ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಋಜುಮಾರ್ಗವನರಸಿ,,,,

ನಾ ದಿವಾಕರ

ಹೆಜ್ಜೆ ಗುರುತಿ‌ನ ಗರ್ಭದಲೂ
ನೆನಪುಗಳುಂಟು
ಕಹಿ-ಸಿಹಿ ನೇರ-ಮರೆಯ
ನೆರಳು-ಸರಳಿನಾಟದ ನಡುವೆ
ಸ್ಮೃತಿಯಿಂದುದುರಿ ಹೋದ
ಗಳಿಗೆಗಳು ಮರಳಿಸುತ್ತವೆ
ಎಡವಿದ ಆ ಕ್ಷಣಗಳನು
ಆತ್ಮ ಶೋಧನೆಗಾಗಿ ಸಾಕ್ಷ್ಯಗಳನರಸಿ ;

ವರ್ತಮಾನದ ಮುಸುಕು
ಅರ್ಧಸತ್ಯದ ಕೂಪ
ಭೂತದೊಳಗಿನ ಚುಕ್ಕೆಗಳ ಬಣ್ಣ
ಚಿತ್ತಾರ ರೇಖೆಗಳಲಿ ಲೀನ
ಗೆರೆ ಎಳೆವ ಮುನ್ನ
ಎದೆ ಬಾಗಿಲ ಬಡಿದು ಕಾಣು
ಹರಿವ ತೊರೆಗಳಲಿರಬಹುದು
ತಪ್ಪು ಒಪ್ಪುಗಳ ನಾವೆ ;

ತೊಟ್ಟೆಸೆವ ಉಡುಪುಗಳಂತೆ
ಭವ ಬಂಧನಗಳು
ಚಾಚುವ ಬಾಹುಗಳಲೇನುಂಟು
ಹಿಡಿದ ಬೆರಳುಗಳ ನಡುವೆ
ಸೋರಿದ ಬೆವರಹನಿಗಳೆನಿತೋ?
ಬಿರುನಡಿಗೆಯ ಹಾದಿಯಲಿ
ಬೇಲಿಯ ಹಂಗಿರಲೇಕೆ
ಪಾದದಡಿಯ ಕ್ಷೀಣ ದನಿಗೆ
ತರಂಗಗಳ ಹಂಗೇಕೆ ?

ತೊಗಲ ಅಣುಅಣುವಿನಲಿ
ಹೆಗಲಂಚಿನ ನಾಡಿಯಲಿ
ಲಾಲಿಯ ತುಣುಕುಗಳಿಹುದು
ರೆಪ್ಪೆಯಂಚಿನ ಹನಿಗಳಲಿ
ತೂಗಿದ ತೋಳುಗಳಲಿ
ತುಂಡರಿಸೆಸೆದ ನೆನಪುಗಳಿವೆ ;
ದಿಬ್ಬದ ಮೇಲಿನ ಹಣತೆಗೆ
ಬಿರುಗಾಳಿಯ ಹಂಗಿರಲಹುದೇ
ನಂದಿದ ಬತ್ತಿಯಲಿರಬಹುದು
ಸವೆದ ಹಾದಿಯ ಕಿರಣ !