ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಂಟನಿ ಮತ್ತು ಕ್ಲಿಯೋಪಾತ್ರ 4

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಅಂಕ 4
ದೃಶ್ಯ 1
ಅಲೆಕ್ಝಾಂಡ್ರಿಯಾದ ಮುಂದೆ, ಸೀಸರನ ಪಾಳಯ ಸೀಸರ್, ಮೆಸೆನಾಸ್, ಸೈನ್ಯದೊಂದಿಗೆ ಪ್ರವೇಶ ಸೀಸರ್, ಪತ್ರವೊಂದನ್ನು ಓದುತ್ತ…

ಸೀಸರ್. ನನ್ನನ್ನು ಹುಡುಗನೆಂದು ಕರೆಯುತ್ತಾನೆ, ಈಜಿಪ್ಟಿನಿಂದ ನನ್ನನ್ನು ಹೊಡೆದೋಡಿಸುವ ಶಕ್ತಿ ತನಗಿದೆ ಎನ್ನುವ ತರ ಛೇಡಿಸುತ್ತಾನೆ. ನನ್ನ ರಾಯಭಾರಿಗೆ ಸಲಾಕೆಗಳಿಂದ ಹೊಡೆಸಿದ್ದಾನೆ, ದ್ವಂದ್ವ ಯುದ್ಧಕ್ಕೆ ನನ್ನ ಕರೆದಿದ್ದಾನೆ — ಆಂಟನಿಗೆದುರು ಸೀಸರ್. ಆ ಮುದಿ ಘಾತುಕನಿಗೆ ಗೊತ್ತಿರಬೇಕು ಸಾಯುವುದಕ್ಕೆ ನನಗೆ ಬೇರೆ ಅನೇಕ ದಾರಿಗಳಿವೆ, ಈ ಮಧ್ಯೆ ಅವನ ಸವಾಲನ್ನು ನೋಡಿ ನಾನು ನಕ್ಕೆನೆಂದು ಅವನಿಗೆ ಹೇಳು.
ಮೆಸೆನಾಸ್. ಸೀಸರ್ ಯೋಚಿಸಬೇಕು, ಅಂಥಾ ಶ್ರೇಷ್ಠನೊಬ್ಬ ಕೋಪಾವಿಷ್ಟನಾದಾಗ, ಅವನು ಸೆರೆಸಿಕ್ಕುವುದು ಖಂಡಿತ. ಅವನಿಗೆ ಉಸಿರು ತೆಗೆಯುವುದಕ್ಕೆ ಬಿಡಬೇಡಿ, ಬದಲು ಅವನ ಏಕಾಗ್ರಭಂಗದ ಲಾಭ ಪಡೆದುಕೊಳ್ಳಿ. ಸಿಟ್ಟು ಯಾವತ್ತೂ ತನ್ನ ರಕ್ಷಕನಾದ್ದಿಲ್ಲ.
ಸೀಸರ್. ನಮ್ಮ ಸೇನಾನಾಯಕ ಶ್ರೇಷ್ಠರೆಲ್ಲರೂ ತಿಳಿಯಬೇಕು ನಾಳೆ ನಾವು ನಮ್ಮ ಅನೇಕ ಯುದ್ಧಗಳಲ್ಲಿ ಕೊನೇ ಯುದ್ಧವನ್ನು ಕೈಗೊಳ್ಳಲಿದ್ದೇವೆ. ನಮ್ಮ ಸಾಲಿನಲ್ಲೀಗ ನಿನ್ನೆ ಮೊನ್ನೆಯ ವರೆಗು ಮಾರ್ಕ್ ಆಂಟನಿಯ ಸೇವೆ ಮಾಡಿದವರಿದ್ದಾರೆ, ಅವನನ್ನು ಸುತ್ತುವರಿಯುವುದಕ್ಕೆ ಅವರೇ ಸಾಕು. ಹಾಗಾಗುವಂತೆ ನೋಡಿಕೋ, ಮತ್ತು ಸೈನ್ಯಕ್ಕೆ ಔತಣ ಹಾಕು; ನಮ್ಮಲ್ಲಿ ಸಾಕಷ್ಟು ದಾಸ್ತಾನು ಇದೆ, ಈ ಖರ್ಚು ಅವರು ಗಳಿಸಿರುವ ಅರ್ಹತೆ. ಪಾಪ ಆಂಟನಿ!
[ಎಲ್ಲರೂ ನಿಷ್ಕ್ರಮಣ]

ದೃಶ್ಯ 2
ಅಲೆಕ್ಝಾಂಡ್ರಿಯಾ, ಕ್ಲಿಯೋಪಾತ್ರಳ ಅರಮನೆ…ಆಂಟನಿ, ಕ್ಲಿಯೋಪಾತ್ರ, ಈನೋಬಾರ್ಬಸ್, ಚಾರ್ಮಿಯಾನ್, ಇರಾಸ್,ಅಲೆಕ್ಸಾಸ್, ಇತರರೊಂದಿಗೆ ಪ್ರವೇಶ…

ಆಂಟನಿ. ಅವನು ನನ್ನ ಜತೆ ಹೋರಾಡುವುದಿಲ್ಲ, ಅಲ್ಲವೇ ಡೊಮಿಟಿಯಸ್?
ಈನೋ. ಇಲ್ಲ.
ಆಂಟನಿ. ಯಾಕಿಲ್ಲ?
ಈನೋ. ಯಾಕೆಂದರೆ, ಅದೃಷ್ಟದಲ್ಲಿ ಇಪ್ಪತ್ತು ಪಟ್ಟು ಜಾಸ್ತಿಯಿರುತ್ತ, ತಾನು ಒಬ್ಬನಿಗೆ ಇಪ್ಪತ್ತು ಅಂತ ಅವನು ತಿಳಿದುಕೊಂಡಿದ್ದಾನೆ.
ಆಂಟನಿ. ಯೋಧನೇ, ನಾಳೆ ನಾನು ನೆಲದಲ್ಲೂ ಜಲದಲ್ಲೂ ಹೋರಾಡುವೆ, ಒಂದೋ ನಾನು ಉಳಿಯಬೇಕು, ಇಲ್ಲವೇ ನನ್ನ ಸಾಯುವ ಪ್ರತಿಷ್ಠೆಯನ್ನು ರಕ್ತದಲ್ಲಿ ಮೀಯಿಸಿ ಮತ್ತೆ ಬದುಕಿಸಬೇಕು. ನೀನು ಚೆನ್ನಾಗಿ ಕಾದುವಿಯಾ?
ಈನೋ. ನಾನು ಹೊಡೆದು ಕೂಗುವೆ, `ತಗೋ ಎಲ್ಲಾ.’
ಆಂಟನಿ. ಸರಿಯಾಗಿ ಹೇಳಿದಿ. ಬಾ, ಹೋಗುವಾ! ನನ್ನ ಮನೆಗೆಲಸದವರನ್ನು ಬರಹೇಳು. ಈವತ್ತು ರಾತ್ರಿ ಮೂರು ನಾಲ್ಕು ಸೇವಕರ ಪ್ರವೇಶ… ಊಟದಲ್ಲಿ ಧಾರಾಳವಾಗಿರೋಣ. — ಎಲ್ಲಿ ನಿನ್ನ ಕೈ ಕೊಡು; ನೀನು ನಿಜಕ್ಕೂ ನಿಷ್ಠಾವಂತ — ಅದೇ ರೀತಿ
ನೀನು — ನೀನು — ಮತ್ತು ನೀನು — ಮತ್ತು ನೀನು.ನೀವು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ, ಹಾಗೂ ರಾಜರುಗಳು ನಿಮ್ಮ ಒಡನಾಡಿಗಳಾಗಿದ್ದಾರೆ.
ಕ್ಲಿಯೋ. [ಈನೋಬಾರ್ಬಸ್‍ಗೆ ಮಾತ್ರ] ಏನಿದರ ಅರ್ಥ?
ಈನೋ. [ಕ್ಲಿಯೋಪಾತ್ರಳಿಗೆ ಮಾತ್ರ] ದುಃಖ ಮನಸ್ಸಿನಿಂದ ಹೊರಬಿಡುವ ವಿಲಕ್ಷಣ ಸಂಗತಿಗಳಲ್ಲಿ ಇದೂ ಒಂದು.
ಆಂಟನಿ. ಮತ್ತು ನೀನು ಕೂಡಾ ನಿಷ್ಠನೇ. ನಾನೀಗ ಇಷ್ಟೆಲ್ಲಾ ವ್ಯಕ್ತಿಗಳಾಗಿದ್ದು, ನೀವೆಲ್ಲಾ ಒಬ್ಬ ಆಂಟನಿಯಾಗಿ ಇರುತ್ತಿದ್ದರೆ ಎಂದುಕೊಳ್ಳುತ್ತೇನೆ — ಯಾಕೆಂದರೆ ಆಗ ನೀವು ನೀಡಿದಂಥಾ ಸೇವೆಯನ್ನು ನಾನು ನಿಮಗೆ ನೀಡಬಹುದಾಗಿತ್ತು. ಎಲ್ಲರೂ. ದೇವರು ಕಾಪಾಡಲಿ!
ಆಂಟನಿ. ಸರಿ, ನನ್ನ ಮಿತ್ರರೇ, ಈ ರಾತ್ರಿ ನನ್ನ ಜತೆಯಲ್ಲಿ ಇರಿ. ನನ್ನ ಪಾನಪಾತ್ರೆಗಳು ಕಡಿಮೆಯಾಗದಿರಲಿ. ನನ್ನ ಸಾಮ್ರಾಜ್ಯ
ನಿಮ್ಮದು. ಅನುಯಾಯಿಗಳಾಗಿದ್ದು, ನನ್ನ ಅಪ್ಪಣೆಗಳನ್ನು ತಾಳಿಕೊಳ್ಳುತ್ತಿದ್ದ ಆವತ್ತಿನ ತರವೇ ಈವತ್ತೂ ನನಗೆ ನಡೆದುಕೊಳ್ಳಿ.
ಕ್ಲಿಯೋ. [ಈನೋಬಾರ್ಬಸ್‍ಗೆ ಮಾತ್ರ] ಏನು ಹೇಳುತ್ತಿದ್ದಾರೆ?
ಈನೋ. [ಕ್ಲಿಯೋಪಾತ್ರಳಿಗೆ ಮಾತ್ರ] ತನ್ನ ಅನುಯಾಯಿಗಳಿಗೆ ಕಣ್ಣೀರು ಬರಿಸುವುದಕ್ಕೆ.
ಆಂಟನಿ. ಈ ರಾತ್ರ ನನ್ನ ಸೇವೆಯಲ್ಲಿರಿ; ಅದೇ ನಿಮ್ಮ ಕರ್ತವ್ಯದ ಪೂರ್ಣವಿರಾಮವೂ ಇದ್ದೀತು. ಬಹುಶಃ ಆಮೇಲೆ ನೀವೆಂದೂ ನನ್ನನ್ನು ಕಾಣಲಾರಿರಿ, ಕಂಡರೂ ಅದೊಂದು ಚಚ್ಚಿಹಾಕಿರುವ ಭೂತವಿದ್ದೀತು. ಬಹುಶಃ ನಾಳೆ ನೀವುಗಳು ಇನ್ನೊಬ್ಬ ಮಾಲಿಕನ ಸೇವೆ ಮಾಡುವಿರಿ. ಬೀಳ್ಕೊಡುವವರಂತೆ ನಾನೀಗ ನಿಮ್ಮನ್ನು ಕಾಣುವುದು. ನನ್ನ ನಿಷ್ಠಾವಂತ ಸ್ನೇಹಿತರೇ, ನಾನು ನಿಮ್ಮನ್ನು ದೂರ ಮಾಡುವುದಿಲ್ಲ, ಆದರೆ, ನಿಮ್ಮ ಸೇವೆಗೆ ಬದ್ಧನಾದ ಒಡೆಯನ ತರ ಕೊನೆತನಕ ನಿಮ್ಮ ಜತೆ ಇರುವೆ. ಈ ರಾತ್ರಿ ಎರಡು ಗಂಟೆಗಳ ಕಾಲ ನನ್ನ ನೋಡಿಕೊಳ್ಳಿ, ಇನ್ನೇನೂ ಕೇಳುವುದಿಲ್ಲ ನಾನು, ಅದಕ್ಕಾಗಿ ದೇವರು ನಿಮಗೆ
ಒಳ್ಳೇದು ಮಾಡಲಿ!
ಈನೋ. ಸ್ವಾಮಿ, ಯಾಕಿವರಿಗೆ ಈ ತರದ ದುಃಖ ನೀಡುತ್ತೀರಿ? ನೋಡಿ, ಬಿಕ್ಕಳಿಸುತ್ತಿದ್ದಾರೆ ಇವರು, ಇನ್ನು ನಾನೊಬ್ಬ ಕತ್ತೆ, ನನ್ನ ಕಣ್ಣು ಈರುಳ್ಳಿಯಾಗಿದೆ. ಇದು ನಾಚಿಕೆಗೇಡು, ಹೆಂಗಸರ ಮಾಡಬೇಡಿ ನಮ್ಮನ್ನು.
ಆಂಟನಿ. ಹೊ, ಹೊ, ಹೋ! ಅಂಥ ಉದ್ದೇಶ ನನಗಿದ್ದರೆ ಪಿಶಾಚ ಹಿಡಿಯಲಿ ನನ್ನನ್ನು! ಆ ಬಿಂದುಗಳು ಬಿದ್ದಲ್ಲಿ ಸದ್ಗುಣಗಳು ಬೆಳೆಯಲಿ! ನನ್ನ ಆತ್ಮೀಯ ಮಿತ್ರರೇ, ನೀವು ನನ್ನನ್ನು ಹತಾಶೆಯ ಅರ್ಥದಲ್ಲಿ ತೆಗೆದುಕೊಂಡಿರಿ, ನಾನು ಮಾತಾಡಿದ್ದು ನಿಮ್ಮದೇ ಸಮಾಧಾನಕ್ಕೆ, ಈ ರಾತ್ರಿಯನ್ನು ನೀವು ಹಿಲಾಲುಗಳಿಂದ ಬೆಳಗಿಸಲು ಬಯಸಿದ್ದೆ. ಹೃದಯ ಸ್ನೇಹಿತರೇ, ನಾಳೆಯ ಕುರಿತು ಭರವಸೆಯಿದೆ ನನಗೆ, ಗೆಲುವಿನ ಬದುಕಿನತ್ತ ಮುನ್ನಡೆಸುವೆ ನಿಮ್ಮನ್ನು — ಸಾವು ಮತ್ತು ಪ್ರತಿಷ್ಠೆಯ ಕಡೆಗಲ್ಲ.
ಬನ್ನಿ, ಊಟಕ್ಕೆ ತೆರಳೋಣ, ಎಲ್ಲಾ ಚಿಂತೆಗಳನ್ನೂ ಮುಳುಗಿಸಿಬಿಡೋಣ.
[ಎಲ್ಲರೂ ನಿಷ್ಕ್ರಮಣ]

ದೃಶ್ಯ 3
ಅಲೆಕ್ಝಾಂಡ್ರಿಯಾ, ಆಂಟನಿಯ ರಾತ್ರಿಕೂಟದ ಹೊರಗೆ ಸೈನಿಕರ ಒಂದು ಗುಂಪು ಪ್ರವೇಶ

ಸೈನಿಕ 1. ಶುಭ ರಾತ್ರಿ, ಕಣೋ. ನಾಳಿನ ದಿನ ಮುಖ್ಯ.
ಸೈನಿಕ 2. ನಾಳೆ ತೀರ್ಮಾನವಾಗತ್ತ ಏನೂಂತ. ನಿನಗೆ ಒಳ್ಳೇದಾಗಲಿ. ಬೀದಿ ಸುದ್ದೀಲಿ ವಿಲಕ್ಷಣವಾದ್ದೇನಾದ್ರೂ ಕೇಳಿದಿಯಾ?
ಸೈನಿಕ 1. ಇಲ್ಲ. ಏನು ಸುದ್ದಿ?
ಸೈನಿಕ 2. ಬರೀ ಗಾಳಿ ಸುದ್ದಿ ಇದ್ದೀತು. ಶುಭ ರಾತ್ರಿ ನಿನಗೆ.
ಸೈನಿಕ 1. ಆಯ್ತು, ಸ್ವಾಮಿ. ಶುಭ ರಾತ್ರಿ.

ಅವರಿಗೆ ಬೇರೆ ಸೈನಿಕರ ಭೇಟಿಯಾಗುತ್ತದೆ…

ಸೈನಿಕ 2. ಸೈನಿಕರೇ, ಸರಿಯಾಗಿ ನೋಡಿಕೊಳ್ಳಿ.
ಸೈನಿಕ 3. ನೀವೂನೂ. ಶುಭ ರಾತ್ರಿ, ಶುಭ ರಾತ್ರಿ.

ಅವರು ರಂಗದ ಬೇರೆ ಬೇರೆ ಮೂಲೆಗಳಲ್ಲಿ ನಿಂತುಕೊಳ್ಳುತ್ತಾರೆ….

ಸೈನಿಕ 3. ಅಂತೂ ಇಲ್ಲಿ ಬಂದಾಯಿತು; ನಾಳೆ ನಮ್ಮ ನೌಕಾಪಡೆ ಗೆದ್ದರೆ, ನಮ್ಮ ಭೂಸೇನೆ ಎದ್ದು ನಿಲ್ಲುತ್ತೆ ಅಂತ ನನಗೆ ಚೆನ್ನಾದ ಭರವಸೆಯಿದೆ.
ಸೈನಿಕ 1. ಶೂರ ಸೇನೆ ನಮ್ದು, ಉದ್ದೇಶಕ್ಕೆ ಬದ್ಧವಾದುದು.

ರಂಗದ ತಳದಲ್ಲಿ ಬಾಜಾಬಜಂತ್ರಿ…

ಸೈನಿಕ 2. ಶ್ಶ್, ಏನದು?
ಸೈನಿಕ 1. ಶ್ಶ್, ಶ್ಶ್!
ಸೈನಿಕ 2. ಆಲಿಸೋಣ!
ಸೈನಿಕ 1. ಗಾಳಿಯಲ್ಲಿ ಸಂಗೀತ.
ಸೈನಿಕ 3. ನೆಲದೊಳಗೆ.
ಸೈನಿಕ 4. ಒಳ್ಳೇ ಲಕ್ಷಣ ಅಲ್ವೇ?
ಸೈನಿಕ 3. ಅಲ್ಲ.
ಸೈನಿಕ 1. ನೀನು ಸುಮ್ಮನಿರಯ್ಯ! ಏನಿರಬಹುದು ಇದರ ಅರ್ಥ?
ಸೈನಿಕ 2. ಅದು ಹಳೇ ಹಕ್ರ್ಯುಲಿಸ್ ದೇವರು. ಆಂಟನಿ ಪ್ರೀತಿಸುತ್ತಿದ್ದವ ಈಗ ಆಂಟನಿಯನ್ನು ಈಗವನ ತೊರೆದು ಹೋಗ್ತಿದ್ದಾನೆ.
ಸೈನಿಕ 1. ಸರಿ, ಈಗ ನಮಗೆ ಕೇಳಿಸ್ತಿರೋದು ಬೇರೆ ಸೈನಿಕರಿಗೂ ಕೇಳಿಸ್ತ ಇದೆಯೋ ನೋಡೋಣ.
ಸೈನಿಕ 2. ಏನದು, ಸ್ವಾಮಿ?
[ಅವರು ಪರಸ್ಪರ ಮಾತಾಡಿಕೊಳ್ಳುತ್ತಾರೆ] ಎಲ್ಲರೂ. ಇದು ವಿಚಿತ್ರ, ಅಲ್ವೆ?
ಸೈನಿಕ 3. ನಿಮಗೆ ಕೇಳಿಸ್ತಿದೆಯೇ, ಸ್ವಾಮಿ? ಕೇಳಿಸ್ತಿದೆಯೇ?
ಸೈನಿಕ 1. ನಮಗೆ ಪಾಳಿಯಿರೋ ವರೆಗೆ ಆ ಸದ್ದು ಗಮನಿಸ್ತಾ ಇರೋಣ, ಅದು ಹೇಗೆ ಮುಗಿಯುತ್ತೋ ನೋಡೋಣ. ಎಲ್ಲರೂ. ಸರಿ. [ಎಲ್ಲರೂ ನಿಷ್ಕ್ರಮಣ]

ದೃಶ್ಯ 4
ಅಲೆಕ್ಝಾಂಡ್ರಿಯಾ, ಆಂಟನಿ ಮತ್ತು ಕ್ಲಿಯೋಪಾತ್ರ ಈಗ ತಾನೇ ಎದ್ದಿದ್ದಾರೆ; ಆಂಟನಿ ಮತ್ತು ಕ್ಲಿಯೋಪಾತ್ರ, ಚಾರ್ಮಿಯಾನ್ ಮತ್ತು ಇತರ ಸೇವಕಿಯರ ಜತೆ ಪ್ರವೇಶ..

ಆಂಟನಿ. ಈರೋಸ್! ನನ್ನ ಕವಚ, ಈರೋಸ್!
ಕ್ಲಿಯೋ. ಇನ್ನೂ ಸ್ವಲ್ಪ ನಿದ್ರಿಸಬಾರದೇ?
ಆಂಟನಿ. ಇಲ್ಲ ಮರಿ. ಈರೋಸ್, ಬಾ, ನನ್ನ ಕವಚ ತೆಗೆದುಕೊಂಡು ಬಾ, ಈರೋಸ್!

ಕವಚದೊಂದಿಗೆ ಈರೋಸ್ ಪ್ರವೇಶ

ಬಾರಯ್ಯ, ಆ ಉಕ್ಕಿನ ಕವಚವನ್ನು ನನ್ನ ಮೇಲೆ ಹಾಕು. ಈವತ್ತು ಅದೃಷ್ಟ ನಮ್ಮದಲ್ಲದೆ ಇದ್ದರೆ, ಅದಕ್ಕಿರುವ ಕಾರಣ ನಾನು ಅದೃಷ್ಟವನ್ನು ಕೆಣಕಿದ್ದೇ. ಬಾ.
ಕ್ಲಿಯೋ. ಬೇಡ, ನಾನೂ ಸಹಾಯ ಮಾಡುವೆ.ಯಾತಕ್ಕೆ ಇದು? [ಅವಳು ಆಂಟನಿಗೆ ಕವಚ ತೊಡಿಸಲು ನೆರವಾಗುತ್ತಾಳೆ]
ಆಂಟನಿ. ಆ! ಇರಲಿ, ಇರಲಿ! ನನ್ನ ಹೃದಯಕವಚ ನೀನು! ತಪ್ಪು, ತಪ್ಪು; ಇದು, ಇದು.
ಕ್ಲಿಯೋ. ನಿಜಕ್ಕೂ, ನಾನು ತೊಡಿಸುತ್ತೇನೆ. ಅದು ಹೀಗಿರಬೇಕು.
ಆಂಟನಿ. ಸರಿ, ಸರಿ, ಈಗ ನಮ್ಮನ್ನು ತಡೆಯುವವರೇ ಇಲ್ಲ.ನೋಡಿದೆಯೇನಯ್ಯ? ಹೋಗಿ ನೀನೂ ಕವಚ ಹಾಕಿಕೋ.
ಈರೋಸ್. ಈಗಲೇ ಹಾಕಿಕೊಳ್ಳುತ್ತೇನೆ, ಸ್ವಾಮಿ.
ಕ್ಲಿಯೋ. ಇದರ ಕೊಂಡಿ ಗಟ್ಟಿಮಾಡಿದೆಯೆ?
ಆಂಟನಿ. ಚೆನ್ನಾಗಿ, ಚೆನ್ನಾಗಿ, ನಮ್ಮ ವಿಶ್ರಾಂತಿಗೆ ಮುನ್ನ ಇದನ್ನು ಯಾರಾದರೂ ಬಿಡಿಸಲು ಯತ್ನಿಸಿದರೆ, ಅಂಥವರ ಕಿವಿಗೆ ಬಿರುಗಾಳಿ ಕೇಳಿಸುವುದು. ನೀನು ಒದ್ದಾಡಿರುವಿ, ಈರೋಸ್, ನಿನಗಿಂತಲೂ ನನ್ನ ರಾಣಿಯೇ ಇದರಲ್ಲಿ ಹೆಚ್ಚು ನಿಷ್ಣಾತಳು: ಮುಗಿಸಿಬಿಡು. ಓ ಪ್ರಿಯೇ, ನೀನೀವತ್ತು ನನ್ನ ಹೋರಾಟ ನೋಡಬಹುದಾಗಿದ್ದರೆ, ಹಾಗೂ ರಾಜೋದ್ಯೋಗದಲ್ಲಿ ನೀನು ಜ್ಞಾನಿಯಾಗಿರುತ್ತಿದ್ದರೆ, ಅದರಲ್ಲಿ ಪಳಗಿದ ಕಸುಬುದಾರನನ್ನು ನೀನು ಕಾಣುತ್ತಿದ್ದೆ.

ಆಯುಧಧಾರಿಯಾದ ಸೈನಿಕನೊಬ್ಬನ ಪ್ರವೇಶ

ನಮಸ್ಕಾರವಯ್ಯಾ ನಿನಗೆ, ಬಾ. ಯಾವುದೋ ಸಂಗ್ರಾಮ ಜವಾಬ್ದಾರಿ ಹೊತ್ತವನಂತೆ ಕಾಣುತ್ತಿರುವಿ. ನಮ್ಮ ಮೆಚ್ಚಿನ ಕೆಲಸಕ್ಕೆ ನಾವು ಬೇಗನೇ ಎದ್ದು ಸಂತೋಷದಿಂದ ಹೊರಡುವವರು.
ಸೈನಿಕ. ಒಂದು ಸಾವಿರ ಜನರು, ಮಹಾಸ್ವಾಮಿ, ಇದು ಹೊತ್ತಿಗೆ ಮುಂಚೆ ಎನಿಸಿದರೂ, ಕವಚ ಶಿರಸ್ತ್ರಾಣ ಧರಿಸಿ ತಮಗೋಸ್ಕರ ಕಾಯುತ್ತಿದ್ದಾರೆ.

ಕಪ್ತಾನರು ಮತ್ತು ಸೈನಿಕರು ಪ್ರವೇಶ…

ಕಪ್ತಾನ. ಪ್ರಭಾತ ಚೆಲುವಾಗಿದೆ. ದಂಡನಾಯಕರಿಗೆ ನಮಸ್ಕಾರ. ಎಲ್ಲರೂ. ನಮಸ್ಕಾರ, ದಂಡನಾಯಕರಿಗೆ.
ಆಂಟನಿ. ಈ ಪ್ರಭಾತವಿದೆಯಲ್ಲಾ ಅದು ಚೆನ್ನಾಗಿ ಮೂಡಿದೆ, ಹುಡುಗರಿರಾ. ಬೆಳೆಯ ಗುಣ ಮೊಳಕೆಯಲ್ಲೇ ಕಾಣುವ ತಾರುಣ್ಯದ ಉತ್ಸಾಹದಂತೆ, ಹೊತ್ತಿಗೆ ಮುಂಚೆಯೇ ಸುರುವಾಗಿದೆ. ಸರಿ, ಸರಿ, ಎಲ್ಲಿ ಅದನ್ನು ಕೊಡು ಈ ಕಡೆ. ಸರಿಯಾಗಿದೆ.ಶುಭವಾಗಲಿ ನಿನಗೆ, ರಾಣಿಯೇ.
ನಾನೇನೇ ಆದರೂ, ಇದೊಂದು ಸೈನಿಕ ಚುಂಬನ.
[ಆಂಟನಿ ಕ್ಲಿಯೋಪಾತ್ರಾಳನ್ನು ಚುಂಬಿಸುವನು]
ಇದಕ್ಕಿಂತಲೂ ಹೆಚ್ಚಿನ ಯಾಂತ್ರಿಕ ಶುಭಾಶಯದ ಮೇಲೆ ನಿಲ್ಲುವುದೆಂದರೆ, ಅದಕ್ಕೆ ಛೀಮಾರಿ, ಅದು ನಾಚಿಕೆಗೇಡಿ ನಿಯಂತ್ರಣವೆಂಬ ಹಾಗೆ. ಈಗ ನಾನು ನಿನ್ನನ್ನು ಉಕ್ಕಿನ ಮನುಷ್ಯನಾಗಿ ಬೀಳ್ಕೊಡುವೆ. — ಹೋರಾಡುವ ನೀವುಗಳು ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವೆ. ವಿದಾಯ.

[ಆಂಟನಿ, ಈರೋಸ್, ಕಪ್ತಾನರು, ಮತ್ತು ಸೈನಿಕರು ನಿಷ್ಕ್ರಮಣ]

ಚಾರ್ಮಿ. ನಿಮ್ಮ ಕೋಣೆಗೆ ಹೋಗಬಯಸುತ್ತೀರಾ?
ಕ್ಲಿಯೋ. ಕರೆದುಕೊಂಡು ಹೋಗು ನನ್ನನ್ನು –ಶೂರನಂತೆ ಹೋಗುತ್ತಿದ್ದಾರೆ. ಅವರು ಮತ್ತು ಸೀಸರನು ಈ ಮಹಾಯುದ್ಧವನ್ನು ದ್ವಂದ್ವಯುದ್ಧದಲ್ಲಿ ನಿರ್ಣಯಿಸಿದರೆ!

ಆಮೇಲೆ ಆಂಟನಿ — ಆದರೆ ಈಗ — ಸರಿ, ಹೋಗೋಣ. [ಎಲ್ಲರೂ ನಿಷ್ಕ್ರಮಣ]

ದೃಶ್ಯ 5
ಅಲೆಕ್ಝಾಂಡ್ರಿಯಾ

ಕಹಳೆಗಳ ಸದ್ದು. ಆಂಟನಿ ಮತ್ತು ಈರೋಸ್ ಪ್ರವೇಶ,ಸೈನಿಕನೊಬ್ಬ ಬಂದು ಅವರನ್ನು ಕಾಣುತ್ತಾನೆ

ಸೈನಿಕ. ದೇವರುಗಳ ದಯ, ಈ ದಿನ ಆಂಟನಿಗೆ ಶುಭ ದಿನ!
ಆಂಟನಿ. ನೀನಾಗಲಿ ನಿನ್ನ ಈ ಗಾಯಾಳುಗಳು ಒಮ್ಮೆ ಗೆದ್ದ ಜನರಾಗಲಿ ನೆಲಯುದ್ಧಕ್ಕೆ ನನ್ನ ಒತ್ತಾಯಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ಸೈನಿಕ. ಹಾಗೆ ನೀವು ಮಾಡುತ್ತಿದ್ದರೆ, ನಿಮಗೆ ಎದುರು ಬಿದ್ದಿರುವ ರಾಜರುಗಳು, ಮತ್ತು ಇಂದು ಬೆಳಿಗ್ಗೆ ನಿಮ್ಮನ್ನು ತೊರೆದ ಯೋಧರೂ, ಈಗಿನ್ನೂ ನಿಮ್ಮನ್ನು ಹಿಂಬಾಲಿಸುತ್ತಿದ್ದರು.
ಆಂಟನಿ. ಯಾರು ಇಂದು ಬೆಳಿಗ್ಗೆ?
ಸೈನಿಕ. ಯಾರು? ಯಾರು ಯಾವತ್ತೂ ನಿಮ್ಮ ಜತೆ ಇದ್ದನೋ ಅವನು. ಈನೋಬಾರ್ಬಸ್‍ನ್ನ ಕರೆಯಿರಿ, ಅವನಿಗದು ಕೇಳಿಸದು,
ಅಥವಾ ಅನ್ನಬಹುದು ಸೀಸರನ ಬಿಡದಿಯಿಂದ, `ನಾನು ನಿಮ್ಮವನಲ್ಲ’ ಎಂದು.
ಆಂಟನಿ. ನೀನೇನು ಹೇಳುತ್ತಾ ಇದ್ದೀಯಾ?
ಸೈನಿಕ. ಒಡೆಯ, ಅವನು ಸೀಸರನ ಜತೆ ಇದ್ದಾನೆ.
ಈರೋಸ್. ಸ್ವಾಮಿ, ಕವಾಟಗಳು ಮತ್ತು ನಿಧಿಗಳು ಅವನ ಜತೆ ಇಲ್ಲ.
ಆಂಟನಿ. ಅವನು ತೆರಳಿದನೆ?
ಸೈನಿಕ. ಅದರಲ್ಲಿ ಸಂದೇಹವೇ ಇಲ್ಲ.
ಆಂಟನಿ. ಹೋಗು, ಈರೋಸ್, ಅವನ ಧನವನ್ನು ಅವನ ಹಿಂದೆಯೇ ಕಳಿಸಿಬಿಡು. ಅದನ್ನು ಮಾಡು. ಒಂದು ಕ್ಷಣವೂ ಇಟ್ಟುಕೊಳ್ಳಬೇಡ, ಅದು ನಿನಗೆ ನನ್ನ ಕಟ್ಟಾಜ್ಞೆ. ಅವನಿಗೆ ಬರೆ — ನಾನು ಸಹಿ ಹಾಕುತ್ತೇನೆ — ಮಿದು ಮಾತುಗಳ ವಿದಾಯಗಳನ್ನೂ ವಂದನೆಗಳನ್ನೂ; ಇನ್ನವನಿಗೆ ಮಾಲಿಕನನ್ನು ಬದಲಿಸುವುದಕ್ಕೆ ಇನ್ನಷ್ಟು ಹೆಚ್ಚು ಕಾರಣಗಳು ಸಿಗದಿರಲಿ ಎಂದು ನಾನು ಬಯಸುತ್ತೇನೆ ಅನ್ನು. ಓ, ನನ್ನ ದುರದೃಷ್ಟ ನಿಷ್ಠಾವಂತ ಮನುಷ್ಯರನ್ನು ಭ್ರಷ್ಟರ ಮಾಡಿದೆ.
[ಎಲ್ಲರೂ ನಿಷ್ಕ್ರಮಣ]

ದೃಶ್ಯ 6
ಅಲೆಕ್ಝಾಂಡ್ರಿಯಾದ ಮುಂದೆ ಸೀಸರನ ಪಾಳಯ ಅಗ್ರಿಪಾ, ಸೀಸರ್, ಈನೋಬಾರ್ಬಸ್, ಮತ್ತು ಡೋಲಾಬೆಲ್ಲಾ ಪ್ರವೇಶ..

ಸೀಸರ್. ಮುಂದೆ ಹೋಗು, ಅಗ್ರಿಪಾ, ಹೋಗಿ ಯುದ್ಧ ಶುರುಮಾಡು. ಆಂಟನಿಯನ್ನು ಜೀವಸಹಿತ ಹಿಡಿಯುವುದೇ ನಮ್ಮ ಇಚ್ಛೆ; ಅದನ್ನು ಎಲ್ಲರಿಗೂ ಗೊತ್ತುಪಡಿಸು.
ಅಗ್ರಿಪಾ. ಹಾಗೇ ಮಾಡುವೆ, ಸೀಸರ್.
[ನಿಷ್ಕ್ರಮಣ]
ಸೀಸರ್. ಜಾಗತಿಕ ಶಾಂತಿಯ ಸಮಯ ಸಮೀಪಿಸುತ್ತಿದೆ. ಮೂರು ಮೂಲೆಗಳ ಜಗತ್ತು ಇಂದಿನ ಸುದಿನದಿಂದ ಅಲೀವ್ ಎಲೆಗಳನ್ನು ಮುಕ್ತವಾಗಿ ಧರಿಸಲಿ.

ಒಬ್ಬ ಸಂದೇಶವಾಹಕನ ಪ್ರವೇಶ

ಸಂದೇಶವಾಹಕ. ಆಂಟನಿ ರಣಭೂಮಿಗೆ ಬಂದಿದ್ದಾರೆ.
ಸೀಸರ್. ಹೋಗು, ಅಗ್ರಿಪಾಗೆ ಹೇಳು, ಆಂಟನಿಯ ದಳದಿಂದಲೇ ದಂಗೆಯೆದ್ದವರನ್ನು ಆಂಟನಿಯೆದುರು ನಿಲ್ಲಿಸಲಿ, ಆ ರೀತಿ ಆಂಟನಿ ತನ್ನ ಕೋಪಾವೇಶವನ್ನು ತನ್ನ ಮೇಲೇ ವ್ಯಯಿಸುವ ಹಾಗೆ ಕಾಣಲಿ.
[ಈನೋಬಾರ್ಬಸ್ ಹೊರತು ಉಳಿದವರ ನಿಷ್ಕ್ರಮಣ]
ಈನೋ. ಅಲೆಕ್ಸಾಸ್ ದಂಗೆಯೆದ್ದು ಆಂಟನಿಯ ಕಾರ್ಯಕ್ಕೆ ಯೆಹೂದಿಗಳಲ್ಲಿ ಹೋದ, ಅಲ್ಲಿ ತನ್ನ ಯಜಮಾನ ಆಂಟನಿಯನ್ನು ತೊರೆದು ಸೀಸರನತ್ತ ಒಲಿಯುವುದಕ್ಕೆ ದೊರೆ ಹೆರೋಡನನ್ನು ಒತ್ತಾಯಿಸಿದ. ಈ ಶ್ರಮಕ್ಕೆ ಸೀಸರ್ ಅವನನ್ನು ನೇಣಿಗೆ ಹಾಕಿದ.
ಕೆನಿಡಿಯಸ್ ಮತ್ತು ಪಕ್ಷಾಂತರಿಸಿದ ಇತರರಿಗೆ ಆತಿಥ್ಯವೇನೋ ಇದೆ, ಆದರೆ ಆದರ ವಿಶ್ವಾಸವಿಲ್ಲ. ನಾನು ತಪ್ಪು ಮಾಡಿದೆ, ಅದಕ್ಕೋಸ್ಕರ ನನ್ನನ್ನು ನಾನೇ ಇನ್ನು ಸುಖವಿಲ್ಲದಷ್ಟು ಕಟುವಾಗಿ ಹಳಿಯುವೆ.

ಸೀಸರನ ಸೈನಿಕನೊಬ್ಬನ ಪ್ರವೇಶ

ಸೈನಿಕ. ಈನೋಬಾರ್ಬಸ್, ನಿಮ್ಮೆಲ್ಲಾ ಧನದೌಲತ್ತನ್ನು ಆಂಟನಿ ಕಳಿಸಿಕೊಟ್ಟಿದ್ದಾರೆ, ಮೇಲೆ ತಮ್ಮದೇ ಕಾಣಿಕೆ ಸಹಿತ.ನಾನು ಕೆಲಸದಲ್ಲಿದ್ದಾಗಲೇ ದೂತ ಬಂದ, ಈಗ ನಿಮ್ಮ ಡೇರೆಯ ಮುಂದೆ ಹೇಸರಗತ್ತೆಗಳ ಬೆನ್ನಮೇಲಿಂದ ಸಾಮಾನುಗಳನ್ನು
ಇಳಿಸುತ್ತಿದ್ದಾನೆ.
ಈನೋ. ನಿನಗೇ ಕೊಟ್ಟುಬಿಡುತ್ತೇನೆ.
ಸೈನಿಕ. ಗೇಲಿ ಮಾಡದಿರಿ, ಈನೋಬಾರ್ಬಸ್, ನಾನು ಹೇಳುತ್ತಿರುವುದು ಸತ್ಯ. ಆ ಮನುಷ್ಯನಿಗೆ ನೀವು ಸುರಕ್ಷಿತ ಮರುಪ್ರಯಾಣ ಕಲ್ಪಿಸಿದರೆ ಸಾಕು; ನಾನೀಗ ನನ್ನ ಕೆಲಸಕ್ಕೆ ಹೋಗಲೇಬೇಕು, ಅಲ್ಲದಿದ್ದರೆ ಅದನ್ನು ನಾನೇ ಮಾಡುವವ. ನಿಮ್ಮ ರಾಜೇಂದ್ರ ಇಂದ್ರನಂತೆಯೆ ಇನ್ನೂ ಇದ್ದಾರೆ.
[ನಿಷ್ಕ್ರಮಣ]
ಈನೋ. ಈ ಧರೆಯಲ್ಲಿ ಅತಿ ದುಷ್ಟನೆಂದರೆ ನಾನೊಬ್ಬನೇ ಸರಿ, ಈಗ ಅದು ದುಸ್ಸಾಧ್ಯವೆನಿಸಿದೆ. ಓ ಆಂಟನಿ, ಕಾಣಿಕೆಗಳ ಖಣಿ, ನನ್ನ ಸೇವಾಚ್ಯುತಿಗೇ ಇಷ್ಟು ಸ್ವರ್ಣಾಭಿಷೇಕ ಮಾಡಿದ ನೀವು ನನ್ನ ಸೇವಾನಿಷ್ಠೆಗೆ ಏನು ತೆರುತ್ತಿದ್ದಿರಿ! ಇದು ನನ್ನೆದೆಯನ್ನು ಅಳ್ಳಾಡಿಸುತ್ತಿದೆ. ತೀವ್ರ ಯೋಚನೆ ಅದನ್ನು ಒಡೆಯದೆ ಇದ್ದರೆ, ಇನ್ನಷ್ಟು ತೀವ್ರ ವಿಧಾನವೊಂದು ಯೋಚನೆಯನ್ನೇ ಹೊಡೆದೀತು; ಆದರೆ ಯೋಚನೆ ಅದನ್ನು ಮಾಡೀತು, ಎನಿಸುತ್ತದೆ. ನಿಮ್ಮೆದುರು ನಾನು ಕಾದಾಡುವುದೇ?
ಇಲ್ಲ, ಹೋಗಿ ಒಂದು ಹೊಂಡ ನೋಡಿಕೊಳ್ಳುವೆ ಸಾಯುವುದಕ್ಕೆ. ನನ್ನ ಕೊನೆಗಾಲಕ್ಕೆ ಹೊಂದುವುದು ನೈಚ್ಯತೆಯಲ್ಲಿ ನೈಚ್ಯ.
[ನಿಷ್ಕ್ರಮಣ]

ದೃಶ್ಯ 7
ರಣರಂಗ, ಸೂಚನಾವಾದ್ಯ, ತಮ್ಮಟೆಗಳು ಮತ್ತು ಕಹಳೆಗಳು ಅಗ್ರಿಪಾ ಮತ್ತು ಇತರರ ಪ್ರವೇಶ…

ಅಗ್ರಿಪಾ. ವಿಶ್ರಾಂತಿಗೆ ತೆರಳಿ! ನಾವು ನಿಮ್ಮನ್ನು ಸ್ವಲ್ಪ ಜಾಸ್ತಿಯೇ ದುಡಿಸಿಕೊಂಡಿದ್ದೇವೆ. ಸೀಸರನಿಗೂ ಕೆಲಸವಿದೆ, ಅಲ್ಲದೆ ನಮ್ಮ
ನಿರೀಕ್ಷೆಗಿಂತಲೂ ಹೆಚ್ಚು ಒತ್ತಡ ಒತ್ತಡ ಬಿದ್ದಿದೆ ನಮ್ಮ ಮೇಲೆ.
[ಎಲ್ಲರೂ ನಿಷ್ಕ್ರಮಣ]

ರಣವಾದ್ಯ. ಆಂಟನಿ, ಮತ್ತು ಗಾಯಗೊಂಡ ಸ್ಕಾರಸ್ ಪ್ರವೇಶ

ಸ್ಕಾರಸ್. ಓ ನನ್ನ ಶೂರ ಸಾಮ್ರಾಟರೇ, ಈ ಹೋರಾಟ ನಿಜವಾಗಿ ಹೋರಾಡಿದೆವು! ಹೀಗೇ ನಾವು ಸುರುವಿಗೇ ಮಾಡಿದ್ದರೆ,
ಅವರ ತಲೆಗೆ ಬಾವು ಮಾಡಿ ಮನೆಗೆ ಕಳಿಸಿಬಿಡುತ್ತಿದ್ದೆವು. ಆಂಟನಿ. ನಿನಗೆ ರಕ್ತ ಹರಿಯುತ್ತಿದೆ ಧಾರಾಕಾರ!
ಸ್ಕಾರಸ್. ನನಗಿಲ್ಲೊಂದು ಗಾಯ ಇತ್ತು ಟಕಾರದಲ್ಲಿ, ಅದೀಗ ಠೇಂಕಾರವಾಗಿದೆ ಅಷ್ಟೆ. ಹಿಮ್ಮೆಟ್ಟುವ ಪಥಚಲನೆ ಸ್ವಲ್ಪ ದೂರದಲ್ಲಿ..

ಆಂಟನಿ. ಅವರು ಹಿಂದೆ ಸರಿಯುತ್ತಿದ್ದಾರೆ.
ಸ್ಕಾರಸ್. ನಾವವರನ್ನು ಅವರ ಅಡಗುದಾಣಗಳಿಗೆ ಅಟ್ಟುತ್ತಿದ್ದೇವೆ. ಇನ್ನೂ ಆರು ಗಾಯಗಳಿಗೆ ಜಾಗವಿದೆ ನನ್ನಲ್ಲಿ.

ಈರೋಸ್ ಪ್ರವೇಶ

ಈರೋಸ್. ಬಡಿದೋಡಿಸಿದ್ದೇವೆ, ಸ್ವಾಮಿ, ಅವರನ್ನು, ನಮ್ಮ ಈಗಿನ ನೆಲೆ ಒಳ್ಳೇ ವಿಜಯಕ್ಕೆ ದಾರಿಯಾಗಬಹುದು.
ಸ್ಕಾರಸ್. ನಾವವರನ್ನು ಬೆಂಬತ್ತಿ, ಮೊಲಗಳನ್ನು ಹಿಡಿಯುವಂತೆ ಹಿಡಿಯೋಣ, ಹಿಂದಿನಿಂದ! ಓಡುವವರನ್ನು ಅಟ್ಟಿಸಿ ಬಡಿಯುವುದೂ ಒಂದು ಕ್ರೀಡೆ.
ಆಂಟನಿ. ನಿನ್ನ ಉತ್ಸಾಹಕ್ಕೆ ಒಂದು ಬಹುಮಾನ, ಕಾರ್ಯಕ್ಕೆ ಹತ್ತು. ಬಾ, ಮತ್ತೆ.
ಸ್ಕಾರಸ್. ನಾನು ಕುಂಟುತ್ತ ಹಿಂಬಾಲಿಸುವೆ.
[ಎಲ್ಲರೂ ನಿಷ್ಕ್ರಮಣ]

ದೃಶ್ಯ 8
ರಣರಂಗ
ಆಂಟನಿ ಪಥಚಲನೆಯಲ್ಲಿ ಮರುಪ್ರವೇಶ, ಸ್ಕಾರಸ್ ಮತ್ತು ಇತರರು

ಆಂಟನಿ. ನಾವವನನ್ನು ಅವನ ಬಿಡದಿಗೆ ಓಡಿಸಿದ್ದೇವೆ. ಯಾರಾದರೂ ಮುಂದೆ ಹೋಗಿ, ರಾಣಿಗೆ ಗೊತ್ತಾಗಲಿ ನಮ್ಮ ಸಾಹಸ.
[ಒಬ್ಬ ಸೈನಿಕನ ನಿಷ್ಕ್ರಮಣ]

ನಾಳೆ, ಸೂರ್ಯ ನಮ್ಮನ್ನು ಕಾಣುವ ಮುನ್ನ, ಈ ದಿನ ತಪ್ಪಿಸಿಕೊಂಡ ರಕ್ತವನ್ನ ಸುರಿಸುತ್ತೇವೆ. ನಿಮಗೆಲ್ಲರಿಗೂ ನನ್ನ ಉಪಕಾರ ಸ್ಮರಣೆ, ಯಾಕೆಂದರೆ ಬಲಾಢ್ಯ ಬಾಹುಗಳು ನೀವು, ಹಾಗೂ ಒಂದು ಧ್ಯೇಯಕ್ಕೆ ಎಂಬಂತೆ ನೀವು ಕಾದಿದ್ದಲ್ಲ, ಬದಲು ಪ್ರತಿಯೊಬ್ಬನೂ ಅದು ತನ್ನದೆಂಬಂತೆ; ನೀವು ಒಬ್ಬೊಬ್ಬರೂ ಒಬ್ಬ ಹೆಕ್ಟರ್. ನಗರ ಪ್ರವೇಶ ಮಾಡಿರಿ, ನಿಮ್ಮ ಪತ್ನಿಯರನ್ನು,
ಮಿತ್ರರನ್ನು ಆಲಂಗಿಸಿರಿ; ನಿಮ್ಮ ನಿಮ್ಮ ಸಾಹಸ ಕೃತ್ಯಗಳನ್ನು ಅವರಿಗೆ ವಿವರಿಸಿ ಹೇಳಿರಿ, ಆನಂದ ಭಾಷ್ಪಗಳಿಂದ ಅವರು
ನಿಮ್ಮ ಹೆಪ್ಪುಗಟ್ಟಿದ ಗಾಯಗಳನ್ನು ತೊಳೆಯಲಿ, ಪ್ರತಿಷ್ಠೆಯ ಬಾವುಗಳನ್ನು ಇಡಿಯಾಗಿ ಚುಂಬಿಸಲಿ.

ಕ್ಲಿಯೋಪಾತ್ರ ತನ್ನ ಸೇವಕರೊಂದಿಗೆ ಪ್ರವೇಶ

[ಸ್ಕಾರಸ್‍ಗೆ] ಎಲ್ಲಿ, ನಿನ್ನ ಕೈ ಕೊಡು ನನಗೆ; ಈ ಅದ್ಭುತ ಸನ್ನಿಧಿಗೆ ನಾನು ನಿನ್ನ ಕೃತ್ಯಗಳ ವರದಿಯೊಪ್ಪಿಸಿ, ಆಕೆಯ ಕೃತಜ್ಞತೆಗಳು ನಿನ್ನ ಹರಸುವಂತೆ ಮಾಡುವೆ. [ಕ್ಲಿಯೋಪಾತ್ರಳಿಗೆ]
ಓ, ಜಗತ್ತಿನ ದಿವವೆ, ನನ್ನ ಕವಚಕಂಠಕ್ಕೆ ಸಂಕಲೆ ಹಾಕು; ವೇಷಭೂಷಣಗಳ ಮೂಲಕ, ಈ ಅಭೇದ್ಯ ಕಡಿವಾಣಗಳ
ಮೂಲಕ ನನ್ನ ಹೃದಯಕ್ಕೇ ಜಿಗಿ, ಹಾಗೂ ಅಲ್ಲಿ ಸವಾರಿಮಾಡು ಜೈತ್ರಯಾತ್ರೆಯಲ್ಲಿ.

[ಆಂಟನಿ ಮತ್ತು ಕ್ಲಿಯೋಪಾತ್ರ ಆಲಂಗಿಸಿಕೊಳ್ಳುವರು]

ಕ್ಲಿಯೋ. ದೊರೆಗಳ ದೊರೆಯೇ, ಓ ಅಪಾರ ಶೂರನೇ, ಜಗದ ಮಹಾ ಬಲೆಯಿಂದ ಸಿಗಹಾಕಿಕೊಳ್ಳದೆ, ನಸುನಗುತ್ತ
ಬರುತ್ತಿರುವಿರ?
ಆಂಟನಿ. ನನ್ನ ಕೋಕಿಲ, ನಾವವರನ್ನು ಅವರ ಚಾಪೆಗೆ ತಳ್ಳಿದ್ದೇವೆ. ಏನೇ ಹುಡುಗಿ, ನಮ್ಮ ಇನ್ನೂ ತರುಣ ಕಂದುಬಣ್ಣದ
ಜತೆ ತುಸು ನೆರೆ ಬೆರೆತರೂ, ನಮ್ಮ ನರಗಳ ಪೋಷಿಸುವಂಥ ಮಿದುಳಿದೆ ನಮಗೆ, ಅದು ಯುವಕರ ವಿರುದ್ಧ ಗುರಿಗೆ ಗುರಿ
ಗೆಲ್ಲುವುದು. ಈ ಮನುಷ್ಯನ ನೋಡು; ನಿನ್ನ ವರದ ಹಸ್ತವನ್ನು ಇವನ ತುಟಿಗಳಿಗೆ ವಹಿಸು. — ಚುಂಬಿಸು ಅದನ್ನ, ಯೋಧನೇ.

[ಸ್ಕಾರಸ್ ಕ್ಲಿಯೋಪಾತ್ರ ಮುಂಗೈಯನ್ನು ಚುಂಬಿಸುತ್ತಾನೆ]

ಇವನು ಈ ದಿವಸ ಹೇಗೆ ಹೋರಾಡಿದ್ದಾನೆಂದರೆ, ಮನುಕುಲ ದ್ವೇಷದಲ್ಲಿ ದೇವರೇ ವಿನಾಶಗೊಳಿಸಿದ ಹಾಗೆ ಈ ರೂಪದಲ್ಲಿ.
ಕ್ಲಿಯೋ. ಗೆಳೆಯನೇ, ನಿನಗೆ ನಾನೊಂದು ಪೂರ್ಣ ಸುವರ್ಣಕವಚ ನೀಡುವೆ; ಅದೊಬ್ಬ ಅರಸನದು.
ಆಂಟನಿ. ಅದು ಸೂರ್ಯನ ರಥದಂತೆ ವಜ್ರಖಚಿತವಾಗಿದ್ದರೂ, ಈತನಿಗೆ ಯೋಗ್ಯವೇ. ನಿನ್ನ ಕೈನೀಡು ನನಗೆ. ಇಡೀ ಅಲೆಕ್ಝಾಂಡ್ರಿಯಾದ ಮೂಲಕ ಕುಶಾಲು ಯಾತ್ರೆ ನಡೆಸೋಣ; ನಮ್ಮ ಕೊಬ್ಬಿದ ಗುರಾಣಿಗಳು ಬೆತ್ತಲಾಗಲಿ, ಅವನ್ನು ತೊಟ್ಟವರ
ಹಾಗೆಯೇ. ನಮ್ಮ ಸುವಿಶಾಲ ಅರಮನೆಗೆ ಈ ಸೇನೆಯನ್ನು ಇರಿಸಿಕೊಳ್ಳುವ ಶಕ್ತಿಯಿದ್ದರೆ, ನಾವೆಲ್ಲರೂ ಒಟ್ಟಿಗೇ ಊಟಮಾಡೋಣ, ಮತ್ತು ನಾಳೆಯ ದಿನದ ವಿಧಿಗಾಗಿ ಭಾಂಡಲೆ ತುಂಬ ಕುಡಿಯೋಣ, ನಾಳೆಯಿದೆ ರಾಜಕ್ರೀಡೆ.
ಕಹಳೆಯವರೇ, ಕಂಚಿನ ಕಂಠದಲಿ ನಗರದ ಕಿವಿಯನ್ನು ಒಡೆಯಿರಿ; ನಮ್ಮ ತಮ್ಮಟೆಗಳ ಜತೆ ಸೇರಲಿ ಅವು, ಆಕಾಶ ಮತ್ತು ಭೂಮಿ ತಮ್ಮ ಶಬ್ದಗಳನ್ನು ಒಟ್ಟಿಗೇ ಹೊರಡಿಸಿದಂತೆ, ನಮ್ಮ ಪ್ರವೇಶಕ್ಕೆ ಕೈಚಪ್ಪಾಳೆ ತಟ್ಟುವ ಹಾಗೆ.
[ಕಹಳಾನಾದ, ಎಲ್ಲರೂ ನಿಷ್ಕ್ರಮಣ]

ದೃಶ್ಯ 9
ಸೀಸರನ ಬಿಡದಿ
ತಳವಾರನೊಬ್ಬನ ಪ್ರವೇಶ, ಪ್ರಹರಿಯವರ ಜತೆ, ಈನೋಬಾರ್ಬಸ್ ಹಿಂಬಾಲಿಸುತ್ತ…

ತಳವಾರ. ಈ ಗಂಟೆಯೊಳಗೆ ನಮ್ಮನ್ನು ಬಿಡಿಸದೆ ಇದ್ದರೆ, ನಾವು ರಕ್ಷಣಾಕೊಠಡಿಗೆ ಮರಳತಕ್ಕದ್ದು. ರಾತ್ರಿ ಬೆಳಕಿದೆ, ಬೆಳಗಿನ
ಎರಡನೇ ಜಾವದಲ್ಲಿ ನಾವು ಯುದ್ಧ ಮಾಡುತ್ತೇವೆ ಎನ್ನುವುದು ಸುದ್ದಿ.
ಪ್ರಹರಿ 1. ಈ ಕೊನೇ ದಿವಸ ನಿಮ್ಮ ಮಟ್ಟಿಗೆ ಒಂದು ಮಾರಿಯೇ ಆಗಿತ್ತು.
ಈನೋ. ಓ, ನನಗೆ ಸಾಕ್ಷಿಯಾಗು, ರಾತ್ರಿಯೇ, —
ಪ್ರಹರಿ 2. ಯಾರೀ ಮನುಷ್ಯ?
ಪ್ರಹರಿ 1. ಅಡಗಿ ನಿಂತು ಆಲಿಸೋಣ.
[ಅವರು ಬದಿಗೆ ನಿಂತು ಆಲಿಸುತ್ತಾರೆ]
ಈನೋ. ನನಗೆ ಸಾಕ್ಷಿಯಾಗು, ಎಲೆ ಅದೃಷ್ಟವಂತ ಚಂದ್ರಿಕೆಯೆ, ಬಂಡೆದ್ದ ಮನುಷ್ಯರು ದಾಖಲೆಯಲ್ಲಿ ಶಪಿಷ್ಠ ಸ್ಮೃತಿಗೆ ಪಾತ್ರ-
ರಾಗುವಾಗ. ಬಡ ಈನೋಬಾರ್ಬಸ್ ನಿನ್ನ ಮುಖದ ಮುಂದೆ ಪಶ್ಚಾತ್ತಪಿಸಿದ್ದಾನೆ.
ತಳವಾರ. ಈನೋಬಾರ್ಬಸ್!
ಪ್ರಹರಿ 2. ಶ್ಶ್! ಇನ್ನೂ ಕೇಳು.
ಈನೋ. ನಿಜವಾದ ಬೇಸರದ ಪರಿಪೂರ್ಣ ಒಡತಿಯೆ, ಇರುಳ ನಂಜಿನ ಥಂಡಿ ನನ್ನ ಮೈಮೇಲೆ ಸುರಿಯಲಿ, ನನ್ನಿಚ್ಛೆಗೆ ವಿರುದ್ಧವಾದ ಬದುಕು ನನ್ನ ಮೇಲೆ ತೂಗುವುದು ಬೇಡ. ನನ್ನ ತಪ್ಪಿನ ಕಠಿಣ ಹಗಲ ಮೇಲೆ ಒಗೆ ನನ್ನ ಹೃದಯವನ್ನು, ದುಃಖ ಬತ್ತಿಸಿ ಒಣಗಿದ ಅದು ಒಡೆದು ಧೂಳಿಯಾಗಲಿ, ಎಲ್ಲಾ ಕೆಟ್ಟ ವಿಚಾರಗಳೂ ಹೀಗೆ ಕೊನೆಗೊಳ್ಳಲಿ. ಓ ಆಂಟನಿ, ನನ್ನ ದಂಗೆಯೆಷ್ಟು ಅಪಖ್ಯಾತವೋ ಅದಕ್ಕಿಂತ ಎಷ್ಟೋ ಉತ್ತಮನಾದವನೆ, ನಿನ್ನ ಸ್ವಂತದ ಮಟ್ಟಿಗಾದರೂ ಕ್ಷಮಿಸು ನನ್ನನ್ನು, ಜಗತ್ತು ಬೇಕಿದ್ದರೆ ದಾಖಲೆಯಲ್ಲಿ ನನ್ನನ್ನು ಸ್ವಾಮಿ ದ್ರೋಹಿಯೆಂದು,ಪರಾರಿಯೆಂದು ಗುರುತಿಸಲಿ.
ಓ ಆಂಟನಿ! ಓ ಆಂಟನಿ! [ಸಾಯುವನು]
ಪ್ರಹರಿ 1. ಅವನನ್ನು ಮಾತಾಡಿಸೋಣ.
ತಳವಾರ. ಅವನು ಹೇಳೋದನ್ನು ಕೇಳೋಣ, ಯಾಕೆಂದರೆ ಅವನು ಹೇಳೋದು ಸೀಸರನಿಗೆ ಸಂಬಂಧಿಸಿ ಇರಬಹುದು.
ಪ್ರಹರಿ 2. ಹಾಗೇ ಮಾಡೋಣ. ಆದರೆ ನಿದ್ರಿಸುತ್ತಿದ್ದಾನೆ.
ತಳವಾರ. ಮೂರ್ಛೆಗೊಂಡಿದ್ದಾನೆ ಬಹುಶಃ, ಯಾಕೆಂದರೆ ಇಷ್ಟೊಂದು ಕೆಟ್ಟ ಇವನ ಪ್ರಾರ್ಥನೆ ನಿದ್ದೆಗೋಸ್ಕರ ಈ ತನಕ
ಎಂದೂ ಇದ್ದಿಲ್ಲ.
ಪ್ರಹರಿ 1. ಅವನ ಹತ್ತಿರ ಹೋಗೋಣ. [ಅವರು ಈನೋಬಾರ್ಬಸ್ ಸಮೀಪ ಹೋಗುತ್ತಾರೆ]
ಪ್ರಹರಿ 2. ಏಳಿ, ಸ್ವಾಮಿ, ಏಳಿ. ನಮ್ಮ ಜತೆ ಮಾತಾಡಿ.
ಪ್ರಹರಿ 1. ನಾವು ಹೇಳಿದ್ದು ಕೇಳಿಸ್ತಿದೆಯೆ, ಸ್ವಾಮಿ?
ತಳವಾರ. ಸಾವಿನ ಕೈ ಇವನನ್ನು ತಲುಪಿದೆ.
[ದೂರದಿಂದ ನಗಾರಿಗಳ ಶಬ್ದ] ಆಲಿಸಿ, ನಗಾರಿಗಳು ಮಲಗಿದವರನ್ನು ಮೆಲ್ಲಗೆ ಎಬ್ಬಿಸುತ್ತಿವೆ. ಈತನನ್ನು ರಕ್ಷಣಾಕೊಠಡಿಗೆ ಕೊಂಡೊಯ್ಯೋಣ;ಒಬ್ಬ ಮುಖ್ಯಸ್ಥನೇ ಇರಬೇಕು. ನಮ್ಮ ಗಂಟೆಯೂ ಮುಗಿದಿದೆ.
ಪ್ರಹರಿ 2. ಬನ್ನಿ, ಹಾಗಿದ್ದರೆ, ಇವನಿಗೆ ಬೋಧೆ ಬಂದರೂ ಬರಬಹುದು.
[ಈನೋಬಾರ್ಬಸ್‍ನ ದೇಹವನ್ನು ಎತ್ತಿಕೊಂಡು ಎಲ್ಲರ ನಿಷ್ಕ್ರಮಣ]

ದೃಶ್ಯ 10
ರಣರಂಗ

ಆಂಟನಿ ಮತ್ತು ಸ್ಕಾರಸ್, ತಮ್ಮ ಸೇನಾಪಡೆ ಸಮೇತ ಪ್ರವೇಶ

ಆಂಟನಿ. ಅವರು ಬೆಂಕಿಯಲ್ಲೂ ಗಾಳಿಯಲ್ಲೂ ಕೂಡ ಹೋರಾಡಲಿ, ನಾವಲ್ಲಿ ಹೋರಾಡುವೆವು. ಆದರೆ ಇದು ಹೀಗೆ: ನಗರ ಸಮೀಪದ ಬೆಟ್ಟಗಳ ಮೇಲೆ ನಮ್ಮ ಕಾಲಾಳುಗಳು ನಮ್ಮ ಜತೆ ಕಾಪಿರುತ್ತಾರೆ — ಸಮುದ್ರ ದಳಕ್ಕೆ ಆಜ್ಞೆ ನೀಡಿದೆ; ಅವರು ಬಂದರಿನಿಂದ ಮುಂದೆ ಹೋಗಿದ್ದಾರೆ — ಅಲ್ಲಿಂದ ನಾವವರ ಕಾರ್ಯವೈಖರಿಯನ್ನು ಚೆನ್ನಾಗಿ ವೀಕ್ಷಿಸುವುದು ಸಾಧ್ಯ.
[ಎಲ್ಲರೂ ನಿಷ್ಕ್ರಮಣ]

ದೃಶ್ಯ 11
ರಣರಂಗ

ಸೀಸರ್ ಮತ್ತು ಅವನ ಸೇನಾದಳ ಪ್ರವೇಶ…

ಸೀಸರ್. ನಮ್ಮನ್ನು ಆಕ್ರಮಿಸದೆ ಇದ್ದಲ್ಲಿ, ನಾವು ನೆಲದ ಮೇಲೆ ತಟಸ್ಥವಾಗಿರುತ್ತೇವೆ — ನನಗೆ ಗೊತ್ತಿದ್ದಂತೆ, ಅದು ಆಗುವುದು ಹಾಗೆಯೇ, ಯಾಕೆಂದರೆ ಅವನ ಅತ್ಯುತ್ತಮ ಸೈನಿಕರು ನೌಕಾದಳದಲ್ಲಿದ್ದಾರೆ. ಬಯಲಿಗೆ ಹೋಗಿ ಅಲ್ಲಿ ನಮ್ಮ ಅನುಕೂಲ ಗಳಿಸೋಣ.
[ಎಲ್ಲರೂ ನಿಷ್ಕ್ರಮಣ]

ದೃಶ್ಯ 12
ರಣರಂಗ

ಆಂಟನಿ ಮತ್ತು ಸ್ಕಾರಸ್ ಪ್ರವೇಶ..

ಆಂಟನಿ. ಆದರೂ ಅವರು ಯುದ್ಧ ಮಾಡಿಲ್ಲ. ಆ ಮರದ ಹತ್ತಿರ ನಿಂತರೆ ನನಗೆಲ್ಲಾ ಗೊತ್ತಾಗುವುದು. ಹೇಗೆ
ನಡೆದೀತೆನ್ನುವುದನ್ನು ನಾನು ಬಂದು ತಿಳಿಸುವೆ.
[ಆಂಟನಿ ನಿಷ್ಕ್ರಮಣ]

ದೂರದಲ್ಲಿ ಎಚ್ಚರಗಂಟೆ, ಸಮುದ್ರ ಯುದ್ಧದಲ್ಲಿ ಎಂಬಂತೆ…

ಸ್ಕಾರಸ್. ಕಪೋತಗಳು ಗೂಡುಕಟ್ಟಿವೆ ಕ್ಲಿಯೋಪಾತ್ರಾಳ ಹಾಯಿಗಳಲ್ಲಿ. ಕಾಲಜ್ಞಾನಿಗಳು ಹೇಳುತ್ತಾರೆ ತಮಗೆ ಗೊತ್ತಿಲ್ಲ,
ತಾವು ಹೇಳಲಾರೆವು ಎಂದು, ಅವರ ಮುಖದಲ್ಲಿ ದುಗುಡವಿದೆ, ತಮ್ಮ ಜ್ಞಾನ ಹೇಳುವ ಧೈರ್ಯ ಅವರು ಮಾಡರು. ಆಂಟನಿ
ಧೈರ್ಯಶಾಲಿ, ಆದರೆ ಬೇಸರಗೊಂಡಿರುವರು, ಏನು ಕಾದಿದೆ, ಏನು ಕಾದಿಲ್ಲ ಎಂಬುದರ ಬಗ್ಗೆ ಆಸೆ ನಿರಾಸೆಗಳನ್ನು
ಅಷ್ಟಿಷ್ಟು ನೀಡುತ್ತಿವೆ, ಅವರ ಹೈರಾಣಾದ ಅದೃಷ್ಟಗಳು.

ಆಂಟನಿ ಪ್ರವೇಶ

ಆಂಟನಿ. ಏಲ್ಲಾ ಹೋಯಿತು!
ಈ ಕೆಟ್ಟ ಈಜಿಪ್ಶಿಯನ್ ಬಿಟ್ಟುಕೊಟ್ಟಿದ್ದಾಳೆ ನನ್ನನ್ನು. ನನ್ನ ನೌಕಾದಳ ವೈರಿಗೆ ಶರಣಾಗಿದೆ, ಅಲ್ಲದೆ ಇತ್ತ ತಮ್ಮ ಶಿರಸ್ತ್ರಾಣಗಳನ್ನು
ಮೇಲಕ್ಕೆಸೆದು ತಮ್ಮ ಕಾಲಾಂತರದ ಮಿತ್ರರೆಂಬಂತೆ ಕುಣಿದಾಡುತ್ತಿದ್ದಾರೆ. ಮೂರು ಮೂರು ಸಲ ಸೂಳೆ! ಈ ಹುಡುಗು ಬುದ್ಧಿಗೆ ನನ್ನನ್ನು ಮಾರಿದವಳು ನೀನು, ನನ್ನ ಹೃದಯ ಯುದ್ಧ ಮಾಡುತ್ತಿರುವುದು ನಿನ್ನ ವಿರುದ್ಧ ಮಾತ್ರ. ಅವರನ್ನೆಲ್ಲ ತೆರಳಲು ಹೇಳು; ಯಾಕೆಂದರೆ ನಾನು ನನ್ನ ಮಾಟಗಾತಿಯ ಮೇಲೆ ಹಗೆ ಬೀಡಿದ ಮೇಲೆ, ನಾನೆಲ್ಲಾ ಬೀಡಿದ ಹಾಗೆಯೇ. ಅವರನ್ನೆಲ್ಲ ತೆರಳಲು ಹೇಳು.
[ಸ್ಕಾರಸ್ ನಿಷ್ಕ್ರಮಣ]
ಓ ಸೂರ್ಯನೇ, ನಿನ್ನ ಉದಯವನ್ನು ನಾನಿನ್ನು ಕಾಣಲಾರೆ. ಅದೃಷ್ಟ ಮತ್ತು ಆಂಟನಿ ಇಲ್ಲಿ ಬೇರಾಗುತ್ತಾರೆ; ಬೇರಾಗುತ್ತ,
ನಾವು ಕೈ ಕುಲುಕುತ್ತೇವೆ. ಎಲ್ಲಾ ಕೊನೆಗೊಳ್ಳುವುದು ಇದರಲ್ಲೇ? ನನ್ನ ಹಿಮ್ಮಡಿ ನೆಕ್ಕಿದ ಹೃದಯಗಳು, ಯಾರೇನು ಕೇಳಿದುವೊ
ಅವರಿಗದನ್ನು ನಾನು ಕೊಟ್ಟಂಥವು, ಇಲ್ಲಿ ಕರಗುತ್ತಿವೆ, ಬಿರಿಯುತ್ತಿವೆ, ಸೀಸರನ ಮೇಲೆ ಸುರಿಯುತ್ತಿವೆ; ಅವರೆಲ್ಲರಿಗು ನೆರಳಿತ್ತ ಈ
ಹೆಮ್ಮರವಾದರೋ ಈಗ ತೊಗಟೆ ಕಿತ್ತು ಬಡವಾಯಿತು.
ವಂಚಿಸಲ್ಪಟ್ಟಿರುವೆನು ನಾನು. ಓ, ಈಜಿಪ್ಟಿನ ಈ ಹುಸಿ ಜೀವಾತ್ಮವೇ! ಯಾರ ಕಣ್ಣುಗಳು ನನ್ನ ಸಂಗ್ರಾಮಗಳನ್ನು ಹರಸಿ ಕಳಿಸಿದುವೊ ಹಾಗೂ ಮನೆಗೆ ಕರೆಸಿದುವೊ, ಯಾರ ಎದೆ ನನ್ನ ಮುಕುಟವಾಗಿತ್ತೊ, ನನ್ನ ಪ್ರಧಾನ ಗುರಿಯಾಗಿತ್ತೊ, ಅಂಥಾ ಈ ಭಯಂಕರ ಯಕ್ಷಿ, ಒಬ್ಬ ತಾಜಾ ಜಿಪ್ಸಿಯ ಹಾಗೆ, ತನ್ನ ಕಂಗಟ್ಟಿನಲ್ಲಿ ಕಟ್ಟಿದ್ದಾಳೆ
ಅಪಜಯದ ಹೃದಯಕ್ಕೆ. ಎಲ್ಲಿ, ಈರೋಸ್, ಈರೋಸ್!

ಕ್ಲಿಯೋಪಾತ್ರ ಪ್ರವೇಶ

ಹಾ! ಎಲೈ ಮಾಟವೇ ತೊಲಗು!
ಕ್ಲಿಯೋ. ಯಾಕೆ ನನ್ನ ದೊರೆಗೆ ದೊರೆಯ ಅರಗಿಣಿಯ ಮೇಲೆ ಸಿಟ್ಟು?
ಆಂಟನಿ. ಮಾಯವಾಗು, ಇಲ್ಲವೇ ನಿನಗೇನು ತಕ್ಕುದೋ ಅದನ್ನು ನೀಡಿ, ಸೀಸರನ ವಿಜಯಕ್ಕೆ ಕಳಂಕ ಹಚ್ಚುವೆನು.
ಎತ್ತಿ ಒಗೆಯಲಿ ಅವನು ನಿನ್ನನ್ನು ಕೂಗುವ ಜನಸಮೂಹಕ್ಕೆ! ಅವನ ರಥವ ಹಿಂಬಾಲಿಸು, ನಿನ್ನೆಲ್ಲ ಹೆಣ್ಣುಜಾತಿಗೇ ಕೆಟ್ಟ ಪೆಡಂಬೂತದಂತೆ, ಬಡ ಕುಳ್ಳರಿಗೆ ಕುಬ್ಜರಿಗೆ ನಿನ್ನ ಪ್ರದರ್ಶನವಾಗಲಿ. ಸಹನಾಮೂರ್ತಿ ಒಕ್ಟೇವಿಯಾ ತನ್ನ ನಖಗಳಿಂದ ಉತ್ತುಹಾಕಲಿ ನಿನ್ನ ಮುಖವನ್ನ.
[ಕ್ಲಿಯೋಪಾತ್ರ ನಿಷ್ಕ್ರಮಣ]
ಒಳ್ಳೆಯದೇ ಆಯಿತು ನೀನು ಹೋದದ್ದು, ಬದುಕುವುದೇ ಒಳ್ಳೆಯದು ಎಂದಿದ್ದರೆ. ಆದರೆ ನನ್ನ ಕೋಪಾಗ್ನಿಗೆ ನೀನು
ಬಿದ್ದಿದ್ದರೆ, ಅದು ಇನ್ನಷ್ಟು ಒಳ್ಳೆಯದಾಗುತ್ತಿತ್ತು; ಯಾಕೆಂದರೆ ಒಂದು ಸಾವು ಅದೆಷ್ಟೋ ಸಾವುಗಳನ್ನು ತಡೆಯುತ್ತಿತ್ತು.
ಈರೋಸ್, ಎಲ್ಲಿದ್ದೀ? ನೆಸ್ಸಸ್ಸಿನ ಅಂಗಿ ನನ್ನ ಮೇಲಿದೆ.
ಅಲ್ಸೈಡೀಸ್, ನನ್ನ ಪಿತೃಪಿತಾಮಹನೆ, ಕಲಿಸು ನನಗೆ ನಿನ್ನ ಕ್ರೋಧವ. ಲಿಚಾಸನ್ನ ಎಸೆಯುವೆನು ಚಂದ್ರನ ಕೋಡುಗಳಿಗೆ,
ಅತ್ಯಂತ ಭಾರದ ಗದೆ ಬೀಸಿದ ಕೈಗಳಿಂದ ನನ್ನ ಆತ್ಮಗೌರವವ ತಣಿಸುವೆನು. ಮಾಟಗಾತಿ ಮರಣಿಸಲೆ ಬೇಕು. ರೋಮಿನ
ಪಡ್ಡೆ ಹುಡುಗನಿಗೆ ನನ್ನನ್ನು ಮಾರಿದ್ದಾಳೆ ಅವಳು, ಷಡ್ಯಂತ್ರ್ಯದ ಕೆಳಗೆ ಬಲಿಯಾದೆ ನಾನು. ಜೀವ ತೆರುತ್ತಾಳೆ ಅವಳು
ಅದಕ್ಕೋಸ್ಕರ.
[ನಿಷ್ಕ್ರಮಣ]

ದೃಶ್ಯ 13
ಅಲೆಕ್ಝಾಂಡ್ರಿಯಾ, ಈ ಹಿಂದಿನ ದೃಶ್ಯದ ಬೆನ್ನಲ್ಲೆ ಕ್ಲಿಯೋಪಾತ್ರ, ಚಾರ್ಮಿಯಾನ್, ಇರಾಸ್, ಮತ್ತು ಮಾರ್ಡಿಯಾನ್ ಪ್ರವೇಶ

ಕ್ಲಿಯೋ. ನನಗೆ ಸಹಾಯಮಾಡಿ, ನನ್ನ ಸಖಿಯರೇ!

ಓ, ಅವರು ಸಿಟ್ಟಾಗಿದ್ದಾರೆ, ಟೆಲಮೋನ್ ತನ್ನ ಗುರಾಣಿಗೋಸ್ಕರ ಸಿಟ್ಟಾದ್ದಕ್ಕಿಂತಲೂ ಅಧಿಕ; ತೆಸ್ಸಲಿಯ ವರಾಹ ಕೂಡ ಇಷ್ಟೊಂದು ಫೂತ್ಕರಿಸದು.
ಚಾರ್ಮಿ. ಸ್ಮಾರಕಕ್ಕೆ! ಅಲ್ಲಿ ಹೋಗಿ ಬಾಗಿಲ ಹಾಕಿಬಿಡಿ, ಹಾಗೂ ನೀವು ಸತ್ತಿರುವಿರೆಂದು ಸುದ್ದಿ ತಿಳಿಸಿರಿ ಅವರಿಗೆ.
ಜೀವ ಮತ್ತು ದೇಹ ಪರಸ್ಪರ ಅಗಲುವುದು ಸಹಾ ಮಹಾಮಹಿಮರು ಅಗಲುವಷ್ಟು ಬಿರುಕುಂಟುಮಾಡುವುದಿಲ್ಲ.
ಕ್ಲಿಯೋ. ಸ್ಮಾರಕಕ್ಕೆ! ಮಾರ್ಡಿಯಾನ್, ಹೋಗಿ ಹೇಳವರಿಗೆ ನಾನು ಸತ್ತಿರುವೆನೆಂದು. ನನ್ನ ಕೊನೆಮಾತು `ಆಂಟನಿ’ಯಾಗಿತ್ತೆಂದು ತಿಳಿಸು, ಕರುಣಾಜನಕವಾಗಿ ನುಡಿ ಅದನ್ನು, ದಯವಿಟ್ಟು ತೆರಳು, ಮಾರ್ಡಿಯಾನ್, ಅವರು ನನ್ನ ಸಾವನ್ನು ಹೇಗೆ ಸ್ವೀಕರಿಸುತ್ತಾರೆಂದು ಬಂದು ನನಗೆ ತಿಳಿಸು. ನಡೆಯಿರಿ, ಸ್ಮಾರಕಕ್ಕೆ!
[ಎಲ್ಲರೂ ನಿಷ್ಕ್ರಮಣ]

ದೃಶ್ಯ 14
ಹಿಂದಿನ ಜಾಗವೇ ಆಂಟನಿ ಮತ್ತು ಈರೋಸ್ ಪ್ರವೇಶ

ಆಂಟನಿ. ಈರೋಸ್, ನಿನಗೆ ಈಗಲೂ ನನ್ನನ್ನು ಕಾಣಿಸುತ್ತಿದೆಯೇ?
ಈರೋಸ್. ಹೌದು, ಮಹಾಸ್ವಾಮಿ.
ಆಂಟನಿ. ಕೆಲವು ಸಲ ನಮಗೆ ಪೆಡಂಬೂತದಂಥ ಮಂಜು, ಕೋಟೆಗೋಡೆಗಳ ಮಹಲು, ತೂಗುತ್ತಿರುವ ಬಂಡೆ, ಎರಡಾಗಿ ಸಿಗಿದ ಪರ್ವತ, ಅಥವಾ ನೀಲಿ ಕೋಡುಗಲ್ಲಿನ ಮೇಲೆ ಮರಗಳು ಜಗದ ಕಡೆ ತಲೆದೂಗಿ ನನ್ನ ಕಣ್ಣುಗಳನ್ನು ಗಾಳಿಯಿಂದಲೆ ಕೆಣಕುತ್ತವೆ. ನೀನು ಈ ಚಿಹ್ನೆಗಳನ್ನು ನೋಡಿದ್ದೀ; ಇವು ಕಡು ಮುಸ್ಸಂಜೆಯ ಸಾಲು ದೃಶ್ಯಗಳು.
ಈರೋಸ್. ಹೌದು, ಮಹಾಸ್ವಾಮಿ.
ಆಂಟನಿ. ಈಗ ಕುದುರೆಯಾಗಿದ್ದುದನ್ನು ಕ್ಷಣಾರ್ಧದಲ್ಲೇ ಮಂಜು ಮರೆಸುತ್ತದೆ. ಹೌದು, ನೀರಲ್ಲಿ ನೀರು ಎಂಬಂತೆ ಕರಗಿಸಿಬಿಡುತ್ತದೆ.
ಈರೋಸ್. ಅದು ನಿಜ, ಮಹಾಸ್ವಾಮಿ.
ಆಂಟನಿ. ನನ್ನೊಳ್ಳೆಯ ಹುಡುಗ ಈರೋಸ್, ಈಗ ನಿನ್ನೀ ಒಡೆಯ ಅಂಥದೇ ಕಾಯ. ಇಲ್ಲಿ ನಾನು ಆಂಟನಿ ಇದ್ದೇನೆ, ಆದರೂ ಈ ಪ್ರತ್ಯಕ್ಷ ಆಕಾರವನ್ನು ಇರಿಸಿಕೊಳ್ಳಲಾರೆ, ಹುಡುಗಾ. ಈ ಯುದ್ಧಗಳನ್ನು ನಾನು ಈಜಿಪ್ಟಿಗಾಗಿ ಮಾಡಿದೆ, ಹಾಗೂ ಈಜಿಪ್ಟಿನ ರಾಣಿಗಾಗಿ, ನಾನಂದುಕೊಂಡೆ ಅವಳ ಹೃದಯ ನನ್ನ ಬಳಿ ಇದೆಯೆಂದು, ಯಾಕೆಂದರೆ ನನ್ನದು ಅವಳ ಬಳಿಯಿತ್ತು — ಇದು ನನ್ನದಾಗಿರುವ ತನಕ ಲಕ್ಷ ಗಳಿಸಿದ್ದು ಈಗ ಕಳೆದಿದೆ — ಅವಳೋ, ಈರೋಸ್, ಎಲೆಗಳನ್ನು ಸೀಸರನ ಜತೆ ಕಲಸಿದ್ದಾಳೆ, ವೈರಿಯ ವಿಜಯಕ್ಕಾಗಿ ನನ್ನ ಗರಿಮೆಯನ್ನು ಹುಸಿಯಾಗಿ ಆಡಿದ್ದಾಳೆ. ಇಲ್ಲ, ಅಳಬೇಡ, ಈರೋಸ್, ನಮಗಿನ್ನು ನಾವು ಉಳಿದಿದ್ದೇವೆ ನಮ್ಮನ್ನು ಮುಗಿಸುವುದಕ್ಕೆ.

ಮಾರ್ಡಿಯಾನ್ ಪ್ರವೇಶ

ಓ, ನಿನ್ನ ದುಷ್ಟ ಮಾಲಿಕಳು! ನನ್ನ ಕಠಾರಿಯನ್ನೇ ಕಿತ್ತು ತೆಗೆದಿದ್ದಾಳೆ.
ಮಾರ್ಡಿ. ಇಲ್ಲ, ಆಂಟನಿ, ನನ್ನ ಮಾಲಿಕಳು ನಿಮ್ಮನ್ನು ಪ್ರೀತಿಸಿದಳು, ಅವಳ ಅದೃಷ್ಟ ನಿಮ್ಮದರ ಜತೆ ಸಂಪೂರ್ಣ ಸಮ್ಮಿಳಿತ.
ಆಂಟನಿ. ತೊಲಗು, ಅಧಿಕಪ್ರಸಂಗಿ ನಪುಂಸಕನೆ, ಮಾತಾಡಬೇಡ! ಅವಳು ನನಗೆ ವಂಚಿಸಿದ್ದಾಳೆ ಮತ್ತು ಅದಕ್ಕಾಗಿ ಅವಳಿಗೆ ಮರಣದಿಂದಲೇ ಶಿಕ್ಷೆ.
ಮಾರ್ಡಿ. ಒಬ್ಬ ಮರಣದ ಬೆಲೆ ತೆರುವುದು ಒಂದು ಸಲ ಮಾತ್ರ, ಅದನ್ನವಳು ಮಾಡಿದ್ದಾಳೆ. ನೀವೇನು ಮಾಡಬೇಕೆಂದಿದ್ದೀರೋ ಅದನ್ನು ಅವಳೇ ಮಾಡಿ ನಿಮ್ಮ ಕೈಗೆ ಇತ್ತಾಗಿದೆ. ಅವಳು ಕೊನೆಗೆ ಅಂದದ್ದು, `ಆಂಟನಿ, ಅತಿ ಶ್ರೇಷ್ಠ ಆಂಟನಿ!’ ಎಂಬುದಾಗಿ.
ಆಮೇಲೆ ಗಂಟಲು ಕಟ್ಟಿ ಆಂಟನಿಯ ಹೆಸರು ಒಡೆಯಿತು;
ಅದು ಅವಳ ಹೃದಯ ಮತ್ತು ಅಧರಗಳ ನಡುವೆ ಪಾಲಾಯಿತು. ತನ್ನೊಳಗೆ ಆಳವಾಗಿ ಹುದುಗಿದ್ದ ಹೆಸರನ್ನು ಅವಳು ಹಾಗೆ ಲೋಕಾರ್ಪಣ ಮಾಡಿದಳು.
ಆಂಟನಿ. ಸತ್ತಳು, ಹಾಗಾದರೆ?
ಮಾರ್ಡಿ. ಸತ್ತಳು.
ಆಂಟನಿ. ನನ್ನ ನಿರಾಯುಧನಾಗಿಸು, ಈರೋಸ್. ಸುದೀರ್ಘ ದಿನದ ಕಾರ್ಯ ಮುಗಿಯಿತು, ನಾನಿನ್ನು ನಿದ್ರಿಸಬೇಕು.
[ಮಾರ್ಡಿಯಾನ್‍ಗೆ] ನೀನಿಲ್ಲಿಂದ ಜೀವಸಹಿತ ಹೋಗುತ್ತೀ ಅನ್ನುವುದೇ ನಿನ್ನ ಕೆಲಸಕ್ಕೆ ತಕ್ಕ ಕೂಲಿ; ಹೋಗು.
[ಮಾರ್ಡಿಯಾನ್ ನಿಷ್ಕ್ರಮಣ] ಕಳಚಿ ತೆಗೆ ಎಲ್ಲಾ!

[ಈರೋಸ್ ಅವನ ಕವಚ ಕಳಚುತ್ತಾನೆ]

ಏಜಾಕ್ಸನ ಏಳು ಸುತ್ತಿನ ಗುರಾಣಿ ಸ್ವತಃ ನನ್ನ ಹೃದಯದ ಮೇಲಣ ಧಾಳಿಯನ್ನು ತಡೆಯದು. ಓ ನನ್ನ ಪಕ್ಕೆಗಳೇ, ಒಡೆಯಿರಿ! ಹೃದಯವೇ, ನಿನ್ನ ಖಂಡಕ್ಕಿಂತಲು ಒಮ್ಮೆ ಮಿಗು, ಒಡೆ ನಿನ್ನ ದುರ್ಬಲ ಪೆಟ್ಟಿಗೆಯನ್ನು! ಬೇಗನೆ, ಈರೋಸ್, ಬೇಗನೆ! ಇನ್ನೆಂದೂ ಯೋಧನೇ ಅಲ್ಲ. ಘಾಸಿಗೊಂಡ ತುಂಡುಗಳೇ, ಹೋಗಿ; ಇದ್ದಾಗ ತಾಳಿದಿರಿ ಇನ್ನಿಲ್ಲವೆಂಬಂತೆ. — ಸ್ವಲ್ಪ ದೂರ ಸರಿ.
[ಈರೋಸ್ ನಿಷ್ಕ್ರಮಣ]
ನಾನು ಹಿಮ್ಮೆಟ್ಟಿಸುವೆ ನಿನ್ನನ್ನು, ಕ್ಲಿಯೋಪಾತ್ರ, ಬಂದು ನನ್ನ ಕ್ಷಮೆಗಾಗಿ ಅಳುವೆ. ಇದು ಹೀಗೇ ಆಗಬೇಕಾಗಿದ್ದುದು, ಇನ್ನುಳಿದುದು ಹಿಂಸೆ; ದೀಪ ಆರಿರುತ್ತ, ಮಲಗಿಬಿಡು, ಮುಂದಕ್ಕೆ ಚಲಿಸುವುದು ಬೇಡ. ಇದೀಗ ಪ್ರತಿಯೊಂದು ಕೆಲಸವೂ ತಾನು ಗೈದುದನ್ನು ಕೊಲ್ಲುತ್ತದೆ; ಹೌದು, ಬಲ ತಾನಾಗಿ ಶಕ್ತಿಯ ಜತೆ ಸೆಣೆತುಕೊಳ್ಳುತ್ತದೆ. ಮೊಹರು ಹಾಕಿಬಿಡು, ಹಾಗಿದ್ದರೆ ಎಲ್ಲವೂ ಮುಗಿಯಿತು.
ಈರೋಸ್! — ನಾ ಬಂದೆ, ರಾಣಿ. — ಈರೋಸ್! — ಕಾದಿರು ನನಗೋಸ್ಕರ. ಎಲ್ಲಿ ಆತ್ಮಗಳು ಹೂಗಳ ಮೇಲೆ
ಆರಾಮವಾಗಿರುತ್ತವೆಯೋ ಅಲ್ಲಿ ನಾವು ಕೈಯಲ್ಲಿ ಕೈಯಿರಿಸಿ ನಡೆದಾಗ, ಸತ್ತವರೆದ್ದು ಕಣ್ಣುಬಿಡಬೇಕು ನಮ್ಮ ಉನ್ಮೇಷಕ್ಕೆ. ಡೈಡೋ ಮತ್ತು ಅವಳ ಈನಿಯಾಸ್‍ಗೆ ಇಂಥ ಅಭಿಮಾನಿ ಬಳಗವಿರಲಿಲ್ಲ, ನಮಗಾದರೆ ಮೂಲೆ ಮೂಲೆಗೂ ನಿಂತು ನೋಡುವವರೇ. ಈರೋಸ್, ಈರೋಸ್,
ಈರೋಸ್!

ಈರೋಸ್ ಪ್ರವೇಶ

ಈರೋಸ್. ಏನು ಬೇಕಿತ್ತು, ಮಹಾಸ್ವಾಮಿ?
ಆಂಟನಿ. ಕ್ಲಿಯೋಪಾತ್ರಾ ಸತ್ತಿರುತ್ತ, ನಾನು ಅದೆಷ್ಟು ಅವಮರ್ಯಾದೆಯಿಂದ ಬದುಕಿದ್ದೇನೆಂದರೆ, ಸ್ವತಃ ದೈವಗಳೇ ನನ್ನ ನೀಚತನಕ್ಕೆ ಅಸಹ್ಯಪಡುತ್ತಿದ್ದಾರೆ. ಲೋಕವನ್ನೇ ನಾಲ್ಕು ತುಂಡುಗಳಾಗಿಸಿದ ಈ ನಾನು, ಹಾಗೂ ಹರಿದ್ರಾವರ್ಣ ಸಮುದ್ರರಾಜನ ಬೆನ್ನಲ್ಲಿ ನೌಕಾನಗರಗಳ ಕಟ್ಟಿದವನು, ಒಬ್ಬ ಹೆಂಗಸಿನ ಧೈರ್ಯವಿಲ್ಲದ್ದಕ್ಕೆ ನನ್ನನ್ನೆ ಹಳಿಯುವೆನು. —
ಯಾರ ಮರಣದಿಂದ ಸೀಸರ್ `ನಾನೆ ನನ್ನ ಸಾಮ್ರಾಟ’- ನೆನ್ನುವನೊ ಆ ಅವಳಿಗಿಂತಲು ಕಡೆ. ಈರೋಸ್, ನೀನು ವಚನಬದ್ಧ, ಮೇರೆ ಯಾವತ್ತು ತಲುಪುವುದೊ ಆ ವೇಳೆ — ಅದೀಗ ನಿಜಕ್ಕೂ ತಲುಪಿಯೂ ಆಗಿದೆ — ನಾನು ನನ್ನ ಹಿಂದೆಯೆ ಅವಮಾನ ಮತ್ತು ಭೀತಿ ಬೆಂಬೆತ್ತುವುದನ್ನು ಕಾಣುವ ವೇಳೆ, ನನ್ನ ಆಜ್ಞಾನುಸಾರ ನನ್ನ ಕೊಲ್ಲುವುದಕ್ಕೆ. ಅದನ್ನು ಮಾಡು, ಸಮಯ ಬಂದಿದೆ. ನೀನು ನನ್ನನ್ನು ಕೊಲ್ಲುವುದಲ್ಲ, ಸೀಸರನನ್ನು ಸೋಲಿಸುವುದು ಎಂದು ತಿಳಿ. ನಿನ್ನ ಕೆನ್ನೆ ಯಾಕೆ ಬಿಳುಚಿದೆ, ತುಸು ರಂಗು ತರಿಸು ಅದರಲ್ಲಿ.
ಈರೋಸ್. ದೈವಗಳು ತಡೆಯಲಿ ನನ್ನನ್ನು! ಎಲ್ಲಾ ಪಾರ್ಥಿಯನ್ ಬಾಣಗಳು, ವಿರೋಧಿಗಳೇ ಆದರೂ, ಅವು ಗುರಿ ತಪ್ಪಿ ಮಾಡಲಾರದ್ದನ್ನು ನಾ ಮಾಡಬೇಕೆ?
ಆಂಟನಿ. ಈರೋಸ್, ಮಹಾ ರೋಮಿನಲ್ಲಿ ಗವಾಕ್ಷಿಯಲ್ಲಿ ಕುಳಿತು ನೋಡುವುದು ಇಷ್ಟವೇ ನಿನಗೆ ನಿನ್ನ ಒಡೆಯ ಹೀಗೆ ಕೈಜೋಡಿಸಿ, ತನ್ನ ವಿಧೇಯ ಕುತ್ತಿಗೆಯ ಬಗ್ಗಿಸಿ, ಅವನ ಮುಖ ಪೂರ ಅವಮಾನ ಆವರಿಸಿ, ಅದೇ ವೇಳೆ ಅದೃಷ್ಟವಂತ
ಸೀಸರನ ರಥ ಈ ಹಿಂಬಾಲಿಸುವ ನಿಕೃಷ್ಟತನಕ್ಕೆ ಮುದ್ರೆಯೊತ್ತುವುದು?
ಈರೋಸ್. ನಾನು ನೋಡಲಾರೆ ಅದನ್ನ.
ಆಂಟನಿ. ಬಾ ಹಾಗಾದರೆ, ಒಂದೇ ಏಟಿನಿಂದ ನನಗೆ ಗುಣವಾಗಬೇಕು. ನಿನ್ನ ಪ್ರತಿಷ್ಠಿತ ಖಡ್ಗವ ತೆಗೆ, ನಿನ್ನ ದೇಹಕ್ಕೋಸ್ಕರ ನೀನು ತೊಟ್ಟದ್ದು ಅದು, ಅತ್ಯಂತ ಉಪಯೋಗಕರವಾಗಿ.
ಈರೋಸ್. ಓ, ಸ್ವಾಮಿ, ನನ್ನನ್ನು ಕ್ಷಮಿಸಿ!
ಆಂಟನಿ. ನಿನ್ನನ್ನು ನಾನು ಮುಕ್ತಗೊಳಿಸಿದಾಗ, ನಾನು ಆಜ್ಞಾಪಿಸಿದಂದು ನೀನಿದನ್ನು ಮಾಡುವುದಾಗಿ ವಚನವಿತ್ತಿರಲಿಲ್ಲವೇ? ಅದನ್ನು ಕೂಡಲೇ ಮಾಡು, ಅಲ್ಲದಿದ್ದರೆ ನಿನ್ನೀ ಹಿಂದಣ ಸೇವೆಗಳೆಲ್ಲ ಅರ್ಥಹೀನ. ಕತ್ತಿಯ ಒರೆಕಳಚು, ಬಾ.
ಈರೋಸ್. ಹಾಗಿದ್ದರೆ ಇಡೀ ಲೋಕದ ಆರಾಧನೆ ನೆಲಸಿರುವ ಆ ಮುಖವನ್ನು ನನ್ನಿಂದ ಆಚೆಗೆ ತಿರುಗಿಸಿ.
ಆಂಟನಿ. ಇದೋ ನೋಡು! [ಆಂಟನಿ ಮುಖ ತಿರುಗಿಸುತ್ತಾನೆ]
ಈರೋಸ್. ಕತ್ತಿ ಕಳಚಿದ್ದೇನೆ.
ಆಂಟನಿ. ಹಾಗಿದ್ದರೆ ಅದು ಕಳಚಿದ ಕಾರಣವ ಕೂಡಲೇ ನಿರ್ವಹಿಸಲಿ.
ಈರೋಸ್. ನನ್ನ ಪ್ರೀತಿಯ ಒಡೆಯ, ನನ್ನ ನಾಯಕ, ನನ್ನ ಸಮ್ರಾಟ, ಈ ಘೋರ ಹೊಡೆತ ನೀಡುವ ಮುನ್ನ, ನಾನು ವಿದಾಯ ಹೇಳಿಬಿಡುವೆ.
ಆಂಟನಿ. ಹೇಳಿ ಆಯಿತಯ್ಯಾ, ವಿದಾಯ.
ಈರೋಸ್. ವಿದಾಯ, ಮಹಾನಾಯಕ. ಹೊಡೆಯಲೇ ಈಗ?
ಆಂಟನಿ. ಈಗ, ಈರೋಸ್.
ಈರೋಸ್. [ತನ್ನನ್ನು ತಾನೇ ಕೊಲ್ಲುತ್ತಾನೆ] ಸರಿ, ಹಾಗಾದರೆ, ಇದೋ! ಆಂಟನಿಯ ಮರಣದ ದುಃಖದಿಂದ ನಾನು ಈ ರೀತಿ
ಪಾರಾದೆ.
ಆಂಟನಿ. ಮುಮ್ಮಡಿ ಶ್ರೇಷ್ಠನಯ್ಯಾ ನನ್ನಿಂದ ನೀನು! ನೀನು ನನಗೆ ಕಲಿಸಿದಿ, ಓ ಧೀರ ಈರೋಸ್, ನಾನೇನು ಮಾಡಬೇಕೆಂಬುದನ್ನು, ನಾನೇನು ಮಾಡಲಾರದ್ದನ್ನು. ನನ್ನ ರಾಣಿಯೂ ಈ ಈರೋಸೂ ತಮ್ಮ ಧೀರ ಮಾದರಿಯಿಂದ
ನನಗಿಲ್ಲದ ದಾಖಲೆಯ ದಾಖಲಿಸಿಕೊಂಡರು. ಆದರೆ ಮರಣಕ್ಕೆ ನಾನೊಬ್ಬ ಮದುಮಗನಾಗಿ, ಪ್ರೇಯಸಿಯ ಮಂಚಕ್ಕೆ
ಧಾವಿಸುವಂತೆ ಧಾವಿಸುವೆ. ಇನ್ನೇನು ಕಾಯುವುದು, ಈರೋಸ್, ನಿನ್ನೊಡೆಯ ನಿನ್ನ ಶಿಷ್ಯನಾಗಿ ಸಾಯುವನು. ಹೀಗೆ ಮಾಡಲು
ನಾನು ನಿನ್ನಿಂದ ಕಲಿತೆ.
[ತನ್ನ ಖಡ್ಗದ ಮೇಲೆ ಬೀಳುತ್ತಾನೆ]
ಏನಿದು, ಸತ್ತಿಲ್ಲ? ಸತ್ತಿಲ್ಲ?
ತಳವಾರ, ಹೋ! ಓ, ಮುಗಿಸು ನನ್ನನ್ನು!

ಕಾವಲಿನವರದೊಂದು ದಂಡು, ಅವರಲ್ಲೊಬ್ಬ ಡರ್ಸೆಟಸ್, ಪ್ರವೇಶ

ಕಾವಲುಗಾರ 1. ಏನಿದು ಸದ್ದು?
ಆಂಟನಿ. ಗೆಳೆಯರೇ, ನಾನು ನನ್ನ ಕೆಲಸ ಸರಿಯಾಗಿ ಮಾಡಿಲ್ಲ. ಓ, ನಾನು ತೊಡಗಿದ್ದನ್ನು ಕೊನೆಗೊಳಿಸಿ!
ಕಾವಲುಗಾರ 2. ನಕ್ಷತ್ರ ಬಿದ್ದಿದೆ.
ಕಾವಲುಗಾರ 1. ಕಾಲ ಕೊನೆಗೊಂಡಿದೆ. ಎಲ್ಲರೂ. ದೈವವೇ!
ಆಂಟನಿ. ನನ್ನನ್ನು ಪ್ರೀತಿಸುವ ವ್ಯಕ್ತಿ ನನ್ನನ್ನು ಹೊಡೆದು ಕೊಲ್ಲಲಿ.
ಕಾವಲುಗಾರ 1. ನಾನಲ್ಲ.
ಕಾವಲುಗಾರ 2. ನಾನಲ್ಲ.
ಕಾವಲುಗಾರ 3. ಯಾರೂ ಅಲ್ಲ.
[ಡರ್ಸೆಟಸ್ ಹೊರತಾಗಿ ಉಳಿದವರ ನಿಷ್ಕ್ರಮಣ]
ಡರ್ಸೆಟಸ್. ನಿಮ್ಮ ಮರಣವೂ ದುರದೃಷ್ಟವೂ ನಿಮ್ಮ ಹಿಂಬಾಲಕರನ್ನು ಓಡಿಸಿವೆ. ಈ ಖಡ್ಗ ಈ ಸುದ್ದಿಯನ್ನು ತೋರಿಸಿದರೆ
ಸಾಕು ಸೀಸರನಿಗೆ, ನನಗವನ ಸೇವಾಭಾಗ್ಯ ಖಚಿತ.

ಡಯೊಮಿಡೀಸ್ ಪ್ರವೇಶ

ಡಯೊಮಿಡೀಸ್. ಎಲ್ಲಿ ಆಂಟನಿ?
ಡರ್ಸೆಟಸ್. ಅಲ್ಲಿ, ಡಯೊಮೀಡ್, ಅಲ್ಲಿ.
ಡಯೊಮಿಡೀಸ್. ಬದುಕಿರುವರೇ, ಏನು ನಿನಗೆ ಬಾಯಿ ಇಲ್ಲವಾ ಉತ್ತರಿಸುವುದಕ್ಕೆ? [ಡರ್ಸೆಟಸ್ ನಿಷ್ಕ್ರಮಣ]
ಆಂಟನಿ. ಅದು ನೀನಾ, ಡಯೊಮೀಡ್? ನಿನ್ನ ಕತ್ತಿ ಕಳಚಿ ನನಗೆ ಮರಣಕ್ಕಾಗುವ ಏಟು ಹಾಕು.
ಡಯೊಮಿಡೀಸ್. ದೊರೆಗಳ ದೊರೆಯೆ, ನನ್ನೊಡತಿ ಕ್ಲಿಯೋಪಾತ್ರ ನನ್ನನ್ನು ನಿಮ್ಮಲ್ಲಿಗೆ ಕಳಿಸಿದಳು.
ಆಂಟನಿ. ಯಾವಾಗ ಕಳಿಸಿದಳು?
ಡಯೊಮಿಡೀಸ್. ಈಗಲೇ, ಮಹಾಸ್ವಾಮಿ.
ಆಂಟನಿ. ಅವಳೆಲ್ಲಿದ್ದಾಳೆ?
ಡಯೊಮಿಡೀಸ್. ತನ್ನ ಸ್ಮಾರಕದಲ್ಲಿ ಬಾಗಿಲು ಹಾಕಿ. ಏನಾಗಲಿದೆ ಎನ್ನುವುದರ ಬಗ್ಗೆ ಆಕೆಗೆ ಆಗಲೇ ಒಂದು ಭಯವಿತ್ತು. ಯಾಕೆಂದರೆ — ಅವಳು ನೋಡಿದಳು — ಅದೆಂದೂ ನಿಜವಾಗದು — ಆದರೂ ತಾನು ಸೀಸರನ ಜತೆ ಶಾಮೀಲೆಂದು ನಿಮಗೆ ಗುಮಾನಿ, ಆ ನಿಮ್ಮ ಸಿಟ್ಟು ಎಂದೂ ತಣಿಯದು, ಆಗಲೇ ಅವಳು ಸುದ್ದಿ ಕಳಿಸಿದ್ದು ನಿಮಗೆ ತಾನು ಸತ್ತಿರುವೆನೆಂದು; ಆದರೆ ಆಗಿಂದಲೇ ಅದು ಹೇಗೆ ಪರಿಣಾಮ ಬೀರುವುದೊ ಎಂದು ಶಂಕಿಸಿ, ಸತ್ಯ ನುಡಿಯಲು ನನ್ನ ಕಳಿಸಿದ್ದಾಳೆ, ಹಾಗೂ ನಾನು ಬಂದಿದ್ದೇನೆ. ಆದರೂ ತುಂಬ ತಡವಾಯಿತೆಂದು ನನ್ನ ಭಯ.
ಆಂಟನಿ. ತುಂಬ ತಡವಾಯಿತು, ಡಯೊಮೀಡ್. ನನ್ನ ಅಂಗರಕ್ಷಕರೇ, ದಯವಿಟ್ಟು.
ಡಯೊಮಿಡೀಸ್. ಯಾರಲ್ಲಿ, ಓಹೋಯ್, ಅರಸರ ಅಂಗರಕ್ಷಕರು! ಅಂಗರಕ್ಷಕರು, ಓಹೋಯ್, ಬನ್ನಿ, ನಿಮ್ಮ
ಒಡೆಯರು ಕರೆಯುತ್ತಿದ್ದಾರೆ.

ಆಂಟನಿಯ ನಾಲ್ಕೈದು ಅಂಗರಕ್ಷಕರ ಪ್ರವೇಶ

ಆಂಟನಿ. ಸ್ನೇಹಿತರೆ, ಕ್ಲಿಯೋಪಾತ್ರ ಎಲ್ಲಿದ್ದಾಳೋ ಅಲ್ಲಿಗೆ ಒಯ್ಯಿರಿ ನನ್ನನ್ನು. ಅದು ನಿಮಗೆ ನಾನೀಯುವ ಕಡೇ ಕೆಲಸ.
ರಕ್ಷಕ 1. ಅಯ್ಯೋ ದೇವರೇ, ನೀವು ನಿಮ್ಮ ನಿಜ ಸೇವಕರು ಮುಗಿಯುವ ವರೆಗೆ ಬದುಕಿರಲಾರಿರಿ. ಎಲ್ಲರೂ. ಇದೆಂಥಾ ದುರ್ದಿನ!
ಆಂಟನಿ. ಇಲ್ಲ, ಮಿತ್ರರೇ, ನಿಮ್ಮ ದುಃಖಗಳಿಂದ ವಿಧಿಯನ್ನು ಅಲಂಕರಿಸಬೇಡಿರಿ. ನಮ್ಮನ್ನು ಶಿಕ್ಷಿಸುವುದಕ್ಕೆ ಬರುವಂಥವರನ್ನು
ಸ್ವಾಗತಿಸಿ, ಹಾಗೂ ಅದನ್ನು ಲಘುವಾಗಿ ಸಹಿಸುವ ಹಾಗೆ ನಟಿಸುವುದೆ ನಾವದನ್ನು ಶಿಕ್ಷಿಸುವ ರೀತಿ. ನನ್ನನ್ನು ಎತ್ತಿಕೊಳ್ಳಿ.
ಬಹಳ ಸಲ ನಿಮಗೆ ಮುಂದಾಳುತ್ವ ನೀಡಿದ್ದೇನೆ, ಈಗ ನನ್ನನ್ನು ಹೊತ್ತುಕೊಳ್ಳಿ, ಎಲ್ಲರಿಗೂ ನನ್ನ ಕೃತಜ್ಞತೆಗಳು.
[ಆಂಟನಿ ಮತ್ತು ಈರೋಸ್‍ನನ್ನು ಹೊತ್ತುಕೊಂಡು ಎಲ್ಲರ ನಿಷ್ಕ್ರಮಣ]

ದೃಶ್ಯ 15
ಕ್ಲಿಯೋಪಾತ್ರಳ ಸ್ಮಾರಕ
ಕ್ಲಿಯೋಪಾತ್ರ, ಮತ್ತು ಅವಳ ಸಖಿಯರು, ಚಾರ್ಮಿಯಾನ್ ಮತ್ತು ಇರಾಸ್ ಗ್ಯಾಲರಿಯಿಂದ ಪ್ರವೇಶ

ಕ್ಲಿಯೋ. ಓ ಚಾರ್ಮಿಯಾನ್, ನಾನಿಲ್ಲಿಂದ ಎಲ್ಲೂ ಹೋಗಲಾರೆ.
ಚಾರ್ಮಿ. ಸಮಾಧಾನಪಟ್ಟುಕೊಳ್ಳಿ, ಅಮ್ಮ.
ಕ್ಲಿಯೋ. ಇಲ್ಲ, ಸಮಾಧಾನಪಟ್ಟುಕೊಳ್ಳಲಾರೆ. ಎಲ್ಲಾ ವಿಲಕ್ಷಣಗಳೂ ದುರಂತಗಳೂ ಸ್ವಾಗತವೆ, ಆದರೆ ಸಮಾಧಾನ ನಮಗೆ ಆಗದು. ನಮ್ಮದು ದುಃಖದ ಪಾತ್ರ, ನಮ್ಮ ಉದ್ದೇಶಕ್ಕೆ ಸರಿಯಾಗಿ, ಅದರ ಕಾರಣದಷ್ಟೇ ಬೃಹತ್ತಾಗಿರಬೇಕು.

ಕೆಳಗಿನಿಂದ ಡಯೊಮಿಡೀಸ್ ಪ್ರವೇಶ

ಏನೀಗ, ಸತ್ತರೇ ಅವರು?
ಡಯೊಮಿಡೀಸ್. ಸಾವು ಅವರ ಮೇಲೆ ಇದೆ, ಆದರೆ ಸತ್ತಿಲ್ಲ. ನಿಮ್ಮ ಸ್ಮಾರಕದ ಆ ಕಡೆ ನೋಡಿ, ಅಂಗರಕ್ಷಕರು ಅವರನ್ನು ಅಲ್ಲಿಗೆ ತಂದಿದ್ದಾರೆ.

ಆಂಟನಿ, ಅವನನ್ನು ಹೊತ್ತ ರಕ್ಷಕರು ಕೆಳಗಿನಿಂದ ಪ್ರವೇಶ

ಕ್ಲಿಯೋ. ಓ ಸೂರ್ಯನೇ, ನೀನು ಚಲಿಸುವ ಮಹಾ ಖಗೋಳವನ್ನೇ ಉರಿಸಿಬಿಡು; ಕತ್ತಲಾಗಿಸಿ ಜಗದ ದಂಡೆಯ
ಹಗಲಿರುಳುಗಳನ್ನು ತಡೆದು ನಿಲ್ಲಿಸು! ಓ ಆಂಟನಿ, ಆಂಟನಿ, ಆಂಟನಿ! ಸಹಕರಿಸು, ಚಾರ್ಮಿಯಾನ್, ಸಹಕರಿಸು, ಇರಾಸ್,
ಸಹಕರಿಸಿ! ಕೆಳಗಿರುವ ಮಿತ್ರರೂ ಸಹಕರಿಸಿ! ಅವರನ್ನು ನಾವು ಇಲ್ಲಿಗೆ ಎತ್ತೋಣ.
ಆಂಟನಿ. ಶಾಂತಿ! ಸೀಸರನ ಶೌರ್ಯ ಆಂಟನಿಯ ಕೆಳಗಿಳಿಸಿಲ್ಲ, ಆಂಟನಿಯ ಕಾರ್ಯವೇ ಆಂಟನಿಯ ಮೇಲೆ
ವಿಜಯ ಸಾಧಿಸಿದೆ.
ಕ್ಲಿಯೋ. ಅದು ಹಾಗೇ ಇರಬೇಕಾದ್ದು, ಆಂಟನಿಯ ಗೆಲ್ಲಬೇಕಾದ್ದು ಆಂಟನಿ ಮಾತ್ರವೇ, ಆದರೂ ಹೀಗಾಗಿಬಿಟ್ಟಿತೆ!
ಆಂಟನಿ. ನಾನು ಸಾಯುತ್ತಿರುವೆ, ಈಜಿಪ್ಟೇ, ಸಾಯುತ್ತಿರುವೆ; ನಾನೀಗ ಇಲ್ಲಿ ಸಾವನ್ನು ತುಸು ವೇಳೆ ಕೊಡೆಂದು ಕೋರುತ್ತೇನೆ,
ನನ್ನ ಸಾವಿರ ಚುಂಬನಗಳಲ್ಲಿ ಈ ಬಡ ಕೊನೇ ಚುಂಬನವನ್ನು ನಿನ್ನ ತುಟಿಗಳ ಮೇಲೆ ಇರಿಸುವುದಕ್ಕೆ.
ಕ್ಲಿಯೋ. ನನಗೆ ಧೈರ್ಯವಿಲ್ಲ, ಸ್ವಾಮಿ — ನನ್ನ ಪ್ರೀತಿಯ ದೊರೆ, ಕ್ಷಮಿಸಿ — ಧೈರ್ಯವಿಲ್ಲ, ಯಾಕೆಂದರೆ ನನ್ನನ್ನೂ
ಬಂಧಿಸುವರು. ಪೂರ್ಣಾದೃಷ್ಟದ ಸೀಸರನ ರಾಜವೈಭವ ಕೂಡ ಎಂದೂ ನನಗೆ ಅಂದುಗೆಯಾಗದು. ಕತ್ತಿ, ವಿಷ, ಮತ್ತು
ಸರ್ಪಗಳಿಗೆ ಹರಿತ, ಉರಿತ, ಅಥವಾ ಕಾರ್ಯಗತಿಯಿದ್ದರೆ, ನಾನು ಸುರಕ್ಷಿತೆ. ನಿಮ್ಮ ಪತ್ನಿ ಒಕ್ಟೇವಿಯಾ, ಮರ್ಯಾದಸ್ತ
ಕಣ್ಣುಗಳಿಂದ, ನನ್ನತ್ತ ದೃಷ್ಟಿ ಬೀರಿ, ಯಾವ ಗೌರವವನ್ನೂ ಗಳಿಸಲಾರಳು. ಆದರೆ, ಬನ್ನಿ, ಬನ್ನಿ, ಆಂಟನಿ — ಹುಡುಗಿಯರೇ,
ನನಗೆ ಸಹಾಯಮಾಡಿ — ನಾವು ನಿಮ್ಮನ್ನು ಮೇಲೆಳೆಯಬೇಕು.
ಸಹಕರಿಸಿ, ಮಿತ್ರರೇ.
ಆಂಟನಿ. ಓ ಬೇಗನೆ, ಇಲ್ಲದಿದ್ದರೆ ನಾನು ಹೋದಂತೆ.

[ಅವರು ಆಂಟನಿಯನ್ನು ಮೇಲೆತ್ತಲು ತೊಡಗುತ್ತಾರೆ]

ಕ್ಲಿಯೋ. ಇದೊಂದು ಕ್ರೀಡೆಯೇ ಸರಿ! ಎಷ್ಟು ಭಾರವಾಗಿದ್ದಾರೆ ನನ ದೊರೆ! ನಮ್ಮ ಶಕ್ತಿಯೆಲ್ಲಾ ಸೇರಿ ಹೋಗಿದೆ ದುಃಖಕ್ಕೆ, ಭಾರವಾಗಿರುವುದು ಅದೇ. ಮಹಾ ಜೂನೋ ದೇವಿಯ ಶಕ್ತಿ ನನ್ನಲ್ಲಿರುತ್ತಿದ್ದರೆ, ಬಲಿಷ್ಠ ರೆಕ್ಕೆಗಳ ಮಕ್ರ್ಯುರಿ ನಿಮ್ಮನ್ನು ಮೇಲೆತ್ತಿ
ಜುಪಿಟರನ ಪಕ್ಕದಲ್ಲಿ ಇರಿಸಬೇಕಿತ್ತು. ಆದರೂ ಬನ್ನಿ ಸ್ವಲ್ಪ; ಆಶಿಕರು ಯಾವಾಗಲೂ ಮೂರ್ಖರು.
ಓ, ಬನ್ನಿ, ಬನ್ನಿ, ಬನ್ನಿ!

[ಆಂಟನಿಯನ್ನು ಕ್ಲಿಯೋಪಾತ್ರಳಲ್ಲಿಗೆ ಎತ್ತರಿಸುತ್ತಾರೆ]

ಸ್ವಾಗತ, ಸ್ವಾಗತ! ಜೀವಿಸಿದ ಮೇಲೆ ಸಾಯಿರಿ; ಚುಂಬನದಿಂದ ತ್ವರೆಗೊಳಿಸಿ. ನನ್ನ ತುಟಿಗಳಿಗೆ ಆ ಶಕ್ತಿಯಿರುತ್ತಿದ್ದರೆ,
ನಾನದನ್ನು ಈ ರೀತಿ ವ್ಯಯಿಸುತ್ತಿದ್ದೆ.

[ಅವಳು ಆಂಟನಿಯನ್ನು ಚುಂಬಿಸುವಳು]

ಎಲ್ಲರೂ. ಎಂಥ ದುರ್ಭರ ದೃಶ್ಯ!
ಆಂಟನಿ. ನಾನು ಸಾಯುತ್ತಿರುವೆ, ಈಜಿಪ್ಟ್, ಸಾಯುತ್ತಿರುವೆ. ಸ್ವಲ್ಪ ದ್ರಾಕ್ಷಾರಸ ಕೊಡು, ಸ್ವಲ್ಪ ಮಾತಾಡುವಂತೆ.
ಕ್ಲಿಯೋ. ಇಲ್ಲ, ನಾನೆ ಮಾತಾಡುವೆ, ನಾನೆಷ್ಟು ಎತ್ತರಕ್ಕೆ ಅರಚುವೆನೆಂದರೆ ಭಾಗ್ಯದೇವತೆಯೆಂಬ ಸುಳ್ಳು ಗೃಹಿಣಿ ತನ್ನ ಚಕ್ರಾರವನ್ನು ಮುರಿದುಹಾಕಬೇಕು, ನನ್ನ ಬಯ್ಗುಳಕ್ಕೆ ಸಿಟ್ಟಿಗೆದ್ದು.
ಆಂಟನಿ. ಒಂದು ಮಾತು, ಪ್ರಿಯ ರಾಣಿ. ಸೀಸರನಿಂದ ನಿನ್ನ ಗೌರವ ಕೇಳಿಕೋ, ಹಾಗೂ ನಿನ್ನ ರಕ್ಷಣೆ ಕೂಡ. ಓ!
ಕ್ಲಿಯೋ. ಅವು ಜತೆ ಜತೆ ಹೋಗುವುದಿಲ್ಲ.
ಆಂಟನಿ. ಮೆಲ್ಲಗೆ, ನಾನು ಹೇಳುವುದನ್ನು ಕೇಳು. ಸೀಸರನ ಬಳಗದಲ್ಲಿ ಪ್ರೊಕುಲಿಯಸ್‍ನ ಬಿಟ್ಟು ಇನ್ನು ಯಾರನ್ನೂ ನಂಬದಿರು.
ಕ್ಲಿಯೋ. ನನ್ನ ನಿರ್ಧಾರ ಮತ್ತು ನನ್ನ ಜನಗಳನ್ನ ನಾನು ನಂಬುವುದು, ಸೀಸರನ ಮಂದಿಯಲ್ಲಿ ಯಾರನ್ನೂ ಅಲ್ಲ.
ಆಂಟನಿ. ನನ್ನ ಅಂತಿಮದ ಈ ಹೀನಾಯ ಬದಲಾವಣೆಗೆ ಪರಿತಪಿಸುವುದಾಗಲಿ ದುಃಖಿಸುವುದಾಗಲಿ ಬೇಡ, ಬದಲು ನಿನ್ನ ಯೋಚನೆಗಳಿಗೆ ನನ್ನ ಹಿಂದಣ ಸುಖಗಳ ಆಧಾರ ಕೊಟ್ಟು ಸಂತೋಷಗೊಳಿಸು, ವಿಶ್ವದ ಅತಿ ಶ್ರೇಷ್ಠ ರಾಜನಾಗಿ, ಧೀರೋದಾತ್ತನಾಗಿ ನಾನಿದ್ದ ದಿನಗಳ ನೆನಪುಮಾಡಿಕೋ; ಮತ್ತು ಈಗಿನ್ನು ನಿಕೃಷ್ಟವಾಗಿ ಸಾಯುವುದು ಬೇಡ, ನನ್ನ
ಶಿರಸ್ತ್ರಾಣವನ್ನು ನನ್ನ ದೇಶವಾಸಿಯಿಂದ ಭೀತಿಯಲ್ಲಿ ತಡೆಹಿಡಿಯುವುದು ಬೇಡ–ರೋಮ್‍ನಿಂದ ರೋಮನ್
ಧೀರನು ಹೋರಾಟದಲ್ಲಿ ಸೋತ. ನನ್ನ ಆತ್ಮ ಹೊರಟುಹೋಗುತ್ತಿದೆ; ಇನ್ನು ಸಾಧ್ಯವಿಲ್ಲ ನನ್ನಿಂದ.
ಕ್ಲಿಯೋ. ಮಾನವಶ್ರೇಷ್ಠ, ಸಾಯುವಿರಾ? ನನ್ನ ಕುರಿತೇನೂ ಕಾಳಜಿಯಿಲ್ಲವೇ ನಿಮಗೆ? ಈ ಉದಾಸ ಲೋಕದಲ್ಲಿ ನಾನು ಉಳಿದಿರಬೇಕೇ? ಲೇ, ನೋಡಿರೇ, ನನ್ನ ಸಖಿಯರೇ
[ಆಂಟನಿ ಸಾಯುವನು]
ಭೂದೇವಿಯ ಕಿರೀಟ ಕರಗುತ್ತಿದೆ. ಓ ದೊರೆಯೇ! ಓ, ಸಂಗ್ರಾಮ ಮಾಲೆ ಬಾಡಿತು; ಸೈನಿಕನ ಸ್ತಂಭ ಉರುಳಿತು! ಇನ್ನು ಚಿಕ್ಕ ಹುಡುಗರೂ ಹುಡುಗಿಯರೂ ಪುರುಷರಿಗೆ ಸಮ; ವ್ಯತ್ಯಾಸವೇ ಅಳಿಯಿತು, ಇಂದಿಲ್ಲಿ ನಾಳೆ ಅಲ್ಲಿ ಎಂಬ ಚಂದ್ರನ ಕೆಳಗೆ ಗಮನಾರ್ಹ ಎನ್ನುವುದೆ ಇಲ್ಲ.
[ಅವಳು ಮೂರ್ಛೆಹೋಗುವಳು]
ಚಾರ್ಮಿ. ಓ, ಸಮಾಧಾನ, ತಾಯಿ.
ಇರಾಸ್. ಸತ್ತಳು ನಮ್ಮ ಸಾಮ್ರಾಜ್ಞಿ.
ಚಾರ್ಮಿ. ಅಮ್ಮಾ!
ಇರಾಸ್. ಅಮ್ಮಾ!
ಚಾರ್ಮಿ. ಅಯ್ಯೋ! ಅಮ್ಮಾ, ಅಮ್ಮಾ, ಅಮ್ಮಾ!
ಇರಾಸ್. ಓ ಸಾರ್ವಭೌಮ ಈಜಿಪ್ಟೇ! ಸಾಮ್ರಾಜ್ಞೀ!
[ಕ್ಲಿಯೋಪಾತ್ರ ಎಚ್ಚರಾಗುವ ಸೂಚನೆ]
ಚಾರ್ಮಿ. ಶಾಂತಿ, ಶಾಂತಿ, ಇರಾಸ್.
ಕ್ಲಿಯೋ. ಒಬ್ಬ ಹೆಣ್ಣಿಗಿಂತ ಹೆಚ್ಚಲ್ಲ, ಹಾಲುಕರೆಯುವ ಮತ್ತು ಹೀನಾತಿಹೀನ ಮನೆವಾರ್ತೆ ಮಾಡುವ ಕೆಲಸದಾಕೆಯ ಆ ಅದೇ ಬಡ ಪ್ರೇಮೋತ್ಕಟತೆಯಿಂದ ಆಜ್ಞಪ್ತಳಾದವಳು ನಾನು. ಘಾಸಿಪಡಿಸುವ ದೇವತೆಗಳತ್ತ ನನ್ನ ಕತ್ತಿಯೆಸೆಯುವುದು ನನ್ನದಾಗಿತ್ತು, ಈ ಜಗತ್ತು ಅವರ ಜಗಕ್ಕೆ ಸಮನೆಂದು ಹೇಳುವುದಕ್ಕೆ, ಅವರು ನನ್ನೀ ವಜ್ರವ ಕದ್ದೊಯ್ಯುವ ವರೆಗೆ.
ಎಲ್ಲವೂ ಈಗ ನಿರರ್ಥಕವಾಯ್ತು; ಸಹನೆ ಮೂರ್ಖರಿಗೆ ಮತ್ತು ಅಸಹನೆ ಹುಚ್ಚು ನಾಯಿಗೆ. ಹಾಗಿದ್ದರೆ ಮೃತ್ಯು ನಮ್ಮಲ್ಲಿಗೆ ಬರುವ ಧೈರ್ಯಮಾಡುವ ಮೊದಲೇ, ನಾವು ಮೃತ್ಯುವಿನ ಗುಪ್ತ ಗೃಹಕ್ಕೆ ಧಾವಿಸುವುದು ಪಾಪವೇ?
ಹೇಗಿದ್ದೀರಿ, ಸ್ತ್ರೀಯರೇ? ಏನು, ಏನು, ಸ್ವಲ್ಪ ನಗಿರಿ!
ಯಾಕೆ, ಏನೀಗ, ಚಾರ್ಮಿಯಾನ್? ನನ್ನೊಳ್ಳೆ ಹುಡುಗಿಯರೆ! ಆಹ್, ಹೆಂಗಸರೆ, ಹೆಂಗಸರೆ! ನೋಡಿ, ನಮ್ಮ ದೀಪ ಮುಗಿಯಿತು,
ಆರಿತು. ರಾಯರುಗಳೆ, ಧೈರ್ಯದಿಂದಿರಿ. ನಾವವನನ್ನು ದಫನ ಮಾಡೋಣ; ಆಮೇಲೆ, ಯೋಗ್ಯವಾದ್ದೇನು, ಶ್ರೇಷ್ಠವಾದ್ದೇನು,
ಅದನ್ನು ರೋಮನ್ ಪದ್ಧತಿಯಂತೆ ಮಾಡೋಣ, ಮರಣ ನಮ್ಮನ್ನೊಯ್ಯಲು ಹೆಮ್ಮೆಪಡುವಂತೆ. ಬನ್ನಿ, ಒಯ್ಯಿರಿ, ಆ
ಭಾರೀ ಚೈತನ್ಯದ ಪೆಟ್ಚಿಗೆ ಈಗ ತಣ್ಣಗಾಯಿತು. ಹಾ, ಹೆಂಗಸರೆ, ಹೆಂಗಸರೆ! ಬನ್ನಿ, ಸಂಕಲ್ಪಶಕ್ತಿ ಹಾಗೂ ಅತಿ ಶೀಘ್ರಮುಕ್ತಿಯಲ್ಲದೆ
ನಮಗಿನ್ನು ಮಿತ್ರರಿಲ್ಲ.
[ಆಂಟನಿಯ ದೇಹವನ್ನು ಹೊತ್ತುಕೊಂಡು ಮೇಲಿನವರೆಲ್ಲರ ನಿಷ್ಕ್ರಮಣ]