಲಮಪ್ರಭುವಿನ ವಚನಗಳಲ್ಲಿ ವಿಶೇಷವಾಗಿ ಗುರುತಿಸಬಹುದಾದ ಪರಿಕಲ್ಪನೆಗಳಲ್ಲಿ ‘ನಾದಬ್ರಹ್ಮ’ ಪದದ ಪ್ರಯೋಗ, ಸ್ವರದ ಮಹತ್ವ, ಧಾತು-ಮಾತು, ಸಂಗೀತ ಪರಿಭಾಷೆಗಳ ಬಳಕೆ, ಮೊದಲಾದವು ಮುಖ್ಯವಾದವುಗಳು. ಸಂಗೀತಶಾಸ್ತ್ರಗಳಲ್ಲಿ ನಾದಬ್ರಹ್ಮ ಎಂಬ ಪದವನ್ನು ಮೊಟ್ಟಮೊದಲಿಗೆ ಉಲ್ಲೇಖಿಸಿದವನು ಶಾಙ್ರ್ಗದೇವನೆಂದು ದಾಖಲಾಗಿದೆ(ಕೆಲವರಿಗಂತೂ ಇದು ಬೇಂದ್ರೆಯವರ ಪದವೇ ಆಗಿದೆ). ಹಾಗೆಯೇ, ಧಾತು-ಮಾತು ಪದಗಳ ಮೊದಲ ಪ್ರಯೋಗಕಾರನೂ ಶಾಙ್ರ್ಗದೇವನೇ ಎಂದಿದೆ. ಆದರೆ, 12ನೇ ಶತಮಾನದಲ್ಲೇ ಕನ್ನಡ ನಾಡಿನ ಅಲ್ಲಮಪ್ರಭು ತನ್ನ ವಚನಗಳಲ್ಲಿ ಈ ಪದಗಳನ್ನು ಪ್ರಯೋಗ ಮಾಡಿದ್ದಾನೆಂಬುದು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ದಾಖಲಾಗಬೇಕಾಗಿದೆ.