ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಹ್ಲಾದಕರ ಉಪಾಹಾರ ಇಡ್ಲಿ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಮಾರ್ಚ್ 30 ವಿಶ್ವ ಇಡ್ಲಿ ದಿನ.ಹಬೆಯಾಡುವ ನವಿರಾದ ಇಡ್ಲಿ, ಅದರ ಹಿತವಾದ ಪರಿಮಳ ಇಡ್ಲಿ ಪ್ರಿಯರ ನಾಲಗೆಯಲ್ಲಿ ನೀರೂರಿಸದೆ ಇರದು. ಮೇಲಾಗಿ ಇದು ಧಕ್ಷಿಣ ಭಾರತೀಯರ ಬೆಳಗಿನ ಪ್ರಮುಖ ಉಪಾಹಾರ. ಬಿ.ಬಿ.ಸಿ ಯವರ ಸಮೀಕ್ಷೆಯ ಪ್ರಕಾರ ವಿಶ್ವದ ಹತ್ತು ಅದ್ಭುತ ಉಪಹಾರಗಳ ಪಟ್ಟಿಯಲ್ಲಿ ಇಡ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದೆ. ದಕ್ಷಿಣ ಭಾರತದಲ್ಲಿ ಸಂಫೂರ್ಣವಾಗಿ, ಭಾರತಾದ್ಯಂತ ಉಪಾಹಾರ ಮಂದಿರಗಳ ಉಪಾಹಾರ ಪಟ್ಟಿಯಲ್ಲಿ ಇಡ್ಲಿಯದ್ದೇ ಕಾರುಬಾರು . ಅಂದ ಹಾಗೆ ಮಾರ್ಚ್ 30 ವಿಶ್ವ ಇಡ್ಲಿ ದಿನ. ತಮಿಳುನಾಡಿನ ಇನಿಯವನ್ ಇದರ ರುವಾರಿ. ಮೂಲತಃ ಆಟೋಚಾಲಕನಾದ ಈತನಿಗೆ ಇಡ್ಲಿ ತಯಾರಿಸುವ ಮಹಿಳೆ ಪರಿಚಯವಾಗಿ ಅವರ ಪ್ರೇರಣೆಯಿಂದ ಸುಮಾರು ಇನ್ನೂರು ಬಗೆಯ ಇಡ್ಲಿಯ ಜೊತೆಗೆ ಬೃಹತ್ ಗಾತ್ರದ ಇಡ್ಲಿ ತಯಾರಿಸುತ್ತಾರೆ. ಇದಕ್ಕೆ ತಮಿಳು ನಾಡು ಕ್ಯಾಟರಿಂಗ್ ಎಂಪ್ಲಾಯ್ಸ್ ಯೂನಿಯನ್ ಕೂಡ ಬೆಂಬಲ ಕೊಡುತ್ತದೆ. ಅಲ್ಲದೆ ಮಾರ್ಚ್ 30 ಇನಿಯವನ್ ಅವರ ಜನ್ಮ ದಿನವೂ ಆದ್ದರಿಂದ ವಿಶ್ವ ಇಡ್ಲಿ ದಿನ ಮಹತ್ವವನ್ನು ಪಡೆದುಕೊಂಡಿದೆ.

ಮಾರ್ಚ್ 30 ವಿಶ್ವ ಇಡ್ಲಿ ದಿನ. ತಮಿಳುನಾಡಿನ ಇನಿಯವನ್ ಇದರ ರುವಾರಿ

“ಇಡ್ಲಿವಡ,ಇಡ್ಲಿವಡ, ಬಿಸಿ,ಬಿಸಿ ಇಡ್ಲಿವಡ” ಎಂಬ ಧ್ವನಿಗೆ ರೈಲಿನ ಪ್ರಯಾಣಿಗರು ತಾವು ಇಡ್ಲಿ ವಡ ತೆಗೆದುಕೊಳ್ಳದೇ ಇದ್ದರು ಅವರನ್ನೊಮ್ಮೆ ತಿರುಗಿ ನೋಡುವುದಿತ್ತು. ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕೊಡಮಾಡುವ ಆಹಾರದ ಮೆನುವಿನಲ್ಲಿ ಎರಡು ದಿನ ಈ ಇಡ್ಲಿ ಸ್ಥಾನ ಪಡೆದುಕೊಂಡಿದೆ. ಇಂದು ದಿನ ಅಕ್ಕಿ ಇಡ್ಲಿ ಇನ್ನೊಂದು ದಿನ ರವ ಇಡ್ಲಿ. ಎರಡನೆ ವಿಶ್ವಯುದ್ಧ ಆಗುವವರೆಗೆ ಅಕ್ಕಿ ಇಡ್ಲಿ ಮಾತ್ರವೇ ಚಾಲ್ತಿಯಲ್ಲಿತ್ತು. ಯುದ್ಧಾನಂತರ ತಿಂಡಿ ಅಕ್ಕಿಯ ಸರಬರಾಜು ಕಡಿಮೆಯಾದ್ದರಿಂದ ಎಂ.ಟಿ.ಆರ್ ನವರು ರವ ಇಡ್ಲಿ ಪ್ರಾರಂಭಿಸಿದರಂತೆ.


ಆರೋಗ್ಯ ಸರಿಯಿಲ್ಲವೆಂದು ವೈದ್ಯರ ಬಳಿ ಹೋಗಿ ಇಂಜಕ್ಷನ್, ಮಾತ್ರೆ ಎಲ್ಲವನ್ನು ತೆಗದುಕೊಂಡ ಬಳಿಕ ಆಹಾರ ಪಥ್ಯ ಹೇಳುವ ಸಂದರ್ಭದಲ್ಲಿ ಇಡ್ಲಿ ಸೇವಿಸಿ ಎನ್ನುತ್ತಾರೆ. ಕಾರಣ ಬೇಗ ಜೀರ್ಣವಾಗುತ್ತದೆ, ಎಣ್ಣೆ ಅಂಶವಿರುವುದಿಲ್ಲವೆಂದು. ಹಾಗೆ ವೈಜ್ಞಾನಿಕವಾಗಿ ಇಡ್ಲಿಯ ಪೌಷ್ಟಿಕಾಂಶಗಳ ಬೆನ್ನು ಹತ್ತಿದರೆ 30 ಗ್ರಾಂನ ಒಂದು ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್ಸ್ಗಳು,ಫೈಬರ್, ಫ್ಯಾಟ್, ಸ್ಯಾಚುರೇಟರ್ಸ್ ,ಪೊಟ್ಯಾಸಿಯಂ, ಎಂಗ್ ಸೋಡಿಯಂಗಳು ಇರುತ್ತವೆ . ಇದನ್ನು ಗಮನಿಸಿ ನಮ್ಮ ಸರಕಾರ ಕೋವಿಡ್ 19 ರ ಚಿಕಿತ್ಸೆಯಲ್ಲಿದ್ದವರ ಬೆಳಗಿನ ಉಪಹಾರ ಪಟ್ಟಿಯಲ್ಲಿ ಅಕ್ಕಿ ಇಡ್ಲಿ, ರವ ಇಡ್ಲಿ ಎರಡನ್ನು ಸೇರಿಸಿರುವುದು. ಅಂದರೆ ಉದ್ದಿನಿಂದ ಮಾಡಿದ ಖಾದ್ಯಗಳಲ್ಲಿ ಪೋಷಕಾಂಶ ಹೆಚ್ಚು ಇರುತ್ತದೆ ಎಂಬ ಕಾರಣಕ್ಕೆ. ಆಧುನಿಕರು ನಾವು ಎಂದು ಬೀಗುತ್ತಿರುವ ನಾವು ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಬಿಟ್ಟು ಪರಕೀಯ ಆಹಾರ ಪದ್ಧತಿಗೆ ನಮ್ಮನ್ನು ಒಗ್ಗಿಸಿಕೊಂಡಿದ್ದೇವೆ. ಅದು ತಪ್ಪು ಎಂದು ಅರ್ಥ ಮಾಡಿಸಿದ್ದು ಕೋವಿಡ್ 19. ನಮ್ಮ ಭಾರತೀಯ ಆಹಾರ ಪದ್ಧತಿಗೆ ಬಹಳ ತೀಕ್ಷ್ಣ ವೈರಸ್ಸನ್ನೂ ಹೊಡೆದೋಡಿಸುವ ಶಕ್ತಿ ಇದೆ ಅಲ್ಲದೆ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಎಂದು ಅರ್ಥ ಮಾಡಿಸಿದೆ.

ತಟ್ಟೆ ಇಡ್ಲಿ

ನಮ್ಮ ಆಧುನಿಕ ವೈದ್ಯರು ಹೇಳುವುದಲ್ಲದೆ ಕ್ರಿ.ಶ. 10ನೆ ಶತಮಾನದಲ್ಲಿ ರಚನೆಯಾಗಿರುವ “ ಚಕ್ರದತ್ತಾ ಸಂಹಿತಾ “ಎಂಬ ಉತ್ತರ ಭಾರತದ ಆಯುರ್ವೇದದ ಕೃತಿಯಲ್ಲಿಯೂ ಇಡ್ಲಿಯ ಚಿಕಿತ್ಸಕ ಗುಣದ ಉಲ್ಲೇಖವಿದೆ. ಈ ಕೃತಿಯಲ್ಲಿ ಶ್ಲೀಪದ (ಆನೆಕಾಲು ರೋಗ) ಚಿಕಿತ್ಸೆಯಲ್ಲಿ ಹೇಗೆ ಉಪಯೋಗವಾಗುತ್ತದೆ ಎಂದು ಹೇಳುವಾಗ
ಗೋಧಾಪದೀ ಮೂಲಯುಕ್ತಾಂ ಖಾದೇತ್ ಮಾಷೇಂಡರೀಂ ನರಃ
ಜಯೇತ್ ಶ್ಲೀಪದ ರೋಗೋತ್ಥಂ ಜ್ವರಂ ಘೋರಂ ನ ಸಂಶಯಃ
ಎಂದಿದ್ದಾರೆೆ.

ಅಂದರೆ ‘ಗೋಧಾಪದಿ’ ಎಂಬ ಗಿಡದ ಬೇರನ್ನು ಉದ್ದಿನೊಡನೆ ಅರೆದು ತಯಾರಿಸಿದ ಇಂಡರಿ ಸೇವಿಸಿದರೆ ಶ್ಲೀಪದ ರೋಗದಿಂದ ಹುಟ್ಟಿದ ಜ್ವರ ಪರಿಹಾರವಾಗುತ್ತದೆ ಎಂದು ಅರ್ಥವಾಗುತ್ತದೆ.

ಮಾಷ ‘ಎಂದರೆ ಉದ್ದು, ‘ಇಂಡ್ರ’ ಎಂದರೆ ಬಟ್ಟಲು. ಬಟ್ಟಲಲ್ಲಿ ತಯಾರಿಸಿದ ಉದ್ದಿನಿಂದ ಮಾಡಿದ ಭಕ್ಷ್ಯವೇ “ಇಂಡ್ರಿ” .
ಇಂಡ್ರೀ ಎಂಬ ವರ್ಣ ಕನ್ನಡಕ್ಕೆ ಒಗ್ಗದ ಕಾರಣ ಇಂಡ್ರೀ >ಇಂಡ್ಲಿ ಆಗಿದೆ.

ಸಂಸ್ಕೃತದಲ್ಲಿ ರ>ಲಕಾರವಾಗಿ ರೂಪುಗೊಳ್ಳುವ ಹಾಗೆ ಅಶ್ರೀರ>ಅಶ್ಲೀಲ, ಪುಂಡರೀಕ >ಪುಂಡಲೀಕ ಆದ ಹಾಗೆ ಇಂಡ್ರಿ>ಇಂಡರಿ>ಇಂಡಲಿ>ಇಡ್ಡಲಿ ಆಗಿದೆ ಎನ್ನುವ ವಾದವೂ ಇದೆ.

ಸಂಸ್ಕೃದಲ್ಲಿ ‘ಸ್ವೇದನ’ ಎಂದು ಕರೆಯುತ್ತಾರೆ . ಸ್ವೇದನದ ಪ್ರಾಕೃತ ರೂಪ ‘ಇಡ್ಡರಿಯಾ’ ಕನ್ನಡಕ್ಕೆ ಬಂದಾಗ ಇಡ್ಡಲಿ ಆಗಿದೆ ಎನ್ನುತ್ತಾರೆ. ಅಂದರೆ ಹಬೆಯಲ್ಲಿ, ಶೆಖೆಯಲ್ಲಿ ಬೇಯಿಸಿದ ಪಧಾರ್ಥ ಎನ್ನಬಹುದು.
ಇನ್ನು ‘ಅಡೆ’ ಎಂಬ ಪದದಿಂದ ಅಡೆ>ಅಡ್ಯೆ>ಅಡ್ಡೆಲಿ>ಇಡ್ಡಲಿ>ಇಡ್ಲಿ ಆಗಿದೆ ಎಂಬ ವಾದವೂ ಇದೆ. ಇಡ್ಲಿಯನ್ನು ಹೊಸಗನ್ನಡ ಕಾಲದವರೆಗೂ ಇಡ್ಡಲಿಗೆ ಎಂದೂ ಕರೆಯುತ್ತಿದ್ದರು. ಇನ್ನು ‘ಇಡ್ಲಿ’ ಎಂದರೆ ಸಾದ ಸಪ್ಪೆ ಇಡ್ಲಿ ಎಂತಲೂ ‘ಇಂಡಿ’ ಎಂದರೆ ಇಡ್ಲಿ ಪಾತ್ರೆಯಲ್ಲಿಯೇ ಬೇಯಿಸಿದ ಸಿಹಿ ಯಾದ ಭಕ್ಷ್ಯ ಎಂಬರ್ಥವಿದೆ.

ಇದರ ಇತಿಹಾಸವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನೋಡಿದರೆ ಕನ್ನಡದ ಮೊದಲ ಗದ್ಯ ಕೃತಿ ಕ್ರಿ.ಶ.920ರಲ್ಲಿ ಬರೆದ ಶಿವಕೋಟ್ಯಾಚ್ಯಾರರ ವಡ್ಡಾರಾಧನೆಯ ಹತ್ತೊಂಬತ್ತು ಕತೆಗಳಲ್ಲಿ ಒಂದಾದ ಭದ್ರಬಾಹು ಭಟ್ಟಾರರ ಕತೆಯಲ್ಲಿ ಇಡ್ಡಲಿಗೆ ಅಂದರೆ ಇಡ್ಡಲಿಯ ಪ್ರಸ್ತಾಪ ಬರುತ್ತದೆ.“ರಾಜಾನ್ನದ ಕೂಳೂಂ ಪೆಸರತೊವ್ವೆಯುಂ ಬೆಣ್ಣೆಗಾಸಿದಾಮೋದ ಸುಗಂಧ ಪರಿಮಳಂತೋರ್ಪ ತುಪ್ಪಮಂ …..ಪೂರಿಗೆಯಿಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟು ತೆರೆದ ಭಕ್ಷ್ಯರೂಪಂಗಳುಮಂ” ಎಂದು ಹದಿನೆಂಟು ರೀತಿಯ ಭಕ್ಷ್ಯಗಳಲ್ಲಿ ಇಡ್ಲಿಯನ್ನೂ ಉಲ್ಲೇಖಿಸಿದ್ದಾರೆ.

ಕ್ರಿ.ಶ.1025ರಲ್ಲಿ ಚಾವುಂಡರಾಯ ತನ್ನ ‘ಲೋಕೋಪಕಾರ’ ಕೃತಿಯಲ್ಲಿ ಮಜ್ಜಿಗೆಯಲ್ಲಿ ನೆನೆಸಿದ ಉದ್ದಿನಬೇಳೆಯನ್ನು ರುಬ್ಬಿ ಮೆಣಸು, ಕೊತ್ತಂಬರಿ, ಇಂಗು ಸೇರಿಸಿ ಇಡ್ಲಿ ಸಂಪಣ ತಯಾರಿಸುತ್ತಿದ್ದರು ಎಂಬ ಮಾಹಿತಿಯನ್ನು ಉಲ್ಲೇಖಿಸಿದ್ದಾನೆ.ಕ್ರಿ.ಶ. 1130ರಲ್ಲಿ ಮೂರನೆ ಸೋಮೇಶ್ವರನ ‘ಮಾನಸೋಲ್ಲಾಸ’ ಕೃತಿಯಲ್ಲೂ ಇಡ್ಡಲಿ ಮಾಡುವ ಬಗೆಯನ್ನು ವಿವರಿಸಿದೆ. 15ನೆ ಶತಮಾನದ ಇನ್ನೊಂದು ಕೃತಿ ಮೂರನೆ ಮಂಗರಸನ ‘ಸೂಪಶಾಸ್ತ್ರ’ ಎಂಬ ಕೃತಿಯಲ್ಲಿ “ಹಿರಿದು ಹಸನಾದಿಡ್ಡಲಿಗೆ ಪಾಕಕ್ಕೆಂದು”, ”ಬೇಗದಿಂದೆಡೆಮಾಡಿದಿಡ್ಡಲಿಗೆ”, ”ದಡಿಕಿದಿಡ್ಡಲಿಗೆ” ಮುಂತಾಗಿ ಇಡ್ಡಲಿಗೆ ಅರ್ಥಾತ್ ಇಡ್ಲಿಯ ಬಗ್ಗೆ ಪ್ರಸ್ತಾಪವಿದೆ.

ಈಗಂತೂ ತರಹೇವಾರಿ ಇಡ್ಲಿಗಳು ಇವೆ. ತಟ್ಟೆ ಇಡ್ಲಿ, ತರಕಾರಿ ಇಡ್ಲಿ, ಮಸಾಲ ಇಡ್ಲಿ,ಅವರೆಕಾಳು ಇಡ್ಲಿ,ಟೊಮೆಟೋ ಇಡ್ಲಿ, ಮಲ್ಲಿಗೆ ಇಡ್ಲಿ, ಒಣ ಹಣ್ಣುಗಳನ್ನು ಹಾಕಿ ಮಾಡಿದ ಢ್ರೈಫ್ರೂಟ್ಸ್ ಇಡ್ಲಿ, ರಾಗಿ ಇಡ್ಲಿ, ಸಿರಿ ಧಾನ್ಯಗಳ ಇಡ್ಲಿ, ಶುಗರ್ ಇದ್ದರೆ ಮೆಂತ್ಯೆ ಸೊಪ್ಪನ ಇಡ್ಲಿ,ಪಾಲಕ್ ಇಡ್ಲಿ,ಸಬ್ಬಕ್ಕಿ ಇಡ್ಲಿ, ಬಿಳಿ ದಾಸವಾಳ ಹೂಗಳನ್ನು ಹಾಕಿದರೆ ದಾಸವಾಳ ಇಡ್ಲಿ, ಓಟ್ಸ್ ಇಡ್ಲಿ,ಸ್ಟಫ್ಡ್ ಇಡ್ಲಿ (ಸ್ಟಫ್ಡ್ ಇಡ್ಲಿ ತರಕಾರಿಗಳನ್ನು, ಇಲ್ಲವೆಂದರೆ ಕೇವಲ ಆಲೂಗೆಡ್ಡಯನ್ನು ಬಳಸಿ ಪಲ್ಯದಂತೆ ಮಾಡಿ ಮೊದಲು ಇಡ್ಲಿ ಹಿಟ್ಟು ಹಾಕಿ ನಂತರ ಪಲ್ಯ ಹಾಕಿ ಆನಂತರ ಮತ್ತೆ ಇಡ್ಲಿ ಹಿಟ್ಟು ಹಾಕಿ ಬೇಯಿಸುವುದು). ಹಲಸಿನ ಹಣ್ಣಿನ ಸಿಹಿ ಇಡ್ಲಿ, ಮಕ್ಕಳಿಗೋಸ್ಕರ ಸ್ಮೈಲಿ ಇಡ್ಲಿ,ಚಾಕೊಲೇಟ್ ಇಡ್ಲಿ ಇತ್ಯಾದಿ ಇತ್ಯಾದಿ. ಮಾರುಕಟ್ಟೆಯಲ್ಲೂ ಇನ್ಸ್ಟಂಟ್ ಇಡ್ಲಿ ಮಿಕ್ಸ್ಗಳು ಬಂದಿವೆ ತಿನ್ನಬೇಕೆನ್ನಿಸಿದಾಗಲೆಲ್ಲಾ ಧಿಡೀರ್ ಎಂದು ಮಾಡಿಕೊಳ್ಳಬಹುದು.

‘ಛಂದೋಮಿತ್ರ’ ಎಂಬ ಕೃತಿ ಪ್ರೊಫೆಸರ್ ಆ.ರಾ.ಮಿತ್ರರವರದ್ದು. ಮಕ್ಕಳಿಗೆ ಸುಲಭವಾಗಿ ಅರ್ಥವಾಗಲೆಂದು ಪಾಂಡಿತ್ಯ ಮತ್ತು ಹಾಸ್ಯದೊಂದಿಗೆ ಈ ಕೃತಿಯನ್ನು ರಚಿಸಿದ್ದಾರೆ. ಅದರಲ್ಲಿ ಇಡ್ಲಿಯನ್ನು ಕುರಿತಂತೆ ಇರುವ ಸಾಂಗತ್ಯ ಪದ್ಯ ಇಂತಿದೆ.

ನೋಡಿರಿ ಸಾವಿರವರ್ಷ ಹಳೆಯದು
ಇಡಲಿ ಎಂಬುವ ಶಬ್ದ
ನುಡಿಶಾಸ್ತ್ರ ಬಲದಿಂದ ಇಂತೆಂದು .. ನುಡಿದರು ದೊಡ್ಬೆಲೆ ನರಸಿಂಹಾಚಾರ್ಯ
ತರಗತಿ ಮುಗಿಸಿ ಕ್ಯಾಬಿನೆಡೆಗೆ ಹೊರಟಾಗ
ತರಿಸಿದ ಇಡ್ಲಿಯ ಕಂಡು.
ಸೊರಗಿದ ಮುಖಗಳ ನಮಗೆಲ್ಲ ಅನಿಸಿತು
ಖರೆ ಖರೆ ಇದು ಅಂದಿನದು
ಹೌದು ಇಡ್ಲಿಯೇ ಹಾಗೆ ಬಾಡಿದ ಮುಖಗಳನ್ನು ಅರಳಿಸುತ್ತದೆ.

ಇಡ್ಲಿ ಚೆನ್ನಾಗಿ ಹುದುಗು ಬಂದರೆ ಮಾತ್ರ ಚೆನ್ನಾಗಿರುತ್ತದೆ. ಹಾಗಿದ್ದರೆ ಹೆಬ್ಬೆರಳು,ತೋರ್ಬೆರಳು, ಮಧ್ಯಬೆರಳು ಮಾತ್ರ ಸಾಕು. ಇಲ್ಲವಾದರೆ ಚಾಕು, ಫೋರ್ಕ್ ಮೊದಲಾದ ಅಡುಗೆ ಮನೆ ಆಯುಧಗಳು ಬೇಕಾಗುತ್ತವೆ. ಮೆದುವಾಗಿ ಇಡ್ಲಿ ಹದವಾಗಿ ಹಬೆಯಲ್ಲಿ ಬೇಯಬೇಕೆಂದರೆ ಅಕ್ಕಿಗೆ ಉದ್ದನ್ನು 2;1, 3;1 ರ ಪ್ರಮಾಣದಲ್ಲಿ ಹಾಕಬೇಕು. ಬೆಳ್ತಕ್ಕಿ, ಉದ್ದು, ಕುಸುಬಲಕ್ಕಿ, ಅವಲಕ್ಕಿ, ಇತ್ಯಾದಿಗಳನ್ನು ಬಳಸಿ ಅವರವರ ರುಚಿಗೆ ತಕ್ಕಂತೆ ಇಡ್ಲಿ ಮಾಡಬಹುದು. ಅಂದ ಹಾಗೆ ಫರ್ಮೆಂಟೇಶನ್, ಅಥವಾ ಹುದುಗುವಿಕೆಯ ಮೂಲಕ ಮೊದಲು ಅಡುಗೆ ಪ್ರಾರಂಭಿಸಿದವರು ಇಂಡೋನ್ಯೇಶಿಯಾದವರು ಎಂದು ಇತಿಹಾಸ ಹೇಳುತ್ತದೆ. ಆಯಾ ಪ್ರದೇಶದ ಉಷ್ಣಾಂಶ, ಶೀತಾಂಶಗಳು ಹುದುಗು ಬರಲು ಕಾರಣವಾಗುತ್ತದೆ. ಮಿಕ್ಸಿ, ಗ್ರೈಂಡರ್ಗಳಲ್ಲಿ ಇಡ್ಲಿ ಹಿಟ್ಟನ್ನು ರುಬ್ಬುವ ಬದಲು ಒರಳು ಕಲ್ಲಿನಲ್ಲಿ ರುಬ್ಬಿದರೆ ಹುದುಗು ಚೆನ್ನಾಗಿ ಬರುತ್ತದೆ. ಇಡ್ಲಿ ಮೃದುವಾಗಿ ಬರಬೇಕೆಂದು ಸೋಡ, ಈಸ್ಟ್ಗಳನ್ನು ಬಳಸಿದರೆ ಆರೋಗ್ಯಕ್ಕೆ ಅಪಾಯವಿದೆ. ಭಾರತದಲ್ಲಿ ಇನ್ನುಮುಂದೆ ಇಡ್ಲಿಯ ಬೆಲೆ ಹೆಚ್ಚಾಗುತ್ತದೆ ಎಮಬ ಸುದ್ದಿ ಓದಿದೆ ಕಾರಣ ಮಾಯನ್ಮಾರ್ನಲ್ಲಿ ಆಂತರಿಕ ಘರ್ಷಣೆ ಎಂದು “ಎತ್ತಣಿಂದೆತ್ತ ಸಂಬಂಧ” ಎಂದು ಮೂಗು ಮುರಿಯುವಂತಿಲ್ಲ .ಬಾರತ ನಮಗೆ ಬೇಕಾದಷ್ಟಡು ಉದ್ದನ್ನು ಬೆಳೆಯುತ್ತಿಲ್ಲ ಮಾಯ್ನಮಾರ್ನಿಂದ ಆಮದು ಮಾಡಿಕೊಳ್ಳುತ್ತಿದೆ ಹಾಗಾಗಿ ಇಡ್ಲಿ ಬೆಲೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಹೀಗೆ ಮೈಸೂರಿನ ಸಂಬಂಧಿಯೊಬ್ಬರ ಮನೆಗೆ ವರ್ಷಗಳ ಹಿಂದೆ ಅಕಸ್ಮಾತಾಗಿ ಹೋಗಿದ್ದೆ ಇನ್ನು ಬೆಳಗ್ಗೆ ಹತ್ತು ಗಂಟೆಯಷ್ಟರಲ್ಲಿ ಟೆರೆಸಿನ ಅರ್ಧಷ್ಟು ಅವರು ಇಡ್ಲಿಗಳನ್ನು ಮಾಡಿ ಬಿಸಿಲಿಗೆ ಹರಡಿದ್ದರು, ಹಿಂದಿನ ದಿನ ಬೇಯಿಸಿ ಒಣಗಿಸಿದ್ದವು ಗೋಡೆಗೆ ಹೊಡೆದರೆ ವಾಪಾಸ್ ಬರುವಷ್ಟು ಒರಟಾಗಿದ್ದವು. ನಾನು ಕೇಳುವ ಮೊದಲೆ “ನಾನು ಬರುವ ವಾರ ನ್ಯೂಜೆರ್ಸಿಗೆ ಮಗಳ ಮನೆಗೆ ಹೊರಟಿದ್ದೇನೆ ತೆಗೆದುಕೊಂಡು ಹೋಗುತ್ತೇನೆ. ಒಣಗಿದ ಇವುಗಳನ್ನು ನೀರಲ್ಲಿ ನೆನೆಸಿ ಸ್ಟೀಮ್ನಲ್ಲಿ ಬಿಸಿ ಮಾಡಿದರೆ ಬಹಳ ಚೆನ್ನಾಗಿರುತ್ತವೆ” ಅಂದರು. ಹೇಗಿದೆ? ಸಾಗರದಾಚೆಗೂ ಮೆಚ್ಚುಗೆ ಗಳಿಸಿರುವ ನಮ್ಮ ಇಡ್ಲಿ ಮಹಿಮೆ! ತಮಿಳಿನ ಕಲ್ಯಾಣ ಪಾಟಿನಲ್ಲಿ ಅಂದರೆ ಮದುವೆ ಸಂಪ್ರದಾಯದ ಹಾಡಿನಲ್ಲಿ(ವಿನೋದದ ಹಾಡು ಇದು) “ಸಂಬಂಧೀ ಸಾಪಿಡವೇ ಮಾಟಾಳ್ ಎಂಗಳ್ ಸಂಬಂಧಿ ಸಾಪಿಡವೇ ಮಾಟಾಳ್ ವೆಗು ಸಂಕೋಜಕಾರಿ ಎಂಗಳ್ ಸಂಬಂಧೀ….. ಇಡ್ಡಿಲಿಯೂ ಇರ್ನೂರು ಜಾಂಗಿರಿಯಿಲ್ ಮರ್ನೂರು…..” ಎಂಬಲ್ಲಿ ಇಡ್ಲಿಯ ಪ್ರಸ್ತಾಪವಿದೆ.

ಇನ್ನು ಇದನ್ನು ಇಡ್ಲಿ ಪ್ಲೇಟ್ಗಳಲ್ಲಿ, ತಟ್ಟೆಗಳಲ್ಲಿ, ಚಿಕ್ಕ ಕಪ್ಗಳಲ್ಲಿ, ಚಿಕ್ಕ ಗ್ಲಾಸ್ಗಳಲ್ಲಿ, (ಚಿಕ್ಕ ಗ್ಲಾಸ್ನಲ್ಲಿ ಮಾಡುವ ಇಡ್ಲಿಗಳನ್ನು ತಂಜಾವೂರ್ ಇಡ್ಲಿ ಎನ್ನುತ್ತಾರೆ) ಗುಜರಾತ್ನಲ್ಲೂ ಅಕ್ಕಿ ಉದ್ದು ಸೇರಿಸಿ ಮಾಡಿದ ‘ಇಡ್ಡ’ ಎಂಬ ಖಾದ್ಯವೂ, ಕೊಂಕಣಿಯವರ ‘ಸನ’ ಎಂಬ ಖಾದ್ಯವೂ ಇಡ್ಲಿಯನ್ನು ಹೋಲುತ್ತದೆ. ಮುತ್ತುಗದ ಎಲೆ, ಬಾಳೆಎಲೆ, ಅರಿಶಿನ ಎಲೆ, ಹಲಸಿನ ಎಲೆ ಇತ್ಯಾದಿಗಳನ್ನೂ ಬಳಸಿಕೊಂಡು ಇಡ್ಲಿ ಬೇಯಿಸುವುದಿದೆ. ಇಡ್ಲಿ ಟ್ರೇಗಳಲ್ಲಿ ಮಾಡುವುದಾದರೆ ತೆಳುವಾದ ಬಟ್ಟೆಯನ್ನು ಹಾಕಿ, ಬಟ್ಟೆ ಬೇಡವೆಂದರೆ ಎಣ್ಣೆ ಸವರಿ ಬೇಯಿಸುವುದಿದೆ. ಹೋಟೆಲ್ನವರು ಪ್ಲಾಸ್ಟಿಕ್ ಹಾಕಿ ಬೇಯಿಸುತ್ತಿದ್ದ ಕಾಲವು ಇತ್ತು ಆದರೆ ಇತ್ತೀಚಿಗೆ ಸಿಲಿಕಾದಿಂದ ಮಾಡಿದ ಇಡ್ಲಿ ಟ್ರೇಗಳು ಬಂದಿವೆ. ಕಾಲ ಬದಲಾದಂತೆ ನಮ್ಮ ಇಡ್ಲಿ ಪಾತ್ರೆಗಳು ಹಿತ್ತಾಳೆಯಿಂದ, ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳಾಗಿಯೂ, ವೃತ್ತಾಕಾರ ಕಳೆದುಕೊಂಡು ಚೌಕಾಕಾರಕ್ಕೆ ಬಂದು ನಿಂತಿವೆ. ಹಳೆಯ ವೃತ್ತಾಕಾರದ ಇಡ್ಲಿಯಲ್ಲಿ ಕೊಂಚ ಬದಲಾವಣೆ ಎಂಬಂತೆ ಚೌಕಾಕಾರದ, ತ್ರಿಕೋನಾಕಾರದ ಇಡ್ಲಿ ಟ್ರೇಗಳು ಮಾರುಕಟ್ಟೆಯಲ್ಲಿವೆ. ಎಲ್ಲಾ ಸರಿ ಎರಡೇ ಬೆರಳಲ್ಲೇ ನಯವಾಗಿ ತಿಂದು ಮುಗಿಸುವಷ್ಟು ಸುಲಭವಲ್ಲ ಇಡ್ಲಿ ಬೇಯಿಸಿದ ನಂತರ ಆ ಪಾತ್ರೆಗಳನ್ನು ಸ್ವಚ್ಛ ಮಾಡುವುದು.

ಹಬೆಯಾಡುವ ಇಡ್ಲಿಯೊಂದಿಗೆ ಕಾಯಿಚಟ್ನಿ ಸೂಪರ್ ಕಾಂಬಿನೇಷನ್ . ಇಡ್ಲಿಯ ಸಂಗಡ ಸಾಂಬಾರ್ ಕೂಡ ಹೊಂದಿಕೆಯಾಗುತ್ತದೆ ಹಾಗಾಗಿ “ಇಡ್ಲಿ ಸಾಂಬಾರ್ !”ಎಂಬ ಮಾತೇ ಇದೆಯಲ್ಲಾ ಇಡ್ಲಿಯ ಅವಿಭಾಜ್ಯ ಎಂದರೆ ವಡ. ಮಸಾಲವಡ, ಮೆದುವೊಡದ ಜೊತೆ ತಿನ್ನಲು ಬಹಳಷ್ಟು ಮಂದಿ ಇಷ್ಟ ಪಡುತ್ತಾರೆ. ವಡವನ್ನು ಬಿಟ್ಟರೆ ಈ ಇಡ್ಲಿಗಳನ್ನು ವಿಧ ವಿಧ ಚಟ್ನಿಗಳ ಜೊತೆಗೆ, ಸಾಂಭಾರ್, ವಿವಿಧ ಗೊಜ್ಜುಗಳ ಜೊತೆಗೆ, ಸಿಹಿ ಕಾಯಿ ಚಟ್ನಿ, ತುಪ್ಪದ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.ಮಿನಿ ಇಡ್ಲಿಗಳನ್ನು ಮಾಡಿ ಅದನ್ನು ಮೊಸರಲ್ಲಿ ನೆನೆಸಿ,ಸಾಂಬಾರಿನಲ್ಲಿ ನೆನೆಸಿ ತಿನ್ನುವುದಿದೆ ಇದನ್ನು ‘ಫ್ಲೋಟಿಂಗ್ ಇಡ್ಲಿ’ ಎಂದು ಕರೆಯುತ್ತಾರೆ. ಒಂದು ವೇಳೆ ಹೆಚ್ಚಾಗಿ ಬೆಳಗ್ಗೆಯ ಇಡ್ಲಿ ಮಿಕ್ಕರೆ ಚಿಂತಿಸಬೇಕಿಲ್ಲ. ಉಳಿದ ಇಡ್ಲಿಗೆ ಒಗ್ಗರಣೆ ಕೊಟ್ಟರೆ ಅದು ಸಂಜೆ ಕಾಫಿ ಸಮಯಕ್ಕೆ ಇಡ್ಲಿಉಪ್ಪಿಟ್ಟಾಗುತ್ತದೆ. ಸಮಯವಿದ್ದರೆ ಉಳಿದ ಇಡ್ಲಿಗಳಿಗೆ ಚಿಲ್ಲಿ,ಪೆಪ್ಪರ್, ಜೀರ,ಮಂಚೂರಿ ಫ್ಲೇವರ್ಗಳನ್ನು ಸೇರಿಸಿ ತಿನ್ನಬಹುದು. ಅದೂ ಇಷ್ಟವಿಲ್ಲವೆಂದರೆ ದೋಸ ತವದ ಮೇಲೆ ಚಮಚ ಎಣ್ಣೆ ಹಾಕಿ ಬಿಸಿ ಮಾಡಿದರೆ ಗರಿಗರಿಯಾಗಿ ತಿನ್ನಲು ಚೆನ್ನಾಗಿರುತ್ತದೆ.

ಈ ಇಡ್ಲಿ ಜನಸ್ನೇಹಿ! ಮಕ್ಕಳಿಂದ ಹಿರಿಯರವರೆಗೂ ದಿನದ ಯಾವ ಸಮಯದಲ್ಲದಾರೂ ಸೇವಿಸಬಹುದಾದ ಖಾದ್ಯ. ತಯಾರಾದ ಐದರಿಂದ ಆರುಗಂಟೆ ತಾಜಾತನದಿಂದ ಕೂಡಿರುತ್ತದೆ. ವ್ಯಾಪಾರದ ದೃಷ್ಟಿಯಿಂದಲೂ ಇಡ್ಲಿ ಅನೇಕ ಜನರ ಕೈ ಹಿಡಿದಿದೆ ಪ್ರಯಾಣದ ಸಂದರ್ಭಕ್ಕೆ ಪಾರ್ಸೆಲ್ಗೆ ಹೇಳಿ ಮಾಡಿಸಿದ ತಿಂಡಿ. ಅಂತೂ ಕೊರೊನಾ ವ್ಯಾಧಿ ಇತಿಹಾಸವನ್ನೊಮ್ಮೆ ಅವಲೋಕಿಸುವಂತೆ ಮಾಡಿತು. ನಮ್ಮ ಪ್ರಾಚ್ಯ ಕೋವಿದರು ಹೇಳಿದ ಇಡ್ಲಿ ಕೋವಿಡ್ ಸಂದರ್ಭಕ್ಕೆ ಎಷ್ಟು ಸೂಕ್ತವಾಗಿದೆಯಲ್ಲವೆ. ಪರಿಮಳಭರಿತ ಚಟ್ನಿ, ಹಬೆಯಾಡುವ,ಹಿತವಾದ, ಮೃದುವಾದ, ಇಡ್ಲಿಯನ್ನು ಬಯಸುತ್ತಾ ಇಡ್ಲಿಯ ವಿಚಾರಕ್ಕೆ ಪೂರ್ಣವಿರಾಮ ಇಡುತ್ತೇನೆ.