ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇದು ಫಲಿತದ ಅಂಶ ಮಾತ್ರ ಅಂತಿಮ ಫಲಿತವಲ್ಲ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಹತ್ತನೆ ತರಗತಿ,ದ್ವಿತೀಯ ಪಿ.ಯು.ಸಿ ಫಲಿತಾಂಶ ಬಂದಾಗ   ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ ನಾವೂ ಸಂಭ್ರಮಿಸುತ್ತಿದ್ದೇವೆ. ಆದರೆ ವಿಷಾದದ ಸಂಗತಿ ಎಂದರೆ  ಫಲಿತಾಂಶ ಬಂದ ಬೆನ್ನಲ್ಲೆ  ಒಂದೋ ಎರಡೋ  ಅಥವಾ ಅದಕ್ಕಿಂತ ಹೆಚ್ಚೋ ಆತ್ಮಹತ್ಯಾ ಪ್ರಕರಣಗಳು ಘಟಿಸಿಬಿಡುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ರ್ಯಾಂಕ್  ಬಂದಿಲ್ಲ ರ್ಯಾಂಕ್ ಇಲ್ಲದ  ಅಂಕಗಳು ನನಗೆ ಬೇಡ  ಅನ್ನುವುದು ಒಂದು ನಿರ್ಧಾರವಾದರೆ ಪಾಸ್ ಆಗಿಲ್ಲ ಮನೆಯಲ್ಲಿ ಹೇಗೆ ಮುಖ ತೋರಿಸುವುದು ಅನ್ನುವ ನಿರ್ಧಾರ ಒಂದೆಡೆ. ಈ ನಿರ್ಧಾರಗಳು ಆಧಾರವಿಲ್ಲದವು….

ಏಕೆ   ಹೀಗೆ ವಿದ್ಯಾರ್ಥಿಗಳು   ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೋ ಗೊತ್ತಿಲ್ಲ ? ಪ್ರಥಮತಃ ಜೀವನ ನಮ್ಮ ಹಕ್ಕು! ಬದುಕಬೇಕು! ಹುಟ್ಟು ನಮ್ಮಾಜ್ಞೆ ಪಡೆದು ಹೇಗೆ ನಿರ್ಧಾರವಾಗಿರುವುದಿರಲ್ಲವೋ ಹಾಗೆ ನಮ್ಮ ಜೀವನದ ಕಡೆ ನಿರ್ಧಾರವೂ ನಮ್ಮ ಕೈಯಲ್ಲಿ ಇರುವುದಿಲ್ಲ.  ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಅನುಭವಿಸಿದವರು “ ಕಷ್ಟ ಬರಲಿ  ತೊಂದರೆ ಇಲ್ಲ ಜೊತೆಗೆ ಅದನ್ನು ಸಹಿಸುವ ಕ್ಷಮತೆ ಕೂಡ ಬೇಕು” ಎಂದು ಬಯಸುತ್ತಾರೆ.ಅಂಥ ಕಷ್ಟದ   ಅನುಭೂತಿ  ನಿಮಗಾಗಿದೆಯೇ? ಆಂಥ ಕಷ್ಟ ಅನುಭವಿಸಿದವರು ಸಾಧಕರಾಗಿದ್ದಾರೆ.  ಹಂದೆಗಳಂತೆ   ಜೀವ-ಜೀವನ ವಿಮುಖರಾಗಿಲ್ಲ. ಹೀಗಿರುವಾಗ  ಅರಳುವ  ಮೊದಲೆ ಕಮರುವ ನಿಮ್ಮ ನಿರ್ಧಾರ  ಸರಿಯಿಲ್ಲ.   ಇಂಥ ನಿರ್ಧಾರಗಳ ಬಗ್ಗೆ  ಯಾರಿಗೂ ಅನುಕಂಪವಿರದು. ಅಷ್ಟಕ್ಕೂ ಈ ಪರೀಕ್ಷೆಗಳು ಕಟ್ಟ ಕಡೆಯವಲ್ಲ. 

 ವಿದ್ಯಾರ್ಥಿಗಳ ಮುಖ್ಯ ಸಮಸ್ಯೆ “ಕಡಿಮೆ ಅಂಕಗಳು” ಎಂದಾದರೆ  ಕಡಿಮೆ ಅಂಕಗಳು ಬರಲು ನೀವೆ ಕಾರಣಿಕರ್ತರು. ಒಂದೋ ನಿಮಗೆ ಆ ವಿಷಯ  ಮನನವಾಗಿಲ್ಲ  ಅಥವಾ  ಓದಿನ ಕಡೆ  ನಿಮಗೆ ನಿರಾಸಕ್ತಿ ಇದೆ ಎಂದಾಯಿತಲ್ಲವೆ. ನಿಮ್ಮ ಅನಧ್ಯಯನದ ಹೊಣೆಯನ್ನು ಶಿಕ್ಷಣ ಸಂಸ್ಥೆಯ ಮೇಲೆಯೋ ಅಥವಾ ಶಿಕ್ಷಕರ ಮೇಲೆಯೋ ಉರುಳಿಸುವುದು ನೀವು ಮಾಡುವ ಸಾಮಾಜಿಕ ದ್ರೋಹ   ಎಂದೇ ನನ್ನನಿಸಿಕೆ. 

ಇಂಥದ್ದೆ ವಿಷಯ ತೆಗೆದುಕೊಳ್ಳಬೇಕು ಎನ್ನುವ ಪೋಷಕ  ವರ್ಗ  ಈಗಿಲ್ಲ.ನಿಮ್ಮ ನಿರ್ಧಾರವನ್ನೇ ಪೋಷಿಸುವ ಪೋಷಕರೇ ಹೆಚ್ಚು. ಸ್ವಂತ ನಿರ್ಧಾರ ತೆಗೆದುಕೊಳ್ಳಲಾರದೆ ಸಮೂಹ ಸನ್ನಿ ಎಂಬಂತೆ  ಎಲ್ಲರೂ ತೆಗೆದುಕೊಳ್ಳುವ  ವಿಷಯವನ್ನೇ ನೀವೇಕೆ ತೆಗೆದುಕೊಳ್ಳಬೇಕು? ಉದಾಹರಣೆಗೆ ಹೇಳುವುದಾದರೆ  ವಿಜ್ಞಾನ ತೆಗೆದುಕೊಂಡಿಲ್ಲ  ಕಲಾ ನಿಕಾಯವೋ ವಾಣಿಜ್ಯ ನಿಕಾಯದಲ್ಲಿಯೋ ಓದುತ್ತೀರಿ ನಿಮಗೆ ಬಹಿಷ್ಕಾರ ಎಂದು ಯಾರಾದರು ಹೇಳಿದ್ದಾರೆಯೇ? ಇಲ್ಲ ಅಲ್ವ! ವಿಜ್ಞಾನ ನಿಕಾಯದಲ್ಲಿ ಎಷ್ಟು ಚೆನ್ನಾಗಿ ಜೀವನ ರೂಪಿಸಿಕೊಳ್ಳಬಹುದೋ ಅಷ್ಟೇ ಜೀವನ ಮಾರ್ಗ ಕಲಾ ನಿಕಾಯ ಅಧ್ಯಯನ ಮಾಡಿದವರಿಗೂ ಆಗುತ್ತದೆ.  ತಾಂತ್ರಿಕ , ವೈದ್ಯಕೀಯ, ಸಂಶೋಧನಾ ಕ್ಷೇತ್ರಗಳು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಕಲಾ ನಿಕಾಯದವರೆ  ಇರುವುದು.  ಆಯ್ಕೆ ಬಹಳಷ್ಟು ಇರುವಾಗ  ಜೀನು ಕಟ್ಟಿದ ಕುದುರೆಯಂತೆ ಏಕಮುಖವಾಗಿ  ಏಕೆ ಸಂಚರಿಸಬೇಕು? ಪರ್ಯಾಯ ಮಾರ್ಗಗಳನ್ನು ಪಡೆದುಕೊಳ್ಳಬಹುದಲ್ಲ  ಎಂಬುದೇ ನನ್ನ ಅನಿಸಿಕೆ. ಎಲ್ಲಾ ವಿಷಯಗಳೂ ಸಾಧನೆಯ ಸರಕುಗಳೇ..!!

 ವರ್ಷದಾರಭ್ಯ ಪಠ್ಯಗಳು ಪ್ರಾರಂಭವಾದರೂ   ವಿದ್ಯಾರ್ಥಿಗಳು ಓದುವುದಕ್ಕೆ ಪ್ರಾರಂಭಿಸುವುದು ಅರ್ಧ ವರ್ಷ ಕಳೆದ ನಂತರ…ಒಂದು ಟ್ರಿಪ್ ,ಅಥವಾ ಶಾಲಾ ಕಾಲೇಜುಗಳ  ಫೆಸ್ಟುಗಳು ಕಳೆದ ಮೇಲೆಯೇ. ಶೈಕ್ಷಣಿಕ ವರ್ಷ ಪ್ರಾರಂಭ ಆಗಿದೆ ,ನೀವು ಫೀಸ್ ಕಟ್ಟಿದ್ದೀರಿ ನಿಮಗೊಂದು ಗುರುತಿನ ಚೀಟಿ ದೊರೆತಿದೆ ಎಂದಮೇಲೆ ಪರೀಕ್ಷಾ ದಿನಾಂಕಗಳಿಗೆ ಕಾಯುವುದೇನಿದೆ?  ಶೈಕ್ಷಣಿಕ ವರ್ಷ ಪ್ರಾರಂಭ ಆಗಿದೆ ಎಂದ ಮೇಲೆ ಕಡೆಗೊಂದು ದಿನ ಪರೀಕ್ಷೆ ,ಫಲಿತಾಂಶಗಳು ಸಹಜವೇ ಅಲ್ವೆ!

 ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚು ಹೇಳುವುದು  ಏನೂ ಇಲ್ಲ.  ಶಿಕ್ಷಕರಿಗಿಂತ ಮೊದಲೆ ವಿಷಯವನ್ನು ಮನನ ಮಾಡಿಕೊಳ್ಳುವ  ಅವಕಾಶವಿದೆ! ಆಸಕ್ತಿ ಬೇಕು ಅಷ್ಟೇ!  ವರ್ಷಾರಭ್ಯದಲ್ಲೇ ನಿಮಗೆ ಪಠ್ಯ,  ಪೂರಕ ಅಧ್ಯಯನ ಸಾಮಗ್ರಿಗಳು ದೊರಕಿರುತ್ತವೆ. ಸಮಯದ ಬಗ್ಗೆ, ಜೀವನದ ಮಾರ್ಗದ ಬಗ್ಗೆ ಹೆಚ್ಚು ತಿಳಿವಳಿಕೆ ಹೇಳುವವರ ಬಗ್ಗೆ ನಿಮಗೆ ಗೌರವಾಧರಗಳಿರಲಿ.

ವಿದ್ಯಾರ್ಥಿಗಳೆ!  ನಿಮ್ಮ ಖುಷಿಯಲ್ಲಿ ನಮ್ಮ ಖುಷಿಯೂ ಇದೆ. ಶೈಕ್ಷಣಿಕ ಪರೀಕ್ಷೆಯೇ  ಕಡೆಯ ಘಟ್ಟ ಎಂದು ತಿಳಿದಲ್ಲಿ ನಿಮ್ಮಂತಹ  ಮೂರ್ಖರು  ಇಲ್ಲ ಎಂದನ್ನಿಸುತ್ತದೆ.  ಸೋಲುಗಳೆ ಬದುಕನ್ನು ಗಟ್ಟಿಗೊಳಿಸುವುದು. ‘ಶಕ್ತಿ ಕವಿ ರನ್ನ’ನಿಗೆ “ಕೊಂಡು ತಂದು ಹೊತ್ತು ಮಾರಲು ವಿದ್ಯೆಯೇನು ಬಳೆಯ ಮಲಾರವೆ” ಎಂದಿದ್ದರಂತೆ,   “ಕನಕನಿಗೇನು ಕೋಣನ ಮಂತ್ರ”ಎಂದಿದ್ದರಂತೆ ಅವರೇನು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿಲ್ಲವೇ ಹಾಗಿದ್ದರೆ.

 ನಮಗೆ ಹೇಗೆ ಸರಿಯೋ ಹಾಗೆ ನಾವು ಬದುಕಬೇಕು. ಬದುಕಿನ ಸುಸ್ಥಿತಿ ನಮಗೆ ಗೊತ್ತಿರುತ್ತದೆ. ಇನ್ಯಾರದೋ ಮರ್ಜಿಗೆ ನಾವು ಬದುಕಬೇಕಿಲ್ಲ.   ಬೇರೆಯವರ ಮೆಚ್ಚುಗೆಯಲ್ಲಿ ಬದುಕುವ   ಅಭ್ಯಾಸ ಬಿಡಬೇಕು! ಇದೊಂದು ನಟನೆಯ ಹಾಗು ನಮ್ಮನ್ನೆ ನಾವು  ಶಿಕ್ಷಿಸಿಕೊಳ್ಳುವ ಹೀನಾಯ ಬದುಕು ಅನ್ನಿಸುತ್ತದೆ.  ಸೋಲಿನಿಂದಲೇ ಪ್ರಾರಂಭವಾಗುವ  ಅದೆಷ್ಟೋ ಯಶೋಗಾಥೆಗಳು ನಮ್ಮಲ್ಲಿವೆ.   ಕಾಲಿಗೆ  ಪಾದರಕ್ಷೆಗಳೂ ಇಲ್ಲದೆ ನದಿ ದಾಟಲು ಹಣವಿಲ್ಲದೆ ಇದ್ದ ವ್ಯಕ್ತಿ ದೇಶದ ಪ್ರಧಾನಿಯಾದ ಲಾಲ್ ಬಹಾದ್ದೂರ್ ಶಾಸ್ತ್ರಿಗಳ,  ಬೀದಿ ದೀಪದ ಬೆಳಕಿನಲ್ಲಿ ಅಭ್ಯಾಸ ಮಾಡಿದ  ಅಂಬೇಡ್ಕರ್, ಸಾಮಾನ್ಯ ಬೀಗ ರಿಪೇರಿ ಮಾಡುವ ತಂದೆಯ ಮಗನಾಗಿ ದೇಶದ ರಕ್ಷಣಾ ವ್ಯವಸ್ಥೆಯ ಕೀಲಿಕೈ ಪಡೆದ ಕಲಾಂ, ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ವ್ಯಕ್ತಿ ಅದೇ  ಕ್ಷೇತ್ರದ ಅನಭಿಷಿಕ್ತ ದೊರೆ ಆದ  ಅಂಬಾನಿ, ಕಾಲು ಕಳೆದುಕೊಂಡಿದ್ದರೂ  ಧೃತಿಗೆಡದ ನೃತ್ಯಗಾರ್ತಿ ಸುಧಾಚಂದ್ರನ್ ಅವರ  ಸ್ಪಷ್ಟ ನಿದರ್ಶನಗಳಿವೆ.

 ಅಮಿತಾಬಚ್ಛನರನ್ನು   ಅವರ ಧ್ವನಿ ಕೇಳಿ “ರೆಡಿಯೋ  ಜಾಕಿ ಆಗಲು ಅನ್ಫಿಟ್” ಎಂದು ಕಳುಹಿಸಿದ್ದರಂತೆ,  ತನ್ನ ಪ್ರಯೋಗಾಲಯ ಸಂಪೂರ್ಣ   ಬೆಂಕಿಗಾಹುತಿಯಾದಾಗ  ವಿಚಲಿತನಾಗದೆ ಅದರ ಜ್ವಾಲೆಯನ್ನು ಕಣ್ತುಂಬಿಕೊಂಡು ಹೊಸ ಪ್ರಯೋಗಗಳಿಗೆ ಅಣಿಯಾದ ಥಾಮಸ್ ಆಲ್ವ  ಎಡಿಸನ್ ನಮಗೆ ಮಾದರಿಯೇ .ಇಂದಿಗೆ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ  ಸಿಡ್ ಶ್ರೀರಾಮರನ್ನು   ಕೂರುವ ಸಂದರ್ಭದಲ್ಲಿ ಖುರ್ಚಿ ಎಳೆದು, ಹಾಡುವ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ನೀಡದೆ  ಅವಮಾನ ಮಾಡಿದ ಉದಾಹರಣೆಗಳಿವೆ. ಕೇವಲ  ಒಂದು ಕಿಲೋ ಬೇಳೆಯನ್ನು ಬಂಡವಾಳವಾಗಿಸಿಕೊಂಡು  ಅಮೆರಿಕದಲ್ಲಿ  ಉದ್ಯಮ ಪ್ರಾರಂಭಸಿದ  ಪ್ರಾಪಂಚಿಕ ಮಟ್ಟದ ಶೆಫ್ ವಿಕಾಸ್ ಖನ್ನ  ಇದ್ದಾರೆ. ನಲವತ್ತನೆ ವರ್ಷ  ವಯಸ್ಸಿನಲ್ಲಿ   ಕಾನೂನು ಅಭ್ಯಾಸ ಮಾಡಿ  ಪ್ರಖ್ಯಾತ ನ್ಯಾಯವಾದಿಯಾದ ನಿಶಾ ಶರ್ಮ, ಗಂಡ  ಅತ್ತೆಯ ಕಿರುಕುಳದಿಂದ ನೊಂದಾಕೆ   ಪ್ರಸಕ್ತ ಸಾಲಿನಲ್ಲಿ ಐ.ಎ.ಎಸ್ ಪಾಸಾಗಿದ್ದಾರೆ.  ಇಂಥ ಅಗಣಿತ  ಯಶೋಗಾಥೆಗಳೆಷ್ಟೋ? ಇವುಗಳು ಕಿವಿ ನಿಮಿರಿಸಿಕೊಂಡು ಕೇಳಿ ಮರೆಯುವ ಕತೆಗಳಲ್ಲ! ಜೀವನಕ್ಕೆ  ಮಾದರಿಯನ್ನಾಗಿ ಇರಿಸಿಕೊಳ್ಳ ಬಹುದಾದ  ಬಹುತ್ವದ ಮಾದರಿಗಳು.

 ಶೇಖಡಾ ನೂರರಷ್ಟು ಪ್ರಯತ್ನ ಪಡಿ.  ಪ್ರಯತ್ನ  ಪಡದೆ ಗುರಿ ತಲುಪಲು ಸಾಧ್ಯವಿಲ್ಲ. ಕನಸು ಕಾಣಬೇಕು ಆದರೆ ಆ ಕನಸನ್ನು ನನಸಾಗಿಸಿಕೊಳ್ಳುವ ಛಲವೂ ಇರಬೇಕು.   ಸಾಲಿನಲ್ಲಿ ಹೋಗುವ ಇರುವೆ ಕ್ರಮ ತಪ್ಪಿದರೆ ಮತ್ತೆ ಆ ದಾರಿ ಸರಿ ಮಾಡಿಕೊಳ್ಳುತ್ತದೆ.  ನಿಮ್ಮ ಕಷ್ಟಗಳನ್ನು  ಆಲಿಸದ ಕಟುಕರು ಯಾರೂ ಇಲ್ಲ. ನಿಮ್ಮಾಪ್ತರೊಡನೆ ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಕಡೆಯ ಆಯ್ಕೆ ಎಂದು   ಪ್ರಾಣದವರೆಗೂ ಹೋಗುವ  ದುರಿತದ ನಿರ್ಧಾರ ಬೇಡ. ನೀವು ಈಗ ಎದಿರುಗೊಂಡಿರುವ, ಎದುರುಗಾಣುವ ಪರೀಕ್ಷೆಯ  ಅಂಕಗಳು ಅಂತಿಮ ಫಲಿತವಲ್ಲ. ಅಂಕಗಳ  ಅಂಕೆಯನ್ನು ಬಿಟ್ಟು ಹೊರಬನ್ನಿ. ಫಲಿತದ  ಅಂಶವಷ್ಟೇ. ಆತುರದಲ್ಲಿ ಕೊಯ್ದುಕೊಂಡ  ಮೂಗು ಮತ್ತೆ ಬೆಳೆಯುವುದೇ? ಆತುರದ ನಿರ್ಧಾರ ಖಂಡಿತಾ ಬೇಡ!  ಬದುಕಿನಲಿ ನೂರು ಆಯ್ಕೆಗಳಿವೆ!  ಯಶಸ್ಸಿಗೆ ಸಾವಿರ ಸೋಪಾನಗಳಿವೆ!!