ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಸ್ಪಷ್ಟತೆಯ ಹುಡುಕುತ್ತಾ

ಶಿವಪ್ರಸಾದ್
ಇತ್ತೀಚಿನ ಬರಹಗಳು: ಶಿವಪ್ರಸಾದ್ (ಎಲ್ಲವನ್ನು ಓದಿ)

ಕುಸಿದಿದ್ದೇನೆ ಒಂದೊಂದೇ ಹಂತವಾಗಿ
ಈ ಆಳಕ್ಕೆ ಇಳಿದ ಮೇಲೆ ತಿಳಿದದ್ದು
ತಪ್ಪು ಸರಿ ಎನ್ನುವ ಲೆಕ್ಕಾಚಾರ ಯಾವುದೂ ಇಲ್ಲಾ
ಅರಳುತ್ತಾ ಬಾಡುವ ಆಟ ಹೊಸತೇನಲ್ಲ
ಗೋಳ ದಾಟಿ ಖಗೋಳದ ಒಳಗೆಲ್ಲಾ ನುಸುಳಿ
ಇಡೀ ಬ್ರಹ್ಮಾಂಡ, ಸಮಾಂತರ ಲೋಕ,
ಅನಂತ ಜಗತ್ತುಗಳೊಳಗೆ ಭೂತ, ವರ್ತಮಾನ, ಭವಿಷ್ಯತ್
ಎಲ್ಲೆಲ್ಲಿ ಅಲೆದರೂ ಹೊಸತನದ ಹಪಾಹಪಿಗೆ
ಜೋತು ಬಿದ್ದಿರುವೆ ಇದೇ
ಬೆಕ್ಕಿನ ರೋಮಗಳ ಕೆದಕುತ್ತಾ…
ಹೊಸ ಬೆಳಕಿನ ಕಿರಣಗಳ ಗೋಜಿಗೆ ಹೋಗದಿರಿ
ಮಾಂಸ ರಕ್ತದ ಕಿಟಕಿಯ ಸರಳುಗಳ ನಡುವೆ ಬೆಳಕು ತೂರುವುದಿಲ್ಲ..
ಬೇಕು ಮೂಳೆಯಂತಹ ಸರಳುಗಳು ಹೊತ್ತು ನಿಲ್ಲಲು..
ಪರಕೀಯ ಬಾಗಿಲು ಹಿತ್ತಲಿನದಲ್ಲ ಮುಂದಿನದೂ ಅಲ್ಲ
ಗೃಹಬಂಧನದ ಬಾಗಿಲು
ಅಲ್ಲಿ ಮೃತ್ಯುವಿನ ನರ್ತನ ವಿಷಾದದ ಗಾಯನ ಮತ್ತು ಏಕಾಂತದ ತಾಳ ಮದ್ದಳೆ..
ಅಂದದ ಶಿಲ್ಪಗಳು ಗುಡಿಯ ಒಳಗೆ ಇದೀಗ ಮೌನ ತಬ್ಬಿದ ಬಿರುಸು ಪ್ರಾರ್ಥನೆ
ಆರಿಸಿಕೊಳ್ಳಿ ನಿಮ್ಮ ನಿಮ್ಮ ಪ್ರಾರ್ಥನೆಗಳನ್ನು..
ಬಿಟ್ಟರೆ ಈ ಅವಕಾಶ ಬರದು.‌
ಮತ್ತೆ ಹೇಳುತ್ತೇನೆ ಕುಸಿದಿದ್ದೇನೆ ಒಂದೊಂದೇ ಹಂತವಾಗಿ
ಆದರೆ…
ಹೊಸತನದ ಹಪಾಹಪಿಗೆ ಜೋತು ಬಿದ್ದಿರುವೆ
ಇದೇ ಬೆಕ್ಕಿನ ರೋಮಗಳ ಕೆದಕುತ್ತಾ…