ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಂಟನಿ ಮತ್ತು ಕ್ಲಿಯೋಪಾತ್ರ 5

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಅಂಕ 5

ಚಿತ್ರಕೃಪೆ : ವಿಕಿಪೀಡಿಯ ಮತ್ತು History.com

ದೃಶ್ಯ 1
ಅಲೆಕ್ಝಾಂಡ್ರಿಯಾ, ಸೀಸರನ ಪಾಳಯ…ಸೀಸರ್, ಅಗ್ರಿಪಾ, ಡೋಲಾಬೆಲ್ಲಾ, ಮೆಸೆನಾಸ್, ಗಾಲಸ್, ಪ್ರೊಕ್ಯೂಲಿಯಸ್, ಸೀಸರನ ಮಂತ್ರಿಸಭೆಯ ಸಮೇತ ಪ್ರವೇಶ…

ಸೀಸರ್. ಅವನಲ್ಲಿಗೆ ಹೋಗು, ಡೋಲಾಬೆಲ್ಲಾ, ಶರಣಾಗುವಂತೆ ಹೇಳು; ಇಷ್ಟೊಂದು ನಿಸ್ಸಹಾಯಕನಾಗಿರುತ್ತ, ಅವನು ತಡಮಾಡುವ ಒಂದೊಂದು ಕ್ಷಣವನ್ನೂ ತಮಾಷೆ ಮಾಡುತ್ತಾನೆ.
ಡೋಲಾಬೆಲ್ಲಾ. ಸೀಸರ್, ಹಾಗೇ ಮಾಡುವೆ.
[ನಿಷ್ಕ್ರಮಣ]

ಡರ್ಸೆಟಸ್, ಆಂಟನಿಯ ಖಡ್ಗದೊಂದಿಗೆ ಪ್ರವೇಶ

ಸೀಸರ್. ಇದೇನಿದು? ಮತ್ತು ಈ ತರ ನಮ್ಮ ಮುಂದೆ ಕಾಣಿಸಿಕೊಳ್ಳುವ ಎದೆಗಾರಿಕೆ ತೋರುವ ನೀನು ಯಾರು?
ಡರ್ಸೆಟಸ್. ಡರ್ಸೆಟಸ್ ಎಂದು ನನ್ನ ಹೆಸರು. ಅತ್ಯುತ್ತಮ ಸೇವೆಗೆ ಅರ್ಹರಲಿ ಅರ್ಹರಾಗಿದ್ದ ಮಾರ್ಕ್ ಆಂಟನಿಯ ಸೇವೆ ಮಾಡುತ್ತಿದ್ದೆ. ನನ್ನ ಒಡೆಯರಾಗಿದ್ದರು ಅವರು, ಹಾಗೂ ನಾನು ಜೀವ ತೊಟ್ಟದ್ದು ಅವರ ದ್ವೇಷಿಗಳ ಮೇಲೆ ವ್ಯಯಿಸುವುದಕ್ಕೆಂದೆ.
ನೀವು ದಯವಿಟ್ಟು ನನ್ನನ್ನು ತೆಗೆದುಕೊಳ್ಳುವುದಾದರೆ, ಅವರಿಗೆ ನಾನಿದ್ದಂತೆ ಸೀಸರಿಗೂ ಆಗುವೆ; ನಿಮಗಿಷ್ಟವಿಲ್ಲದಿದ್ದರೆ ನಾನು ನನ್ನ ಪ್ರಾಣವನ್ನೇ ತೆಗೆಯುವೆ.
ಸೀಸರ್. ನೀನು ಹೇಳುವುದೇನು?
ಡರ್ಸೆಟಸ್. ನಾನು ಹೇಳುವುದು, ಓ ಸೀಸರ್, ಆಂಟನಿ ಸತ್ತಿದ್ದಾರೆ ಎಂದು.
ಸೀಸರ್. ಅಂಥಾದ್ದೊಂದು ಶ್ರೇಷ್ಠ ವಸ್ತುವಿನ ಕುಸಿತ ಭಾರೀ ಬಿರುಕೊಂದನ್ನು ಸೃಷ್ಟಿಮಾಡಬೇಕು. ಭೂಗೋಲ
ಸಿಂಹಗಳನ್ನು ರಸ್ತೆಗಳಿಗೂ ನಾಗರಿಕರನ್ನು ಗುಹೆಗಳಿಗೂ ಕಳಿಸಿರಬೇಕು, ಆಂಟನಿಯ ಸಾವು ಏಕಾಂಗ ದುರಂತವಲ್ಲ; ಆ ಹೆಸರಲ್ಲಿ ಜಗತ್ತಿನ ಮಹಾಭಾಗವೇ ಅಡಗಿದೆ.
ಡರ್ಸೆಟಸ್. ಆಂಟನಿ ಸತ್ತಿದ್ದಾರೆ, ಸೀಸರ್, ನಾಗರಿಕ ನ್ಯಾಯಮಂತ್ರಿಯಿಂದಲ್ಲ, ಬಾಡಿಗೆಯ ಕಠಾರಿಯಿಂದಲ್ಲ;
ಆದರೆ ತನ್ನ ಕಾರ್ಯಸಾಧನೆಗಳ ಮೂಲಕ ಗೌರವ ಬರೆವ ಆ ಅದೇ ಕೈಗಳಿಂದ, ಯಾವ ಹೃದಯ ಧೈರ್ಯ ನೀಡಿತೋ ಆ ಹೃದಯವನ್ನೇ ಅದು ಬಲಿ ಕೇಳಿತು. ಇದು ಅವರ ಖಡ್ಗ;
[ಖಡ್ಗ ನೀಡುತ್ತಾನೆ]
ಅವರ ಗಾಯದಿಂದ ನಾನಿದನ್ನು ಕಿತ್ತು ತೆಗೆದೆ. ಆ ಶ್ರೇಷ್ಠ ರಕ್ತದಿಂದ ಇದು ಹೇಗೆ ಕಲೆಗಟ್ಟಿದೆ ನೋಡಿ.
ಸೀಸರ್. ನಿಮಗೆ ದುಃಖವಾಯಿತೆ, ಮಿತ್ರರೇ? ದೇವತೆಗಳು ನನ್ನನ್ನು ಛೇಡಿಸುತ್ತಿದ್ದಾರೆ, ಆದರೆ ಇದು ರಾಜರ ಕಣ್ಣುಗಳನ್ನು ತೊಳೆಯುವ ಸುದ್ದಿ.
ಅಗ್ರಿಪಾ. ಅಲ್ಲದೆ ಇದೆಷ್ಟು ವಿಚಿತ್ರ ನಾವು ಹಟ ಹಿಡಿದು ಮಾಡಿದ ಗೈಮೆಗಳಿಗೆ ಪರಿತಪಿಸುವಂತೆ ವಿಧಿ ನಮ್ಮನ್ನು
ಒತ್ತಾಯಿಸುವುದೆಂದರೆ.
ಮೆಸೆನಾಸ್. ಅವನ ಸದ್ಗುಣ ದುರ್ಗುಣಗಳು ಅವನಲ್ಲಿ ಸಮನಾಗಿ ಹೋರಾಡಿದುವು.
ಅಗ್ರಿಪಾ. ಆತನಿಗಿಂತಲು ಅಪರೂಪದ ಚೇತನವೊಂದು ಮನುಕುಲವನ್ನು ಮುನ್ನಡೆಸಿಲ್ಲ; ಆದರೆ ದೈವಗಳೇ, ನೀವು ಯಾವಾಗಲೂ ನಮ್ಮನ್ನು ಮನುಷ್ಯರ ಮಾಡುವುದಕ್ಕೆ ಕೆಲವು ಊನಗಳನ್ನು ಕೊಟ್ಟಿರುತ್ತೀರಿ. ಸೀಸರನ ಮನ ಕರಗಿದೆ.
ಮೆಸೆನಾಸ್. ಅಷ್ಟೊಂದು ವಿಶಾಲ ದರ್ಪಣವ ಮುಂದಿರಿಸಿದಾಗ, ಸೀಸರರು ತಮ್ಮನ್ನು ತಾವು ಅದರಲ್ಲಿ ನೋಡಿಕೊಳ್ಳಲೇ ಬೇಕು.
ಸೀಸರ್. ಓ ಆಂಟನಿ, ನಾನು ನಿಮ್ಮನ್ನು ಈ ಅಂತ್ಯಕ್ಕೆ ಬೆಂಬೆತ್ತಿದವ; ಆದರೆ ನಾವು ನಮ್ಮ ಒಡಲುಗಳಲ್ಲಿ ರೋಗಗಳ ತೊಡಗಿಸುತ್ತೇವೆ. ನಾನು ಬಹುಶಃ ಒತ್ತಾಯಿಸಿ ತೋರಿಸಿರಬೇಕು ಅಂಥ ಇಳಿದಿನವನ್ನು ನಿಮಗೆ, ಅಥವಾ ನಿಮ್ಮದನ್ನು ಅವಲೋಕಿಸುವುದಕ್ಕೆ; ನಾವಿಬ್ಬರೂ ಒಟ್ಟಿಗೇ ಈ ಇಡೀ ಜಗದಲ್ಲಿ ಜೀವಿಸಲಾರದಾಗಿದ್ದೆವು. ಆದರೂ ಹೃದಯಗಳ
ರಕ್ತದಷ್ಟೇ ಸಾರ್ವಭೌಮವಾದ ಕಂಬನಿಗಳಿಂದಲೂ ನಿಮಗೋಸ್ಕರ ನಾನು ಮರುಗುವುದಕ್ಕೆ ಬಿಡಿ, ಓ ನನ್ನ ಸೋದರ, ಎಲ್ಲ ಆವಿಷ್ಕಾರಗಳಲ್ಲೂ ನನ್ನ ಸ್ಪರ್ಧಾಳುವೆ, ಸಾಮ್ರಾಜ್ಯದಲ್ಲಿ ನನ್ನ ಜತೆಗಾರರೆ, ಯುದ್ಧರಂಗದಲ್ಲಿ ನನ್ನ ಸುಹೃತ್ತುವೆ, ಒಡನಾಡಿಯೆ, ನನ್ನದೇ ಒಡಲ ಹಸ್ತವೆ, ನನ್ನದೇ ವಿಚಾರಗಳನ್ನು ತನ್ನ ವಿಚಾರಗಳಿಂದ ಬೆಳಗಿದ ಹೃದಯವೇ,–ನಮ್ಮ ನಕ್ಷತ್ರಗಳು ಪರಸ್ಪರ ವಿರೋಧಿಗಳಾಗಿ, ನಮ್ಮ ಸಮಬಲವನ್ನು ಈ ರೀತಿ ವಿಭಾಗಿಸಬೇಕಿತ್ತೆ? ಕೇಳಿರಿ,
ನನ್ನ ಮಿತ್ರರೇ,–

ಒಬ್ಬ ಈಜಿಪ್ಶಿಯನ್‍ನ ಪ್ರವೇಶ…

ಆದರೆ ಇನ್ನೊಮ್ಮೆ ಇದಕ್ಕಿಂತಲೂ ಪ್ರಶಸ್ತ ಕಾಲದಲ್ಲಿ ನಿಮಗಿದನ್ನು ಹೇಳುವೆ. ಈಗ ಈ ಮನುಷ್ಯನ ಉದ್ದೇಶ
ಅವನ ಮುಖದಿಂದ ಕಳಚಿ ಹೊರಬೀಳುತ್ತಿದೆ, ಅವನು ಹೇಳುವುದನ್ನು ಕೇಳೋಣ. ಎಲ್ಲಿಂದ ನೀನು?
ಈಜಿಪ್ಶಿಯನ್. ನಾನೊಬ್ಬ ಬಡ ಈಜಿಪ್ಶಿಯನ್, ರಾಣಿ ನನ್ನ ಮಾಲಕಿ, ತನ್ನ ಸ್ಮಾರಕದಲ್ಲಿ ಕೂತು, ತಮ್ಮ
ವಿಚಾರಗಳಿಗೋಸ್ಕರ ಕಾಯುತ್ತಿದ್ದಾಳೆ, ಏನು ಮಾಡಬೇಕೋ ಅದನ್ನು ಮಾಡಲೇಬೇಕಾದ ಬಲವಂತಕ್ಕೆ.
ಸೀಸರ್. ಧೈರ್ಯದಿಂದಿರಲು ಹೇಳು ಅವಳಿಗೆ. ಬಹಳ ಬೇಗನೇ ಗೊತ್ತಾದೀತು ಅವಳಿಗೆ ನಾವು ಯಾರೆಂದು, ನಮ್ಮ ಕೆಲವು ಜನರಿಂದ, ಎಷ್ಟು ಗೌರವದಿಂದ ಮತ್ತು ದಯೆಯಿಂದ ನಾವು ನಿರ್ಣಯಿಸುತ್ತೇವೆ ಅವಳಿಗೇನೆಂಬುದನ್ನು; ಯಾಕೆಂದರೆ ಸೀಸರ್ ದಯಾಹೀನನಾಗಿ ಜೀವಿಸುವುದು ಸಾಧ್ಯವಿಲ್ಲ.
ಈಜಿಪ್ಶಿಯನ್. ದೇವರು ರಕ್ಷಿಸಲಿ ನಿಮ್ಮನ್ನು!
[ನಿಷ್ಕ್ರಮಣ]
ಸೀಸರ್. ಇಲ್ಲಿ ಬಾ, ಪ್ರೊಕ್ಯೂಲಿಯಸ್. ಹೋಗಿ ಹೇಳು ಅವಳಿಗೆ, ಅವಳ ಅವಮಾನ ನಮ್ಮ ಉದ್ದೇಶವಲ್ಲ. ಅವಳ ದುಃಖದ ಮನಃಸ್ಥಿತಿಗೆ ತಕ್ಕ ಸಮಾಧಾನ ನೀಡು, ಯಾಕೆಂದರೆ ಉತ್ಕಟ ಸ್ಥಿತಿಯಲ್ಲಿ ಯಾವುದೋ ಒಂದು ಪ್ರಾಣಾಂತಿಕ ಘಾತದಿಂದ ಅವಳು ಸೋಲಿಸುವುದು ಬೇಡ ನಮ್ಮನ್ನು. ಕಾರಣ, ನಮ್ಮ ಜೈತ್ರ ಯಾತ್ರೆಯಲ್ಲಿ ಅವಳ ಬದುಕು ಅಮರವಾಗುತ್ತದೆ ರೋಮಿನಲ್ಲಿ. ಹೋಗು, ಅದೇ ವೇಗದಲ್ಲಿ ವಾಪಸು ಬಂದು, ಅವಳೇನು ಹೇಳುತ್ತಾಳೆ, ನೀನೇನು ಮಾಡಿದೆ ಎನ್ನುವುದನ್ನು
ನಮಗೆ ತಿಳಿಸು.
ಪ್ರೊಕ್ಯೂ. ಸೀಸರ್, ಹಾಗೇ ಮಾಡುವೆ.
[ ಪ್ರೊಕ್ಯೂಲಿಯಸ್ ನಿಷ್ಕ್ರಮಣ]
ಸೀಸರ್. ಗಾಲಸ್, ನೀನೂ ಹೋಗು ಅವನ ಜತೆ.
[ಗಾಲಸ್ ನಿಷ್ಕ್ರಮಣ] ಡೋಲಾಬೆಲ್ಲಾ ಎಲ್ಲಿ? ಪ್ರೊಕ್ಯೂಲಿಯಸ್ ಜತೆಯಲ್ಲಿ? ಎಲ್ಲರೂ. ಡೋಲಾಬೆಲ್ಲಾ!
ಸೀಸರ್. ಬಿಟ್ಟುಬಿಡಿ ಅವನನ್ನು, ಯಾಕೆಂದರೆ ಈಗ ನೆನಪಾಯ್ತು ಅವನೇನು ಮಾಡುತ್ತಿದ್ದಾನೆಂದು. ಸಮಯವಾದಾಗ ಅವನು ತಯಾರಿರುತ್ತಾನೆ. ಬನ್ನಿ ನನ್ನ ಜತೆ ನನ್ನ ಬಿಡದಿಗೆ. ಅಲ್ಲಿ ನೋಡುವಿರಿ ನೀವು ನಾನೀ ಸಂಗ್ರಾಮಕ್ಕೆ ಅದೆಷ್ಟು ಮನಸ್ಸಿಲ್ಲದ ಮನಸ್ಸಿನಿಂದ ಬಂದೆ ಎನ್ನುವುದನ್ನು, ಅದೆಷ್ಟು ಶಾಂತವಾಗಿ ಎಷ್ಟು ಮೃದುವಾಗಿ ನನ್ನೆಲ್ಲ ಶತ್ರುಗಳೊಂದಿಗೂ ವ್ಯವಹರಿಸಿದೆ ಎನ್ನುವುದನ್ನು. ಬನ್ನಿ ನನ್ನ ಜತೆ, ಬಂದು ನೋಡಿ ನಾನು ತೋರಿಸಲಿರುವುದನ್ನು.
[ಎಲ್ಲರೂ ನಿಷ್ಕ್ರಮಣ]

ದೃಶ್ಯ 2
ಅಲೆಕ್ಝಾಂಡ್ರಿಯಾ, ಕ್ಲಿಯೋಪಾತ್ರಾಳ ಸ್ಮಾರಕ ಕ್ಲಿಯೋಪಾತ್ರ, ಚಾರ್ಮಿಯಾನ್, ಇರಾಸ್ ಮತ್ತು ಮಾರ್ಡಿಯಾನ್ ಪ್ರವೇಶ

ಕ್ಲಿಯೋ. ನನ್ನ ಬೇವಸ ಉತ್ತಮತರದ ಬದುಕು ಆರಂಭಿಸಿದೆ. ಸೀಸರನಾಗುವುದೆಂದರೆ ನಗಣ್ಯ; ತಾನೇ ವಿಧಿಯಲ್ಲದ್ದರಿಂದ ಅವನು ವಿಧಿಯ ಗುಲಾಮನಾಗುತ್ತಾನೆ, ವಿಧಿ ಹೇಳಿದಂತೆ ಕುಣಿಯುತ್ತಾನೆ. ಮತ್ತು ಇತರೆಲ್ಲ ಕಾರ್ಯಗಳನ್ನು ಮುಗಿಸುವ
ಆ ಕಾರ್ಯ ಮಾಡುವುದೆಂದರೆ, ಅದು ನಿಜಕ್ಕೂ ಶ್ರೇಷ್ಠವೇ ಸರಿ, ಯಾಕೆಂದರೆ ಅದು ಆಕಸ್ಮಿಕಗಳಿಗೆ ಸಂಕಲೆ ತೊಡಿಸುತ್ತದೆ, ಬದಲಾವಣೆಗೆ ಚಿಲಕ ಹಾಕುತ್ತದೆ, ನಿದ್ರಿಸುತ್ತದೆ, ಅಂಥ್ ಚಿರನಿದ್ರೆ ಭಿಕ್ಷುಕನ ದಾದಿ ಮತ್ತು ಸೀಸರನದೂ ಆದ ಥಂಡಿ ನೆಲವನ್ನು ಎಂದೂ ಆಸ್ವಾದಿಸುವುದಿಲ್ಲ.

ಪ್ರೊಕ್ಯೂಲಿಯಸ್ ಪ್ರವೇಶ, ಸ್ಮಾರಕದ ಬಾಗಿಲುಗಳಿಗೆ

ಪ್ರೊಕ್ಯೂ. ಈಜಿಪ್ಟಿನ ರಾಜ್ಞಿಯೇ, ಸೀಸರ್ ವಂದನೆಗಳನ್ನು ಕಳಿಸಿದ್ದಾರೆ, ನಿಮಗವರು ನೀಡಬೇಕಾದ ಕೋರಿಕೆಗಳೇನೆಂದು ಯೋಚಿಸುವಂತೆ ಹೇಳಿದ್ದಾರೆ.
ಕ್ಲಿಯೋ. ನಿನ್ನ ಹೆಸರು?
ಪ್ರೊಕ್ಯೂ. ನನ್ನ ಹೆಸರು ಪ್ರೊಕ್ಯೂಲಿಯಸ್.
ಕ್ಲಿಯೋ. ಆಂಟನಿ ನನಗೆ ಅಂದಿದ್ದರು ನಿನ್ನ ಬಗ್ಗೆ, ನಿನ್ನನ್ನು ನಂಬಲು ಹೇಳಿದ್ದರು, ಆದರೆ ನಂಬಿ ಉಪಯೋಗವಿಲ್ಲದ್ದರಿಂದ, ವಂಚನೆಗೊಳಗಾಗುವುದಕ್ಕೆ ನನಗೆ ಪ್ರತ್ಯೇಕವಾದಂಥ ಇಷ್ಟವೇನೂ ಇಲ್ಲ. ನಿನ್ನ ಮಾಲಿಕನಿಗೆ ರಾಜ್ಞಿಯೊಬ್ಬಳು ಅವರ ಭಿಕ್ಷುಕನಾಗಬೇಕೆಂದಿದ್ದರೆ, ನೀನವರಿಗೆ ಹೇಳಬೇಕು, ರಾಜ- ಮರ್ಯಾದೆಯ ಪ್ರಕಾರ ರಾಣಿ ರಾಜ್ಯಕ್ಕಿಂತ ಕಡಿಮೆಯಾದ್ದನ್ನು ಬೇಡಬಾರದು. ಗೆದ್ದ ಈಜಿಪ್ಟನ್ನು ನನ್ನ ಮಗನಿಗೆ ಈಯುವುದಕ್ಕೆ ಅವರಿಗೆ ಇಷ್ಟವೆಂದಾದರೆ, ನನಗವರು ನನ್ನದಕ್ಕಿಂತಲೂ ಹೆಚ್ಚನ್ನು ಕೊಟ್ಟಂತೆ. ಹಾಗೂ ಅದಕ್ಕೋಸ್ಕರ ನಾನವರಿಗೆ ಮಂಡಿಯೂರಿ ಕೃತಜ್ಞಳಾಗುವೆ.
ಪ್ರೊಕ್ಯೂ. ನಿರುಮ್ಮಳವಾಗಿರಿ; ನೀವು ರಾಜಹಸ್ತದಲ್ಲಿ ಬಿದ್ದಿದ್ದೀರಿ. ಯಾವ ಭಯವೂ ಬೇಡ. ಏನಿದೆಯೋ ಅದನ್ನು ದೊರೆಗೆ ಮುಕ್ತವಾಗಿ ತಿಳಿಸಿ, ಅವರು ಕೃಪಾಭರಿತರು, ಎಲ್ಲಿ ಬೇಕೋ ಅಲ್ಲಿ ಹರಿಯುವರು. ನಾನವರಿಗೆ ವರದಿ ಮಾಡುವೆ ನಿಮ್ಮ ಮಧುರ ಅವಲಂಬನಸ್ಥಿತಿಯನ್ನು, ಮತ್ತು ಕೃಪೆಗಾಗಿ ಮಣಿದಲ್ಲಿ ಕರುಣೆಯ ಮರೆಯದಿರುವ ಧೀರೋದಾತ್ತನೊಬ್ಬನನ್ನು ನೀವು ನೋಡುವಿರಿ.
ಕ್ಲಿಯೋ. ಹೇಳು ಅವರಿಗೆ ನಾನವರ ವಿಧಿಯ ಅಧೀನೆ, ಅವರ ಶ್ರೇಷ್ಠತೆಯನ್ನು ಅವರಿಗೆ ಮರಳಿಸುವೆ. ಗಳಿಗೆ ಗಳಿಗೆಗೂ ವಿಧೇಯತೆಯದೊಂದು ಪಾಠ ಕಲಿಯುತ್ತಿದ್ದೇನೆ, ಹಾಗೂ ಕಣ್ಣಾರೆ ನಾನು ಅವರನ್ನು ನೋಡಯಸುತ್ತೇನೆ.
ಪ್ರೊಕ್ಯೂ. ಇದನ್ನು ನಾನು ತಿಳಿಸುವೆ, ಅಮ್ಮನವರೆ, ಸಮಾಧಾನಪಡಿರಿ, ಯಾಕೆಂದರೆ ನನಗೆ ಗೊತ್ತಿದೆ, ತಮ್ಮ ಈ ದೈನೀಯ ಸ್ಥಿತಿಗೆ ಕರ್ತಾರನೇ ಮರುಗುತ್ತಾನೆ.

[ಕೆಲವು ರಕ್ಷಣಾದಳದವರು ಹಿಂದಿನಿಂದ ಬಂದು ಕ್ಲಿಯೋಪಾತ್ರಳನ್ನು
ವಶಕ್ಕೆ ತೆಗೆದುಕೊಳ್ಳುತ್ತಾರೆ]

ನೋಡಿದಿರ ಎಷ್ಟು ಸುಲಭ ಇವಳನ್ನು ಹಿಡಿಯುವುದು. ಕಾಯ್ದಿರಿ ಸೀಸರ್ ಬರುವ ವರೆಗೆ.
ಇರಾಸ್. ಮಹಾರಾಜ್ಞಿ!
ಚಾರ್ಮಿ. ಓ ಕ್ಲಿಯೋಪಾತ್ರಾ! ಬಂಧಿಸಿದರು ನಿಮ್ಮನ್ನ, ರಾಜ್ಞಿ.
ಕ್ಲಿಯೋ. ಬೇಗ, ಬೇಗ, ಕೈಗಳೇ.
[ಒಂದು ಕಿರುಗತ್ತಿಯನ್ನು ಹೊರಗೆಳೆಯುತ್ತ]
ಪ್ರೊಕ್ಯೂ. ತಡೆಯಿರಿ, ಅಮ್ಮಾ, ತಡೆಯಿರಿ!

    [ಅವಳನ್ನು ಹಿಡಿದು ನಿರಾಯುಧಳನ್ನಾಗಿ ಮಾಡುತ್ತಾನೆ]

ನೀವೇ ಇಂಥ ಅನ್ಯಾಯ ಮಾಡಿಕೊಳ್ಳಬೇಡಿ, ಇದರಿಂದೀಗ ಬಿಡಿಸಲಾಗಿದೆ ನಿಮ್ಮನ್ನು, ಆದರೆ ಬಿಟ್ಟುಕೊಡಲಾಗಿಲ್ಲ.
ಕ್ಲಿಯೋ. ಏನು, ಸಾವಿನಿಂದಲು ಕೂಡಾ? ನಮ್ಮ ನಾಯಿಗಳಿಗೆ ಸಹಾ ವಿಮೋಚನೆ ನೀಡುತ್ತದೆ ಅದು.
ಪ್ರೊಕ್ಯೂ. ಕ್ಲಿಯೋಪಾತ್ರ, ನನ್ನ ಯಜಮಾನರ ಧಾರಾಳತನವನ್ನು ಹೀಗಳೆಯಬೇಡಿ, ನಿಮ್ಮನ್ನು ನೀವು ಅಳಿಸಿಕೊಳ್ಳುವ ಮೂಲಕ. ಲೋಕ ನೋಡಲಿ ಅವರ ಔದಾರ್ಯದ ಕಾರ್ಯಗತಿ, ನಿಮ್ಮ ಮರಣ ಅದನ್ನೆಂದೂ ಮುಂಬರಲು ಬಿಡದು.
ಕ್ಲಿಯೋ. ಮರಣವೇ, ಎಲ್ಲಿರುವಿ ನೀನು? ಇಲ್ಲಿ ಬಾ, ಇಲ್ಲಿ ಬಾ! ಬಾ, ಬಾ, ಬಂದು ತೆಗೆದುಕೋ ಒಬ್ಬ ಮಹಾರಾಜ್ಞಿಯನ್ನು, ಅನೇಕ ಶಿಶುಗಳಿಗೂ ತಿರುಕರಿಗೂ ಸಮಾನ ಅವಳು.
ಪ್ರೊಕ್ಯೂ. ಓ, ಸಮಾಧಾನ, ಅಮ್ಮಾ!
ಕ್ಲಿಯೋ. ಸ್ವಾಮಿ, ಊಟ ನಾನಿನ್ನು ಮಾಡುವುದಿಲ್ಲ, ಮದ್ಯವನ್ನೂ ಕುಡಿಯುವುದಿಲ್ಲ, ಸ್ವಾಮಿ; ತಲೆಹರಟೆ ಮಾತು ಅಗತ್ಯವಾದರೂ ಸರಿ, ನಾನಿನ್ನು ನಿದ್ರಿಸುವುದೂ ಇಲ್ಲ. ಈ ಅನಶ್ವರ ಮನೆಯನ್ನು ಹಾಳುಗೆಡಹುವೆನು, ಸೀಸರ್ ಏನು ಮಾಡುತ್ತಾನೋ ಮಾಡಲಿ.
ಇದು ತಿಳಿದುಕೊಳ್ಳಿ ಸ್ವಾಮಿ, ನಿಮ್ಮ ಮಾಲಿಕನ ಆಸ್ಥಾನದಲ್ಲಿ ನಾನು ಕೈಕಾಲು ಕಟ್ಟಿ ನಿಂತಿರಲಾರೆ, ಅಥವಾ ಕಳಾಹೀನೆ ಒಕ್ಟೇವಿಯಾಳ ಪ್ರಶ್ನಾರ್ಥಕ ಕಣ್ಣಿನ ಅವಹೇಳನಕ್ಕೆ ಒಳಗಾಗಲಾರೆ. ನನ್ನನ್ನವರು ಎತ್ತಿ ನಿಲ್ಲಿಸಿ, ಬೊಬ್ಬಿಡುವ ರೋಮಿನ ಜನಕ್ಕೆ ತೋರಿಸಬೇಕೆ? ಅದಕ್ಕೆ ಬದಲು ಈಜಿಪ್ಟಿನ ಒಂದು ಹೊಂಡವೆ ನನ್ನ ಮೆತ್ತನೆಯ ಗೋರಿಯಾಗಲಿ! ನೈಲಿನ ಕೆಸರಲ್ಲಿ ಕಡುಬೆತ್ತಲಾಗಿ ಮಲಗಿಸಲಿ ನನ್ನನ್ನು ಮತ್ತು ಜಲಕೀಟಗಳು ಬಾತು ಭೀಭತ್ಸಗೊಳಿಸಲಿ!ನನ್ನ ದೇಶದ ಉನ್ನತ ಪಿರಮಿಡ್ಡುಗಳನ್ನೆ ನೇಣುಗಂಭವಾಗಿಸಿ ತೂಗಿಹಾಕಲಿ ನನ್ನನ್ನು ಸಂಕಲೆಗಳಿಂದ!
ಪ್ರೊಕ್ಯೂ. ಸೀಸರನ ನಿಮಿತ್ತ ನೀವು ಕಾಣಬಹುದಾದ್ದಕ್ಕಿಂತಲೂ ಜಾಸ್ತಿ ನೀವು ನಿಮ್ಮೀ ಭೀಕರ ವಿಚಾರಗಳನ್ನು ವಿಸ್ತರಿಸುತ್ತಿದ್ದೀರಿ.

ಡೋಲಾಬೆಲ್ಲಾ ಪ್ರವೇಶ

ಡೋಲಾ. ಪ್ರೊಕ್ಯೂಲಿಯಸ್, ನೀನೇನು ಮಾಡಿದ್ದೀಯೋ ಅದು ಸೀಸರಿಗೆ ಗೊತ್ತಾಗಿದೆ, ಹಾಗೂ ನಾನವಳನ್ನು ನನ್ನ ರಕ್ಷಣೆಗೆ ತೆಗೆದುಕೊಳ್ಳುವೆ.
ಪ್ರೊಕ್ಯೂ. ಹಾಗೇ ಆಗಲಿ, ಡೋಲಾಬೆಲ್ಲಾ, ನನಗದರಿಂದ ತೃಪ್ತಿಯೇ. ಅವಳ ಬಗ್ಗೆ ಮಿದುವಾಗಿರು. [ಕ್ಲಿಯೋಪಾತ್ರಳಿಗೆ]
ಸೀಸರನಲ್ಲಿ ನಾನು ಮಾತಾಡುವೆ, ನಿಮಗೇನು ಇಷ್ಟವೋ ಅದನ್ನು, ನೀವದಕ್ಕೆ ನನ್ನನ್ನು ನಿಯುಕ್ತನನ್ನಾಗಿ ಮಾಡಿದರೆ.
ಕ್ಲಿಯೋ. ನಾನು ಸಾಯುವೆನೆಂದು ಹೇಳು.
[ ಪ್ರೊಕ್ಯೂಲಿಯಸ್ ರಕ್ಷಣಾದಳದೊಂದಿಗೆ ನಿಷ್ಕ್ರಮಣ]
ಡೋಲಾ. ಶ್ರೇಷ್ಠಳಾದ ರಾಜ್ಞಿಯೇ, ನೀವು ನನ್ನ ಬಗ್ಗೆ ಕೇಳಿದ್ದೀರಿ?
ಕ್ಲಿಯೋಪಾತ್ರ. ಗೊತ್ತಿಲ್ಲ.
ಡೋಲಾ. ಖಂಡಿತಾ ಗೊತ್ತು.
ಕ್ಲಿಯೋ. ಪರವಾಯಿಲ್ಲ, ಸ್ವಾಮಿ, ನಾನೇನು ಕೇಳಿದ್ದೇನೆ ಅಥವಾ ತಿಳಿದಿದ್ದೇನೆ ಅನ್ನುವುದು. ಹುಡುಗರು ಅಥವ ಹೆಂಗಸರು ತಮ್ಮ ಕನಸುಗಳನ್ನು ಹೇಳಿದಾಗ ನಗುವವರು ನೀವು; ಅದುವೇ ತಾನೇ ನಿಮ್ಮ ತಂತ್ರ?
ಡೋಲಾ. ನೀವನ್ನೋದು ನನಗೆ ಅರ್ಥವಾಗ್ತ ಇಲ್ಲ, ಅಮ್ಮ.
ಕ್ಲಿಯೋ. ನನಗೊಬ್ಬ ಸಾಮ್ರಾಟ ಆಂಟನಿಯ ಕನಸು ಬಿತ್ತು; ಓ, ಅಂಥ ಇನ್ನೊಂದು ನಿದ್ದೆ, ಅಂಥ ಇನ್ನೊಬ್ಬ ಮನುಷ್ಯನ ಕಾಣುವುದಕ್ಕೆ!
ಡೋಲಾ. ನಿಮಗೆ ಇಷ್ಟವಾದರೆ —
ಕ್ಲಿಯೋ. ಅವನ ಮುಖ ಆಕಾಶದ ಹಾಗೆ, ಅಲ್ಲಿ ಸೂರ್ಯಚಂದ್ರರ ಇರಿಸಿತ್ತು, ಅವು ತಮ್ಮ ವರ್ತುಲದಲ್ಲಿ ಸುತ್ತುತ್ತ, ಭೂಮಿಯೆಂಬ ಪುಟ್ಟ ಬಿಂದುವನ್ನು ಬೆಳಗಿಸುತ್ತಿದ್ದುವು.
ಡೋಲಾ. ಮಹಾರಾಜ್ಞಿ —
ಕ್ಲಿಯೋ. ಅವನ ಕಾಲುಗಳು ಸಮುದ್ರವ ಅಲ್ಲೋಲ ಕಲ್ಲೋಲ- ಗೊಳಿಸಿದುವು, ಮೇಲೆತ್ತಿದ ಕೈಗಳು ಜಗತ್ತಿನ ಮಕುಟವಾದುವು; ಮಿತ್ರರ ಜತೆ ಮಾತಾಡುವಾಗೆಲ್ಲ ಅವನ ಧ್ವನಿ ಅಂತರಿಕ್ಷದ ಸಂಗೀತದಂತಿತ್ತು; ಆದರೆ ಅವನು ಲೋಕವ ಆಕ್ರಮಿಸಿ ಜಾಲಾಡಿಸಬೇಕೆಂದಿದ್ದಾಗಲೆಲ್ಲ ಗುಡುಗು ಮಿಂಚುಗಳಂತೆ ಆರ್ಭಟಿಸುತ್ತಿದ್ದ. ಅವನ ಔದಾರ್ಯಕ್ಕೆ ಹೇಮಂತವೆಂದಿರಲಿಲ್ಲ;
ಬೇಸಿಗೆಯಂತಿತ್ತು ಅದು, ಕುಯಿದಷ್ಟು ಮುಗಿಯದೆ. ಅವನ ಖುಷಿಗಳು ಡಾಲ್ಫಿನ್ ಮೀನುಗಳ ಹಾಗೆ; ಅವು ತಾವಿದ್ದ ಪದಾರ್ಥಗಳ ಮೇಲೆ ಈಜಾಡುತ್ತಿದ್ದುವು. ಅವನ ದಿರುಸಿನಲ್ಲಿ ರಾಜಮಹಾರಾಜರುಗಳು ನಡೆದಾಡಿದರು; ರಾಜ್ಯಗಳು, ದ್ವೀಪಗಳು ಅವನ ಜೇಬಿನಿಂದುದುರುವ ತಟ್ಟೆಗಳಂತೆ ಇದ್ದುವು.
ಡೋಲಾ. ಕ್ಲಿಯಾಪಾತ್ರಾ —
ಕ್ಲಿಯೋ. ನಾನು ಕನವರಿಸಿದ ಈ ಇಂಥ ಮನುಷ್ಯನಿಗಿಂತ ಮಿಗಿಲಾದವನೊಬ್ಬ ಇರಬಹುದು ಎನ್ನುವಿಯಾ?
ಡೋಲಾ. ಇಲ್ಲ, ತಾಯಿ.
ಕ್ಲಿಯೋ. ದೇವರುಗಳಿಗೆ ಕೇಳಿಸುವಷ್ಟು ಸುಳ್ಳು ನುಡಿಯುತ್ತೀ ನೀನು. ಅಂಥವನಿಲ್ಲ, ಎಂದೂ ಇರಲಿಲ್ಲವೆಂದಾದರೆ, ಅದು ಕನಸಿನ ಅಳವಿಗೂ ಮೀರಿದ್ದು. ಪ್ರಕೃತಿಯ ಬಳಿ ಪದಾರ್ಥವಿಲ್ಲ ಕಲ್ಪನೆಯ ಜತೆ ಅಸಾಧ್ಯ ರೂಪಗಳ ರಚಿಸುವುದಕ್ಕೆ; ಆದರೂ
ಒಬ್ಬ ಆಂಟನಿಯ ಕಲ್ಪಿಸುವುದೆಂದರೆ ಕಲ್ಪನೆಯ ವಿರುದ್ಧ ಪ್ರಕೃತಿಯ ಮೂರ್ತಿಯ ನಿಲ್ಲಿಸಿದಂತೆ, ಕೇವಲ ಛಾಯೆಗಳ ತುಚ್ಛೀಕರಿಸಿ.
ಡೋಲಾ. ನಾನನ್ನುವುದನ್ನು ಕೇಳಿ, ಅಮ್ಮ: ನಿಮ್ಮ ನಷ್ಟ ನಿಮ್ಮಂತೆಯೇ, ದೊಡ್ಡದು; ಹಾಗೂ ನೀವದನ್ನು ಅದರ ಭಾರಕ್ಕೆ ಸರಿಯಾಗಿ ಸಹಿಸುತ್ತಿದ್ದೀರಿ. ವಿಜಯವ ಬೆನ್ನಟ್ಟಿ ನಾನು ಬರದಿದ್ದರೇ ಚೆನ್ನಾಗಿತ್ತು, ಆದರೆ ನಿಮ್ಮೀ ಹಿಂದೇಟು ನನ್ನ ಹೃದಯದ ಬುಡಕ್ಕೇ ಬಡಿಯುವ ದುಃಖದ ಹಾಗೆ ನನಗೆ ಅನುಭವವಾಗುತ್ತಿದೆ.
ಕ್ಲಿಯೋ. ಸೀಸರ್ ನನ್ನ ಏನು ಮಾಡಬೇಕೆಂದಿದ್ದಾರೆ, ನಿನಗೆ ಗೊತ್ತಿದೆಯೇನಯ್ಯ?
ಡೋಲಾ. ನಿಮಗೆ ಗೊತ್ತಿರಬೇಕಾದ್ದನ್ನು ತಿಳಿಸುವುದಕ್ಕೆ ನನ್ನ ಮನಸ್ಸು ಹೇಸುತ್ತಿದೆ.
ಕ್ಲಿಯೋ. ಇಲ್ಲ, ದಯವಿಟ್ಟು, ಸ್ವಾಮಿ.
ಡೋಲಾ. ಅವರು ಮರ್ಯಾದಸ್ತರಾಗಿದ್ದರೂ —
ಕ್ಲಿಯೋ. ನನ್ನನ್ನು ಜೈತ್ರ ಯಾತ್ರೆಯಲ್ಲಿ ನಡೆಸುತ್ತಾರೆ.
ಡೋಲಾ. ಅಮ್ಮಾ, ಹಾಗವರು ಮಾಡುತ್ತಾರೆ, ನನಗದು ಗೊತ್ತಿದೆ.

ಬಾಜಾಬಜಂತ್ರಿ. ಪ್ರೊಕ್ಯೂಲಿಯಸ್ , ಸೀಸರ್, ಗಾಲಸ್, ಮೆಸೆನಾಸ್, ಮತ್ತು ಇತರ ಹಿಂಬಾಲಕರು ಪ್ರವೇಶ

ಎಲ್ಲರೂ. ದಾರಿಬಿಡಿ! ಸೀಸರ್!
ಸೀಸರ್. ಈಜಿಪ್ಟಿನ ರಾಜ್ಞಿ ಯಾರು?
ಡೋಲಾ. ಅಮ್ಮಾ, ಮಹಾರಾಜರು.
[ಕ್ಲಿಯೋಪಾತ್ರ ಮಂಡಿಯೂರುವಳು]
ಸೀಸರ್. ಏಳಿರಿ, ನೀವು, ಮಂಡಿಯೂರುವುದಿಲ್ಲ. ನಿಮ್ಮಲ್ಲಿ ನನ್ನ ಪ್ರಾರ್ಥನೆ, ಏಳಿ. ಏಳಿ ಈಜಿಪ್ಟ್!
ಕ್ಲಿಯೋ. [ಏಳುತ್ತ] ಸ್ವಾಮಿ, ಇದು ದೇವರ ಇಷ್ಟ. ನನ್ನ ಒಡೆಯರನ್ನು, ನನ್ನ ದೊರೆಗಳನ್ನು ನಾನು ಗೌರವಿಸಬೇಕು.
ಸೀಸರ್. ಖಿನ್ನತೆಯ ವಿಚಾರಗಳು ಬೇಡ ನಿಮಗೆ. ನೀವು ನಮಗುಂಟುಮಾಡಿದ ನೋವುಗಳ ದಾಖಲೆ, ನಮ್ಮ
ಮಾಂಸದಲ್ಲಿ ಲಿಖಿತವಾಗಿದ್ದರೂ, ವಿಧಿವಶದಿಂದ ಆದ ಸಂಗತಿಗಳಂತೆ ಭಾವಿಸುವೆವು.
ಕ್ಲಿಯೋ. ಜಗದೇಕ ವೀರರೇ, ನನಗೆ ನನ್ನದೇ ಕಾರಣವ ಸ್ಫುಟವಾಗಿ ಮುಂದಿರಿಸುವುದಕ್ಕೆ ತಿಳಿಯದು, ಆದರೆ ಇಷ್ಟು ತಪ್ಪಿಗಳನ್ನು ಒಪ್ಪಬಲ್ಲೆ: ಸ್ತ್ರೀಕುಲವ ಈ ಹಿಂದೆಯೂ ನಾಚಿಕೆಗೊಳಿಸಿದ ದೌರ್ಬಲ್ಯಗಳು ನನ್ನ ಮೇಲೂ ಹೇರಿದ್ದುವು.
ಸೀಸರ್. ಕ್ಲಿಯೋಪಾತ್ರಾ, ನಾವು ಶಿಕ್ಷಿಸುವುದಕ್ಕಿಂತ ಕ್ಷಮಿಸುವುದೆ ಜಾಸ್ತಿ. ನೀವು ನಮ್ಮ ಉದ್ದೇಶಗಳಂತೆ ವರ್ತಿಸಿದಲ್ಲಿ, ಯಾಕೆಂದರೆ ಅವು ನಿಮ್ಮ ಬಗ್ಗೆ ಅತ್ಯಂತ ಮೃದುವಾದವು, ಈ ಬದಲಾವಣೆಯಲ್ಲಿ ನೀವೊಂದು ಅನುಕೂಲ ಕಾಣುವಿರಿ; ಆದರೆ ಆಂಟನಿಯ ದಾರಿ ಹಿಡಿದು ನನ್ನ ಮೇಲೆ ಕ್ರೌರ್ಯ ಇರಿಸಿದಲ್ಲಿ, ನನ್ನ ಒಳ್ಳೆಯ ಉದ್ದೇಶಗಳಿಂದ ನೀವು ನಿಮ್ಮನ್ನೇ ವಂಚಿಸುವಿರಿ,
ಹಾಗೂ ನಿಮ್ಮ ಮಕ್ಕಳನ್ನು ವಿವಾದಕ್ಕೆ ತಳ್ಳುವಿರಿ. ನೀವು ನನ್ನ ಮೇಲೆ ನಂಬಿಕೆಯಿರಿಸಿದಲ್ಲಿ, ಅದರಿಂದ ನಾನವರನ್ನು ರಕ್ಷಿಸುವೆ.
ನಾನೀಗ ಬರುವೆ.
ಕ್ಲಿಯೋ. ಇಡೀ ಜಗದಗಲ! ಅದು ನಿಮ್ಮದು, ನಾವಾದರೋ ನಿಮ್ಮ ಗುರಾಣಿಗಳು ಮತ್ತು ಜೈತ್ರ ಲಾಂಛನಗಳು, ನೀವೆಲ್ಲಿ ಇಡುತ್ತೀರೋ ಅಲ್ಲಿ ತೂಗುತ್ತೇವೆ. ಇದಿಷ್ಟು, ಸ್ವಾಮಿ.
[ಸೀಸರನಿಗೆ ಪತ್ರ ಸುರುಳಿಯೊಂದನ್ನು ಕೊಡುತ್ತಾಳೆ]
ಸೀಸರ್. ಕ್ಲಿಯೋಪಾತ್ರಳಿಗೆ ಸಂಬಂಧಿಸಿದಂತೆ ನೀವೇ ನನಗೆ ಸಲಹೆ ನೀಡುವಿರಿ.
ಕ್ಲಿಯೋ. ಇದು ನನ್ನ ಧನಕನಕ ವಜ್ರ ವೈಢೂರ್ಯಗಳ ಪಟ್ಟಿ. ವಿವರವಾಗಿ ಬೆಲೆಕಟ್ಟಿದ್ದು, ಚೂರುಪಾರುಗಳನ್ನು ಕೈಬಿಟ್ಟಿದೆ. ಸೆಲ್ಯೂಕಸ್ ಎಲ್ಲಿ?

ಸೆಲ್ಯೂಕಸ್ ಪ್ರವೇಶ

ಸೆಲ್ಯೂಕಸ್. ಇಲ್ಲಿದ್ದೇನೆ, ಅಮ್ಮಾ.
ಕ್ಲಿಯೋ. ಈತ ನನ್ನ ಕೋಶಾಧಿಕಾರಿ. ಇವನು ಹೇಳಲಿ, ಇವನ ಜೀವದಾಣೆ, ನಾನು ನನಗೋಸ್ಕರ ಏನನ್ನೂ
ಇಟ್ಟುಕೊಂಡಿಲ್ಲ ಎನ್ನುವುದನ್ನು.
ಸೆಲ್ಯೂಕಸ್. ಅಮ್ಮಾ, ನಾನು ಇಲ್ಲದ್ದು ಹೇಳಿ ಜೀವ ಗಂಡಾಂತರ ತಂದುಕೊಳ್ಳುವುದಕ್ಕಿಂತ ನನ್ನ ತುಟಿಗಳನ್ನು
ಹೊಲಿದುಕೊಂಡೇನು.
ಕ್ಲಿಯೋ. ನಾನೇನು ಇಟ್ಟುಕೊಂಡಿದ್ದೇನೆ?
ಸೆಲ್ಯೂಕಸ್. ನೀವು ಇಲ್ಲಿ ನಮೂದಿಸಿದಷ್ಟೇ ಮೊತ್ತವನ್ನು ಖರೀದಿಸುವಷ್ಟು.
ಸೀಸರ್. ಇಲ್ಲ, ನಾಚುವುದು ಬೇಡ, ಕ್ಲಿಯೋಪಾತ್ರ. ಈ ಕಾಗದಪತ್ರದ ನಿಮ್ಮ ತೀರ್ಮಾನಕ್ಕೆ ನನ್ನ ಸಮ್ಮತಿಯಿದೆ.
ಕ್ಲಿಯೋ. ನೋಡಿದಿರಾ, ಸೀಸರ್! ಓ, ನೋಡಿ, ಹೇಗಿದೆ ಘನವಂತರ ಸೇವೆ! ನನ್ನದು ಈಗ ನಿಮ್ಮದಾಗುತ್ತದೆ, ನಾವು ಸ್ಥಾನ ಬದಲಾಯಿಸಿದರೆ, ನಿಮ್ಮದು ನನ್ನದಾಗುತ್ತದೆ. ಈ ಸೆಲ್ಯೂಕಸನ ಕೃತಘ್ನತೆ ನನ್ನ ಪಿತ್ಥ ಕೆರಳಿಸಿದೆ. — ಎಲೋ ತೊತ್ತೆ, ಒಬ್ಬ ಬೆಲೆವೆಣ್ಣಿನಷ್ಟೂ ನಿಷ್ಠೆಯಿಲ್ಲವಲ್ಲ! ಏನು ಹಿಮ್ಮೆಟ್ಟುತ್ತೀಯಾ — ನೀನು ಹಿಮ್ಮೆಟ್ಟುವೆ, ನನಗೆ ಗೊತ್ತು.
ಆದರೆ ನಾ ನಿನ್ನ ಕಣ್ಣುಗಳ ಕಂಡುಹುಡುಕದೆ ಇರಲಾರೆ, ಅವಕ್ಕೆ ರೆಕ್ಕೆಗಳೇ ಇದ್ದರೂ. ತೊತ್ತೇ, ಹೃದಯವಿಲ್ಲದ ಖಳನೆ, ಕುನ್ನಿಯೆ!
ಓ, ದುಷ್ಟನೇ!
ಸೀಸರ್. ಉತ್ತಮ ರಾಜ್ಞಿಯೇ, ನಿಮ್ಮಲ್ಲಿ ಒಂದು ಕೋರಿಕೆ.
ಕ್ಲಿಯೋ. ಓ ಸೀಸರ್, ಇದೆಂಥಾ ಘಾತುಕ ಅವಮಾನ, ನೀವು ನನ್ನ ಭೇಟಿಗೆ ಬಂದಿರುತ್ತ, ನನ್ನಂಥ ಬಡಪಾಯಿಯೊಬ್ಬಳಿಗೆ ನಿಮ್ಮ ನಿಜಗೌರವವ ತೋರಿಸುತ್ತ, ನನ್ನದೇ ಸೇವಕ ನನ್ನ ಅವಮರ್ಯಾದೆಗಳ ಮೊತ್ತಕ್ಕೆ ತನ್ನ ತ್ವೇಷವ ಸೇರಿಸುವುದೆಂದರೆ!
ಹೇಳಿ, ಸೀಸರ್, ನಾವು ಹೆಂಗಳೆಯರ ಕೆಲವು ಕ್ಷುಲ್ಲಕ ವಸ್ತುಗಳನ್ನು ಇಟ್ಟುಕೊಂಡಿದ್ದೇವೆ ಎಂದುಕೊಳ್ಳಿ. ಬೆಲೆಬಾಳದ ಆಟಿಕೆಗಳು,
ಸಾಮಾನ್ಯ ಗೆಳತಿಯರನ್ನು ನಾವು ಆದರಿಸುವಂಥವು; ಮತ್ತು ಲಿವಿಯಳಿಗೂ ಒಕ್ಟೇವಿಯಾಳಿಗೂ ಕೆಲವು ಅಮೂಲ್ಯ ಕಾಣಿಕೆಗಳು, ಅವರ ಮಧ್ಯಸ್ಥಿಕೆಯನ್ನು ಒಲಿಸಿಕೊಳ್ಳುವುದಕ್ಕೆ; ನಾನೇ ಬೆಳೆಸಿದ ಮನುಷ್ಯನೊಬ್ಬ ನನ್ನನ್ನು ಬಿಟ್ಟುಕೊಡಬೇಕೇ? ದೇವರೆ! ಇದು
ನಾನು ಬಿದ್ದುದಕ್ಕಿಂತಲೂ ಕೆಳಕ್ಕೆ ಹೊಡೆದುರುಳಿಸುತ್ತದೆ.
[ಸೆಲ್ಯೂಕಸ್‍ಗೆ] ತೊಲಗು ಇಲ್ಲಿಂದ, ದಯವಿಟ್ಟು; ಇಲ್ಲದಿದ್ದರೆ ನನ್ನ ನತದೃಷ್ಟ ಬೂದಿಯ ಮೂಲಕ ನನ್ನ ಚೇತನದ ಇಂಗಾಳಗಳ ತೋರಿಸುವೆ. ಗಂಡಸಾಗಿದ್ದರೆ ನೀನು, ನನ್ನ ಮೇಲೆ ಕರುಣೆ ತೋರಿಸುತ್ತಿದ್ದೆ.
ಸೀಸರ್. ಸಂಭಾಳಿಸಿಕೋ, ಸೆಲ್ಯೂಕಸ್.
[ಸೆಲ್ಯೂಕಸ್ ನಿಷ್ಕ್ರಮಣ]
ಕ್ಲಿಯೋ. ಎಲ್ಲರಿಗೂ ಗೊತ್ತಿರಲಿ, ಬೇರೆಯವರು ಎಸಗಿದ್ದಕ್ಕೆ ಉತ್ತಮರಾದ ನಾವು ತಪ್ಪು ತಿಳಿಯಲ್ಪಡುತ್ತೇವೆ; ಹಾಗೂ ನಾವು
ಬಿದ್ದಾಗ, ಬೇರೆಯವರ ತಪ್ಪಿಗೆ ನಮ್ಮ ಹೆಸರಲ್ಲಿ ಉತ್ತರಿಸುತ್ತೇವೆ, ಆದ್ದರಿಂದ ನಾವು ದಯನೀಯರು.
ಸೀಸರ್. ಕ್ಲಿಯೋಪಾತ್ರ, ನೀವು ಇಟ್ಟುಕೊಂಡದ್ದಾಗಲಿ, ಒಪ್ಪಿಕೊಂಡದ್ದಾಗಲಿ, ನಾವು ನಮ್ಮ ದಾಖಲೆಯಲ್ಲಿ ಸೇರಿಸಿ-ಕೊಳ್ಳುವವರಲ್ಲ; ಅವೆಲ್ಲ ನಿಮ್ಮಲ್ಲೇ ಇರಲಿ, ನಿಮಗಿಷ್ಟವಿದ್ದಂತೆ ಅದನ್ನು ವಿಲೇವಾರಿ ಮಾಡಿ; ನಂಬಿ, ಸೀಸರ್ ಎಂದರೆ ವ್ಯಾಪಾರಿಯಲ್ಲ, ವ್ಯಾಪಾರಿಗಳು ಮಾರಿದ್ದನ್ನು ನಿಮ್ಮ ಜತೆ ಚೌಕಾಶಿ ಮಾಡುವುದಕ್ಕೆ. ಆದ್ದರಿಂದ ಖುಷಿಪಡಿರಿ;
ನಿಮ್ಮದೇ ಯೋಚನೆಗಳನ್ನು ನಿಮ್ಮ ಬಂದೀಖಾನೆಗಳ ಮಾಡದಿರಿ; ಇಲ್ಲ, ಆತ್ಮೀಯ ರಾಜ್ಞಿ; ಯಾಕೆಂದರೆ, ನಿಮಗೆ
ನಮ್ಮ ಯೋಜನೆಯೇನೆಂದರೆ, ನೀವೇ ಅದನ್ನು ಸಲಹೆ ಮಾಡಿದ ಹಾಗೆ. ಉಣ್ಣಿರಿ, ನಿದ್ರಿಸಿರಿ: ನಮ್ಮ ಧ್ಯಾನವೂ
ದಯೆಯೂ ನಿಮ್ಮ ಮೇಲೆ ಎಷ್ಟಿರುತ್ತದೆಯೆಂದರೆ, ನಾವು ನಿಮ್ಮ ಸ್ನೇಹಿತರಾಗಿ ಉಳಿಯುತ್ತೇವೆ: ಆದ ಕಾರಣ,
ವಿದಾಯ.
ಕ್ಲಿಯೋ. ನನ್ನ ಮಾಲಿಕರೆ, ನನ್ನ ದೊರೆಯೇ!
ಸೀಸರ್. ಹಾಗಲ್ಲ, ವಿದಾಯ.

    [ಬಾಜಾಬಜಂತ್ರಿ. ಸೀಸರ್ ಮತ್ತು ಅವನ ಬಳಗ ನಿಷ್ಕ್ರಮಣ]

ಕ್ಲಿಯೋ. ಬರೀ ಮಾತು, ಹುಡುಗಿಯರೆ, ಬರೀ ಮಾತು, ನನ್ನ ಆತ್ಮಗೌರವವ ನಾನು ನೋಡಿಕೊಳ್ಳದಿರಲಿ ಎಂದು: ಆದರೆ, ಕೇಳೇ,
ಚಾರ್ಮಿಯಾನ್.
[ಚಾರ್ಮಿಯಾನಳ ಕಿವಿಯಲ್ಲೇನೋ ಉಸುರುತ್ತಾಳೆ]
ಇರಾಸ್. ಮುಗಿಸಿ, ಅಮ್ಮಾ; ದಿನ ಮುಗಿಯಿತು, ನಾವಿನ್ನು ಕತ್ತಲಿಗೆ.
ಕ್ಲಿಯೋ. ಬೇಗನೆ ವಾಪಸು ಬಾ. ನಾನು ಈಗಾಗಲೇ ಹೇಳಿದ್ದೇನೆ; ಅದು ತರಿಸಿಯೂ ಆಗಿದೆ; ಹೋಗಿ ತ್ವರೆಗೊಳಿಸು.
ಚಾರ್ಮಿಯಾನ್. ಹಾಗೇ ಮಾಡುತ್ತೇನೆ, ಅಮ್ಮಾ.

ಡೋಲಾಬೆಲ್ಲಾ ಮರುಪ್ರವೇಶ

ಡೋಲಾಬೆಲ್ಲಾ. ರಾಜ್ಞಿ ಎಲ್ಲಿ?
ಚಾರ್ಮಿ. ನೋಡಿ, ಸ್ವಾಮಿ.

    [ಚಾರ್ಮಿಯಾನ್ ನಿಷ್ಕ್ರಮಣ]

ಕ್ಲಿಯೋ. ಡೋಲಾಬೆಲ್ಲಾ!
ಡೋಲಾ. ತಾಯಿ, ನಿಮ್ಮ ಆಜ್ಞೆಗೆ ಬದ್ಧನಾಗಿ, ನಾನಿದನ್ನು ಹೇಳುತ್ತಿದ್ದೇನೆ, ಯಾಕೆಂದರೆ, ನನ್ನ ಪ್ರೀತಿಗೆ ನಿಮ್ಮ ಆಜ್ಞೆಯೆಂದರೆ ಪಾಲಿಸಲೇಬೇಕಾದ ಧರ್ಮ: ಸೀಸರ್ ಸಿರಿಯಾದ ಮೂಲಕ ಪ್ರಯಾಣಿಸಲು ಉದ್ದೇಶಿಸಿದ್ದಾರೆ, ಮತ್ತು ಮೂರು ದಿನ ಮೊದಲೇ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಕಳಿಸಬೇಕೆಂದಿದ್ದಾರೆ. ಇದರ ಸದುಪಯೋಗ ಪಡಿಸಿಕೊಳ್ಳಿ. ನಾನು ನಿಮ್ಮ ಹಿತದಂತೆ ಮತ್ತು
ನನ್ನ ವಚನದಂತೆ ವರ್ತಿಸಿದ್ದೇನೆ.
ಕ್ಲಿಯೋ. ಡೋಲಾಬೆಲ್ಲಾ, ನಾನು ನಿನಗೆ ಋಣಿಯಾಗಿರುವೆ.
ಡೋಲಾ. ನಿಮ್ಮ ಸೇವಕನಾಗಿ ನಾನೂ ನಿಮಗೆ ಋಣಿ. ವಿದಾಯ, ಮಹಾರಾಣಿ, ನಾನು ಸೀಸರನ ಬಳಿ ಇರಬೇಕಾಗಿದೆ.
ಕ್ಲಿಯೋ. ವಿದಾಯ ಹಾಗೂ ಕೃತಜ್ಞತೆಗಳು.
[ಡೋಲಾಬೆಲ್ಲಾ ನಿಷ್ಕ್ರಮಣ]
ಈಗ, ಇರಾಸ್, ನೀನೇನು ಹೇಳುತ್ತೀ? ನೀನು ಈಜಿಪ್ಟಿನ ಬೊಂಬೆ, ರೋಮಿನಲ್ಲಿ ಪ್ರದರ್ಶಿಸಲ್ಪಡುವಿ, ಅದೇ ರೀತಿ
ನಾನೂ. ಕೈಕಸುಬಿನ ಆಳುಗಳು ಕೆಲಸದುಡುಪು, ಅಳತೆಗೋಲು, ಮತ್ತು ಸುತ್ತಿಗೆಗಳ ಸಮೇತ ಎತ್ತಿ ಹಿಡಿಯುವರು ನಮ್ಮನ್ನು ಜನರ ನೋಟಕ್ಕೆ. ಅವರ ಕೆಟ್ಟ ಊಟದ ಉಸಿರಲ್ಲಿ ನಾವು ಆವರಿಸಲ್ಪಡುವೆವು, ಹಾಗೂ ಅದೇ ಹಬೆಯನ್ನು ನಾವೂ ಸೇವಿಸಬೇಕಾಗುತ್ತದೆ.
ಇರಾಸ್. ದೇವರು ಕಾಪಾಡಲಿ!
ಕ್ಲಿಯೋ. ಇಲ್ಲ, ಅದು ಶತಸ್ಸಿದ್ಧ, ಇರಾಸ್. ಅಧಿಕಪ್ರಸಂಗಿ ಅಧಿಕಾರಿಗಳು ಬೀದಿ ಬಸವಿಯರ ಹಿಡಿದಂತೆ
ನಮ್ಮನ್ನು ಹಿಡಿಯುವರು, ಮತ್ತು ಕುಕವಿಗಳು ಪದಕಟ್ಟಿ ಹಾಡುವರು ರಾಗ ತಪ್ಪಿ. ಚತುರ ಪ್ರಹಸನಕಾರರು ಸಮಯ ಸ್ಫೂರ್ತಿಯಿಂದ, ಆಡಿ ತೋರಿಸುವರು ರಂಗದ ಮೇಲೆ, ನಮ್ಮ ಅಲೆಕ್ಝಾಂಡ್ರಿಯಾದ ಲೀಲೆಗಳನ್ನು; ಕುಡಿದು ಮತ್ತೇರಿದ ಆಂಟನಿಯನ್ನು ಎಳೆದು ತರುವರು, ಹಾಗೂ ಕೀರಲು ಕಂಠದ ಕ್ಲಿಯೋಪಾತ್ರನೊಬ್ಬ ನನ್ನ ಪ್ರತಿಷ್ಠೆಯನ್ನು ಸೂಳೆಯೊಬ್ಬಳ ಭಂಗಿಯಲ್ಲಿ ಕಿರುಚುವುದನ್ನು ನಾನು ನೋಡುವೆನು.
ಇರಾಸ್. ಓ ದೇವರೇ!
ಕ್ಲಿಯೋ. ಇಲ್ಲ, ಅದು ನಿಶ್ಚಿತ.
ಇರಾಸ್. ನಾನೆಂದೂ ನೋಡೆನು ಅದನ್ನು! ಯಾಕೆಂದರೆ, ನನ್ನ ನಖಗಳು ನನ್ನ ಕಣ್ಣುಗಳಿಗಿಂತ ಶಕ್ತಿಯುತವೆನ್ನುವುದು ನನಗೆ ಗೊತ್ತು.
ಕ್ಲಿಯೋ. ಯಾಕೆ, ಅದು ತಾನೇ ತಮ್ಮ ಸಿದ್ಧತೆಗೆ ಮಣ್ಣೆರಚುವುದಕ್ಕೆ ಹಾಗೂ ಅತ್ಯಂತ ಅಸಂಗತ ಉದ್ದೇಶಗಳನ್ನು ಗೆಲ್ಲುವುದಕ್ಕೆ ಅವರಿಗಿರುವ ದಾರಿ?

ಚಾರ್ಮಿಯಾನ್ ಮರುಪ್ರವೇಶ

ಹಾ, ಚಾರ್ಮಿಯಾನ್! ಸಮೆಸಿರಿ, ಸಖಿಯರೇ, ರಾಜ್ಞಿಯಂತೆ ನನ್ನನ್ನು. ಹೋಗಿ ತನ್ನಿರಿ ನನ್ನ ಅತ್ಯುತ್ತಮ ಉಡುಗೆಗಳನ್ನು.
ಮತ್ತೊಮ್ಮೆ ಸಿಡ್ನಸ್‍ಗೆ ನಾನು, ಮಾರ್ಕ್ ಆಂಟನಿಯ ಭೇಟಿಗೆ.
ಲೋ, ಇರಾಸ್, ನಡೆ — ಈಗ, ಜಾಣೆ ಚಾರ್ಮಿಯಾನ್, ನಿಜ, ನಾವು ತ್ವರೆಮಾಡಬೇಕು — ಈ ಕೆಲಸ ಆದಮೇಲೆ
ನೀನು ಬೇಕಾದರೆ ಪ್ರಳಯದ ತನಕ ಆಡಿಕೊಂಡಿರುವುದಕ್ಕೆ ನನ್ನ ತಕರಾರಿಲ್ಲ. ತೆಗೆದುಕೊಂಡು ಬಾ ನಮ್ಮ ಮಣಿಮಕುಟ
ಮತ್ತು ಇನ್ನೆಲ್ಲವನ್ನೂ.
[ಇರಾಸ್ ನಿಷ್ಕ್ರಮಣ. ಒಳಗಿನಿಂದ ಯಾರದೋ ಸದ್ದು]
ಏನದು ಸದ್ದು?

ಕಾವಲುಗಾರನೊಬ್ಬನ ಪ್ರವೇಶ

ಕಾವಲುಗಾರ. ಒಬ್ಬ ಹಳ್ಳಿಗ ಬಂದಿದ್ದಾನೆ, ಮಹಾರಾಜ್ಞಿಯನ್ನು ನೋಡಬೇಕಂತೆ, ಅವನು ತಮಗೆ ಅಂಜೂರ ತಂದಿರುವನು.
ಕ್ಲಿಯೋ. ಅವನನ್ನು ಒಳಕ್ಕೆ ಬಿಡು.
[ಕಾವಲುಗಾರನ ನಿಷ್ಕ್ರಮಣ]
ಎಂಥಾ ಸಣ್ಣ ಸಾಧನವೂ ಎಂಥಾ ಮಹತ್ಕಾರ್ಯಕ್ಕೆ ಕಾರಣವಾದೀತು! ಅವನು ನನಗೆ ಸ್ವಾತಂತ್ರ್ಯ ತರುತ್ತಿದ್ದಾನೆ.ನನ್ನ ನಿರ್ಧಾರ ಆಯಿತು, ನನ್ನಲ್ಲಿನ್ನು ಹೆಣ್ಣುತನವಿಲ್ಲ. ಈಗ ಅಡಿಯಿಂದ ಮುಡಿವರೆಗೆ ನಾನು ಅಖಂಡ ಶಿಲೆ;ಇನ್ನು ಈ ಚಂಚಲ ಚಂದ್ರ ನನ್ನ ಗ್ರಹವಲ್ಲ.

ಕಾವಲುಗಾರ ಮತ್ತು ಬುಟ್ಟಿ ಸಮೇತ ವಿದೂಷಕನ ಪ್ರವೇಶ

ಕಾವಲುಗಾರ. ಇವನೇ.
ಕ್ಲಿಯೋ. ಅವನನ್ನು ಇಲ್ಲಿ ಬಿಟ್ಟು ನೀನು ಹೋಗು.
[ಕಾವಲುಗಾರನ ನಿಷ್ಕ್ರಮಣ]
ನಿನ್ನಲ್ಲಿ ನೈಲ್ ನದಿಯ ಆ ಚಂದದ ಹುಳ ಇದೆಯೇ, ನೋವುಂಟುಮಾಡದೆ ಕೊಲ್ಲುವಂಥದು?
ವಿದೂಷಕ. ನಿಜಕ್ಕೂ ನನ್ನ ಬಳಿ ಇದೆ, ಆದರೆ ನೀವದನ್ನು ಮುಟ್ಟಲು ನಾನು ಬಿಡಲಾರೆ, ಯಾಕೆಂದರೆ ಅದರ ಕಡಿತ ಶಾಶ್ವತವಾದುದು. ಕಡಿಸಿಕೊಂಡವರು ಮತ್ತೆ ಮರಳುವುದಿಲ್ಲ, ಮರಳಿದರೂ ಅದು ಬಹಳ ಅಪರೂಪ.
ಕ್ಲಿಯೋ. ಅದರಿಂದ ಯಾರಾದರೂ ಸತ್ತವರ ನೆನಪಿದೆಯೆ ನಿನಗೆ?
ವಿದೂಷಕ. ತುಂಬಾ, ತುಂಬಾ, ಗಂಡಸರೂ, ಹೆಂಗಸರೂ. ಅಂಥ ಒಬ್ಬಳ ಬಗ್ಗೆ ನಿನ್ನೆ ತಾನೆ ಕೇಳಿದೆ — ಒಳ್ಳೇ ನಂಬಿಗಸ್ತಳು ಅವಳು, ಆದರೆ ಕೆಲವು ಸಲ ಸುಳ್ಳು ಹೇಳುವ ಚಾಳಿ, ಹೆಂಗಸು ಮಾಡಬಾರದ್ದು ಅದು, ನಂಬಿಕೆಗಾಗಿ ಅಲ್ಲದೆ –ಹೇಗೆ ಅವಳಿದರ ಕಡಿತಕ್ಕೆ ಸತ್ತಳು, ಎಷ್ಟು ವೇದನೆ ಪಟ್ಟಳು ಎಂದೆಲ್ಲ. ನಿಜವಾಗ್ಲೂ ಅವಳೀ ಹುಳಕ್ಕೆ ಒಳ್ಳೇ ಶಿಫಾರಸು.
ಆದರೆ ಹೇಳುವ ಎಲ್ಲವನ್ನೂ ನಂಬುವ ಮನುಷ್ಯ ಉಳಿಯುವುದಿಲ್ಲ ಅದರರ್ಧ ಮಾಡುವ ಜನರಿಂದ.
ಆದರೆ ಇದು ಅತ್ಯಂತ ಪ್ರಮಾಣಕಾರಿ, ಈ ಹುಳವೊಂದು ವಿಚಿತ್ರ ಹುಳ.
ಕ್ಲಿಯೋ. ನೀನಿನ್ನು ಹೋಗು, ವಿದಾಯ ನಿನಗೆ.
ವಿದೂಷಕ. ನಿಮಗೀ ಹುಳದ ಎಲ್ಲಾ ಸುಖ ಸಿಗಲಿ.
[ಬುಟ್ಟಿಯನ್ನು ಕೆಳಗಿರಿಸುತ್ತಾನೆ]
ಕ್ಲಿಯೋ. ವಿದಾಯ.
ವಿದೂಷಕ. ನೀವು ನಂಬಲೇ ಬೇಕು ಇದನ್ನು, ನೋಡಿ, ಹುಳ ಅದರ ಕೆಲಸ ಮಾಡುತ್ತದೆ.
ಕ್ಲಿಯೋ. ಆಯ್ತು, ಆಯ್ತು, ನಡೆ.
ವಿದೂಷಕ. ನೋಡಿ, ಬುದ್ಧಿವಂತರ ಕೈಗಲ್ಲದೆ ಈ ಹುಳವನ್ನು ಇನ್ನು ಯಾರ ಕೈಗೂ ಒಪ್ಪಿಸಬಾರದು, ಯಾಕೆಂದರೆ ಹುಳಕ್ಕೆ ಬುದ್ಧಿಯೆಂಬುದೆ ಇಲ್ಲ.
ಕ್ಲಿಯೋ. ನೀನು ಗಾಬರಿಮಾಡಬೇಡ; ಇದನ್ನು ಸರಿಯಾಗಿ ನೋಡಿಕೊಳ್ಳಲಾಗುವುದು.
ವಿದೂಷಕ. ಒಳ್ಳೇದು. ಅದಕ್ಕೆ ಏನೂ ಕೊಡಬೇಡಿ, ದಯವಿಟ್ಟು; ಯಾಕೆಂದರೆ ತಿನಿಸುವುದಕ್ಕೆ ಅದು ಅಯೋಗ್ಯ.
ಕ್ಲಿಯೋ. ನನ್ನನ್ನು ತಿಂದೀತೇ?
ವಿದೂಷಕ. ನೀವು ನನ್ನನ್ನು ಅಷ್ಟು ಮೂರ್ಖ ಅಂತ ತಿಳಕ್ಕೋಬೇಡಿ, ಯಾಕೆಂದರೆ ಸ್ವತಃ ಸೈತಾನ ಕೂಡಾ ಒಬ್ಬ
ಹೆಣ್ಣನ್ನ ತಿನ್ನಲ್ಲ ಅಂತ ನನಗೆ ಗೊತ್ತಿದೆ. ದೇವರಿಗಾದರೆ ಹೆಣ್ಣು ಊಟ, ಅದೂ ಸೈತಾನ ಅಲಂಕರಿಸದೆ ಇದ್ದರೆ.
ಆದರೆ ನಿಜವಾಗ್ಲೂ, ಈ ಸೈತಾನ ಸೂಳೇಮಕ್ಳು ದೇವರುಗಳಿಗೆ ಅವರ ಹೆಣ್ಣುಗಳಲ್ಲಿ ಬಹಳ ಅನ್ಯಾಯ
ಮಾಡ್ತವೆ, ಯಾಕೆಂದರೆ ಅವರು ಮಾಡುವ ಹತ್ತರಲ್ಲಿ ಐದನ್ನು ಹಾಳುಮಾಡ್ತವೆ.
ಕ್ಲಿಯೋ. ಸರಿ, ನೀನಿನ್ನು ಹೊರಟುಹೋಗು. ವಿದಾಯ.
ವಿದೂಷಕ. ಈಗ್ಲೇ ಹೊರಟೆ. ಹುಳ ತಮಗೆ ಸುಖ ನೀಡಲಿ.

ಇರಾಸ್ ರಾಜ್ಞಿಯ ಉಡುಪುಗಳನ್ನು ತರುತ್ತ ಪ್ರವೇಶ

ಕ್ಲಿಯೋ. ಇಲ್ಲಿ ಕೊಡು ನನ್ನ ಉಡುಪನ್ನು. ನನ್ನ ತಲೆಗೆ ಕಿರೀಟವಿರಿಸು. ಅಮರ್ತ್ಯ ಆಕಾಂಕ್ಷೆಗಳಿವೆ ನನ್ನಲ್ಲಿ. ಇನ್ನು
ಮುಂದೆ ಈಜಿಪ್ಟಿನ ದ್ರಾಕ್ಷಾರಸ ಈ ತುಟಿಯನ್ನು ಸವರಲಾರದು.
[ಹೆಂಗಸರು ಅವಳಿಗೆ ಉಡುಪು ತೊಡಿಸುತ್ತಾರೆ]
ಹುಶಾರು, ಹುಶಾರು, ಇರಾಸ್; ಬೇಗನೆ. ಆಂಟನಿ ಕರೆಯುತ್ತಿರುವಂತೆ ನನಗೆ ಕೇಳಿಸುತ್ತಿದೆ. ನನ್ನ ಉತ್ತಮ ಕೃತ್ಯದ ಪ್ರಶಂಸೆಗೆ ಅವರು ತಮ್ಮನ್ನು ತಾವು ಎಬ್ಬಿಸುವುದು ಕಾಣಿಸುತ್ತಿದೆ ನನಗೆ. ಸೀಸರನ ಭಾಗ್ಯವನ್ನು ಅವರು ಗೇಲಿಮಾಡುವುದು
ಕೇಳಿಸುತ್ತಿದೆ, ಯಾಕೆಂದರೆ ದೇವರುಗಳು ಅದನ್ನು ನೀಡುವುದು ನಂತರದ ಅವರ ಕೋಪಕ್ಕೆ ಮುನ್ನೆಪವಾಗಿ. ಪತಿಯೇ,ನಾನಿದೋ ಬಂದೆ! ಆ ಹೆಸರಿಗೆ ನನ್ನ ಧೈರ್ಯ ನನಗೆ ಯೋಗ್ಯತೆ ನೀಡಲಿ! ನಾನು ಬೆಂಕಿ ಮತ್ತು ಗಾಳಿ, ನನ್ನ ಇತರ ಭೂತಗಳನ್ನು ಕೆಳಸ್ತರದ ಜೀವಕ್ಕೆ ನೀಡುವೆ. ಆಯಿತೇ ನಿಮ್ಮ ಕೆಲಸ? ಬನ್ನಿ ಹಾಗಿದ್ದರೆ, ನನ್ನ ತುಟಿಗಳ ಕೊನೇ ಬಿಸಿಯನ್ನು ಸ್ವೀಕರಿಸಿ. ವಿದಾಯ, ಚಾರ್ಮಿಯಾನ್, ಇರಾಸ್, ದೀರ್ಘ ವಿದಾಯ.

[ಅವರನ್ನು ಚುಂಬಿಸುವಳು. ಇರಾಸ್ ಬಿದ್ದು ಸಾಯುತ್ತಾಳೆ]

ನನ್ನ ತುಟಿಗಳಲ್ಲಿ ಸರ್ಪವಿದೆಯೆ? ಬಿದ್ದಿಯಾ? ನೀನು ಮತ್ತು ನಿಸರ್ಗ ಇಷ್ಟೊಂದು ಮೆತ್ತಗೆ ಬೇರ್ಪಡಬಲ್ಲಿರಾದರೆ, ಸಾವಿನ ಬಡಿತ ಪ್ರಿಯಕರ ಚಿವುಟಿದ ಹಾಗಿರಬೇಕು, ನೋವಾಗುತ್ತದೆ, ಆದರೂ ಬೇಕೆನಿಸುತ್ತದೆ. ತಟಸ್ಥವಾದಿಯಾ? ನೀನೀತರ
ಮಾಯವಾದರೆ, ಜಗತ್ತಿಗೆ ಹೇಳುವಿ, ಬೀಳ್ಕೊಡುವಿಕೆಗೆ ಬೆಲೆಯಿಲ್ಲ ಎಂದು.
ಚಾರ್ಮಿ. ದಟ್ಟ ಮೇಘವೇ, ಮಳೆಗರೆ, ದೇವತೆಗಳೇ ಅಳುತ್ತಾರೆಂದು ನಾನು ಹೇಳುವ ಹಾಗೆ!
ಕ್ಲಿಯೋ. ಇದು ನನ್ನ ನೀಚಳ ಮಾಡುತ್ತದೆ. ಇವಳೇ ಮೊದಲು ಗುಂಗುರುಗೂದಲ ಆಂಟನಿಯ ಕಂಡರೆ, ಇವಳ ಮೇಲೆ ಒತ್ತಾಯ ಹಾಕಿ, ನನ್ನ ಸ್ವರ್ಗಸಮಾನ ಮುತ್ತನ್ನು ವ್ಯಯಮಾಡಿಬಿಡುವರು.
[ಸರ್ಪವೊಂದರಿಂದ ಕಡಿಸಿಕೊಳ್ಳುವಳು]

ನಿನ್ನ ಹರಿತವಾದ ಹಲ್ಲುಗಳಿಂದ ಈ ಬದುಕಿನ ಕಗ್ಗಂಟುಗಳನ್ನು ಶೀಘ್ರವೇ ಬಿಡಿಸು. ನಂಜುಳ್ಳ ಬಡ ಜೀವವೇ,ಸಿಟ್ಟಾಗು, ಕಳಿಸಿಬಿಡು. ಓ, ನಿನಗೆ ಬಾಯಿ ಬರುತ್ತಿದ್ದರೆ, ಮಹಾ ಸೀಸರನನ್ನು ನೀನು ಮೂರ್ಖ ಕತ್ತೆಯೆಂದು ಕರೆಯುವುದನ್ನು ನಾನು ಕೇಳುತ್ತಿದ್ದೆ!
ಚಾರ್ಮಿ. ಓ, ಮೂಡಲ ನಕ್ಷತ್ರವೇ!
ಕ್ಲಿಯೋ. ಶಾಂತಿ, ಶಾಂತಿ! ನನ್ನ ಮಗು ನನ್ನೆದೆಯಲ್ಲಿ ಮೊಲೆ ತಿನ್ನುವುದು ಕಾಣಿಸುತ್ತಿಲ್ಲವೇ ನಿನಗೆ, ಅದು
ಸ್ತನದಾಯಿನಿಯನ್ನೇ ನಿದ್ದೆಗೆ ಕಳಿಸುತ್ತಿದೆ.
ಚಾರ್ಮಿ. ಓ, ನಿಲ್ಲಿಸಿ, ನಿಲ್ಲಿಸಿ!
ಕ್ಲಿಯೋ. ಎಲೆ ಮಧುರ ಲೇಪವೇ, ಗಾಳಿಯಂತೆ ಹಗುರ, ಮತ್ತು ಎಷ್ಟು ಮಿದುವೆಂದರೆ — ಓ ಆಂಟನಿ! — ಇಲ್ಲ, ನಾನು ನಿನ್ನನ್ನೂ ಎತ್ತಿಕೊಳ್ಳುವೆನು.
[ಇನ್ನೊಂದು ಸರ್ಪದಿಂದಲೂ ಕಡಿಸಿಕೊಳ್ಳುತ್ತಾಳೆ]
ನಾನೇಕೆ ಇರಬೇಕು –ಚಾರ್ಮಿ. ಈ ಕ್ರೂರ ಲೋಕದಲ್ಲಿ? ಹಾಗಿದ್ದರೆ, ವಿದಾಯ.
ಎಲೈ ಮೃತ್ಯುವೇ, ಕೊಚ್ಚಿಕೋ, ಅನುಪಮಳಾದ ಹೆಣ್ಣೊಬ್ಬಳು ನಿನ್ನ ವಶವಿದ್ದಾಳೆ. ಮೆತ್ತಗಿನ ಗವಾಕ್ಷಿಗಳೇ, ಮುಚ್ಚಿರಿ;
ಬಂಗಾರದಂಥ ಸೂರ್ಯನನ್ನು ಇನ್ನು ಕಾಣಿಸದಿರಲಿ ಇಂಥ ರಾಜಚಕ್ಷುಗಳು! ನಿಮ್ಮ ಮಕುಟಮಣಿ ಓರೆಯಾಗಿದೆ;
ನಾನದನ್ನು ಸರಿಪಡಿಸುವೆ, ಆಮೇಲೆ ನಿಮ್ಮ ಖುಷಿಯಂತೆ —

ಕಾವಲುಗಾರ ಅವಸರದಲ್ಲಿ ಪ್ರವೇಶ

ಕಾವಲುಗಾರ 1. ರಾಣಿ ಎಲ್ಲಿ?
ಚಾರ್ಮಿಯಾನ್. ಮೆಲ್ಲಗೆ ಮಾತಾಡು, ಆಕೆಯನ್ನು
ಎಬ್ಬಿಸುವುದು ಬೇಡ.
ಕಾವಲುಗಾರ 1. ಸೀಸರ್ ಕಳಿಸಿದ್ದಾರೆ —
ಚಾರ್ಮಿ. ಬಹಳ ತಡವಾದ ಹರಿಕಾರ.
[ಸರ್ಪವೊಂದರಿಂದ ಕಡಿಸಿಕೊಳ್ಳುತ್ತಾಳೆ]
ಓ, ಬೇಗನೆ ಬಾ, ಕಳಿಸಿಬಿಡು! ನನಗೆ ಭಾಗಶಃ ಗೊತ್ತಾಗುತ್ತಿದೆ.
ಕಾವಲುಗಾರ 1. ಬನ್ನಿ, ಬನ್ನಿ! ಎಲ್ಲಾ ಸರಿಯಾಗಿಲ್ಲ. ಸೀಸರನ ಕಣ್ಣಿಗೆ ಮಣ್ಣೆರಚಲಾಗಿದೆ.
ಕಾವಲುಗಾರ 2. ಸೀಸರ್ ಕಳಿಸಿದ ಡೋಲಾಬೆಲ್ಲಾ ಇದ್ದಾನೆ.
ಅವನನ್ನು ಕರೆ.
[ಕಾವಲಿನವನೊಬ್ಬನ ನಿಷ್ಕ್ರಮಣ]
ಕಾವಲುಗಾರ 1. ಏನಿಲ್ಲಿ ನಡೆಯುತ್ತಿರುವ ಕೆಲಸ, ಚಾರ್ಮಿಯಾನ್? ಸರಿಯಾಗಿ ನಡೆಯುತ್ತಿದೆಯೇ?
ಚಾರ್ಮಿ. ಚೆನ್ನಾಗಿ ನಡೆಯುತ್ತಿದೆ, ಹಾಗೂ ಅನೇಕ ತಲೆಮಾರುಗಳ ರಾಜರುಗಳಿಂದ ಬಂದ ರಾಜಕುಮಾರಿಗೆ
ತಕ್ಕುದೇ ಆಗಿದೆ. ಆಹ್, ಸೈನಿಕ!
[ಚಾರ್ಮಿಯಾನ್ ಸಾಯುತ್ತಾಳೆ]

ಡೋಲಾಬೆಲ್ಲಾ ಪ್ರವೇಶ

ಡೋಲಾ. ಏನಾಗುತ್ತಿದೆ ಇಲ್ಲಿ?
ಕಾವಲುಗಾರ 2. ಎಲ್ಲರೂ ಸತ್ತರು.
ಡೋಲಾ. ಸೀಸರ್, ನಿಮ್ಮ ಯೋಚನೆಗಳಿಲ್ಲಿ ಪರಿಣಾಮ ಪಡೆಯುತ್ತಿವೆ. ನೀವು ತಡೆಯಲು ಬಯಸಿದ ಘೋರಕೃತ್ಯವನ್ನೀಗ ಮಾಡಿರುವುದನ್ನು ನೋಡಲು ಬರುತ್ತಿರುವಿರಿ.

ಸೀಸರ್ ಮತ್ತು ಅವನ ಬಳಗದವರೆಲ್ಲ ಪಥಚಲನೆಯಲ್ಲಿ ಪ್ರವೇಶ

ಎಲ್ಲರೂ. ದಾರಿ, ದಾರಿ ಬಿಡಿ ಸೀಸರಿಗೆ!
ಡೋಲಾ. ಓ ಸ್ವಾಮಿ, ನೀವು ಖಂಡಿತಾ ಕಾಲಜ್ಞಾನಿಗಳು. ಯಾವುದಕ್ಕೆ ಭಯಪಟ್ಟಿರೋ ಅದೇ ಆಗಿದೆ.
ಸೀಸರ್. ಅಂತಿಮದಲ್ಲಿ ಅತಿಧೈರ್ಯವಂತೆ ಕೊನೆಗೂ ನಮ್ಮ ಉದ್ದೇಶಗಳ ಏನು ಮಾಡಿದಳು, ಹಾಗೂ
ರಾಜವಂಶಿಯಾಗಿರುತ್ತ ತನ್ನದೇ ದಾರಿ ಹಿಡಿದಳು. ಇವರ ಮರಣದ ಕಾರಣ? ರಕ್ತಧಾರೆ ಕಾಣಿಸುವುದಿಲ್ಲ ನನಗೆ.
ಡೋಲಾಬೆಲ್ಲಾ. ಇವರ ಜತೆ ಕೊನೆಯಲ್ಲಿ ಇದ್ದವರು ಯಾರು?
ಕಾವಲುಗಾರ 1. ಒಬ್ಬ ಬಡಪಾಯಿ ಹಳ್ಳಿಗ, ಅಂಗೂರದ ಹಣ್ಣುಗಳನ್ನು ತಂದಿದ್ದ. ಅದು ಅವನ ಬುಟ್ಟಿ.
ಸೀಸರ್. ವಿಷಪ್ರಾಶನ, ಹಾಗಿದ್ದರೆ.
ಕಾವಲುಗಾರ 1. ಓ ಸೀಸರ್, ಆ ಚಾರ್ಮಿಯಾನ್ ಈಗಷ್ಟೆ ಬದುಕಿದ್ದಳು; ನಿಂತು ಮಾತಾಡುತ್ತಿದ್ದಳು. ಗತಿಸಿದ ತನ್ನ ಒಡತಿಯ
ಮಣಿಮಕುಟವನ್ನು ಅವಳು ಸರಿಪಡಿಸುವುದನ್ನು ನಾನು ನೋಡಿದೆ;
ನಡುಗುತ್ತ ನಿಂತಿದ್ದಳು, ಮತ್ತೆ ತಟ್ಟನೇ ಬಿದ್ದುಬಿಟ್ಟಳು.
ಸೀಸರ್. ಓ ಕುಲೀನ ದೌರ್ಬಲ್ಯವೆ! ಇವರು ವಿಷ ನುಂಗಿದ್ದರೆ, ಅದು ಬಾಹ್ಯ ಬಾವುಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು; ಆದರೆ ಈಕೆ
ನಿದ್ರಿಸುವಂತೆ ತೋರುತ್ತಿರುವಳು, ತನ್ನ ಚೆಲುವಿನ ಅಮೋಘ ಜಾಲದಲ್ಲಿ ಬಲೆಯಲ್ಲಿ ಇನ್ನೊಬ್ಬ ಆಂಟನಿಯ ಹಿಡಿಯಲೆಂಬಂತೆ.
ಡೋಲಾ. ಅವಳ ಎದೆಯಲ್ಲಿ ರಕ್ತದ ಕಲೆಯಿದೆ, ಮತ್ತು ಸ್ವಲ್ಪ ಬಾವಿನ ಹಾಗೆ; ಅದೇ ತರ ತೋಳಿನಲ್ಲೂ ಇದೆ.
ಕಾವಲುಗಾರ 1. ಇದು ಸರ್ಪದ ಗುರುತು, ಮತ್ತು ಈ ಅಂಗೂರದ ಎಲೆಗಳ ಮೇಲೆ ಲೋಳೆಯಿದೆ, ನೈಲಿನ ಪೊಟರೆಗಳಲ್ಲಿ ಈ ಜಂತು ಬಿಡುವಂಥದು.
ಸೀಸರ್. ಇವಳು ಈ ರೀತಿ ಸತ್ತುದೇ ಆಗಿರುವುದು ಸಾಧ್ಯ; ಯಾಕೆಂದರೆ ಇವಳ ವೈದ್ಯ ಹೇಳಿದ ಪ್ರಕಾರ, ಸುಲಭ ಮರಣದ ಅನಂತ ವಿಧಾನಗಳ ಬೆನ್ನುಹತ್ತಿದ್ದಳು ಇವಳು. ಇವಳ ಮಂಚವನ್ನು ಎತ್ತಿಕೊಳ್ಳಿರಿ, ಸಖಿಯರನ್ನು ಸ್ಮಾರಕದಿಂದ ಒಯ್ಯಿರಿ. ಇವಳ ಆಂಟನಿಯ ಪಕ್ಕದಲ್ಲೇ ಇವಳನ್ನೂ ಸಮಾಧಿಮಾಡಿರಿ. ಭೂಮಿಯ ಮೇಲೆ ಇನ್ನು ಯಾವುದೇ ಗೋರಿಯಲ್ಲೂ ಇಷ್ಟೊಂದು ಪ್ರಸಿದ್ಧ ಮಿಥುನ ಅಪ್ಪಿಕೊಳ್ಳುವುದಿಲ್ಲ. ಇಂಥ ಉತ್ತುಂಗ ಘಟನೆಗಳು ಅವುಗಳ ಕರ್ತೃಗಳನ್ನು ಬಡಿಯುತ್ತವೆ;
ಹಾಗೂ ಅವುಗಳ ಕತೆಯಾದರೆ ಅದನ್ನು ಮರುಕಕ್ಕೆ ತಂದವನ ಖ್ಯಾತಿಗಿಂತಲು ಕಡಿಮೆ ಕರುಣಾಜನಕವಲ್ಲ. ನಮ್ಮ ಸೈನ್ಯ ಈ ಶವಸಂಸ್ಕಾರದಲ್ಲಿ ತಕ್ಕ ಗೌರವದಿಂದ ಭಾಗವಹಿಸುತ್ತದೆ, ನಂತರ ರೋಮಿಗೆ. ಬಾ, ಡೋಲಾಬೆಲ್ಲಾ, ಈ ಗಂಭೀರ ಸಮಾರಂಭದಲ್ಲಿ ಉನ್ನತ ಶಿಸ್ತು ಇರುವಂತೆ ನೋಡಿಕೋ.
[ಎಲ್ಲರೂ ನಿಷ್ಕ್ರಮಣ, ಸತ್ತವರನ್ನು ಎತ್ತಿಕೊಂಡು]